November 18, 2012

ಒಂಟಿತನದಲ್ಲೂ ಬಿಡದ ನಿನ್ನ ನೆನಪುಗಳು.


ಫೇಸ್ ಬುಕ್‌ನಲ್ಲಿ ಇನ್ನೂರಕ್ಕು ಹೆಚ್ಚು ಸ್ನೇಹಿತರು, ಸೆಲ್ ಫೋನ್‌ನಲ್ಲಿ ಅರ್ಧ ಮೆಮೊರಿ ಕಾರ್ಡ್ ತುಂಬುವಷ್ಟ್ಟು  ಸ್ನೇಹಿತರ   ಪೋನ್ ನಂಬರ್‌ನ ದೊಡ್ಡ ಪಟ್ಟಿ. ಎಲ್ಲಾದಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಷೇರ್ ಮಾಡಿಕೊಳ್ಳಬಹುದಾದ  ತಂಗಿ. ಆದರೂ ತಣ್ಣನೆ ಚಳಿಗಾಲದಲ್ಲಿ   ಬೆಚ್ಚಗೆ ನನ್ನ ದಿನಚರಿಯನ್ನು ಆವರಿಸಿಕೊಂಡುವ ನಿನ್ನ ಬಗ್ಗೆ ಹೇಳ್ಕೊಳ್ಳಕ್ಕೆ  ಯಾರು ಯಾರೂ ಇಲ್ಲ.


 ನಾನೋ ನನ್ನ ಪಾಡಿಗೆ ಇಷ್ಟು ವರ್ಷದಿಂದ ಹಾಯಾಗಿದ್ದೆ. ಎಲ್ಲಿದ್ದಿಯೋ ಏನೋ ನೀನು ದೀಡಿರ್ ಅಂತ ಬಂದೇ ಬಿಟ್ಟಿದ್ದಿಯಾ ನನ್ನ ಜೀವನದೊಳಗೆ. ಈಗ ನೀನು ಹೊರಗೆ ಹೋಗಲೊಪ್ಪದೆ ಹಟ ಹಿಡಿದ ಮಗುವಿನ ಹಾಗೆ ಕೂತೇ ಬಿಟ್ಟಿದ್ದಿಯಾ. ನಾನೋ ನಿನ್ನ ಹೊರದೂಡೇ ಮನಸ್ಸಿನ ಬಾಗಿಲಿಗೆ ಬೀಗ ಜಡಿಯುತ್ತೀನಿ ಅಂತ ಶಪಥ ಮಾಡಿಕೊಂಡ ಕ್ಷಣದಲ್ಲೇ ಮತ್ತೆ ನೀನು ಹಾಜರು. ನೀನು ಹೋಗಲು ರೆಡಿ ಇಲ್ಲ ನಾನು ಬಿಡಲು. ನನ್ನ ನಿನ್ನ ಈ ಗುದ್ದಾಟದಲ್ಲಿ  ನಿನ್ನ ನೆನಪು ಮಾತ್ರ  ಅಲುಗಾಡದೆ ಜಂಡಾ ಹೂಡಿ ಬಿಟ್ಟಿದ್ದೆ. ನೀನು ನನ್ನ ಬದುಕಲ್ಲಿ ಬಂದಿದ್ದೆ ಹಾಗಲ್ವಾ. ನೀನಂದು
ಮೊದಲಿನಿಂದಲೂ ಲೇಟ್ ಎಂಟ್ರಿನೇ ಅದು ನನ್ನ ಜೀವನದಲ್ಲಿರ ಬಹುದು ಅಥವಾ ಕಾಲೇಜಿನಲ್ಲಿ ಕ್ಲಾಸಿಗೇ ಇರಬಹುದು.  ಎಲ್ಲಾ ಪ್ರಾರಂಭವಾದ ಮೇಲೆ ನಿಧಾನವಾಗಿ ಕಾಲೆಳೆದು ಕೊಂಡು ಒಳಬರುವುದು ನಿನ್ನ ಹುಟ್ಟು ಗುಣ ಅಂತ ನನಗೆ ಅನ್ಸುತ್ತೆ.  ಯಾವಾಗಲೋ ಒಂದು ಸಾರಿ ಬರ್ತಿಯಾ, ದರ್ಶನ ಕೊಡ್ತೀಯಾ,  ಇದ್ದಕ್ಕಿದ್ದ ಹಾಗೆ ಸುಳಿವೆ ಕೊಡದೆ ನಾಪತ್ತೆ . ಇದೇನು ನನಗೆ ಹೊಸತಲ್ಲ. ಆದರೆ ಈ ಸಾರಿ ಮಾತ್ರ ನೀನು ಬರುವಾಗಲೇ ನಿರ್ಧಾರ ಮಾಡಿಕೊಂಡೇ ಬಂದ ಹಾಗೇ ಕಾಣುತ್ತೀಯಾ. ಬಂದೋನು ವಾಪಸ್ಸು  ಹೋಗೋ ಮಾತೇ ಇಲ್ಲದೆ ಕೂತೇ ಬಿಟ್ಟಿದ್ದಿಯಾ!


ನೀನು ಬಂದಾದರೂ  ಎಷ್ಟು ದಿನ ಆಯಿತು.  ಇನ್ನೂ ಐದೋ-ಆರೋ ದಿನ ಅಷ್ಟೇ. ಆದರೆ ಯಾವುದೋ ಜನ್ಮದ ನಂಟೋ ಅನ್ನುವಷ್ಟ್ಟು ಅಂಟುಕೊಂಡಿದ್ದೀಯಾ. ದಿನವೀಡಿ ಹರಟಿದರೂ ಮುಗಿಯದ ಮಾತು, ಮೊಬೈಲ್ ಕಂಪೆನಿಗೆ ಬೇಸರ ಹುಟ್ಟುವಷ್ಟ್ಟು ಮೇಸೇಜ್ ರವಾನೆ.  ಅದರೂ ಮುಗಿಯದ ಕೆಲಸಕ್ಕೆ ಬಾರದ ಮಾತುಗಳು. ಸುಮ್ಮನೆ ಮಾತು ಯಾವುದೇ ಗೊತ್ತು ಗುರಿಯಿಲ್ಲದ ಮಾತು. ನನಗೊ ಹುಡುಕಿ ಹುಡುಕಿ ಮಾತಾಡಲು ಬಾರದು.  ಮೂರು ದಿನ ಮಾತೇ ಇಲ್ಲದೇ ಕಳೆಯ ಬಲ್ಲೆ. ಆದರೆ ಯಾವಾಗ ನೀನು ನನ್ನ ಜೀವನಕ್ಕೆ ಕಾಲಿಟ್ಟಿಯೋ, ಎಲ್ಲಾ ತಲೆಕೆಳಗು.  ನಿನ್ನೊಂದಿಗೆ  ಒಂದು ಮಾತು ಮುಗಿಯುವ ಮುನ್ನ ಮತ್ತೊಂದು ಮಾತಿಗೆ ಮುನ್ನುಡಿ ಬರೆಯಲು ನಾನು ರೆಡಿ.


  ನಿನ್ನ ಫೋನ್, ಮೇಸೆಜ್‌ಗಳಿಗೆ ಕಾಯುವುದೇ ನನ್ನ ದಿನದ ಕೆಲಸವಾಗಿದೆ. ಯಾವ ಕೆಲಸದಲ್ಲೂ ಮನಸ್ಸಿಲ್ಲ. ಹೋದಲ್ಲಿ ಬಂದಲ್ಲಿ  ನಾನು  ಮುಂದೆ ಏನುವಂತೆ ಮುನ್ನುಗ್ಗುವ ನಿನ್ನ ನೆನಪು. ಈಗ ನನ್ನ ದಿನಚರಿ ಸೂತ್ರ ಕಿತ್ತ ಗಾಳಿಪಟ.  ಕೈಗೆ ಸಿಗದೆ ಸಿಕ್ಕಸಿಕ್ಕ ಕಡೆಗೆ ಎಲ್ಲಾ ಹಾರಾಡುತ್ತಿದೆ.  ತಹಬದಿಗೆ ತರಲಾರದೆ ನಾ ಒದ್ದಾಡುತ್ತಿರುವೆ.  ನೀನು ಇದೇ ಪ್ರೀತಿ ಕಣೇ ಅಂದರೆ ನಾನು ಇಲ್ಲ ಕಣೋ ಇದು ಕ್ಷಣಿಕ ಅಂತಿನಿ. ಆದರೆ ನೀನು ಎಲ್ಲಿ ಅಷ್ಟು ಸುಲಭಕ್ಕೆ ಒಪ್ತಿಯಾ. ಇದು ಪ್ರೀತಿನೇ ಅನ್ನೊದೊಂದೇ ನಿನ್ನ ವಾದ. ನನ್ನದು ಇಲ್ಲ ಎನ್ನುವುದೊಂದೆ ಉತ್ತರ. ಮತ್ತೆ ನಮ್ಮಿಬ್ಬರಲ್ಲಿ ಹಗ್ಗಜಗ್ಗಾಟ. ನೀನೋ ಎಲ್ಲೋ ಮೈಲಿಗಳಾಚೆಯಾದರೆ ನಿನ್ನ   ನೆನಪು ಮಾತ್ರ  ಹಾಗೇ ಕಚಗುಳಿಯಿಡುತ್ತಾ ಬೆಚ್ಚಗೆ ನನ್ನೊಳಗೆ ನನ್ನ ಒಪ್ಪಿಸೇ ತೀರುವೆ ಎಂಬಂತೆ ತಪ್ಪಸ್ಸಿಗೆ ಕೂತು  ಬಿಟ್ಟಿದ್ದೆ.


ಮತ್ತೆ  ನಾನು ಇಲ್ಲಿ ಒಂಟಿ. ಯಾರಲ್ಲಿ ಹೇಳಲಿ ಈ  ನನ್ನ ಅಸ್ವಸ್ಥ ಮನಸ್ಥಿತಿ ಬಗ್ಗೆ, ನನ್ನ ಒಂಟಿತನದಲ್ಲೂ ಕಾಡುವ  ನಿನ್ನ ನೆನಪುಗಳ ಬಗ್ಗೆ.....



November 17, 2012

ಮತ್ತದೇ ಮಾಗಿ ಮಧ್ಯಾಹ್ಯ...!

ಮೊದಲಿನಿಂದಲೂ ಅಷ್ಟೇ ನಂಗೂ ಈ ಮಾಗಿಯ ಮಧ್ಯಾಹಕ್ಕೂ ಆಗ್ಬರೊದೇ ಇಲ್ಲ. ಎಣ್ಣೆ ಸೀಗೆಕಾಯಿ ಸಂಬಂಧ. ಸುಮ್‌ಸುಮ್ಮನೆ ಸಿಟ್ಟು, ಅಂತಕ, ಅಳು, ಹುಚ್ಚು ಎಲ್ಲಾ ಈ ಮಧ್ಯಾಹ್ನಗಳಲ್ಲೇ ನನ್ನ ಕಾಡೋದು ಹಾಗೂ ನಾನು ತುಂಬಾ ಒಂಟಿ ಅನ್ಸೊದು ಕೂಡ. ಶಾಲೆಗೆ ಹೋಗವಾಗ ನನ್ನ ಒರಗೆಯ ಮಕ್ಕಳೇಲ್ಲಾ ಭಾನುವಾರಕ್ಕೆ ಕಾಯಿತ್ತಾ ಇದ್ದರೆ, ನನಗೆ ಮಾತ್ರ ಯಾಕಪ್ಪ ಬರುತ್ತೆ ಭಾನುವಾರ ಅನ್ನೊ ಸಂಕಟ. ಹೇಳಿ ಕೇಳಿ ಮಲೆನಾಡಿನ ಒಂಟಿ ಮನೆ, ಯಾವುದೇ ಮೂಲೆಯಲ್ಲೋ ಅಥವಾ ಕೊಟ್ಟಿಗೆಯಲ್ಲೊ ಕೆಲಸ ಮಾಡುವ ಅಮ್ಮ, ಪೇಟೆ ಹೊಗಿ ಇನ್ನೂ ಬಂದಿರದ ಅಪ್ಪ, ಹೆಂಚಿನ ಮಾಡಿನಿಂದ ನುಸುಳುವ ತಣ್ಣನೆ ಗಾಳಿ, ಮನೆತುಂಬಾ ಒಂಥರಾ ನೀರವ ಮೌನ ಇವೆಲ್ಲಾ ಚಳಿಗಾಲದ ಮಧ್ಯಾಹ್ನದೊಂದಿಗೆ ನನ್ನ ನೆನೆಪಿನಲ್ಲಿ ಉಳಿದುಬಿಟ್ಟಿದೆ. ಮುಂದೆ ಹಾಸ್ಟೇಲ್ ಸೇರಿದ ಮೇಲೂ ಮಧ್ಯಾಹ್ನಗಳೂ ನನ್ನ ಕಾಡೋದು ಏನು ಕಮ್ಮಿ ಆಗಿಲ್ಲ. ಇಡಿ ಹಾಸ್ಟೇಲ್ಗೆ ಹಾಸ್ಟೇಲೇ ಬೆಚ್ಚಗೆ ಹೊದ್ದು ಮಲಗಿದ್ರೂ ನಾನು ಮಾತ್ರ ಪಾಪಿ ತರಹ ಕಾಲ ದೂಡುತ್ತಾಇದ್ದೆ. ಅಪ್ಪಿತಪ್ಪಿ ಏನಾದರೂ ನಿದ್ರೆಗೆ ಜಾರಿದರೆ, ಮಲಗಿ ಎದ್ದ ಮೇಲಿನ ಕಷ್ಟ ಮಾತ್ರ ಯಾರಿಗೂ ಬೇಡ. ಯಾರಿಗೂ ಹೇಳಲಾಗದ ತಳಮಳ, ಎಲ್ಲಾ ಬಿಟ್ಟು ದೂರ ಓಡಿ ಹೋಗುವಷ್ಟು ಹಿಂಸೆ. ಮತ್ತೆ ಈಗ ಚಳಿಗಾಲ.. ಮತ್ತೆ ಅದೇ ನನ್ನ ಕಾಡುವ ಮಾಗಿಯ ಮಧ್ಯಾಹ್ಯಗಳು. ಮೊದಲೇಲ್ಲಾ ಆಗಿದ್ದರೆ ಬರೀ ಭಾನುವಾರದ ಮಧ್ಯಾಹ್ನಗಳು ಮಾತ್ರ ನನ್ನ ಮನಸ್ಸನ್ನು ಭಾರವಾಗಿಸುತ್ತಿದ್ದವು. ಈಗ ಪ್ರತಿ ದಿನದ ಮಧ್ಯಾಹ್ನವೂ ಭಾನುವಾರ ಮಧ್ಯಾಹ್ನವೇನೋ ಅನ್ನುವಷ್ಟು ಖಾಲಿತನ, ಪದೇ ಪದೇ ಬೇಜಾರು.. ದಿನಕ್ಕೆ ಹತ್ತು ತರಹ ಹುಚ್ಚುಚ್ಚಾಗಿ ಆಡುವ ಹಿಡಿತಕ್ಕೆ ಸಿಗದ ಮನಸ್ಸು...