August 28, 2009

ಅರೋಗ್ಯಕ್ಕೆ ಹಿತಕರ ಈ ಹಾಳೆ ಟೋಪಿಗಳು

ಹಾಳೆ ಟೋಪಿ ಗ್ರಾಮೀಣ ಭಾಗದ ಜನರ ಉಡುಗೆ - ತೊಡುಗೆಗಳು ವಿಭಿನ್ನ ಹಾಗೂ ವಿಶಿಷ್ಟ. ಅಂತಹದೇ ಒಂದು ವಿಶಿಷ್ಠವಾದ ಗ್ರಾಮೀಣ ಭಾಗದ ಕೆಲಸಗಾರರ ತೊಡುಗೆ " ಅಡಿಕೆ ಹಾಳೆಯ ಟೋಪಿ". ಇದು ಬರೀ ವಿಭಿನ್ನವಷ್ಟೇ ಅಲ್ಲದೇ ಆರೋಗ್ಯಕ್ಕೆ ಹಿತಕರ ಹಾಗೂ ಪರಿಸರ ಪ್ರಿಯಾವಾದದ್ದು ಕೂಡ.
ಉತ್ತರ ಕನ್ನಡ, ಕುಂದಾಪುರ ಹಾಗೂ ಮಲೆನಾಡಿನ ಭಾಗದ ಹಳ್ಳಿಗಳ ಕೆಲೆಸಗಾರರ ತಲೆ ಮೇಲೆ ಈ ಟೋಪಿಗಳು ರಾರಜಿಸುವುದನ್ನು ನಾವು ಕಾಣಬಹುದು. ಅಡಿಕೆ ಹಾಳೆಯಿಂದ ತಯಾರಿಸುವ ಈ ಟೋಪಿಗಳನ್ನು 'ಹಾಳೆ ಟೋಪಿ' ಹಾಗೂ ಉತ್ತರಕನ್ನಡದವರು 'ಮಂಡೆ ಹಾಳೆ' ( ತಲೆ ಹಾಳೆ) ಎಂದು ಕರೆಯುತ್ತಾರೆ. ಉತ್ತರಕನ್ನಡದ ಶಿರಿಸಿ,ಗೋಕರ್ಣ, ಹೊನ್ನಾವರ, ಸಿದ್ದಾಪುರ ಹಗೂ ಕುಂದಾಪುರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಹಾಗೂ ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ನಗರ, ಸಾಗರದಲ್ಲಿ ಇದರ ಬಳಕೆ ಸವರ್ೇಸಾಮಾನ್ಯ. ಇದರ ಉಪಯೋಗ ಬಹಳ ಹಿಂದಿನ ಕಾಲದಿಂದಲೂ ಕಾಣಬಹುದಾಗಿದೆ. ಒಳ್ಳೆ ಒಣಗಿದ ಅಡಿಕೆ ಹಾಳೆಯನ್ನು ಅಯ್ದು ತಂದು, ಒಂದೆರೆಡು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಹಾಳೆ ಮೆದುವಾದ ನಂತರ, ಒಳಭಾಗದ ಒಂದು ಪದರವನ್ನು ತೆಗೆದು ಹಾಳೆಯನ್ನು ತೆಳುವಾಗಿಸಬೇಕು. ಸರಿಯಾದ ಅಳತೆಗೆ ಕತ್ತರಿಸಿ, ಎರಡು ತುದಿಯಲ್ಲಿ ನೆರೆಗೆ ತೆಗೆದು ಮಡುಚಿ ಹೊಲಿಯಬೇಕು. ಈಗ ಅಡಿಕೆ ಹಾಳೆಯ ಟೋಪಿ ಸಿದ್ದ. ಟೋಪಿಗಳನ್ನು ಸಂಪೂರ್ಣವಾಗಿ ಕೈಯಲ್ಲೇ ತಯಾರಿಸಲಾಗುವುದು. ಗೋಕರ್ಣ ಸುತ್ತಮುತ್ತ ಸ್ಥಳಿಯ ಜನರು ಈ ಹಾಳೆ ಟೋಪಿಗಳನ್ನು ತಯಾರಿಸುವುದರಲ್ಲಿ ನಿಪುಣರು. ಹೊಸ ಹಾಳೆ ಟೋಪಿ ಉಪಯೊಗಿಸುವ ಮುನ್ನ ಹರಳೇಣ್ಣೆ ಹಚ್ಚಿ ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ಅದ್ದಿ ತೆಗೆದು ನೆರಳಿನಲ್ಲಿ ಒಣಗಿಸುತ್ತಾರೆ. ಹೀಗೆ ಮಾಡುವುದರಿಂದ ಟೋಪಿಗಳು ಬೇಗ ಒಡೆದುಹೋಗುವುದಿಲ್ಲ ಹಾಗೂ ಧೀರ್ಘ ಕಾಲ ಬಾಳಕೆ ಬರುವುದು. ಈ ಟೋಪಿಗಳು ಸುಮಾರು ಎಂಟರಿಂದ ಹತ್ತು ತಿಂಗಳ ಕಾಲ ಬಾಳಿಕೆ ಬರುವುದು ಗ್ಯಾರಂಟಿ. ಇಲ್ಲಿ ಒಂದು ಟೋಪಿಯ ಬೆಲೆ 15-20 ರೂಪಾಯಿಗಳವರೆಗಿದೆ.
ಈ ಟೋಪಿಗಳನ್ನು ಮಾಡಲು ಯಾವುದೇ ಹಾನಿಕರ ವಸ್ತುವನ್ನು ಬಳಸುವುದಿಲ್ಲ ಹಾಗೂ ಅಡಿಕೆ ಹಾಳೆ ಮಾತ್ರ ಇದರಲ್ಲಿ ಬಳಸುರುವುದರಿಂದ ವಿಲೇವಾರಿಯು ಸುಲಭ. ಮಣ್ಣಿನಲ್ಲಿ ಬಹು ಬೇಗ ಕೊಳೆತು ಗೊಬ್ಬರವಾಗುವ ಇದು ಪರಿಸರ ಪ್ರಿಯ. ಇಷ್ಟೇ ಅಲ್ಲದೇ ಇದು ಅರೋಗ್ಯಕ್ಕೂ ಸಹ ಹಿತಕರ. ಬಿಸಿಲಿನಲ್ಲಿ ಕೆಲಸ ಮಾಡುವಾಗ ತಲೆ ತಂಪಾಗಿಡುತ್ತದೆ. ಇತರೆ ಟೋಪಿಗಳ ಹಾಗೇ ಒಳ ಭಾಗ ಬಿಸಿಯಾಗುವುದಿಲ್ಲ ಹಾಗೂ ಬೆವರುವುದಿಲ್ಲ. ಹಿಂದಿನವರು ಕಣ್ಣುರಿ,ತಲೆನೋವು ಮತ್ತು ಉಷ್ಣ ತಡೆಯಲು ತಲೆಗೆ ಹರಳೇಣ್ಣೆ ಹಚ್ಚಿಕೊಂಡು ಅದರ ಮೇಲೆ ಹರಳೇ ಗಿಡದ ಎಲೆಯನ್ನು ಇಟ್ಟುಕೊಂಡು ಈ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು.
ಅಡಿಕೆಹಾಳೆ ಟೋಪಿಗಳು ಹಳ್ಳಿಗಾಡಿಗಷ್ಟೆ ಸಿಮೀತವಾಗದೇ ನಗರದ ಫ್ಯಾಷನ್ ಜಗತ್ತನ್ನು ತಲುಪಿರುವುದು ಸಂತೋಷಕರ. ನಗರದ ಕಾಲೇಜುಗಳ ಫ್ಯಾಷನ್ ಷೋಗಳು ಹಾಗೂ ಎಥ್ನಿಕ್ ಡೇಗಳಂತಹ ಸಮಾರಂಭಗಳಲ್ಲಿ ಬಳಕೆಯಾಗುತ್ತಿದೆ. . ಇಲ್ಲಿ ಕೈ ಕಸೂತಿಯಿಂದ ಅಲಂಕೃತಗೊಂಡಂತಹ ಹಾಳೆ ಟೋಪಿಗಳು ಸಹ ಲಭ್ಯ.
ಅದರೆ ಹಳ್ಳಿಗಳಲ್ಲಿ ಯುವ ಪಿಳಗೆಯವರು ಇದನ್ನು ಬಳಸುವುದು ಕಡಿಮೆಯಾಗುತ್ತಿದೆ. ಬದಲಾಗಿ ಹೊಸ ಹೊಸ ಫ್ಯಾಷನ್ ಟೋಪಿಗಳಿಗೆ ಮಾರುಹೊಗುತ್ತಿದ್ದಾರೆ. ಹಾಗೂ ಇದನ್ನು ಮಾಡುವವರು ಕಡಿಮೆಯಾಗುತ್ತಿದ್ದಾರೆ. . ಈ ಟೋಪಿಗಳು ನಗರ ಕಂಡರೂ ಅಲ್ಲಿ ಇದರ ಬಳಕೆ ಸೀಮೀತವಾಗಿದೆ. ಗ್ರಾಮಿಣ ಭಾಗದಲ್ಲಿ ಸಹ ಇದು ಬರೀ ಕೆಲಸ ಮಾಡುವ ವರ್ಗದವರಿಗೆ ಮಾತ್ರ ಸಿಮೀತವಾಗಿರುವುದು ದುರಾದೃಷ್ಟಕರ ಸಂಗತಿ. ಪರಿಸರಕ್ಕೆ ಮಾರಕವಲ್ಲದ ಅರೋಗ್ಯಕ್ಕೆ ಹಿತಕರವಾದ ಅಡಿಕೆ ಹಾಳೆಯ ಟೋಪಿಗಳನ್ನು ನಾವುಗಳು ಬಳಸುವ ಬಗ್ಗೆ ಒಲವು ತೋರಿ ಬೇಕಾಗಿದೆ.

2 comments:

Unknown said...

nice.........
With photos could be more attractive...

ರಶ್ಮಿ ಕಾರ್ಗಲ್ said...

thanks.. i'll try to add photo..