August 30, 2009

ಜೀರಿಗೆ ಮೆಣಸು..

ಉಪ್ಪು, ಹುಳಿ, ಖಾರ ಮೂರು ಸಮ ಪ್ರಮಾಣದಲ್ಲಿ ಸೇರಿದರೆ ಮಾತ್ರ ಅಡಿಗೆ ರುಚಿ. ಖಾರ ಕೆಲವರಿಗೆ ಹೆಚ್ಚು ಕೆಲವರಿಗೆ ಕಮ್ಮಿ,ಹಾಗೆ ಒಬ್ಬರ ಮನೆಯಲ್ಲಿ ಒಂದೊಂದು ರೀತಿಯ ಮೆಣಸಿನಕಾಯಿಯ ಬಳಕೆ.
ದಪ್ಪಮೆಣಸು, ಬಳ್ಳಿಮೆಣಸು, ಗಿಡ್ಡಮೆಣಸು, ಖಾರದಮೆಣಸು ಹೀಗೆ ಮೆಣಸಿನಕಾಯಿಗಳಲ್ಲಿ ನಾನಾ ವಿಧಗಳು. ಹಾಗೆಯೇ "ಜೀರಿಗೆಮೆಣಸು" ಒ0ದು ವಿಧ. ಇದು ಯಾವ ಮೆಣಸು ಎಂದು ಅಶ್ಚರ್ಯಪಡುವರು ಹಲವರು. ಅದರೆ ಮಲೆನಾಡಿನಲ್ಲಿ ಮಾತ್ರ ಈ ಜೀರಿಗೆ ಮೆಣಸು ಎಲ್ಲರಿಗೂ ಚಿರಪರಿಚಿತ ಹಾಗು ಅಚ್ಚುಮೆಚ್ಚು. ಇದನ್ನು ಸೂಜಿಮೆಣಸು ಎಂದು ಸಹ ಕರೆಯುತ್ತಾರೆ. ಹೆಸರೇ ಹೇಳುವಹಾಗೇ ಜೀರಿಗೆಮೆಣಸು ಗಾತ್ರದಲ್ಲಿ ಚಿಕ್ಕದು,ಅದರೆ ಖಾರ ಮಾತ್ರ ಬಲು ಜೋರು. ಗಾತ್ರ ನೋಡಿ ತಿಂದರೇ ನಕ್ಷತ್ರ ಲೋಕದ ದರ್ಶನ ಗ್ಯಾಂರಟಿ.
ಮಲೆನಾಡಿನ ತೋಟ ಮತ್ತು ಬಯಲುಗಳಲ್ಲಿ ಈ ಗಿಡಗಳು ಸರ್ವೇ ಸಾಮಾನ್ಯ. ಇದು ಎರಡರಿಂದ ಮೂರು ಅಡಿಗಳ ಎತ್ತರದ ಸಣ್ಣ ಗಿಡಗಳಲ್ಲಿ ಬೆಳೆಯುತ್ತದೆ. ಒಂದು ಇಂಚಿಗಿಂತ ಕಡಿಮೆ ಉದ್ದವಿರುವ ಈ ಮೆಣಸಿನ ಕಾಯಿ ಹಸಿರು ಬಣ್ಣದಲ್ಲಿರುತ್ತದೆ. ನಂತರ ಕೇಸರಿ ಅಥವಾ ಕೆಂಪು ಬಣ್ಣದ ಹಣ್ಣುಗಳಾಗುತ್ತದೆ. ಈ ಜೀರಿಗೆಮೆಣಸಿನ ಗಿಡವನ್ನು ಇತರೇ ಮೆಣಸಿನಕಾಯಿ ಗಿಡಗಳ ಹಾಗೆಯೇ ಬೆಳಯಬಹುದು. ಹಣ್ಣಾದ ಕಾಯಿಗಳ ಬೀಜದಿಂದ ಹೊಸ ಗಿಡಗಳನ್ನು ಪಡೆಯಬಹುದು. ಹೆಚ್ಚು ಬೆಳಕಿರುವ ಜಾಗದಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಸಲ್ಪ ತೇವಾಂಶ ಸಾಕು. ಮಳೆಗಾಲದಲ್ಲಿ ಕಾಯಿ ಸ್ವಲ್ಪ ಕಡಿಮೆ, ಅದರೂ ಎಲ್ಲಾ ಕಾಲಗಳಲ್ಲೂ ಮೆಣಸಿನ ಕಾಯಿಗಳು ಲಭ್ಯ. ಈ ಗಿಡಗಳ ಗಾತ್ರ ಚಿಕ್ಕಾದದರೂ ಎಲೆಗಳು ಕಾಣದ ಹಾಗೆ ಕಾಯಿಗಳು ಬಿಡುತ್ತವೆ. ಕಾಯಿಯಾದ ನಂತರ ರಂಬೆಯನ್ನು ಮುರಿದರೆ, ಮತ್ತೆ ಹೊಸ ರಂಬೆ ಚಿಗರುತ್ತದೆ. ಗಿಡಗಳನ್ನು ತುಂಬಾ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಗಿಡದ ಬುಡಕ್ಕೆ ಸ್ವಲ್ಪ ಮಣ್ಣು ಮತ್ತು ಗೊಬ್ಬರ ಹಾಕಿದರೆ ಸಾಕು. ಈ ಮೆಣಸು ಅಕಾಶದ ಕಡೆ ಮುಖ ಮಾಡಿ ಬೆಳೆಯುವುದು ಇನ್ನೊಂದು ವಿಶೇಷ.
ಮಾರುಕಟ್ಟೆಯಲ್ಲಿ ಈ ಜೀರೆಗೆಮೆಣಿಸಿನಕಾಯಿಗೆ ತುಂಬಾ ಬೇಡಿಕೆಯಿದೆ. ಬೆಲೆಯು ಸಹ ಇದರ ಖಾರದಷ್ಟೆ ಜೋರಾಗಿದೆ. ಒಂದು ಕೆಜಿ ಒಣಗಿಸಿದ ಮೆಣಸಿನಕಾಯಿಗೆ 350 ರೂಪಾಯಿಗಳಿಗಿಂತ ಹೆಚ್ಚು ಬೆಲೆ ಇದೆ. ಈಗಾಗಲೇ ತಿರ್ಥಹಳ್ಳಿ ತಾಲ್ಲೂಕಿನಲ್ಲಿ ಕೆಲವರು ಇದನ್ನು ಬೆಳೆಯುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಸಣ್ಣ ಪ್ರಮಾಣದ ವಾಣಿಜ್ಯ ಬೆಳೆಯಾಗಿ ಮಾಡಿಕೊಂಡಿದ್ದಾರೆ.
ಮಲೆನಾಡಿನಲ್ಲಿ ಬಹು ಬಳಕೆಯಲ್ಲಿರುವ ಈ ಮೆಣಸು ಎಷ್ಟೋ ಮನೆಗಳಲ್ಲಿ ಹಸಿಮೆಣಸಿನಕಾಯಿಗೆ ಪರ್ಯಾಯವಾಗಿ ಉಪಯೋಗಿಸುತ್ತಾರೆ. ಅರೋಗ್ಯಕ್ಕೆ ಹಸಿಮೆಣಸಿಗಿಂತ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಜೀರಿಗೆಮೆಣಸು ಬಹು ಉಪಯೋಗಿ. ನಮ್ಮ ಭಾಗದಲ್ಲಿ ಚಟ್ನಿಗೆ,ಮಾವಿನಕಾಯಿ, ಸೌತೆಕಾಯಿ, ಚಕ್ಕೊತಗಳ ಜೊತೆ ಬಳಸುವುದು ಪ್ರಚಲಿತ. ಇದನ್ನು ಒಣಗಿಸಿ ಅಡಿಗೆಗೆ ಬಳಸಬಹುದು, ಪುಡಿಮಾಡಿ ಉಪ್ಪಿನಕಾಯಿಗೆ ಉಪಯೋಗಿಸಬಹುದು. ಒಣಗಿಸಿದ ಮೆಣಿಸಿನಕಾಯಿಗಳನ್ನು ಹಲವು ವರ್ಷ ಶೇಖರಿಸಿಡಬಹುದು. ಇದರ ರುಚಿಗೆ ಬೇರೆಯಾವುದೇ ಮೆಣಸು ಸಾಟಿಯಾಗುವುದಿಲ್ಲ.
ಇದರ ಎಲೆ ಕೂಡ ತುಂಬ ಉಪಯೋಗಿ. ಎಲೆಗಳಿಂದ ತಂಬುಳಿ, ಪಲ್ಯ ಹಾಗೂ ತೊವ್ವೆಗಳನ್ನು ಮಾಡಬಹದು. ಅರೋಗ್ಯಕ್ಕೆ ತುಂಬ ಹಿತಕರವಾದ ಸೊಪ್ಪು ಇದು. ಬಾಯಿಹುಣ್ಣು, ಹೊಟ್ಟೆ ಉರಿಯಂತಹ ಖಾಯಿಲೆಗಳಿಗೆ ಈ ಸೊಪ್ಪಿನಿಂದ ಮಾಡಿದ ಪದಾರ್ಥಗಳು ಉಪಯುಕ್ತ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ದದು ಎಂಬ ಮಾತು ಜೀರಿಗೆಮೆಣಸಿಗೆ ಹೆಚ್ಚು ಸೂಕ್ತ
ಹೀಗೆ ಜೀರೆಗೆಮೆಣಸು ಮತ್ತು ಅದರ ಎಲೆಗಳನ್ನು ಮಲೆನಾಡಿನಲ್ಲಿ ನಾವು ನಮ್ಮ ನೀತ್ಯ ಜೀವನದಲ್ಲಿ ನಿರಂತರವಾಗಿ ಬಳಸುತ್ತಿದ್ದೆವೆ. ಈಗ ಅರ್ಥಿಕವಾಗಿ ಇದರ ಉಪಯೋಗ ಪಡೆಯುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

No comments: