September 5, 2010

ಮೆಚ್ಚಿನ ಗುರು ವೃಂದಕ್ಕೆ ಪ್ರಣಾಮಗಳು...

ಸಾಮಾನ್ಯವಾಗಿ ನಾವು ಪ್ರಾಥಮಿಕ ಶಾಲೆಯಿಂದ ಪದವಿಯವರೆಗೆ ಓದುವಾಗ ಸುಮಾರು 40ಕ್ಕಿಂತ ಅಧಿಕ ಗುರುಗಳ ಕೈಯಲ್ಲಿ ಪಾಠ ಕಲಿತ್ತಿರುತ್ತೇವೆ. ಹತ್ತು ಹದಿನೈದು ವರ್ಷದ ನಂತರ ಎಲ್ಲರನ್ನೂ ನೆನೆಪಿನಲ್ಲಿಟ್ಟುಕೊಳ್ಳುವುದು ಅಸಾಧ್ಯ. ಅಬ್ಬಬ್ಬಾ ಎಂದರೆ ಹತ್ತೋ, ಹನ್ನೆರಡು ಅಧ್ಯಾಪಕರು ನೆನಪಾಗಬಹುದು. ಹಾಗೆಯೇ, ನನ್ನ 18 ವರ್ಷ ವಿದ್ಯಾರ್ಥಿ ಜೀವನದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಗುರುಗಳು ಬೆರಳೆಣಿಕೆ ಅಷ್ಟು ಮಾತ್ರ. ಅವರಲ್ಲಿ ಜಿ.ಕೆ.ಜಿ.(ಜೈರಾಮ್ ಮಾಸ್ತರು) ಮೊದಲಿಗರು. ಜಿ.ಕೆ.ಜೆ. ಅವರಲ್ಲದೆ ನಾಗರಾಜ್ಸರ್, ಶ್ರೀಪಾದಮಾಸ್ತರ್ಜೀ, ಭಾಗ್ಯ ಮಾತಜೀ, ಕೃಷ್ಣಸರ್, ನಾಗೇಶ್ ಸರ್, ಕೃಷ್ಣಸ್ವಾಮಿ ಸರ್, ಅರೀಫಾ ಮೇಡಂರವರು ನನ್ನ ಮೆಚ್ಚಿನ ಗುರುಗಳು.



ಪ್ರೌಢಶಾಲೆಯಲ್ಲಿ ಓದುವಾಗ ನಮಗೆ ಇಂಗ್ಲಿಷ್ ಉಪಧ್ಯಾಯರಾಗಿದ್ದವರು ಜಿ.ಕೆ.ಜೆ. ಇವರ ತರಗತಿ ಎಂದರೆ ನಮ್ಮ ಮುಂದೆ ಹೊಸಲೋಕವೇ ತೆರದಿಟ್ಟ ಅನುಭವ. ನಾವುಗಳು ಇವರ ತರಗತಿಗಾಗಿ ಕಾತುರದಿಂದ ಕಾಯುತ್ತಿದ್ದೆವು. ಅಂದು ಮಾಡಿದ ಪಾಠಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿದೆ. ಪಾಠದ ಜೊತೆ ಮಂಕು ತಿಮ್ಮನ ಕಗ್ಗದ ಪದ್ಯಗಳು ಮತ್ತು ರತ್ನ ಪದಗಳ ಔತಣವನ್ನು ಉಣಬಡಿಸುತ್ತಿದ್ದರು. ಮಹಮದ್ ಅಲಿ, ಕಾರ್ ಲೂಯಿಸ್, ಜೆಸಿಒವನ್. ಅರ್ಥರ್ ಯಾಶ್ ಇನ್ನೂ ಹಲವು ವಿಶ್ವವಿಖ್ಯಾತ ಕ್ರೀಡಾಪಟ್ಟುಗಳ ಸಾಧನೆ, ವಿಜ್ಙಾನದ ಹೊಸ, ಹೊಸ ಅವಿಷ್ಕಾರಗಳು, ಪ್ರಪಂಚದ ಅಗುಹೋಗುಗಳನ್ನು ಪರಿಚಯಿಸಿದ್ದರು. ಕನ್ನಡ ಮಾದ್ಯಮದಲ್ಲಿ ಓದಿದ್ದ ನನ್ನ ಅಲ್ಪ ಸ್ವಲ್ಪ ಇಂಗ್ಲಿಷ್ ಜ್ಞಾನವೃದ್ದಿಗೆ ಇವರ ತರಗತಿಗಳೇ ಅಡಿಪಾಯ.

ಶಿವಮೊಗ್ಗದ ಡಿ.ವಿ.ಸ್. ಪ್ರೈಮರಿ ಶಾಲೆಯಲ್ಲಿ ಓದುವಾಗ ನಮ್ಮ ತರಗತಿಯ ಉಪಧಾಯ್ಯರಾಗಿದ್ದ ನಾಗರಾಜ್ ಮೇಷ್ಟರು ನನ್ನ ಎಳೆಯ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರಿದವರು. ಅವರು ಅಂದು ಹೇಳಿಕೊಟ್ಟ ಗೋವಿನಹಾಡು ಪದ್ಯ ಇನ್ನೂ ನಾಲಿಗೆ ತುದಿಯಲ್ಲಿ ನಲಿದಾಡುತ್ತದೆ. ನಂತರದ ದಿನಗಳಲ್ಲಿ ತೀರ್ಥಹಳ್ಳಿಯ ಸೇವಾಭಾರತಿ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಸೌಮ್ಯ ಸ್ವಭಾವದ ಶ್ರೀಪಾದ್ ಮಾಸ್ತರ್ಜೀ ನನ್ನ ಮೆಚ್ಚಿನ ಶಿಕ್ಷಕಲ್ಲಿರೊಬ್ಬರು. ಅದೇ ಶಾಲೆಯ ಭಾಗ್ಯಮಾತಾಜೀ ಕಲಿಸುತ್ತಿದ್ದು ನನಗೆ ಇಷ್ಟವಿಲ್ಲದ್ದ ಕಷ್ಟದ ಗಣಿತವಾದರೂ , ಅವರು ಮಾತ್ರ ಪಿಯಾವಾಗಿದ್ದರು.

ಕಾರ್ಕಳದ ಭುವನೇಂದ್ರ ಕಾಲೇಜಿನ ದಿನಗಳಲ್ಲಿ ಕನ್ನಡದ ಉಪನ್ಯಾಸಕರಾಗಿದ್ದ ನಾಗೇಶ್ ಸರ್, ಇಕಾನಾಮಿಕ್ಸ್ ಕಲಿಸುತ್ತಿದ್ದ ಕೃಷ್ಣ ಸರ್ ನನ್ನ ಮೆಚ್ಚಿನ ಗುರುಗಳ ಪಟ್ಟಿಗೆ ಸೇರ್ಪಡೆಯಾದರು. ಮೈಸೂರಿನ ಮಹಾರಾಣಿ ಕಾಲೇಜಿನ ಪ್ರೋಫೆಸ್ರುಗಳಾದ ಅರೀಫ ಮೇಡಂ ಹಾಗೂ ಶಂಕರಸ್ವಾಮಿ ಸರ್ಗಳ ತರಗತಿಯಲ್ಲಿ ಪಾಠ ಕೇಳುವುದೇ ಒಂದು ಅದೃಷ್ಟ. ವಿಷಯದ ಬಗ್ಗೆ ಅಳ ಜ್ಞಾನ ಹಾಗೂ ಇವುರುಗಳ ಪಾಠ ಮಾಡುವ ಶೈಲಿ ಎಂತವರನ್ನು ಮಂತ್ರ ಮುಗ್ಧಗೊಳಿಸುತ್ತದೆ.

ಈ ಎಲ್ಲಾ ಶಿಕ್ಷಕರುಗಳಿಂದ ಕಲಿತ್ತಿರುವುದು ಅಪಾರ. ಇವರುಗಳ ತರಗತಿಗಳು ಜೀವನದಲ್ಲಿ ಮರೆಯಾಲಾಗದ ಅನುಭವಗಳು. ನನ್ನ ಈ ಎಲ್ಲಾ ಮೆಚ್ಚಿನ ಗುರುಗಳಿಗೆ ಅನಂತ ಪ್ರಣಾಮಗಳು.....

(ಮಯೂರ ಮ್ಯಾಗಜೀನ್‌ನಲ್ಲಿ ಪ್ರಕಟವಾಗುತ್ತಿದ್ದ ’ಗುರು ನಮನ’ ವಿಭಾಗಕ್ಕಾಗಿ ಈ ಲೇಖನವನ್ನು ಬರೆದ್ದಿದ್ದು. ಇಂದು ಶಿಕ್ಷರ ದಿನದ ಸಂಧರ್ಭದಲ್ಲಿ ನನ್ನ ಮೆಚ್ಚಿನ ಗುರುಗಳಿಗೆ ಈ ಮೂಲಕ ಶುಭಾಷಯಗಳು ಮತ್ತು ನಮನಗಳು HAPPAY TEACHER'S DAY To All MY TEACHERS)

September 4, 2010

ತಂಪು ತಂಪು ಕೂಲ್ ಕೂಲ್ ಅಡುಗೆ ಮತ್ತು ಪೇಯಗಳು.

ಎಲ್ಲೆಲೂ ಸುಡು ಬೇಸಿಗೆ. ತಾಳಲಾರದಷ್ಟು ದಾಹ. ಬೇಸಿಗೆಕಾಲಕ್ಕೆ ತಕ್ಕಂತಹ ಅಂದರೆ ಉಷ್ಣ, ಪಿತವನ್ನು ಹತೋಟಿಯಲ್ಲಿಡುವ ಆಹಾರ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಕ್ಷೇಮ. ಹಾಗೇಯೇ ಆರೋಗ್ಯಕ್ಕೆ ಹಾನಿಕರಕ ಮತ್ತು ದುಬಾರಿ ತಂಪು ಪಾನೀಯಗಳಿಗೆ ಮಾರುಹೊಗುವ ಬದಲು ಮನೆಯಲ್ಲೇ ಆರೋಗ್ಯಕರ ಸರಳ ಪೇಯಗಳನ್ನು ತಯಾರಿಸಿಕೊಳ್ಳಬಹುದು. ಬಾಯಾರಿಕೆ ಹಾಗೂ ಖರ್ಚು ಎರಡಕ್ಕೂ ಕಡಿವಾಣ ಹಾಕಬಹುದು. ಅತಿ ಸರಳ ಹಾಗೂ ಕಡಿಮೆ ಖರ್ಚಿನ ಕೆಲವು ತಂಪು ತಂಪು ಕೂಲ್ ಕೂಲ್ ಅಡುಗೆ ಹಾಗೂ ಪೇಯಗಳು ಇಲ್ಲಿವೆ. ತಂಬುಳಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/4 ಬಟ್ಟಲು, ಕರಿಬೇವಿನಸೊಪ್ಪು-1/2ಬಟ್ಟಲು, ಜೀರಿಗೆ-1ಟೀಚಮಚ, ಮೆಣಸಿನಕಾಳು-5, ಮಜ್ಜಿಗೆ-1ಲೋಟ ಮಾಡುವ ವಿಧಾನ : ಕಾಯಿತುರಿಯನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ತುಪ್ಪದಲ್ಲಿ ಹುರಿದು, ಕಾಯಿತುರಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಮಜ್ಜಿಗೆ ಬೆರೆಸಿ ನಂತರ ಜೀರಿಗೆ,ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಬುಳಿ ಸಿದ್ಧ. ಕರಿಬೇವಿನ ಬದಲು ದೊಡ್ಡಪತ್ರೆ, ಒಂದಲಗ, ಚಕ್ರಮುನಿಸೊಪ್ಪು, ಶುಂಠಿ, ಪಾಲಕ್ ಮುಂತಾದವುಗಳನ್ನು ಬಳಸಬಹುದು. ತಂಬುಳಿಗಳು ಬಾಯಿಹುಣ್ಣಿಗೆ ಉತ್ತಮ ಔಷಧಿ. ಸಾಸಿವೆ/ ಮೊಸರು ಬಜ್ಜಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/2 ಬಟ್ಟಲು, ಹುರಿಗಡಲೆ-2 ಟೀಚಮಚ , ಹಸಿಮೆಣಸು-2, ಸಾಸಿವೆ-1/2 ಟೀಚಮಚ, ಮಜ್ಜಿಗೆ/ಮೊಸರು ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೋಮೊಟೊ- 1 ಬಟ್ಟಲು ಮಾಡುವ ವಿಧಾನ : ಕಾಯಿ ತುರಿ, ಹುರಿಗಡಲೆ, ಹಸಿ ಮೆಣಸಿನ ಕಾಯಿ, ಸಾಸಿವೆಯನ್ನು ರುಬ್ಬಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಟೋಮೊಟೊ, ಮಜ್ಜಿಗೆ/ ಮೊಸರು ಮತ್ತು ರುಚ್ಚಿಗೆ ಉಪ್ಪು ಬೆರೆಸಬೇಕು. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಪಾದ ಸಾಸಿವೆ/ಮೊಸರು ಬಜ್ಜಿ ರೆಡಿ. ಸಣ್ಣಗೆ ಹೆಚ್ಚಿ ಹುರಿದ ತೊಂಡೆಕಾಯಿ, ಬೆಂಡೆಕಾಯಿ, ದಪ್ಪ ಮೆಣಸಿನಕಾಯಿ ಅಥವಾ ಸುಟ್ಟ ಬದನೆಕಾಯಿ ಅಥವಾ ಹಸಿ ಮೂಲಂಗಿತುರಿ, ಸೌತೆಕಾಯಿಯನ್ನು ರುಬ್ಬಿದ ಮಿಶ್ರಣಕ್ಕೆ ಬೆರಿಸಿಕೊಳ್ಳಬಹುದು. ಅನ್ನದ ತಿಳಿ (ಗಂಜಿ) ಸಾರು: ಅನ್ನ ಬಸಿದ ತಿಳಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಮಜ್ಜಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ, ಇಷ್ಟಕ್ಕೆ ಅನುಗುಣವಾಗಿ ಬೆಳ್ಳುಳಿ ಅಥವಾ ಇಂಗಿನ ಒಗ್ಗರಣೆ ಮಾಡಿದರೆ ಸುಲಭದ ರುಚಿಯಾದ ಸಾರು ರೆಡಿ. ಪುನರ್ಪುಳಿ ಸಾರು (ಕೊಕೊಂ): ಪುನರ್ಪುಳಿ- 1ಬಟ್ಟಲು, ಬೆಲ್ಲ- 2ಉಂಡೆ, ಈರುಳ್ಳಿ- 1, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು ಸ್ವಲ್ಪ ಪುನರ್ಪುಳಿಯನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಬೇಕು. ರಸಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಬೆಲ್ಲ ಮತ್ತು ಬೇಕಾದಷ್ಟು ನೀರು ಹಾಗೂ ರುಚಿಗೆ ಉಪ್ಪು ಹಾಕಿ. ಸಾಸಿವೆ, ಜೀರಿಗೆ, ಕರಬೇವಿನ ಒಗ್ಗರಣೆ ಮಾಡಿದರೆ ಸಾರು ಸವಿಯಲು ಸಿದ್ಧ. ಹುಣಸೆಹಣ್ಣು ಮತ್ತು ಬೆಲ್ಲದ ಪಾನಕ: ಹುಣಸೆಹಣ್ಣಿನ ರಸ- 1ಲೋಟ, ಬೆಲ್ಲ- 3ಉಂಡೆ, ಶುಂಠಿ- 1ಚೂರು, ಕಾಳುಮೆಣಸಿನಪುಡಿ - 1ಚಮಚ ಹುಣಸೆಹಣ್ಣಿನ ರಸಕ್ಕೆ ಬೆಲ್ಲ ಹಾಕಿ ಅಗತ್ಯವಿದ್ದಷ್ಟು ನೀರು ಬೆರೆಸಿ. ಇದಕ್ಕೆ ಶುಂಠಿ ಚೂರನ್ನು ಹಾಗೂ ಕಾಳುಮೆಣಸಿನಪುಡಿನ ಪುಡಿಯನ್ನು ಸೇರಿಸಿದರೆ ಪಿತ್ತ ಶಮನಕಾರಿ ಪಾನಕ ತಯಾರು. ಅಕ್ಕಿ ತೊಳೆದ ನೀರಿನ ಪಾನಕ : ಎರಡನೇ ಬಾರಿ ಅಕ್ಕಿ ತೊಳೆದ ನೀರಿಗೆ ಬೇಕಾದಷ್ಟು ಬೆಲ್ಲ ಬೆರೆಸಿ, ಚಿಟಿಕೆ ಏಲಕ್ಕಿ ಪುಡಿ ಮತ್ತು 2 ಚಮಚ ಲಿಂಬೆರಸ ಹಾಕಿದರೆ ಸರಳವಾದ ಅರೋಗ್ಯಕರ ಪೇಯ ಕುಡಿಯಲು ಸಿದ್ಧ. ಹೆಸರುಕಾಳಿನ ಪಾನಕ: ನೆನೆಸಿದ ಹೆಸರುಕಾಳು- 1ಬಟ್ಟಲು, ಬೆಲ್ಲ- 3ಉಂಡೆ, ಏಲಕ್ಕಿ-3 ನೆನೆಸಿದ ಹೆಸರುಕಾಳು, ಬೆಲ್ಲ, ಏಲಕ್ಕಿ ಮೂರನ್ನು ನೀರು ಸೇರಿಸಿ ರುಬ್ಬಬೇಕು. ಅಗತ್ಯವಿದರೆ ಮತ್ತೆ ನೀರು ಬೆರೆಸಿಕೊಳ್ಳಿ. ಯಾವುದೇ ಮಿಲ್ಕ್‌ಶೇಕ್‌ಗಿಂತ ರುಚಿಯಾದ ನೊರೆ ನೊರೆಯಾದ ಪೇಯ ಮನೆಯಲ್ಲೇ ರೆಡಿ. (ವಾರಪತ್ರಿಕೆಗೆ ಕಳುಹಿಸಲು ಎರಡು ವರ್ಷದ ಹಿಂದೆ ಇವುಗಳನ್ನು ಬರೆದ್ದಿದ್ದೆ, ಯಾರಿಗಾದರೂ ಉಪಯೋಗಕ್ಕೆ ಬರಬಹುದು ಎಂಬ ಕಾರಣದಿಂದ ಬ್ಲಾಗ್‌ಗಲ್ಲಿ ಪೋಸ್ಟ್‌ ಮಾಡುತ್ತಿದ್ದೇನೆ)

ಈ ಟಿವಿ ವಾಹಿನಿಯ "ಎದೆ ತುಂಬಿ ಹಾಡುವೆನು".

ಟಿವಿ ಚಾನೆಲ್‌ಗಳಲ್ಲೇಲ್ಲಾ ಈಗ ರಿಯಾಲಿಟಿ ಶೋಗಳದ್ದೇ ದರ್ಬಾರ್. ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳು ಪ್ರಸಾರಗೊಳ್ಳುತ್ತಿವೆ. ಹಾಡು, ಡ್ಯಾನ್ಸ್ ಅಥವಾ ಬೇರೆ ಯಾವುದಾದರೂ ಪ್ರತಿಭಾನ್ವೇಷಣೆ ಇರಬಹುದು, ಕ್ಷೇತ್ರಗಳು ಮಾತ್ರ ವಿಭಿನ್ನ. ಈ ರೀತಿ ರಿಯಾಲಿಟಿ ಶೋಗಳಲ್ಲಿ ಸಂಗೀತ ಅಥವಾ ಹಾಡಿನ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ತಪ್ಪಾಗಲಾರದು. ರಿಯಾಲಿಟಿ ಶೋಗಳನ್ನು ಬಿತ್ತರಿಸುವಲ್ಲಿ ನಮ್ಮ ಕನ್ನಡ ಚಾನೆಲ್‌ಗಳು ಸಹ ಹಿಂದೆ ಬಿದ್ದಿಲ್ಲ. ಝೀ ಕನ್ನಡ, ಕಸ್ತೂರಿ, ಈ ಟಿವಿ, ಉದಯ ಟಿವಿ, ಇತ್ಯಾದಿ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿಯೇ ಇದೆ. ಅದರಲ್ಲಿ ಹಾಡಿನ ಸ್ಪರ್ಧೆಗಳ ಕಾರ್ಯಕ್ರಮಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿವೆ. ಲಿಟಲ್ ಚಾಂಪ್ಸ್, ಕಾನಿಫಿಡೆಂಟ್ ಸಿಂಗರ್, ಎದೆ ತುಂಬಿ ಹಾಡುವೆನು ಮೊದಲಾದವುಗಳು. ಈ ಎಲ್ಲಾ ಶೋಗಳಲ್ಲಿ ಮಕ್ಕಳೇ ಸ್ಪರ್ಧಾಳುಗಳು. ಆದ್ದರಿಂದ ಈ ಕಾರ್ಯಕ್ರಮಗಳ ನಡುವೆ ಟಿ.ಅರ್.ಪಿ ಹೆಚ್ಚಿಸಿಕೊಳ್ಳಲು ಪೈಪೋಟಿ ಜೋರಾಗಿದೆ. ಮಕ್ಕಳ ಮುಗ್ದತೆಯನ್ನೇ ಬಂಡವಾಳವಾಗಿಸಿ ಕೊಂಡು ತಮ್ಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವುದು ಈ ಶೋಗಳ ಮೂಲ ತಂತ್ರ. ಪುಟ್ಟ ಮಕ್ಕಳಿಗೆ ವಯಸ್ಸಿಗೆ ಮೀರಿದ ಉಡುಗೆ ತೊಡುಗೆ ತೊಡಿಸುವುದು, ಅಸಂಬದ್ದ ಹಾಡು ಹಾಡಿಸುವುದನ್ನು ನಾವುಗಳು ಕಾಣಬಹುದು. ಮಕ್ಕಳ ಮೃದು ಮನಸ್ಸನ್ನೂ ಗಮನಿಸಿದೆ ಪ್ರದರ್ಶನದ ಬಗ್ಗೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಅಥವಾ ಅತಿಥಿಗಳಾಗಿ ಬಂದವರು ಕಠೋರವಾಗಿ ಪ್ರತಿಕ್ರಿಯಿಸುತ್ತಾರೆ. ಅವರ ಈ ರೀತಿ ಪ್ರತಿಕ್ರಿಯೆಗಳು ಕೇವಲ ಪ್ರತಿಭೆಗೆ ಮಾತ್ರ ಸಂಬಂಧಿಸಿರುವುದಿಲ್ಲ ಎನ್ನುವುದು ಕೂಡ ಸತ್ಯ. ಮಕ್ಕಳು ಸ್ಪರ್ಧೆಯಿಂದ ನಿರ್ಗಮಿಸಿದಕ್ಕಾಗಿ ಅಳುವ ದೃಶ್ಯ ನೋಡುಗರ ಮನ ಕಲಕುತ್ತದೆ. ಇಷ್ಟೇ ಅಲ್ಲದೇ ಎಸ್.ಎಮ್.ಎಸ್‌ಗಳ ಹಾವಳಿ ಬೇರೆ. ಈ ದೃಶ್ಯಗಳು ಎಲ್ಲಾ ರಿಯಾಲಿಟಿ ಶೋಗಳಲ್ಲಿ ಸರ್ವೇಸಾಮಾನ್ಯ ಹಾಗೂ ಈ ದೃಶ್ಯಗಳನ್ನೇಲ್ಲಾ ವೈಭಿವಿಕರಿಸಿ ಟಿವಿಯಲ್ಲಿ ತೋರಿಸಿ ಕಾರ್ಯಕ್ರಮದ ಜನಪ್ರಿಯತೆಯನ್ನು ಹೆಚ್ಚಿಸಿಕೊಳುತ್ತಿದ್ದಾರೆ.
ಆದರೆ ಎಲ್ಲಾ ಹಾಡಿನ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ಅಂದರೆ ಈ ಟಿವಿ ವಾಹಿನಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿರುವ "ಎದೆ ತುಂಬಿ ಹಾಡುವೆನು". ಖಾತ್ಯ ಗಾಯಕ "ಎಸ್.ಪಿ.ಬಾಲಸುಬ್ರಮಣ್ಯಂ" ನೆಡೆಸಿಕೊಡುವ ಕೆನರಾ ಬ್ಯಾಂಕ್ ಪ್ರಾಯೋಜಿಸುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕನ್ನಡ ಚಾನೆಲ್‌ಗಳ ಒಂದು ಪ್ರಮುಖ ಮತ್ತು ಅತ್ಯಂತ ಯಶಸ್ವಿ ಕಾರ್ಯಕ್ರಮ. ಈ ಟಿವಿ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ 9 ಘಂಟೆಗೆ ಪ್ರಸಾರವಾಗುತ್ತದೆ. ಇದನ್ನು ಎಸ್.ಪಿ.ಬಿ ಯವರು ತುಂಬಾ ಅಚ್ಚುಕಟ್ಟಾಗಿ ನೆಡೆಸುವುದರೊಂದಿಗೆ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದಾರೆ. ಸ್ವತಹ ಬಾಲಸುಬ್ರಮಣ್ಯಂ ಅವರೇ ವಚನವನ್ನು ಹೇಳುವುದರ ಮೂಲಕ ಶೋತೃರುಗಳಿಗೆ ವಚನ ಸಾಹಿತ್ಯವನ್ನು ಉಣಬಡಿಸುತ್ತ ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ. ಪ್ರತಿವಾರವು ಸಂಗೀತ ಕ್ಷೇತ್ರದ್ದಲ್ಲಿ ಸಾಧನೆ ಮಾಡಿದ ಗಣ್ಯರನ್ನು ತೀರ್ಪುಗಾರರ ರೂಪದಲ್ಲಿ ಜನತೆಗೆ ಪರಿಚಯಿಸುತ್ತಾರೆ. ಈ ಶೋನಲ್ಲಿ ಬರಿ ಸಿನಿಮಾ ಹಾಡುಗಳಿಗಷ್ಟೇ ಸೀಮಿತವಾಗಿರದೆ ಭಾವಗೀತೆ, ಜನಪದ ಗೀತೆ, ಭಕ್ತಿಗೀತೆಗಳನ್ನು ಸಹ ಹಾಡಲಾಗುತ್ತದೆ. ಎಸ್.ಪಿ.ಬಿ ಯವರು ಸ್ಪರ್ಧಾಳುಗಳ ಪೋಷಕರಿಗೆ ಮತ್ತು ಗುರುಗಳಿಗೆ ಮಕ್ಕಳಿಗೆ ಹೊಂದುವಂತಹ ಹಾಡುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸೂಚಿಸುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಮಕ್ಕಳ ಉಡುಗೆ ತೊಡುಗೆ ಸಹ ಅತ್ಯಂತ ಸಭ್ಯ. ಕೊನೆಯಲ್ಲಿ ಫಲಿತಾಂಶವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಯಾರ ಮನಸ್ಸನ್ನು ನೋಯಿಸದೆ ಪ್ರಕಟಿಸಲಾಗುತ್ತದೆ. ಬೇರೆ ಶೋಗಳಲ್ಲಿ ಕಂಡು ಬರುವಂತೆ ಮಕ್ಕಳೊಡನೆ ಒರಟಾಗಿ ನೆಡೆದು ಕೊಳುವುದಾಗಲಿ ಅಥವಾ ಅವರ ಮುಗ್ಧತೆಯನ್ನು ಟಿ.ಅರ್.ಪಿ ಹೆಚ್ಚಿಸಲು ಬಳಸಿಕೊಳುವುದಾಗಲಿ ಇಲ್ಲವೇ ಇಲ್ಲ. ಕಾಮೆಂಟ್ ಗಳು ಕೇವಲ ಸಂಗೀತಕ್ಕಷ್ಟೇ ಸಿಮೀತ. ತಪ್ಪುಗಳನ್ನು ಮೃದುವಾಗಿ ತಿದ್ದಿ ಹೇಳಲಾಗುತ್ತದೆ. ಈ ಕಾರ್ಯಕ್ರಮ ಹಲವು ಮಾಲಿಕೆಗಳಲ್ಲಿ ಪ್ರಸಾರಗೊಂಡಿದರು ಸಹ ಕಿರಿಯರ ಮಾಲಿಕೆ ಅತಿ ಹೆಚ್ಚು ಯಶಸ್ಸನ್ನು ಕಂಡಿದೆ. ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ ಸಂಗತಿ.
ವೇದಿಕೆ ಮೇಲೆ ಯಾವುದೇ ಕುಣಿತದ ಅಬ್ಬರವಿಲ್ಲದೆ ಮನೆ ಮಂದಿಗೆಲ್ಲಾ ಮುದ ನೀಡುವ ರಿಯಾಲಿಟಿ ಶೋ ಇದಾಗಿದೆ. ಗೆಲ್ಲುವುದಕ್ಕಿಂತ ಕಾರ್ಯಕ್ರಮದಲ್ಲಿ ಭಾಗಿಸುವುದು ಅತ್ಯಂತ ಮುಖ್ಯ ಎಂಬುದನ್ನು ಎಸ್.ಪಿ.ಬಿ ಈ ಕಾರ್ಯಕ್ರಮದಲ್ಲಿ ಮನದಟ್ಟು ಮಾಡುತ್ತಾರೆ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ತಮ್ಮ ನೆಡೆ ನುಡಿಯಿಂದ ಈ ಕಾರ್ಯಕ್ರಮದ ಘನತೆಯನ್ನು ಇನಷ್ಟು ಹೆಚ್ಚಿಸಿದ್ದಾರೆ. ನಿರಂತರವಾಗಿ ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತನ್ನದೇ ಆದ ಛಾಪನ್ನು ಉಳಿಸಿಕೊಂಡು ಬಂದಿದೆ.


(ಈ ಲೇಖನವನ್ನು 2009ರ ಸೆಪ್ಟೆಂಬರ್‌ ತಿಂಗಳಲ್ಲೇ ಬರೆದ್ದಿದ್ದೆ, ಆದರೆ ಈಗ ಇಲ್ಲಿ ಹಾಕಿದ್ದೇನೆ.)