February 22, 2013

’ಅವನ ಮೇನಿಯಾ’


ನಿನ್ನದ್ದು ಎಲ್ಲಾ ಅತಿರೇಕ. ಮೂರು ಹೊತ್ತು ನಿಂಗೆ ಅದೇ ಧ್ಯಾನ, ಸುತ್ತಿ ಬಳಸಿ ಮತ್ತದೇ ವಿಷ್ಯಕ್ಕೆ  ಬರ್ತಿಯಾ. ಹೀಗೆ ಮುಂದುವರೆದರೆ ಯು ನೀಡ್ ಎ ಕೌನ್ಸಿಲಿಂಗ್. ನಿನಗೆ ಅವನ ಮೇನಿಯಾಅಂತ  ಗೆಳತಿ ಹೆಚ್ಚು ಕಮ್ಮಿ ನನ್ನ ತರಾಟೆಗೆ ತೆಗೆದುಕೊಂಡಳು. ಹಾಗೆ ಜೊತೆಗೆ ಮೇನಿಯಾದ ಹುಳವನ್ನು ನನ್ನ ತಲೆ ಒಳಗೆ ಬಿಟ್ಟಳು. ಮೇನಿಯಾದ  ಬಗ್ಗೆ ತಿಳಿಯುವ ಕೂತುಹಲದಿಂದ   ಸಂಶೋಧನೆ ಮಾಡಲು, ಕೀ ಬೋರ್ಡ್ ಮೇಲೆ ಮೇನಿಯಾ ಅಂತ ಟೈಪಿಸುತ್ತಿದಂತೆ. ಬೆರಳ ತುದಿಯ ನನ್ನ  ಪ್ರಪಂಚ, ಪ್ರೀತಿಯ ಕಂಪ್ಯೂಟರ್ ಪರದೆ ಮೇಲೆ ಪೂರ್ತಿ ಮೇನಿಯಾದ ಪುರಾಣವೇ ಸಿಕ್ಕಿತ್ತು. ಮೇನಿಯಾ ಅನ್ನುವುದು  ಹುಚ್ಚು ಎಂಬ ಅರ್ಥ ಕೊಡುವ ಗ್ರೀಕ್ ಮೂಲದ ಪದವಂತೆ. ಈ ಪದವು ಬುದ್ಧಿವಿಕಲ್ಪ, ಚಿತ್ತವಿಕಾರ, ಉನ್ಮಾದ ಎಂಬ ಅರ್ಥಗಳನ್ನು ನೀಡುತ್ತದೆ. ಇದನ್ನೊಂದು  ವಿಧದ ಮಾನಸಿಕ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಸರಳವಾಗಿ ಮೇನಿಯಾವನ್ನು   ಮಿತಿಮೀರಿದ ಉತ್ಸಾಹ ಅಥವಾ ಬಯಕೆ, ಗೀಳು ಎಂದು ಹೇಳಬಹುದು. ಮನಸ್ಸಿಗೆ ಕಿರಿಕಿರಿ, ತೀವ್ರ ನೀದ್ರಾಹೀನತೆ, ಅತಿಯಾದ ಮಾತು ಮತ್ತು ಸೂಕ್ತವಲ್ಲದ ಸಾಮಾಜಿಕ ವರ್ತನೆಗಳು ಮೇನಿಯಾದ ಲಕ್ಷಣಗಳಲ್ಲಿ ಕೆಲವು.  ಇನ್ನೂ ಈ ಮನಸ್ಸಿನ ಕಾಯಿಲೆಯಲ್ಲಿ ಹಲವು ರೀತಿಯವು.   ಪ್ರತಿಯೊಂದು  ಗೀಳಿಗೂ  ಒಂದೊಂದು ಹೆಸರು ಹೊಂದಿದ ಎ ಟು ಜೆಡ್ ವರೆಗಿನ  ದೊಡ್ಡ ಪಟ್ಟಿ ಹಾಗೂ  ಮನುಷ್ಯನ ತರೇವಾರಿ ಹುಚ್ಚುತನ ಕಂಡು ನಾನು  ಹೌಹಾರಿದೆ. ಅದರೊಂದಿಗೆ ನಾನು ಈ ಹುಚ್ಚುಗಳಲ್ಲಿ ಹಿಂದೆ ಬಿದ್ದಿಲ್ಲ ಎಂಬುದು  ನೆನೆಪಾಗ ತೊಡಗಿತ್ತು. ಸೆಕೆಂಡ್ ಇಯರ್  ಡಿಗ್ರಿಯಲ್ಲಿ ಪರೀಕ್ಷೆಗೆ ಎರಡು ವಾರ ಮುಂಚೆ ನನಗೆ ಯಾವತ್ತು  ಇಲ್ಲದ ಚೆಸ್ ಆಟದ ಹುಚ್ಚು ಹಿಡಿದು ನಾನು ಮತ್ತು  ನನ್ನ ರೂಮ್ ಮೆಟ್  ಸುಮಾರು  ರಾತ್ರಿ ಬೆಳ್ಳಿಗೆ ಮಾಡಿದ್ದು. ಸ್ಪಲ್ಪ ದಿನಗಳ ಕಾಲ ಕಾದಂಬರಿ ಓದೊ ಹುಚ್ಚು ಯಾವ ಮಟ್ಟಕ್ಕೆ ತಲುಪಿತು ಅಂದರೆ ವಾರಗಟ್ಟಲೇ  ಕ್ಲಾಸ್ ಬಂಕ್ ಮಾಡಿ ಸೆಂಟ್ರಲ್ ಲೈಬ್ರರಿಯಲ್ಲಿ  ಕಾಲ ಕಳೆಯುತ್ತಿದ್ದೆ.  ಗಣಿತ ಅಂದರೆ ಮೂರು ಮೈಲಿ ದೂರ ಓಡೊ ನಾನು, ನಲವತ್ತಕ್ಕಿಂತ ಜಾಸ್ತಿ ಮಾರ್ಕ್ಸ್  ತೆಗೆಯದ ನನಗೆ ಒಂದಷ್ಟು ತಿಂಗಳು  ಸಂಖ್ಯೆಗಳ ಮೇಲೆ ಎಲ್ಲಿಎಲ್ಲಿದ ಪ್ರೀತಿ ಹುಟ್ಟಿ, ಸುಡೊಕೊ ಮೇನಿಯಾ ಅಂಟಿಸಿ ಕೊಂಡಿದೆ. ಅದಕ್ಕಾಗಿ  ಕಂಡಕಂಡವರ ಮನೆಯ  ಪೇಪರ್ ಕೇಳೊ ಅಭ್ಯಾಸ ಶುರುವಾಗಿತ್ತು.  ಹಾಸ್ಟೆಲಿನಿಂದ ಮನೆಗೆ ಹೋದಾಗಲೇಲ್ಲಾ ದಿನದ ಮುಕ್ಕಾಲು ಭಾಗಕ್ಕಿಂತ  ಜಾಸ್ತಿ ಹೊತ್ತು  ನಿದ್ರೆ ಮಾಡುತ್ತಿದ  ನನ್ನ ಗೀಳು,  ಸದಾ ಅಮ್ಮನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನನ್ನ ಅತಿ ಪ್ರೀತಿಯ ಮೇನಿಯಾ. ಕಾಫಿ ಅಂದರೆ ಮೂಗು ಮೂರಿಯುತ್ತಿದ್ದ ನನಗೆ ಕಳೆದ ವರ್ಷ ಅಂಟಿ ಕೊಂಡಿದ್ದು  ಕಾಫಿ ಚಟ. ದಿನವೀಡಿ ಘಂಟಗೆ ಎರಡು ಮೂರು ಸಾರಿ ಬ್ರೂ ಕಾಫಿ ಕುಡಿದ್ದು, ಆಸಿಡಿಟಿ ರೂಪದಲ್ಲಿ ಅದು ಕಾರಲು  ಶುರುವಾದ ಮೇಲೆ ಅದಕ್ಕೆ ಕಡಿವಾಣ ಬಿತ್ತು. ಇನ್ನು ಆರು ತಿಂಗಳ ಹಿಂದೆ ಅಂಟಿ ಕೊಂಡಿದ್ದ ಗೀಳಂದರೆ ಸೀರಿಯಲ್ ನೋಡೋದು. ಒಂದೇ ಟೈಮ್ ಸ್ಲಾಟ್‌ನಲ್ಲಿ ಮೂರು ಮೂರು ಧಾರವಾಹಿಗಳನ್ನು ನೋಡಿ ನೋಡಿ ತಲೆಯಲ್ಲಿ ಕಲೆಸು ಮೆಲೋಗರವಾಗಿ ವಾಕರಿಕೆ ಹುಟ್ಟಿಕೊಂಡಾಗಲೇ  ಗೊತ್ತಾಗಿದ್ದು ನನ್ನ ಹುಚ್ಚಿನ ಪರಿಣಾಮದ ಮಟ್ಟ.  ಇನ್ನೂ ಕೆಲವು ಮೇನಿಯಾಗಳು ಕಮಾನ್ ಆದರೂ, ಆದರ ಪರಿಣಾಮ ಮಾತ್ರ ಸ್ಪಲ್ಪ ಜಾಸ್ತಿನೇ ಆಗಿದ್ದೆ. ಆ ರೀತಿಯಲ್ಲಿ ಒಂದು ಚಾಕೊಲೇಟ್  ವ್ಯಾಮೋಹ, ಹೆಚ್ಚಿನ ಎಲ್ಲಾ ಹಲ್ಲುಗಳನ್ನು ಇವಕ್ಕೆ ಬಲಿಯಾಗಿವೆ, ಅನ್ನೊದಕ್ಕಿಂತ ಹೆಚ್ಚಿನ ದುಃಖ ದಿನ ದಿನ ಹೆಚ್ಚುತ್ತಿರುವ ತೂಕ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.  ಈ ಎಲ್ಲಾ ಹಾಗೂ ಇನ್ನೂ ಕೆಲವು  ಮೇನಿಯಾಗಳು ಆಗಲೋ ಈಗಲೋ ಕಾಡಿ ಬಂದಹಾಗೇ ಮರೆಯಾಗುತ್ತವೆ. ಯಾವುದು ಅಂತ ಏನು ಗಂಬೀರ ನಷ್ಟವನ್ನು ಉಂಟು ಮಾಡಿದ್ದು ಗಮನಕ್ಕೆ ಬಂದಿಲ್ಲ. ಆದರ ಜೊತೆಗೆ ಇವೆಲ್ಲಾ ಎಲ್ಲರಿಗೂ ಇರೋ ಅಂತ ಗೀಳು. 

ಆದರೆ ಯಾರಿಗೂ  ಕಾಡದ, ಹೆಸರಿಡದ, ನನಗೆ ಮಾತ್ರ ಸೀಮಿತವಾಗಿರುವ ಮೀತಿ ಮಿರಿದ ಉತ್ಸಾಹದ ಲಾಂಗ್ ಲಾಸ್ಟಿಂಗ್  ಗೀಳು  ಅವನ ಮೇನಿಯಾ’. ಇದು ನನ್ನ ಹಿಂದಿನ ಎಲ್ಲಾ ಹುಚ್ಚುತನಗಳನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದು ಕೊಂಡಿದೆ.  ಮೇನಿಯಾದ ಪ್ರತಿಯೊಂದು ಲಕ್ಷಣಗಳನ್ನು ಒಳಗೊಂಡಿರುವುದು ಅಷ್ಟೇ ನಿಜ ಕೂಡ.  ಅವನಿಂದ ದೂರವಾದಷ್ಟು ಹೆಚ್ಚು  ಮನಸ್ಸಿಗೆ ಕಿರಿಕಿರಿಯಾದರೆಅವನ ನೆನಪು ನಿದ್ರೆಯನ್ನು ಓಡಿಸಿದೆ, ನನ್ನೊಳಗೆ ಅವನೊಂದಿಗೆ  ಕೊನೆಯಿಲ್ಲದ ಮಾತುನನ್ನ ಇರುವನೇ ಮರೆಸುವ ಅವನ ಗುಂಗು.  ಇವೆಲ್ಲಾ ನನಗೆ ಅಂಟಿಕೊಂಡಿರುವ ಅವನ ವ್ಯಾಮೋಹದ ಸ್ಪಷ್ಟ ಕುರುಹುಗಳು. ನನಗಿರುವ ಅವನ ಗೀಳು ಅಂಟು ರೋಗವಾಗಿದರೆ ಎಷ್ಟು ಚೆನ್ನಾಗಿರುತಿತ್ತು. ನನ್ನ ಮೇನಿಯಾವನ್ನು ಅವನಿಗೂ ಟ್ರಾನ್ಸ್ ಫರ್ ಮಾಡಿ, ಅದಕ್ಕೊಂದು ಮುದ್ದಾದ ಹೆಸರಿಟ್ಟು ಬಿಡುತ್ತಿದೆ. ಅದಕ್ಕೆ ಅವನು ಹೇಳುತ್ತಾನೆ ಈಗೀಗ ನೀನು ನನ್ನಿಂದ ಇನ್ನು ಹೆಚ್ಚಿನ ಪ್ರೀತಿಯನ್ನು ಎಕ್ಸ್‌ ಪೆಕ್ಟ್ ಮಾಡ್ತಿಯಾ ಅಂತ. ಹೌದು ಏನು ಮಾಡೋದು.. ದಿನದಿಂದ ದಿನಕ್ಕೆ ಅವನು ಇನ್ನಷ್ಟು ಹೆಚ್ಚು ಇಷ್ಟವಾಗಿ ಅವನ ಮೇನಿಯಾಗಂಬೀರವಾಗುತ್ತಿದೆಯಲ್ಲಾ.. !
 ಸುತ್ತಿ ಬಳಸಿ ಮತ್ತದೇ ಅವನ ವಿಷ್ಯ.          


(Published in Vijaya Next on 22.2.2013)