October 13, 2011

ಬಸ್ ಕೆಟ್ಟ ಆ ರಾತ್ರಿ...

 ದಿನ ಟಿವಿ, ಪೇಪರ್‌ನಲ್ಲಿ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುವ ಸುದ್ದಿ ಕೇಳುವಾಗ ನನ್ನ ಹೊಟ್ಟೆಯಲ್ಲಿ ಸಣ್ಣಗೆ ಚಳಿ ಹುಟ್ಟುತ್ತೆ. ಮೈಯೆಲ್ಲಾ ಬೆವುರುತ್ತೆ.  ಅವತ್ತು ಅವರು ಇಲ್ಲ ಅಂದಿದ್ದರೆ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತದೆ. ಮತ್ತೆ ಮತ್ತೆ ಆ ಘಟನೆಯ ನೆನಪು ಮರಕಳಿಸುತ್ತದೆ.  ಅಲ್ಲಿಯವರೆಗೆ  ಒಂದು ಹೆಣ್ಣನ್ನು ಪ್ರಪಂಚ ಅಷ್ಟು ಕೆಟ್ಟ ದೃಷ್ಟಿಯಿದ ನೋಡುತ್ತದೆ  ಎಂಬ ಅರಿವಿರಲಿಲ್ಲ.  ಇಂದಿಗೂ ಅವತ್ತು ನಾನು ಎಂತಹ ಅಪತ್ತಿನಲ್ಲಿ ಸಿಲುಕ್ಕಿದ್ದೆ  ಎಂದು  ಊಹಿಸಿಕೊಳ್ಳಲು ಅಸಾಧ್ಯ.  ಆ ದಿನದ ನೆನಪು ಮಾತ್ರ ಇನ್ನೂ ಸ್ಪಲ್ಪವೂ ಮಾಸಿಲ್ಲ. ಅವತ್ತು ನಾನು  ಹೆದರಿಕೆಯಿಂದ  ಸಂಪೂರ್ಣ ಬ್ಲಾಂಕ್ ಆಗಿದ್ದೆ.  ಪರಿಸ್ಥಿತಿಯೇ  ಹಾಗಿತ್ತು .

      ಈ ಘಟನೆ ನೆಡೆದು ಸುಮಾರು 15-16 ವರ್ಷಗಳೇ ಕಳೆದಿವೆ. ಆ ವಯಸ್ಸೇ ಹಾಗಿತ್ತು. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಥವಾ ಯೋಚಿಸಬೇಕು ಅನ್ನೋ ಮೆಚ್ಯೂರಿಟಿ ಇರಲಿಲ್ಲ. ಆಗ ಅದು ಬೇಕಾಗಿರಲಿಲ್ಲ ಕೂಡ.  ಆಗಿನ್ನೂ ನಾನು ಪಿಯುಸಿ ಮುಗಿಸಿದ್ದೆ. ಡಿಗ್ರಿ ಕಾಲೇಜು ಶುರುವಾಗುವ ಮುನ್ನ ಹಳೆ ಹಾಸ್ಟೇಲ್‌ನ ಸ್ನೇಹಿತರೇಲ್ಲಾ ಒಮ್ಮೆ ಭೇಟಿಯಾಗುವ ಪ್ಲಾನ್ ಪ್ರಕಾರ. ನಾವೆಲ್ಲಾ ಮಂಗಳೂರಿನಲ್ಲಿ  ಮೀಟ್ ಮಾಡಿ,  ನಾನು ವಾಪಸ್ಸು ಮನೆ ಸೇರಲು ಮಂಗಳೂರು-ತೀರ್ಥಹಳ್ಳಿಯ ಅಗುಂಬೆ ಮಾರ್ಗದ ಕೊನೆ ಬಸ್ಸೇರಿದ್ದೆ.  ಕತ್ತಲ್ಲಾದ ನಂತರ ಆಗುಂಬೆ ಘಾಟಿಯಲ್ಲಿ ಬಸ್ಸ್ ಸಂಚರಿಸುತ್ತಿರಲಿಲ್ಲ.  ಅದೇ ಕೊನೆಯ  ಬಸ್ಸ್‌ ಆದ ಕಾರಣದಿಂದ  ಹೆಚ್ಚೇ ಎನ್ನುವಷ್ಟು ಜನ ತುಂಬಿದ್ದರು.  ಹೆಬ್ರಿ ದಾಟಿ ಸ್ಪಲ್ಪ ದೂರ ಸಾಗುತ್ತಿದ್ದಂತೆ  ಬಸ್ಸು ಕೆಟ್ಟು ನಿಂತಿತ್ತು.  ಆಗ ಅದೇನು ದೊಡ್ಡ ವಿಷಯ ಅನಿಸಲಿಲ್ಲ.  ಡ್ರೈವರ್ ಅರ್ಧ-ಒಂದು ಘಂಟೆಯಲ್ಲಿ ಸರಿಯಾಗುವ ಭರವಸೆ ಕೊಟ್ಟಿದ್ದರು. ಆದರೆ ಅಗಿದ್ದೇ ಬೇರೆ.  ಮೆಕ್ಯಾನಿಕ್ ರೀಪೇರಿ ಸಾಧ್ಯವಿಲ್ಲ  ಅಂದ ಹಾಗೂ ಕಂಡೆಕ್ಟರ್‌ನಿಂದ ನಿಮ್ಮ ದಾರಿ ನೀವೇ ನೋಡಿ ಕೊಳ್ಳಿ ಎಂಬ ಅಧಿಕೃತ ಘೋಷಣೆಯು ಬಂತು. ಬಸ್ಸಿನ  ಜನ ಸಂದಣಿ ನಿಧಾನವಾಗಿ  ಕರಗತ್ತಾ ಬಂತು. ಆಗಾಲೇ ನನಗೆ ಗೊತ್ತಾಗಿದ್ದು. ಆ ಬಸ್ಸಲ್ಲಿ ಇದ್ದಿದ್ದು ಎರಡೇ ಹೆಣ್ಣು ಜೀವ! ನಾನು ಮತ್ತು ಒಂದು ಕಣ್ಣಿಗೆ ಬ್ಯಾಂಡೇಜ್ ಕಟ್ಟುಕೊಂಡಿದ್ದ ಮಧ್ಯ ವಯಸ್ಸಿನ ಹೆಂಗಸೊಬ್ಬರು. ಯಾರಿಗೆ ಹೇಳೊದು... ? ಎಲ್ಲಿಗೆ ಹೋಗೋದು..? ಯಾರ ಜೊತೆಗೆ?  ಎಲ್ಲದಕ್ಕಿಂತ ಹೆಚ್ಚಾಗಿ ಮನೆಗೆ ಹೇಗೆ ತಿಳಿಸೋದು?  ಆಗ ಮೊಬೈಲ್ ಫೋನ್ ಎಲ್ಲಿತ್ತು.? ನಮ್ಮ ಮನೆಯಲ್ಲಿ ಫೋನ್ ಕೂಡ ಇರಲ್ಲಿಲ್ಲ. ನಾನು ಏನು ಮಾಡಲು ತೋಚದೇ ಉತ್ತರ ಹೊಳಯದ ಪ್ರಶ್ನೆಗಳೊಂದಿಗೆ ಕುಳಿತೇ ಇದ್ದೆ. 

       ಘಂಟೆ ಎಂಟೋ ಒಂಬತ್ತು ಆಗಿತ್ತು. ಬಸ್ ಫುಲ್ ಖಾಲಿ ಆಯಿತು. ಬರೀ ಮೂರು ಜನ ಮಾತ್ರ ಉಳಿದ್ದಿದ್ದು. ನಾನು ಮತ್ತು ಬಸ್ಸ್‌ನಲ್ಲಿದ್ದ ಏಕೈಕ ಮಹಿಳೆ ಮತ್ತು ಅವರ ಗಂಡ. ಮತ್ತು ಬಸ್  ಕೆಳಗೆ ಒಂದು ನಾಲ್ಕೋಐದೋ ಜನ ಇದ್ದರು.  ಕೆಳಗೆ ಕತ್ತಲಲ್ಲಿ  ನಿಂತಿದ್ದ  ನನ್ನ ಬಗ್ಗೆಯ ಅವರ ಮಾತುಗಳು  ಬೇಡ ಅಂದರೂ ಸ್ಪಷ್ಟವಾಗಿ ಕೇಳುತ್ತಿತ್ತು.  ಒಬ್ಬ "ಹಕ್ಕಿ ಬೊಂಬಾಟಾಗಿ ಇದ್ದೆ ಕಣ್ರೋ" ಅಂತ ಹೇಳಿದ್ರೆ, "ಹೌದು ಮರಾಯಾ.. ಮಜಾ ಜೊತೆಗೆ ಒಳ್ಳೆ ಸಂಪಾದನೆನ್ನೂ ಆಗುತ್ತೆ ಕಣೋ" ಅಂತ ಇನ್ನೊಬ್ಬನ್ನ ಸುವಾಲು. ನನ್ನ ರೂಪದ ಬಗ್ಗೆ ನನಗೇ ಅಸಹ್ಯವಾಗುವಷ್ಟು ಅಸಹ್ಯವಾಗಿ ಮಾತಾಡಿ ಕೊಳ್ಳುತ್ತಿದ್ದರು.  ನಂತರ ಒಬ್ಬೊಬ್ಬರೇ ಬಸ್ಸಿನ  ಒಳಗೆ ಒಂದು ನನ್ನ ಮಾತನಾಡಿಸಲು  ಶುರು ಮಾಡಿದ್ದರು.  ನಾನು ಮಾತ್ರ ತುಟಿ ಎರಡು  ಮಾಡದೆ, ಅಳು ನುಂಗಿ ಸೀಟಿಗೆ ಇನ್ನೂ ಅಂಟು ಕೊಂಡು ಕುಳಿತೆ. ಹೊರಗಿನ ಕತ್ತಲಷ್ಟೆ ನನ್ನ ಮುಖ ಕೂಡ ನನಗೆ ಗೊತ್ತಗುವಷ್ಟೂ ಹೆದರಿಕೆಯಿಂದ ಕಪ್ಪಾಗಿತ್ತು. ಅವರೇಲ್ಲಾ ನಾನು ಕುಳಿತ ಸೀಟಿನಿಂದ ಸ್ಪಲ್ಪ ದೂರದಲ್ಲಿ ನಿಂತು  ಅಸಹ್ಯವಾಗಿ ನಗುತ್ತಿದ್ದರು.  ಸೇಮ್ ಯಾವುದೋ ಒಂದು ಫಿಲ್ಮಿ ಸೀನ್ ರೀತಿ. ಅವರ ನೋಟಗಳು  ನನಗೆ ಇಂದಿಗೂ ಕೂಡ ನೆನೆಪಿದೆ.  ನೆನೆಸಿ ಕೊಂಡರೆ ಈಗಲೂ ಮೈ ಕಂಪಿಸುತ್ತದೆ.  ಆ ಕ್ಷಣ ಮಾತ್ರ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಪರಿತಪಿಸಿ ಬಿಟ್ಟೆ.  ಆಗ ನನ್ನನ್ನು ಅವರಿಂದ ಬಚಾವ್ ಮಾಡೊಕ್ಕೆ ಮಾತ್ರ ಬಂದಿದ್ದು   ಬಸ್ಸಿನಲ್ಲಿ ಉಳಿದ್ದಿದ್ದ ದಂಪತಿಗಳು. ಆ ಮಹಿಳೆ ನನ್ನ ಹತ್ತಿರ ಬಂದು  ನಮ್ಮ ಜೊತೆ ಬರ್ತಿಯಾ ಅಂತ ಕೇಳಿದಷ್ಟೇ. ನಾನು ಒಂದು ಸೆಂಕೆಂಡು ಕೂಡ ತಡ ಮಾಡದೆ ಹಿಂದೆ ಮುಂದೆ ಯೋಚಿಸದೆ ಅವರ ಬಾಲ ಹಿಡಿದೆ. ಬೇರೆ ದಾರಿಯಾದರೂ ಏನು ಇತ್ತು? ನನಗೆ ಹೋದ ಜೀವ ವಾಪಸ್ಸು ಬಂದಿತ್ತು. ಅವರು ಯಾವುದೋ ಒಂದು ವಾಹನ ಅಡ್ಡಗಟ್ಟಿ, ಉಡುಪಿಗೆ ಕರ್ಕೊಂಡು ಹೋದರು.  ಮಾತಾಡಲು  ಅಗದಷ್ಟು  ಬಾಯಿ ಒಣಗಿತ್ತು. ಅವರು ಏನೋ ಕೇಳಿದ್ದರೆ ನಾನು ಏನೋ ಹೇಳುತ್ತಿದ್ದೆ.  ಬಾಂಣಲೆಯಿಂದ ಬೆಂಕಿಗೆ ಬಿದ್ದೆನ್ನೇನೊ ಎಂದು  ನನಗೆ ಅನಿಸಲು ಪ್ರಾರಂಭವಾಗಿತ್ತು. ಆದರೆ ಆ ರೀತಿ ಏನು ಆಗದೆ  ಕೊನೆಗೆ ಎಲ್ಲಾ ಸುಖಾಂತ್ಯ ವಾಯಿತು. ರಾತ್ರಿ ಉಡುಪಿ ಮಠದಲ್ಲಿ ಉಳಿದುಕೊಂಡು, ಬೆಳ್ಳಿಗೆ ಮೊದಲ ಬಸ್ಸ್‌ನಲ್ಲೇ  ಅವರು ನನ್ನನ್ನು ಊರು ಮುಟ್ಟಿಸಿದ್ದರು. ಅವರ ಉಪಕಾರಕ್ಕೆ ನಾನು ಮತ್ತು ನನ್ನ ಮನೆಯವರೆಲ್ಲಾ ಜೀವಮಾನವೀಡಿ ಋಣಿಗಳು.
        
           ಆ ಒಂದು ರಾತ್ರಿಯಲ್ಲಿ ನಾನು ಇಡೀ ಜೀವಮಾನಕ್ಕೆ ಆಗುವಷ್ಟು ಹಿಂಸೆ, ಸಂಕಟ, ಭಯ ಎಲ್ಲಾ ಅನುಭವಿಸಿ ಬಿಟ್ಟೆ.  ಆ ಪುಣ್ಯಾತ್ಮರು ಇಲ್ಲದೆ ಹೋಗಿದ್ದರೆ....  ನಾನು ಇಷ್ಟೂ ವರ್ಷ ಜೀವದಲ್ಲಿ  ಇರುತ್ತಿದ್ದೇನೋ ಇಲ್ವೋ ಅಥವಾ ಇದ್ದರೂ ಎಲ್ಲೋ?  ಹೇಗೋ? ಅಬ್ಬಾ ಕಲ್ಪನೆಗೂ ಸಿಗವುದಿಲ್ಲ... ಆ ಪಾಪಿಗಳ ಕೈಗೆ ಸಿಕ್ಕಿ ನಾನೂ ಒಂದು ಕಥೆಯಾಗಿರುತ್ತಿದ್ದೆ....














(2011 ಅಕ್ಟೋಬರ್  7 ರ ವಿಜಯ ನೆಕ್ಸ್ಟ್‌ ಪೇಪರ್‌ನ  "ಅವಳ ಡೈರಿ" ಅಂಕಟದಲ್ಲಿ  ಪ್ರಕಟವಾದ ಬರಹ)

ಫ್ಲವರ್ ಕೇರ್

ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ.  ಸುಂದರ ತಾಜಾ ಹೂವುಗಳ ಹೂದಾನಿಯು ಮನೆಯ ಅಲಂಕಾರಕ್ಕೆ ಒಂದು ಹೊಸ ರೂಪವನ್ನು ನೀಡುತ್ತದೆ ಎಂದರೆ ತಪ್ಪಲಾಗರದು. ಜೊತೆಗೆ  ಮನಸ್ಸನ್ನು ಸಹ ಉಲ್ಲಾಸವಾಗಿಡುತ್ತದೆ.  ಹೂವಿನ ಕುಂಡಗಳು ಹೂವಿನ ಸ್ವಾಭಾವಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಒಂದು ಸುಂದರವಾದ ಹೂದಾನಿಯನ್ನು ಮನೆಯ ಅಥವಾ ಅಫೀಸ್‌ನ ಒಂದು ಅತ್ಯುತ್ತಮ ಅಲಂಕಾರಿಕ ಅಂಶ ಎಂದು ಪರಿಗಣಿಸಲಾಗುತ್ತದೆ.
ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ ವಿಧವಿಧವಾದ ಹೂದಾನಿಗಳು ಲಭ್ಯ, ಆದರೆ ಅದನ್ನು ಆಯ್ಕೆಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಮುಖ್ಯವಾಗುತ್ತದೆ.
ಪ್ರಕಾಶಮಾನ/ಕಾಂತಿಯುತ ಬಣ್ಣದ ಹೂದಾನಿಗಳಲ್ಲಿ ಹೂಗಳು ಎದ್ದು ಕಾಣುವುದಿಲ್ಲ. ಹೀಗಾಗಿ ಸರಳವಾದ  ಹೂದಾನಿಗಳನ್ನು ಅಯ್ದುಕೊಳ್ಳುವುದು ಉತ್ತಮ.
ಸರಿಯಾದ ಮೂಲ ವಸ್ತುವಿನ ಹೂದಾನಿಯ ಆಯ್ಕೆ ಕೂಡ ಅಷ್ಟೆ ಮುಖ್ಯ. ಬಗೆಬಗೆಯ ಮೂಲವಸ್ತುವಿನ ಹೂಕುಂಡಗಳು ದೊರೆಯುತ್ತದೆ. ಉದಾ; ಗ್ಲಾಸು, ಸಿರಾಮಿಕ್, ಸ್ಟೀಲ್, ಟೆರಾಕೋಟಾ, ಮಣ್ಣು, ಕ್ರಿಸ್ಟಲ್ ಇತ್ಯಾದಿ. ಎಲ್ಲಾ ಬಣ್ಣಗಳ ಹಾಗೂ ವಿಧಗಳ ಹೂಗಳಿಗೆ ಹೊಂದುವ ಹೂ ಕುಂಡವನ್ನು  ಅಯ್ಕೆ ಮಾಡಿಕೊಳ್ಳಬಹುದು.
ಹೂಗಳ ಜೋಡಣೆಗೆ  ಬೇರೆ ಬೇರೆ ಆಕಾರಗಳ ಕುಂಡಗಳನ್ನು ಪ್ರಯತ್ನಿಸಬಹುದು. ಆಗಲ, ಸಿಲಿಂಡರ್, ಬೌಲ್ ಇತ್ಯಾದಿ ಆಕಾರಗಳು. ನಿಮ್ಮ ಮನೆಯ ಒಳಾಂಗಣ ಮತ್ತು ಪೀಠೋಪಕರಣಕ್ಕೆ ಹೊಂದುವ ಗಾತ್ರದ  ಪ್ಲವರ್ ವಾಸ್‌  ಆಯ್ಕೆ ಮಾಡಿಕೊಳ್ಳಿ.
ಖರೀದಿಸುವಾಗ ಯಾವುದೇ ರೀತಿಯ ಬಿರುಕು ಅಥವಾ ಸೀಳುವಿಕೆ ಇಲ್ಲದಿರುವುದನ್ನು ಖಚಿತ ಪಡಿಸಿ ಕೊಳ್ಳಿ. ಹೂದಾನಿಗಳು ತೀರ ದುಬಾರಿಯಾಗಿ, ಅಡಂಬರವಾಗಿರಬೇಕಿಲ್ಲ. ಅದಷ್ಟೂ ಸರಳವಾಗಿದ್ದಲ್ಲಿ ಹೂವಿನ ಅಂದವನ್ನು ಎತ್ತಿ ಹಿಡಿಯುವಲ್ಲಿ ಹೆಚ್ಚು ಸಹಾಯಕಾರಿಯಾಗುತ್ತದೆ.
ಹೂ ದಾನಿಯ ಕಲರ್, ಮೆಟಿರಿಯಲ್, ಶೇಪ್‌ಗಳ ಜೊತೆಗೆ ಅದು ಇಡುವ ಸ್ಥಳ ಕೂಡ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಟೇಬಲ್, ಟೀಪಾಯಿ ಅಥವಾ ಶೇಲ್ಫ್‌ಗಳು ಹೂ ಕುಂಡಗಳನ್ನು ಇಡಲು ಸೂಕ್ತವಾದ ಸ್ಥಳಗಳು. ಹೂದಾನಿಗಳನ್ನು ಎತ್ತರದ ಸ್ಥಳದಲ್ಲಿ ಇರಿಸುವ ಹಾಗಿದ್ದಲ್ಲಿ, ಕೆಳಗೆ ಬಿದ್ದರೆ ಒಡೆಯದ ವಸ್ತುಗಳ ಹೂದಾನಿಗಳನ್ನು ಇಡುವುದು ಉತ್ತಮ.
ಕೆಲವು ಸರಳ ಅಂಶಗಳ ಬಗ್ಗೆ ಗಮನ ಹರಿಸಿದರೆ, ನೀವು ನಿಮ್ಮ ಮನೆಯ ಹೂದಾನಿಯಲ್ಲಿ ಹೂಗಳು ಹೆಚ್ಚು ಕಾಲ ತಾಜವಾಗಿರಂತೆ ನೋಡಿಕೊಳ್ಳಬಹುದು.
ಮೊದಲನೆಯದಾಗಿ ಹೂವಿನ ಕಾಂಡವನ್ನು ಹರಿತವಾದ ಚಾಕುವಿನಿಂದ ಓರೆಯಾಗಿ ಕತ್ತರಿಸಿ. ತುಕ್ಕು ಹಿಡಿದ ಚಾಕು ಅಥವಾ ಕತ್ತರಿಯನ್ನು ಬಳಸಬೇಡಿ. ಹೂವನ್ನು ಗಿಡದಿಂದ ಬೇರ್ಪಡಿಸಿದ ನಂತರ ನೀರಿನಲ್ಲಿ ಹಾಕಿ. ನೀರಿನಲ್ಲಿ ಮುಳುಗುವ ಕೆಳಭಾಗದ ಎಲೆಗಳನ್ನು ಕಾಂಡದಿಂದ ತೆಗೆಯಿರಿ. ಇದರಿಂದ ಹೂಗಳು ಹೂದಾನಿಯಲ್ಲಿ ಹೆಚ್ಚು ಸಮಯ ತಾಜವಾಗಿ ಉಳಿಯುತ್ತದೆ.
ಹೂವನ್ನು ಗಿಡದಿಂದ ಕ್ಯುಯಲು ಮುಂಜಾನೆ ಅಥವಾ ಸಂಜೆ ಸೂಕ್ತವಾದ ಸಮಯ. ಗುಲಾಬಿ, ಡ್ಯಾಫಿಡೋಲ್ ಮತ್ತು ಗ್ಲಾಡಿಯೊಲ್ಸ್‌ಗಳಂತಹ ಹೂಗಳನ್ನು ಮೊಗ್ಗಿನ ಅವಸ್ಥೆಯಲ್ಲಿ ಹಾಗೂ  ಚೆಂಡು ಹೂಗಳನ್ನು ಅರಳಿದ ನಂತರ ಗಿಡದಿಂದ ಕತ್ತರಿಸಬೇಕು.
ಹೂದಾನಿಗಳಲ್ಲಿ ಹೂಗಳು ಹೆಚ್ಚು ಕಾಲ ತಾಜವಾಗಿ ಉಳಿಯಲು ರಾಸಾಯನಿಕಗಳನ್ನು  ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಫ್ಲವರ್ ಫುಡ್‌ಗಳನ್ನು ಬಳಸಬಹುದು. ಅವುಗಳನ್ನು ಬಳಸಲು ಇಚ್ಛಿಸದವರು ಸ್ವಾಭಾವಿಕ ಮಿಶ್ರಣಗಳನ್ನು ಮನೆಯಲ್ಲೇ ತಯಾರಿಸಿ ಕೊಳ್ಳಬಹುದು.ಉದಾ: * ಮೂರು ಭಾಗ ನೀರಿಗೆ ಒಂದು ಭಾಗ ಲೆಮನ್/ಲೈಮ್ ಸೋಡಾ ಬೆರೆಸಿ. ನಂತರ ಪ್ರತಿ ಕಾಲು ಭಾಗ ಮಿಶ್ರಣಕ್ಕೆ, 1/4 ಚಮಚ ಬ್ಲೀಚ್ ಸೇರಿಸಿದ ಮಿಶ್ರಣವನ್ನು ಹೂದಾನಿಯಲ್ಲಿ ಬಳಸಿ. ನಂತರದಲ್ಲಿ ಪ್ರತಿ ನಾಲ್ಕು ದಿನದ ನಂತರ ಕಾಲು ಚಮಚ ಬ್ಲೀಚ್ ಸೇರಿಸಿ.  ಅಥವಾ * ಒಂದು ಕಾಲು ಭಾಗ ನೀರಿಗೆ 2 ಚಮಚ ಲಿಂಬೆ ಹಣ್ಣಿನ ರಸ, 1 ಚಮಚ ಸಕ್ಕರೆ ಮತ್ತು 1/2 ಚಮಚ ಬ್ಲೀಚ್ ಸೇರಿಸಿ ಹೂದಾನಿಯಲ್ಲಿ ಬಳಸಿ. ಈ ಮಿಶ್ರಣಗಳು ಹೂವನ್ನು ಹೆಚ್ಚು ಕಾಲ ಫ್ರೆಶ್ ಆಗಿ ಇಡಲು ಸಹಾಯಮಾಡುತ್ತದೆ.
ಕತ್ತರಿಸಿದ ಹೆಚ್ಚಿನ ಎಲ್ಲಾ ಹೂಗಳಿಗೆ ಹೂದಾನಿಯಲ್ಲಿ ಉಗುರು ಬೆಚ್ಚಗಿನ ನೀರನ್ನು ಉಪಯೋಗಿಸಿ, ಆದರೆ ಬಲ್ಬ್ ಫ್ಲವರ್‌ಗಳಾದ ಡ್ಯಾಫಿಡೋಲ್ ಮತ್ತು ಟುಲಿಪ್‌ ರೀತಿಯ ಹೂಗಳಿಗೆ ತಣ್ಣನೆಯ ನೀರನ್ನು ಬಳಸಿ.  ಪ್ರತಿ ಎರಡು ದಿನಕ್ಕೊಮ್ಮೆ ಹೂಕುಂಡದ ನೀರನ್ನು ಪೂರ್ಣವಾಗಿ ಬದಲಿಸಿ. ಇದು  ಹೂದಾನಿಯ ಹೂಗಳನ್ನು ಫ್ರೆಶ್ ಆಗಿ ಇಡಲು ಪ್ರತಿಯೊಬ್ಬರು ಗಮನದಲ್ಲಿಟ್ಟು ಕೊಳ್ಳಬೇಕಾದ ಕನಿಷ್ಟ ಅಂಶ. ಹೂದಾನಿಯ ಹೂಗಳನ್ನು ಸೂರ್ಯ ಬೆಳಕಿಗೆ ನೇರವಾಗಿ ಒಡ್ಡಬೇಡಿ ಮತ್ತು ಅವುಗಳನ್ನು ಅದಷ್ಟೂ ತಣ್ಣನೆ ಜಾಗದಲ್ಲಿರಿಸಿ.
ಕತ್ತರಿಸಿದ ಹೂಗಳನ್ನು ಹಣ್ಣುಗಳಿಂದ ದೂರವಿಡಿ. ಹಣ್ಣುಗಳು ಹೊರಸೂಸುವ ಒಂದು ಅನಿಲದಿಂದ ಹೂಗಳು ಬೇಗ ಬಾಡುತ್ತವೆ.
ಹೂದಾನಿಯಲ್ಲಿ ಬಾಡಿದ ಹೂಗಳನ್ನು ಹೊರಹಾಕಿ, ಅವುಗಳಿಂದ ಉಳಿದ ಹೂಗಳು ಬೇಗ ತಾಜಾತನವನ್ನು ಕಳೆದು ಕೊಳ್ಳುತ್ತವೆ.
ಡ್ಯಾಫಿಡೋಲ್ ಹೂಗಳನ್ನು  ಪ್ರತ್ಯೇಕವಾದ ಹೂಕುಂಡದಲ್ಲಿ  ಇರಿಸಿ, ಅವುಗಳ ಕಾಂಡಗಳು ಸೂಸುವ ಒಂದು ಸಂಯುಕ್ತ ಬೇರೆ ಹೂಗಳಿಗೆ ವಿಷಕಾರಿ.
ಹೂಕುಂಡಗಳಲ್ಲಿ ಹೆಚ್ಚುಕಾಲ ತಾಜವಾಗಿ ಇರುವ ಹೂಗಳನ್ನೇ ಆಯ್ಕೆ ಮಾಡಿಕೊಳ್ಳಿ. ಉದಾಹರಣೆಗೆ ಗ್ಲಾಡಿಯೊಲ್ಸ್‌ಗಳು ಸುಮಾರು ಹತ್ತು ದಿನಗಳ ವರೆಗೆ ಹೂದಾನಿಯಲ್ಲಿ ತಾಜವಾಗಿ ಇರುತ್ತವೆ. ಹಾಗೆ ಕಾರ್ನೇಶಿಯನ್‌ ಹೂಗಳು ಸರಿಯಾದ ಕಾಳಜಿಯೊಂದಿಗೆ ಸುಮಾರು 21 ದಿನಗಳ ಕಾಲ ಫ್ರೆಶ್ ಆಗಿ ಇರಬಲ್ಲವು.
ಸುಂದರ ಹೂವಿನ ಕುಂಡಗಳಲ್ಲಿ ಜೋಡಿಸಿದ ಹೂವುಗಳನ್ನು ಮನೆಯ ಒಳಾಂಗಣ ಅಲಂಕಾರಕ್ಕಾಗಿ ಬಳಸಬಹುದು. ಮನೆಯ ಅಂದ ಹೆಚ್ಚಿಸುವಲ್ಲಿ ಹೂದಾನಿಗಳು ಮುಖ್ಯ ಪಾತ್ರ ಹೆಚ್ಚಿಸುತ್ತವೆ. ಅದಕ್ಕಾಗಿ ಮಾರುಕಟ್ಟೆಯಿಂದ ದುಬಾರಿಯಾದ ಹೂಕುಂಡವನ್ನು ಬಾರಿ ಹಣ್ಣ ತೆತ್ತು ತರುವ ಅಗತ್ಯವೇನು ಇಲ್ಲ. ಮನೆಯಲ್ಲಿರುವ ಬಣ್ಣದ ಬಾಟಲ್‌ಗಳು, ಗಾಜಿನ ಬೌಲ್‌ಗಳು, ಅಕರ್ಷಕವಾಗಿರುವ ವಿಭಿನ್ನವಾಗಿರುವ ಪಾತ್ರೆಗಳನ್ನು ಸಹ ಹೂದಾನಿಯಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ. ಆದರೆ ಅದನ್ನು ಸುಂದರವಾಗಿ ಕಾಣುವಂತೆ ಮಾಡುವುದು ನಮ್ಮ ಕೈಯಲ್ಲಿದ್ದೆ ಅಷ್ಟೇ. ಹೂದಾನಿಯಲ್ಲಿ ಹೂಗಳ ಜೋಡಣೆಯು ಒಂದು ಕಲೆ. ಎಲ್ಲಾ ರೀತಿಯ ಹೂಗಳನ್ನು ಒಟ್ಟಿಗೆ  ತುಂಬುವುದರಿಂದ ಹೂದಾನಿಯು ಅಕರ್ಷಕವಾಗಿ ಕಾಣುವುದ್ದಿಲ್ಲ. ಸ್ಪಲ್ಪ ಆಸಕ್ತಿಯಿಂದ ಹೂಗಳನ್ನು ಜೋಡಿಸಿದರೆ ಎಂಥ ಹೂ ಕುಂಡವು ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಗ್ಲಾಡಿಯೊಲಸ್ ರೀತಿಯ ಉದ್ದನೆಯ ಹೂಗಳು ಉದ್ದನೆಯ, ತೆಳುವಾದ ಅಥವಾ ಸಿಲಿಂಡರ್ ಆಕಾರದ ವಾಸ್‌ಗಳಿಗೆ ಹೆಚ್ಚು ಹೊಂದುತ್ತವೆ. ಮತ್ತು ಈ ರೀತಿಯ ಉದ್ದನೆಯ ಹೂಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಡುವ ಅಗತ್ಯವಿಲ್ಲ  ಒಂದು ಹೂವು  ಸಹ ಹೂದಾನಿಯನ್ನು ಅಕರ್ಷಕವಾಗಿಸುತ್ತದೆ.  ಹಾಗೆ ಗುಲಾಬಿ, ಕಾರ್ನೇಷಿಯನ್, ಡ್ಯಾಫಿಡೊಲ್, ಜಿನಿಯಾ, ಟುಲಿಪ್ ಮುಂತಾದ ಹೂಗಳನ್ನು ಹೆಚ್ಚು ಸಂಖ್ಯೆಯಲ್ಲಿ ಹೂದಾನಿಯಲ್ಲಿಟ್ಟರೆ ಚೆಂದ. ಪುಟ್ಟ ಪುಟ್ಟ ಬಣ್ಣ,ಬಣ್ಣದ ಹೂಗಳೊಂದಿಗೆ ನಡುವಿನಲ್ಲಿ ಒಂದು ಉದ್ದ ಹೂವು ಕುಂಡದ ಅಂದವನ್ನು ಹೆಚ್ಚಿಸುತ್ತದೆ. ಹೂಗಳ ಜೊತೆ ಬೇರೆ ಬೇರೆ ಬಣ್ಣದ ಸಣ್ಣ ಕಲ್ಲುಗಳು ಅಥವಾ ಗೋಲಿಗಳು ಸಹ ಪಾರದರ್ಶಕ ಹೂದಾನಿಗಳಲ್ಲಿ ಬಳಸಬಹುದು.
May your flowers bring you joy--for a long time.









ವಾಷಿಂಗ್ ಮಶಿನ್‌‌ ಕ್ಲೀನಿಂಗ್ ಟಿಪ್ಸ್

ನಮ್ಮ ಬಟ್ಟೆಗಳನ್ನು ಕ್ಲೀನ್ ಮಾಡುವ ವಾಷಿಂಗ್ ಮಶಿನ್‌ ಕ್ಲೀನ್ ಮಾಡುವ ಕಲ್ಪನೆ ಸ್ಪಲ್ಪ ತಮಾಷೆ ಅನಿಸುತ್ತದೆ. ಆದರೆ ಸದಾ ಕೊಳೆ ಬಟ್ಟೆಗಳನ್ನು ಸ್ವಚ್ಛ ಮಾಡುವ ವಾಷಿಂಗ್ ಮಶಿನ್‌ ಸ್ವಚ್ಛವಾಗಿರುವುದು ಸಹ ಅಷ್ಟೇ ಮುಖ್ಯ. ಬಟ್ಟೆಯ ಕೊಳೆ ಮತ್ತು ಸೋಪ್‌ ಅಂಶಗಳು ವಾಷಿಂಗ್ ಮಶಿನ್‌‌ನಲ್ಲಿ ಸಂಗಹ್ರವಾಗುತ್ತದೆ. ಇವು ಮಶಿನ್‌ ಒಳಗೆ ವಾಸನೆಯನ್ನು ಉಂಟುಮಾಡುತ್ತದೆ ಹಾಗೂ ಕ್ರಮೇಣ ಈ ಅಂಶಗಳು ಅದರ ಕಾರ್ಯ ಸಾಮರ್ಥ್ಯದ ಮೇಲೂ ಪರಿಣಾಮ ಬೀರಲು ಆರಂಭವಾಗುತ್ತದೆ. ಚಿಂತಿಸ ಬೇಡಿ, ವಾಷಿಂಗ್ ಮಶಿನ್‌ ಅನ್ನು ಸ್ವಚ್ಛಗೊಳಿಸುವುದು ಕಷ್ಟದ ಕೆಲಸವೇನು ಅಲ್ಲ. ಇಲ್ಲಿವೆ ಕೆಲವು ಟಿಪ್ಸ್‌ಗಳು: * ವಾಷಿಂಗ್ ಮಶಿನ್‌‌ಗೆ ಅದರ ಗರಿಷ್ಟ ಸಾಮರ್ಥ್ಯದಷ್ಟೂ ಬಿಸಿನೀರನ್ನು ತುಂಬಿಸುವ ಮೂಲಕ ಕ್ಲೀನಿಂಗ್ ಆರಂಭಿಸಿ. * ನಂತರ ಅದಕ್ಕೆ ವೈಟ್‌ ವಿನೆಗರ್ ಅಥವಾ ನಿಂಬೆ ರಸವನ್ನು ಸೇರಿಸಿ (ಸುಮಾರು 1-2 ಲೋಟಗಳ ವರೆಗೆ). ಬೇಕಿಂಗ್ ಸೋಡವನ್ನು ಸಹ ಸೇರಿಸಬಹುದು. ನಂತರ ವಾಷಿಂಗ್ ಮಶಿನ್‌ ಚಾಲೂ ಮಾಡಿ. ಈ ಹಂತ ಪೂರ್ಣವಾದ ನಂತರ ಅದರಲ್ಲಿ ಶೇಖರಗೊಂಡ ಕೊಳೆ ಮತ್ತು ಸೋಪಿನ ಅಂಶ ಮಾಯವಾಗುತ್ತದೆ. * ಪೇಪರ್ ಅಥವಾ ಬಟ್ಟೆಯ ಟವಲ್‌ನಿಂದ ವಾಷಿಂಗ್ ಮಶಿನ್‌ ಒಳ ಭಾಗವನ್ನು ಒರೆಸಿ. ಇದರಿಂದ ಉಳಿದ ಅಲ್ಪ ಸ್ಪಲ್ಪ ಕೊಳೆ-ಕಲ್ಮಶವೂ ಹೋಗುತ್ತದೆ. * ನಂತರ ಮತ್ತೊಮ್ಮೆ ವಾಷಿಂಗ್ ಮಶಿನ್‌ ಅನ್ನು ಓಡಿಸಿ, ಈ ಬಾರಿ ತಣ್ಣೀರನ್ನು ಒಳಸಿ. *ನಂತರ ಒದ್ದೆ ಬಟ್ಟೆಯಿಂದ ಹೊರಭಾಗವನ್ನು ಓರೆಸಿ. ಈಗ ನಿಮ್ಮ ವಾಷಿಂಗ್ ಮಶಿನ್‌ ಸಂಪೂರ್ಣ ಕ್ಲೀನ್ ಹಾಗೂ ಇನ್ನೂ ಹೆಚ್ಚು ಬಟ್ಟೆಗಳನ್ನು ಕ್ಲೀನ್ ಮಾಡಲು ಸಿದ್ಧ. ಈ ಪ್ರಕ್ರಿಯೆಯನ್ನು ಅವಶ್ಯಕತೆ ಕಂಡು ಬಂದಾಗಲೇಲ್ಲಾ ಪುನರಾವರ್ತಿಸಿ. ವಾಷಿಂಗ್ ಮಶಿನ್‌‌ನ ಪ್ರತಿ ಉಪಯೋಗದ ನಂತರ ಅದರ ಮುಚ್ಚಳವನ್ನು ತೆರೆದಿಟ್ಟು ಅದರ ಒಳಭಾಗವನ್ನು ಒಣಗಲು ಅವಕಾಶಿಸಿ ಹಾಗೂ ನಿಮ್ಮ ವಾಷಿಂಗ್ ಮಶಿನ್‌ನ್ನ ದುರ್ಗಂಧವನ್ನು ತಡೆಗಟ್ಟಿ.

ಮಳೆಗಾಲಕ್ಕಾಗಿ ಗಾರ್ಡನಿಂಗ್ ಟಿಪ್ಸ್‌ಗಳು

ಮಳೆಗಾಲ ಬಂತೆಂದರೆ ಸಾಕು. ತಂಪಾದ ಹೆಚ್ಚು ತೇವಾಂಶ, ಬಿಸಿಲಿನ ತಾಪವಿಲ್ಲದ ಹವಾಗುಣ ಗಿಡ-ಮರಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಸಸ್ಯ ಪ್ರೇಮಿಗಳಿಗೆ ತಮ್ಮ ಮನೆಯ ಮುಂದಿನ ಗಾರ್ಡನ್‌ನಲ್ಲಿ ಇನ್ನೂ ಹೆಚ್ಚು ಹೆಚ್ಚು ಗಿಡ ಮರಗಳನ್ನೂ ನೆಡೆಲು ಸರಿಯಾದ ಕಾಲ. ಮಳೆಗಾಲದ ಸಮಯದಲ್ಲಿ ನಿಮ್ಮ ಹೂದೋಟದ ಕಾಳಜಿಗಾಗಿ ಕೆಲವು ಮುಖ್ಯ ಅಂಶಗಳನ್ನು ಪಾಲಿಸಿದರೆ ಸಾಕು ವರ್ಷವೀಡಿ ಸುಂದರವಾದ ಗಾರ್ಡನ್‌ನನ್ನು ಅಸ್ವಾದಿಸಬಹದು. ಮಾನ್ಸೂನ್ ಮರ ಗಿಡಗಳನ್ನು ನೆಡಲು ಅತ್ಯಂತ ಉತ್ತಮವಾದ ಕಾಲ. ಹೆಚ್ಚಿನ ತೇವಾಂಶ, ಮೋಡ ಹಾಗೂ ಮಳೆಯಿಂದ ಹೊಸದಾಗಿ ನೆಟ್ಟ ಗಿಡಗಳು ಸುಲಭವಾಗಿ ಚಿಗುರುತ್ತವೆ. ಎಲ್ಲಾ ರೀತಿಯ ಮರಗಿಡಗಳನ್ನು ನೆಡಲು ಮಳೆಗಾಲ ಅತಿ ಸೂಕ್ತವಾದ ಸಮಯ. ಈ ಕಾಲದಲ್ಲಿ ಗಿಡ-ಮರಗಳನ್ನು ನೆಡುವುದರಿಂದ ಕೆಲಸ ಹಾಗೂ ಗಿಡಗಳ ನಿರ್ವಹಣೆ ಎರಡೂ ಕಡಿಮೆಯಾಗುತ್ತದೆ. ಆದರೆ ನೀರು ಸರಿಯಾಗಿ ಬೇರಿನ ಮೂಲವನ್ನು ತಲುಪಿ, ಬೇರುಗಳನ್ನು ಸಂಪೂರ್ಣವಾಗಿ ಹೈಡ್ರೇಟು ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾಟ್‌ಗಳಲ್ಲಿ ಗಿಡಗಳನ್ನು ನೆಡುವ ಮೊದಲು ಹೂವಿನ ಕುಂಡಗಳಿಗೆ ನೀರು ಸೋರಿ ಹೋಗುವಷ್ಟೂ ನೀರು ಹಾಕಿ ಪರೀಕ್ಷಿಸಿ. ಕೈ ತೋಟ ಅಥವಾ ಕಾಪೌಂಡ್‌ನಲ್ಲಿ ಉತ್ತಮವಾದ ಚರಂಡಿ ವ್ಯವಸ್ಥೆ ಅಗತ್ಯ. ನಿಮ್ಮ ಗಾರ್ಡನ್‌ನ ನೀರಿನ ಹರಿಯುವಿಕೆಯನ್ನು ಪರೀಕ್ಷಿಸಿ. ಗಿಡ-ಮರಗಳ ಬುಡಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ಹರಿಯದೆ ನಿಂತ ನೀರಿನಿಂದ ಗಿಡಗಳು ಸುಲಭವಾಗಿ ಕೊಳೆಯುತ್ತವೆ. ಹಾಗೂ ಹಾಗೆ ನೀರು ನಿಂತ ಸ್ಥಳಗಳು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಡುತ್ತವೆ. ಗಿಡದ ಕೆಳಗೆ ಬೀಳುವ ಹಳದಿ ಎಲೆಗಳನ್ನೆಲ್ಲಾ ಗಿಡದ ಸುತ್ತ ಹರಡಿ ಅದರ ಮೇಲೆ ಒಂದು ಪದರ ಮಣ್ಣು ಮುಚ್ಚಿ. ಇದು ಒಳ್ಳೆ ಕಾಂಪೋಸ್ಟ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಎರೆಹುಳಗಳನ್ನು ಪ್ರೋತ್ಸಾಹಿಸಿ. ಇದು ನಿಮ್ಮ ಸಾಕಷ್ಟು ಕೆಲಸವನ್ನು ಕಡಿಮೆ ಮಾಡುವುದರ ಜೊತೆಗೆ ಗಿಡಗಳಿಗೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಮಳೆಗಾಲದಲ್ಲಿ ಮರ-ಗಿಡಗಳಿಗೆ ಕೀಟಗಳ ಹಾವಳಿ ಹೆಚ್ಚು. ಯಾವುದೇ ರೀತಿಯ ಕೀಟನಾಶಕಗಳ ಸಿಂಪಡಣೆ, ಮಳೆಯಿಂದ ಹೆಚ್ಚು ಪರಿಣಾಮಕಾರಿಯಾಗದು ಹಾಗೂ ಸಿಂಪಡಿಸಿದ ಕೀಟನಾಶಕವು ಮಳೆ ನೀರಿನ ಮೂಲಕ ಇಡಿ ತೋಟದಲ್ಲಿ ಹರಡುತ್ತದೆ. ಹೂದೋಟಗಳಲ್ಲಿ ಕಾಣಿಸಿಕೊಳ್ಳುವ ಜೇಡ, ಕಪ್ಪೆ, ಇರುವೆಗಳನ್ನು ನಾಶಮಾಡಬೇಡಿ. ಇವುಗಳು ಕೀಟಗಳ ಉಪದ್ರವ ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ. ಹಾಗೇ ಮಳೆಗಾಲದಲ್ಲಿ ನೆದುವ ಗಿಡಗಳ ಅಯ್ಕೆ ಕೂಡ ಮುಖ್ಯ. ಗುಲಾಬಿ, ದಾಸವಾಳ, ಮಲ್ಲಿಗೆ, ಡೇರೆ, ಲಿಲ್ಲಿ, ಗ್ಲಾಡಿಯೊಲಸ್‌ಗಳನ್ನು ಅಯ್ದು ಕೊಳ್ಳಬಹುದು. ಹಾಗೆ ಜೀನಿಯಾ, ಚೆಂಡು ಹೂವು, ಕಾಕ್ಸ್ ಕುಂಬ್‌ಗಳ ಗೂವಿನ ಜೀಜ ಹಾಕಲು ಮಳೆಗಾಲ ಅತಿಯಾಗಿ ಹೊಂದುವ ಸಮಯ. ಆದರೆ ಹೂವಿನ ಬೀಜಗಳು ನೀರಿನಲ್ಲಿ ಕೊಚ್ಚಿಹೋಗದ ಹಾಗೆ ಕಾಳಜಿ ವಹಿಸಿ. ಇನ್ನೂ ಮಾವು, ಸೇಬು, ಕಿತ್ತಳೆ, ಮುಸುಂಬಿ, ನಿಂಬೆ ಮುಂತಾದ ಹಣ್ಣಿನ ಗಿಡಗಳನ್ನೂ ಸಹ ನೆಡಬಹುದು. ಇವುಗಳೊಂದಿಗೆ ಸೌತೆಕಾಯಿ, ಬೀನ್ಸ್‌ಗಳಂತಹ ತರಕಾರಿಗಳನ್ನು ಬೆಳೆಯಲು ಆರಿಸಿಕೊಳ್ಳಬಹುದು. ಮಳೆಗಾಲಕ್ಕೆ ಸೂಕ್ತವಾದ ಗಿಡ ಮರಗಳ ಬಗ್ಗೆ ತಙ್ಞರಿಂದ ಮಾಹಿತಿ ಪಡೆಯಿರಿ. ಮಳೆಗಾಲವು ಹೊಸ ಮರ-ಗಿಡಗಳನ್ನು ನೆಡೆವುದರ ಜೊತೆಗೆ , ಹೂದೋಟದ ಹಳೆ ಗಿಡಗಳ ಆರೈಕೆಗೂ ಅತ್ಯಂತ ಪ್ರಶಸ್ತ ಸಮಯ. ದಾಸವಾಳ, ಗುಲಾಬಿ, ಮಲ್ಲಿಗೆ ಮುತಾಂದ ಗಿಡಗಳ ಕೊಂಬೆಗಳನ್ನು ಕತ್ತರಿಸಿ, ಟ್ರೀಮ್ ಮಾಡಿ. ಮರ-ಗಿಡಗಳ ಬುಡದ ಮಣ್ಣನ್ನು ಕೊಚ್ಚಿ, ಗೊಬ್ಬರ ನೀಡಿ. ನಂತರ ಅದರ ಮೇಲೆ ಮಣ್ಣು ಹರಡಿ. ಇಲ್ಲವೇ ಮರ ಗಿಡಗಳ ಹಳೆಯ ಎಲೆಗಳನ್ನು ಹಾಕಿ ಮಣ್ಣು ಮುಚ್ಚಿ. ಇದು ಗಿಡಗಳಿಗೆ ಉತ್ತಮ ಪೋಷಕಾಂಶವನ್ನು ಒದಗಿಸಿ ಬೆಳವಣಿಗೆ ಸಹಾಯವಾಗುತ್ತದೆ. ಪಾಟ್‌ಗಳಲ್ಲಿರುವ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಹೊಸ ಮಣ್ಣು ಗೊಬ್ಬರ ಹಾಕಿ ರೀ-ಪಾಟ್ ಮಾಡಿ. ಮನೆಯ ಒಳಗೆ ಇರಿಸಿದ ಪಾಠ್‌ಗಳನ್ನು ಮಳೆಯಲ್ಲಿ ಸ್ಪಲ್ಲ ಕಾಲ ಇಡಿ. ಗಿಡಗಳ ಬೆಳವಣಿಗೆ ಹೆಚ್ಚು ಉಪಯುಕ್ತ. ಇದರಿಂದ ಗಿಡಗಳು ಸ್ವಾಭಾವಿಕವಾಗಿ ನೀರು ಪಡೆಯುತ್ತವೆ. ಸರಳವಾದ ಟಿಪ್‌ಗಳೊಂದಿಗೆ ಈ ಮಳೆಗಾಲದಲ್ಲಿ ಗಾರ್ಡನಿಂಗ್‌ ಅನ್ನೂ ಎಂಜಾಯಿ ಮಾಡಿ ಹಾಗೂ ನಿಮ್ಮ ಕನಸಿನ ಹೂದೋಟ ಪಡೆಯಿರಿ. (ಜೂನ್ 28 2011ರ ಕನ್ನಡ ಪ್ರಭ ಪತ್ರಿಕೆಗಾಗಿ ಬರೆದ ಬರಹ.)

ಬುಕ್ ಸ್ಟ್ಯಾಂಡ್‌









ಒಂದು ಬುಕ್ ಸ್ಟ್ಯಾಂಡ್‌ ಇಲ್ಲದ ಮನೆ ಪರಿಪೂರ್ಣ ಅನ್ನಿಸುವುದ್ದಿಲ್ಲ. ಬುಕ್ ಸ್ಟ್ಯಾಂಡ್‌ನ ಹೊರತಾಗಿ, ನಮ್ಮ ಪುಸ್ತಕಗಳು ನೆಲ, ಹಾಸಿಗೆ , ಟೇಬಲ್, ಅಲ್ಲಿ ಇಲ್ಲಿ ಎಲ್ಲಾ ಕಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಬುಕ್ ಶೆಲ್ಫ್‌ಗಳು ಅಥವಾ ಬುಕ್ ಸ್ಟ್ಯಾಂಡ್‌ಗಳು ನಮ್ಮ ಪುಸ್ತಕಗಳು, ಮ್ಯಾಗಜೀನ್‌ಗಳನ್ನು ವ್ಯವಸ್ಥಿತವಾಗಿ ಮತ್ತು ಕಣ್ಣಿಗೆ ಮುದ ನೀಡುವ ಹಾಗೆ ಜೋಡಿಸಿಡಲು ಸುಲಭವಾಗಿ ಅವಕಾಶ ನೀಡುತ್ತದೆ. ಇವುಗಳು ನಮ್ಮ ಮನೆಯಲ್ಲಿ ಕಾರ್ಯರೂಪಕ ಹಾಗೂ ಅಲಂಕಾರಿಕ ಅಂಶಗಳಾಗಿ ಸಹ ಸೇವೆ ಸಲ್ಲಿಸುತ್ತವೆ. ಒಂದು ಸರಿಯಾಗಿ ಸಜ್ಜುಗೊಳಿಸಿದ ಬುಕ್ ಕೇಸ್ ಮನೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಬುಕ್‍ ಸ್ಟ್ಯಾಂಡ್‌ಗಳು ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವಲ್ಲಿ ಮುಖ್ಯ ಪಾತ್ರವಹಿಸುವುದ್ದಲ್ಲದೇ, ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಕ್ಕಳ ಕೋಣೆಯಲ್ಲಿ ಬುಕ್‌ ಸ್ಟ್ಯಾಂಡ್‌ ಇರಿಸುವುದರಿಂದ ಅವರ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಇಡುವುದನ್ನು ತಪ್ಪಿಸುವುದಲ್ಲದೆ, ಅದು ಅವರಿಗೆ ವ್ಯವಸ್ಥಿತವಾಗಿರುವುದನ್ನು ಸಹ ಕಲಿಸುತ್ತದೆ. ಪುಸ್ತಕಗಳು ಅತಿ ಅಮೂಲ್ಯವಾದವು, ಮತ್ತು ಮಕ್ಕಳು ಅವುಗಳನ್ನು ಪುಸ್ತಕದ ಸ್ಟ್ಯಾಂಡ್‌ಗಳಲ್ಲಿ ಇಡುವುದನ್ನು ಒಮ್ಮೆ ರೂಡಿಸಿ ಕೊಂಡರೆ, ಆ ಅಭ್ಯಾಸವನ್ನು ಅವರ ಮುಂದಿನ ಜೀವನದಲ್ಲೂ ಸಹಾಯವಾಗುತ್ತದೆ. ಮಾರುಕಟ್ಟೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ವಿನ್ಯಾಸದ ಬುಕ್‌ ಸ್ಟ್ಯಾಂಡ್‌ಗಳು ದೊರೆಯುತ್ತದೆ. ನಿಮ್ಮ ಮಕ್ಕಳಿಗಾಗಿ ಗೋಡೆಗೆ ಬುಕ್‌ ಸ್ಟ್ಯಾಂಡ್‌ ಅನ್ನು ಅಳವಡಿಸುವುದಾದರೆ, ಅತಿ ಎತ್ತರದಲ್ಲಿರದಂತೆ ನೋಡಿಕೊಳ್ಳಿ. ಮಗುವಿನ ಕೈಗೆ ಸಿಗುವ ಹಾಗೆ ಇದ್ದರೆ ಒಳ್ಳೆಯದು. ಮಕ್ಕಳು ತುಂಬಾ ಸಣ್ಣವರಾಗಿದ್ದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೆಲದ ಮೇಲಿಡುವ ಬುಕ್ ಸ್ಟ್ಯಾಂಡ್‌ಗಳು ಉತ್ತಮ. ಈಗ ಈ ಬುಕ್ ಸ್ಟ್ಯಾಂಡ್‌, ಬುಕ್ ಶೆಲ್ಫ್ ಅಥವಾ ಬುಕ್‌ ಸ್ಟ್ಯಾಂಡ್‌ಗಳು ಬರಿ ಮರಕ್ಕೆ ಸೀಮಿತವಾಗಿರತ್ತದೆ. ಹಲವು ಮೂಲವಸ್ತುಗಳಲ್ಲಿ ಲಭ್ಯವಿದೆ. ಗ್ಲಾಸು, ಹಲವು ಬಗೆಯ ಮೆಟಲ್‌ಗಳು ಹಾಗೂ ಮರಗಳಿಂದ ತಯಾರಾದ ಬುಕ್‌ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುವ ಮೂಲಕ ಮರದ ಸಾಂಪ್ರದಾಯಿಕ ಬುಕ್‌ ಸ್ಟ್ಯಾಂಡ್‌ಗಳ ಪರಿಕಲ್ಪನೆಯನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು. ಆದರೆ ಮರದ ಬುಕ್ ಸ್ಟ್ಯಾಂಡ್‌ಗಳು ಯಾವುದೇ ಗೃಹಾಲಂಕರಣಕ್ಕೆ ಹೊಂದುತ್ತವೆ. ಇವುಗಳು ವಿಧ ವಿಧವಾದ ಮರ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಈ ಮರದ ಸ್ಟ್ಯಾಂಡ್‌ಗಳು ವಿವಿಧ ವಿನ್ಯಾಸ ಹಾಗೂ ಹಲವು ಗಾತ್ರಗಳಲ್ಲಿ ಲಭ್ಯ. ವಿನ್ಯಾಸವು ಒಂದರಿಂದ ಒಂದಕ್ಕೆ ಭಿನ್ನವಾಗಿರುತ್ತವೆ. ಪುಸ್ತಕದ ಸ್ಟ್ಯಾಂಡ್‌ಗಳನ್ನು ಬೆಲೆಬಾಳುವ ಮರಗಳಾದ ಬೀಟೆ, ಸಾಗವಾನಿ, ತೇಗ ಇತ್ಯಾದಿಗಳಲ್ಲಿ ಸಹ ಮಾಡಲಾಗುತ್ತದೆ. ಪುಸ್ತಕಗಳು, ಮ್ಯಾಗಜೀನ್‌ಗಳು, ಪೇಪರ್‌‍ಗಳ ಸಂಗ್ರಹಣೆಯ ಗಾತ್ರದ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಒಳಾಂಗಣಕ್ಕೆ ಹೊಂದುವ ಹಾಗೆ ನೀವು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ಗಳ ವಿನ್ಯಾಸ ಮತ್ತು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ïಗಳ ಮೂಲವಸ್ತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬುಕ್‌ ಸ್ಟ್ಯಾಂಡ್ ಅನ್ನು ಮಾಡಿಸುವಾಗ ಅಥವಾ ಕೊಳ್ಳುವಾಗ ಯಾವ ರೀತಿಯದು ನಿಮಗೆ ಅತ್ಯಂತ ಉಪಯುಕ್ತ ಎಂಬುದನ್ನು ಗಮನಹರಿಸುವುದು ಸೂಕ್ತ. ಹಾಗೂ ಹಲವು ಅಂಶಗಳನ್ನು ಗಮನದಲ್ಲಿರಿಸಿ ಕೊಳ್ಳುವುದು ಕೂಡ ಅವಶ್ಯಕ. ತಮ್ಮ ಮನೆಯ ಅಂದಕ್ಕೆ ಹೆಚ್ಚು ಒತ್ತು ಕೊಡುವರು ಕೆತ್ತನೆಗಳನ್ನು ಹೊಂದಿದ ಅಲಂಕಾರಿಕ ಬುಕ್‌ ಸ್ಟ್ಯಾಂಡ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು. ಹಾಗೆಯೇ ಉದ್ದನೆಯ, ಮೂಲೆಯ ಬುಕ್ ಸ್ಟ್ಯಾಂಡ್‌ಗಳು ಅಥವಾ ಬಿಲ್ಟ್-ಇನ್ ಬುಕ್ ಸ್ಟ್ಯಾಂಡ್ ಕಡಿಮೆ ಜಾಗಯಿರುವ ಮನೆಗಳಿಗೆ ಸೂಕ್ತವಾಗಿ ಹೊಂದುತ್ತದೆ. ಗೋಡೆ ಅಥವಾ ಯಾವುದೇ ವಸ್ತುವಿನಲ್ಲಿ ಆಡಕವಾಗಿರುವ (ಬಿಲ್ಟ್-ಇನ್) ಬುಕ್ ಶೆಲ್ಫ್‌ಗಳು ಅತಿ ಹೆಚ್ಚು ಸ್ಥಳ ಉಳಿತಾಯಕವಾಗಿ ಕೆಲಸ ಮಾಡುತ್ತದೆ. ಈ ರೀತಿಯ ಬುಕ್ ಶೆಲ್ಫ್‌ಗಳು ಕಡಿಮೆ ಸ್ಥಳವನ್ನು ಆಕ್ರಮಿಸಿಕೊಳ್ಳುವುದರಿಂದ ಕಡಿಮೆ ಸ್ಥಳವನ್ನು ಹೊಂದಿರುವ ವಾಸಸ್ಥಳಗಳಿಗೆ ಹೊಂದುತ್ತದೆ. ಇವು ಶೇಖರಣಾ ಸ್ಥಳವನ್ನು ಉಳಿಸುವುದರೊಂದಿಗೆ ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಬಿಲ್ಟ್-ಇನ್ ಬುಕ್ ಕೇಸ್‌ಗಳು ಲಭ್ಯವಿವೆ. ತೆರೆದ ಬುಕ್ ಸ್ಟ್ಯಾಂಡ್‌ಗಳನ್ನು ಕರ್ಟನ್ ಬಳಸಿ ಅಥವಾ ಬಾಗಿಲುಗಳನ್ನು ಅಳವಡಿಸಿ ಮುಚ್ಚಲು ಸಾಧ್ಯ. ಹಾಗೆ ಬಾಗಿಲಿರುವ ಬುಕ್ ಸ್ಟ್ಯಾಂಡ್ ಅಥವಾ ಶೆಲ್ಫ್‌ಗಳಲ್ಲಿ ಪುಸ್ತಕಗಳ ಮೇಲೆ ಧೂಳು ಕೂರುವ ಸಂಭವ ಕಡಿಮೆ ಹಾಗೂ ಇದು ಪುಸ್ತಕದ ಸುರಕ್ಷತೆಯ ದೃಷ್ಟಿಯಿಂದ ಸಹ ಅತಿ ಹೆಚ್ಚು ಸಹಕಾರಿ. ನಿಮ್ಮ ಮನೆಯಲ್ಲಿ ಒಳ್ಳೆಯ ಬುಕ್ ಸೇಲ್ಫ್‌ ಅನ್ನು ಹೊಂದಲು ನೀವು ಹೆಚ್ಚು ಹಣವನ್ನು ಖರ್ಚುಮಾಡುವ ಅವಶ್ಯಕತೆಯೇನು ಇಲ್ಲ. ನಿಮ್ಮ ಮನೆಯಲ್ಲಿ ಖಾಲಿ ಗೋಡೆ ಇದ್ದರೆ ಸಾಕು. ಕೆಲವು ಅರೆಗಳನ್ನು ಜೋಡಿಸುವುದಷ್ಟೇ ನೀವು ಮಾಡ ಬೇಕಾಗಿರುವುದು. ಎಷ್ಟು ಅರೆಗಳು ಬೇಕು ಎಂಬುದು ನಿಮ್ಮ ಮನೆಯ ಗೋಡೆಯ ಸ್ಥಳಾವಕಾಶ ಮತ್ತು ನೀವು ಹೊಂದಿರುವ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ. * ಮೊದಲಿಗೆ ನಿಮ್ಮ ಪುಸ್ತಕಗಳನ್ನು ಗಾತ್ರಗಳಿಗೆ ಅನುಗುಣವಾಗಿ ಜೋಡಿಸಿ ಕೊಳ್ಳಿ, ಇದರಿಂದ ಅರೆಗಳ ನಡುವೆ ಇರ ಬೇಕಾದ ಅಂತರ ತಿಳಿಯಲು ಸಹಾಯವಾಗುತ್ತದೆ. *ನೆಲದಿಂದ ಎಷ್ಟು ಎತ್ತರದಲ್ಲಿ ಕೊನೆಯ ಅರೆ ಇರಬೇಕು ಎಂಬುದನ್ನು ಅಳತೆ ಮಾಡಿಕೊಳ್ಳಿ. * ಪ್ರತಿ ಅರೆಯಲ್ಲಿಡುವ ಅತಿ ದೊಡ್ಡ ಪುಸ್ತಕವನ್ನು ಅಳತೆ ಮಾಡಿ ಕೊಳ್ಳಿ, ಅದಕ್ಕಿಂತ ಮೂರು ಇಂಚು ಹೆಚ್ಚು ಸ್ಥಳವನ್ನು ಅರೆಗಳ ನಡುವೆ ಬಿಡಿ. ಪುಸ್ತಕಗಳನ್ನು ತೆಗೆಯಲು ಸುಲಭವಾಗುತ್ತದೆ. * ಗೋಡೆಗೆ ಜೋಡಿಸಿದ ಅರೆಗಳು ಸ್ಥಿರವಾಗಿದೆ ಎಂದು ಖಚಿತ ಪಡಿಸಿ ಕೊಳ್ಳಿ ಹಾಗೂ ನೀವು ಬಯಸಿದಲ್ಲಿ ಬಣ್ಣ ಹಚ್ಚಿ, ಬುಕ್ ಸ್ಟ್ಯಾಂಡ್‌ಗಳನ್ನು ಅಂದಗೊಳಿಸಿಕೊಳ್ಳಿ. ಈ ಸರಳವಾದ ಅಂಶಗಳನ್ನು ಅನುಸರಿಸಿ ಕಡಿಮೆ ಖರ್ಚಿನಲ್ಲಿ ಪುಸ್ತಕದ ಸ್ಟ್ಯಾಂಡ್‌ನ್ನು ಹೊಂದಲು ಸಾಧ್ಯ. ಸುಂದರವಾದ ಬುಕ್‌ ಕೇಸ್‌ ಹೊಂದುವುದಷ್ಟಕ್ಕೆ ಮುಖ್ಯವಲ್ಲ, ಅದರಲ್ಲಿ ಕಲಾತ್ಮಕವಾಗಿ ಪುಸಕ್ತಗಳನ್ನು ಜೋಡಿಸುವುದು ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ಬುಕ್‌ ಸ್ಟ್ಯಾಂಡ್ ಎಂದರೆ ಕೇವಲ ವಸ್ತುಗಳ ಸಂಗ್ರಹಣೆಗೆ ಮಾತ್ರ ಸೀಮಿತ ಎಂದು ಯೋಚಿಸುತ್ತಾರೆ, ಎಲ್ಲಾ ರೀತಿಯ ವಸ್ತುಗಳನ್ನು ಸುಮ್ಮನೆ ಅದರಲ್ಲಿ ತುಂಬಿರುತ್ತಾರೆ. ಬುಕ್ ಸ್ಟ್ಯಾಂಡ್‌ಗಳಲ್ಲಿ ವ್ಯವಸ್ಥಿತವಾಗಿ ಪುಸ್ತಕ ಜೋಡಿಸಲು ಸ್ಪಲ್ಪ ಗಮನ ಹರಿಸಿದ್ದರೆ ಸಾಕು ಅದು ಸಹ ಮನೆಯ ಇತರ ಪಿಟೋಪಕರಣ ಹಾಗೆ ಮನೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬುಕ್‌ ಸ್ಟ್ಯಾಂಡ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪುಸ್ತಕಗಳನ್ನು ತುರುಕ ಬೇಡಿ. ಅಕರ್ಷಕವಾಗಿರದ ಹಳೆಯ ಪುಸ್ತಕಗಳನ್ನು ತೆರೆದ ಕಪಾಟುಗಳಲ್ಲಿ ಇಡ ಬೇಡಿ. ಪುಸ್ತಗಳನ್ನು ಲಂಬವಾಗಿ ಅಥವಾ ಅಡ್ಡವಾಗಿ, ಎಲ್ಲಾ ಪುಸ್ತಕಗಳು ಒಂದೇ ಕಡೆ ಮುಖಮಾಡಿರುವ ಹಾಗೆ ಜೋಡಿಸಿ. ಒಂದೇ ರೀತಿಯ, ಬಣ್ಣದ, ಗಾತ್ರದ ಪುಸ್ತಕಗಳನ್ನು ಒಟ್ಟಿಗೆ ಇರಿಸಿದ್ದಲ್ಲಿ ಹೆಚ್ಚು ಅಕರ್ಷಕವಾಗಿ ಕಾಣುತ್ತದೆ. ಲೇಖಕರು, ವಿಷಯ, ಶೀರ್ಷಿಕೆಗಳ ಪ್ರಕಾರವಾಗಿ ಪುಸ್ತಕಗಳನ್ನು ಜೋಡಿಸಿದಲ್ಲಿ ಉಪಯೋಗಕ್ಕೆ ಅನುಕೂಲವಾಗುವುದರ ಜೊತೆಗೆ ಮನಸ್ಸಿಗೆ ಸಹ ಮುದ ನೀಡುತ್ತದೆ. ನಿಮ್ಮ ಮನೆಯ ಆಕಾರ, ಗಾತ್ರ ಬಣ್ಣಗಳಿಗೆ ಸರಿಹೊಂದುವಂತಹ ವಿವಿಧ ಮೂಲವಸ್ತುಗಳ (ಮರ, ಕಬ್ಬಿಣ್ಣ, ಗಾಜು, ಇತ್ಯಾದಿ) ಪುಸ್ತಕದ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನಿಮ್ಮ ಅಭಿರುಚಿ, ಹಣಕಾಸು, ಮನೆಗೆ ಹೊಂದುವ ಹಾಗೆ ಬುಕ್ ಸ್ಟ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ರೀತಿಯ ವಿನ್ಯಾಸಗಳು ಹಾಗೂ ಮಾಹಿತಿಗಳು ಅಂತರ್ಜಾಲದಲ್ಲಿ ಧಾರಳವಾಗಿ ದೊರೆಯುತ್ತದೆ. (ಕನ್ನಡಪ್ರಭ ಪತ್ರಿಕೆಗಾಗಿ ಬರೆದ ಬರಹ. 2011 ರ ಜೂನ್ 21ರಂದು ಪ್ರಕಟವಾಗಿತ್ತು)