January 24, 2013

ವಾಸನೆ, ನೆನಪು ಮತ್ತು ಅವನು!


ನನ್ನ ನೆನಪುಗಳಿಗೆ ಸಂಬಂಧಿಸಿದಂತೆ ನನಗೆ ಒಂದು ವಿಚಿತ್ರವಾದ ಕಾಯಿಲೆ ಇದೆ. ಕೆಲವು ಬಾರಿ ಎಷ್ಟು ನೆನಪು ಮಾಡಿಕೊಂಡರು ಎದುರಿಗೆ ಇರೋ ವ್ಯಕ್ತಿಯ ಹೆಸರೇ ನೆನಪಿಗೆ ಬರುವುದ್ದಿಲ್ಲ. ಇನ್ನೂ ಕೆಲವು ಸಾರಿ ಯಾವುದೋ ಒಂದು ಪ್ರಾಣಿ ಅಥವಾ ವಸ್ತುವನ್ನು ನೋಡಿದ ತಕ್ಷಣ ಅದಕ್ಕೆ ಸಂಬಂಧನೇ ಇಲ್ಲದೆ ಇರೋ  ಇನ್ಯಾರೋ ಮನುಷ್ಯ ನೆನಪಾಗುವುದು. ನಮ್ಮ ಮನೆಯ ನಾಯಿ ರೋನಿ ನೋಡಿದಾಗಲ್ಲೇಲ್ಲಾ ಯಾವುದೋ ಅಂದಕಾಲತ್ತಿನಲ್ಲಿ ನಮ್ಮ ಮನೆಗೆ ಬರುತ್ತಿದ್ದ ದಾಸಯ್ಯ ಪ್ರತಿ ಬಾರಿಯೂ ನನ್ನ ಕಣ್ಣು ಮುಂದೆ ಬರುತ್ತಾನೆ. ಇನ್ನೂ ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರ್ ಕಂಡಾಗ ನಮ್ಮ ಅಜ್ಜಿ ನೆನಪಾಗೋದು. ಈ ರೀತಿ ಹೋಲಿಕೆಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಮಾತ್ರ ಎಷ್ಟು ಯೋಚಿಸಿದರು ನೆನಪಿಗೆ ಬಾರದು.  ವಾಸನೆ ಮತ್ತು  ನನ್ನ ನೆನೆಪಿಗಳಿಗಂತೂ ಜನ್ಮ ಜನ್ಮಾಂತರದ ಸಂಬಂಧ. ಕೆಲವು ವಾಸನೆಗಳಂತೂ ಕೇಳೋದೆ ಬೇಡ ನನ್ನ ನೆನಪಿನ ದೋಣಿಯನ್ನು ಎಲ್ಲಿಂದ ಎಲ್ಲಿಗೋ ತೇಲಿಸಿ ಬಿಡುತ್ತದೆ. ನೇಲ್ ಪಾಲಿಶ್ ರಿಮೂರ್ ಅಪರೇಷನ್ ಥೆಟರ್ ನೆನಪು ತರಿಸಿದರೆಮೀನು ವಾಸನೆ ಮೂಗಿಗೆ ಬಡಿದ ತಕ್ಷಣ ನಮ್ಮೂರ ಮಂಗಳವಾರ ಸಂತೆ ನೆನೆಪಾಗುತ್ತದೆ. ಸಗಣಿ ವಾಸನೆಯಿಂದ ಆಗ ತಾನೇ ಕೊಟ್ಟಿಗೆ ಕೆಲಸ ಮುಗಿಸಿ ಕಾಲಿಗೆ ಸಗಣಿ ಮೆತ್ತಿಸಿ ಕೊಂಡ ಬಂದ ಅಮ್ಮ ನೆನಪಾಗುತ್ತಾಳೆ.  ಇನ್ನೂ  ಈರುಳ್ಳಿ ವಾಸನೆ ಸಣ್ಣಲ್ಲಿ ಯಾವಾಗಲೋ ಅಪ್ಪನೊಡನೆ ನೋಡಿದ ಯಕ್ಷಗಾನ ಮತ್ತು ಅಲ್ಲಿನ ಮಸಾಲೆ ಮಂಡಕ್ಕಿಯ ನೆನೆಪು ಮೂಡಿಸುತ್ತದೆ.  ಮಳೆ ಹನಿ ಬಿದ್ದ ಮಣ್ಣಿನ ವಾಸನೆಯಂತೂ ನನ್ನ ನೆನಪನ್ನು  ನೇರವಾಗಿ  ಬಾಲ್ಯಕ್ಕೆ  ತಳ್ಳುತ್ತೆ. ಮಳೆಯಲ್ಲಿ ಆಟವಾಡಿ ಮನೆಯೆಲ್ಲಾ ಕೆಸರ ಹೆಜ್ಜೆ ಮಾಡಿ, ದೊಡ್ಡವಳಾದ ತಪ್ಪಿಗೆ ಅಮ್ಮನಿಂದ ತಂಗಿ-ತಮ್ಮ ಇಬ್ಬರ ಪಾಲಿನ ಪೆಟ್ಟನ್ನು ನಾನೇ ತಿಂದ ನೆನೆಪು ತಾಜಾವಾಗಿಸುತ್ತದೆ.  ಬೆವರಿನ  ವಾಸನೆ ನಾನು ಶಾಲೆಗೆ ಹೋಗುವಾಗ ಸದಾ ತುಂಬಿರುತ್ತಿದ್ದ ಗುರುಶಕ್ತಿ ಬಸ್ ಅನ್ನು  ನೆನಪಿಸಿದರೆ, ಪಬ್ಲಿಕ್ ಟಾಯ್ಲೆಟ್ ನಮ್ಮ ಹಾಸ್ಟೇಲನ್ನು ನೆನಪಿಸುತ್ತದೆ. ಹೀಗೆ ನನ್ನ ವಾಸನೆ ಮತ್ತು ನೆನಪಿನ ನಿಕಟ ಸಂಬಂಧದ  ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆದರೆ ಈ ವಾಸನೆ  ಮತ್ತು ನೆನಪಿನ ಪುರಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಮೊದಲೇಲ್ಲಾ ಪ್ರತಿಯೊಂದು ವಾಸನೆಗೂ ಬೇರೆಯಾದ ನೆನಪುಗಳಿದ್ದವು. ಆದರೆ ಈಗ ಪ್ರತಿಯೊಂದು ವಾಸನೆಯು ಅವನ ನೆನಪಿನ ಸುತ್ತಲೇ ಸುತ್ತುತ್ತವೆ. ಬೆಳಿಗ್ಗೆ ಎದ್ದ ತಕ್ಷಣದ ಕಾಫಿ ಡಿಕ್ಷಾನ್‌ನಿನ ಘಮಲಿನಿಂದ ಹಿಡಿದು, ರಾತ್ರಿ ಮಲಗುವ ಮುನ್ನ ತಿನ್ನುವ ಚಾಕೊಲೇಟಿನ ತೆಳು ಕಂಪಿನವರೆಗೂ  ಬರಿ ಅವನಿಗೆ ಅಂಟಿ ಕೊಂಡ ನೆನಪೇ. ಬೆಳಗ್ಗಿನ ಚಳಿಯಲ್ಲಿ ಬಿಸಿ ಕಾಫಿಯ ಪರಿಮಳ ಮೂಗನ್ನು ಆರಳಿಸುತ್ತಿದ್ದಂತೆಇಷ್ಟು ದುಡ್ಡು ಕೊಟ್ಟು ನಾವೇ ಸಕ್ಕರೆನೂ ಹಾಕೋ ಬೇಕಾ ಅಂತ ಕಾಫಿ ಡೇಯಲ್ಲಿ ಅವನು ಗೊಣಗಿಕೊಂಡು, ಕಾಫಿಗೆ ಸಕ್ಕರೆ ಸುರಿದು ಕೊಳ್ಳೊ ಅವನ ಪರಿ ನನ್ನನ್ನು ಬೆಚ್ಚಗಾಗಿಸುತ್ತದೆ. ಇನ್ನೂ ನನಗೆ ವಾಂತಿ ಬರಿಸುವ ಸೀಗರೇಟ್ ವಾಸನೆಯೂ, ಅವನ ಮೊದಲ ಭೇಟಿಯನ್ನು ನೆನಪಿಸಿ ತುಟಿಯಲ್ಲಿ ಮಂದಹಾಸ ಮೂಡಿಸುತ್ತದೆ. ಆವತ್ತೇ ಅಲ್ವಾ ಅವನು ನಿನ್ನ ಮೂಗು ನಾಯಿ ಮೂಗು ಅಂತ ಹೇಳಿದ್ದು. ಲಿಂಬೆ ಹಣ್ಣಿನ ವಾಸನೆ ಮೂಗಿಗೆ ರಾಚುತ್ತಿದ್ದಂತೆ ಅವನ ಪ್ರಿಯವಾದ ಹುಳಿ ಹುಳಿಯಾದ  ಚಿತ್ರಾನ್ನದ ನೆನಪು ಮನಸ್ಸಿಗೆ ಮುದ ನೀಡುತ್ತೆ.  ಹೊಟ್ಟೆ ತೊಳಿಸುವ ಎಸಿಯ  ಗಾಳಿಯ ವಾಸನೆ ಅವನ ಕಾರನ್ನು ನೆನಪಿಗೆ ತರುತ್ತದೆ. ಹೀಗೆ ಇನ್ಯಾವುದೋ ವಾಸನೆ ಅವನ ಡೀಯೊ ನೆನಪಿಸಿದರೆ, ಮತ್ತೊಂದು ಅವನ ಬಿಸಿಯುಸರನ್ನು ನೆನಪಿಸಿ ಕಚಗುಳಿ ಇಡುತ್ತದೆ. ಹೀಗೆ ಪ್ರತಿ ಕ್ಷಣವೂ ನನ್ನ  ಕಾಡುವ ವಾಸನೆಗಳು ಅವನ ನೆನಪಿನಲ್ಲಿ ನನ್ನ ಇರುವನ್ನೆ ಮರೆಸುತ್ತವೆ.

ಅವನ ನೆನಪಿನ ಗುಂಗಿನಲ್ಲಿದ್ದ ನನಗೆ ತಕ್ಷಣ ಮೂಗಿಗೆ ಬಡಿದಿದ್ದು ಹಾರ್ಲಿಕ್ಸ್ ವಾಸನೆ... ಆಗಾಗಲೇ ನೆನಪಾಗಿದ್ದು ನನಗೆ ಅಡುಗೆ ಮನೆಯಲ್ಲಿ ಒಲೆ ಮೇಲೆ ಇಟ್ಟು ಮರೆತು ಬಂದ ಹಾಲಿನದು.

(Published in Vijaya Next on 13/1/20013)

January 18, 2013

ಮೀನಿನ ಮನೆ


ಪುಟ್ಟ ಮನೆಯಕಾರದ ಗಾಜಿನ  ಪೆಟ್ಟಿಗೆ, ಅದರೊಳಗೆ ಪುಣಾಣಿ ಬಣ್ಣ ಬಣ್ಣದ ಮೀನುಗಳು. ಮೊದಲಿನಿಂದಲೂ ನನಗೆ ಅತಿ ಪ್ರಿಯವಾದದ್ದು.  ಕಂಡ ಕಂಡಲ್ಲಿ ಅದರ ಮುಂದೆ ನಿಂತು, ಕಣ್ಣು ಮಿಟುಕಿಸದೆ ಆದನ್ನು ನೋಡುವುದೆಂದರೆ ಎನ್ನೋ ಖುಶಿ. ಪಾರದರ್ಶಕ ಮನೆ ಅದರೊಳಗೆ ನೀರು. ನೀರನ್ನು ಸೀಳಿ ಬೆಳಕು.  ತಳದಲ್ಲಿ ಮರಳು, ತರಾವರಿ ಕಲ್ಲುಗಳು, ಚಿಕ್ಕ ಚಿಕ್ಕ ಶಂಖ, ಕವಡೆ, ಕಪ್ಪೆ ಚಿಪ್ಪುಗಳ ಹಾಸು ಸದಾ ಆಕರ್ಷಣೆಯ ಬಿಂದು.  ಇವುಗಳನ್ನೇಲ್ಲಾ ಮೀರಿ ಮನಸ್ಸಿಗೆ ನಾಟುತ್ತಿದ್ದಿದ್ದು ಕೆಂಪು, ಕಪ್ಪು, ಬಿಳಿ, ಕೇಸರಿ, ಹಳದಿ, ನೀಲಿ, ಬಂಗಾರ ಬಣ್ಣಗಳ ಹಲವು ಬಗೆಯ ಮೀನುಗಳು. ಒಂದು ಮೀನು ಗಾಳಿ ಪಟದ ಆಕಾರದಲ್ಲಿದ್ದರೆ, ಇನ್ನೊಂದು ಬಲೂನಿನ ಹಾಗೆ, ಮತ್ತೊಂದು ಅಚ್ಚ ಬಿಳಿಅದರ ಜೋಡಿ ಕಡು ಕಪ್ಪು, ಮಗದೊಂದು ಎರಡು ಮೂರು ಬಣ್ಣಗಳ ಸಮಿಶ್ರಣ, ಇನ್ಯಾವುದೊಂದರ ಬಾಲ ಬೀಸಣಿಗೆಯ ತದ್ರೂಪ. ಒಂದೊಂದು ಒಂದೊಂದು ತರ, ಒಂದಕ್ಕಿಂತ ಒಂದು ವಿಭಿನ್ನ.  ಒಂದೇ ಟ್ಯಾಂಕ್‌ನಲ್ಲಿ ಒಗಟ್ಟಿನಲ್ಲಿರುವ ಬಗೆ ಬಗೆಯ ಮೀನುಗಳು. ಪ್ರತಿಯೊಂದರ  ಚಲನವಲನವೂ ಪೂರ್ತಿ ಬೇರೆ ಬೇರೆ. ಒಂದು ಜೋಡಿ ಸದಾ ಒಂದಕ್ಕೊಂದು ಅಂಟಿಕೊಂಡಂತೆ ಇದ್ದರೆ. ಇನ್ನೊಂದು ಬಗೆಯದು ಒಂದರ ಬಾಲ ಹಿಡಿದು ಇನ್ನೊಂದು ಜೂಟಾಟವನ್ನು ನೆನಪಿಸುತ್ತದೆ. ಇವರೆಡರಕ್ಕಿಂತ ಭಿನ್ನವಾಗಿ ಇನ್ನೊಂದು ಜಾತಿಯ ಮೀನು, ಒಂದಕ್ಕೊಂದು  ಮುತ್ತಿಡುವ, ಪಿಸುಗುಟ್ಟುವ  ಇವುಗಳು ಯುವ ಪ್ರೇಮಿಗಳ ತದ್ರೂಪ. ಒಂದು ಜಾತಿಯ ಮೀನು ಪ್ರಪಂಚದ ಎಲ್ಲಾ ತಲೆನೋವು ತನ್ನದೇ ಎಂಬಂತೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದರೆ, ಇನ್ನೊಂದು ಈ ಲೋಕದ ಗೋಡ ನನಗೇಕೆ ಎಂಬಂತೆ ತಣ್ಣಗೆ ತನ್ನಷ್ಟಕ್ಕೆ ತಾನು.  ಹೇಳಿದಷ್ಟು ಮುಗಿಯದು.   ನಾವು ಏನು ಕಮ್ಮಿ ಇಲ್ಲ ಎನ್ನುವಂತೆ   ಮೀನುಗಳೊಂದಿನ ಬಣ್ಣದ ಗೊಂಬೆಗಳ ಪೈಪೋಟಿ. ಆಕ್ವೇರಿಯಂಗೆ ಇನ್ನಷ್ಟು ರಂಗು. ನೀರಿನ ಗುಳ್ಳೆಗಳನ್ನು ಉಗುಳುವ ಮೀನುಗಾರ, ಉಚ್ಚೆ ಹುಯ್ಯುವ ಪುಟ್ಟ ಬಾಲಕ, ಪುಟ್ಟ ದೋಣಿಯೊಂದಿಗೆ ಹುಟ್ಟು ಹಾಕುವ ಅಂಬಿಗ, ಈಜುಗಾರ ಹತ್ತು ಹಲವು ತರದ ಗೊಂಬೆಗಳು ಹೆಚ್ಚು ಹೆಚ್ಚು ಹೊತ್ತು ನನ್ನನ್ನು ಈ ಪುಟ್ಟ ಮಾಯಲೋಕದ ಮುಂದೆ ಕಾಲ ಕಳೆಯುವಂತೆ ಮಾಡುತ್ತಿದ್ದವು. ಅವುಗಳನ್ನು ನೋಡಲು ಸಿಕ್ಕ ಅವಕಾಶವನ್ನು ತಪ್ಪಿಸಿ ಕೊಳ್ಳದೆ ತೃಪ್ತಿಯಾಗುವಷ್ಟು ಬಣ್ಣದ ನೀರಿನ ಲೋಕವನ್ನು ಕಣ್ಣಿನಲ್ಲಿ ತುಂಬಿ ಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮೊದಲೇಲ್ಲಾ ಆಕ್ವೇರಿಯಂ ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲಿ ಇದ್ದಿದ್ದು ಬಹಳ ಅಪರೂಪ.  ಆಗೇಲ್ಲಾ ಹೋಟಲ್‌ಗಳು ಅಥವಾ ದೊಡ್ಡ ದೊಡ್ದ ಮನೆಗಳಲ್ಲಿ  ಮಾತ್ರ ಅಕ್ವೇರಿಯಂ ಸೀಮಿತ ಹಾಗೂ ಅದು ಶ್ರೀಮಂತರ ಸೊತ್ತು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು.ಆದರೂ ಅಪ್ಪನಿಂಗೆ ದಂಬಾಲು ಬಿದ್ದು ಅಕ್ವೇರಿಯಂ ಕೊಡಿಸಿಕೊಂಡು, ಕ್ಲೀನ್ ಮಾಡಲು ಹೋಗಿ ಒಡೆದು ಹಾಕಿದ್ದು ಸ್ಪಲ್ಪ ಹಳೆಯ ಕಥೆ.  ಕಾಲ ಕಳೆದಂತೆ ಅಕ್ವೇರಿಯಂಗಳು ಸಾಮಾನ್ಯವಾದರೂ ಅದರೆಡೆಗಿನ ಪ್ರೀತಿ ಮಾತ್ರ ಬೆಳೆಯುತ್ತಲೇ ಹೋಯಿತು.  ಈಗಲೂ ಮಗಳಿಗೆ ಮೀನು ತೋರಿಸುವ ನೆಪದಲ್ಲಿ ಅದರ ಮುಂದೆ ನಿಲ್ಲುವುದು, ಹೋಟೇಲ್‌ಗಳಲ್ಲಿ ಸಾದ್ಯವಾದಷ್ಟು ಫಿಶ್ ಟ್ಯಾಂಕ್‌ಗಳ ಹತ್ತಿರದ ಸ್ಥಳವನ್ನು ಆರಿಸಿಕೊಳ್ಳುವುದು ಇವತ್ತಿಗೂ ಬಿಟ್ಟಿಲ್ಲ.

ನನ್ನ ಆಕ್ವೇರಿಯಂ ಪ್ರೀತಿಗೆ ಈ ದೀಪಾವಳಿಯಲ್ಲಿ ತಂಗಿಯಿಂದ ಒಂದು ಪುಟ್ಟ ಫಿಶ್ ಟ್ಯಾಂಕ್ ಉಡುಗೊರೆಯಾಗಿ ದೊರೆತ ಮೇಲಂತೂ ಕೇಳುವುದೇ ಬೇಡ. ಈಗ ದಿನದ ಹೆಚ್ಚಿನ ಹೊತ್ತು  ಅದರದೇ ಧ್ಯಾನ. ಮೊದಲು ಬಣ್ಣಗಳಿಂದ ಗುರುತಿಸುತ್ತಿದ ಮೀನುಗಳ ಹೆಸರುಗಳು ಈಗ ಚಿರಪರಿಚಿತ. ಮೋಲಿ, ಗಪ್ಪಿ, ಫ್ಯಾನ್ಸಿ ಗಪ್ಪಿ, ಪ್ಲಾಟಿ, ಎಂಜಲ್, ಟೆಟ್ರಾ ಇತ್ಯಾದಿ ಇತ್ಯಾದಿ.  ಗೂಗಲಿಸಿದ್ದಷ್ಟು ತೆರೆದು ಕೊಳ್ಳುವ ಮೀನಿನ ಪ್ರಪಂಚ.  ಕೇಳಿದಷ್ಟು , ತಿಳಿದಷ್ಟು ಮುಗಿಯದ  ಕುತೂಹಲಕಾರಿ ಮಾಯ ಮತ್ಸ್ಯ ಲೋಕ.
ಅಕ್ವೇರಿಯಂ ಹೊಂದಲು ಸದಾ ನಿರಾಕರಿಸುತ್ತಿದ್ದ ಅವನಿಗೂ ಈಗ ಈ ಮೀನುಗಳ ಮೇಲೆ ಆಕ್ಕರೆ ಹಾಗೂ ಫಿಶ್ ಟ್ಯಾಂಕ್ ಮುಂದೆ ಕಾಲಹರಣ ಅವನ ಪ್ರಿಯವಾದ ಹವ್ಯಾಸಗಳಲ್ಲಿ ಒಂದಾಗಿದೆ.  ಅವನ ಸಾಥ್ ದೊರೆತ ಮೇಲೆ ಆಕ್ವೇರಿಯಂ, ಅದರೊಳಿಗಿನ ಬಣ್ಣ ಬಣ್ಣದ ಮೀನುಗಳು , ಕಪ್ಪೆಚಿಪ್ಫು, ಶಂಖ, ಮರಳು, ಕಲ್ಲುಗಳೆಲ್ಲಾ ಇನ್ನಷ್ಟೂ ಮನಸ್ಸಿಗೆ ಹತ್ತಿರವಾಗಿವೆ ಹಾಗೂ ಪ್ರಿಯವಾಗಿದೆ.

(ವಿಜಯ ನೆಕ್ಸ್ಟ್‌ನ "ಅವಳ ಡೈರಿ" ಆಕಂಣದಲ್ಲಿ 18/1/2013ರಂದು  ಪ್ರಕಟವಾದ ಬರಹ)

January 1, 2013

ಮರೆತೆ ಎಂದರೂ ಮರೆಯಲಾರೆ..


ಅವನ ನೆನಪನ್ನು ನನ್ನ ಮನಸ್ಸಿನಿಂದ ಬೇರು ಸಮೇತ ಕಿತ್ತು  ಹಾಕುತ್ತೇನೆ. ಅವನ್ನನ ಮರತೇ ತೀರುತ್ತೇನೆ ಎಂದು ನಾ ಪಣ ತೊಟ್ಟಾಗಲೇ, ಅವನ ನೆನೆಪುಗಳು ನನ್ನ ಹೆಚ್ಚುಹೆಚ್ಚು ಕಾಡಿರುವುದು. ಅವನ ನಂಟಿನ ಅಂಟಿನಿಂದ ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಷ್ಟು ನಮ್ಮಿಬ್ಬರ ನಡುವಿನ ನಂಟಿನ ಗಂಟು ಗಾಡವಾಗುತ್ತ ಹೋಗಿದ್ದು.  ನನ್ನ ಜೀವನದಿಂದ ಅವನ ಅಸ್ತಿತ್ವವನ್ನು ಅಳಿಸಲು ಯತ್ನಿಸಿದಾಗಲೇಲ್ಲಾ  ಅವನು ನನ್ನ ಮೀರಿ ನನ್ನ ಜೀವನವನ್ನು  ಆಕ್ರಮಿಸಿಕೊಂಡಿದ್ದು. ಇವತ್ತೇ ಕೊನೆ ಇನ್ಯಾವತ್ತು ಅವನ  ಜೊತೆ ಮಾತು ಕಥೆ ಇಲ್ಲ ಎಂದು  ಮಾಡಿದ  ಗಟ್ಟಿ ನಿರ್ಧಾರವನ್ನು ಅದೇಷ್ಟು ಸಾರಿ ಅವನ ದೇವದಾಸನ  ಆವತಾರ ಮಣ್ಣು ಪಾಲು ಮಾಡಿವೆ.  ಅವನ ಎರಡು ಲೈನ್ ಮೇಸೆಜ್‌ಗಾಗಿ ಅಥವಾ ಮೂರು ನಿಮಿಷದ ಮಾತಿಗಾಗಿ ಇಡಿ ದಿನ ಚಡಪಡಿಸುತ್ತಿದ್ದೆ. ಅವನ ಮರೆತು, ಅವನ ಹೊರತಾಗಿನ ನನ್ನ ಜೀವನ  ಕಲ್ಪನೆ ನಿಲುಕಾದಾಗಿತ್ತು. ಆದರೂ ಇದನ್ನೇಲ್ಲಾ ಮೀರಿ ಅವನೊಂದಿಗಿನ ಸಂಬಂಧವನ್ನು ಕಡಿದು ಕೊಳ್ಳಲು ನಿರ್ಧರಿಸಿದ್ದೆ. ಇಷ್ಟೇಲ್ಲಾ ನಿರ್ಧಾರದ ನಂತರವೂ ನನ್ನ ಮನಸ್ಸು ನನ್ನ ಹಿಡಿತ ತಪ್ಪುತ್ತಿತ್ತು.  ಪ್ರತಿ ಬಾರಿ ಫೋನ್ ರಿಂಗ್ ಆದಾಗಲೂ ಅದು ಅವನೇ ಅಂತ ಹೃದಯ ಬಡಿತ ತಪ್ಪುತ್ತಿತ್ತು.  ಪ್ರತಿ ಮೇಸೇಜ್ ಬಿಪ್ ಅವನಿಂದಲೇ  ಮೇಸೇಜ್ ಇರಬೇಕು ಅಂತ ಕೈ ಬೆರಳುಗಳು ಮರು ಸಂದೇಶ ಟೈಪ್ ಮಾಡಲು ಅಣಿಯಾಗುತ್ತಿತ್ತು. ಅವನನ್ನು ಮರೆತೆ ಎಂದರೂ ಮರೆಯಲಾರದೆ  ಒದ್ದಾಡಿದ್ದೆ. ಅವನ ಮರೆಯುವ ಅವಸರದಲ್ಲಿ ನಾನು ಮೂರು ಜನ್ಮಕ್ಕಾಗುವಷ್ಟು ವೇದನೆ ಅನುಭವಿಸಿದೆ. ಅವನನ್ನು ಮರೆತೇ ಬಿಡುವ ನನ್ನ ಈ  ಎಲ್ಲಾ ಕಸರತ್ತುಗಳಿಗೆ ನಿನ್ನೆಯೇ ಎಳ್ಳು ನೀರು ಬಿಟ್ಟೆ.
ಇವತ್ತು ನನ್ನ ಬದುಕಿನ ಅತಿ ಸುಂದರ ಬೆಳಗು ಅದು ಅವನೊಂದಿಗೆ ಆರಂಭಗೊಂಡಿದೆ, ಮುಕ್ತಾಯವು ಅವನೊದಿಂಗೆನೇ. ಇನ್ನೂ ಪ್ರತಿ ದಿನ, ಪ್ರತಿ ಕ್ಷಣ ಅವನ ನೆನಪ್ಪಿನೊಟ್ಟಿಗೆ ಹೆಜ್ಜೆ ಹಾಕಲು ತಿರ್ಮಾನಿಸಿದ್ಡೇನೆ. ನನ್ನಳೊಗಿನ ಅವನ  ನೆನಪನ್ನು  ಅಳಿಸಿ ಹಾಕುವ  ಕದನಕ್ಕೆ ಇಂದಿನ ಶಾಶ್ವತ ವಿರಾಮ ಘೋಷಿಸಿಲಾಗಿದೆ. ನಿನ್ನೆಯವರೆಗೆ ಅವನ ಮರೆತೇ ತೀರುತ್ತೀನಿ ಎಂಬ ಹಟ ಇವತ್ತು ಎಂಥಾ ಹುಚ್ಚಾಟ ಅನಿಸ್ಸುತ್ತಿದೆ. ಇನ್ನೂ ಅವನ ಮರೆಯುವ ಮಾತೇ ಇಲ್ಲ.  ನನ್ನೊಂದಿಗೆ ಅವನಿಲ್ಲ, ಈಗ  ಅವನ ಜೊತೆ ಮಾತಿಲ್ಲ . ಆದರೂ  ಅವನ ಪ್ರತಿಯೊಂದು  ಮಾತು. ನಗು, ನಿಟ್ಟುಸ್ಸುರು  ನನ್ನ ಕಿವಿಯಲ್ಲಿ ತಾಜಾವಾಗಿದೆ.  ಬದುಕು ಮುಗಿಯವರೆಗೂ ಸಾಕಾಗುವಷ್ಟು ನನ್ನೊಳಗೆ ಅವನ ನೆನೆಪಿದೆ. ಈಗ  ಅನು ಕ್ಷಣವು ಅವನೊಂದಿಗೆ ನಮ್ಮಿಬ್ಬರಿಗಷ್ಟ್ಟೆ ಕೇಳುವ ಪಿಸುಮಾತು.   ನನ್ನ  ಜೀವನದ ಪ್ರತಿ ಹಾಡಿಗೂ ಅವನ ನೆನಪೇ ಸಾಹಿತ್ಯ.  ಇಷ್ಟು ದಿನ ಜಾಗ ತಪ್ಪಿದ ನನ್ನ  ದಿನಚರಿಯ ಮತ್ತೆ ಸುಸ್ಥಿತಿಗೆ ಮರಳಿದೆ.  ನನ್ನ ಮನದಳೊಗೆ ಸದಾ ಅವನ ಇರುವಿಕೆಯ ಅನುಭವವೊದೇ  ಸಾಕು  ಜೀವನ ಪೂರ್ತಿಯ  ನೆಮ್ಮದಿಗೆ. 
ಈಗ ಎಲ್ಲಾ ಸುಸೂತ್ರ. ಬದುಕು ಮತ್ತಷ್ಟು ಸುಂದರ. ಹೋಲಿಸಲು ಎಷ್ಟು ಉಪಮೇಯವೂ ಕಡಿಮೆ. ಸೂತ್ರ ಕಿತ್ತ ಗಾಳಿಪಟವಾಗಿದ್ದ ನನ್ನ ದಿನಚರಿ ಮತ್ತೆ ಸರಾಗವಾಗಿದೆ. ಕದಡಿದ ಮನಸ್ಸು ಅದರೊಳಗೆ ರಚ್ಚೆ ಹಿಡಿದು ಕೂತಿದ್ದ ಅವನು  ಎಲ್ಲಾ ಈಗ ಶಾಂತ. ನಿನ್ನೆಯವರೆಗೆ ಎಲ್ಲಾ ಕಡೆಯು ಮುನ್ನುಗ್ಗುತ್ತಿದ್ದ ಅವನ ನೆನಪು ಇಂದು ಯಾವುದೇ ಧಾವಂತವಿಲ್ಲದೆ ಕೈ ಹಿಡಿದು  ನೆಡುವ ಮಗುವಿನಂತೆ ನನ್ನಳೊಗೆ ನನ್ನ ಜೊತೆ ಜೊತೆಯಲ್ಲೇ.... 



(Published in Vijaya next on 14/12/12)