August 30, 2009

ಸರ್ವಗುಣ ಸಂಪನ್ನ........ ಪಪ್ಪಾಯಿ ಹಣ್ಣು

ಪಪ್ಪಾಯಿ ಒಂದು ಜನಪ್ರಿಯ ಹಾಗೂ ಸರ್ವಕಾಲಿಕ ಫಲ. ಇದನ್ನು ಪರಂಗಿ ಹಣ್ಣು ಎಂದು ಸಹ ಕರೆಯುತ್ತಾರೆ. ಪಪ್ಪಾಯಿಯ ಮೂಲ ಮಧ್ಯ ಅಮೆರಿಕ. ಸ್ಪೇನ್ ಮತ್ತು ಪೊರ್ಚಗಲ್ ನಾವಿಕರು ತಾವು ಪ್ರಯಾಣಿಸಿದ ಪ್ರದೇಶಗಳಾದ ಭಾರತ, ಫೀಲಿಫೈನ್ಸ್ ಮತ್ತು ಅಮೆರಿಕದ ಭಾಗಗಳಿಗೆ ಈ ಹಣ್ಣನ್ನು ಪರಿಚಯಿಸಿದರು. 20ನೇ ಶತಮಾನದಲ್ಲಿ ಅಮೆರಿಕಕ್ಕೆ ಈ ಹಣ್ಣನ್ನು ಪರಿಚಯಿಸಲಾಯಿತು ಹಾಗೂ ಹವಾಯಿ ಪ್ರದೇಶದಲ್ಲಿ ಬೆಳೆಯಲು ಪ್ರಾರಂಭಿಸಿದರು. 1920 ರಿಂದ ಅಮೆರಿಕ ಪಪ್ಪಾಯಿ ಬೆಳೆಯುವ ಪ್ರಮುಖ ದೇಶವಾಗಿದೆ. ಜೊತೆಗೆ ಮೆಕ್ಸಿಕೊ ಕೂಡ ಇಂದು ಅತಿ ಹೆಚ್ಚು ಪಪ್ಪಾಯಿ ಬೆಳೆಯುವ ದೇಶವಾಗಿದೆ.
ಇದು ಅಲ್ಪಾವಧಿಯ ಶೀಘ್ರವಾಗಿ ಬೆಳೆಯುವ ಸುಮಾರು 10-12 ಅಡಿಯ ಗಿಡ. ಹಸಿರು ಬಣ್ಣದ ಗಟ್ಟಿಯಾದ ಕಾಯಿ ನಂತರ ಹಳದಿ ಮಿಶ್ರಿತ ಕೇಸರಿ ಬಣ್ಣಕ್ಕೆ ತಿರುಗಿ ಮೆದುವಾದ ಹಣ್ಣಾಗುತ್ತದೆ. ಬಲಿತ ಕಾಯಿ ಕೋಣೆಯ ಉಷ್ಣಾಂಶಕ್ಕೆ ಹಣ್ಣಾಗುತ್ತದೆ. ಸಾಮಾನ್ಯವಾಗಿ 7-20 ಇಂಚು ಉದ್ದವಿದ್ದು, ಒಳಭಾಗ ಹಳದಿ/ಕೇಸರಿ ಬಣ್ಣದಾಗಿರುತ್ತದೆ ಹಾಗೂ ಕಾಳುಮೆಣಸನ್ನು ಹೋಲುವ ಕಪ್ಪು ಬೀಜವಿರುತ್ತದೆ. ಈ ಹಣ್ಣು ಎಲ್ಲಾ ಕಾಲದಲ್ಲೂ ಲಭ್ಯ. ಆದರೆ ಬೇಸಿಗೆಯಲ್ಲಿ ಇದರ ಇಳುವರಿ ಹೆಚ್ಚು. ಇದರಲ್ಲಿ 45 ಕ್ಕಿಂತ ಹೆಚ್ಚು ಪ್ರಭೇಧಗಳಿದೆ.
ಪಪ್ಪಾಯಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ಹಣ್ಣು. ಸಾಮಾನ್ಯವಾಗಿ ಈ ಹಣ್ಣು ಯಾವುದೇ ಅಲರ್ಜಿಯನ್ನು ಉಂಟುಮಾಡುವುದಿಲ್ಲ. ಬಹಳ ಸುಲಭವಾಗಿ ಜೀರ್ಣವಾಗುವ ಈ ಹಣ್ಣು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪರಿಪೂರ್ಣ ಆಹಾರವಾಗಿದೆ. ಪ್ರಂಪಚದ ಎಲ್ಲಾ ಭಾಗದ ಜನರು ಇಷ್ಟಪಡುವ ಸಿಹಿಯಾದ ಸ್ವಾದಿಷ್ಟಕರ ಹಣ್ಣು ಇದು. ಸ್ವಾದಿಷ್ಟತೆ ಮತ್ತು ರುಚಿಗೆ ಸೀಮಿತವಾಗದೆ ಆರೋಗ್ಯಕರ ಅಂಶಗಳನ್ನು ಹೊಂದಿದ ಅತೀ ಶ್ರೀಮಂತ ಹಣ್ಣು. ಜೀವಸತ್ವಗಳಾದ ಎ, ಬಿ, ಸಿ, ಇ ಹಾಗೂ ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಬಿಟಾ ಕೆರೋಟಿನ್, ಪಾನ್ಟೊಥೇನಿಕ್ (pantothenic) ಹಾಗೂ ಫೊಲಿಕ್ ಅಮ್ಲಗಳ ಆಗರ. ಪಪ್ಪಾಯಿ ನಾರಿನಾಂಶದಿಂದ ಕೂಡಿದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ, ಕಡಿಮೆ ಕ್ಯಾಲೋರಿಯ ಹಣ್ಣು. ಕ್ರಿಸ್ಟೊಫರ್ ಕೊಲಂಬಸ್ ಈ ಹಣ್ಣನ್ನು "fruit of the angles” ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.
ಪಪ್ಪಾಯಿಯನ್ನು ಹಾಗೇ ತಿನ್ನಬಹುದು. ಫ್ರೂಟ್ ಸಲಾಡ್‌ಗಳಲ್ಲಿ ಬಳಸಬಹುದು. ಹೆಚ್ಚಿದ ಹಣ್ಣಿಗೆ ನಿಂಬೆರಸ ಬೆರೆಸಿದರೆ ರುಚಿಯಾಗಿರುತ್ತದೆ. ವಿಧವಿಧವಾದ ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಕಾಯಿಯನ್ನು ಬೇಯಿಸಿ ತರಕಾರಿ ರೂಪದಲ್ಲಿ ಬಳಸುತ್ತಾರೆ. ಇದರ ಬೀಜ ಕೂಡ ತಿನ್ನಲು ಯೊಗ್ಯ. ವೆಸ್ಟ್ ಇಂಡಿಸ್ ದೇಶದವರು ಇದರ ಎಲೆಯನ್ನು ಬೇಯಿಸಿ ಪಾಲಕ್ ಸೊಪ್ಪಿನ ಹಾಗೆ ಆಹಾರ ಪದಾರ್ಥಗಳಲ್ಲಿ ಉಪಯೊಗಿಸುತ್ತಾರೆ.
ಬಹು ಉಪಯೋಗಿ ಪಪ್ಪಾಯಿ ಹಣ್ಣು :
*ಅಸ್ಟ್ರಿಯಾದ ಒಂದು ವಿಶ್ವವಿದ್ಯಾನಿಲಯ ನೆಡೆಸಿದ ಅಧ್ಯಯನದ ಪ್ರಕಾರ ಅತಿಯಾಗಿ ಕಳಿತ ಪಪ್ಪಾಯಿ ಹಣ್ಣಿನಲ್ಲಿ ಅತಿ ಹೆಚ್ಚು ಪ್ರಮಾಣದ ಅಂಟ್ಯಿಅಕ್ಸಿಡೆಂಟ್ಗಳು (antioxidants) ಲಭ್ಯ.
*ಉತ್ತಮ ನಾರಿನಂಶ ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತದೆ.ನಿತ್ಯ ಸೇವನೆಯಿಂದ ಹೃದಯಾಘಾತವನ್ನು ತಡೆಯಬಹುದು.
*ದೇಹದಲ್ಲಿನ ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸಿ, ನೆಗಡಿ, ಜ್ವರ, ಕಿವಿಯ ಸೋಂಕುಗಳು ಮುಂತಾದ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.
*ದಿನ ನಿತ್ಯ ಆಹಾರದಲ್ಲಿ ಪಪ್ಪಾಯಿ ಹಣ್ಣನ್ನು ಅಳವಡಿಸುಕೊಳ್ಳುವುದರಿಂದ ವಯಸ್ಕರಲ್ಲಿ ಕಂಡು ಬರುವ ದೃಷ್ಟಿ ಸಂಬಂಧಿ ತೊಂದರೆಗಳಿಂದ ದೂರವಿರಬಹುದು.
*ಪಪ್ಪಾಯಿಯಲ್ಲಿರುವ "ಪಪ್ಪಾಯಿನ್" ಎಂಬ ಎನ್ಜೆಮ್ (papain enzyme) ಬಹು ಆರೋಗ್ಯಕಾರಿ. ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮಲಬದ್ಧತೆಗೆ ಈ ಹಣ್ಣು ರಾಮಬಾಣ ಹಾಗೂ ರಕ್ತಮೂಲವ್ಯಾಧಿಗೂ ಸಹ ಸಿದ್ಧ ಔಷಧಿ. ಈ ಎನ್ಜೆಮ್ ಚಿವ್ಗಮ್ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ.
*ಶ್ವಾಸಕೋಶ ಆರೋಗ್ಯಕ್ಕೂ ಉತ್ತಮ. ಧೂಮಪಾನಿಗಳು ಪಪ್ಪಾಯಿಯ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಎ ಜೀವಸತ್ವ ಶ್ವಾಸಕೋಶದ ಉರಿ, ನೋವು, ಸೋಂಕುಗಳನ್ನು ನಿಯಂತ್ರಣದಲ್ಲಿಡುತ್ತದೆ.
*ಹೆಚ್ಚು ನಾರಿನಂಶ ಹೊಂದಿರುವ, ಕ್ಯಾಲೊರಿ, ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತ ಈ ಹಣ್ಣು, ದೇಹದ ತೂಕ ಇಳಿಕೆಯಲ್ಲಿ ಗಣನೀಯ ಪಾತ್ರವಹಿಸುತ್ತದೆ.
*ಕರಳು ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ. ಆರೋಗ್ಯವಂತ ಕರುಳಿನ ಜೀವಕೋಶಗಳನ್ನ ಕ್ಯಾನ್ಸರ್ ಕಾರಕ ವಿಷದಿಂದ ರಕ್ಷಿಸುತ್ತದೆ.
*ಸಿ,ಇ ಜೀವಸತ್ವ ಹಾಗೂ ಬೀಟಾಕೆರೊಟಿನ್ ಊರಿ, ಊತ, ನೋವು, ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿರುವುದರಿಂದ ಕೀಲುನೋವು, ಅಸ್ತಮಾದಿಂದ ಬಳಲುವವರಿಗೆ ಉತ್ತಮ.
ಈ ಹಣ್ಣು ತಾಯಿಯ ಎದೆ ಹಾಲಿನ ವೃದ್ಧಿಗೆ ಸಹಕಾರಿ.
*ಅಕಾಲ ಮುಪ್ಪನ್ನು ತಡೆಯುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸಹ ಚರ್ಮ ಮೃದುವಾಗಿ ಕಾಂತಿಯುಕ್ತವಾಗಿ ಹೊಳೆಯುತ್ತದೆ. ಪಪ್ಪಾಯಿ ಕಾಯಿಯ ಜ್ಯೂಸ್ -ಮಧ್ಯ ವಯಸ್ಕರಲ್ಲಿ ಕಂಡುಬರುವ ಋತುಚಕ್ರದ ಸಮಸ್ಯೆಗಳಿಗೆ, ಮೊಡವೆಗೆ, ಗಾಯದಲ್ಲಿ ಊತ, ಕೀವುಗಟ್ಟುವುದನ್ನು ತಡೆಯಲು ಉತ್ತಮ ಔಷಧಿ.
*ಈ ಜ್ಯೂಸ್ಗೆ ಜೇನುತುಪ್ಪ ಬೆರೆಸಿ ಕುಡಿದರೆ ಗಂಟಲಿನ ಸೋಂಕುಗಳು ಹರಡುವುದು ತಡೆಯುತ್ತದೆ. ಕಾಯಿಯ ಪೇಸ್ಟ್ ನಿಂದ ಮುಖದ ಕಲೆಗಳು ಮಾಯವಾಗಿ ಸುಂದರವಾದ,ಮೃದುವಾದ ತ್ವಚೆ ಪಡೆಯಬಹುದು.
*2 ಚಮಚ ಬೀಜವನ್ನು ಜೇನುತುಪ್ಪದಲ್ಲಿ ಊಟದ ನಂತರ ಅಗಿದು ತಿನ್ನುವುದರಿಂದ ಜಂತುಹುಳು ನಿವಾರಣೆ ಸಾದ್ಯ .
ಈ ಹಣ್ಣಿನಲ್ಲಿ ಬಿಳಿಯಾಗಿ (bleaching) ಅಂಶವಿರುವುದರಿಂದ ಸೋಪು ಹಾಗೂ ಡಿಟರ್ಜಂಟ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ.

No comments: