January 19, 2010

ಆಡುಗೆಮನೆಯಲ್ಲೊಂದು ಅನಾಹುತ !!

ನನಗೆ ಮೊದಲಿನಿಂದಲೂ ನನ್ನ ಕೈಯ ನೀಳ ಬೆರಳುಗಳು ಮತ್ತು ಉಗುರುಗಳ ಬಗ್ಗೆ ವಿಷೇಶ ಒಲವು. ಸ್ವಲ್ಪ ಜಂಬ ಎಂದರೂ ತಪ್ಪಾಗಲಾರದೂ. ಯಾವಾಗಲೂ ನನ್ನ ತಂಗಿಯ ಗಿಡ್ಡ ಗಿಡ್ಡ ಬೆರಳುಗಳ ಜೊತೆ ಹೋಲಿಸಿಕೊಂಡು ಖುಷಿಪಡುತ್ತಿದ್ದೆ. ನಂತರ ಹಾಸ್ಟೇಲಿನಲ್ಲಿದ್ದ ದಿನಗಳಲ್ಲೂ ಅಷ್ಟೇ, ಗೆಳತಿಯರು ನನ್ನ ಕೈ ಬೆರಳು ಮತ್ತು ಉಗುರಿನ ಬಗ್ಗೆ ಕಾಂಪ್ಲಿಮೆಂಟ್ ಕೊಡುತ್ತಿದ್ದಾಗ ಖುಷಿಯಿಂದ ನನ್ನ ಕೈಗಳ ಬಗ್ಗೆ ನನಗೆ ಗೊತ್ತಿಲ್ಲದ ಹಾಗೆ ಒಲವು ಬೆಳೆಸಿಕೊಂಡೆ. ತುಂಬಾ ಆಸ್ಥೆಯಿಂದ ಉಗುರುಗಳನ್ನು ಬೆಳೆಸುವುದು, ಅದಕ್ಕೆ ಚೆಂದದ ಆಕಾರ ಕೊಡುವುದನ್ನು ಅಭ್ಯಾಸ ಮಾಡಿಕೊಂಡೆ. ಬಣ್ಣ ಬಣ್ಣದ ನೈಲ್‌ಪಾಲಿಶ್ ಹಚ್ಚಿಕೊಳ್ಳುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಯಿತು. ಓದು ಮುಗಿದ ನಂತರ ಕೆಲಸಕ್ಕೆ ಸೇರಿಕೊಂಡಾಗ ಸಂಬಳದಲ್ಲಿ ನೈಲ್‌ಪಾಲಿಶ್‌ಗೆಂದೇ ಪ್ರತ್ಯೇಕವಾಗಿ ಖರ್ಚುಮಾಡುತ್ತಿದೆ. ನನ್ನ ಬಳಿ ವಿವಿಧ ನೈಲ್‌ಪಾಲಿಶ್‌ಗಳ ಪುಟ್ಟ ಸಂಗ್ರಹವೇ ಇತ್ತು. ಈ ಪರಿಪಾಟ ಮದುವೆಯಾಗುವ ವರೆಗೆ ಸರಾಗವಾಗಿ ನೆಡೆಯುತ್ತಿತ್ತು
ನಂತರ ಗಂಡ, ಮನೆ, ಮಗು ಹೀಗೆ ಸಂಸಾರ ಸಾಗರದಲ್ಲಿ ನನ್ನ ಪ್ರೀತಿಯ ಹವ್ಯಾಸ ತೇಲಿಹೋಗಿತ್ತು. ಇದರ ಬಗ್ಗೆ ಮನೆಯಲ್ಲಿ ಯಾರದ್ದೂ ವಿರೋಧವಿರದ್ದಿದರೂ ಸಹ, ನಾನು ಬಹುವಾಗಿ ಇಷ್ಟಪಡ್ಡುತ್ತಿದ್ದ ಉಗುರಿಗೆ ಬಣ್ಣ ಹಚ್ಚುವ ಹವ್ಯಾಸ ಮಸುಕಾಗಿತ್ತು.
ಮದುವೆಯಾಗಿ ಐದು ವರ್ಷಗಳ ನಂತರ ಮತ್ತೆ ನಾನು ಮನೆಯಿಂದಲೇ ಕೆಲಸಮಾಡಲು ಪ್ರಾರಂಭಿಸಿದೆ, ಸಂಬಂಳವೂ ಬಂತು. ನಾನೂ ಮೊದಲು ಖರೀದಿಸಿದ ವಸ್ತುವೆಂದರೆ 3 ವಿವಿಧ ಬಣ್ಣದ ನೈಲ್‌ಪಾಲಿಶ್‌ಗಳು. ಇದರ ಮಧ್ಯೆ ಅತೀ ಜಾಗರೂಕತೆಯಿಂದ ಉಗುರುಗಳನ್ನು ಸಹ ಬೆಳೆಸಿದ್ದೆ. ತರಕಾರಿ ಹೆಚ್ಚುವಾಗ, ಪಾತ್ರೆ ತೊಳೆಯುವಾಗ ಅಥವಾ ಇತರೆ ಯಾವಾದಾದರೂ ಕೆಲಸ ಮಾಡುವಾಗ ನನ್ನ ಉದ್ದನೆಯ ಉಗುರುಗಳಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತಿದ್ದೆ. ಸುಮಾರು ಐದು ವರ್ಷಗಳ ನಂತರ ಮತ್ತೆ ಉದ್ದ ಉಗುರು ಬೆಳಸಿ, ನೈಲ್ ಪಾಲಿಶ್ ಹಚ್ಚಿಕೊಂಡು ಸಂಭ್ರಮ ಪಟ್ಟೆ. ನನ್ನ ಪುಟ್ಟ ಮಗಳಿಂದ ಹಿಡಿದು ನನ್ನ ಗಂಡ, ಅತ್ತೆ ಎಲ್ಲರೂ ನನ್ನ ನೀಳ ಸುಂದರವಾದ ಬೆರಳ ಮತ್ತು ಉಗುರುಗಳನ್ನು ಹೊಗಳಿದ್ದಾಗ, ಮತ್ತೆ ನನಗೆ ಹಾಸ್ಟೇಲಿನ ಆ ಸುಂದರ ದಿನಗಳು ನೆನಪಾದವು. ನನ್ನ ಕೈಗಳನ್ನು ಹೆಮ್ಮಯಿಂದ ಪದೇ ಪದೇ ನೋಡಿಕೊಳ್ಳುವುದು ಮತ್ತೆ ನನಗೆ ರೂಡಿಯಾಯಿತು.
ಅಂದು ಬೆಳಿಗ್ಗೆ ಎಳ್ಳುವುದು ಸ್ವಲ್ಪ ತಡವಾಗಿತ್ತು. ಗಡಿಬಿಡಿಯಲ್ಲೇ ಆಡಿಗೆಮನೆಯ ಕೆಲಸ ಪ್ರಾರಂಭಿಸಿದೆ. ಮಿಕ್ಸರ್ ಆನ್ ಮಾಡಿದ್ದಷ್ಟೇ ಗೊತ್ತು, ಮುಚ್ಚಳ ಹಾರಿತು. ಆಯ್ಯೋ ಆಡಿಗೆ ಮನೆಯಲ್ಲಾ ರಂಪವಾಯಿತಲ್ಲಾ..!! ಅಂದು ಕೊಳ್ಳುವಷ್ಟರಲ್ಲೇ ಮುಖದ ಮೇಲೆ ಬಿಸಿ ಹನಿಗಳು ಬಿದ್ದ ಅನುಭವ. ಇವೆಲ್ಲಾ ಕೆಲವೇ ಕ್ಷಣಗಳಲ್ಲಿ ನೆಡೆದು ಹೋಯಿತು.7-8 ಸೆಂಕೆಂಡ್‌ಗಳ ನಂತರವಷ್ಟೇ ನನಗೆ ತಿಳ್ದಿದ್ದು ಮುಖ ಮೇಲೆ ಹಾರಿದ ಆ ಬಿಸಿಯ ಹನಿಗಳು ನನ್ನ ಕೈಯ ರಕ್ತವೆಂದು!! ನನ್ನ ಪ್ರೀತಿಯ ಕೈ ಬೆರಳುಗಳು ಮಿಕ್ಸರ್‌ನ ಜಾರಿಗೆ ಸಿಕ್ಕಿದ್ದವು.
ಈಗ ವಿಕಾರಗೊಂಡಿರುವ ನನ್ನ ಸುಂದರ ಕೈಗಳನ್ನು ನೊಡಿದ್ದಾಗಲ್ಲೇಲ್ಲಾ ಅಂದು ಬೆಳಿಗ್ಗೆ ನೆಡೆದ ಮಿಕ್ಸರ್‌ನ ಘಟನೆ ಮತ್ತೆ ಮತ್ತೆ ನೆನೆಪಾಗುತ್ತದೆ. ನನ್ನ ಕಣ್ಣಾಲಿಗಳು ತುಂಬಿ ಬರುತ್ತವೆ......