July 19, 2010

ಕಾಫಿ ಕಣಿವೆಯೊಲ್ಲೊಂದು ವಿಹಾರಧಾಮ "ಕಲ್‌ಗ್ರೀನ್‌ ವ್ಯಾಲಿ"


ಬೆಂಗಳೂರಿನ ನಮ್ಮ ಸ್ನೇಹಿತರಾದ ಮುರುಳಿ ಕುಟುಂಬದವರು ನಮ್ಮ ಮನೆಗೆ ಬಂದಾಗ ಯಾವೂದಾದರೂ ಒಂದು ಸ್ಥಳಕ್ಕೆ ಭೇಟಿ ನೀಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಸ್ಥಳದ ಆಯ್ಕೆ ಮಾಡಿದು ಅವರೇ. ಅವರ ಆಯ್ಕೆ ಕಾಫಿ ಕಣಿವೆಯ ಅತಿ ಸುಂದರ ನಯನ ಮನೋಹರ "ಕಲ್‌ಗ್ರೀನ್‌ ವ್ಯಾಲಿ ರೆಸಾರ್ಟ್" ಆಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಸುಮಾರು 13ಕಿ.ಮಿ ದೂರದಲ್ಲಿರುವ "ಕಲಸಪುರ ಎಸ್ಟೇಟ್" ಇಂದು "ಕಲ್‌ಗ್ರೀನ್ ವ್ಯಾಲಿ ರೆಸಾರ್ಟ್" ರೂಪ ಪಡೆದುಕೊಂಡಿದೆ. ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಈ ವಿಹಾರಧಾಮ ಹಬ್ಬಿದೆ. ಅಲ್ಲಿನ ಅಸ್ಮರಣೀಯ ಅನುಭವ ಇಲ್ಲಿದೆ.
ಕೊಪ್ಪದಲ್ಲೊಂದು ರೆಸಾರ್ಟ್ ಇದೆ ಎಂದು ತಿಳಿದಾಗ ತುಂಬಾ ಆಶ್ಚರ್ಯವಾಯಿತು, ನಮ್ಮ ಮಲೆನಾಡಿನಲ್ಲಿ ಈ ಮೂಲೆಯಲ್ಲಿ ಅದೂ ನಮಗೆ ಇಷ್ಟು ಸಮೀಪವಿರುವ ವಿಹಾರಧಾಮದ ಪರಿಚಯವೇ ನಮಗಿರಲಿಲ್ಲ. ನಮಗಿಂತ ಒಂದು ದಿನ ಮೊದಲು ತಲುಪಿದ ನಮ್ಮ ಸ್ನೇಹಿತರನ್ನು (ಮುರುಳಿ,ತ್ರಿವೇಣಿ & ರಚನ) ನಾವು (ನಾನು, ಸುನೀಲ್, ಸ್ವರ) ಮಾರನೇ ದಿನ ಸೇರಿಕೊಂಡೆವೆವು. ಕೊಪ್ಪದಿಂದ ಸುಮಾರು 13 ಕಿ.ಮಿ ಪ್ರಯಾಣಿಸಿದ ನಂತರ ಕಲಸಪುರ ಎಸ್ಟೇಟ್ ದರ್ಶನವಾಯಿತು (ಈ ರಸ್ತೆಯಲ್ಲಿ ಯಾವಾದರೂ ಬಾರಿ ವಾಹನ ಎದುರಾದರೆ ನಾವು ಹಿಮುಖ್ಖವಾಗಿ ಚಲಿಸಬೇಕಷ್ಟೆ, ಅದರ ಅನುಭವವೂ ನಮಗಾಯಿತು.) ಆದರೆ ನಾವು ತಲುಪಬೇಕಾದ ಜಾಗ ತೋಟದ ತುತ್ತತುದಿಯಾಗಿತ್ತು. ಮತ್ತೆ ನಮ್ಮ ಕಾರು ಕಾಫಿ ತೋಟವನ್ನು ಸೀಳಿಕೊಂಡು ಮೇಲೆರುವುದನ್ನು ಮುಂದುವರಿಸಿತು . ಕಣ್ಣು ಹಾಯಿಸಿದಷ್ಟು ಉದ್ದಗಲಕ್ಕೂ ಕಾಫಿ ತೋಟ, ಮಧ್ಯ ಮರಗಳು, ಅಂಚಿಗೆ ಬೆಟ್ಟಗಳ ನಡುವೆ ಎಸ್ಟೇಟ್‌ನ ತಲೆಯತ್ತ ಸಾಗುವ ರೀತಿಯೇ ಖುಷಿಯಾಗುತ್ತದೆ. ನಮ್ಮ ಗಮ್ಯ ಸೇರಿದಾಗ ಸರಿ ಮಧ್ಯಾಹ್ನವಾಗಿತ್ತು, ನಾವು ಸಮುದ್ರ ಮಟ್ಟಕ್ಕಿಂತ 3000 ಅಡಿ ಮೇಲಿದ್ದೆವು. ಹುಲ್ಲು ಹಾಸು,ಬಣ್ಣ ಬಣ್ಣದ ಹೂವಿನ ಗಿಡಗಳಿಂದ ಸುತ್ತುವರಿದ ಒಂದು ದೊಡ್ಡ ಬಂಗ್ಲೆ ತೋಟದ ಅತಿ ಎತ್ತರದ ಪ್ರದೇಶದಲ್ಲಿ ಮೈ ಚಾಚಿ ನಿಂತಿತು..
ನಮ್ಮ ಉಟೋಪಾಚಾರಕ್ಕೆ ಎಂದು ನೇಮಿಸಿದ ನಾಗರಾಜ್ ಫ್ಯಾಷನ್ ಫ್ರೂಟ್‌ ಜ್ಯೂಸ್‍‌ನೊಂದಿಗೆ ನಮ್ಮನ್ನು ಸ್ವಾಗತಿಸಿದರು. ನಂತರ ಅಲ್ಲೇ ಅಕ್ಕಪಕ್ಕ ಸುತ್ತಾಡಿದ್ದೇವು. ನಮಗಿಂತ ಒಂದು ದಿನ ಮೊದಲು ಅಲ್ಲಿಗೆ ತಲುಪಿದ ನಮ್ಮ ಫ್ರೆಂಡ್ಸ್ ಈಗ ನಮ್ಮ ಗೈಡ್‌ ಆಗಿದ್ದರು. ದೊಡ್ಡ ಜಾತಿಯ ಬಿದಿರು ಮೊದಲು ನಮ್ಮನ್ನು ಸೆಳೆಯಿತು. ತರಾವರಿ ಜಾತಿಯ ಫಲಭರಿತ ಮರಗಳು ಸುತ್ತಲೂ ಸರ್ವೇಸಾಮಾನ್ಯ. ಹಲಸು, ಕಿತ್ತಳೆ, ಮುಸುಂಬಿ, ಪುನರ್ಪುಳಿ, ಚೆರಿ, ಜಂಬು ನೇರಳೆ, ಪೇರಲೆ, ಮರಸೇಬು ಹೀಗೆ ಹಣ್ಣು ತುಂಬಿದ ಮರಗಳ ಪಟ್ಟಿ ಬೆಳೆಯುತ್ತದೆ.
ವಿಲ್ಲಾಗೆ ಮರಳಿದ್ದಾಗ ಡೈನಿಂಗ್ ಟೇಬಲ್‌ ಮೇಲೆ ಕಲಾತ್ಮಕವಾಗಿ ಜೋಡಿಸಿದ ಬಿಸಿ ಬಿಸಿ ಸಾದಿಷ್ಟ ಬಗೆಗಳು ನಮ್ಮನ್ನು ಕಾಯುತ್ತಿದ್ದವು. ನಿತ್ಯಕ್ಕಿಂತ ಜಾಸ್ತಿ ಊಟ ಒಳಸೇರಿತು. ಊಟದ ನಂತರ ಮಳೆಯ ಕಾರಣ ಹೊರಗೆ ಹೊರಡದ ನಮಗೆ ಅಲ್ಲಿದ್ದ ಕೇರಂ ಬೋರ್ಡ್ ಸಮಯ ಕಳೆಯಲು ನೆರವಾಯಿತು.
ಸಂಜೆ ಟೀ ಮತ್ತು ಬೊಂಡ ಸವಿದು ಬೊಟಿಂಗ್‌ಗೆ ಕರೆದೊಯ್ಯಲು ನಮಗಾಗಿ ಕಾದಿದ ಲಕ್ಷಣರ ಸಾರಥ್ಯದ ಜೀಪು ಹತ್ತಿ ತೋಟದ ಕೆಳ ಭಾಗದಲ್ಲಿರುವ ಕೆರೆ ತಲುಪಿದೆವು. ಸುಮಾರು ಆರು ಎಕರೆ ಜಾಗದಲ್ಲಿರುವ ದೊಡ್ಡ ಕೆರೆಯಲ್ಲಿನ ಬೋಟಿಂಗ್‌ ಅನುಭವವನ್ನು ಮಾತ್ರ ವರ್ಣಿಸಲು ಸಾಧ್ಯವಿಲ್ಲ. ರೋ ಹೌಸ್ ಮತ್ತು ಟ್ರೀ ಹೌಸ್‌ಗಳನ್ನು ವೀಕ್ಷಿಸಿ ಬಂಗ್ಲೆಗೆ ಮರಳಿದಾಗ ಕತ್ತಲು ಕಣ್ಣಿಗೆ ಕಟ್ಟಿತು. ಊಟದ ನಂತರ ಮಧ್ಯ ರಾತ್ರಿವರೆಗೆ ನಮ್ಮ ಹರಟೆ ಮುಂದುವರೆದಿತ್ತು ..ಹೊರಗೆ ಕಗ್ಗತ್ತಳು ಮಾತ್ತು ಕೀಟಗಳ ಕೂಗು ನಿರಂತರವಾಗಿತ್ತು.
ಈ ಮಧ್ಯ ನಾನು ಈ ರೆಸಾರ್ಟ್‌ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ. ಈ "ಕಲ್‌ಗ್ರೀನ್‌ ವ್ಯಾಲಿ ರೆಸಾರ್ಟ್‌" "ಕಲಸಪುರ ಎಸ್ಟೇಟ್‌" ಮಾಲೀಕರಾದ ಕೊಲಾಸ್ ಸಹೋದರರ (ಸುನೀಲ್, ಅನಿಲ್ ಮತ್ತು ಡೆರಿಲ್) ಇನ್ನೂ ಒಂದು ವರ್ಷದ ಕೂಸು. ಮೂವರು ಸಹೋದರರು ದೂರದ ಪಟ್ಟಣಗಳಲ್ಲಿ ವಿಧ್ಯಾಭ್ಯಾಸ ಮುಗಿಸಿ ಕೂಡ ತಮ್ಮ ತೋಟಕ್ಕೆ ಮರಳಿ ಕೃಷಿಯನ್ನು ಮುಂದುವರೆಸುತ್ತಿರುವುದು ಇಂದು ಕೃಷಿಯನ್ನು ತೊರೆದು ನಗರವನ್ನು ಸೇರುತ್ತಿರುವ ಯುವಜನತೆಗೆ ಮಾದರಿಯಾಗಿದ್ದೆ. ಕಾಫಿ ಬೆಲೆ ಕೈಕೊಟ್ಟಾಗ, ತೋಟವನ್ನು ಮಾರಲು ಇಚ್ಛಿಸದೇ ಅದನ್ನೇ ಬಂಡವಾಳವಾಗಿಸಿ ಕೊಂಡು ಈ ವಿಹಾರಧಾಮಕ್ಕೆ ಮುನ್ನುಡಿ ಬರೆದರು. ಈ ಸಹೋದರರು ಕೃಷಿಯೊಂದಿಗೇ ಈ ಉದ್ಯಮವನ್ನು ಬೆಳೆಸುತ್ತಿರುವುದು ಪ್ರಶಂಸನೀಯ. ನಮ್ಮನ್ನು ಭೇಟಿಯಾದ ಅನಿಲ್‌ ಕೊಲಾಸ್‌ ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. "ನಮಗೆ ತೋಟವನ್ನು ಮಾರಲು ಇಷ್ಟವಿಲ್ಲ, ಹಾಗೆಯೇ ಹಾಳಗೊಡಲು ಸಹ. ಇಲ್ಲಿಂದ ಹೊರಗೆ ಹೋಗಿ ದುಡಿಯಲು ನಮಗೆ ಸಾಧ್ಯವಿಲ್ಲ. ಬೆಲೆಯನ್ನು ನಂಬಿ ಕುಳಿತರೆ ಕೆಟ್ಟೆವು, ಆದರಿಂದ ಈ ಯೋಜನೆಯನ್ನು ಪ್ರಾರಂಬಿಸಿದ್ದೆವು" ಎಂಬುದು ಸ್ವತಃ ಅವರ ಮಾತುಗಳು. ಮೂವರು ಸಹೋದರರು ಒಂದೊಂದು ಜವಬ್ದಾರಿಗಳನ್ನು ಹಂಚಿಕೊಂಡಿದ್ದೇವೆ ಎನ್ನುತ್ತಾರೆ ಅವರು.
ಇಲ್ಲಿ ಮೂರು ವಿಧದ ಮನೆಗಳು ಲಭ್ಯ. ವಿಲ್ಲಾ (ದೊಡ್ಡ ಬಂಗ್ಲೆ), ರೋ ಹೌಸ್‌ (ಸಾಲು ಮನೆಗಳು) ಮತ್ತು ಟ್ರೀ ಹೌಸ್ (ಮರದ ಮೇಲೆ ಮನೆ). ನಮ್ಮ ಇಚ್ಛೆಗೆ ಅನುಸರವಾಗಿ ನಾವು ಆಯ್ಕೆಮಾಡಿಕೊಳ್ಳಬಹುದು.
ವಿಲ್ಲಾ ಎರಡು ಅಂತಸ್ತಿನ ಮೂರು ಕೋಣೆಗಳ ಪ್ರತ್ಯೇಕ ಆಡುಗೆ ಮನೆ, ಊಟದ ಮನೆ, ಟಿವಿ ರೂಮ್‌ಗಳನ್ನು ಒಳಗೊಂಡ ವಿಶಾಲವಾದ ಬಂಗ್ಲೆಯಾಗಿದೆ. ಇದು ಎಲ್ಲಾ ಅಧುನಿಕ ಸೌಲಭ್ಯಗಳೊಂದಿಗೆ ಮಲೆನಾಡಿನ ತೋಟಮನೆಯ ಚಾಪನ್ನು ಉಳಿಸಿಕೊಂಡಿರುವುದು ಇದರ ವಿಶೇಷವಾಗಿದೆ. ಮಾಳಿಗೆ ಮೇಲಿನ ಮೂರು ಬದಿಯ ವಿಶಾಲವಾದ ಬಾಲ್ಕನಿಗಳು ಸುತ್ತಲಿನ ಪ್ರಕೃತಿಯನ್ನು ಸವಿಯಲು ಹೇಳಿಮಾಡಿಸಿದ ಸ್ಥಳವಾಗಿದೆ.
ರೋ ಹೌಸ್ ಹೆಸರೇ ಹೇಳುವಂತೆ ಸಾಲು ಮನೆಗಳು. ಎಲ್ಲಾ ಸೌಲಭ್ಯಗಳೊಂದಿಗೆ ಎರಡು ರೂಮ್‌ಗಳ ಮನೆಗಳು ಸಾಲಿನಲ್ಲಿವೆ.
ಮರದ ಮೇಲೆ ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಟ್ರೀ ಹೌಸ್ ಅದ್ಭುತವಾಗಿ ಮೂಡಿ ಬಂದಿದೆ. ಇಲ್ಲಿ ದೀಪ ಮತ್ತು ಬಿಸಿನೀರು (ಸೋಲಾರ್) ಸದಾ ಲಭ್ಯ. ಶೌಚಾಲಯದ ವ್ಯವಸ್ಥೆ ಕೂಡ ಮರದ ಮೇಲೆಯೇ.
ಬೋಟಿಂಗ್, ಟೀ ಪ್ಲಾಂಟೇಷನ್ ವೀಕ್ಷಣೆ, ಸೂರ್ಯಸ್ತ ಸ್ಥಳದ ಭೇಟಿ, ಟ್ರಕಿಂಗ್‌ಗಳು ಈ ವಿಹಾರಧಾಮದ ಭಾಗವಾಗಿದೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಕುಪ್ಪಳಿ, ಶೃಂಗೇರಿ, ಕುಂದಾದ್ರಿ, ಆಗುಂಬೆ ಮುಂತಾದವುಗಳು ಈ ರೆಸಾರ್ಟ್‌ಗೆ ಹತ್ತಿರದಲ್ಲಿರುವುದು ಇಲ್ಲಿ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಯಾವುದೇ ರೀತಿಯ ಮಾಲಿನ್ಯವಿಲ್ಲದೆ, ಬೆಟ್ಟ ಗುಡ್ಡಗಳ ನಡುವೆ ಹಕ್ಕಿಗಳ ಕಲರವಗಳೊಂದಿಗೆ ಕಳೆಯುವ ಸಮಯ ನಾವು ಯಾಂತ್ರಿಕ ಜೀವನದಿಂದ ದೂರ ಬೇರೆ ಲೋಕದಲ್ಲಿ ಕಳೆದ ಹಾಗೆ ಭಾಸವಾಗುತ್ತದೆ. ಕಾಡಿನ ಸೌಂದರ್ಯದ ನಡುವೆ ಎಲ್ಲಾ ಅಧುನಿಕ ಸೌಕರ್ಯಗಳೊಂದಿಗೆ ಸ್ವಚ್ಛ, ಸುಂದರ, ಪ್ರಶಾಂತವಾದ ಹಚ್ಚ ಹಸಿರಿನ ಪರಿಸರದ ನಡುವಿನ ಕಾಫಿ ಕಣಿವೆಯ ಈ ರೆಸಾರ್ಟ್‌ ಒಂದು ಉತ್ತಮ ಹಾಲಿಡೇ ಸ್ಪಾಟ್‌ ಆಗಿದೆ.
ನಾಗರಾಜ್‌, ಹಮೀದ್‌, ಅಣ್ಣಪ್ಪ, ಲಕ್ಷಣ ಇವರೆಲ್ಲಾರ ನಗು ಮೊಗದ ಸೇವೆ, ಸಕಲ ಸೌಲಭ್ಯಗಳ ಲಭ್ಯತೆ, ಕುಂದು ಕೊರತೆಗಳ ಬಗ್ಗೆ ಮಾಲೀಕರ ನಿರಂತರ ವಿಚಾರಣೆಗಳು ಒಮ್ಮೆ ಬಂದವರನ್ನು ಪುನಃ ಬರುವಂತೆ ಮಾಡುತ್ತವೆ.
ಮಾರನೆ ದಿನ ಹಾಗೆ ಒಂದು ರೌಂಡ್‌ ಆಡಾಡಿ, ತಿಂದಿ ಮುಗಿಸಿ ಇಷ್ಟವಿಲ್ಲದೆ ಹೋರಡುವ ತಯಾರಿ ನೆಡೆಸಿದೆವು. ಸ್ವಲ್ಪ ಹರಟೆ ಮತ್ತೊಮ್ಮೆ ಟೀ ಮುಗಿಸಿ ಸ್ನೇಹಿತರಿಗೆ ಬಾಯ್ ಹೇಳಿ ಭಾರದ ಮನಸ್ಸಿನಿಂದ ಕಾರು ಏರಿದೇವು, ವಿಲ್ಲಾವನ್ನು ಹಿಂದಿಕ್ಕಿ ಕಾರು ಗುಡ್ಡವನ್ನು ಇಳಿಯಲು ಪ್ರಾರಂಭಿಸಿತು. ಇಂದು ಕೃಷಿಯನ್ನು ಕಡೆಗಣಿಸಿ ಪಟ್ಟಣ ಸೇರುತ್ತಿರುವ ಯುವಜನರು ಹೀಗೆ ಯಾವುದಾದರೂ ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಲ್ಲಿ ವ್ಯವಸಾಯವು ಆಸಕ್ತಿದಾಯಕ ಮತ್ತು ಲಾಭದಾಯಕವಾಗುವುದು ದೂರವಿಲ್ಲ ಎಂಬ ಯೋಚನೆ ನನ್ನ ಮನದಲ್ಲಿ ಮೂಡಿತು.