December 3, 2013

ಪಾಕಶಾಸ್ತ್ರದ ನನ್ನ ಮೊದಲ ಪ್ರಯೋಗ.

          ಮೊದಲೇಲ್ಲಾ ಅಮ್ಮ ಮನೆಯಲ್ಲಿ ಇಲ್ಲ ಅಂದರೆ ಸಾಕು, ತುಂಬಾ ಖುಷಿ. ಆಡುಗೆ ಮನೆಗೆ ನಾನೇ ರಾಣಿ. ಹೊಸರುಚಿಗಳ ನನ್ನ ಪ್ರಯೋಗಗಳಿಗೆ ಅಪ್ಪ, ತಂಗಿ ಮತ್ತು  ತಮ್ಮ ಸೇವಕರು ಹಾಗೇ ಬಲಿಪಶುಗಳು ಕೂಡ.
           
      ನನ್ನ ಪಾಕಶಾಸ್ತ್ರದ ಪ್ರಥಮ ಪ್ರಯೊಗ ಉಪ್ಪಿಟ್ಟಾಗಿತ್ತು. ಬಹುಶಃ ನಾನಾಗ ಎಂಟನೇಯ ಕ್ಲಾಸು ಅನ್ಸುತ್ತೆ. ಆ ದಿನಗಳಲ್ಲಿ  ಮನೆಗೆ ಯಾರಾದರೂ ಧೀಡಿರ್ ಅಂತ ಆಗಮಿಸಿದಾಗ ಉಪ್ಪಿಟ್ಟು ಕಾಮನ್ ತಿಂಡಿಯಾಗಿದ್ದ ಕಾರಣದಿಂದ, ನನಗೆ ಉಪ್ಪಿಟ್ಟು ಮಾಡೋದು ಅಂದರೆ ತುಂಬಾ ಸುಲಭ ಅನ್ನೋ ಭಾವನೆ ಆಗಾಲೇ ಬೇರೂರಿಬಿಟ್ಟಿತ್ತು. ಅಮ್ಮನ ಸಾಲು ಡಬ್ಬಿಗಳಲ್ಲಿ ರವೆಗಾಗಿ ತಡಕಾಡಿದಾಗ  2-3   ಬಗೆಯ ರವೆಗಳು ದೊರೆತಿದ್ದು, ಆರಂಭದಲ್ಲೇ ಕನ್‌ಫ್ಯೂಶನ್‌ಗೆ ಕಾರಣ ಆಯಿತು. ಆಡುಗೆಯ ಬಗ್ಗೆಯ ಅಪ್ಪನ ಚೂರು-ಪಾರು ಜ್ಞಾನವೇನು ಪ್ರಯೋಜನೆಕ್ಕೆ ಬರಲಿಲ್ಲ. ಅಂತೂ-ಇಂತೂ ಒಂದನ್ನು ಆರಿಸಿ ಕೊಂಡೆ. ದೊಡ್ಡ ಬಾಣಲೆಯಲ್ಲಿ ಧಾರಳವಾಗಿ ತುಪ್ಪ ಹಾಕಿ ಒಗ್ಗರಣೆ ಮಾಡಿದೆ. ರವೆಗೆ ನೀರಿನ ಆಳತೆಯ ಪ್ರಮಾಣ ತಿಳಿಯದೆ, ಯಾವುದೇ ರೀತಿಯ ಕಂಜೂಸ್‌ತನ ಮಾಡದೆ ಬಾಣಲೆ ತುಂಬಾ ನೀರು ತುಂಬಿಸಿದೆ. ಕುದಿ ಬಂದ ನಂತರ ಹುರಿದ ರವೆ ಹಾಕಿದೆ. ಎಲ್ಲಾ  15-20 ನಿಮಿಷಗಳಲ್ಲಿ ಮಾಡೋ ಉಪ್ಪಿಟ್ಟು ಮುಕ್ಕಾಲು ಘಂಟೆಯಾದರೂ ಗಟ್ಟಿಯಾಗುವ ಯಾವುದೇ ಲಕ್ಷಣ ಕಾಣದಿದ್ದಾಗ, ಉಪ್ಪಿಟ್ಟಿನ ಪ್ರಯೋಗಕ್ಕೆ ಅಂತ್ಯ ಹಾಡಿದೆ. ಸುಮಾರು ಒಂದುವರೆ ಘಂಟೆಗಳ ಕಠಿಣ ಪರಿಶ್ರಮದ ನಂತರ ನೀರಾದ ಉಪ್ಪಿಟ್ಟು ತಯಾರಾಗಿತ್ತು. ಉಪ್ಪಿಟ್ಟಿಗಿಂತ ಖಾರದ ಪಾಯಸ ಎನ್ನುವುದು ಹೆಚ್ಚು ಸೂಕ್ತ. ಎಲ್ಲರೂ ಸೂಪ್‌ನಂತೆ ಬೌಲ್‌ನಲ್ಲಿ ಕುಡಿಯಬೇಕಾಯಿತು. ರುಚಿಕರವಾಗಿತ್ತು ಎನ್ನುವುದು ಸಮಾಧಾನದ ಸಂಗತಿ.

ಈ ನನ್ನ ಪಾಕಶಾಸ್ತ್ರದ ಮೊಟ್ಟಮೊದಲ ಪ್ರಯೋಗ,  ಇಷ್ಟು ವರ್ಷಗಳ ನಂತರವೂ ಪ್ರತಿಬಾರಿ ಉಪ್ಪಿಟ್ಟು ಮಾಡುವಾಗ ನೆನಪಾಗುತ್ತದೆ.