August 30, 2009

ತೀರ್ಥಹಳ್ಳಿಯ ಎಳ್ಳಮಾವಸ್ಯೆ ಜಾತ್ರೆ

ಮಲೆನಾಡಿನ ಕೇಂದ್ರ ಬಿಂದು ತೀರ್ಥಹಳ್ಳಿ. ತುಂಗಾನದಿಯ ದಡದಲ್ಲಿರುವ ಈ ಪವಿತ್ರ ಯಾತ್ರ ಸ್ಥಳ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಧಾಮರ್ಿಕ ಹೀಗೆ ಎಲ್ಲಾ ಕೇತ್ರಗಳಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಅವುಗಳಲ್ಲಿ ತೀರ್ಥಹಳ್ಳಿಯ ಎಳ್ಳಮಾವಸ್ಯೆ ಜಾತ್ರೆಯು ಒಂದು. ಹಿಂದೂ ಪುರಾಣದ ಪ್ರಕಾರ, ಪರಶುರಾಮಮುನಿ ತನ್ನ ತಂದೆ ಜಮದಗ್ನಿಯ ಅದೇಶದಂತೆ, ತಾಯಿ ರೇಣುಕಳ ತಲೆಯನ್ನು ಕೊಡಲಿಯಿಂದ ಕತ್ತರಿಸಿದಾಗ, ಕೊಡಲಿಗೆ ಅಂಟಿದ ರಕ್ತದ ಕಲೆ ಹಲವು ನದಿ ಹಾಗು ಸಮುದ್ರದಲ್ಲಿ ತೊಳೆದರೂ ಹೊಗುವುದಿಲ್ಲ. ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಕೊಡಲಿಯನ್ನು ತೊಳೆದಾಗ ಎಳ್ಳಿನ ಗಾತ್ರದ ರಕ್ತದ ಕಲೆ ಹೊಗುತ್ತದೆ. ಅದು ಮಾಗ್ರಶಿರ ಋತುವಿನ ಅಮಾವಾಸ್ಯೆಯ ದಿನವಾಗಿತ್ತು. ಆ ದಿನವೇ ಎಳ್ಳಮಾವಸ್ಯೆಯಾಯಿತು. ಆ ಸ್ಥಳಕ್ಕೆ ಪರಾಶುರಾಮ ತೀರ್ಥ ಅಥವಾ ರಾಮ ತೀರ್ಥ ಎಂದು ಹೆಸರು. ತುಂಗಾನದಿಯ ದಡದಲ್ಲಿರುವ ರಾಮೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವತಃ ಪರುಶುರಾಮಮುನಿಯೇ ಸ್ಥಾಪಿಸಿದ್ದರು ಎಂದು ಪುರಾಣಗಳು ಹೇಳುತ್ತವೆ. ಇದರ ಪ್ರತೀಕವಾಗಿ ಪ್ರತಿ ವರ್ಷವೂ ತೀರ್ಥಹಳ್ಳಿಯಲ್ಲಿ ಮೂರು ದಿನಗಳ ಎಳ್ಳಮಾವಸ್ಯೆ ಜಾತ್ರೆ ನೆಡೆಯುತ್ತದೆ. ಸುತ್ತಮುತ್ತದ ಹಳ್ಳಿಗಳಿಂದಲ್ಲದೆ, ದೂರ ದೂರದ ಊರಿನಿಂದ ಸಾವಿರಾರು ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅಗಮಿಸುತ್ತಾರೆ. ಎಳ್ಳಮಾವಸ್ಯೆಯ ದಿನ ಉತ್ಸವಮೂರ್ತಿಯಾದ ರಾಮೇಶ್ವರ ದೇವರಿಗೆ ತುಂಗಾನದಿಯ ರಾಮಮಂಟಪದಲ್ಲಿ ಅಭಿಷೇಕ ಮಾಡಲಾಗುತ್ತದೆ.ನಂತರ ಭಕ್ತಾಧಿಗಳು ಅಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇದು ಜಾತ್ರೆಯ ಮೊದಲ ದಿನ. ರಥೋತ್ಸವ ಎರಡನೇ ದಿನದ ಅಕರ್ಷಣೆ. ರಥಬೀದಿಯಲ್ಲಿ ನೂರಾರು ಭಕ್ತರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ತೀರ್ಥಹಳ್ಳಿ ಎಳ್ಳಮಾವಸ್ಯೆ ಜಾತ್ರೆಯ ಪ್ರಮುಖ ಅರ್ಕಷಣೆಯಾದ ತೆಪ್ಪೋತ್ಸವ ಮೂರನೇ ದಿನ ನೆಡೆಯುವುದು. ಅಂದು ಸಂಜೆ ಉತ್ಸವ ಮೂರ್ತಿಯನ್ನು ನದಿಯ ಒಂದು ತೀರದಿಂದ (ದೇವಸ್ಥಾನ) ಇನ್ನೊಂದು ತೀರದ ವರೆಗೆ( ಕುರುವಳ್ಳಿ) ತೆಪ್ಪದಲ್ಲಿ ತೆಗೆದುಕೊಂಡು ಹೋಗಿ ವಾಪಸ್ಸು ಕರೆತರಲಾಗುವುದು. ಇದೇ ಎಳ್ಳಮಾವಸ್ಯೆಜಾತ್ರೆಯ ಪ್ರಸಿದ್ಧ ತೆಪ್ಪೋತ್ಸವ. ಬಣ್ಣ ಬಣ್ಣದ ಪಟಾಕಿಗಳು ಇದರ ಒಂದು ಭಾಗವಾಗಿದೆ. ಬಾನಂಗಳದಲ್ಲಿ ಪಟಾಕಿಗಳ ಚಿತ್ತಾರದಿಂದ ನೊಡುಗರ ಮನಸುರೆಗೊಳ್ಳುತ್ತದೆ. ಮರಳು ದಂಡೆ ಮೇಲೆ ಕುಳಿತು ಪಟಾಕಿಗಳ ಬಣ್ಣದ ಬೆಳಕಿನ ನದಿಯಲ್ಲಿ ತೇಲುವ ಅಲಂಕೃತ ತೆಪ್ಪವನ್ನು ನೋಡುವುದೇ ಒಂದು ಅದ್ಭುತ ಅನುಭವ. ಕೊರೆಯುವ ಚಳಿಯನ್ನು ಮರೆತು ಸಾವಿರಾರು ಜನರು ಈ ಉತ್ಸವದ ಅನಂದವನ್ನು ಸವಿಯುತ್ತಾರೆ. ಹಲವಾರೂ ವರ್ಷಗಳಿಂದ ನೆಡೆಯುತ್ತಿರುವ ಈ ಉತ್ಸವಕ್ಕೆ ನೋಡುಗರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಜನ ಮರುಳೋ ಜಾತ್ರೆ ಮರುಳೋ ಎಂಬುದು ಇಲ್ಲಿ ನೂರಕ್ಕೆ ನೂರು ಸತ್ಯ . ಸಾಮಾನ್ಯವಾಗಿ ಈ ಜಾತ್ರೆ ಡಿಸೆಂಬರ್ ಕೊನೆ ವಾರ ಅಥವಾ ಜನವರಿ ಮೊದಲ ವಾರದಲ್ಲಿ ನೆಡೆಯುತ್ತದೆ. ರಥಬೀದಿಯ ಎರಡು ಬದಿಯಲ್ಲಿ ವಿವಿಧ ಊರಿನಿಂದ ಬಂದ ತರಾವರಿ ಅಂಗಡಿಗಳು ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರನ್ನು ತನ್ನ ಬಳಿ ಸೆಳೆಯಲು ಪೈಪೊಟಿ ನೆಡೆಸುತ್ತವೆ.. ಮುಗಿಲು ಮುಟ್ಟುವ ತೊಟ್ಟಿಲುಗಳು, ನಾನ ರೀತಿಯ ಅಟಿಕೆಗಳು, ಬಣ್ಣದ ಬೆಲೂನ್ಗಳು ಚಳಿಯನ್ನು ಮರೆಸಿ, ಜಾತ್ರೆಯ ರಂಗನ್ನು ಹೆಚ್ಚಿಸುತ್ತವೆ.......

ಸ್ವರ ಸುಶ್ಮಿ.......


ಹೆಸರು ಹುಡುಕುವುದು ಎಂದಾಕ್ಷಣ ಬೆಳೆಂದಿಗಳ ಬಾಲೆ ಕಾದಂಬರಿಯ ನಾಯಕ ನಾಯಕಿಯ ಹೆಸರು ಹುಡುಕಲು ಪರದಾಡುವುದು ನೆನೆಪಾಗುತ್ತದೆ.ಮಗುವಿಗೆ ಹೆಸರಿನ ಅಯ್ಕೆ ಸಹ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ,ಹೊಸ ಹೆಸರು ಅಥವಾ ಅಪರೂಪದ,ಅನುರೂಪದ ಹೆಸರು ಇಡುವುದು ಈಗ ಎಲ್ಲಾ ತಂದೆ,ತಾಯಿಯರ ಅಭಿಲಾಷೆ. ನಾನೂ ಸಹ ಇದಕ್ಕೆ ಹೊರತಲ್ಲ. ನನ್ನ ಮಗುವಿನ ಹೆಸರು ಅಪರೂಪದಾಗಿ ಅರ್ಥಪೂರ್ಣವಾಗಿರಬೇಕು ಎಂಬ ಆಸೆಯಿಂದ ಮಗುವಿನ ಜನನಕ್ಕೆ ಮುಂಚೆಯೇ ಹೆಣ್ಣೇ ಹುಟ್ಟುತ್ತದೆ ಎಂಬ ಭರವಸೆಯಿಂದ "ಸ್ವರ" ಎಂದು ಹೆಸರಿಡುವ ತೀಮರ್ಾನ ಮಾಡಿದ್ದೆವು (ಕೂಸು ಹುಟ್ಟುವ ಮುನ್ನ ಕುಲಾವಿ) ಅವಳು ಅನ್ಯಾಯದ ವಿರುದ್ಧ ಧ್ವನಿಯಾಗಲಿ ಎಂದು ದೂರದ ಆಸೆ ನನ್ನದು. ಗಂಡನ ಒಪ್ಪಿಗೆಯೂ ದೊರೆಯಿತು.( ಅವರಿಗೆ ಒಪ್ಪದೇ ಬೇರೇ ದಾರಿ ಇಲ್ಲ) ಪುಣ್ಯಕ್ಕೆ ಮಗಳೇ ಜನಿಸಿದಳು. ನಂತರ ಶುರುವಾಯಿತು ಸ್ನೆಹಿತರು, ಬಂಧು-ಬಳಗ, ಮನೆಗೆ ಬಂದು ಹೊಗುವರೆಲ್ಲರು ಹೆಸರನ್ನು ಸೂಚಿಸಲು ಪ್ರಾರಂಭಿಸಿದ್ದರು. ನನ್ನ ಗಂಡನ ಹೆಸರು ಸುನಿಲ್, ಅದರಿಂದ ಮಗಳಿಗೆ ಸುನಿಧಿ, ನೀಲಾ ಎಂದೂ, ಅಲ್ಲದೇ ಶ್ರಾವಣೀ, ಸಂಹಿತಾ, ಪೃಥೆ ಹೀಗೇ ಹೆಸರಿನ ಪಟ್ಟಿ ಬೆಳೆಯಿತು. ಅಷ್ಟೇ ಅಲ್ಲದೇ ನನ್ನ ಅಯ್ಕೆಯ ಬಗ್ಗೆ ಹಲವು ಟೀಕೆಗಳು, ಸ್ವರ ಕರೆಯಲು ಸರಿಯಿಲ್ಲ, ಅಪಸ್ವರ ಇತ್ಯಾದಿ. ನಾನು ಮಾತ್ರ ನನ್ನ ನಿಧರ್ಾರದಿಂದ ಹಿಂದೆ ಸರಿಯಲಿಲ್ಲ.
ಇಷ್ಟೇ ಅಲ್ಲದೇ ನನಗೆ ನನ್ನ ಮತ್ತು ನನ್ನ ಗಂಡನ ಹೆಸರಿನ ಅಕ್ಷರಗಳ ಜೋಡಣೆಯು ಮಗಳ ಹೆಸರಿನಲ್ಲಿ ಇರಬೇಕು ಎಂಬ ಹಟ. ಅದರಂತೆ ನನ್ನ ಸ್ನೇಹಿತನ ಸೂಚನೆಯ ಮೇರೆಗೆ "ಸುಶ್ಮಿ" ರೂಪುಗೊಂಡಿತು. ಅಂತಿಮವಾಗಿ ನಮ್ಮ ಮುದ್ದು ಕಂದಮ್ಮನಿಗೆ "ಸ್ವರ ಸುಶ್ಮಿ" ಎಂದು ನಾಮಕರಣವಾಯಿತು.

ಜೀರಿಗೆ ಮೆಣಸು..

ಉಪ್ಪು, ಹುಳಿ, ಖಾರ ಮೂರು ಸಮ ಪ್ರಮಾಣದಲ್ಲಿ ಸೇರಿದರೆ ಮಾತ್ರ ಅಡಿಗೆ ರುಚಿ. ಖಾರ ಕೆಲವರಿಗೆ ಹೆಚ್ಚು ಕೆಲವರಿಗೆ ಕಮ್ಮಿ,ಹಾಗೆ ಒಬ್ಬರ ಮನೆಯಲ್ಲಿ ಒಂದೊಂದು ರೀತಿಯ ಮೆಣಸಿನಕಾಯಿಯ ಬಳಕೆ.
ದಪ್ಪಮೆಣಸು, ಬಳ್ಳಿಮೆಣಸು, ಗಿಡ್ಡಮೆಣಸು, ಖಾರದಮೆಣಸು ಹೀಗೆ ಮೆಣಸಿನಕಾಯಿಗಳಲ್ಲಿ ನಾನಾ ವಿಧಗಳು. ಹಾಗೆಯೇ "ಜೀರಿಗೆಮೆಣಸು" ಒ0ದು ವಿಧ. ಇದು ಯಾವ ಮೆಣಸು ಎಂದು ಅಶ್ಚರ್ಯಪಡುವರು ಹಲವರು. ಅದರೆ ಮಲೆನಾಡಿನಲ್ಲಿ ಮಾತ್ರ ಈ ಜೀರಿಗೆ ಮೆಣಸು ಎಲ್ಲರಿಗೂ ಚಿರಪರಿಚಿತ ಹಾಗು ಅಚ್ಚುಮೆಚ್ಚು. ಇದನ್ನು ಸೂಜಿಮೆಣಸು ಎಂದು ಸಹ ಕರೆಯುತ್ತಾರೆ. ಹೆಸರೇ ಹೇಳುವಹಾಗೇ ಜೀರಿಗೆಮೆಣಸು ಗಾತ್ರದಲ್ಲಿ ಚಿಕ್ಕದು,ಅದರೆ ಖಾರ ಮಾತ್ರ ಬಲು ಜೋರು. ಗಾತ್ರ ನೋಡಿ ತಿಂದರೇ ನಕ್ಷತ್ರ ಲೋಕದ ದರ್ಶನ ಗ್ಯಾಂರಟಿ.
ಮಲೆನಾಡಿನ ತೋಟ ಮತ್ತು ಬಯಲುಗಳಲ್ಲಿ ಈ ಗಿಡಗಳು ಸರ್ವೇ ಸಾಮಾನ್ಯ. ಇದು ಎರಡರಿಂದ ಮೂರು ಅಡಿಗಳ ಎತ್ತರದ ಸಣ್ಣ ಗಿಡಗಳಲ್ಲಿ ಬೆಳೆಯುತ್ತದೆ. ಒಂದು ಇಂಚಿಗಿಂತ ಕಡಿಮೆ ಉದ್ದವಿರುವ ಈ ಮೆಣಸಿನ ಕಾಯಿ ಹಸಿರು ಬಣ್ಣದಲ್ಲಿರುತ್ತದೆ. ನಂತರ ಕೇಸರಿ ಅಥವಾ ಕೆಂಪು ಬಣ್ಣದ ಹಣ್ಣುಗಳಾಗುತ್ತದೆ. ಈ ಜೀರಿಗೆಮೆಣಸಿನ ಗಿಡವನ್ನು ಇತರೇ ಮೆಣಸಿನಕಾಯಿ ಗಿಡಗಳ ಹಾಗೆಯೇ ಬೆಳಯಬಹುದು. ಹಣ್ಣಾದ ಕಾಯಿಗಳ ಬೀಜದಿಂದ ಹೊಸ ಗಿಡಗಳನ್ನು ಪಡೆಯಬಹುದು. ಹೆಚ್ಚು ಬೆಳಕಿರುವ ಜಾಗದಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಸಲ್ಪ ತೇವಾಂಶ ಸಾಕು. ಮಳೆಗಾಲದಲ್ಲಿ ಕಾಯಿ ಸ್ವಲ್ಪ ಕಡಿಮೆ, ಅದರೂ ಎಲ್ಲಾ ಕಾಲಗಳಲ್ಲೂ ಮೆಣಸಿನ ಕಾಯಿಗಳು ಲಭ್ಯ. ಈ ಗಿಡಗಳ ಗಾತ್ರ ಚಿಕ್ಕಾದದರೂ ಎಲೆಗಳು ಕಾಣದ ಹಾಗೆ ಕಾಯಿಗಳು ಬಿಡುತ್ತವೆ. ಕಾಯಿಯಾದ ನಂತರ ರಂಬೆಯನ್ನು ಮುರಿದರೆ, ಮತ್ತೆ ಹೊಸ ರಂಬೆ ಚಿಗರುತ್ತದೆ. ಗಿಡಗಳನ್ನು ತುಂಬಾ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಗಿಡದ ಬುಡಕ್ಕೆ ಸ್ವಲ್ಪ ಮಣ್ಣು ಮತ್ತು ಗೊಬ್ಬರ ಹಾಕಿದರೆ ಸಾಕು. ಈ ಮೆಣಸು ಅಕಾಶದ ಕಡೆ ಮುಖ ಮಾಡಿ ಬೆಳೆಯುವುದು ಇನ್ನೊಂದು ವಿಶೇಷ.
ಮಾರುಕಟ್ಟೆಯಲ್ಲಿ ಈ ಜೀರೆಗೆಮೆಣಿಸಿನಕಾಯಿಗೆ ತುಂಬಾ ಬೇಡಿಕೆಯಿದೆ. ಬೆಲೆಯು ಸಹ ಇದರ ಖಾರದಷ್ಟೆ ಜೋರಾಗಿದೆ. ಒಂದು ಕೆಜಿ ಒಣಗಿಸಿದ ಮೆಣಸಿನಕಾಯಿಗೆ 350 ರೂಪಾಯಿಗಳಿಗಿಂತ ಹೆಚ್ಚು ಬೆಲೆ ಇದೆ. ಈಗಾಗಲೇ ತಿರ್ಥಹಳ್ಳಿ ತಾಲ್ಲೂಕಿನಲ್ಲಿ ಕೆಲವರು ಇದನ್ನು ಬೆಳೆಯುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಸಣ್ಣ ಪ್ರಮಾಣದ ವಾಣಿಜ್ಯ ಬೆಳೆಯಾಗಿ ಮಾಡಿಕೊಂಡಿದ್ದಾರೆ.
ಮಲೆನಾಡಿನಲ್ಲಿ ಬಹು ಬಳಕೆಯಲ್ಲಿರುವ ಈ ಮೆಣಸು ಎಷ್ಟೋ ಮನೆಗಳಲ್ಲಿ ಹಸಿಮೆಣಸಿನಕಾಯಿಗೆ ಪರ್ಯಾಯವಾಗಿ ಉಪಯೋಗಿಸುತ್ತಾರೆ. ಅರೋಗ್ಯಕ್ಕೆ ಹಸಿಮೆಣಸಿಗಿಂತ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಜೀರಿಗೆಮೆಣಸು ಬಹು ಉಪಯೋಗಿ. ನಮ್ಮ ಭಾಗದಲ್ಲಿ ಚಟ್ನಿಗೆ,ಮಾವಿನಕಾಯಿ, ಸೌತೆಕಾಯಿ, ಚಕ್ಕೊತಗಳ ಜೊತೆ ಬಳಸುವುದು ಪ್ರಚಲಿತ. ಇದನ್ನು ಒಣಗಿಸಿ ಅಡಿಗೆಗೆ ಬಳಸಬಹುದು, ಪುಡಿಮಾಡಿ ಉಪ್ಪಿನಕಾಯಿಗೆ ಉಪಯೋಗಿಸಬಹುದು. ಒಣಗಿಸಿದ ಮೆಣಿಸಿನಕಾಯಿಗಳನ್ನು ಹಲವು ವರ್ಷ ಶೇಖರಿಸಿಡಬಹುದು. ಇದರ ರುಚಿಗೆ ಬೇರೆಯಾವುದೇ ಮೆಣಸು ಸಾಟಿಯಾಗುವುದಿಲ್ಲ.
ಇದರ ಎಲೆ ಕೂಡ ತುಂಬ ಉಪಯೋಗಿ. ಎಲೆಗಳಿಂದ ತಂಬುಳಿ, ಪಲ್ಯ ಹಾಗೂ ತೊವ್ವೆಗಳನ್ನು ಮಾಡಬಹದು. ಅರೋಗ್ಯಕ್ಕೆ ತುಂಬ ಹಿತಕರವಾದ ಸೊಪ್ಪು ಇದು. ಬಾಯಿಹುಣ್ಣು, ಹೊಟ್ಟೆ ಉರಿಯಂತಹ ಖಾಯಿಲೆಗಳಿಗೆ ಈ ಸೊಪ್ಪಿನಿಂದ ಮಾಡಿದ ಪದಾರ್ಥಗಳು ಉಪಯುಕ್ತ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ದದು ಎಂಬ ಮಾತು ಜೀರಿಗೆಮೆಣಸಿಗೆ ಹೆಚ್ಚು ಸೂಕ್ತ
ಹೀಗೆ ಜೀರೆಗೆಮೆಣಸು ಮತ್ತು ಅದರ ಎಲೆಗಳನ್ನು ಮಲೆನಾಡಿನಲ್ಲಿ ನಾವು ನಮ್ಮ ನೀತ್ಯ ಜೀವನದಲ್ಲಿ ನಿರಂತರವಾಗಿ ಬಳಸುತ್ತಿದ್ದೆವೆ. ಈಗ ಅರ್ಥಿಕವಾಗಿ ಇದರ ಉಪಯೋಗ ಪಡೆಯುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

ಸರ್ವಗುಣ ಸಂಪನ್ನ........ ಪಪ್ಪಾಯಿ ಹಣ್ಣು

ಪಪ್ಪಾಯಿ ಒಂದು ಜನಪ್ರಿಯ ಹಾಗೂ ಸರ್ವಕಾಲಿಕ ಫಲ. ಇದನ್ನು ಪರಂಗಿ ಹಣ್ಣು ಎಂದು ಸಹ ಕರೆಯುತ್ತಾರೆ. ಪಪ್ಪಾಯಿಯ ಮೂಲ ಮಧ್ಯ ಅಮೆರಿಕ. ಸ್ಪೇನ್ ಮತ್ತು ಪೊರ್ಚಗಲ್ ನಾವಿಕರು ತಾವು ಪ್ರಯಾಣಿಸಿದ ಪ್ರದೇಶಗಳಾದ ಭಾರತ, ಫೀಲಿಫೈನ್ಸ್ ಮತ್ತು ಅಮೆರಿಕದ ಭಾಗಗಳಿಗೆ ಈ ಹಣ್ಣನ್ನು ಪರಿಚಯಿಸಿದರು. 20ನೇ ಶತಮಾನದಲ್ಲಿ ಅಮೆರಿಕಕ್ಕೆ ಈ ಹಣ್ಣನ್ನು ಪರಿಚಯಿಸಲಾಯಿತು ಹಾಗೂ ಹವಾಯಿ ಪ್ರದೇಶದಲ್ಲಿ ಬೆಳೆಯಲು ಪ್ರಾರಂಭಿಸಿದರು. 1920 ರಿಂದ ಅಮೆರಿಕ ಪಪ್ಪಾಯಿ ಬೆಳೆಯುವ ಪ್ರಮುಖ ದೇಶವಾಗಿದೆ. ಜೊತೆಗೆ ಮೆಕ್ಸಿಕೊ ಕೂಡ ಇಂದು ಅತಿ ಹೆಚ್ಚು ಪಪ್ಪಾಯಿ ಬೆಳೆಯುವ ದೇಶವಾಗಿದೆ.
ಇದು ಅಲ್ಪಾವಧಿಯ ಶೀಘ್ರವಾಗಿ ಬೆಳೆಯುವ ಸುಮಾರು 10-12 ಅಡಿಯ ಗಿಡ. ಹಸಿರು ಬಣ್ಣದ ಗಟ್ಟಿಯಾದ ಕಾಯಿ ನಂತರ ಹಳದಿ ಮಿಶ್ರಿತ ಕೇಸರಿ ಬಣ್ಣಕ್ಕೆ ತಿರುಗಿ ಮೆದುವಾದ ಹಣ್ಣಾಗುತ್ತದೆ. ಬಲಿತ ಕಾಯಿ ಕೋಣೆಯ ಉಷ್ಣಾಂಶಕ್ಕೆ ಹಣ್ಣಾಗುತ್ತದೆ. ಸಾಮಾನ್ಯವಾಗಿ 7-20 ಇಂಚು ಉದ್ದವಿದ್ದು, ಒಳಭಾಗ ಹಳದಿ/ಕೇಸರಿ ಬಣ್ಣದಾಗಿರುತ್ತದೆ ಹಾಗೂ ಕಾಳುಮೆಣಸನ್ನು ಹೋಲುವ ಕಪ್ಪು ಬೀಜವಿರುತ್ತದೆ. ಈ ಹಣ್ಣು ಎಲ್ಲಾ ಕಾಲದಲ್ಲೂ ಲಭ್ಯ. ಆದರೆ ಬೇಸಿಗೆಯಲ್ಲಿ ಇದರ ಇಳುವರಿ ಹೆಚ್ಚು. ಇದರಲ್ಲಿ 45 ಕ್ಕಿಂತ ಹೆಚ್ಚು ಪ್ರಭೇಧಗಳಿದೆ.
ಪಪ್ಪಾಯಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ಹಣ್ಣು. ಸಾಮಾನ್ಯವಾಗಿ ಈ ಹಣ್ಣು ಯಾವುದೇ ಅಲರ್ಜಿಯನ್ನು ಉಂಟುಮಾಡುವುದಿಲ್ಲ. ಬಹಳ ಸುಲಭವಾಗಿ ಜೀರ್ಣವಾಗುವ ಈ ಹಣ್ಣು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪರಿಪೂರ್ಣ ಆಹಾರವಾಗಿದೆ. ಪ್ರಂಪಚದ ಎಲ್ಲಾ ಭಾಗದ ಜನರು ಇಷ್ಟಪಡುವ ಸಿಹಿಯಾದ ಸ್ವಾದಿಷ್ಟಕರ ಹಣ್ಣು ಇದು. ಸ್ವಾದಿಷ್ಟತೆ ಮತ್ತು ರುಚಿಗೆ ಸೀಮಿತವಾಗದೆ ಆರೋಗ್ಯಕರ ಅಂಶಗಳನ್ನು ಹೊಂದಿದ ಅತೀ ಶ್ರೀಮಂತ ಹಣ್ಣು. ಜೀವಸತ್ವಗಳಾದ ಎ, ಬಿ, ಸಿ, ಇ ಹಾಗೂ ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಬಿಟಾ ಕೆರೋಟಿನ್, ಪಾನ್ಟೊಥೇನಿಕ್ (pantothenic) ಹಾಗೂ ಫೊಲಿಕ್ ಅಮ್ಲಗಳ ಆಗರ. ಪಪ್ಪಾಯಿ ನಾರಿನಾಂಶದಿಂದ ಕೂಡಿದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ, ಕಡಿಮೆ ಕ್ಯಾಲೋರಿಯ ಹಣ್ಣು. ಕ್ರಿಸ್ಟೊಫರ್ ಕೊಲಂಬಸ್ ಈ ಹಣ್ಣನ್ನು "fruit of the angles” ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.
ಪಪ್ಪಾಯಿಯನ್ನು ಹಾಗೇ ತಿನ್ನಬಹುದು. ಫ್ರೂಟ್ ಸಲಾಡ್‌ಗಳಲ್ಲಿ ಬಳಸಬಹುದು. ಹೆಚ್ಚಿದ ಹಣ್ಣಿಗೆ ನಿಂಬೆರಸ ಬೆರೆಸಿದರೆ ರುಚಿಯಾಗಿರುತ್ತದೆ. ವಿಧವಿಧವಾದ ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಕಾಯಿಯನ್ನು ಬೇಯಿಸಿ ತರಕಾರಿ ರೂಪದಲ್ಲಿ ಬಳಸುತ್ತಾರೆ. ಇದರ ಬೀಜ ಕೂಡ ತಿನ್ನಲು ಯೊಗ್ಯ. ವೆಸ್ಟ್ ಇಂಡಿಸ್ ದೇಶದವರು ಇದರ ಎಲೆಯನ್ನು ಬೇಯಿಸಿ ಪಾಲಕ್ ಸೊಪ್ಪಿನ ಹಾಗೆ ಆಹಾರ ಪದಾರ್ಥಗಳಲ್ಲಿ ಉಪಯೊಗಿಸುತ್ತಾರೆ.
ಬಹು ಉಪಯೋಗಿ ಪಪ್ಪಾಯಿ ಹಣ್ಣು :
*ಅಸ್ಟ್ರಿಯಾದ ಒಂದು ವಿಶ್ವವಿದ್ಯಾನಿಲಯ ನೆಡೆಸಿದ ಅಧ್ಯಯನದ ಪ್ರಕಾರ ಅತಿಯಾಗಿ ಕಳಿತ ಪಪ್ಪಾಯಿ ಹಣ್ಣಿನಲ್ಲಿ ಅತಿ ಹೆಚ್ಚು ಪ್ರಮಾಣದ ಅಂಟ್ಯಿಅಕ್ಸಿಡೆಂಟ್ಗಳು (antioxidants) ಲಭ್ಯ.
*ಉತ್ತಮ ನಾರಿನಂಶ ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತದೆ.ನಿತ್ಯ ಸೇವನೆಯಿಂದ ಹೃದಯಾಘಾತವನ್ನು ತಡೆಯಬಹುದು.
*ದೇಹದಲ್ಲಿನ ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸಿ, ನೆಗಡಿ, ಜ್ವರ, ಕಿವಿಯ ಸೋಂಕುಗಳು ಮುಂತಾದ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.
*ದಿನ ನಿತ್ಯ ಆಹಾರದಲ್ಲಿ ಪಪ್ಪಾಯಿ ಹಣ್ಣನ್ನು ಅಳವಡಿಸುಕೊಳ್ಳುವುದರಿಂದ ವಯಸ್ಕರಲ್ಲಿ ಕಂಡು ಬರುವ ದೃಷ್ಟಿ ಸಂಬಂಧಿ ತೊಂದರೆಗಳಿಂದ ದೂರವಿರಬಹುದು.
*ಪಪ್ಪಾಯಿಯಲ್ಲಿರುವ "ಪಪ್ಪಾಯಿನ್" ಎಂಬ ಎನ್ಜೆಮ್ (papain enzyme) ಬಹು ಆರೋಗ್ಯಕಾರಿ. ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮಲಬದ್ಧತೆಗೆ ಈ ಹಣ್ಣು ರಾಮಬಾಣ ಹಾಗೂ ರಕ್ತಮೂಲವ್ಯಾಧಿಗೂ ಸಹ ಸಿದ್ಧ ಔಷಧಿ. ಈ ಎನ್ಜೆಮ್ ಚಿವ್ಗಮ್ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ.
*ಶ್ವಾಸಕೋಶ ಆರೋಗ್ಯಕ್ಕೂ ಉತ್ತಮ. ಧೂಮಪಾನಿಗಳು ಪಪ್ಪಾಯಿಯ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಎ ಜೀವಸತ್ವ ಶ್ವಾಸಕೋಶದ ಉರಿ, ನೋವು, ಸೋಂಕುಗಳನ್ನು ನಿಯಂತ್ರಣದಲ್ಲಿಡುತ್ತದೆ.
*ಹೆಚ್ಚು ನಾರಿನಂಶ ಹೊಂದಿರುವ, ಕ್ಯಾಲೊರಿ, ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತ ಈ ಹಣ್ಣು, ದೇಹದ ತೂಕ ಇಳಿಕೆಯಲ್ಲಿ ಗಣನೀಯ ಪಾತ್ರವಹಿಸುತ್ತದೆ.
*ಕರಳು ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ. ಆರೋಗ್ಯವಂತ ಕರುಳಿನ ಜೀವಕೋಶಗಳನ್ನ ಕ್ಯಾನ್ಸರ್ ಕಾರಕ ವಿಷದಿಂದ ರಕ್ಷಿಸುತ್ತದೆ.
*ಸಿ,ಇ ಜೀವಸತ್ವ ಹಾಗೂ ಬೀಟಾಕೆರೊಟಿನ್ ಊರಿ, ಊತ, ನೋವು, ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿರುವುದರಿಂದ ಕೀಲುನೋವು, ಅಸ್ತಮಾದಿಂದ ಬಳಲುವವರಿಗೆ ಉತ್ತಮ.
ಈ ಹಣ್ಣು ತಾಯಿಯ ಎದೆ ಹಾಲಿನ ವೃದ್ಧಿಗೆ ಸಹಕಾರಿ.
*ಅಕಾಲ ಮುಪ್ಪನ್ನು ತಡೆಯುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸಹ ಚರ್ಮ ಮೃದುವಾಗಿ ಕಾಂತಿಯುಕ್ತವಾಗಿ ಹೊಳೆಯುತ್ತದೆ. ಪಪ್ಪಾಯಿ ಕಾಯಿಯ ಜ್ಯೂಸ್ -ಮಧ್ಯ ವಯಸ್ಕರಲ್ಲಿ ಕಂಡುಬರುವ ಋತುಚಕ್ರದ ಸಮಸ್ಯೆಗಳಿಗೆ, ಮೊಡವೆಗೆ, ಗಾಯದಲ್ಲಿ ಊತ, ಕೀವುಗಟ್ಟುವುದನ್ನು ತಡೆಯಲು ಉತ್ತಮ ಔಷಧಿ.
*ಈ ಜ್ಯೂಸ್ಗೆ ಜೇನುತುಪ್ಪ ಬೆರೆಸಿ ಕುಡಿದರೆ ಗಂಟಲಿನ ಸೋಂಕುಗಳು ಹರಡುವುದು ತಡೆಯುತ್ತದೆ. ಕಾಯಿಯ ಪೇಸ್ಟ್ ನಿಂದ ಮುಖದ ಕಲೆಗಳು ಮಾಯವಾಗಿ ಸುಂದರವಾದ,ಮೃದುವಾದ ತ್ವಚೆ ಪಡೆಯಬಹುದು.
*2 ಚಮಚ ಬೀಜವನ್ನು ಜೇನುತುಪ್ಪದಲ್ಲಿ ಊಟದ ನಂತರ ಅಗಿದು ತಿನ್ನುವುದರಿಂದ ಜಂತುಹುಳು ನಿವಾರಣೆ ಸಾದ್ಯ .
ಈ ಹಣ್ಣಿನಲ್ಲಿ ಬಿಳಿಯಾಗಿ (bleaching) ಅಂಶವಿರುವುದರಿಂದ ಸೋಪು ಹಾಗೂ ಡಿಟರ್ಜಂಟ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಫೋನ್ ಮಾಡಲೂ ಅಪಾಯಿಂಟ್‌ಮೆಂಟ್ ???!!!

ಮಂತ್ರಿ,ಡಾಕ್ಟ್ರರ್,ಲಾಯರ್ ಅಥವಾ ಯಾವುದಾದರು ಅಧಿಕಾರಿಗಳನ್ನು ಭೇಟಿ ಮಾಡಲು ಮುಂಗಡವಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಸ್ನೇಹಿತರು ಅಥವಾ ನೆಂಟರಿಷ್ಟರ ಮನೆಗೆ ಹೋಗುವ ಮುನ್ನ ಸಹ ಅವರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಾಗಿರುವುದು ನಮಗೆಲ್ಲಾ ತಿಳಿದಿರುವ ವಿಷಯನೇ!! ಆದರೆ ಫೋನ್ ಮಾಡಲೂ ಅಪಾಯಿಂಟ್‌ಮೆಂಟ್ ???!!! ಅಂದರೆ ನಿಮಗೆಲ್ಲಾ ಅಶ್ಚರ್ಯವಾಗಬಹುದು. ಅದರೆ ಇದೊಂತು ನನ್ನ ಅನುಭವಕ್ಕೆ ಬಂದಿರುವ ಸತ್ಯ. ನೀವುಗಳು ಕೂಡ ನನ್ನ ಮಾತಿಗೆ ಧ್ವನಿ ಸೇರಿಸುವ ದಿನ ದೂರ ಇಲ್ಲ ಎಂಬುದು ನನ್ನ ಅಂಬೋಣ....ನನ್ನ ಸಹಪಾಠಿಗಳಲ್ಲಿ ನಾನು ಸಂಪರ್ಕದಲ್ಲಿರುವುದು ಕೆಲವೇ ಕೆಲವು ಅಪ್ತರೊಂದಿಗೆ ಮಾತ್ರ. ಅವರಲ್ಲಿ ಹೆಚ್ಚಿನವರೆಲ್ಲಾ ಈಗ ಇರುವುದು ಮಹಾನಗರಗಳಲ್ಲಿ. ಜೀವನದಲ್ಲಿ ಯಶಸ್ಸನ್ನು ಸಹ ಗಳಿಸಿರುವುದು ಸಂತೋಷದ ವಿಷಯವೇ. ನಾನು ಅಮವಾಸ್ಯೆಗೊ, ಹುಣ್ಣಿಮೆಗೊ ಮಾತನಾಡಬೇಕೆನಿಸಿ ಈ ಮಹಾಶಯರಿಗೆ ಫೋನ್ ಮಾಡಿದರೇ, ಫೋನ್ ಎತ್ತುವುದೇ ವಿರಳ. ಅದೂ ಜೋಬಿನಲ್ಲೋ, ವ್ಯಾನಟಿ ಬ್ಯಾಗಿನಲ್ಲಿರುವ ಮೊಬೈಲ್ ಫೋನ್ !!!! ಉತ್ತರಿಸಿದ್ದರೂ ಏಯ್ ಸಾರಿ ಕಣೇ....ಮೀಟಿಂಗ್‍ನಲ್ಲಿದ್ದಿನಿ, ಟ್ರಾಫಿಕ್‍ನಲ್ಲಿದ್ದಿನಿ, ಡ್ರೈವ್ ಮಾಡ್ತಾಯಿದ್ದಿನಿ ಅಂತೂ ಬ್ಯುಸಿಯಾಗಿದ್ದಿನಿ ಅನ್ನುವ ಉತ್ತರ ಗ್ಯಾರಂಟಿ. ಸರಿ ಶನಿವಾರ,ಭಾನುವಾರ ಅವರ ವಿಕೆಂಡ್‍ನಲ್ಲೇ ಫೋನಾಯಿಸಿದ್ದರೆ, ಗೆಳೆಯರೊಂದಿಗೆ, ಪಾರ್ಟಿಯಲ್ಲಿ ಅಥವಾ ಇನ್ನೇಲ್ಲೋ ಇದ್ದೀನಿ ಎಂದೋ, ಮತ್ತೊಂದೋ ಸಾಮಾನ್ಯ. ಅದರೆ call you later, ಅನ್ನುವುದನ್ನು ಮಾತ್ರ ಮರೆಯುವುದಿಲ್ಲ. ಅದರೆ ಅ later, ಮಾತ್ರ lateಯಾಗಿಯೂ ಕೂಡ ಬರುವುದೇ ಇಲ್ಲ!! ಈ ಅನುಭವ ನನಗೆ ಮಾತ್ರವಲ್ಲ ಅಂದುಕೊಳ್ಳುತ್ತೇನೆ.ನನಗೂ ಗೊತ್ತು ನಗರದ ಜೀವನ ಎಷ್ಟೋಂದು ಯಾತ್ರಿಕ ಹಾಗೂ ಬ್ಯುಸಿ ಎಂದು, ನಾನು ಅವರು ಹೇಳುವ ಉತ್ತರಗಳನ್ನು ಸಹ ಸುಳ್ಳು ಎಂದು ಹೇಳುತ್ತಿಲ್ಲ. ಹಳೇ ಸ್ನೇಹಿತರು ಕೂಡ ಅಷ್ಟೇ ಮುಖ್ಯವಲ್ಲವೇ?? ಅದಕ್ಕಾಗಿ ನಾನು ನನ್ನ ಸ್ನೇಹಿತರಿಗೆ ಫೋನ್ ಮಾಡುವ ಮುನ್ನ ಒಂದು ಮೇಸೆಜ್ ಕಳುಹಿಸುವ ರೂಡಿ ಮಾಡಿಕೊಂಡಿದ್ದೇನೆ. give me a miss call, when you are free ಅಂತ.!! ಚೆನ್ನಾಗಿದ್ದೀಯಾ ನನ್ನ ಈ ಐಡಿಯಾ? ಇದು ಒಂದು ರೀತಿ ಮುಂಚಿತ ಅಪಾಯಿಂಟ್‌ಮೆಂಟ್ ತಾನೇ??

August 28, 2009

ಅರೋಗ್ಯಕ್ಕೆ ಹಿತಕರ ಈ ಹಾಳೆ ಟೋಪಿಗಳು

ಹಾಳೆ ಟೋಪಿ ಗ್ರಾಮೀಣ ಭಾಗದ ಜನರ ಉಡುಗೆ - ತೊಡುಗೆಗಳು ವಿಭಿನ್ನ ಹಾಗೂ ವಿಶಿಷ್ಟ. ಅಂತಹದೇ ಒಂದು ವಿಶಿಷ್ಠವಾದ ಗ್ರಾಮೀಣ ಭಾಗದ ಕೆಲಸಗಾರರ ತೊಡುಗೆ " ಅಡಿಕೆ ಹಾಳೆಯ ಟೋಪಿ". ಇದು ಬರೀ ವಿಭಿನ್ನವಷ್ಟೇ ಅಲ್ಲದೇ ಆರೋಗ್ಯಕ್ಕೆ ಹಿತಕರ ಹಾಗೂ ಪರಿಸರ ಪ್ರಿಯಾವಾದದ್ದು ಕೂಡ.
ಉತ್ತರ ಕನ್ನಡ, ಕುಂದಾಪುರ ಹಾಗೂ ಮಲೆನಾಡಿನ ಭಾಗದ ಹಳ್ಳಿಗಳ ಕೆಲೆಸಗಾರರ ತಲೆ ಮೇಲೆ ಈ ಟೋಪಿಗಳು ರಾರಜಿಸುವುದನ್ನು ನಾವು ಕಾಣಬಹುದು. ಅಡಿಕೆ ಹಾಳೆಯಿಂದ ತಯಾರಿಸುವ ಈ ಟೋಪಿಗಳನ್ನು 'ಹಾಳೆ ಟೋಪಿ' ಹಾಗೂ ಉತ್ತರಕನ್ನಡದವರು 'ಮಂಡೆ ಹಾಳೆ' ( ತಲೆ ಹಾಳೆ) ಎಂದು ಕರೆಯುತ್ತಾರೆ. ಉತ್ತರಕನ್ನಡದ ಶಿರಿಸಿ,ಗೋಕರ್ಣ, ಹೊನ್ನಾವರ, ಸಿದ್ದಾಪುರ ಹಗೂ ಕುಂದಾಪುರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಹಾಗೂ ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ನಗರ, ಸಾಗರದಲ್ಲಿ ಇದರ ಬಳಕೆ ಸವರ್ೇಸಾಮಾನ್ಯ. ಇದರ ಉಪಯೋಗ ಬಹಳ ಹಿಂದಿನ ಕಾಲದಿಂದಲೂ ಕಾಣಬಹುದಾಗಿದೆ. ಒಳ್ಳೆ ಒಣಗಿದ ಅಡಿಕೆ ಹಾಳೆಯನ್ನು ಅಯ್ದು ತಂದು, ಒಂದೆರೆಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಹಾಳೆ ಮೆದುವಾದ ನಂತರ, ಒಳಭಾಗದ ಒಂದು ಪದರವನ್ನು ತೆಗೆದು ಹಾಳೆಯನ್ನು ತೆಳುವಾಗಿಸಬೇಕು. ಸರಿಯಾದ ಅಳತೆಗೆ ಕತ್ತರಿಸಿ, ಎರಡು ತುದಿಯಲ್ಲಿ ನೆರೆಗೆ ತೆಗೆದು ಮಡುಚಿ ಹೊಲಿಯಬೇಕು. ಈಗ ಅಡಿಕೆ ಹಾಳೆಯ ಟೋಪಿ ಸಿದ್ದ. ಟೋಪಿಗಳನ್ನು ಸಂಪೂರ್ಣವಾಗಿ ಕೈಯಲ್ಲೇ ತಯಾರಿಸಲಾಗುವುದು. ಗೋಕರ್ಣ ಸುತ್ತಮುತ್ತ ಸ್ಥಳಿಯ ಜನರು ಈ ಹಾಳೆ ಟೋಪಿಗಳನ್ನು ತಯಾರಿಸುವುದರಲ್ಲಿ ನಿಪುಣರು. ಹೊಸ ಹಾಳೆ ಟೋಪಿ ಉಪಯೊಗಿಸುವ ಮುನ್ನ ಹರಳೇಣ್ಣೆ ಹಚ್ಚಿ ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ಅದ್ದಿ ತೆಗೆದು ನೆರಳಿನಲ್ಲಿ ಒಣಗಿಸುತ್ತಾರೆ. ಹೀಗೆ ಮಾಡುವುದರಿಂದ ಟೋಪಿಗಳು ಬೇಗ ಒಡೆದುಹೋಗುವುದಿಲ್ಲ ಹಾಗೂ ಧೀರ್ಘ ಕಾಲ ಬಾಳಕೆ ಬರುವುದು. ಈ ಟೋಪಿಗಳು ಸುಮಾರು ಎಂಟರಿಂದ ಹತ್ತು ತಿಂಗಳ ಕಾಲ ಬಾಳಿಕೆ ಬರುವುದು ಗ್ಯಾರಂಟಿ. ಇಲ್ಲಿ ಒಂದು ಟೋಪಿಯ ಬೆಲೆ 15-20 ರೂಪಾಯಿಗಳವರೆಗಿದೆ.
ಈ ಟೋಪಿಗಳನ್ನು ಮಾಡಲು ಯಾವುದೇ ಹಾನಿಕರ ವಸ್ತುವನ್ನು ಬಳಸುವುದಿಲ್ಲ ಹಾಗೂ ಅಡಿಕೆ ಹಾಳೆ ಮಾತ್ರ ಇದರಲ್ಲಿ ಬಳಸುರುವುದರಿಂದ ವಿಲೇವಾರಿಯು ಸುಲಭ. ಮಣ್ಣಿನಲ್ಲಿ ಬಹು ಬೇಗ ಕೊಳೆತು ಗೊಬ್ಬರವಾಗುವ ಇದು ಪರಿಸರ ಪ್ರಿಯ. ಇಷ್ಟೇ ಅಲ್ಲದೇ ಇದು ಅರೋಗ್ಯಕ್ಕೂ ಸಹ ಹಿತಕರ. ಬಿಸಿಲಿನಲ್ಲಿ ಕೆಲಸ ಮಾಡುವಾಗ ತಲೆ ತಂಪಾಗಿಡುತ್ತದೆ. ಇತರೆ ಟೋಪಿಗಳ ಹಾಗೇ ಒಳ ಭಾಗ ಬಿಸಿಯಾಗುವುದಿಲ್ಲ ಹಾಗೂ ಬೆವರುವುದಿಲ್ಲ. ಹಿಂದಿನವರು ಕಣ್ಣುರಿ,ತಲೆನೋವು ಮತ್ತು ಉಷ್ಣ ತಡೆಯಲು ತಲೆಗೆ ಹರಳೇಣ್ಣೆ ಹಚ್ಚಿಕೊಂಡು ಅದರ ಮೇಲೆ ಹರಳೇ ಗಿಡದ ಎಲೆಯನ್ನು ಇಟ್ಟುಕೊಂಡು ಈ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು.
ಅಡಿಕೆಹಾಳೆ ಟೋಪಿಗಳು ಹಳ್ಳಿಗಾಡಿಗಷ್ಟೆ ಸಿಮೀತವಾಗದೇ ನಗರದ ಫ್ಯಾಷನ್ ಜಗತ್ತನ್ನು ತಲುಪಿರುವುದು ಸಂತೋಷಕರ. ನಗರದ ಕಾಲೇಜುಗಳ ಫ್ಯಾಷನ್ ಷೋಗಳು ಹಾಗೂ ಎಥ್ನಿಕ್ ಡೇಗಳಂತಹ ಸಮಾರಂಭಗಳಲ್ಲಿ ಬಳಕೆಯಾಗುತ್ತಿದೆ. . ಇಲ್ಲಿ ಕೈ ಕಸೂತಿಯಿಂದ ಅಲಂಕೃತಗೊಂಡಂತಹ ಹಾಳೆ ಟೋಪಿಗಳು ಸಹ ಲಭ್ಯ.
ಅದರೆ ಹಳ್ಳಿಗಳಲ್ಲಿ ಯುವ ಪಿಳಗೆಯವರು ಇದನ್ನು ಬಳಸುವುದು ಕಡಿಮೆಯಾಗುತ್ತಿದೆ. ಬದಲಾಗಿ ಹೊಸ ಹೊಸ ಫ್ಯಾಷನ್ ಟೋಪಿಗಳಿಗೆ ಮಾರುಹೊಗುತ್ತಿದ್ದಾರೆ. ಹಾಗೂ ಇದನ್ನು ಮಾಡುವವರು ಕಡಿಮೆಯಾಗುತ್ತಿದ್ದಾರೆ. . ಈ ಟೋಪಿಗಳು ನಗರ ಕಂಡರೂ ಅಲ್ಲಿ ಇದರ ಬಳಕೆ ಸೀಮೀತವಾಗಿದೆ. ಗ್ರಾಮಿಣ ಭಾಗದಲ್ಲಿ ಸಹ ಇದು ಬರೀ ಕೆಲಸ ಮಾಡುವ ವರ್ಗದವರಿಗೆ ಮಾತ್ರ ಸಿಮೀತವಾಗಿರುವುದು ದುರಾದೃಷ್ಟಕರ ಸಂಗತಿ. ಪರಿಸರಕ್ಕೆ ಮಾರಕವಲ್ಲದ ಅರೋಗ್ಯಕ್ಕೆ ಹಿತಕರವಾದ ಅಡಿಕೆ ಹಾಳೆಯ ಟೋಪಿಗಳನ್ನು ನಾವುಗಳು ಬಳಸುವ ಬಗ್ಗೆ ಒಲವು ತೋರಿ ಬೇಕಾಗಿದೆ.

August 25, 2009

ಅಮ್ಮ ನನ್ನ ಎದೆಯಾಳದಿಂದ......


ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು ! ಅಂತ ಚೋಟುದ್ದ ಹುಡುಗಿ ವಾದ ಮಾಡುತ್ತಾಳೆ. ಅವಳು ಆ ರೀತಿ ಹೇಳಿದಾಗಲ್ಲೆಲಾ ನಾನು ಚಿಕ್ಕವಳಾಗಿದ್ದಾಗ ಹೀಗೆ ಮಾಡುತ್ತಿದ್ದೆ ಅಲ್ವಾ? ಅಂತ ಅಂದುಕೊಳ್ಳುತ್ತೇನೆ. ನಾನು ಅಥವಾ ನನ್ನ ಮಗಳು ಮಾತ್ರವಲ್ಲ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಹೆಣ್ಣುಮಕ್ಕಳು ನಾನು ಅಪ್ಪನ ಮಗಳು ಅಂತ ಹೇಳಿಕೊಳ್ಳೊದರಲೇ ಖುಷಿ ಪಡುತ್ತಾರೆ. ನನ್ನ ಮಗಳು ಈ ರೀತಿ ಅಪ್ಪನ ಕಡೆ ವಾಲಿದಾಗಲೆಲ್ಲಾ ನನಗೆ ಸಿಟ್ಟು ಬರುತ್ತೆ ಹಾಗು ಬೇಜಾರಾಗುತ್ತೆ. ನಾನು ದಿನವೀಡಿ ಅವಳ ಜೊತೆ ಇದ್ದು ಏನೇಲ್ಲಾ ಮಾಡಿದರೂ, ದಿನದಲ್ಲಿ ಕಡಿಮೆ ಸಮಯ ಅವಳೊಂದಿಗೆ ಕಳೆಯುವ ಅಪ್ಪನೇ ಅವಳಿಗೆ ಹೆಚ್ಚು! ಆಗೆಲ್ಲಾ ನನ್ನ ಅಮ್ಮ ನನ್ನನೂ ತುಂಬಾ ಕಾಡುತ್ತಾಳೆ. ನಾವು ಮೂರು ಮಕ್ಕಳು ಈ ರೀತಿಯ ಅದೆಷ್ಟು ಪಕ್ಷಪಾತ ವರ್ತನೆಗಳಿಂದ ಅಮ್ಮನಿಗೆ ಬೇಜಾರುಮಾಡಿದ್ದೇವೆ. ಅಮ್ಮನ ಕಣ್ಣಲ್ಲಿ ಅದೇಷ್ಟು ಬಾರಿ ನೀರುಬಂದಿರಬಹುದು. ನಮ್ಮದು ಮಲೆನಾಡಿನ ಹಳ್ಳಿಯೊಂದರ ಒಂಟಿಮನೆಯಾದ ಕಾರಣ ಶಾಲೆಗೆ ದೂರ, ಮನೆಯಲ್ಲಿ ಯಾವುದೇ ವಾಹನವಿಲ್ಲದ ಕಾಲವದು. ಹಿಗಾಗಿ ನನ್ನನು ದೂರದ ಶಿವಮೊಗ್ಗದ ನೆಂಟರೊಬ್ಬರ ಮನೆಯಲ್ಲಿ ಚಿಕ್ಕ ವಯಸ್ಸಿನಲ್ಲೇ ಓದಲೂ ಬಿಟ್ಟರು. ಯಾವಾಗಲಾದರೊಮ್ಮೆ ಅಪ್ಪ ಬಂದು ಹೋಗುತ್ತಿದ್ದ. ಅಮ್ಮ ದನ, ಕರು, ಮನೆ, ಕೆಲಸ ಇವುಗಳ ಬಲೆಯಿಂದ ಬಿಡಿಸಿಕೊಂಡು ಬರುತ್ತಿದ್ದಿದು ಬಹಳ ಅಪರೂಪ. ಹಾಗಾಗಿ ಅಪ್ಪ ಬಹಳ ಪ್ರಿಯವಾದ. ವರ್ಷಕ್ಕೆ ಎರಡು ಬಾರಿ ರಜಕ್ಕೆ ಮನೆಗೆ ಬಂದಾಗಲೂ ಕೆಲಸ ಹೇಳುವ ಅಮ್ಮನಿಂಗಿತಲೂ, ಮಾಡಬೇಡ ಬೀಡು ಎನ್ನುವ ಅಪ್ಪನೇ ಖುಷಿ. ಯಾವಾಲೂ ಮನೆಯಲ್ಲೇ ಇರುತ್ತಿದ್ದ ಅಮ್ಮ ಸಂಸಾರದ ಜಂಜಾಟದ ಜೊತೆಗೆ ಮೂರು ಮಕ್ಕಳ ಜಗಳ, ಗಲಾಟೆ, ಚೇಷ್ಟೆಯನ್ನು ತಾಳಲಾರದೆ ಕಿರಾಚಾಡುತ್ತಿದ್ದಳು. ದೊಡ್ಡವಳಾದ ನನಗೇ ಸ್ವಲ್ಪ ಜಾಸ್ತಿ ಬೈಗುಳ, ಹೊಡೆತ. ಅಮ್ಮನ ಮೇಲೆ ದೂರು ಹೇಳಲು ಅಪ್ಪ ಮನೆಗೆ ಬರುವುದನೇ ಕಾಯುತ್ತಿದ್ದೆ. ಹೈಸ್ಕೂಲ್ ಓದಲೂ ವಾಪಸ್ಸು ಮನೆಗೆ ಬಂದಾಗಲೂ, ಅಮ್ಮನ ಅನುಮಾನ ಹಾಗೂ ನೂರೆಂಟು ಪ್ರಶ್ನೆಗಳು ನನಗೆ ಕಿರಿಕಿರಿಯಾಗಿತ್ತು. ಅಮ್ಮನ ಹತ್ತಿರ ಜಗಳವಾಡದ ದಿನವೇ ಇಲ್ಲ. ಆ ದಿನಗಳಲ್ಲಿ ಅಮ್ಮ ನನ್ನ ಬದ್ದ ವೈರಿಯಾಗಿ ಕಾಣುತ್ತಿದ್ದಳು. ನಂತರದ ದಿನಗಳಲ್ಲಿ ಕಾಲೇಜ್ ಓದಲೂ ಹಾಸ್ಟೆಲ್ ಸೇರಿದ ಮೇಲೂ, ಅಮ್ಮನಿಗೆ ತಿಳಿಯದೆ ಜಾಸ್ತಿ ದುಡ್ಡುಕೊಡುತ್ತಿದ್ದ, ಅಪ್ಪನೇ ಅಚ್ಚುಮೆಚ್ಚು. ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಿದ್ದ ಅಮ್ಮ ನನಗೆ ಹತ್ತಿರವಾಗಲೇ ಇಲ್ಲ. ಅಥವಾ ಅವಳಿಗೆ ಹತ್ತಿರವಾಗಲೂ ನಾನು ಪ್ರಯತ್ನಪಡಲೇ ಇಲ್ಲವೋ?. ಅದರೆ ಈಗ ನಾನು ತಾಯಿ ಸ್ಥಾನದಲ್ಲಿದ್ದೇನೆ. ನನ್ನ ಮಗಳು ಅಮ್ಮ ನೀನು ನನಗೆ ಇಷ್ಟ ಇಲ್ಲ ಎಂದಾಗ ನನ್ನ ಎದೆಯಲ್ಲಿ ಹಳೆ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಅಮ್ಮನ ಆ ಎಲ್ಲಾ ವರ್ತನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತದೆ. ಮನೆಯಲ್ಲಿ ಹೆಚ್ಚಾಗಿ ಇರದ ಅಪ್ಪ, ಬಂಧು-ಬಳಗದವರ ಕೊಂಕು ಮಾತು, ಇವುಗಳೆಲ್ಲಾ ಅಮ್ಮನ ಹತಾಶೆಗೆ ಕಾರಣವಾಗಿದ್ದವು. ಕೆಲಸ ಮತ್ತು ಸಂಸಾರದ ಜಂಜಾಟದಿಂದ ಮಕ್ಕಳ ಮೇಲೆ ರೇಗಾಡುತ್ತಿದ್ದಳು. ಬೆಳೆದ ಮಗಳು ಎಲ್ಲಿ ದಾರಿ ತಪ್ಪುವಳೋ ಎಂಬ ಅತಂಕ ನೂರೆಂಟು ಪ್ರಶ್ನೇಗಳ ರೂಪದಲ್ಲಿ ಹೊರಬರುತ್ತಿದ್ದವು. ನಂತರದ ದಿನಗಳಲ್ಲಿ ನನ್ನ ಬಗ್ಗೆ ಅಮ್ಮನ ಧೋರಣೆಗಳು ಬದಲಾದವು, ಅಥವಾ ನನ್ನದೋ ತಿಳಿಯದು. ಅವಳು ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳಲಾರಂಭಿಸಿದ್ದಳು. ಪಾಪ ಎಷ್ಟು ಒಳ್ಳೆಯವಳು ಅಮ್ಮ ಎಂದು ಕೊಳ್ಳುತ್ತಿದ್ದೆ. ಅದರೆ ನನ್ನ ಇಗೋಯಿಂದ ಅವಳ ಭಾವನೆಗಳಿಗೆ ಸ್ಪಂದಿಸಲು ಸಾದ್ಯವಾಗಲೇ ಇಲ್ಲ. ಅಮ್ಮ ತನ್ನ ಬೆಳೆದ ಮಗಳಲ್ಲಿ ಅವಳ ಸ್ನೇಹಿತೆಗಾಗಿ ಅದೆಷ್ಟು ಹುಡುಕಿದಳೋ........., ಹಂಬಲಿಸಿದಳೋ.......? ಕೊನೆಗೂ ನಾನು ಅವಳ ಸ್ನೇಹಿತೆಯಾಗಲೇ ಇಲ್ಲ.!