December 1, 2010

ಅಡುಗೆ ಮನೆಯ ಮುಂಜಾಗತ್ರ ಕ್ರಮಗಳು

ಮಹಿಳೆಯರಾದ ನಮಗೂ ಅಡಿಗೆಮನೆಗೂ ಜನ್ಮ ಜನ್ಮದ ನಂಟು. ಕೆಲವು ದಶಕಗಳ ಹಿಂದೆ ಮಹಿಳೆ ಎಂದರೆ ಅಡಿಗೆ ಕೆಲಸದಲ್ಲಿ ಬ್ಯುಸಿ ಎನ್ನುವ ಯೋಚನೆ ತಕ್ಷಣ ತಲೆಯಲ್ಲಿ ಬರುತ್ತದೆ. ಅಲ್ಲಿ ಅವಳ ಕೆಲಸವು ಹಾಗೆ ಚಾಲೆಂಜಿಗ್‌. ಬೆಂಕಿ, ಬಿಸಿಯೊಡನೆ ಸೆಣಾಸಾಟವೆಂದರೆ ಸಮಂಜಸ. ಹರಿತವಾದ ಕತ್ತಿ, ಭಾರವಾದ ಪಾತ್ರೆಗಳನ್ನು ಸರಾಗವಾಗಿ ಹ್ಯಾಂಡಲ್‌ ಮಾಡಬಲ್ಲ ಚತುರೆ. ಅಲ್ಲಿ ಅವಳದೇ ರಾಜ್ಯಭಾರ. ಈಗ ಮಹಿಳೆಯರು ಅಡುಗೆ ಮನೆಯ ಹೊರಗೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಸಂತೋಷಕರ. ಆದರೆ ಅಡುಗೆಮನೆಯಿಂದ ಮಾತ್ರ ಮುಕ್ತಿ ಪಡೆದಿಲ್ಲ. ಅಲ್ಲಿ ಅವಳ ಸ್ಥಾನ ಖಾಯಂ. ಅಡುಗೆ ಮನೆಯ ಪರಿಕಲ್ಪನೆ ಈಗ ಬದಲಾಗಿದೆ. ಸೌದೆ ಒಲೆ, ಸೀಮೆ ಎಣ್ಣೆ ಸ್ಟೌವಿನ ಜಾಗವನ್ನು ಗ್ಯಾಸ್ ಸ್ಟೌವ್ ಅಥವಾ ಒವನ್, ಅಥವಾ ಹಾಟ್‌ ಪ್ಲೇಟ್, ಬೀಸೆಕಲ್ಲು, ತಿರುವೆ ಕಲ್ಲಿನ ಸ್ಥಾನವನ್ನು ಮಿಕ್ಸರ್ ಮತ್ತು ಗ್ರೈಂಡರ್‌, ಕಡೆಗೋಲಿನ ಜಾಗವನ್ನು ಬ್ಲೆಂಡರ್ ಪಡೆದು ಕೊಂಡಿದೆ. ಇಷ್ಟೇ ಅಲ್ಲದೆ ಬೇರೆ ವಿದ್ಯುತ್ ಉಪಕರಣಗಳು ಅಡಿಗೆ ಮನೆಯನ್ನು ಆಕ್ರಮಿಸಿ ಕೊಂಡಿವೆ. ಅಡಿಗೆ ಮನೆಯ ಜೊತೆಗೆ ಹೊರಗೂ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅದು ಅವಶ್ಯಕ ಕೂಡ. ಅದರೆ ಇವುಗಳ ಅನೂಕೂಲದ ಜೊತೆಗೆ ಅಪಾಯವು ಕಟ್ಟಿಟ್ಟ ಬುತ್ತಿ. ಸ್ಪಲ್ಪ ಎಚ್ಚರ ತಪ್ಪಿದರೂ ಅಡಿಗೆಮನೆಗಳಲ್ಲಿ ಅನಾಹುತಗಳು ಗ್ಯಾರಂಟಿ. ಬಟ್ಟೆಗೆ ಬೆಂಕಿ ತಗಲುವುದು, ಬಿಸಿ ಎಣ್ಣೆ ಅಥವಾ ನೀರು ಮೈ ಕೈ ಮೇಲೆ ಬೀಳುವುದು, ಗ್ಯಾಸ್ ಸ್ಪೋಟ, ಮಿಕ್ಸಿ ಜಾರ್‌ಗೆ ಕೈ ಸಿಕ್ಕಿಕೊಳ್ಳುವುದು, ವಿದ್ಯುತ್ ಶಾಕ್ ಇತ್ಯಾದಿ, ಇತ್ಯಾದಿ. ಇವುಗಳೆಲ್ಲಾ ಉದಾಹರಣೆಗಳಷ್ಟೆ. ಅದೇಷ್ಟೋ ಅನಾಹುತಗಳು ಪ್ರತಿ ದಿನ ಒಂದಲ್ಲ ಒಂದು ಅಡಿಗೆ ಮನೆಯಲ್ಲಿ ಉಪಕರಣಗಳನ್ನು ಬಳಸುವಾಗ ನೆಡೆಯುತ್ತದೆ. ಈ ರೀತಿ ಮಹಿಳೆಯರಾದ ನಾವು ಮನೆಯಲ್ಲಿ ದಿನ ಹೆಚ್ಚು ಸಮಯವನ್ನು ಕಳೆಯುವುದು ಅಡಿಗೆ ಮನೆಯಲ್ಲೇ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಡಿಗೆ ಮನೆಯೆ ಮನೆ ಅವಘಡಗಳು ನೆಡೆಯುವ ಪ್ರಾಥಮಿಕ ಸ್ಥಳ ಕೂಡ. ಇದರಲ್ಲಿ ಅಶ್ಚರ್ಯ ಪಡುವುಂತಹದು ಏನು ಇಲ್ಲ. ಬಗೆ ಬಗೆ ಎಲೆಕ್ಟ್ರಿಕ್ ಉಪಕರಣಗಳು, ಗ್ಯಾಸ್‌, ಬೆಂಕಿ, ಹರಿತವಾದ ವಸ್ತುಗಳನ್ನೆಲ್ಲಾ ಹೊಂದಿರುವಾಗ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಸಾಮಾನ್ಯ ಕೂಡ. ಚಾಕು, ಕತ್ತಿ, ಗ್ಯಾಸ್‌, ಬೆಂಕಿ, ಮಿಕ್ಸರ್, ಗ್ರೈಂಡರ್, ಓವನ್ , ಪ್ರಿಜ್ಡ್ ಅಥವಾ ಇನ್ಯಾವುದೇ ವಸ್ತುಗಳನ್ನು ಉಪಯೋಗಿಸುವಾಗ ಆಗಬಹುದು. ಅನಾಹುತಗಳು ಕ್ಷಣಾರ್ಧದಲ್ಲಿ ಸಂಭವಿಸತ್ತವೆ. ನಾವು ಮಹಿಳೆಯರು ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದರೆ ಇವುಗಳನ್ನು ತಡೆಯುವುದು ಸುಲಭ. ನಾವು ಮನೆಯಲ್ಲಿ ಈ ರೀತಿಯ ಅಡುಗೆ ಮನೆಯ ಅನಾಹುತಗಳನ್ನು ತಡೆಗಟ್ಟಲು ಹಲವು ಮುಂಜಾಗತ್ರ ಕ್ರಮಗಳನ್ನು ಖಂಡಿತವಾಗಿ ತೆಗೆದುಕೊಳ್ಳಬಹುದು. ಅವುಗಳಲ್ಲಿ ಅತಿ ಸರಳ ಹಾಗೂ ಅಗತ್ಯ ಕ್ರಮಗಳು ಇಲ್ಲಿವೆ.
ಗಡಿಬಿಡಿಯಲ್ಲಿ ಅಡಿಗೆ ಮಾಡುವಾಗ ನೀರು, ಎಣ್ಣೆ ಅಥವಾ ಯಾವುದಾದರೂ ಪದಾರ್ಥ ನೆಲ ಮೇಲೆ ಬೀಳುವುದು ಕಾಮಾನ್. ಆದರೆ ಅವುಗಳು ಅಪಾಯಕಾರಿ ಎನ್ನುವ ಅಂಶ ಕೂಡ ಅಷ್ಟೆ ನಿಜ. ಅವುಗಳು ಅವಘಡಗಳಿಗೆ ಮೂಲವಾಗ ಬಹುದು. ಹಾಗಾಗಿ ನೆಲದ ಮೇಲೆ ಚೆಲ್ಲಿರುವುದನ್ನು ಉದಾಸೀನ ಮಾಡದೇ ತಕ್ಷಣ ಕ್ಲೀನ್ ಮಾಡಿ. ಅಡಿಗೆ ಮನೆಯ ನೆಲ ಜಾರದಂತೆ (slip-resistant/matte finished) ಇದ್ದರೆ ಉತ್ತಮ.
ಅಡಿಗೆ ಮಾಡುವಾಗ ನಿಮ್ಮ ಬಟ್ಟೆ ಮತ್ತು ಕೂದಲಿನ ಕಡೆ ಗಮನವಿರಲಿ. ಕೂದಲನ್ನು ಕಟ್ಟಿ ಕೊಳ್ಳಿ. ಸೀರೆ ಸೆರಗಿನ ಕಡೆ ಲಕ್ಷ್ಯವಿರಲಿ, ಉದ್ದ ತೋಳನ್ನು ಹಿಂದಕ್ಕೆ ಮಡಚಿ ಕೊಳ್ಳಿ. ಸಾಧ್ಯವಾದಷ್ಟೂ ಕಾಟನ್ ಬಟ್ಟೆಗಳನ್ನು ಧರಿಸಿ.
ಪೇಪರ್‌, ಬಟ್ಟೆ, ಎಣ್ಣೆ, ಟವೆಲ್, ಅಲ್ಕೋಹಾಲ್ ಹಾಗೂ ಇತರೆ ಯಾವುದೇ ಸುಭವಾಗಿ ಉರಿ ಹೊತ್ತಿಕೊಳ್ಳುವ ವಸ್ತುಗಳನ್ನು ಬೆಂಕಿ ಅಥವಾ ಸ್ಟೌವ್‌ನಿಂದ ದೂರವಿಡಿ.
ಅಡುಗೆ ಮನೆಯಿಂದ ಹೊರ ಹೋಗುವಾಗ ಓಲೆ ಅಫ್ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ ಗ್ಯಾಸ್‌ ಸಿಲಿಂಡರ್‌ನ ರೆಗ್ಯುಲೇಟರ್ ಬಂದ್‌ ಮಾಡಿಡಿ.
ಪಾತ್ರೆಯಲ್ಲಿ ಎಣ್ಣೆ, ಬೆಣ್ಣೆ , ತುಪ್ಪವನ್ನು ಕಾಯಿಸುವಾಗ ಆದಷ್ಟೂ ಅಡಿಗೆ ಮನೆಯಲ್ಲಿ ಇರಿ. ಒಂದೊಮ್ಮೆ ಬೆಂಕಿ ಹತ್ತಿ ಕೊಂಡರೆ ನೀರು ಸುರಿಯಬೇಡಿ. ಅಡುಗೆಮನೆಯಲ್ಲಿ ಅಗ್ನಿ ಶಾಮಕ ಉಪಕರಣವನ್ನು ಹೊಂದಿರುವುದು ಕ್ಷೇಮ.
ಸರಿಯಾದ ಗಾಳಿ, ಬೆಳಕು ಅಡಿಗೆ ಮನೆಯಲ್ಲಿರುವಂತೆ ನೋಡಿಕೊಳ್ಳಿ. ಮಂದ ಬೆಳಕಿನ ಅಡಿಗೆ ಮನೆಯಲ್ಲಿ ಕೆಲಸ ಮಾಡುವುದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಹರಿತವಾದ ಸಲಕರಣೆಗಳನ್ನು ಉಪಯೋಗಿಸುವ ಜಾಗೂರಕರಾಗಿರಿ ಹಾಗೂ ಅವುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರಿಸಿ.
ಎಲೆಕ್ಟ್ರಿಕ್ ಉಪಕರಣಗಳನ್ನು ಉಪಯೊಗಿಸುವಾಗ ಸಾಧ್ಯವಾದಷ್ಟು ಜಾಗರೂಕರಾಗಿ. ವೈಯರ್‌ಗಳನ್ನು, ಸ್ವಿಚ್‌ಗಳನ್ನು ಹಾಗೂ ಉಪಕರಣಗಳನ್ನು ನೀರಿನಿಂದ ದೂರ ಇಡಿ. ವೈಯರ್‌ಗಳಲ್ಲಿ, ಸ್ವಿಚ್‌ಗಳಲ್ಲಿ ಯಾವುದೇ ದೋಷ ಕಂಡು ಬಂದಲ್ಲಿ ನಿರ್ಲಕ್ಷಿಸದೇ ಬದಲಾಯಿಸಿ ಅಥವಾ ಸರಿ ಪಡಿಸಿ. ಆಗುವ ಅಕ್ಸಿಡೆಂಟ್‌ಗಳನ್ನು ತಪ್ಪಿಸಿ.
ಗೃಹ ಉಪಯೋಗಿ ವಿದ್ಯುತ್ ಉಪಕರಣಗಳನ್ನು ಬಳಸುವ ಮುನ್ನ ಯುಸರ್ ಮ್ಯಾನುಯಲ್‌ ಅನ್ನು ಓದಿಕೊಳ್ಳಿ. ಇದು ಬಹಳ ಸಹಕಾರಿ ಹಾಗೂ ಅದರಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಿ.
ಫ್ರಿಜ್ಡ್‌ನ್ನು ಕ್ಲೀನ್ ಮಾಡುವಾಗ ಸ್ವಿಚ್ ಅಫ್ ಮಾಡಿ ಹಾಗೂ ಸಂಪರ್ಕವನ್ನು ತೆಗೆಯಲು ಮರೆಯದಿರಿ.
ಮಿಕ್ಸರ್ ಜಾರ್‌ಗಳಿಗೆ ಅದರ ಸಾಮರ್ಥ್ಯಕ್ಕೆ ತಕ್ಕಷ್ಟೆ ಹಾಕಿ, ಒವರ್‌ ಲೋಡ್ ಅಪಾಯಕಾರಿ. ಅತಿ ಗಟ್ಟಿಯಾದ ಪದಾರ್ಥಗಳನ್ನು ಬಳಸ ಬೇಡಿ. ಮಿಕ್ಸರ್ ಜಾರ್ ಸರಿಯಾಗಿ ಫಿಟ್‌ ಆಗಿದ್ದೇಯೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
ಒವನ್‌ಗಳಿಗೆ ಸೂಕ್ತವಾದ ಪಾತ್ರೆಗಳನ್ನೇ ಬಳಸಿ.
ನಿಮ್ಮ ಅಡಿಗೆ ಮನೆಯನ್ನು ಸುರಕ್ಷಿತ ತಾಣವಾಗಿಸಿ. ಇಲ್ಲಿನ ಅಪಾಯಕಾರಿ ವಸ್ತುಗಳನ್ನು ಮಕ್ಕಳಿಂದ ದೂರವಿಡಿ. ಹಾಗೇಯೆ ಅಡಿಗೆ ಮಾಡುವಾಗ ಮಕ್ಕಳನ್ನು ಅಡಿಗೆ ಮನೆಯಿಂದ ದೂರವಿಡಿ.
ಅಡಿಗೆ ಮನೆಯಲ್ಲಿ ಫಸ್ಟ್ ಏಡ್ ಕಿಟ್ ಇಟ್ಟುಕೊಳ್ಳಿ.
ಇಡೀ ಮನೆಯ ಹಾಗೂ ಮನೆಯವರ ಸಂತೋಷ ಹೋಮ್ ಮೇಕರ್‌ ಆಗಿರುವ ಮಹಿಳೆಯ ಮೇಲೆ ಅವಲಂಬಿತವಾಗಿದೆ. ನಾವು ಮಾಡುವ ಕೆಲಸದಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಾಕು ಮನೆ ಆನಂದವನ ವಾಗುತ್ತದೆ. ಅಡುಗೆಮನೆಯನ್ನು ಸುರಕ್ಷಿತ ತಾಣವಾಗಿಸುವ ನಿಟ್ಟಿನಲ್ಲಿ ಸ್ಪಲ್ಪ ಮುತುವರ್ಜಿ ವಹಿಸಿದರೆ ಮಹಿಳೆ ಸ್ಮಾರ್ಟ್ ಗೃಹಣಿ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

(2010ರ ನವೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)