August 3, 2013

ಮರೆತ ಹಾದಿ!


ಅವಳು ತುಂಬಾ ಗಂಬೀರೆ, ಪ್ರಬುದ್ದೆ ಎಂದೇ ಚಿರಪರಿಚಿತೆ.  ಹತ್ತು ಬಾರಿ ಯೋಚಿಸದೆ ಹೆಜ್ಜೆ ಮುಂದಿಡುವ ಜಾಯಮಾನದವಳಲ್ಲ. ಜೀವನವನ್ನು ಅತ್ಯಂತ ಜಾಗೂಕರತೆಯಿಂದ ಕಟ್ಟಿಕೊಂಡವಳು. ಅಂಥವಳು ಅವನ ವಿಷಯದಲ್ಲಿ ಎಡವಿದ್ದಳು.

ಅವರಿಬ್ಬರು ಒಂದೇ ಹಾದಿಯ ಪಯಣಿಗರೇನು ಅಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಮೊದಲ ನೋಟದಲ್ಲೇ ಪ್ರೀತಿ ಪ್ರೇಮ ಆಕರ್ಷಣೆಗೆ ಬಲಿಯಾಗುವ ಹದಿ ವಯಸ್ಸನ್ನೆಲ್ಲಾ ಕಳೆದವರಿಬ್ಬರು. ಯಾವುದೋ ಒಂದು ತಿರುವಿನಲ್ಲಿ ಭೇಟಿಯಾಗಿದ್ದರು.  ಅವನು ಅವಳ ಬೆಂಬಿಡದೆ ಗೋಗರೆದು ಹಿಂದೆ ಮುಂದೆ ಯೋಚಿಸದೆ ತನ್ನ ಒಲವ ತೊಡಿ ಕೊಂಡಿದ್ದ. ಅವನಿಂದ ದೂರವಾಗುವ ಗಟ್ಟಿ ಮನಸ್ಸು ಮಾಡಿದಾಗಲೇಲ್ಲಾ, ಬಾರಿ ಬಾರಿ ಅವನಿಗೆ ಸೋತಿದ್ದಳು. ಬೆಟ್ಟದಷ್ಟು ಪ್ರೀತಿಯನ್ನು ಅವನು ಅವಳ ಹಾದಿಗೆ ಅಡ್ಡವಾಗಿ ಹರವಿದ್ದ. ಅವಳು ತನ್ನ ದಾರಿ ಮರೆತು ಅವನ ಪ್ರೀತಿಯ ಬೆಟ್ಟವನ್ನು ದಾಟಲಾರದೆ ಅಲ್ಲೇ ನಿಂತೇ ಬಿಟ್ಟಳು. ಅವನು ಅವಳು ಕರೆದಾಗಲೇಲ್ಲಾ ಓಗೋಡುತ್ತಿದ್ದ. ಅವಳನ್ನು ಅವನ ಒಲವಿನ ಹೊಳೆಯಲ್ಲಿ ತೇಲಿಸಿದ್ದ. ಅವನ ದಿನದ ಸಮಯ ಪೂರ್ತಿ ಅವಳಿಗೆ ಮಾತ್ರ  ಸೀಮಿತ ಎನ್ನುವಂತೆ ಸದಾ ಜೊತೆಯಲ್ಲಿರುತ್ತಿದ್ದ. ಅವನಿಂದ ಗುಡ್ ಮಾರ್ನಿಂಗ್, ಗುಡ್ ನೈಟ್‌ಗಳಿಲ್ಲದೇ ಅವಳ ಜೀವನದಲ್ಲಿ ಬೆಳಗು ರಾತ್ರಿಗಳೇ ಇಲ್ಲವೇನೋ ಅನ್ನುವಷ್ಟು ಅವಳು ಅವನಿಗೆ ಒಗ್ಗಿ ಹೋಗ್ಗಿದ್ದಳು.  ಅವರಿಬ್ಬರು ಜೊತೆಗೂಡಿ ಕೇಳಿದ ಹಾಡುಗಳು, ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮುಂದಿನ ಜನ್ಮಕ್ಕಾಗುವಷ್ಟು ಕನಸು ಕಂಡಿದ್ದರು. ಮೊದಲಿನಿಂದಲೂ ಅಂಕೆ ಸಂಖ್ಯೆಗಳ ವ್ಯವಹಾರ ಅವಳಿಗೆ ಆಗಿ ಬಾರದು. ಆದರೆ ಜೀವನದಲ್ಲಿ ಅವನು ಕಾಲಿಟ್ಟ ಘಳಿಗೆಯಿಂದ  ನಿಮಿಷ, ಗಂಟೆ, ದಿನಗಳ ಲೆಕ್ಕದಲ್ಲಿ ಪಳಗಿದ್ದಳು. ಆರು ಅಂಕೆಯ ಒಂದು ಫೋನ್ ನಂಬರ್‌ಗೆ ಮೂರು ಸಾರಿ ಪುಸ್ತಕ ನೋಡುವ ಅವಳು ನಿದ್ದೆಗಣ್ಣಿಲ್ಲಿ ಕೇಳಿದರೂ ಹತ್ತು ಅಂಕೆಗಳ ಅವನ ಎರಡೂ ಮೊಬೈಲ್ ಸಂಖ್ಯೆಗಳನ್ನು ಕನವರಿಸುವಷ್ಟು ಅವಳು ಅವನಿಂದ ಬದಲಾಗಿದ್ದಳು. ಅವನಿಂದ ಹೆಚ್ಚು ಹೆಚ್ಚು ಪ್ರೀತಿ ಬಯಸ ತೊಡಗಿದ್ದಳು. ದಿನದಿಂದ ದಿನಕ್ಕೆ ಅವನೆಡೆಗೆ ಅವಳು ಜಾಸ್ತಿ ಪೊಸೆಸ್ಸಿವ್  ಆದಂತೆಲ್ಲಾ ಅವನು ಅವಳ ನಿರಿಕ್ಷೆಯ ಮಟ್ಟ ತಲುಪಲಾರದೆ ಸೋತ. ಅವಳು ಅವನ ಕನವರಿಕೆಯಲ್ಲಿ ಸೋರಗ ತೊಡಗಿದ್ದಳು. ಅವನ ಹೊರತಾಗಿ ಅವಳು  ಬದುಕಬಲ್ಲಳು, ಆದರೆ ಅವನ ಜೊತೆ ಜೊತೆಯಲ್ಲಿ ಬದುಕುವುದು ಅವಳಿಗೆ ಪ್ರಿಯವಾದದ್ದು.
ಅವರಿಬ್ಬರ ಸಂಬಂಧ ಮುಷ್ಟಿಯಲ್ಲಿನ ಮರಳಿನ ಹಾಗೆ. ಮುಷ್ಟಿ ಕಟ್ಟಿದರೂ, ಬಿಟ್ಟರೂ ಕೈಯಿಂದ ಜಾರಿ ಹೋಗುತ್ತದೆ ಎಂಬುದು ಅರಿವಾಗುವ ವೇಳೆಗಾಗಲೇ ಅವರಿಬ್ಬರ ಮಧ್ಯೆ ಮಾತಿಗೆ ಬರಗಾಲ ಆರಂಭವಾಗಿತ್ತು. ಜೀವನದಲ್ಲಿ ಒಟ್ಟಿಗೆ ಸಾಗುವ ಕನಸು ತುಂಬಿ ಆತ ಭವಿಷ್ಯದ ಕಡೆ ಮುಖ ತಿರುಗಿಸಿದ್ದ. ಅವನು ಕಟ್ಟಿ ಕೊಂಡ ಗುರಿ ಸಾಧಿಸುವ ಛಲದಲ್ಲಿ ಒಟ್ಟಿಗೆ ಕಂಡ ಕನಸಿಗೆ ಸಮಯವಿಲ್ಲದೆ ಮಸುಕಾಗ ತೊಡಗಿತ್ತು. ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸಿದಳು.   ಮೊದಮೊದಲು ಮುನಿದಳು, ಜಗಳವಾಡಿದಳು, ಅತ್ತಳು, ಕೊನೆಯಲ್ಲಿ ಮೌನವಾದಳು. ನಿಧಾನವಾಗಿ ಅವಳಿಗೆ ಅರಿವಾಗ ತೊಡಗಿತ್ತು  ಅವನ ಹಾದಿಯೇ ಬೇರೆ, ಅವಳದೇ ಬೇರೆಯೆಂದು. ಆದರೂ ದುಂಡಗಿರೊ ಭೂಮಿಯ ಯಾವುದೋ ತಿರುವಿನಲ್ಲಿ ಮತ್ತೆ ಅವನು ಸಿಗಬಹುದು ಎಂಬ ಆಸೆ ಅವಳಲ್ಲಿ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮತ್ತೆ ಮತ್ತೆ  ತಿರುಗಿ ನೋಡುತ್ತಾ, ಅವನ ನೆನಪುಗಳೊಂದಿಗೆ  ಮರೆತ ಅವಳ ಹಾದಿಯಲ್ಲಿ ಪುನಃ  ಹೆಜ್ಜೆ ಹಾಕಲು ನಿರ್ಧರಿಸಿದಳು.

ಈಗ ಅವಳು ಮತ್ತೆ ಲೆಕ್ಕ ತಪ್ಪುತ್ತಿದ್ದಾಳೆ. ಎಷ್ಟು ಯೋಚಿಸಿದರೂ ಅವನ ಮೊಬೈಲ್ ಫೋನಿನ ಒಂಬತ್ತೇ ಸಂಖ್ಯೆಗಳು ಅವಳಿಗೆ ನೆನಪಾಗುವುದು.