July 19, 2013

ಸುಮ್ಮನೆ ಹಾಗೇ ಇಷ್ಟವಾದವರು.



 ದ್ವೇಷಿಸಲು ಕಾರಣ ಬೇಕು. ಆದೇ ಇಷ್ಟವಾಗಲೂ, ಪ್ರೀತಿ ಹುಟ್ಟಲು ಒಂದೇ ಒಂದು ಕಾರಣ ಕೂಡ ಬೇಡ.
ಕೆಲವರು ಹಾಗೇ ಸುಮ್ಮನೆ ಇಷ್ಟವಾಗಿ, ಅವರ ಮೇಲೆ ಪ್ರೀತಿ ಎಲ್ಲಿಂದಲೋ ಪ್ರೀತಿ ಹುಟ್ಟಿಕೊಂಡು ಬಿಡುತ್ತದೆ. ಕನಿಷ್ಟ ಅವರಿಂದ ಮರು ಪ್ರೀತಿಯನ್ನು ಅಪಕ್ಷೇಸಿದಷ್ಟೂ ಸುಮ್ಮನೆ ಇಷ್ಟವಾಗಿ ಬಿಡುತ್ತಾರೆ. ಅವರೇಲ್ಲಾ ತುಂಬಾ ಹತ್ತಿರದವರಾಗಿರ ಬೇಕೆಂದೂ ಇಲ್ಲ. ಅವರಲ್ಲಿ ಕೆಲವರನ್ನೂ ಒಂದು ಸಾರಿ ಭೇಟಿ ದೂರದ ಮಾತು, ನೇರವಾಗಿ ಮುಖ ಕೂಡ ನೋಡಿರುವುದಿಲ್ಲ. ಆದರೂ ಬದುಕಿಗೆ ಎಷ್ಟೊಂದು ಸಂತೋಷ ನೀಡಬಲ್ಲರು. ನನ್ನ ಜೀವನದ ಖಷಿ ಕ್ಷಣಗಳಿಗೆ ಅವರೆಲ್ಲಾ ಎಷ್ಟು ಕಾರಣರೋ ಅಷ್ಟೇ ಪಾಲುಗಾರರು ಕೂಡ.
ನಾನು ಪಿಯುಸಿ ಓದುವಾಗ ಹಾಸ್ಟೇಲ್‌ಮೇಟ್ ಆಗಿದ್ದ ಸುಂದರ ನಗುವಿನ ತಾನು ಹೋದಲ್ಲೇಲ್ಲಾ ಖುಷಿ ಹಂಚುವ ಲೈವ್ಲಿ ಹುಡುಗಿ. ನೋಡಿದ ಮೊದಲ ಕ್ಷಣದಿಂದಲೇ ಹಾಗೆ ಸುಮ್ಮನೆ ಇಷ್ಟವಾದವಳು.  ಅವಳಿಂದ ಒಂದೇ ಒಂದು ಪದದ ಮೆಸೇಜ್ ಸಹ ನನ್ನನ್ನು ದಿನ ಪೂರ್ತಿ ಖುಷಿಯಾಗಿಡಬಲ್ಲದು. ಇನ್ನೂ ನನ್ನ ಫ್ರೆಂಡ್ ಹೆಂಡತಿ  ನಮ್ಮಿಬ್ಬರ ನಡುವೆ ಫ್ರೆಂಡ್ಸ್, ಅಭಿರುಚಿ, ಆಸಕ್ತಿ ಯಾವುದೊಂದು ಸಹ ಕಾಮನ್ ಅಲ್ಲ. ಆದರೂ ಅವರು ಸುಮ್ಸುಮ್ಮನೆ ಇಷ್ಟವಾಗಿ ಬಿಟ್ಟಿದ್ದಾರೆ.
ನನ್ನ ಗಂಡನ   ದೂರದ ಸಂಬಂಧಿ ಹುಡುಗ. ವರ್ಷಕ್ಕೊಮ್ಮೆ ಅಲ್ಲಿ ಇಲ್ಲಿ ಫಂಕ್ಷನ್‌ಗಳಲ್ಲಿ ಐದೋಹತ್ತು ನಿಮಿಷ ಮಾತಿಗೆ ಸಿಗುವ ಇವನು, ಮುಂದಿನ ಭೇಟಿಗಾಗುವಷ್ಟು ಪ್ರೀತಿ ಹಂಚಿ ಮುಂದಿನ ಭೇಟಿಗೆ ಕಾಯುವಂತೆ ಮಾಡುತ್ತಾನೆ. ನಮ್ಮ ತೋಟ ಖರೀದಿಸಿದ ಗೌಡರ ಸೆನ್ಸಿಬಲ್ ಹೆಂಡತಿ ನನ್ನ ಅತಿ ಪ್ರೀತಿಯ ಅಂಟಿ. ನೋಡಿದ್ದು ಒಂದೇ ಸಾರಿಯಾದರೂ ಸಡನ್‌ ಆಗಿ ಯಾವುದೋ ಒಂದು ಹೊತ್ತಿನಲ್ಲಿ ಅವರನ್ನು ನೋಡಬೇಕು ಅನಿಸುವಷ್ಟು ಇಷ್ಟ. ಇನ್ನೊಬ್ಬರಂತೂ  ಯಾವುದೋ ಜನ್ಮದ ಗೆಳತಿ ಅನ್ನುವಷ್ಟು ಪ್ರಿಯವಾಗಿದ್ದಾರೆ. ನೋಡಿಲ್ಲ, ಮಾತಾಡಿಲ್ಲ, ಆದರೆ ನಾವಿಬ್ಬರ ಒಂದೇ ದಾಟಿಯ ಯೋಚನೆ, ವೀ ಅರ್ ಸೋ ಅಲೈಕ್ ಅನಿಸುವಂತೆ ಮಾಡಿದೆ.
 ನಿರ್ದಿಷ್ಟವಾದ ಕಾರಣವಿಲ್ಲದೆ ಸುಮ್ಮನೆ ಇಷ್ಟವಾಗಿ ನನ್ನ ಬದುಕನ್ನು ಮತ್ತಷ್ಟೂ ಸುಂದರಗೊಳಿಸಿದವರು ಇವರೆಲ್ಲಾ. ನೆನೆಪು ತುಟಿಯಂಚಿನಲ್ಲಿ ನಗು ಮೂಡಿಸುತ್ತದೆ. ಆಗಾಗ ಮಿಸ್ ಕೂಡ ಮಾಡಿಕೊಳುತ್ತೇನೆ. ಸುಮ್ಸುಮ್ಮನೆ ಇಷ್ಟವಾಗುವ ಇವರೆಲ್ಲಾ ನನ್ನ ಬದುಕಲ್ಲಿರುವಾಗ, ಪ್ರೀತಿ ಹಂಚೋಕೆ ಟೈಮ್ ಸಾಕಗಲ್ಲ.. ಇನ್ನೂ ದ್ವೇಷಕ್ಕೆಲ್ಲಿದೆ ಸಮಯ?

July 18, 2013

ಮಗಳೇ ನಿನಗಾಗಿ..



ನಟಿ ಶ್ರೀದೇವಿ ತನ್ನ ಮಗಳನ್ನು ಬಿಡಲು ನಿತ್ಯ ಶಾಲೆಗೆ ಹೋಗುತ್ತಿದ್ದಳಂತೆ. ಆ  ಶಾಲೆಯ ಇತರ ಮಕ್ಕಳ ತಾಯಂದಿರು ಯಮ್ಮಿ ಮಮ್ಮಿ ಶ್ರೀದೇವಿಯಿಂದ ಪ್ರೇರಪಿತರಾಗಿ ಬ್ಯೂಟಿಪಾರ್ಲರ್ ಮತ್ತು ಜಿಮ್‌ಗೆ ಮುಗ್ಗಿ ಬೀಳುತ್ತಿದ್ದರಂತೆ ಎಂದು ಬಹಳ ಹಿಂದೆ ಯಾವುದೊ ಒಂದು ಮ್ಯಾಗಜೀನ್‌ನಲ್ಲಿ ಓದಿದ ನೆನಪು. ಈ ಹಳೆ ಕಥೆ ಈಗ ಮತ್ತೆ ನೆನಪಾಗಲು ಕಾರಣ ನನ್ನ  ಮಗಳ ಸ್ಕೂಲ್‌ಗೆ ಬರುವ ಯಾವುದೇ ಸೆಲೆಬ್ರೆಟಿ  ಮಮ್ಮಿ ಅಲ್ಲ, ನೇರವಾಗಿ ನನ್ನ ಮಗಳೇ.  ಪ್ರಾರಂಭದಲ್ಲಿ ಅವಳ ಸ್ಕೂಲ್‌ನ ಪೆರೆಂಟ್ಸ್ ಮೀಟಿಂಗ್ ಅಥವಾ ಇನ್ಯಾವುದೋ ಫಂಕ್ಷನ್‌ಗೆ ಬರುವ ಅವಳ ಫ್ರೆಂಡ್ಸ್‌ನ ಅಮ್ಮಂದಿರ ಬಗ್ಗೆ  ಅಮ್ಮ  ದಿಶಾನ ಅಮ್ಮ ಎಷ್ಟು ಚೆನ್ನಾಗಿದ್ದಾರೆ, ಆಯೇಷಾನ ಅಮ್ಮ ಯಾಕಮ್ಮ ಅಷ್ಟು ತೆಳ್ಳಗಿದ್ದಾರೆ ಅಂದರೆ ಇನ್ನೊಬ್ಬರ ಅಮ್ಮ ಜೀನ್ಸ್ ಪ್ಯಾಂಟ್ ಹಾಕ್ತಾರೆ ಅಂತ ಹೇಳುತ್ತಿದ್ದಳು. ಆಗಾಗ ಅಮ್ಮ ನೀನು ಡುಮ್ಮಿ ಆಗ್ತಾ ಇದ್ದೀಯಾ ಅಂತ ರಾಗ ಎಳೆಯುತ್ತಿದ್ದವಳು, ಸ್ಪಲ್ಪ ದಿನ ಕಳೆದ ಹಾಗೇ ಅಮ್ಮ ನೀನು  ಇವತ್ತು ವಾಕ್ ಹೋಗಲ್ವಾ ಅಂತ ದಿನ  ಎನ್‌ಕೈವರಿ ಶುರುಮಾಡಿದ್ದಳು. ಅಮ್ಮ ನಿನ್ನ ಹೊಟ್ಟೆ ಯಾಕೆ ಇಷ್ಟು ದಪ್ಪ? ನೀನ್ಯಾಕೆ ಜೀನ್ಸ್ ಪ್ಯಾಂಟ್ ಹಾಕಲ್ಲ? ನೀನು ಅವರ ಅಮ್ಮನ ತರ ತೆಳ್ಳಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಮ್ಯಾಮ್ ಹೇಳಿದ್ದಾರೆ ಯೋಗ ಮಾಡಿದ್ರರೆ ಸ್ಲಿಮ್ ಆಗುತ್ತಾರೆ, ನೀನು ಯಾಕೆ ಮಾಡಲ್ಲ? ಟಿವಿ ಮುಂದೆ ಕುತ್ಕೊಂಡು ಏನು ತಿನ್ನಬಾರದಂತೆ ಹೀಗೆ ದಿನ ಒಂದೊಂದು ಸ್ಕೂಲ್‌ನಲ್ಲಿ  ರೆಕಾರ್ಡ್‌ ಆದ ಫಿಟ್‌ನೆಸ್ ಪಾಠ ನೇರವಾಗಿ ನನ್ನ ಮುಂದೆ. ನನ್ನ ಸುತ್ತಳತೆ ಹೆಚ್ಚಾದಂತೆ ಅವಳ ರಗಳೆ ಕೂಡ. ಬೇರೆಯವರಿಗೆ ಹೋಲಿಸಿದಾಗಲೇ ನಮ್ಮೊಳಗೆ ಬೆಂಕಿ ಹತ್ತಿಕೊಳ್ಳುವುದು.
ಕನ್ನಡಿ ಮುಂದೆ ಹತ್ತು ನಿಮಿಷ ನಿಂತು ನೋಡಿದೆ. ಅಸುಪಾಸು ನಲವತ್ತರ ಸೈಜಿನ ದೊಗಲೆ ಶೇಪ್‌ಲೆಸ್ ಚೂಡಿದಾರದಲ್ಲಿ ನಿಂತಿರುವ ನನ್ನ ಮೇಲೆ ನನಗೆ ಬೇಸರವಾಯಿತು. ವಾರ್ಡ್‌ರೋಬ್ ತೆಗೆದು ನೋಡಿದರೆ ಎಲ್ಲಾ ಅದೇ ಸೈಜಿನ ಡ್ರೆಸ್‌ಗಳು. ಕೊನೆ ಆರೆಯ ಮೂಲೆಯಿಂದ ಎರಡು ಸಾಲು ಮುಗ್ಗಲು ಹಿಡಿದ  ಕುರ್ತಾಗಳು, ಅಡಿಯಲ್ಲಿಟ್ಟ ನನ್ನ ಹಳೆಯ ಎರಡು ಜೀನ್ಸ್ ಪ್ಯಾಂಟ್‍‌ಗಳನ್ನು ನೋಡಿ ದು:ಖವಾಯಿತು. ಅವೆಲ್ಲಾ ಈಗ ಹಾಕುವ ಡ್ರೆಸ್‌ಗಳ ಅರ್ಧ ಸೈಜಿನವು. ಹಳೆ ಫೋಟೊಗಳನ್ನು ನೋಡ್ದೆ. ತೀರಾ ಸಣಕಲು ಕಡ್ಡಿಯಲ್ಲದ್ದಿದ್ದರು, ಸುಮಾರು ಸಪೂರಾ ಇದ್ದೆ ಎಂಬುದು ಸ್ಪಷ್ಟವಾಗಿ ಅರಿವಾಯಿತು. ತಕ್ಷಣ ನಿರ್ಧರಿಸಿದೆ.  ಮಗಳಿಗೊಸ್ಕರವಾದರು  ಹೊಟ್ಟೆ ಕರಗಿಸ ಬೇಕು, ಸೊಂಟದ ಸುತ್ತಳತ್ತೆ ಕಮ್ಮಿ ಮಾಡಿಕೊಳ್ಳಲೇಬೇಕು ಎಂದು.
ಹಾಕಲಾಗದೆ ತಳ ಸೇರಿರುವ ಕುರ್ತಾಗಳಿಗೆ ಪ್ರಾಮಿಸ್ ಮಾಡಿದ್ದೇನೆ ಮಳೆಗಾಲ ಕಳೆದ ಮೇಲೆ ಒಗೆದು ಅವುಗಳಿಗೆ ಮತ್ತೆ ಮೇಲಿನ ಅರೆಯಲ್ಲಿ ಜಾಗ ಕೊಡುತ್ತೇನೆ ಅಂತ. ಇನ್ನೂ ಮುಂದೆ  ಖಂಡಿತವಾಗಲೂ ಮಗಳು ತಟ್ಟೆಯಲ್ಲಿ ಹೊಟ್ಟೆಗೆ ಹೊಟ್ಟೆಗೆ ತುಂಬಿಕೊಳ್ಳಲ್ಲ, ಅವಳು ಲೇಸ್ ಚಿಪ್ಸ್ ತಿನ್ನುವಾಗ ಬೇಡಲ್ಲಅವಳು ಸ್ಕೂಲ್‌ಗೆ ಹೋದ ಮೇಲೆ ಚಾಕೊಲೇಟ್ ಕದ್ದ್ದು ತಿನ್ನಲ್ಲ. ನಾನೂ ಯಮ್ಮಿ ಮಮ್ಮಿ ಆಗುವ ಕಸರತ್ತಿನಲ್ಲಿ  ಗ್ರೀನ್ ಟೀ, ನೀರು, ಒಣ ಚಪಾತಿ, ಮೊಳಕೆ ಕಾಳು, ಹಸಿ ತರಕಾರಿಯಷ್ಟೇ ಮೆನು. ಜೊತೆಗೆ ಕನಿಷ್ಟ ಅರ್ಧ ಗಂಟೆಯಾದರು ವರ್ಕ್‌ಔಟ್. ಗೊತ್ತು ಈ ಅವೇಶ ಹೆಚ್ಚು ದಿನ ಉಳಿಯೋಲ್ಲ.  ಆಗಾಗ ರೋಟಿನ್ ತಪ್ಪುತ್ತೆ. ಆದರೂ... ಮುಂದುವರಿಸುತ್ತೇನೆ.

ಈ ಬಾರಿ ನನ್ನ ಮಗಳ ಫ್ರೆಂಡ್ಸ್‌ನ ಅಮ್ಮಂದಿರ ಜೊತೆ ಪೈಪೋಟಿ ಹಾಗಾಗಿ.

July 15, 2013

Making Life Interesting!


ಮನುಷ್ಯ ಜೀವನದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು ಅನ್ನುವ ಯಾರೋ ಹೇಳಿದ  ಮಾತು (ಹೇಳಿದಾರೋ ಇಲ್ವೊ ಗೊತ್ತಿಲ್ಲ!) ನಾನು ಬದುಕಿನಲ್ಲಿ ಅಳವಡಿಸಿಕೊಂಡ ಮತ್ತು ನಿರಂತರವಾಗಿ ಪಾಲಿಸುತ್ತಾ ಬಂದಿರುವ ಏಕೈಕ ವೇದ ವಾಕ್ಯ. ಆದರ ಕೊನೆ ಮುಟ್ಟುವುದೇನೂ  ನನ್ನ ಪಾಲಿಸಿಯಲ್ಲಿ ಒಳಪಟ್ಟಿಲ್ಲ ಅನ್ನುವುದನ್ನು ಮೊದಲೇ ಹೇಳುತ್ತೇನೆ ಹಾಗೂ ಮುಖ್ಯ ಅಂತ ಇಂದಿಗೂ ಅಂದುಕೊಂಡಿಲ್ಲ.
ಗ್ರಹಗಳ ಗತಿಗಳು ಬದಲಾಗಿ ಹೇಗೆ ತಪ್ಪದೇ ತಿಂಗಳಿಗೊಮ್ಮೆ ಅಮವಾಸ್ಯೆ ಮತ್ತು ಹುಣ್ಣಿಮೆಗಳಾಗುತ್ತಾವೊ...  ಹಾಗೆ ನನಗೂ, ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುವ ಕಾಯಿಲೆ ಎಂದರೆ ಜೀವನದಲ್ಲಿ ಜಿಗುಪ್ಸೆ. ಇರುವುದನ್ನೇಲ್ಲಾ ಬಿಟ್ಟು ಓಡಿ ಹೋಗುವ ಅಲೋಚನೆ. ಆಗೇಲ್ಲಾ ನನಗೆ ಕಂಪ್ಯೂಟರ್‌ ಮತ್ತು ಮೊಬೈಲ್‌ನಲ್ಲಿರುವ ಡಿಲಿಟ್ ಅಪ್ಶನ್ ಬದುಕಿಗೂ ಅನ್ವಯವಾಗಿದ್ರೆ ಎಷ್ಟು ಚೆನ್ನ ಅನ್ಸುತ್ತೆ. ಕೊನೆ ಪಕ್ಷ  ರಿಫ್ರೆಶ್  ಬಟನ್ ಆದರೂ ಪರವಾಗಿರಲಿಲ್ಲ ಅಂತ ಅಂದುಕೊಳ್ಳತ್ತೀನಿ. ಹೀಗೆ ಜಿಗುಪ್ಸೆಯಲ್ಲೇ ಎರಡು ಮೂರು ದಿನ ಕಳೆದ ನಂತರ ಸಡನ್ ಆಗಿ ನನ್ನ ಬದುಕಿನಲ್ಲಿ ಆಳವಡಿಸಿಕೊಂಡಿರುವ  ವೇದ ವಾಕ್ಯ ನೆನೆಪಾಗುವುದು. ಹೀಗೆ ಙ್ಞಾನೋದಯವಾದಗಲೇಲ್ಲಾ ಜೀವನದಲ್ಲಿ ಮತ್ತೆ ಆಸಕ್ತಿ ಕಂಡುಕೊಳ್ಳಲು ನಾನು ಆಯ್ದುಕೊಂಡ ಪ್ರಯೋಗಗಳ ಪಟ್ಟಿ ಸ್ಪಲ್ಪ ಜಾಸ್ತಿ ದೊಡ್ಡದೇ. ನನ್ನ ಆಯ್ಕೆಗಳು ಎಲ್ಲವೂ ತೀರ  ಒಂದಕ್ಕೊಂದು ಸಂಬಂಧವಿಲ್ಲದವು. ಸ್ಪಲ್ಪ ದಿನ ಬಣ್ಣಗಳ ಹಿಂದೆ ಬಿದ್ದು  ಪಾಠ್ ಪೆಯಿಂಟಿಂಗ್ ಹುಚ್ಚು ಹಿಡಿಸಿಕೊಂಡಿದ್ದೆ. ಆದಕ್ಕೆ ಬೇಕಾಗುವ ಸಲಕರಣೆಗಳನ್ನು ಕೊಂಡುಕೊಳ್ಳುವಾಗ ಇದ್ದ ಆಸ್ಥೆ ಕುಂಡಗಳಿಗೆ ಬಣ್ಣ ಬಳಿಯುವಾಗ ಉಳಿದಿರಲಿಲ್ಲ. ವರ್ಷಗಳಿಂದ ಇನ್ನೂ  ಅರ್ಧಂಬರ್ಧ ಬಣ್ಣ ಹಚ್ಚಿಸಿಕೊಂಡೇ ಮೂಲೆಯಲ್ಲಿ ಕುತಿರುವ ಪಾಠ್ ನನ್ನನ್ನು ನಿತ್ಯ ಅಣುಕಿಸಿದಂತೆ ಭಾಸವಾಗುತ್ತದೆ. ಒಂದು ದಿನವೂ ಸೂಜಿ ದಾರ ಹಿಡಿಯದ ನನಗೆ ಒಮ್ಮೆ ಇದಕ್ಕಿದ್ದ ಹಾಗೆ ಟೈಲರಿಂಗ್ ಮೇಲೆ ಆಸಕ್ತಿ ಹುಟ್ಟಿಕೊಂಡಿದಂತೂ ನಿಜ. ಆ ಕಲೆಯ ಮೇಲೆ ಹಿಡಿತ ಸಾಧಿಸಿ ಸ್ಪಂತ ಗಾರ್ಮೆಂಟ್ ಉದ್ಯಮ ಪ್ರಾರಂಭಿಸುವ ವರೆಗಿನ ಕನಸು ಕೂಡ ಕಂಡಿದೆ.  ಪೂರ್ವ ಸಿದ್ಧತೆ ಸಹ ಆಷ್ಟೇ ಜೋರಾಗಿ ನೆಡೆದಿತ್ತು. ಮೆಷಿನ್, ಕತ್ತರಿ ಬಣ್ನ ಬಣ್ಣ್ದ ದಾರ, ಬಟ್ಟೆ ಎಲ್ಲ ಮನೆಗೆ ಬಂತು. ಜೊತೆಗೆ ಮನೆಗೇ ಬಂದು  ಟೈಲಂರಿಗ್ ಪಾಠ ಹೇಳಿಕೊಡುವ ಹುಡುಗಿ.  ಮೂರೇ ದಿನ ಮತ್ತೆ ಆದರ ಸುದ್ದಿನೇ ಎತ್ತಲಿಲ್ಲ. ಪದೇ ಪದೇ ತುಂಡಾಗುವ ಮತ್ತು  ಸೂಜಿಯಿಂದ ತಪ್ಪಿ ಹೋಗುವ ದಾರ ಅದರೊಂದಿಗೆ ಮಧ್ಯದಲ್ಲಿ  ಚಕ್ರದಿಂದ ಜಾರಿ ಹೋಗುವ ಬೆಲ್ಟ್‌ನ ಕಾಟದಿಂದ ರೋಸತ್ತಿ ಟೈಲರಿಂಗ್‌ಗೆ ಎಳ್ಳು ನೀರು ಬಿತ್ತು. ಯಾವಾಗಲೂ ನಮಗೆ ಫಾರಿನ್ ಅಂದರೆ ಒಂಥರ ಆಕರ್ಷಣೆ ಅದು ಅಲ್ಲಿನ ಬಟ್ಟೆ-ಬರೆ ಜನ-ಭಾಷೆ ಯಾವುದು ಅದಕ್ಕೆ ಹೊರತಾಗಿ ಉಳಿದ್ದಿಲ್ಲ. ಹಾಗೇಯೇ ನಾನೂ ಜರ್ಮನಿ ಭಾಷೆ ಕಲಿಯುವ ಸಾಹಸಕ್ಕೆ ಇಳಿದೆ. ನೆಟ್ ಎಲ್ಲಾ ಜಾಲಾಡಿ ಐದಾರು ಸೈಟ್‌ಗಳನ್ನ ಆಯ್ಕೆ ಮಾಡಿಕೊಂಡು, ಈ ಬಾರಿ ಸ್ಪಲ್ಪ ಬುದ್ಧಿವಂತಿಕೆ ಓಡಿಸಿ ಫ್ರೀ ಕೋರ್ಸ್ ಆಯ್ಕೆ ಮಾಡಿಕೊಂಡೆ. ಮೊದಲ ಎರಡು ದಿನ ತುಂಬಾ ಪ್ರಮಾಣಿಕವಾಗಿ ಕಲಿಯುವ ಪ್ರಯತ್ನ ಮಾಡ್ದೆ ಸಹ. ನಂತರ ನನ್ನ ಇನ್‌ಬಾಕ್ಸ್‌ ತೆರೆಯದೆ ಉಳಿಯದ ಜರ್ಮನಿ ಭಾಷೆ ಪಾಠಗಳಿಂದ ತುಂಬಿ ತುಳುಕಲಾರಂಭಿಸಿದಾಗ, ಅದನ್ನು ಅನ್ ಸಬ್‌ಸ್ಕ್ರೈಬ್ ಮಾಡಿ  ಕೈ ತೊಳೆದುಕೊಂಡೆ. ಆಗ ನನಗೆ ಕಾಲೇಜು ದಿನಗಳಲ್ಲಿ ನಮ್ಮ ಇಂಗ್ಲೀಷ್ ಪ್ರೊಫೆಸರೊಬ್ಬರು ಈ ರೀತಿ ಬೇರೆ ದೇಶಗಳ ಭಾಷೆ ಕಲಿಯುವ ಬಗ್ಗೆ  ಸಲಹೆ ಕೇಳಿದಾಗ ಹೇಳಿದ ಮಾತು ನೆನಪಾಯಿತು.You all are already struggling with one foreign language. Do not again do the same mistake ಇದಕ್ಕೂ ಮೊದಲು ಹಿಂದಿ ಪಾಂಡಿತ್ಯ ಸಾಧಿಸುವ ನನ್ನ ಕಾರ್ಯಕ್ರಮದಡಿಯಲ್ಲಿ ಸುಮಾರು ಪರೀಕ್ಷೆಗಳನ್ನು ತೆಗೆದು ಕೊಂಡಿದ್ದೆ. ಇನ್ನೂ ಸ್ಪಲ್ಪ ದಿನ ಯೋಗ ಪ್ರಯೋಗವೂ ನೆಡೆದಿತ್ತು. ಅಮೇಲೆ ಸೊಪ್ಪು ತರಕಾರಿಗಳನ್ನು   ಬೆಳೆಯುವ ಕಡೆಗೂ ಸ್ಪಲ್ಪ ದಿನ ಆಸಕ್ತಿ ಹರಿಸಿದ್ದೆ. ಇವುಗಳೇಲ್ಲಾವುದಕ್ಕಿಂತ ವಿಭಿನ್ನವಾದ ನನ್ನ ಪ್ರಯೋಗ ಎಂದರೆ ಯಾವುದೋ  ಒಂದು ಪ್ರಸಿದ್ಧ  ಕಂಪೆನಿಯ ರೆಪ್ರಸೆಂಟಿಟಿವ್ ಆಗಿ ಅದರ ಉತ್ಪನ್ನಗಳನ್ನು ತರಿಸಿ ಮಾರಟಮಾಡುವುದು.  ಅದರ್ಲ್ಲಿ  ಬಾಕಿ  ಕೊಡುವವರ ಪಟ್ಟಿ ಹನುಮಂತನ ಬಾಲವಾಗಿ ಕೈ ಸುಟ್ಟು ಕೊಂಡಿದಾಯಿತು.
ಲೈಫನ್ನು  ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ  ಪ್ರಯತ್ನಗಳನ್ನು ಮಾಡ್ತಾನೆ ಇರ್ತೀನಿ.  ವರ್ಲಿ ಚಿತ್ರಕಲೆ, ಕ್ರೋಷ, ಡ್ರೈವಿಂಗ್, ಸ್ವಿಮಿಂಗ್, ಪ್ರಾಣಯಾಮ ಕೆಲವು ನೆನಪಲ್ಲಿ ಉಳಿದುಕೊಂಡಿರುವ ಉದಾಹರಣೆಗಳಷ್ಟೆ. ಅವುಗಳು ಬದಲಾಗುತ್ತಲೇ ಇರುತ್ತವೆ ಮತ್ತು ಯಾವುದೊಂದು  ಹೆಚ್ಚು ಕಾಲ ಉಳಿದ್ದಿಲ್ಲ. ಒಂದರಲ್ಲೂ ಸಹ ಯಶಸ್ಸು ಕಂಡಿಲ್ಲವಾದರೂ ನನ್ನ ಈ ದ್ಯೇಯಕ್ಕೆ ಮಾತ್ರ  ಕೊನೆಯವರಗೂ ಬದ್ಧಳಾಗಿರುತ್ತೇನೆ.

ಈಗ ಸದ್ಯಕ್ಕೆ  ಗಿಟಾರ್‌ ಕೈಗೆ ಬಂದಿದೆ.    

July 3, 2013

ಮಳೆ

ನಿನ್ನೆ ಮಧ್ಯಾಹ್ನ ಶುರುವಾಗಿರೋ ಮಳೆ ಇವತ್ತು ಮಧ್ಯಾಹ್ನ ದಾಟಿದರೂ ಇನ್ನೂ ಹನಿ ಕಡಿದ್ದಿಲ್ಲ. ಎಲ್ಲಿ ನೋಡಿದರೂ ನೀರು, ಧೋ ಅನ್ನೋ ಶಬ್ದ ಬಿಟ್ಟರೆ  ಮನೆ ಹತ್ತಿರ ಒಂದೇ ಒಂದು ನರ ಪಿಳ್ಳೆಯ ಸುಳಿವೂ ಇಲ್ಲ. ಕೊನೆ ಪಕ್ಷ ಮನೆ ಸುತ್ತ ಮುತ್ತ ಆಡ್ಡಾಡುವ ನಮ್ಮ ಮನೆ ನಾಯಿಗಳೂ ಪತ್ತೇ ಇಲ್ಲ. ಕರೆಂಟೂ ಫೋನ್ ಎಲ್ಲಾ ಸತ್ತು ಹೋಗಿದ್ದಾವೆ. ಸಧ್ಯಕ್ಕೆ ಬ್ಯಾಟರಿ ಅಲ್ಪ ಸ್ಪಲ್ಪ ಜೀವ  ಉಳಿಸಿಕೊಂಡಿದೆ. ಬರೀ ಮಳೆಯದೇ ಕಾರುಬಾರು. ಹೀಗೆ ಪ್ರತಿ ಬಾರಿ ಮಳೆ ಬಂದಾಗಲೂ ಮನೆ ಮುಂದೆ ಹರಿಯುವ ಕೆಂಪು ಮಣ್ಣಿನ ನೀರಿನ ಜೊತೆ ನನ್ನ ನೆನಪುಗಳು ಮತ್ತೆ ಬಾಲ್ಯಕ್ಕೆ ಜಾರುತ್ತೆ. ಮಲೆನಾಡಿನಲ್ಲಿ ತೋಟದ ಮನೆಯೆಂದರೆ ಸಾಮಾನ್ಯವಾಗಿ ಒಂಟಿ ಮನೆ. ಸುತ್ತಲೂ ತೋಟ, ಸ್ಪಲ್ಪ ತಗ್ಗಿನ ಜಾಗದಲ್ಲಿ  ಒಂದೇ ಹೆಂಚಿನ ಮನೆ ಹೊಸತೇನು ಅಲ್ಲ. ನಮ್ಮದು ಒಂದು ಇಂತ್ತದೇ ಮನೆ. ಮೊದಲೇ ನರ ಮನುಷ್ಯರು ಕಡಿಮೆ, ಮಳೆಗಾಲ ಶುರು ವಾಯಿತು ಅಂದ್ರೆ ಆಗೋ ಈಗೋ ಬರುತ್ತಿದ್ದವರು ಕೂಡ ಆ ಕಡೆ ಮುಖ ಹಾಕುತ್ತಿರಲಿಲ್ಲ.  ಒಂದೇ ಸಮನೆ ಸುರಿಯುವ ಮಳೆ ಶಬ್ಧ. ಹೆಂಚಿನ ಸಂಧಿಯಲ್ಲಿ ನುಸುಳುವ ತಣ್ಣಗೆ  ಕೊರೆಯುವ ಗಾಳಿ  ಕೆಲವು ಜೊತೆಗೆ ಸಾರಿ ನೀರು ಕೂಡ.  ಒರೆಸಿದಷ್ಟು ಕಾವಿ ನೆಲದಲ್ಲಿ ಏಳುವ ನೀರು.  ಮನೆಯೊಳಗೆ  ನುಗ್ಗುವ  ಗಾಳಿಗೆ  ಆಗಾಗ ನಂದಿ ಹೋಗುವ ಸೀಮೆಎಣ್ಣೆ ಚಿಮಣಿ.   ಜಡಿ ಮಳೆ ಜೊತೆ  ವಾರಗಟ್ಟಲೇ ಇರದ ಕರೆಂಟ್, ಮನೆಯಲ್ಲಿರದ ಅಪ್ಪನ ಬಗ್ಗೆ  ಅಮ್ಮನ ಗೊಣಗಾಟ ನಿರಂತರ.  ನನ್ನಲ್ಲಿ ಅಚ್ಚಾಗಿರುವ  ಮಳೆಗಾಲದ ಚಿತ್ರಗಳು.   ಬೆಳಕಿಗೆಂದು ಹೆಂಚಿನ ಮಧ್ಯ ಹಾಕಿದ ಗ್ಲಾಸಿನ ಮೇಲೆ ರಭಸವಾಗಿ ಹರಿಯುವ ನೀರುನಿಲ್ಲವ ಮಾತೇ ಇಲ್ಲದೇ  ಹಟ ಹಿಡಿದ ಮಳೆಉಕ್ಕಿ ಹರಿಯುವ  ತೋಟದ  ಹಳ್ಳದ ಶಬ್ದ ಹಾಗೂ ಆದರ ಕೆಂಪು ನೀರು, ಮನೆಯ ನೀರವ ಮೌನ  ನನಗೆ ಭಯ ಹುಟ್ಟಿಸುತ್ತಿತ್ತು. ಬೆಳಕು ಹರಿಯುವವರೆಗೂ ಮುಸುಕು ಹಾಕಿದ ಹೊದಿಕೆ ತೆಗೆಯುತ್ತಿರಲಿಲ್ಲ. ಆಗೆಲ್ಲಾ ನಮ್ಮ  ಮನೆ ಶಾಪಗ್ರಸ್ತ  ಮನೆ  ಹಾಗೂ ನಾವು ಯಾವುದೋ ಋಷಿಗಳ ಶಾಪಕ್ಕೆ ಬಲಿಯಾಗಿ ಇಲ್ಲಿದ್ದೀವಿ ಅಂತ ಎಷ್ಟೋ ಸಾರಿ ನನಗೆ  ನಾನೇ ಅಂದುಕೊಳ್ಳುತ್ತಿದ್ದೆ.  ಆದರೂ ಹೆಂಚಿನ ಮಾಡಿನ ತುದಿಯಿಂದ  ಬೀಳುವ ನೀರು ನೋಡುವುದು ನನಗೆ ಅತಿ ಪ್ರಿಯವಾಗಿತ್ತು. ಸಾಲಾಗಿ ಬೀಳುವ ನೀರು ನನಗೆ ಯುದ್ಧಕ್ಕೆ ಹೊರಟ ಕುದುರೆ ಹಿಂಡಿನಂತೆ ಕಾಣುತ್ತಿತ್ತು. ಮನೆಯ ಜಗುಲಿಯಲ್ಲಿ ಸೀಡುವ ನೀರಿಗೆ  ಮುಖವೊಡ್ಡಿ  ಹೆಂಚಿನ  ನೀರಿನ ಸಾಲುಗಳನ್ನು ನೋಡುತ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದೆ.
ಈಗ ಬರಿ ಮಳೆಯಷ್ಟೇ ಉಳಿದವೇಲ್ಲಾ ನೆನಪಾಗಿ ಉಳಿದಿವೆ ಅಷ್ಟೇ.  ಸೀಮೆಎಣ್ಣೆ ಚಿಮಣಿ, ನೀರೇಳುವ ನೆಲ, ಸೋರುವ ಹೆಂಚಿನ ಮಾಡು, ತೋಟದ ಹಳ್ಳ, ಅಮ್ಮನ ಗೊಣಗಾಟಮನೆ ಎಲ್ಲಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ….