June 16, 2011

ಮನೆಯ ಮೇಲೊಂದು ತೋಟ - ರೂಫ್ ಗಾರ್ಡನ್

ಮನೆಯ ಮುಂದೆ ಒಂದು ಸುಂದರವಾದ ಗಾರ್ಡನ್ ಹೊಂದುವ ಆಸೆ ಯಾರಿಗೆ ತಾನೇ ಇರುವುದ್ದಿಲ್ಲ ಹೇಳಿ. ಬಣ್ಣ ಬಣ್ಣದ ತರಾವರಿ ಹೂ ಗಿಡಗಳಿಂದ ತುಂಬಿದ ಕೈ ತೋಟ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೂ ಮುದವನ್ನು ನೀಡುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮನೆಯ ಮುಂದೆ ಗಾರ್ಡನ್ ಹೊಂದಿರುವುದು ಮೊದಲು ಸರ್ವೇಸಾಮಾನ್ಯವಾಗಿತ್ತು. ಹಳ್ಳಿ ಇರಲಿ ಅಥವಾ ನಗರವಾಗಿರಲಿ ಮನೆಯ ಮುಂದೆ ಹೂ ಗಿಡಗಳನ್ನು ಬೆಳೆಸುವುದು ಗೃಹಣಿಯರ ಅಚ್ಚುಮೆಚ್ಚಿನ ಹವಾಸ್ಯವಾಗಿತ್ತು. ಆದರೆ ಈಗ ಸೀಮಿತ ಜಾಗದಲ್ಲಿ ಮನೆ, ಮನೆಯ ಮೇಲೆ ಮನೆಗಳು ಎಲ್ಲ ಕಡೆ ತಲೆ ಎತ್ತಿರುವುದರಿಂದ, ಮನೆಯ ಮುಂದೆ ಹೂದೋಟ ಕಂಡುಬರುವುದು ಬಹಳ ವಿರಳವಾಗಿದೆ. ಮನೆ ಮುಂದೆ ಜಾಗದ ಅಭಾವ, ಮಹಡಿ ಮೇಲೆ ಮನೆಗಳ ಕಾರಣಗಳು ಗಾರ್ಡನ್ ಪರಿಕಲ್ಪನೆಗೆ ಹೊಸ ದಿಕ್ಕನ್ನೇ ನೀಡಿದೆ ಎಂದರೆ ತಪ್ಪಲಾಗರದು. ಅದೇ ರೂಫ್ ಗಾರ್ಡನ್ ಅಥವಾ ಟೆರಸ್ ಗಾರ್ಡನ್ (ಮಾಳಿಗೆ ತೋಟ).

ಸುಮಾರು ೮-೧೦ ಘಂಟೆಗಳ ಕಾಲ ನಿತ್ಯ ವೈಯಕ್ತಿಕ ಮತ್ತು ವೃತ್ತಿಯ ಜಂಜಾಟಗಳನ್ನು ನಿರಂತರವಾಗಿ ನಿಭಾಯಿಸಿದ ನಂತರ, ದಿನದ ಕೊನೆಯಲ್ಲಿ ತೀವ್ರವಾಗಿ ಬಳಲಿರುವ ಸಮಯದಲ್ಲಿ ನಮ್ಮಲ್ಲಿ ಯಾವುದೇ ಚೈತನ್ಯ ಉಳಿದಿರುವುದ್ದಿಲ್ಲ. ಆಗ ನಾವು ಪ್ರಕೃತಿಯಿಂದ ಮಾತ್ರ ಸಮಾಧಾನವನ್ನು ಪಡೆಯಲು ಸಾಧ್ಯ. ಗಾರ್ಡನ್ ಯಾವಾಗಲೂ ರಿಲಾಕ್ಸ್ ಆಗಲು ಒಂದು ಉತ್ತಮ ಸ್ಥಳ, ಆದರೆ ನಗರದಲ್ಲಿ ಸ್ಥಳದ ಅಭಾವದಿಂದ ಮನೆಯ ಮುಂದೆ ತೋಟವನ್ನು ಹೊಂದುವುದು ಅಸಾಧ್ಯವಾಗಿದೆ.
ಈ ರೂಫ್ ಗಾರ್ಡನ್ ಕಾನ್ಸೆಪ್ಟ್ ಮನೆಯ ಮುಂದೆ ಕೈ ತೋಟ ಮಾಡಲು ಸ್ಥಳ ಅಭಾವವನ್ನು ಹೊಂದಿರುವವರಿಗಂತೂ ಒಂದು ವರದಾನವಾಗಿದೆ. ಮಾಳಿಗೆ ತೋಟ ನಿರ್ಮಿಸುವುದು ಜಾಲೆಜಿಂಗ್ ಆದರೂ ಇದರ ಪರಿಕಲ್ಪನೆ ಹೊಸದೇನು ಅಲ್ಲ. ಹಲವು ಶತಮಾನಗಳ ಹಿಂದಿನಿಂದಲ್ಲೂ ಕಂಡು ಬಂದ ಉದಾಹರಣೆಗಳಿವೆ. ಯುರೋಪಿಯನ್ನರು ಶತಮಾನಗಳಿಂದ ರೂಫ್ ಗಾರ್ಡನ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ಮನೆಯ ಮಾಳಿಗೆ ಮೇಲೆ ಗಾರ್ಡನ್ ಹೊಂದುವುದು ಈಗ ಯುರೋಪಿಯನ್ನರಿಗೆ ಮತ್ತು ಬರೀ ನಗರದ ಗಣ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ನಗರ ವಾಸಿಗಳು ತಮ್ಮ ಮನೆಯ ಛಾವಣಿಯ ಮೇಲೆ ಈ ವ್ಯವಸ್ಥೆಯನ್ನು ಹೊಂದಲು ಸಾಧ್ಯ. ಮನೆಯ ತಾರಸಿ ಈಗ ಹಪ್ಪಳ, ಸಂಡಿಗೆ, ಕಾಳು-ಕಡಿ, ಬಣ್ಣೆ ಒಣಿಗಿಸಲು ಮಾತ್ರ ಸೀಮಿತವಾಗಿಸ ಬೇಕಾಗಿಲ್ಲ. ಅದನ್ನು ಒಂದು ಸುಂದರವಾದ ಅಚ್ಚುಕಟ್ಟಾದ ತೋಟವನ್ನು ನಿರ್ಮಿಸುವುದು ನಿಮ್ಮ ಕೈಯಲ್ಲಿದೆ.

ತಮ್ಮ ಮನೆಯ ಥಾರಸಿಯ ಮೇಲೆ ಗಾರ್ಡನ್ ಹೊಂದ ಬಯಸುವರು ಕೆಲವು ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳುವುದು ಅವಶ್ಯಕ. ಪ್ರಥಮವಾಗಿ ತೋಟವನ್ನಾಗಿ ಮಾಡಬೇಕಾಗಿರುವ ಛಾವಣಿಯು ತೋಟದ ಭಾರವನ್ನು ತಡೆಯುವಷ್ಟು ಸುದೃಢವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎರಡನೆಯದಾಗಿ ಥಾರಸಿ ಅಥವಾ ಛಾವಣಿಯು ಇಳಿ ಜಾರನ್ನು ಹೊಂದಿರಬೇಕು ಮತ್ತು ಪರಿಣಾಮಕಾರಿ ಚರಂಡಿ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗೆ ನಿಮ್ಮ ರೂಫ್ ಗಾರ್ಡನ್‌ನಲ್ಲಿ ಯಾವುದೇ ಸೋರಿಕೆ/ಬಿರುಕು ಇಲ್ಲವೆಂಬುದನ್ನು ಸಹ ಖಚಿತ ಪಡಿಸಿಕೊಳ್ಳಿ.

ರೂಫ್ ಗಾರ್ಡನ್ ಮಾಡುವ ಮುನ್ನ ಸರಿಯಾದ ಒಂದು ಯೋಜನೆಯನ್ನು ತಯಾರಿಸಿಕೊಂಡರೆ ಒಳ್ಳೆಯದು. ನಿಮ್ಮ ಮನೆಯ ಛಾವಣಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಸಿದ್ದ ಪಡಿಸಿ. ಗಿಡಗಳನ್ನು ನೆಡೆವ ಮುನ್ನ ಸಹ ಇದನ್ನು ಗಮನದಲ್ಲಿಟ್ಟು ಕೊಂಡು, ಹೂ, ಹಣ್ಣು ಹಾಗೂ ತರಕಾರಿ ಗಿಡಗಳನ್ನು ಸಮಾನವಾಗಿ ವಿಂಗಡಿಸಿ ಕೊಳ್ಳಿ. ಸಾಧ್ಯವಾದಷ್ಟೂ ಕಡಿಮೆ ತೂಕದ ಕುಂಡಗಳಾದರೆ ಒಳ್ಳೆಯದು. ಇನ್ನೂ ಗಿಡಗಳ ಆಯ್ಕೆ ಸಹ ಆಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಧೀರ್ಘಾವಧಿಯಲ್ಲಿ ಬೇರುಗಳು ಛಾವಣಿಯನ್ನು ಭೇದಿಸಿಕೊಂಡು ಹೋಗದೆ ಇರುವಂತಹ ಬೇರು ವ್ಯವಸ್ಥೆಯನ್ನು ಹೊಂದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ವರ್ಷದ ಎಲ್ಲ ಕಾಲಕ್ಕೂ ಹೊಂದಿಕೆಯಾಗುವ ಸುಲಭವಾಗಿ ನಿಭಾಯಿಸ ಬಲ್ಲ ಹೂ ಗಿಡಗಳನ್ನು ಆರಿಸಿ ಕೊಳ್ಳುವುದು ಉತ್ತಮ. ಉದಾಹರಣೆಗೆ ಆಥೋರಿಯಂ, ಕಾರ್ನ್‌ನೇಶಿಯನ್, ಡೇಲಿಯಾ, ಕಾಸ್‌ಮೊಸ್, ಚೆಂಡು ಹೂವು, ಗುಲಾಬಿ, ಮಲ್ಲಿಗೆ ಇತ್ಯಾದಿ. ಹಾಗೆ ಸ್ಟ್ರಾಬೆರಿ, ದಾಳಿಂಬೆ, ಪೈನಾಪಲ್ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಲು ಸಾಧ್ಯ. ಬದನೆಕಾಯಿ, ಟೋಮೋಟೊ. ಮೆಣಸಿನಕಾಯಿ, ಸೊಪ್ಪು ಮತ್ತು ಮುಂತಾದವುಗಳನ್ನು ಸುಲಭವಾಗಿ ಬೆಳೆಯ ಬಹುದು.
ಸುಮಾರು ೧೫-೨೦ ಸೇ.ಮಿ ದಪ್ಪದ ಮಣ್ಣಿನ ಪದರ ಥಾರಸಿಯ ಮೇಲೆ ಗಿಡಗಳನ್ನು ಬೆಳಸಲು ಸಾಕಾಗುತ್ತದೆ. ಮಣ್ಣು, ಮರಳು ಮತ್ತು ಸೂಕ್ತ ಗೊಬ್ಬರದ ಉತ್ತಮ ಮಿಶ್ರಣ ಗಿಡಗಳನ್ನು ಬೆಳಸಲು ಅವಶ್ಯಕ. ಜೂನ್-ಜುಲೈ ತಿಂಗಳು ರಿಪಾಟ್ ಮಾಡಲು ಸರಿಯಾದ ಸಮಯ. ನಿಮ್ಮ ಮನೆಯ ಛಾವಣಿಯನ್ನು ಸುಂದರವಾದ ಗಾರ್ಡನ್‌ ಆಗಿ ಪರಿವರ್ತಿಸಲು ಇಷ್ಟೂ ಬೇಸಿಕ್ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಸಾಕು. ಛಾವಣಿಯ ತೋಟ ಚಿಕ್ಕದಾಗಿ ಚೊಕ್ಕವಾಗಿದರೆ ಸುಂದರವಾಗಿರುತ್ತದೆ.
ರೂಫ್ ಗಾರ್ಡನಿಂಗ್ ಬಗ್ಗೆ ಅಂತರ್‌ಜಾಲದಲ್ಲಿ ಸಾಕಷ್ಟೂ ಮಾಹಿತಿಗಳು ಲಭ್ಯವಿದೆ. ಹಲವು ವೆಬ್ ಸೈಟ್‌ಗಳು ಇದರ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತವೆ. ನಿಮ್ಮ ಮನೆಯ ಟೆರಸಿಗೆ ಹೊಂದುವ ಹಾಗೆ ಗಾರ್ಡನ್‌ನ ಪ್ಲಾನ್‌ನಿಂದ ಹಿಡಿದು ಅದಕ್ಕೆ ಸೂಕ್ತ ಗಿಡಗಳನ್ನು ನೆಡೆವ ವರೆಗಿನ ಎಲ್ಲಾ ಕೆಲಸವನ್ನು ಸರಾಗವಾಗಿ ನಿರ್ವಹಿಸುವ ವೃತ್ತಿಪರ ಲ್ಯಾಂಡ್‌ಸ್ಕೇಪಿಂಗ್ ಎಕ್ಸ್‌ಪರ್ಟ್‌‌ಗಳು ಸಹ ಮಾರುಕಟ್ಟೆಯಲ್ಲಿದ್ದಾರೆ.

ಮಾಳಿಗೆ ತೋಟ ಅಥವಾ ಟೆರೆಸ್ ಗಾರ್ಡನ್ ಕೇವಲ ಮನೆಯ ಅಂದ ಚೆಂದ ಅಥವಾ ಟೈಮ್ ಪಾಸ್ ಹವಾಸ್ಯಕ್ಕೆ ಸೀಮಿತವಾಗಿರದೆ, ಅದರ ಅನುಕೂಲಗಳು ಸಹ ಬಹಳ ಇವೆ. ಮೊದಲನೆಯದಾಗಿ ಈ ವ್ಯವಸ್ಥೆಯು ವಿಶೇಷವಾಗಿ ನಗರದ ಪ್ರದೇಶದಲ್ಲಿ ಪರಿಸರಕ್ಕೆ ಒಯಸಿಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಿವುದರೊಂದಿಗೆ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಈ ರೀತಿಯ ಗಾರ್ಡನ್‌ಗಳು ಕಟ್ಟಡವನ್ನು ತೀವ್ರವಾದ ಉಷ್ಣ ಮತ್ತು ತಂಡಿಯಿಂದ ತಡೆಯುತ್ತದೆ. ರೂಫ್ ಗಾರ್ಡನ್‌ಗಳು ನಗರದ ಆಹಾರ ಉತ್ಪಾದನೆಯನ್ನು ಸಹ ಪ್ರಮುಖವಾಗಿ ಬೆಂಬಲಿಸುತ್ತದೆ. ಇವುಗಳು ಮಳೆಯ ನೀರನ್ನು ಸಹ ಉಳಿಸುವಲ್ಲಿ ಸಹಾಯಕಾರಿಯಾಗಿದೆ. ಇವುಗಳ ಜೊತೆ ಈ ಛಾವಣಿ ತೋಟಗಳು ಪಕ್ಷಿಗಳು ಮತ್ತು ಕೀಟಗಳಿಗೆ ನೆಲಯನ್ನು ಒದಗಿಸುವ ಮೂಲಕ ಸ್ವಾಭಾವಿಕ ಆವಾಸವಾಗಿ ಕೆಲಸಮಾಡುತ್ತದೆ.
ಇನ್ನೂ ಮನೆ ಮುಂದೆ ಗಾರ್ಡನ್‌ಗೆ ಜಾಗವಿಲ್ಲ ಎಂದು ಕೊರಗುವ ಅಗತ್ಯವಿಲ್ಲ. ನಿಮ್ಮ ಮನೆಯ ಛಾವಣಿಯನ್ನು ಒಂದು ಸುಂದರ ತೋಟವಾಗಿ ಮಾರ್ಪಡಿಸುವ ಬಗ್ಗೆ ಯೋಚಿಸಿ.


ಶಿವಮೊಗ್ಗದ ಸಂಜಯ್ ಕುಮಾರ್, ರೂಪ ದಂಪತಿಗಳಿಗೆ ಗಿಡಗಳ ಹುಚ್ಚು. ಆದರೆ ವಾಸ ಮಹಡಿ ಮನೆಯಲ್ಲಿ. ಈ ಹುಚ್ಚು ಅವರನ್ನು ರೂಫ್ ಗಾರ್ಡನಿಂಗ್ಗೆ ಮೊರೆ ಹೋಗಲು ಪ್ರೇರೆಪಿಸಿತು. ಮನೆ ಮುಂದೆ ಗಿಡಗಳನ್ನು ಬೆಳೆಸಲು ಸ್ಥಳದ ಅಭಾವದ ಕೊರತೆಯನ್ನು ಮೀರಿ ಇವರು ಇಂದು ತಮ್ಮ ಮನೆಯ ತಾರಸಿಯನ್ನೇ ಸುಂದರ ತೋಟವಾಗಿ ಮಾರ್ಪಡಿಸಿ ಕೊಂಡಿದ್ದಾರೆ. ಕೈಗಾರಿಕೋದ್ಯಮಿ ಸಂಜಯ್ ಕುಮಾರ್, ಹಾಗೂ ಅವರ ಪತ್ನಿ ರೂಪರ ನಿರಂತರ ಸ್ವಂತ ಪರಿಶ್ರಮದಿಂದ ಇಂದು ಅವರ ಮನೆಯ ಛಾವಣಿ ಒಂದು ಸುಂದರವಾದ ಗಾರ್ಡನ್ ಆಗಿದೆ. ಎಲ್ಲರ ಹಾಗೆ ಮೊದಲು ಖಾಲಿ ಬಿಟ್ಟಿದ ತಾರಸಿಗೆ ತೋಟದ ರೂಪ ಕೊಡಲು ಯೋಜಿಸಿದ್ದು ಮೊದಲಿಗೆ ವೆನಿಲ್ಲಾವನ್ನು ಬೆಳೆಯುವ ಪ್ರಯತ್ನದ ಮೂಲಕ. ಕೆಲವು ವರ್ಷಗಳ ಕಾಲ ಇವರು ಇದೇ ರೂಫ್ ಗಾರ್ಡನ್ನಲ್ಲಿ ಯಶಸ್ವಿಯಾಗಿ ವೆನಿಲ್ಲಾ ಬೆಳೆಯನ್ನು ಸಹ ಬೆಳೆದಿದ್ದಾರೆ ಎಂಬುದು ಉಲ್ಲೇಖಾರ್ಹ. ಸುಮಾರು 7-8 ವರ್ಷಗಳ ಹಿಂದೆ ಅದರ ಮೂಲಕ ಆರಂಭವಾದ ಅವರ ಪ್ರಯತ್ನ ಇಂದು ಮನೆಯ ಛಾವಣಿಯ ಸ್ವರೂಪವನ್ನೇ ಬದಲಾಯಿಸಿದೆ.
ಇವರ ಈ ಛಾವಣಿ ತೋಟದಲ್ಲಿ ತರ ತರದ ಗಿಡಗಳನ್ನು ನಾವು ಕಾಣಬಹುದು. ಇದು ಕೇವಲ ಹೂ ಗಿಡಗಳಿಗೆ ಮಾತ್ರ ಸೀಮಿತವಾಗಿರದೆ ಹಣ್ಣು ತರಕಾರಿ, ಸೊಪ್ಪುಗಳನ್ನು ಸಹ ಅವರ ಗಾರ್ಡನ್ನಲ್ಲಿ ಬೆಳೆಯುತ್ತಿದ್ದಾರೆ. ತರಕಾರಿ ಸಿಪ್ಪೆ, ಕಾಗದ ಹಾಗೂ ಇತರ ತಾಜ್ಯ ವಸ್ತುಗಳನ್ನು ಹಾಕಲು ತಾರಸಿಯ ಒಂದು ಮೂಲೆಯಲ್ಲಿ ಪ್ರತ್ಯೇಕ ತೊಟ್ಟಿಯನ್ನು ಹೊಂದಿದ್ದು, ಅದರಲ್ಲಿ ಎರೆಹುಳು ಸಾಕಣಿಕೆಯನ್ನು ಸಹ ಮಾಡಿರುವುದು ಇವರ ವಿಶೇಷ. ಅದೇ ಗೊಬ್ಬರವನ್ನು ಗಿಡಗಳನ್ನು ಉಪಯೋಗಿಸುವ ಮೂಲಕ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ. ಹಾಗೂ ಬಿಸಿಲಿನ ತಾಪವನ್ನು ಕಡಿಮೆ ಮಾಡಲು ಗಿಡಗಳ ಮೇಲೆ ಶೆಡ್ ನೆಟ್ ಹಾಸಿದ್ದಾರೆ. ಗುಲಾಬಿ, ದಾಸವಾಳ, ಮಲ್ಲಿಗೆ, ಅಥೋರಿಯಂ ಹಾಗೂ ಹಲವು ವಿಧದ ಗಿಡಗಳ ಜೊತೆಗೆ ಬೋನ್ಸಾಯ್ಗಳು ಇವರ ತೋಟದ ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿ ಬೆಳೆಯುತ್ತಿರುವ ತರಕಾರಿಗಳ ಪಟ್ಟಿ ಸ್ವಲ್ಪ ದೊಡ್ಡದೆ. ಟಮೋಟೋ, ಬಿನ್ಸ್, ತೊಂಡೆಕಾಯಿ, ಅವರೆ ಕಾಯಿ, ಮೆಣಸಿನ ಕಾಯಿ, ಬದನೆ ಕಾಯಿ, ಕುಂಬಳಕಾಯಿ, ಲಿಂಬೆ ಹಣ್ಣು, ಇತ್ಯಾದಿ ಇತ್ಯಾದಿಗಳು. ಜೊತೆಗೆ ಬಸಳೆ ಮತ್ತು ಬಗೆ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಇದಲ್ಲದೆ ಬಾಳೆ, ವಿಳ್ಯೇದೆಲೆ, ಕೆಸು, ಗೆಣಸು, ಫ್ಯಾಷನ್ ಫ್ರೂಟ್ಗಳು ಇವರ ರೂಫ್ ಗಾರ್ಡನ್ನಲ್ಲಿ ಲಭ್ಯ.
" ಈ ರೂಫ್ ಗಾರ್ಡನ್ ವ್ಯವಸ್ಥೆಯಿಂದ ನಮಗೆ ತುಂಬಾ ಅನೂಕೂಲಗಳಾಗಿವೆ. ಮುಖ್ಯವಾಗಿ ಬೇಸಿಗೆಯಲ್ಲಿ ಮನೆಯ ಉಷ್ಣತೆಯನ್ನು ಕಡಿಮೆಮಾಡಿದೆ. ಇದಕ್ಕೆ ಇತರ ಗಾರ್ಡನ್ಗಳಿಗೆ ಹೋಲಿಸಿದರೆ ಕಡಿಮೆ ನೀರು ಸಾಕು. ಮತ್ತು ದಿನ ನಿತ್ಯಕ್ಕೆ ಬೇಕಾದ ಹೆಚ್ಚಿನ ತರಕಾರಿ ಸೊಪ್ಪುಗಳನ್ನು ನಾವೇ ಬೆಳೆಯುವುದರಿಂದ, ಮನೆಗೂ ಸಹಾಯವಾಗುತ್ತದೆ ಹಾಗೂ ಒಳ್ಳೆಯ ಗಾಳಿ ಮತ್ತು ಶುದ್ಧ ತರಕಾರಿ ಸೊಪ್ಪುಗಳ ಬಳಕೆಯಿಂದ ಆರೋಗ್ಯ ದೃಷ್ಟಿಯಲ್ಲೂ ಸಹಾಯವಾಗುತ್ತಿದೆ. ಜೊತೆಗೆ ಟಿವಿ ಕಂಪ್ಯೂಟರ್ ಎಂದು ಮೋರೆ ಹೋಗುವ ಮಕ್ಕಳಿಗೂ ಈ ರೀತಿಯ ಗಾರ್ಡನ್‌ನಿಂದ ಬದಲಾವಣೆ ದೊರೆಯುತ್ತದೆ" ಎಂಬುದು ರೂಪಸಂಜಯ್ ದಂಪತಿಗಳ ಅಭಿಪ್ರಾಯ.
ಇದರ ಜೊತೆಗೆ ಗಾರ್ಡನ್ನ ಒಂದು ಭಾಗದಲ್ಲಿ ಪಾರಿವಾಳ, ಲವ್ಬರ್ಡ್ಸ್. ಗಿಳಿ, ಮೊಲಗಳನ್ನು ಸಹ ಸಾಕಿದ್ದಾರೆ. ಇವರ ಸುಂದರ ಛಾವಣಿ ತೋಟ ಒಂದು ಮಿನಿ ಪಾರ್ಕ್‌ನ ಅನುಭವವನ್ನೇ ನೀಡುತ್ತದೆ ಎಂದರೆ ತಪ್ಪಲಾಗರದು. ಮನೆಯ ಛಾವಣಿಯ ಮೇಲೆ ತೋಟವನ್ನು ನಿರ್ಮಿಸುವ ಮೂಲಕ ಈ ದಂಪತಿಗಳು, ಮನೆಯ ಮುಂದೆ ಗಿಡವನ್ನು ಬೆಳೆಯಲು ಸಾಧ್ಯವಾಗದೆ ಕೈ ಚೆಲ್ಲಿ ಕುಳಿತವರಿಗೆ ಮಾದರಿಯಾಗಿದ್ದಾರೆ. ಮತ್ತು ಪರಿಸರಕ್ಕೆ ಇವರ ಕೊಡುಗೆ ಸಹ ಶ್ಲಾಘನೀಯ.

(ಈ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ 2011ರ ಏಪ್ರಿಲ್ 19 ರಂದು ಪ್ರಕಟಗೊಂಡಿತ್ತು)