June 5, 2014

ತೂ ಭೀ ಆ ಸಬ್ ಕೊ ಛೋಡ್ ಕೆ…

ಬೆಳಿಗ್ಗೆಯಿಂದ ಬೆಳಗಿದ ಸೂರ್ಯ ಮೋಡದ ಹಿಂದೆ ಎಲ್ಲೋ ಕಳೆದು ಹೋಗಿದ್ದಾನೆ. ಥೇಟ್ ನಿನ್ ಥರಾ. ಮೋಡ ಮುಚ್ಚಿದ ಆಕಾಶ, ಗಾಳಿಯಿಲ್ಲದ ಕಪ್ಪುಗಟ್ಟಿದ ಸಂಜೆ ರಂಗೇಲ್ಲಾ ತೊಳಿದಿಟ್ಟ ಬ್ಲ್ಯಾಕ್  ಅಂಡ್ ವೈಟ್ ಚಿತ್ರ . ಸ್ಥಬ್ದ ನೀರವ. ನೀನಿಲ್ಲದ ನನ್ ಹಾಗೇ. 
ಈ ಸಂಜೆ ಯಾಕಾಗಿದೆ ನೀನಿಲ್ಲದ…, ಈ ಸಂತೆ ಸಾಕಾಗಿದೆ....
ಸಾಯಂಕಾಲದ ಸಂಕಟ ಅನುಭವಿಸಕ್ಕೂ ಆಗಲ್ಲ, ಆಡಕ್ಕೂ, ಒಂಥರಾ ಹೊಕ್ಕಳ ಹುಣ್ಣಿನ ಹಾಗೆ. ಎಲ್ಲಾ ಬಿಟ್ಟು ಓಡಿ ಹೋಗಣ ಅನ್ಸೋದು, ಜನ ಬೇಡವಾಗೋದು, ಗುಂಪಲ್ಲೂ ಒಂಟಿತನ ಕಾಡೋದು ಎಲ್ಲಾ ನೀನಿಲ್ಲದ  ಖಾಲಿ ಖಾಲಿ ಉದ್ದ ಸಂಜೆಗಳಲ್ಲೇ,  ಈ ಸಂಜೆಗಳಲ್ಲಿ ನಿನಗಾಗಿ ಮನಸ್ಸು ಚಡಪಡಿಸುತ್ತೆ, ನಿನ್ ಜೊತೆ ಮಾತಾಡಲು ಮನಸ್ಸು ಹವಣಿಸುತ್ತೆ. ಮೊಬೈಲ್‌ನಲ್ಲಿ ನಿನ್ನ ನಂಬರಿಗಾಗಿ ಬೆರಳುಗಳು ಹುಡುಕಾಡುತ್ವೆ. ಡಯಲ್ ಮಾಡಿ ಕನೆಕ್ಟ್ ಆಗುವ ಮುನ್ನ ಕಟ್ ಮಾಡಿದ ಕಾಲ್‌ಗಳು, ಟೈಪ್ ಮಾಡಿ ಕಳಿಸದೆ ಔಟ್ ಬಾಕ್ಸ್ ತುಂಬಿದ ಮೇಸೆಜ್‌ಗಳು ಅದೇಷ್ಟೋ. ಗೊತ್ತು, ಅವುಗಳು ನಿನ್ನ ತಲುಪಿದರೂ ಈಗ ತಟ್ಟಲಾರವು. ಅವುಗಳಿಗೆಲ್ಲಾ ನಿಂದೊಂದೇ ಉತ್ತರ ಅಸಹನೀಯ ಮೌನ.  ಮಾತಾಡಾದರೂ ಕಡಿದುಕೊಳ್ಳಬಹುದು ಆದ್ರೆ ಮಾತಾಡದೇ ಕಳಕೊಂಡರೆ ಯಾವಾಗಲೂ ಕಾಡ್ತಾ ಇರುತ್ತೆ. ಹಿಂದೆಲ್ಲಾ ಸಂಬಂಧ ಹರಿದುಕೊಂಡೇ ತೀರುತ್ತೀನಿ ಅಂತ ನಿನ್ನೊಡನೆ ನಾ ಜಗಳಕ್ಕೆ ನಿಂತಾಗಲೇ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಕೊಂಡಿದ್ದು. ನನಗೆ ನೀನು ಹೆಚ್ಚು ಹೆಚ್ಚು ಇಷ್ಟವಾಗಿದ್ದು, ನಾವಿಬ್ಬರು ಮತ್ತಷ್ಟೂ ಹತ್ತಿರ ಆಗಿದ್ದು.  ಆದರೆ ಈಗ ಇದು ಬರೀ ಕಾಡುವ ನೆನಪಷ್ಟೇ. ನಿನ್ ಜೊತೆ ಆಡಿದ ಮಾತುಗಳು, ಕಳೆದ ಕಾಲದ ನೆನೆಪುಗಳು ವಿರಹದ ಬೆಂಕಿಗೆ ಈಗ ತುಪ್ಪ.  ನನ್ನ ಪಾಲಿಗೆ  ಉಳಿದಿರೊದು ನೀನಿಲ್ಲದ ಸಂಜೆ ಮತ್ತು ನಿನ್ನ ಮೌನ.

ಧೂಳು ಕೂತ ಸ್ಟಡಿ ಟೇಬಲ್, ಅರ್ಧಂಬರ್ಧ ಕಿತ್ತು ಹೋದ ನೆಲ್ ಪೈಂಟ್, ಬಾಗಿಲು ತೆಗೆದರೆ ಮೈಮೇಲೆ ಬೀಳುವ ವಾರ್ಡ್ ರೋಬ್‌ನ  ಬಟ್ಟೆಗಳು, ಪುಟ ಮಡಚಿಟ್ಟ ಓದಿ ಮುಗಿಸದ ಪುಸ್ತಕ ಎಲ್ಲಾ ನೀನಿಲ್ಲದೆ  ಮುನಿಸಿ ಕೊಂಡ ಹಾಗೆ ಅನ್ಸುತ್ತೆ.   ಸೇಮ್  ಪಿಯಾ ಬಿನಾ… ಪಿಯಾ ಬಿನಾ… ರೀತಿಯಲ್ಲಿ. ಆದ್ರೆ ನೀನಿಲ್ಲದ, ನಿನ್ನ ಪ್ರೀತಿಯಿಲ್ಲದ ಬದುಕಿಗೆ ಹೋಲಿಕೆಯೇ ಇಲ್ಲ. ಹೋಲಿಸಿದಷ್ಟೂ ನೀನಿಲ್ಲದ ನೋವು ಹೆಚ್ಚಿಸುತ್ತೆ.

ನೀ ನನ್ ಕಣ್ಣಲ್ಲಿ ತುಂಬಿ ಹೋದ ಬಣ್ಣಗೆಟ್ಟಿರುವ ಕನಸುಗಳಿಗೆ  ಮತ್ತೆ ಬಣ್ಣ ತುಂಬಿ ಜೀವ ನೀಡಲು ನನ್ನ ಜೊತೆಯಾಗು ಬಾ. ನಮ್ಮ ಕನಸುಗಳಿಗೆ ಜೀವ ತುಂಬಲು ಎಲ್ಲಾ ಬಿಟ್ಟು ನೀನಗಾಗಿ ಕಾಯುತ್ತಿದ್ದೀನಿ.


ತೂ ಭೀ ಆ ಸಬ್ ಕೊ ಛೋಡ್ ಕೆ… 

February 23, 2014

ನಾಯಿಗಳಿಗೆ ಹಾನಿಯುಂಟು ಮಾಡುವ ಆಹಾರಗಳು

ಮನುಷ್ಯರು ಹಾಗೂ ಕೆಲವು ಬೇರೆ ಜಾತಿಯ ಪ್ರಾಣಿಗಳು  ತಿನ್ನಲರ್ಹವಾದ ಕೆಲವು ಆಹಾರಗಳು ನಾಯಿಗಳಿಗೆ ಅಪಾಯವನ್ನುಂಟು ಮಾಡಬಹುದು. ಇದಕ್ಕೆ ಮುಖ್ಯ ಕಾರಣ ಅವುಗಳ ವಿಭಿನ್ನ ಚಯಾಪಚಯ (ಮೆಟಬಾಲಿಸಮ್). ಕೆಲವು ಆಹಾರಗಳು ತೀಕ್ಷ್ಣವಲ್ಲದ ಅಜೀರ್ಣವನ್ನು ಮಾತ್ರ ಉಂಟುಮಾಡಿದರೆ, ಇನ್ನೂ ಕೆಲವು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು ಮತ್ತು ಸಾವು ಕೂಡ ಉಂಟಾಗುವ ಸಾಧ್ಯತೆ ಯಿದೆ. ಈ ಕೆಳಗಿನವುಗಳು ನಾಯಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು.   

v  ಆಲ್ಕೋಹಾಲ್ ಪಾನೀಯಗಳು : ಇವುಗಳು ನಾಯಿಗಳಿಗೆ ಅಮಲೇರಿಸುತ್ತದೆ. ಇದರಿಂದ ನಾಯಿಗಳು ಕೋಮ ಸ್ಥಿತಿಯನ್ನು ತಲುಪಿ ಸಾವನ್ನುಪ್ಪುವ ಸಾಧ್ಯತೆ ಹೆಚ್ಚು.
v  ಬೆಣ್ಣೆ ಹಣ್ಣು :  ಇವುಗಳು ನಾಯಿಗಳಲ್ಲಿ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.
v  ಬೆಕ್ಕಿನ ಆಹಾರಗಳು : ಇವುಗಳು ಸಾಮಾನ್ಯವಾಗಿ ಅತಿ ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇಂತಹ ಆಹಾರಗಳು  ನಾಯಿಗಳಿಗೆ ಸೂಕ್ತವಲ್ಲ .
v  ಚಾಕೊಲೇಟ್, ಕಾಫಿ, ಟೀ ಮತ್ತು ಇತರೆ ಕೆಫೀನ್‌ಯುಕ್ತ ಆಹಾರಗಳು ವಾಂತಿ ಮತ್ತು ಭೇದಿಯನ್ನು ಉಂಟುಮಾಡುತ್ತವೆ ಮತ್ತು ಹೃದಯ ಮತ್ತು ನರವ್ಯೂಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚು.
v  ಸಿಟ್ರಸ್‌ ಹೊಂದಿದ ಆಹಾರ ಉತ್ಪನ್ನಗಳು ನಾಯಿಗಳಲ್ಲಿ  ವಾಂತಿಯನ್ನುಂಟು ಮಾಡುತ್ತದೆ.
v  ಮೀನು, ಕೋಳಿ ಅಥವಾ ಇತರೆ ಮಾಂಸದ ಮೂಲಗಳ ಮೂಳೆಗಳು ನಾಯಿಗಳ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡುವುದು ಸಾಧ್ಯ.
v  ದ್ರಾಕ್ಷಿ, ಒಣ ದ್ರಾಕ್ಷಿಗಳಲ್ಲಿರುವ ಅಪರಿಚಿತ ವಿಷ, ನಾಯಿಗಳ ಮೂತ್ರ ಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ.
v  ಕೊಳೆತ ಅಥವಾ ಹಾಳಾದ ಆಹಾರಗಳು ಹಲವು ಟಾಕ್ಸಿನ್‌ಗಳನ್ನು ಹೊಂದಿರುವುದರಿಂದ ನಾಯಿಗಳಲ್ಲಿ ವಾಂತಿ ಮತ್ತು ಭೇಧಿಯನ್ನು ಉಂಟುಮಾಡುವುದರ ಜೊತೆಗೆ ಇತರ ಅಂಗಗಳ ಮೇಲೂ ಸಹ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
v  ಹೆಚ್ಚಿನ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳನ್ನು ನಾಯಿಗಳಿಗೆ ನೀಡಿದ್ದಲ್ಲಿ ನಾಯಿಗಳಲ್ಲಿ ಅತಿಸಾರ ಕಂಡುಬರುತ್ತದೆ.
v  ಹಸಿ ಮೊಟ್ಟೆ ಮತ್ತು ಹಸಿ ಮಾಂಸಗಳು ಸಹ ನಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.
v  ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆಯುಕ್ತ ಆಹಾರ ಕೂಡ ನಾಯಿಗಳಿಗೆ ಒಳೆಯದಲ್ಲ.
v  ನಾಯಿಗಳಿಗೆ ನೀಡುವ ಆಹಾರದಲ್ಲಿ ಅಣಬೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಅವುಗಳ ಆರೋಗ್ಯಕ್ಕೆ ಹಾನಿಕಾರಕ.

v  ತಂಬಾಕು, ಗಾಂಜಾ, ಹುದುಗು ಹಿಟ್ಟು (ಯಿಸ್ಟ್), ಕೃತಕ ಸಿಹಿಯನ್ನು ಹೊಂದಿದ ಆಹಾರಗಳನ್ನು ನಾಯಿಗೆ ನೀಡುವುದು ನೀಷಿದ್ಧ. ಈ ರೀತಿಯ ಆಹಾರಗಳು ಹಲವು ರೀತಿಯ ಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ಇವುಗಳು ನಾಯಿಯ ಹಲವು ಅಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮವನ್ನುಂಟುಮಾಡಿ  ಸಾವಿಗೆ ಕಾರಣವಾಗುತ್ತವೆ.

ರಕ್ತ ಶುದ್ಧೀಕಾರಕ ಆಹಾರಗಳು

ರಕ್ತ  ಶುದ್ಧೀಕರಣ ದೇಹದ ಆರೋಗ್ಯಕರ ಕ್ರಿಯೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಡೀ ದೇಹದ ಕ್ರಿಯೆಗಳು ರಕ್ತ ಚಲನೆಯನ್ನು ಅವಲಂಬಿಸಿದೆ. ವಿಷದ ಅಂಶ ಹೆಚ್ಚಾದಂತೆಲ್ಲಾ ದೇಹದ ಅಂಗಾಂಗಗಳಿಗೆ  ನಿಧಾನವಾಗಿ ಹಾನಿಯಗುತ್ತದೆ ಮತ್ತು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರ ತಲೆ ನೋವು, ಆಯಾಸಗಳು ದೇಹದಲ್ಲಿ ಕಲ್ಮಶ ಮತ್ತು ವಿಷಕಾರಿ ಅಂಶಗಳ ಉಪಸ್ಥಿತಿಯನ್ನು  ತೋರಿಸುವ  ಕೆಲವು ಸಾಮಾನ್ಯ ಲಕ್ಷಣಗಳು. ಕಲ್ಮಶ ರಕ್ತ ಅರೋಗ್ಯ ಮತ್ತು ಚರ್ಮದ ತೊಂದರೆಗಳಿಗೆ ಕಾರಣವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಾದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳಿಗೆ ದೇಹದಲ್ಲಿನ ಕಲ್ಮಶ ರಕ್ತ ಕಾರಣ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ರಕ್ತ ಶುದ್ಧಿಕಾರಕ ಟಾನಿಕ್ ಮತ್ತು ಔಷಧಗಳು ಲಭ್ಯ. ಆದರೆ ಇವುಗಳು ನೂರಕ್ಕೆ ನೂರಷ್ಟು ಫಲಿತಾಂಶವನ್ನೇನ್ನೂ ನೀಡುವುದಿಲ್ಲ. ಇದಕ್ಕೆ ಕಾರಣ ಕೇವಲ ಟಾನಿಕ್ ಮತ್ತು ಔಷಧಿಗಳು ಮಾತ್ರ ಸಾಕಾಗುವುದಿಲ್ಲ. ನೀವು  ರಕ್ತವನ್ನು ಶುದ್ಧಗೊಳಿಸುವ ಆಹಾರದ ಮೇಲೆ ಸಹ ಗಮನ ನೀಡಬೇಕಾಗುತ್ತದೆ. ಯಕೃತ್ತು, ಮೂತ್ರಪಿಂಡಗಳು  ಹಾಗೇಯೆದುಗ್ಧನಾಳಗಳನ್ನು ಸಹ ರಕ್ತವನ್ನು ಶುದ್ಧಿಕರಿಸುವ ಮತ್ತು ದೇಹದಿಂದ  ಕಲ್ಮಶ ಮತ್ತು ವಿಷ ಅಂಶಗಳನ್ನು ತೊಲಗಿಸುವ ಕೆಲಸವನ್ನು ಮಾಡುತ್ತವೆ. ಈ ಆಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ, ಇಡೀ ದೇಹದಲ್ಲಿ  ಕಲ್ಮಶ ರಕ್ತದ ಚಲನೆಯಿಂದಾಗಿ ಚರ್ಮ ಕಾಯಿಲೆಗಳು ಕಾಡುತ್ತವೆ. ಆದ್ದರಿಂದ ನೀವು ನಿಮ್ಮ ರಕ್ತವನ್ನು ಶುದ್ಧಗೊಳಿಸಲು ಬಯಸುವೀರಾದರೆ,   ರಕ್ತವನ್ನು ಶುದ್ದಗೊಳಿಸುವ ಮತ್ತು  ಮೂತ್ರಪಿಂಡ ಹಾಗೂ ಯಕೃತ್ತುಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯ ಮಾಡುವ  ಕೆಲವು ನಿರ್ವಿಷಕಾರಕ ಆಹಾರವನ್ನು  ನಿಮ್ಮ ಆಹಾರದಲ್ಲಿ ಸೇರ್ಪಡಿಸಬೇಕು. ಆರೋಗ್ಯಕರ ಮತ್ತು ದೋಷರಹಿತ ತ್ವಚೆಕ್ಕಾಗಿ ಆಹಾರ ಕ್ರಮದಲ್ಲಿ ಒಳಪಡಿಸಲೇ ಬೇಕಾದ  ರಕ್ತ ಶುದ್ಧಕಾರಕ ಆಹಾರಗಳಲ್ಲಿ ಕೆಲವು ಇಲ್ಲಿವೆ.
 ಬ್ರೊಕ್ಲಿ - ಈ ಹಸಿರು ತರಕಾರಿ  ಆಂಟಿಅಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ. ಅದು ರಕ್ತವನ್ನು ಶುದ್ಧಗೊಳಿಸಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ  ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದು ಹಾಕುತ್ತದೆ.
ಕೊಸುಗೆಡ್ಡೆ -ಕ್ಯಾಬೆಜ್ ರಸದ ಸೇವನೆ  ರಕ್ತ ಶುದ್ಧಿಕರಣಕ್ಕೆ ಒಂದು ಉತ್ತಮವಾದ ಮನೆ ಮದ್ದು.
ಹೂಕೋಸು -  ಇದರಲ್ಲಿರುವ ಕ್ಲೋರೊಫಿಲ್‌ ಅಂಶ, ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆಯುತ್ತದೆ ಮತ್ತು ರಕ್ತವನ್ನು ಶುದ್ಧ ಗೊಳಿಸುತ್ತದೆ.
ಹಾಗಲಕಾಯಿ-  ಕಹಿ ರುಚಿಯ ಈ ತರಕಾರಿ ಹಲವು ಔಷಧ ಗುಣಗಳನ್ನು ಹೊಂದಿದೆ. ಹಾಗೇ ಹಾಗಲಕಾಯಿ ರಕ್ತವನ್ನು ಸಹ ಶುದ್ಧಿಕರಿಸುತ್ತದೆ.
ಬೇವು - ಕಹಿ ಬೇವು ರಕ್ತವನ್ನು ಶುದ್ಧಗೊಳಿಸುವ  ಒಂದು ಅತ್ಯಂತ ಜನಪ್ರಿಯ ನೈಸರ್ಗಿಕ ಉಪಾಯ. ಇದರ ಎಲೆಗಳನ್ನು ನೀರನಲ್ಲಿ ಕುದಿಸಿ,   ಬೆಳಿಗ್ಗೆ ಸೇವಿಸಿ. ಇದು ಬಲವಾದ ಮತ್ತು ನೈಸರ್ಗಿಕವಾದ ರಕ್ತ ಶುದ್ಧಿಕಾರಕವಾಗಿ ಕೆಲಸ ಮಾಡುತ್ತದೆ.
ಜೇನು ತುಪ್ಪ ಸಹ ಒಂದು ಪರಿಣಾಮಕಾರಿ ರಕ್ತ ಶುದ್ಧಕಾರಕ.
ಬೆಳ್ಳುಳ್ಳಿ- ಬೆಳ್ಳುಳ್ಳಿ ಕೇವಲ ಒಂದು ಆಂಟಿಬಯೋಟಿಕ್ (ಪ್ರತಿಜೀವಕ) ಮಾತ್ರವಲ್ಲ. ಇದು ಒಂದು ರಕ್ತ ಶುದ್ಧೀಕರಣ ಮೂಲಿಕೆ. ಬೆಳ್ಳುಳ್ಳಿ ರಕ್ತವನ್ನು ಶುದ್ಧ ಮಾಡುತ್ತದೆ, ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಹೊರಹಾಕುತ್ತದೆ ಮತ್ತು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುತ್ತದೆ.
ಕ್ಯಾರೆಟ್-  ಕ್ಯಾರೆಟ್ ರಕ್ತ ಶುದ್ಧಿಗೊಳಿಸುವ ಆಹಾರಗಳಲ್ಲಿ ಒಂದು. ಇದು ತ್ವಚೆಗೆ ಉತ್ತಮ . ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲ್ಯಾಸ್ ಕ್ಯಾರೆಟ್ ಜ್ಯೂಸ್ ನ ಸೇವನೆ ಪರಿಣಾಮಕಾರಿ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ತ್ಚಚೆಗೆ ತೊಂದರೆಯುಂಟು ಮಾಡುವ ಹಾನಿಕಾರಕ ವಿಷ ಅಂಶಗಳು ಮತ್ತು  ಸ್ವತಂತ್ರ ರಾಡಿಕಲ್‌ಗಳನ್ನು ತೊಲಗಿಸುತ್ತದೆ.
ಕಲ್ಲಂಗಡಿ - ವ್ಯಾಪಕವಾಗಿ ಕಲ್ಲಂಗಡಿಯು ಅದರಲ್ಲಿರುವ ನಿರ್ವಿಷಗೊಳಿಸುವ ಗುಣಲಕ್ಷಣಗಳಿಗೆ ಪ್ರಸಿದ್ಧ. ಇದು ಕೇವಲ ರಕ್ತವನ್ನು ಶುದ್ಧಗೊಳಿಸುವುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಾಯ್ದುಕೊಳ್ಳುತ್ತದೆ. ಮೇಲಾಗಿ ಇದು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.
ಅನಾನಸ್ ಹಣ್ಣು -  ನಿಮ್ಮ ರಕ್ತ ಶುದ್ಧಿಕಾರಕ ಆಹಾರಗಳಲ್ಲಿ ಸೇರಿಸಲೇ ಬೇಕಾದ ಹಣ್ಣಗಳಲ್ಲಿ ಅನಾನಸ್ ಒಂದು. ತಾಜಾ ಹಣ್ಣು ರಕ್ತ ಮತ್ತು ಮೂತ್ರಪಿಂಡ ಶುದ್ಧಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಗ್ರೀನ್ ಟೀ - ಮೂಲಿಕೆಗಳ ಈ ಟೀ ಅನ್ನು ದಿನಕ್ಕೆ ಒಂದು ಬಾರಿ ರಕ್ತ ಶುದ್ಧೀಕರಣಕ್ಕಾಗಿ ಸೇವಿಸ ಬಹುದು.
ಪಾರ್ಸ್ಲೇ ಮೂತ್ರಪಿಂಡಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳು ಮೂತ್ರಪಿಂಡಗಳನ್ನು ಶುದ್ಧಗೊಳಿಸಿ, ನಿರ್ವಿಷಗೊಳಿಸುತ್ತದೆ. ಇದನ್ನು  ವ್ಯಾಪಕವಾಗಿ ರಕ್ತ ಶುದ್ಧೀಕರಿಸಲು ಒಂದು ಪರಿಹಾರವಾಗಿ ಬಳಸಲಾಗುತ್ತದೆ.

ಭಾರತೀಯ ಗುಸ್ ಬರಿಗಳಲ್ಲಿನ ರಕ್ತ ಶುದ್ಧಗೊಳಿಸುವ  ಮತ್ತು ನಿರ್ವಿಷಗೊಳಿಸುವ ಗುಣಲಕ್ಷಣಗಳು ಜನಪ್ರಿಯ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ದೇಹವನ್ನು ನಿರ್ವಿಷಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ತಲೆ ಕೂದಲ ಆರೈಕೆಯಲ್ಲಿ ಮೆಹಂದಿ

ಮೆಹಂದಿ ನಿಜವಾಗಿಯೂ ಅದ್ಭುತ ನೈಸರ್ಗಿಕ ಕೂದಲು ಬಣ್ಣ. ಭಾರತದಲ್ಲಿ ಇದನ್ನು ಶತಮಾನಗಳಿಂದ  ಉಪಯೋಗಿಸಲಾಗುತ್ತಿದೆ. ಮೆಹಂದಿ, ಮದರಂಗಿ,ಹೆನ್ನಾ, ಗೊರಂಟಿ ಎಂಬ ಹೆಸರಿನಿಂದ ಇದು ಚಿರಪರಿಚಿತ. ಮೆಹಂದಿಯಲ್ಲಿ ಅನೇಕ ಶ್ರೇಷ್ಟ ಗುಣಗಳು ಅಡಕವಾಗಿದೆ. ಇದು ಕೂದಲಿಗೆ ಬಣ್ಣ ನೀಡುವುದು ಮಾತ್ರವಲ್ಲ ಕೂದಲು ಆರೋಗ್ಯಕರವಾಗಿ ಸಹ ಮಾಡುತ್ತದೆ. ನಿಯಮಿತವಾಗಿ ಮದರಂಗಿಯನ್ನು ಕೂದಲಿಗೆ ಬಳಸುವುದರಿಂದ ಕೂದಲಿಗೆ ಹೊಳಪು ಬರುತ್ತದೆ ಮತ್ತು ಬಲಿಷ್ಟವಾಗುತ್ತದೆ. ಹಾಗೂ ಇದು ತಲೆ ಹೊಟ್ಟಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಕೆಲವು ಪ್ರಯೋಜನಗಳು
·         ಮದರಂಗಿ ಒಂದು ನೈಸರ್ಗಿಕ ಕೂದಲ ಬಣ್ಣವಾಗಿದೆ. ಹೆಚ್ಚಿನವರು ಕೂದಲಿಗೆ ರಾಸಾಯಿನಿಕ ಬಣ್ಣವನ್ನು  ಉಪಯೋಗಿಸುತ್ತಾರೆ, ಅದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಆದರೆ ಮದರಂಗಿ  ಆ ಎಲ್ಲಾ  ಸಮಸ್ಯೆಗಳಿಂದ  ಕೂದಲನ್ನು ದೂರವಿಡುತ್ತದೆ. ಹೆನ್ನಾ ಕೂದಲಿಗೆ ಯಾವುದೇ ತೊಂದರೆ ಇಲ್ಲದೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ನೀಡುತ್ತದೆ.
·         ಮೆಹಂದಿ ಒಂದು ಅದ್ಭುತವಾದ ಕಂಡಿಷನರ್. ಇದು ಕೂದಲಿಗೆ ಪುನಃ ಆರೋಗ್ಯ ಮತ್ತು ಕಾಂತಿ ಮರಳಿ ನೀಡವ ಗುಣಗಳನ್ನು ಹೊಂದಿದೆ. ಇದು ನೆತ್ತಿಯ ನೈಸರ್ಗಿಕ ಆಮ್ಲ ಕ್ಷಾರೀಯ ಸಮತೋಲನವನ್ನು ಕೂಡ ಪೂರ್ವಸ್ಥಿತಿಗೆ ತರುತ್ತದೆ.
·         ಮದರಂಗಿಯು ಒಂದು ನೈಸರ್ಗಿಕವಾಗಿ ಫಂಗಸ್ ವಿರೋಧಿ ಮತ್ತು ಬ್ಯಾಕ್ಟಿರೀಯಾ ವಿರೋಧಿ. ಕೂದಲಿಗೆ ಮೆಂಹಂದಿಯನ್ನು ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರವಿಡುವುದು ಸಾಧ್ಯ. ನಿಯಮಿತವಾಗಿ ಕೂದಲಿಗೆ ಮದರಂಗಿಯನ್ನು ಬಳಸುವುದರಿಂದ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದ್ದಿಲ್ಲ.
·         ಬಲಿಷ್ಟವಾದ ಕೂದಲನ್ನು ಬಯಸುವಂತವರು ಕೂಡ ಮೆಹಂದಿಯ ಮೊರೆ ಹೋಗಬಹುದು. ಇದು ಕೂದಲನ್ನು ಬಲಿಷ್ಟಗೊಳಿಸಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಇದು ಕೂದಲ ಬೇರಿನವರೆಗೆ ಪ್ರವೇಶಿಸಿ ಕೂದಲನ್ನು  ಧೃಡವಾಗಿಸುತ್ತದೆ.
·         ತುಂಬಾ ತೆಳುವಾದ ಕೂದಲನ್ನು ಹೊಂದಿರುವವರು ಮತ್ತು ಕಡಿಮೆ ಕೂದಲನ್ನು ಉಳ್ಳವರು ಮೆಹಂದಿ ಬಳಸಿ. ಇದು ಕೂದಲಿನ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಮೆಹಂದಿಯ ಅಂಶದ ಸಂಗ್ರಹಣೆ ಕೂದಲ ಎಳೆಯನ್ನು ದಪ್ಪವಾಗಿಸುವುದರ ಮೂಲಕ ಕೂದಲ ಮೊತ್ತವನ್ನು ಜಾಸ್ತಿಯಾಗಲು ಸಹಾಯ ಮಾಡುತ್ತದೆ.
·         ಮೆಹಂದಿ ಕೂದಲಿನ ನೈಸರ್ಗಿಕ ಹೊಳಪನ್ನು ಅಧಿಕಗೊಳಿಸುತ್ತದೆ. ಮೆಹಂದಿಯ ಅಂಶದ ಸಂಗ್ರಹಣೆ ಕೂದಲಿನ ಕ್ಯುಟಿಕಲ್‌ನ್ನು ಹೊಳಪಾಗಿಸಿ ನೈಸರ್ಗಿಕ ಹೊಳಪನ್ನು ವರ್ಧಿಸುತ್ತದೆ.

ಕಹಿ ಹಾಗಲದ ಸಿಹಿ ರೂಪ

ಸಾಮಾನ್ಯವಾಗಿ ನಮಗೆ ಹಾಗಲಕಾಯಿ ಎಂದಾಕ್ಷಣ ನೆನೆಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ ಎಂಬುದು ಚಿರಪರಿಚಿತ. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಲು  ಮಾತ್ರ ಸೀಮಿತ ಎಂದು  ಈ ಬಹುಉಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ. ಆದರೆ ವಾಸ್ತವವಾಗಿ ಹಾಗಲಕಾಯಿ ಹಲವು ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ ಯಕೃತ್ತು ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದೆ.ಇದು ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳು ಪುನರುತ್ಪಾದನೆಗೆ ಸಹಾಯಕವಾಗುತ್ತದೆ.  ಈ ಆರೋಗ್ಯಕರ ತರಕಾರಿ ತುಂಬಾ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದು ತ್ವಚೆಯನ್ನು ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೈಬಣ್ಣ ನೀಡುತ್ತದೆ.ಹೀಗೆ ಹಾಗಲಕಾಯಿ ಇತರೆ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಅವುಗಳು ಕೆಲವು ಇಲ್ಲಿವೆ.
ಯಕೃತ್ತ್ ಪುನರುತ್ಪಾದನೆ :- ಹಾಗಲಕಾಯಿ ಲಿವರ್ ಶುದ್ಧಿಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ದಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.
ಮಧುಮೇಹ :- ಹಾಗಲಕಾಯಿ ರಸ  ಮಧುಮೇಹ 2ನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸೂಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
ತೂಕ ನಿಯಂತ್ರಣಕ್ಕೆ ಸಹಾಯಕ :- ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ವಯಪಚಯ ಮಟ್ಟವನ್ನು ಹೆಚ್ಚಿಸುವ ಅಂಟಿಅಕ್ಸಿಡೆಂಟ್‌ಗಳಿಂದ ಸಹ ಕೂಡಿದೆ. ಇದಲ್ಲದೆ ಹಾಗಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿಯಾಗಿದೆ.
ಚರ್ಮಕ್ಕೆ ಉತ್ತಮ :- ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೊಜನಕಾರಿ. ಹಾಗಲಕಾಯಿ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದು ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲು ಸಹ ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :- ಹಾಗಲಕಾಯಿ ನಮ್ಮ ದೇಹವನ್ನು ಶುದ್ದಿಗೊಳಿಸುತ್ತದೆ ಮತ್ತು ಇದು ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದೆ.ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
ಮೂತ್ರಕೋಶ ಮತ್ತು ಮೂತ್ರ ಪಿಂಡಗಳಿಗೆ ಔಷಧಿ  :- ಹಾಗಲಕಾಯಿ ಕಿಡ್ನಿ‌ಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ  :- ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡ ಬಹುದು.
ಮಲ ಬದ್ಧತೆಗೆ ಔಷಧಿ :- ಹಾಗಲಕಾಯಿಯ ಮತ್ತೊಂದು ಆರೋಗ್ಯಕಾರಿ ಪ್ರಯೋಜನವೆಂದರೆ ಈ ತರಕಾರಿ ಮಲಬದ್ಧತೆಯನ್ನು ತಡೆಯುತ್ತದೆ. ಈ ತರಕಾರಿ ಹೇರಳವಾಗಿ ನಾರಿನಂಶವನ್ನು ಹೊಂದಿರುವುದರಿಂದ ಮಲಬದ್ಧತೆಗೆ ರಾಮಬಾಣ.
ಕ್ಯಾನ್ಸರ್‌ ವಿರುದ್ಧ ಹೋರಾಟ :- ಹಾಗಲಕಾಯಿಯಲ್ಲಿ ಆಂಟಿಅಕ್ಸಿಡೆಂಟ್‌ಗಳು  ಸಮೃದ್ಧವಾಗಿದ್ದೆ. ಕ್ಯಾನ್ಸರ್‌ ವಿರುದ್ಧ ಹೋರಾಡುವ ಈ ಅಂಶಗಳು ಕ್ಯಾನ್ನರ್‌ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
 ಹೃದಯ ಆರೋಗ್ಯ :- ಹಾಗಲಕಾಯಿ ರಕ್ತದಲ್ಲಿ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ ಎಂಬ ಮಹತ್ವರವಾದ ಫಲಿತಾಂಶವನ್ನು ಕಂಡುಬಂದಿದೆ. ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ ಮತ್ತು ನಮ್ಮ ಹೃದಯ ಆರೋಗ್ಯವಂತವಾಗಿರಲು ಸಹಾಯ ಮಾಡುತ್ತದೆ.

ಬಹು ಉಪಯೋಗಿ ಟೊಮ್ಯಾಟೊ


 ಟೊಮ್ಯಾಟೊ  ಒಂದು ವಿಸ್ಮಯಕಾರಿಯಾದ ಬಹುಮುಖ ಆಹಾರವಾಗಿದೆ. ಇದು ಒಂದು ಸಿಟ್ರಸ್‌ಯುಕ್ತ ಹಣ್ಣಾಗಿದರೂ ಕೂಡ ಇದನ್ನು  ಹೆಚ್ಚಾಗಿ ತರಕಾರಿಯೆಂದೇ ಪರಿಗಣಿಸಲಾಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿದ್ದು ಟೊಮ್ಯಾಟೊ  ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ, ಬರೀ ಇಷ್ಟೇ ಅಲ್ಲ,  ಟೊಮ್ಯಾಟೊವು ಉತ್ತಮ ಆರೋಗ್ಯಕ್ಕೆ ಅವಶ್ಯಕವಾದ  ಹಲವು ಇತರೆ ವಿಟಮಿನ್‌ಗಳು, ಮೆಗ್ನೀಷಿಯಂ, ರಂಜಕ ಮತ್ತು ತಾಮ್ರದ ಅಂಶಗಳನ್ನು ಒದಗಿಸುತ್ತದೆ. ಟೊಮ್ಯಾಟೊವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಕಡಿಮೆ ಕ್ಯಾಲೊರಿಯ, ಕೊಬ್ಬು ಕರಿಗಸುವ ಅಂಶಗಳನ್ನು ಹೊಂದಿರುವ ತರಕಾರಿಯಾಗಿದೆ.  ಟೊಮ್ಯಾಟೊವನ್ನು ಹಸಿ, ಬೇಯಿಸಿ ಅಥವಾ ಸಲಾಡ್‌, ಸ್ಯಾಂಡ್‌ವಿಚ್‌ಗಳಲ್ಲಿ ಸಹ ಬಳಸ ಬಹುದು. ಈ ವಂಡರ್ ತರಕಾರಿ ಅಥವಾ ಹಣ್ಣಿನ ಕೆಲವು ಆರೋಗ್ಯಕರ  ಪ್ರಯೋಜನಗಳು ಇಲ್ಲಿವೆ.
ಟೊಮ್ಯಾಟೊಗಳು  ಅಧಿಕ ಕೊಲೆಸ್ಟರಾಲ್, ಪಾರ್ಶ್ವವಾಯು, ಮತ್ತು ಹೃದಯ ರೋಗದ ವಿರುದ್ಧ ರಕ್ಷಣೆ ನೀಡುತ್ತವೆ.
ಟೊಮ್ಯಾಟೊಗಳು ಕ್ಯಾನ್ಸರ್ ವಿರುದ್ಧ  ಹೋರಾಡುವ ನೈಸರ್ಗಿಕ ಗುಣವನ್ನು ಹೊಂದಿದೆ, ಇದರಲ್ಲಿರುವ ಲೈಕೊಪೀನ್ ಅಂಶವು ಹಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆಮಾಡುತ್ತದೆ. ಉದಾಹರಣೆಗೆ ಹೊಟ್ಟೆ, ಗಂಟಲು, ಬಾಯಿ, ಅಂಡಾಶಯದ ಯಾ ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್.
ಟೊಮ್ಯಾಟೊ‌ದಲ್ಲಿರುವ ಅಂಟ್ಯಿಅಕ್ಸಿಡೆಂಟ್‌ಗಳು ಜೀವಕೊಶಗಳಿಗೆ ಹಾನಿ ಮಾಡುವ ಫ್ರೀ-ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ಟೊಮ್ಯಾಟೊ‌ವು ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮೋತಲನದಲ್ಲಿಡುತ್ತದೆ. ಇದು ಕ್ರೊಮಿಯಂನ  ಒಂದು ಉತ್ತಮವಾದ ಮೂಲವಾಗಿರುವುದರಿಂದ  ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೊದಲ್ಲಿರುವ ಬಿ 1 ವಿಟಮಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಅದ್ದರಿಂದ ಸಕ್ಕರೆ ಖಾಯಿಲೆಯವರಿಗೆ ಇದರ ಜ್ಯೂಸ್ ಬಹು ಉಪಯೋಗಿ.
ಟೊಮ್ಯಾಟೊವು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ಚರ್ಮ ಸ್ನೇಹಿ ಟೊಮ್ಯಾಟೊವು  ಚರ್ಮವು  ಆರೋಗ್ಯಕರ  ಮತ್ತು ಸುಂದರವಾಗಿ ಕಾಣಲು  ಸಹಾಯ ಮಾಡುತ್ತದೆ ಹಾಗೂ  ಇದರಲ್ಲಿರುವ ಬೀಟಾಕೆರೊಟಿನ್  ಸೂರ್ಯ ಕಿರಣದಿಂದ ಉಂಟಾಗುವ ಹಾನಿಯಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ ಮತ್ತು ಚರ್ಮವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಲೈಕೊಪೀನ್ ಸಹ ಚರ್ಮಕ್ಕುಂಟಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ.  ಟೊಮ್ಯಾಟೊವು ಮೊಡವೆ ಮತ್ತು ಗುಳ್ಳೆಗಳಿಗೆ ಒಂದು ನೈಸರ್ಗಿಕ ಔಷಧಿ.
ಟೊಮ್ಯಾಟೋ   ಮೂಳೆಗಳನ್ನು ಬಲಿಷ್ಟಗೊಳಿಸುವ ಕೆಲಸವನ್ನು ಸಹ ಮಾಡುತ್ತದೆ. ಇದರಲ್ಲಿ ಲಭ್ಯವಿರುವ ಕ್ಯಾಲ್ಷಿಯಂ ಮತ್ತು ಕೆ ವಿಟಮಿನ್ ಎರಡೂ ಸಹ ಮೂಳೆಗಳನ್ನು ದೃಢಗೊಳಿಸಲು ಮತ್ತು ಸರಿಗೊಳಿಸವಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತವೆ,  ಲೈಕೊಪೀನ್ ಅಂಶ ಮೂಳೆ ಮಜ್ಜೆಯ ಅಭಿವೃದ್ಧಿ ಪಡಿಸುವ ಮೂಲಕ ಅಸ್ಥಿರಂಧ್ರತೆಯ ವಿರುದ್ಧ ಸಹ ಟೋಮ್ಯಾಟೊ ಬಹು ಉಪಯೋಗಿಯಾಗಿ ಕೆಲಸ ಮಾಡುತ್ತದೆ.
ತೂಕ ಕಡಿಮೆ ಮಾಡಲು ಟೊಮ್ಯಾಟೋ ಸೇವನೆ ಒಂದು ಉತ್ತಮ ಮತ್ತು ಸರಳ ವಿಧಾನ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಸಹ ಹೊರ ಹಾಕಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ..
ಇದರಲ್ಲಿರುವ ಬಿ 6ವಿಟಮಿನ್ ರಕ್ತ ನಾಳಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಗೊಳಿಸುತ್ತದೆ. ಇದರಲ್ಲಿನ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.
ಟೋಮ್ಯಾಟೊದಲ್ಲಿನ ನಾರಿನಂಶ ದೇಹದಲ್ಲಿನ ಕೊಲೆಸ್ಟ್ರಾಲ್‌ ಕಡಿತಗೊಳಿಸುತ್ತದೆ.
ಸಿ ಮತ್ತು ಎ ವಿಟಮಿನ್ ದೇಹದ ರೋಗ ನೀರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಟೊಮ್ಯಾಟೊ ಎ, ಸಿ, ಕೆ  ವಿಟಮಿನ್‌, ಫೋಲೇಟ್ ಮತ್ತು  ಪೊಟಾಷಿಯಂ ಹಾಗೂ ಹೇರಳವಾಗಿ ನೀರು ಮತ್ತು ನಾರಿನ ಅಂಶವನ್ನು ಒಳಗೊಂಡು ಸಮೃದ್ಧವಾಗಿದೆ. ಇದರಿಂದ ತಯಾರಿಸಿದ ಜ್ಯೂಸ್ ಕಡಿಮೆ ಕ್ಯಾಲರಿ, ಲವಣ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಸ್ಯಾಚ್ಯುರೇಟೆಡ್ ಕೊಬ್ಬು ಹೊಂದಿದ ಒಂದು ಆರೋಗ್ಯಕರ ಪೇಯ. ಇದು ದೇಹದ ಜೀವ ಕೋಶ ಮತ್ತು ಅಂಗಾಂಗಗಳನ್ನು ಹಾನಿಯಿಂದ ರಕ್ಷಿಸಿ ಮುಪ್ಪಿನ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಜೊತೆಗೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆ ಮತ್ತು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೂ  ಸಹ ಉತ್ತಮ  ಈ ಪೇಯ .


ಒತ್ತಡ ನಿವಾರಕ ಆಹಾರಗಳು

ಒತ್ತಡ ಎಂಬುದು ನಮ್ಮಲ್ಲಿ ಭಯದ ಭಾವನೆ ಹುಟ್ಟಿಸುವ ಅಥವಾ ಯಾವುದೊ ವಿಧದಲ್ಲಿ  ನಮ್ಮ ಸಮತೋಲನವನ್ನು ಬಿಗಾಡಿಸುವ ಒಂದು ಸಾಮಾನ್ಯ ಬೌತಿಕ ಪ್ರತಿಕ್ರಿಯೆ. ರಕ್ತದೊತ್ತಡದಲ್ಲಿ ಏರಿಕೆ, ತೀವ್ರಗತಿಯಲ್ಲಿ ಉಸಿರಾಟ, ಹೃದಯ ಬಡಿತ ಏರಿಕೆ, ಪಚನಕ್ರಿಯೆ ಕುಂಠಿತ, ರೋಗನಿರೋಧಕ ಶಕ್ತಿಯ  ಕುಸಿತ, ಸ್ನಾಯುಗಳು ಉದ್ವಿಗ್ನತೆ, ನೀದ್ರಾಹೀನತೆಗಳು ಒತ್ತಡದ ಪ್ರಮುಖ ಲಕ್ಷಣಗಳು.ಒತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ನಾವು ಸೇವಿಸುವ ಆಹಾರಗಳು ಸಹಕಾರಿಯಾಗುತ್ತವೆ. ಒತ್ತಡಕ್ಕೆ ಒಳಾಗದಾಗ  ಈ ಆಹಾರಗಳನ್ನು ತೆಗೆದು ಕೊಳ್ಳುವುದರಿಂದ ಅವುಗಳು ನಮ್ಮಲ್ಲಿ ಒತ್ತಡವನ್ನು  ಮುಕ್ತಗೊಳಿಸಿ, ಜೀವನೋತ್ಸಾಹವನ್ನು ತುಂಬುತ್ತವೆ.
ಕಿತ್ತಳೆ :-   ಒತ್ತಡವನ್ನು ಕಡಿಮೆ ಮಾಡವಲ್ಲಿ  ಮತ್ತು  ಒತ್ತಡದ ಪರಿಸ್ಥಿತಿಯ ನಂತರ  ರಕ್ತದೊತ್ತಡ ಮತ್ತು  ಕಾರ್ಟಿಸೋಲ್  ಸಾಧಾರಣ ಮಟ್ಟಕ್ಕೆ ಮರಳಲು ಸಿವಿಟಮಿನ್ ಸಹಾಯಕಾರಿಯಾಗಿದೆ  ಎಂದು ಸೈಕೊಫಾರ್ಮಕಾಲಜಿಯಲ್ಲಿನ ಒಂದು ಜರ್ಮನ್ ಅಧ್ಯಯನ ಮೂಲಕ ಕಂಡು ಬಂದಿದೆ.
ಗೆಣಸು :-  ಸಿಹಿ ಗೆಣಸುಗಳು ವಿಶೇಷವಾಗಿ ಒತ್ತಡವನ್ನು ಕಡಿಮೆ ಗೊಳಿಸುತ್ತವೆ. ಅವುಗಳು ನಾವು ಒತ್ತಡದಲ್ಲಿರುವಾಗ
 ಅಪಕ್ಷೇಸಿಸುವ ಅಥವಾ ಬಯಸುವ  ಕಾರ್ಬೋಹೈಡ್ರೆಟ್‌ಗಳು ಮತ್ತು ಸಿಹಿ ಅಂಶಗಳನ್ನು ಪೂರೈಸುತ್ತವೆ. ಅವುಗಳು ಸಂಪೂರ್ಣವಾಗಿ ಬಿಟಾ ಕೆರೋಟಿನ್ ಮತ್ತು ಇತರೆ ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಸಿಹಿ ಗೆಣಸಿನಲ್ಲಿರುವ ನಾರಿನಂಶ   ನಿಧಾನ ಮತ್ತು ಸ್ಥಿರವಾದ ರೀತಿಯಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಪ್ರಕ್ರಿಯೆಗೊಳಿಸಿಸಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ.
ಒಣ ಏಪ್ರಿಕಾಟ್ :-  ಒಣ ಏಪ್ರಿಕಾಟ್ ಹಣ್ಣುಗಳು ಮೆಗ್ನೀಷಿಯಂ ಭರಿತ ವಾಗಿರುತ್ತದೆ. ಅವು ಒತ್ತಡ ನಿವಾರಕ ಮತ್ತು ಸ್ವಾಭಾವಿಕ ಸ್ನಾಯುಗಳ ಬಿಗಿತವನ್ನು ಸಡಿಲ ಗೊಳಿಸುತ್ತದೆ ಕೂಡ.
ಪಿಸ್ತಾ ಬಾದಮಿ ಮತ್ತು ಆಕ್ರೋಟ್ :- ಬಾದಮಿ  ಇ  ಮತ್ತು ಬಿ  ವಿಟಮಿನ್ ಅನ್ನು ಹೇರಳವಾಗಿ ಒಳಗೊಂಡಿದೆ. ಇದು ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿಸ್ತಾ ಮತ್ತು ಆಕ್ರೋಟ್ (ವಾಲ್‌ನಟ್) ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು :- ಮೆಗ್ನೀಷಿಯಂನ ಕೊರತೆಯಿಂದ ಅರ್ಧ ತಲೆ ನೋವು ಮತ್ತು ಅಯಾಸ ಭಾವನೆ ಕಾಡುತ್ತದೆ. ಒಂದು ಕಪ್ ಪಾಲಕ್ ಸೊಪ್ಪು ನಮ್ಮ ದಿನದ ಅಗತ್ಯದ ಶೇಕಡಾ 40 ರಷ್ಟು ಮೆಗ್ನೀಷಿಯಂ ಅನ್ನು ಒದಗಿಸುತ್ತದೆ.
ಹಸಿರು ತರಕಾರಿಗಳು :- ಬ್ರೊಕಲಿ ಮುಂತಾದ ಇತರೆ ಕಡು  ಹಸಿರು ತರಕಾರಿಗಳು ವಿಟಮಿನ್‌ಗಳ ಆಗರಅವುಗಳು ಒತ್ತಡಕ್ಕೊಳಗಾದ ಸಮಯದಲ್ಲಿ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ತುಂಬುವಲ್ಲಿ ಸಹಾಯ ಮಾಡುತ್ತದೆ.
ಬೆಣ್ಣೆ ಹಣ್ಣುಗಳು :- ಬೆಣ್ಣೆ ಹಣ್ಣಿನಲ್ಲಿ ಲಭ್ಯವಿರುವ ಮಾನೋಸ್ಯಾಚ್ಯುರೇಟೆಡ್ ಕೊಬ್ಬುಗಳು ಮತ್ತು ಪೋಟ್ಯಾಷಿಯಂ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಸಾಕಷ್ಟು ಪೋಟ್ಯಾಷಿಯಂ ಸೇವನೆ ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಧಾನಗಳಲ್ಲಿ ಒಂದು ಎಂದು ನ್ಯಾಷನಲ್ ಹಾರ್ಟ್, ಲಂಗ್, ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ಹೇಳುತ್ತದೆ. ಬೆಣ್ಣೆಹಣ್ಣಗಳು ಬಾಳೆಹಣ್ಣಿಗಿಂತ ಹೆಚ್ಚು ಪೋಟ್ಯಾಷಿಯಂ ಅಂಶವನ್ನು ಹೊಂದಿರುತ್ತದೆ.
ಮೀನು :-  ಓಮೆಗಾ-3 ಫ್ಯಾಟಿ ಆಸಿಡ್  ಯೇಥೇಚವಾಗಿರುವ ಆಹಾರಗಳು ಹೃದಯ ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಓಮೆಗಾ-3 ಯು ಒತ್ತಡಕ್ಕೆ ಕಾರಣವಾಗುವ  ಹಾರ್ಮೋನ್‌ಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಮದುಮೇಹ ಮತ್ತು ಮೇಟಾಬಾಲಿಸಿಂನ (ಚಯಪಯಚಯ)  ಒಂದು ಅಧ್ಯಯನಯಿಂದ ಬೆಳಕಿಗೆ ಬಂದಿದೆ.
ಟರ್ಕಿ ಕೋಳಿ :- ಟರ್ಕಿ ಕೋಳಿಯ ಮಾಂಸವು ಎಲ್-ಟ್ರೈಪ್ಟೊಪಾನ್ ಎಂಬ ಒಂದು ಅಮಿನೋ ಅಮ್ಲವನ್ನು ಹೊಂದಿರುತ್ತದೆ. ಈ ಅಮಿನೋ ಅಮ್ಲವು ಸಿರೊಟೋನಿನ್‌ನ ಬಿಡುಗಡೆಗೆ ಪ್ರಚೋದಿಸುತ್ತದೆ. ಇದು ಹಿತಾನುಭವನ್ನುಂಟು ಮಾಡುವ ಮೆದಳಿನ ಒಂದು ರಾಸಾಯಿನಿಕವಾಗಿದೆ. ಈ ಕಾರಣದಿಂದ ಹಲವು ಜನ ಟರ್ಕಿ ಕೋಳಿಯ ಮಾಂಸ ಸೇವಿಸದ ನಂತರ ಶಾಂತ ಚಿತ್ತರಾಗಿ ಅಥವಾ ಆಯಾಸದಾಯಕರಾಗಿ ಸಹ ಕಾಣುತ್ತಾರೆ. ಎಲ್-ಟ್ರೈಪ್ಟೊಫಾನ್ ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ.
ಒತ್ತಡವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ವ್ಯಾಯಮ ಮಾಡಿ. ಬೆಳಗ್ಗಿನ ಉಪಹಾರಕ್ಕೆ ಯಾವುದಾದರೂ ಒಂದು ಶಕ್ತಿವರ್ಧಕ ಪೇಯ ಸೇವಿಸಿರಿ.  ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ ಮಾನಸಿಕ, ದೈಹಿಕ ಮತ್ತು ಭಾವನತ್ಮಕ ಶಕ್ತಿ ಕಡಿಮೆಯಾಗಿ ಒತ್ತಡ ಹೆಚ್ಚುವುದು, ಆದ್ದರಿಂದ ಸ್ಥಿರವಾಗಿರಲು ದಿನವಿಡಿ ಪದೇ ಪದೇ ಸಣ್ಣ ಸಣ್ಣ ಪ್ರಮಾಣದ ಆಹಾರ ಸೇವಿಸಿರಿ.




ಲವ್ ಬರ್ಡ್ಸ್‌‌ನ ಲವ್ಲಿ ಆರೈಕೆಗೆ ಟಿಪ್ಸ್.

ಲವ್ ಬರ್ಡ್ಸ್‌ ಗಳು ಬೃಹದ್ಗಾತ್ರ ವ್ಯಕ್ತಿತ್ವದ ಚಿಕ್ಕ ಪ್ರತಿರೂಪದ ಗಿಳಿಗಳು. ಇವುಗಳು ತುಂಬಾ ಸಾಮಾಜಿಕ ಹಾಗೂ  ಪ್ರೀತಿಯ  ಪುಟ್ಟ ಗಿಳಿಗಳು. ಲವ್‌ಬರ್ಡ್ಸ್‌ ಗಳು ಅತಿ ಚಿಕ್ಕ ಗಿಳಿಗಳಲ್ಲಿ ಒಂದು. ವೈವಿಧ್ಯಮಯ ಬಣ್ಣಗಳಲ್ಲಿ ಇವುಗಳು ಕಾಣ ಸಿಗುತ್ತವೆ, ಆದರೂ ಹೆಚ್ಚಾಗಿ ನೀಲಿ, ಹಸಿರು  ಅಥವಾ ಹಳದಿ ಬಣ್ಣಗಳು ಸಾಮಾನ್ಯ. ಇವುಗಳು ಸುಮಾರು ೧೫ ವರ್ಷಗಳ ಕಾಲ ಜೀವಿಸುತ್ತವೆ. ಒಟ್ಟು ಒಂಬ್ಬತ್ತು ಜಾತಿಯ ಲವ್‌ಬರ್ಡ್ಸ್‌ ಗಳಿವೆ, ಅವುಗಳಲ್ಲಿ ಎಂಟು ಆಫ್ರಿಕಾ ಮೂಲದವು ಮತ್ತು ಉಳಿದವು ಮಡಗಾಸ್ಕರ್‌ ಮೂಲದ್ದಾಗಿದೆ.

 ಆಹಾರ ; ಲವ್ ಬರ್ಡ್ಸ್‌ ಗಳು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತವೆ. ಹಣ್ಣು, ತರಕಾರಿ, ಬೀಜಗಳು ಮತ್ತು ಧವಸಗಳನ್ನು ಅವುಗಳ ಆಹಾರದಲ್ಲಿ  ಸೇರಿಸಬಹುದು. ತಾಜ ತರಕಾರಿ ಮತ್ತು  ಹಣ್ಣುಗಳು ಲವ್‌ ಬರ್ಡ್ಸ್‌ ಗಳು ಆರೋಗ್ಯಕರವಾಗಿರಲು ಅವಶ್ಯಕ. ಉದಾಹರಣೆಗೆ ಕ್ಯಾರೆಟ್, ಮಾವಿನಹಣ್ಣು, ಪಪ್ಪಾಯಿದ್ರಾಕ್ಷಿ, ಪಾಲಕ್, ಕೊತ್ತಂಬ್ಬರಿ , ಮೆಂತ್ಯೆ ಸೊಪ್ಪು.   ಕೆಟ್ಟ ಅಥವಾ ಬ್ಯಾಕ್ಟೀರಿಯಯುಕ್ತ  ಆಹಾರದಿಂದ ಹಕ್ಕಿಗಳ ಅನಾರೋಗ್ಯ ಅಥವಾ ಸಾವಿಗೆ ಕಾರಣವಾಗಬಹುದು. ಮಾರಣಾಂತಿಕ ಆಹಾರಗಳಾದ ಚಾಕೊಲೇಟ್, ಅಲ್ಕೋಹಾಲ್, ಬೆಣ್ಣೆ ಹಣ್ಣು,  ಉಪ್ಪು ಅಥವಾ ಸಕ್ಕರೆಯುಕ್ತ ಆಹಾರಗಳನ್ನು ನೀಡಬಾರದು. ಇವುಗಳಿಗೆನೀರು ಅವಶ್ಯಕ.

ಪಂಜರ ; ಲವ್‌ಬರ್ಡ್ಸ್‌ ಗಳು ಹೆಚ್ಚು ಸ್ಥಳಾವಕಾಶವನ್ನು ಇಷ್ಟಪಡುವುದರಿಂದ, ಪಂಜರ ವಿಶಾಲವಾಗಿದಷ್ಟು ಅವುಗಳು ಸಂತೋಷವಾಗಿರುತ್ತವೆ. ಪಂಜರದ ಸರಳುಗಳ ನಡುವೆಯ ಸರಿಯಿಲ್ಲದ ಅಂತರವು ಅವುಗಳಿಗೆ ಹಾನಿಯುಂಟು ಮಾಡುತ್ತದೆ.  ಲವ್‌ ಬರ್ಡ್ಸ್‌ ಗಳಿಗೆ ಹತ್ತಲು, ಹಾರಲು  ಮತ್ತು ಆಡಲು   ವಿಶಾಲವಾದ ಪಂಜರ  ಅವಶ್ಯಕ, ಇದು ಅವುಗಳಿಗೆ  ಚೆಂಡು, ಘಂಟೆ, ಗೆಜ್ಜೆ, ಜೋಕಾಲಿ, ಕನ್ನಡಿಏಣಿಗಳಂತಹ  ಮುಂತಾದ  ಆಟ ಸಾಮಾನುಗಳಿಗೆ  ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಪಂಜರಗಳನ್ನು ಆದಷ್ಟೂ ಮನುಷ್ಯರ ಚಟುವಟಿಕೆಗಳು ನೆಡೆಯುವ  ಸ್ಥಳದಲ್ಲಿಡ ಬೇಕು. ಪಂಜರಗಳು ಆಡುಗೆ ಮನೆ ಅಥವಾ ನೇರವಾದ ಸೂರ್ಯನ ಬೆಳಕಿನಲ್ಲಿಡಬೇಡಿ. ಲವ್‌ ಬರ್ಡ್ಸ್‌ ಗಳನ್ನು ಬೇರೆ ಜಾತಿಯ ಪಕ್ಷಿಗಳೊಂದಿಗೆ ಒಂದೇ ಪಂಜರದಲ್ಲಿ ಇರಿಸಬೇಡಿ.
ಸ್ವಚ್ಛತೆ ; ಲವ್ ಬರ್ಡ್ಸ್‌ ಗಳ ಆರೋಗ್ಯಕ್ಕೆ  ಶುಚಿಯಾದ ಪಂಜರ ಮುಖ್ಯ. ಆದ್ದರಿಂದ ಪಂಜರವನ್ನು ಕನಿಷ್ಟ  ವಾರಕ್ಕೊಮ್ಮೆಯಾದರೂ ಸಂಪೂರ್ಣವಾಗಿ  ಸ್ವಚ್ಛಗೊಳಿಸಬೇಕು. ಆಹಾರ ಮತ್ತು ನೀರಿನ ಪಾತ್ರೆಯನ್ನು ನಿತ್ಯ ಶುಚಿಗೊಳಿಸಬೇಕು.  

ಸುರಕ್ಷತೆ ;  ನಾಯಿ, ಬೆಕ್ಕು ಹಾವುಗಳ ಕಾಟದಿಂದ ಪಂಜರವನ್ನು ಮುಕ್ತವಾಗಿರಿಸಿ. ಪಂಜರವನ್ನು ಅದಷ್ಟೂ ಮಕ್ಕಳಿಂದ ದೂರವಿಡಿ, ಸ್ಪಲ್ಪ ಎತ್ತರ ಸ್ಥಳದಲ್ಲಿಡುವುದು ಉತ್ತಮ. ಪಂಜರದ ಚಿಲಕಗಳು ಭದ್ರವಾಗಿರಲಿ. ಪಂಜರಗಳನ್ನು ಇರುವೆ, ಜೀರಲೆ ಮುಂತಾದ ಕೀಟಗಳಿಂದ ರಕ್ಷಿಸಿ.

ಲಿವಿಂಗ್‌ ರೂಮ್‌


ನಿಮ್ಮ ಕುಟುಂಬದ ಜೊತೆ ಅಥವಾ ಅತಿಥಿಗಳೊಂದಿಗೆ ಸಮಯ ಕಳೆಯಲು ಮನೆಯಲ್ಲಿ ಲಿವಿಂಗ್ ರೂಮ್ ಅಥವಾ ಫ್ಯಾಮಿಲಿ ರೂಮ್‌ಗಿಂತ ಸೂಕ್ತವಾದ ಸ್ಥಳ ಬೇರೊಂದಿಲ್ಲ. ಹೆಸರಿಗೆ ತಕ್ಕ ಹಾಗೆ ಮನೆಯವರು ಮತ್ತು ಸ್ನೇಹಿತರು ಕ್ವಾಲಿಟಿ ಟೈಮ್ ಕಳೆಯಲು ಇದು ಮನೆಯಲ್ಲಿನ ಉತ್ತಮ ಜಾಗ. ಟಿವಿ ನೋಡುವುದು, ಪುಸ್ತಕ ಓದುವುದು ಮತ್ತು ಮಕ್ಕಳು ಈ ಸ್ಥಳವನ್ನು ಹೋವರ್ಕ್ ಮಾಡಲು ಸಹ ಉಪಯೋಗಿಸ ಬಹುದು. ಮನೆಯ ಕೇಂದ್ರ ಬಿಂದುವಾಗಿ  ಲಿವಿಂಗ್ ರೂಮ್ ಎಂದರೆ ಆರಾಮದಾಯಕ ಸ್ಥಳಕ್ಕೆ ಇನ್ನೊಂದು ಹೆಸರು. ದೊಡ್ಡ ಸ್ಕ್ರೀನ್ ಟಿವಿ, ಪ್ರಾಯೋಗಿಕ ಪೀಠೋಪಕರಣಗಳು, ತುಂಬಿದ ಬುಕ್ ಶೆಲ್ಪ್‌ಯ ಜೊತೆಗೆ ಮೂಲೆಯಲ್ಲಿ ಅಗ್ಗಿಸ್ಟಿಕೆ ಲಿವಿಂಗ್‌ ರೂಮ್‌ಗೆ ಮೆರಗು ನೀಡುವುದರ ಜೊತೆಗೆ ಪರ್ಫೆಕ್ಟ್ ಎನ್ನುವಂತೆ ಮಾಡುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕೂಡಿ ಸಂತೋಷದ ಸಮಯ ಕಳೆಯಲು  ಮನೆಯಲ್ಲಿ ಲಿವಿಂಗ್ ರೂಮ್‌‌ ಉತ್ತಮ ಆಯ್ಕೆ .

 ನವೀಕರಣ ಅಥವಾ ಮರುವಿನ್ಯಾಸ ವೇಳೆಯಲ್ಲಿ, ನಿಮ್ಮ ಕುಟುಂಬದ ಅಗತ್ಯತೆಗಳನ್ನು ಮನಸ್ಸಿನಲ್ಲಿ  ಇರಿಸಿಕೊಳ್ಳವುದು   ಮುಖ್ಯ. ನೀವು ಕ್ರೀಡಾ ಪ್ರಿಯರಾಗಿದ್ದಲ್ಲಿ ಆಟಕ್ಕಾಗಿ ಒಂದು ದೊಡ್ದ ಟೇಬಲ್ ಇಡುವುದನ್ನು  ಖಚಿತ ಪಡಿಸಿಕೊಳ್ಳಿ. ನಿಮ್ಮ ಮಕ್ಕಳು ವೀಡಿಯೋ ಗೇಮ್ ಇಷ್ಟಪಡುವರಾಗಿದ್ದರೆ, ಬೇಕಾದಷ್ಟು ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ, ಓದುವ ಅಭಿರುಚಿವುಳ್ಳವರಿಗೆ ಡೆಸ್ಕ್, ಬುಕ್ ಶೆಲ್ಫ್‌ಗಳು ನಿಮ್ಮ ಲಿವಿಂಗ್‌ ರೂಮ್‌ನಲ್ಲಿಡಿ. ಅಗ್ಗಿಷ್ಟಿಕೆ ಸಹ ಲಿವಿಂಗ್ ರೂಮ್‌ನ ಒಂದು ಭಾಗ. ಆದರೆ ಅದು ನಿಮ್ಮ ಫ್ಯಾಮಿಲಿ ರೂಮ್‌ನ ಮೂಲೆಯನ್ನು ಆಕ್ರಮಿಸುವ ಮುನ್ನ ನಿಮ್ಮ ಪ್ರದೇಶದ ಹವಾಮಾನವನ್ನು ಗಮನದಲ್ಲಿಟ್ಟು ಕೊಳ್ಳಿ. ನೀವು ಉಷ್ಣವಲಯದ ವಾಸಿಗಳಾಗಿದರೆ ಫೈರ್ ಪ್ಲೇಸ್ ನಿಮ್ಮ ಲಿವಿಂಗ್ ರೂಮ್‌ಗೆ ಅಗತ್ಯವಿಲ್ಲ. ನಿಮ್ಮ ಅಗತ್ಯ ಮತ್ತು ಬಂಡವಾಳದ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಳ್ಳಿ. ಅದಷ್ಟೂ ಕಡಿಮೆ ಸ್ಥಳ ತೆಗೆದುಕೊಳ್ಳುವ ಡೆಸ್ಕ್, ಬುಕ್ ಸ್ಟ್ಯಾಂಡ್, ಟೇಬಲ್ಶೆಲ್ಫ್‌ಗಳಿಗೆ ಆದ್ಯತೆ ನೀಡಿ.   ಈ ಎಲ್ಲಾ ಮುಖ್ಯ ಅಂಶಗಳ ನಂತರ ನಿಮ್ಮ ಲಿವಿಂಗ್ ರೂಮ್‌ಗೆ ಹೊಂದುವಂತ ಸೂಕ್ತ ಬಣ್ಣಗಳ ಆಯ್ಕೆಯತ್ತ ಗಮನ ಹರಿಸಿ.
ಲಿವಿಂಗ್ ರೂಮ್ ಮತ್ತು ಅಗ್ಗಿಷ್ಟಿಕೆ
ನಿಮ್ಮ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ, ನಿಮ್ಮ ಲಿವಿಂಗ್ ರೂಮ್‌‌ನ್ನು  ಬೆಚ್ಚಗಿಡಲು ಮತ್ತು ಸೊಬಗು ಹೆಚ್ಚಿಸಲು ಒಂದು ಅಗ್ಗಿಸ್ಟಿಕೆಯ ಆಳವಡಿಕೆ  ಉತ್ತಮ  ದಾರಿ.  ನಿಮ್ಮ ಸ್ಥಳ ವರ್ಷವೀಡಿ ಬೆಚ್ಚಗಿದರೂ ಸಹ ನೀವು ಅಲಂಕಾರಿಕಕ್ಕಾಗಿ ಸಹ ಅಗ್ಗಿಸ್ಟಿಕೆಯನ್ನು ಇಡಬಹುದು. ಅವುಗಳಲ್ಲಿ ಹಲವು ಆಯ್ಕೆಗಳು ಲಭ್ಯ, ನಿಮ್ಮ ಆಸಕ್ತಿಗೆ ಸರಿಯಾಗಿ ಆಯ್ಕೆ ಮಾಡಿ ಕೊಳ್ಳಿ. ಸೌದೆ ಬಳಸುವ ಅಗ್ಗಿಸ್ಟಿಕೆ ಅಥೆಂಟಿಕ್ ಅನುಭವವನ್ನು ನೀಡಿದರೆ, ಗ್ಯಾಸ್‌ನ ಅಗ್ಗಿಸ್ಟಿಕೆ ಯಾವುದೇ ರಾಡಿಯಿಲ್ಲದೆ ಶಾಖ ನೀಡುತ್ತದೆ. ಎರಡು ಬದಿಯ ಅಥವಾ ಮೂಲೆಯ ಫೈರ್ ಪ್ಲೇಸ್ ಸಾಧಾರಣ ಅಗ್ಗಿಸ್ಟಿಕೆಗಿಂತ ವಿಭಿನ್ನವಾಗಿ ಶೋಭೆ ನೀಡುತ್ತದೆ.  ನಿಮ್ಮ ಲಿವಿಂಗ್ ರೂಮ್‌ಗೆ ಕಲೆಯ ಟಚ್ ನೀಡುವ ಆಸಕ್ತಿ ಹೊಂದಿದಲ್ಲಿ  ಮರದ ಸ್ಟೌವ್ ಫೈರ್‌ಪ್ಲೇಸ್‌‌ ಉತ್ತಮ.  ನೀವು ಸಮಕಾಲೀನ ಸ್ಪರ್ಶ ಇರುವ ಅಗ್ಗಿಸ್ಟಿಕೆಗಾಗಿ ನೋಡುತ್ತೀರುವಿರಾದರೆ ಸಾಂಪ್ರದಾಯಿಕ ಮರ ಅಥವಾ ಹೆಂಚಿನ  ಅಗ್ಗಿಸ್ಟಿಕೆಯನ್ನು ಬಿಟ್ಟು ಕಲ್ಲು, ಕಾಂಕ್ರೀಟ್ ಅಥವಾ ಲೋಹದ ಫೈರ್ ಪ್ಲೇಸ್‌ ನಿಮ್ಮ ಆಯ್ಕೆಯಾಗಿರಲಿ.
ಲಿವಿಂಗ್ ರೂಮ್ ಮತ್ತು ಬಿಲ್ಟ್ ಇನ್ ಪೀಠೊಪಕರಣಗಳು
ಬಿಲ್ಟ್-ಇನ್ ಬುಕ್ ಕೇಸ್, ಕ್ಯಾಬಿನೆಟ್ಶೆ ಲ್ಪ್‌ಗಳು ರೂಮ್‌ನ ಸ್ಥಳ ಉಳಿತಾಯದಲ್ಲಿ ಸಹಾಯ ಮಾಡುವುದಲ್ಲದೆ ಅಂದವನ್ನು ಹೆಚ್ಚಿಸುತ್ತದೆ.  ಪಿಠೋಪಕರಣಗಳ  ಪ್ರಾಯೋಗಿಕ ಜೋಡಣೆ ನಿಮ್ಮ ಲಿವಿಂಗ್ ರೂಮ್‌ನ್ನು ಸಂಘಟಿತವಾಗಿಸುತ್ತದೆ.  ಸ್ಪೀಕರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಲ್ಟ್ ಇನ್ ಕ್ಯಾಬಿನೆಟ್‌ಗಳಲ್ಲಿ ಜೋಡಿಸುವುದು ಉತ್ತಮ. ಇನ್ನೂ ಸ್ಥಳವಕಾಶವಿದ್ದರೆ ನೀವು ಸ್ಟಡಿ ಅಥವಾ ಪ್ರೊಜೆಕ್ಟ್ ಟೇಬಲ್‌ಗಳನ್ನು ಸೇರಿಸ ಬಹುದು.
ಲಿವಿಂಗ್‌ರೂಮ್ ಮತ್ತು ಅಲಂಕಾರ
ಫ್ಯಾಮಿಲಿ ರೂಮ್‌ನ ಅಲಂಕಾರಕ್ಕೆ ಯಾವಾಗಲೂ ತಟಸ್ಥ ಬಣ್ಣಗಳನ್ನು ಆಯ್ದು ಕೊಳ್ಳಿ, ಏಕೆಂದರೆ ಅವು ಸುಂದರವಾಗಿ ಕಾಣುವುದರ ಜೊತೆಗೆ ಯಾವಾಗಲೂ ಔಟ್ ಡೆಟ್ ಅನ್ನಿಸಿಕೊಳ್ಳುವುದ್ದಿಲ್ಲ. ನೀವು ಗಾಡ ಬಣ್ಣಗಳನ್ನು ಪ್ರಯತ್ನಿಸಲು ಬಯಸಿದರೆ, ಕೋಣೆಯ ಗೋಡೆ ಮತ್ತು ಇತರೆ ಸಾಮಗ್ರಿಗಳ ಬಣ್ಣಗಳಿಗೆ ಹೊಂದುವಂತೆ  ನೋಡಿಕೊಳ್ಳಿ. ಪ್ರತಿ ಬಾರಿಯೂ ಟ್ರೆಂಡ್ ಬದಲಾದಂತೆ ಸೋಫಾವನ್ನು ಬದಲಿಸುವುದು ಕಷ್ಟ ಬದಲಿಗೆ ಗೋಡೆಯ  ಬಣ್ಣವನ್ನು ಬದಲಿಸುವುದು ಸುಲಭವಾಗುತ್ತದೆ. ಜನಪ್ರಿಯ ಬಣ್ಣಗಳಾದ ನೀಲಿ, ಹಸಿರು ಅಥವಾ ಬೂದು ಬಣ್ಣಗಳ ಸೋಫಾಗಳನ್ನು ಪ್ರಯತ್ನಿಸಬಹುದು. ಗೋಡೆ ಹಳೆಯದಾಗಿದ್ದರೂ ಸಹ  ಪ್ರಕಾಶಮಾನವಾದ ಹಳದಿ ಅಥವಾ ಕೆಂಪು ಬಣ್ಣದ ಸೋಫಾಗಳು ಅಂದವನ್ನು ಹೆಚ್ಚಿಸುತ್ತವೆ. ಕೊನೆಯದಾಗಿ ಆದರೆ ಅತಿ ಮುಖ್ಯವಾದದ್ದು, ನಿಮ್ಮ ಲಿವಿಂಗ್ ರೂಮ್‌ನಲ್ಲಿ ಸಾಕಷ್ಟು ಬೆಳಕಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಹೆಚ್ಚುವರಿ ಕಿಟಕಿಗಳು ಬೆಳಕಿನ ಕೊರತೆಯನ್ನು ಪೂರೈಸುವಲ್ಲಿ ಸಹಾಯ ಮಾಡುತ್ತವೆ.


February 14, 2014

ನಿನ್ನವಳಲ್ಲದ ನಿನ್ನವಳು

ಹೊರಗೆ ಸೂರ್ಯನ ತಾಪ ಹೆಚ್ಚಾದಂತೆನನ್ನಳೊಗೆ ನಿನ್ನ ನೆನಪು ಹೆಚ್ಚು ಹೆಚ್ಚು ಸುಡಲಾರಂಭವಾಗುತ್ತದೆ.  ಇಂತಹ ಮಟ ಮಟ ಮಧ್ಯಾಹ್ನದಲ್ಲಿ  ನನ್ನ ಜೀವಕ್ಕೆ ತಂಗಾಳಿಯಾಗ ಬೇಕಾಗಿದ್ದ  ನಿನ್ನ ನೆನಪುಗಳು  ಹೊರಬರಲಾರದೇ ಒಳಗೇ ಉರಿಯುತ್ತದೆ. ಅದೇಷ್ಟು ವರ್ಷಗಳಿಂದ ಇಂಚು ಇಂಚಾಗಿ ಸುಡುತ್ತಿವೆ. ಇಷ್ಟು ವರ್ಷಗಳಿಂದ ನನ್ನ  ಮನಸ್ಸಿಲ್ಲೇ ಇಟ್ಟುಕೊಂಡು ಅನುಭವಿಸಿದ ವೇದನೆಯನ್ನೇಲ್ಲಾ ಇಂದು  ಹೊರ ಹಾಕಲೇಬೇಕೆಂದು ನಿರ್ಧರಿಸೇ ನಿನಗೆ ಬರೆಯಲು ಪೆನ್ನು ಕೈಗೆತ್ತು ಕೊಂಡಿದ್ದೇನೆ.ನಾನು ಬಹಳ ಹಿಂದೆ ಮಾಡಬೇಕಾಗಿದ್ದ ಕೆಲಸವಿದು.

ನನಗೆ ಇನ್ನೂ ಚೆನ್ನಾಗಿ ನೆನಪಿದೆ ಆ ದಿನ.  ಹಿಸ್ಟರಿ ಎಕ್ಸಾಮ್.  ಬೆಲ್ ಆಗುವ ಐದು ನಿಮಿಷಗಳ ಮುಂಚೆ ಅದೇ ಕೊನೆಯಿಂದ ಎರಡನೆಯ ಬೆಂಚಿನಲ್ಲಿ ಕೂರುತ್ತಿದ್ದನಲ್ಲಾ ಜೋಕರ್ (ಅವನ ಹೆಸರು ಈಗ ನೆನಪಿಲ್ಲ). ಅವನು ನಿನ್ನ ಹೆಸರು ಹೇಳಿ ಸಣ್ಣ ಹೂಗಳ ತಿಳಿ ಹಳದಿ ಬಣ್ಣದ ಒಂದು  ಕವರ್ ನನ್ನ ಕೈಯಲ್ಲಿ ಇಟ್ಟಾಗಅದರಲ್ಲಿ ಏನು ಬರೆದಿರಬಹುದೆಂದು ಊಹಿಸದಿರುವಷ್ಟು ಪೆದ್ದಿ ಏನು ನಾನಗಿರಲಿಲ್ಲ. ಅವತ್ತು ಎಕ್ಸಾಮ್ ಹಾಲ್‌ನಲ್ಲಿ ಕಳೆದ  ಆ ಮೂರು ಘಂಟೆಗಳು ಮುಳ್ಳು ಮೇಲೆ ಕೂತ ಅನುಭವ ನನಗೆ. ನೀನೇನಾದರೂ ಎದುರಿಗೆ ಸಿಕ್ಕಿದ್ದರೆ ಸಿಗಿದು ಹಾಕುವಷ್ಟು ಕೋಪ ಬಂದಿತ್ತು . ನಿನಗೆ ಬೇರೆಯಾರು ಸಿಗಲಿಲ್ಲ್ವಾ?  ಲೆಟರ್ ಕಳುಹಿಸಲು.  ಆ ನಿನ್ನ ಪೋಸ್ಟ್‌ಮ್ಯಾನ್  ನೀನು ಬರೆದ ಆ ಪತ್ರದ ಪ್ರತಿಯೊಂದು ಸಾಲನ್ನು  ಬಿಡದೆ ಬಾಯಿ ಪಾಠ ಮಾಡಿ ಇಡೀ ಕಾಲೇಜಿಗೆ ಊದಿದ್ದ, ಸಧ್ಯ ನಮ್ಮ ಹಾಸ್ಟೇಲ್ ವಾರ್ಡನ್ ಕಿವಿ ತನಕ ಹೋಗದಿದ್ದು ನನ್ನ ಪುಣ್ಯ.  ಇನ್ನೂ ನಿನಗೆ ಹುಡುಗಿಗೆ ಪ್ರೋಪಸ್ ಮಾಡುವಾಗ  ಒಂದು ಸುಂದರವಾದ ಕಾರ್ಡ್ ಜೊತೆಗೆ ದೊಡ್ಡ ಚಾಕೊಲೇಟ್ ಕೊಡಬೇಕು ಅನ್ನೊ ಬೆಸಿಕ್ ಸೆನ್ಸ್ ಇರಲಿಲ್ವಾ?!  ನನ್ನ ಫ್ರೆಂಡ್ಸ್ ಮುಂದೆ ಎಷ್ಟು ಅವಮಾನ ಎದುರಿಸ ಬೇಕಾಯಿತ್ತು ಗೊತ್ತಾ?  ಅವರ ಸಂಗ್ರಹದಲ್ಲಾಗಲ್ಲೇ  ಆ ರೀತಿ ಸಿಕ್ಕಿದ್ದ ಎರಡು ಮೂರು ಕಾರ್ಡ್, ಚಾಕೊಲೇಟ್ ಕವರ್‌ಗಳು ಇತ್ತು. ಇನ್ನೂ ಹುಡುಗಿಯರ ವಿಷಯದಲ್ಲಿ ನಿನ್ನಂತ ಶತ ದಡ್ಡ ಎಲ್ಲಿ ಹುಡುಕಿದರು ಸಿಗೊಲ್ಲ.  ಹುಡುಗಿಗೆ ಲವ್ ಲೆಟರ್ ಕೊಡಕ್ಕೆ ಮುಂಚೆ ಹುಡುಗಿಯರ ಕಾಮನ್ ಸೈಕಾಲಜಿನೂ ಸ್ಪಲ ತಿಳಿದು ಕೊಂಡಿರಬೇಕು ಕಣೋ. ಯಾವುದಾದರೂ ಹುಡುಗಿ  ಮೊದಲ ಬಾರಿಗೆ ಹುಡುಗನನ್ನು ಒಪ್ಪಿಕೊಂಡಿದ್ದು ಎಲ್ಲಾದರೂ ಕೇಳಿದ್ದಿಯಾ?   “ಇಲ್ಲ ನಾನು ನಿನ್ನ ಯಾವತ್ತು ಆ ಭಾವನೆಯಿಂದ ನೋಡಿಲ್ಲ, ನಾವು ಬರಿ ಫ್ರೆಂಡ್ಸ್ ಆಗಿರೋಣ ಅಂತ ನಾನು ಹೇಳಿದರೆ ನೀನು ಸುಮ್ಮನೆ ಆಗಿಬಿಡೋದಾ! ಹಿಂದೆ ಮುಂದೆ ಎರಡು ರೌಂಡ್ಸ್ ಹಾಕಿ, ಸ್ವಲ್ಪ ಸ್ಟೈಲ್, ಸ್ಮೈಲ್ ಮಾಡಿ ಮಾತಾಡಿಸೋ ಪ್ರಯತ್ನನೇ ಮಾಡಿಲ್ಲ ನೀನು. ನನ್ನ ಮುಂದೆ ಬೇರೆ ಹುಡುಗಿಯರ ಜೊತೆಯಾದರೂ ನಗುತ್ತಾ ಮಾತಾಡಿ ನಾನು ಹೊಟ್ಟೆ ಉರಿಸಿಕೊಳ್ಳೊ ಅವಕಾಶನೂ ನನಗೆ ಕೊಡದೆ ಹೇಳದೆ ಕೇಳದೆ ನಾಪತ್ತೆ ಆಗಿಬಿಟ್ಟೆ.

ನೀನು ಏನೋ ಯುವರ್ ಸ್ಪೇಷಲ್ ಟು ಮಿ ಅನ್ನೊ ಒಕ್ಕಣೆಯಿಂದ ಶುರುಮಾಡಿ ಲವ್ ಯು ವೆರಿ ಮಚ್ ಅಂತ ಪತ್ರ ಬರೆದು ತಣ್ಣಗಾದೆ. ಆಮೇಲೆ ನನ್ನ ಕಥೆ ಕೇಳು. ನೀನಿಲ್ಲದ ಲಾಸ್ಟ್ ಬೆಂಚಿನಿಂದ ನನಗೆ ಇಡೀ ಕ್ಲಾಸೇ ಖಾಲಿಯಾದ ಅನುಭವ.  ಸಂಜೆಯಾಗುತ್ತಿದ್ದಂತೆ ನಮ್ಮ ಹಾಸ್ಟೇಲ್ ಮುಂದೆ ಪೂರ್ತಿ ಬಾಯ್ಸ್ ಹಾಸ್ಟೇಲಿನ ಹುಡುಗರ ಆಕಡೆಯಿಂದ ಈಕಡೆಗೆ ಪಥಸಂಚಲನದಲ್ಲೂ ನೀನು ಪತ್ತೆ ಇಲ್ಲ. ಕ್ಯಾಟೀನು, ಲೈಬ್ರರಿ, ಕಾರಿಡರ್ ಎಲ್ಲೂ ನಿನ್ನ ಸುಳಿವು ಸಿಗದೆ ಒಳಗೊಳಗೆ ಒದ್ದಾಡಿದೆ.   ಶನಿವಾರವಾದರೂ ನಿನ್ನ ದರ್ಶನವಾಗಬಹುದು ಎಂಬ ಆಸೆಯಿಂದ  ಹಾಸ್ಟೇಲಿನಿಂದ ಎರಡು ಮೈಲಿ ದೂರದ ಟೌನ್‌ಗೆ ನೆಡೆದೆ ಹೋಗುತ್ತಿದೆ.  ಇನ್ನೂ ಟೌನಿನ ಐಸ್ ಕ್ರಿಮ್ ಪಾರ್ಲರ್‌ಗಳಲ್ಲಿ ಜೋಡಿಗಳಿಗೆಂದೆ ಮೀಸಲಾಗಿದ್ದ ಮೂಲೆ ಟೇಬಲ್‌ಗಳಲ್ಲಿ ಸಹಪಾಠಿಗಳನ್ನು ನೋಡಿ ಕರಬುತ್ತಿದ್ದೆ.  ನನ್ನ ಸ್ನೇಹಿತೆಯರು ತಮ್ಮ ಬಾಯ್‌ಫ್ರೆಂಡ್ಸ್ ಜೊತೆ ಜಗಳವಾಡಿ ರಾಜಿಯಾಗುವಾಗುವುದನ್ನು ನೋಡಿ ನನಗೆ ಇಲ್ಲದ ಆ ಭಾಗ್ಯಕ್ಕೆ ಕೊರಗಿದೆ. ನಿನಗೇ ಕೊಡಲೆಂದೆ ಕೊಂಡ ಅದೆಷ್ಟೋ ಗ್ರಿಟಿಂಗ್ ಕಾರ್ಡ್‌ಗಳನ್ನು , ಇಂದಿಗೂ ನನ್ನ ಹಳೆ ಪುಸ್ತಕಗಳ ಮಧ್ಯದಿಂದ ನಿನ್ನನ್ನು ನೆನಪಿಸಿ ಅಣಿಕಿಸುತ್ತಿವೆ. ಒಮ್ಮೆ ನಾನು ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದಾಗ ಪೂರ್ತಿ ತರಗತಿಯೇ  ಅಲ್ಲಿ ನೆರೆದಿತ್ತು, ನಿನ್ನೊಬ್ಬನ್ನ ಹೊರತಾಗಿ!!  ಆದು ನಿನ್ನನ್ನು ನಾನು ತೀವ್ರವಾಗಿ ಮಿಸ್‌ ಮಾಡಿಕೊಂಡ ದಿನ. ನೀನು ಇದ್ಯಾವುದರ ಅರಿವೇ ಇಲ್ಲದೇ ಅದೇಲ್ಲಿ ಪ್ರಶಾಂತವಾಗಿ ಕುಳಿತ್ತಿದ್ದೆಯೋ.  ನಿಧಾನವಾಗಿ  ನನಗೇ ಅರಿವಿಲ್ಲದಂತೆ ನೀನು ಸಂಪೂರ್ಣವಾಗಿ ನನ್ನನ್ನು ಅವರಿಸಿಕೊಂಡಿದ್ದೆ. ನನ್ನ ರೂಮ್‌ಮೇಟ್ ಕಣ್ಣು ತಪ್ಪಿಸಿ ದಿನಕ್ಕೆ  ಹತ್ತು ಬಾರಿಯಾದರೂ ನೀನು ಬರೆದ ಪತ್ರ ಓದುವುದು ನನ್ನ ನಿತ್ಯದ ದಿನಚರಿಯಾಗಿತ್ತು.  ಇಂದಾದರೂ ನೀನು ಕಾಣಸಿಗಬಹುದು ಎಂಬ ಆಸೆಯಿಂದ ದಿನ  ಕ್ಲಾಸಿಗೆ ಕಾಲಿಡುತ್ತಿದ್ದೆ. ನಿನ್ನ ಕುಡಿ ನೋಟಕ್ಕಾಗಿ ಪರಿತಪಿಸುತ್ತಿದ್ದೆ. ಹೆಚ್ಚಿನ ದಿನಗಳು  ನನಗೆ  ಕಾದಿದ್ದು ಬರಿ  ನಿರಾಸೆಯೇ. ಹೊಸ ವರ್ಷದ ದಿನ, ವ್ಯಾಲೆಂಟ್ಸ್ ಡೇ, ಕಾಲೇಜ್ ಡೇ, ನನ್ನ ಹುಟ್ಟಿದ ಹಬ್ಬ ಹೀಗೆ ನೀನಾಗಿ ವಿಶೇಷವಾಗಿ ಕಾದು ನಿರಾಸೆಯಾದ ದಿನಗಳ ಪಟ್ಟಿ ದೊಡ್ಡದು.  ನೀನು ಒಂದೇ ಒಂದು ಬಾರಿ  ಮತ್ತೆ ನನ್ನ ಕಡೆ ತಿರುಗಿ ನೋಡಿದ್ದರೆ, ನಿನಗಾಗಿ ಕಾಯುತ್ತಿದ್ದ ನಾನಲ್ಲಿ  ಸಿಗುತ್ತಿದ್ದೆ.   ಆದರೆ ನೀನು ನಿನ್ನ ಮೌನ ಮುರಿಯಲೇ ಇಲ್ಲ.  ಅಪರೂಪಕ್ಕೆ ಎದುರಿಗೆ ಸಿಕ್ಕಾಗ ಕನಿಷ್ಟ ಒಂದು ನಗುವು ಇಲ್ಲವಾಗಿತ್ತು ನಿನ್ನಿಂದ. ನನ್ನ ಕಣ್ಣುಗಳ ಕಾಯುವಿಕೆ ನಿನಗೆ ಅರ್ಥವೇ ಆಗಲಿಲ್ಲ. ನಾನು ಶಬರಿ ಹಾಗೆ ಕಾದೆ ಕಾದೆ. ಅವಳ ಕಾಯುವಿಕೆಗಾದರೂ  ಫಲ ಸಿಕ್ಕಿತು ಆದರೆ ನನಗಿಲ್ಲ.

ಇದೇಲ್ಲಾ  ಹದಿನಾರರ ಹೊಸ್ತಿಲಿನಲ್ಲಿದ್ದ ಹುಚ್ಚು ಹುಡುಗಿಯ ಬಾಲಿಶ ಭಾವನೆಗಳು ಎಂದು ಈಗ ನಿನಗೆ ಅನಿಸುವುದು ಸಹಜ. ನಿನ್ನ ಬಗ್ಗೆ ನಾನು ಹೀಗೆಲ್ಲಾ ಅಂದು ಕೊಂಡು ಇಂದಿಗೆ ಹತ್ತಾರು ವರ್ಷಗಳೇ ಉರುಳಿವೆ.  ಒಂದೊಂದನ್ನೆ ಹಿಂದಿಕ್ಕಿ ಜೀವನದ ಸಾಕಷ್ಟು ಬದಲಾವಣೆಗಳೊಂದಿಗೆ ನಾನೀಗ ಬೆಳೆದಿದ್ದೇನೆ. ಆದರೆ ನನ್ನಳೊಗಿನ ನಿನ್ನ ಹೊರತಾಗಿ. ನಿನ್ನ ಬಗ್ಗೆಗಿನ ನನ್ನ ಭಾವನೆಗಳಲ್ಲಿ  ಮಾತ್ರ ಯಾವುದೇ ರೀತಿಯ ಬದಲಾವಣೆ ಇಲ್ಲ.  ಇಂದು ನನ್ನೊಳಗೆ  ಬೆಳೆದು ಹೆಮ್ಮರವಾಗಿದೆ. ಅಂದಿನಿಂದ ಇಂದಿನವರೆಗೂ ನಿನ್ನ ಮರೆಯಲಾರದೆ ಒದ್ದಾಡುತ್ತಿರುವೆ. ಆ ದಿನಗಳ ನಿನ್ನ ಮೌನ ಸದಾ ನನ್ನ ಕಾಡುತ್ತಿದೆ. ಇಷ್ಟೇಲ್ಲಾ ಹೇಳಿದ ಮೇಲೂ ನೀನು  ಅರ್ಥಮಾಡಿಕೊಳ್ಳದ್ದಿದ್ದರೆ, ನಾನೇ ಹೇಳುತ್ತಿನಿ ಕೇಳು ಹುಡುಗ ನೀನಂದರೆ ನನಗೆ ಇಷ್ಟ ಕಣೋ  ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನಿನ್ನವಳಲ್ಲದ ನಿನ್ನವಳು