August 25, 2009

ಅಮ್ಮ ನನ್ನ ಎದೆಯಾಳದಿಂದ......


ನನ್ನ ಎರಡುವರೆ ವರ್ಷದ ಮಗಳಿಗೆ ಯಾರಾದರು ನೀನು ಅಪ್ಪನ ಮಗಳೋ, ಅಮ್ಮನ ಮಗಳೋ? ಎಂದರೇ ತಕ್ಷಣ ಅಪ್ಪನ ಮಗಳು ಅನ್ನುತ್ತಾಳೆ. ರೂಪದಲ್ಲಿ ನನ್ನನೇ ಹೋಲುವ ಅವಳಿಗೆ ನೀನು ಅಮ್ಮನ ತರಹ ಇದ್ದಿಯಾ ಅಂದರೆ ಸಿಟ್ಟು, ಇಲ್ಲ ನಾನು ಅಪ್ಪನ ಹಾಗೇ ಇರೋದು ! ಅಂತ ಚೋಟುದ್ದ ಹುಡುಗಿ ವಾದ ಮಾಡುತ್ತಾಳೆ. ಅವಳು ಆ ರೀತಿ ಹೇಳಿದಾಗಲ್ಲೆಲಾ ನಾನು ಚಿಕ್ಕವಳಾಗಿದ್ದಾಗ ಹೀಗೆ ಮಾಡುತ್ತಿದ್ದೆ ಅಲ್ವಾ? ಅಂತ ಅಂದುಕೊಳ್ಳುತ್ತೇನೆ. ನಾನು ಅಥವಾ ನನ್ನ ಮಗಳು ಮಾತ್ರವಲ್ಲ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಹೆಣ್ಣುಮಕ್ಕಳು ನಾನು ಅಪ್ಪನ ಮಗಳು ಅಂತ ಹೇಳಿಕೊಳ್ಳೊದರಲೇ ಖುಷಿ ಪಡುತ್ತಾರೆ. ನನ್ನ ಮಗಳು ಈ ರೀತಿ ಅಪ್ಪನ ಕಡೆ ವಾಲಿದಾಗಲೆಲ್ಲಾ ನನಗೆ ಸಿಟ್ಟು ಬರುತ್ತೆ ಹಾಗು ಬೇಜಾರಾಗುತ್ತೆ. ನಾನು ದಿನವೀಡಿ ಅವಳ ಜೊತೆ ಇದ್ದು ಏನೇಲ್ಲಾ ಮಾಡಿದರೂ, ದಿನದಲ್ಲಿ ಕಡಿಮೆ ಸಮಯ ಅವಳೊಂದಿಗೆ ಕಳೆಯುವ ಅಪ್ಪನೇ ಅವಳಿಗೆ ಹೆಚ್ಚು! ಆಗೆಲ್ಲಾ ನನ್ನ ಅಮ್ಮ ನನ್ನನೂ ತುಂಬಾ ಕಾಡುತ್ತಾಳೆ. ನಾವು ಮೂರು ಮಕ್ಕಳು ಈ ರೀತಿಯ ಅದೆಷ್ಟು ಪಕ್ಷಪಾತ ವರ್ತನೆಗಳಿಂದ ಅಮ್ಮನಿಗೆ ಬೇಜಾರುಮಾಡಿದ್ದೇವೆ. ಅಮ್ಮನ ಕಣ್ಣಲ್ಲಿ ಅದೇಷ್ಟು ಬಾರಿ ನೀರುಬಂದಿರಬಹುದು. ನಮ್ಮದು ಮಲೆನಾಡಿನ ಹಳ್ಳಿಯೊಂದರ ಒಂಟಿಮನೆಯಾದ ಕಾರಣ ಶಾಲೆಗೆ ದೂರ, ಮನೆಯಲ್ಲಿ ಯಾವುದೇ ವಾಹನವಿಲ್ಲದ ಕಾಲವದು. ಹಿಗಾಗಿ ನನ್ನನು ದೂರದ ಶಿವಮೊಗ್ಗದ ನೆಂಟರೊಬ್ಬರ ಮನೆಯಲ್ಲಿ ಚಿಕ್ಕ ವಯಸ್ಸಿನಲ್ಲೇ ಓದಲೂ ಬಿಟ್ಟರು. ಯಾವಾಗಲಾದರೊಮ್ಮೆ ಅಪ್ಪ ಬಂದು ಹೋಗುತ್ತಿದ್ದ. ಅಮ್ಮ ದನ, ಕರು, ಮನೆ, ಕೆಲಸ ಇವುಗಳ ಬಲೆಯಿಂದ ಬಿಡಿಸಿಕೊಂಡು ಬರುತ್ತಿದ್ದಿದು ಬಹಳ ಅಪರೂಪ. ಹಾಗಾಗಿ ಅಪ್ಪ ಬಹಳ ಪ್ರಿಯವಾದ. ವರ್ಷಕ್ಕೆ ಎರಡು ಬಾರಿ ರಜಕ್ಕೆ ಮನೆಗೆ ಬಂದಾಗಲೂ ಕೆಲಸ ಹೇಳುವ ಅಮ್ಮನಿಂಗಿತಲೂ, ಮಾಡಬೇಡ ಬೀಡು ಎನ್ನುವ ಅಪ್ಪನೇ ಖುಷಿ. ಯಾವಾಲೂ ಮನೆಯಲ್ಲೇ ಇರುತ್ತಿದ್ದ ಅಮ್ಮ ಸಂಸಾರದ ಜಂಜಾಟದ ಜೊತೆಗೆ ಮೂರು ಮಕ್ಕಳ ಜಗಳ, ಗಲಾಟೆ, ಚೇಷ್ಟೆಯನ್ನು ತಾಳಲಾರದೆ ಕಿರಾಚಾಡುತ್ತಿದ್ದಳು. ದೊಡ್ಡವಳಾದ ನನಗೇ ಸ್ವಲ್ಪ ಜಾಸ್ತಿ ಬೈಗುಳ, ಹೊಡೆತ. ಅಮ್ಮನ ಮೇಲೆ ದೂರು ಹೇಳಲು ಅಪ್ಪ ಮನೆಗೆ ಬರುವುದನೇ ಕಾಯುತ್ತಿದ್ದೆ. ಹೈಸ್ಕೂಲ್ ಓದಲೂ ವಾಪಸ್ಸು ಮನೆಗೆ ಬಂದಾಗಲೂ, ಅಮ್ಮನ ಅನುಮಾನ ಹಾಗೂ ನೂರೆಂಟು ಪ್ರಶ್ನೆಗಳು ನನಗೆ ಕಿರಿಕಿರಿಯಾಗಿತ್ತು. ಅಮ್ಮನ ಹತ್ತಿರ ಜಗಳವಾಡದ ದಿನವೇ ಇಲ್ಲ. ಆ ದಿನಗಳಲ್ಲಿ ಅಮ್ಮ ನನ್ನ ಬದ್ದ ವೈರಿಯಾಗಿ ಕಾಣುತ್ತಿದ್ದಳು. ನಂತರದ ದಿನಗಳಲ್ಲಿ ಕಾಲೇಜ್ ಓದಲೂ ಹಾಸ್ಟೆಲ್ ಸೇರಿದ ಮೇಲೂ, ಅಮ್ಮನಿಗೆ ತಿಳಿಯದೆ ಜಾಸ್ತಿ ದುಡ್ಡುಕೊಡುತ್ತಿದ್ದ, ಅಪ್ಪನೇ ಅಚ್ಚುಮೆಚ್ಚು. ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಿದ್ದ ಅಮ್ಮ ನನಗೆ ಹತ್ತಿರವಾಗಲೇ ಇಲ್ಲ. ಅಥವಾ ಅವಳಿಗೆ ಹತ್ತಿರವಾಗಲೂ ನಾನು ಪ್ರಯತ್ನಪಡಲೇ ಇಲ್ಲವೋ?. ಅದರೆ ಈಗ ನಾನು ತಾಯಿ ಸ್ಥಾನದಲ್ಲಿದ್ದೇನೆ. ನನ್ನ ಮಗಳು ಅಮ್ಮ ನೀನು ನನಗೆ ಇಷ್ಟ ಇಲ್ಲ ಎಂದಾಗ ನನ್ನ ಎದೆಯಲ್ಲಿ ಹಳೆ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಅಮ್ಮನ ಆ ಎಲ್ಲಾ ವರ್ತನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತದೆ. ಮನೆಯಲ್ಲಿ ಹೆಚ್ಚಾಗಿ ಇರದ ಅಪ್ಪ, ಬಂಧು-ಬಳಗದವರ ಕೊಂಕು ಮಾತು, ಇವುಗಳೆಲ್ಲಾ ಅಮ್ಮನ ಹತಾಶೆಗೆ ಕಾರಣವಾಗಿದ್ದವು. ಕೆಲಸ ಮತ್ತು ಸಂಸಾರದ ಜಂಜಾಟದಿಂದ ಮಕ್ಕಳ ಮೇಲೆ ರೇಗಾಡುತ್ತಿದ್ದಳು. ಬೆಳೆದ ಮಗಳು ಎಲ್ಲಿ ದಾರಿ ತಪ್ಪುವಳೋ ಎಂಬ ಅತಂಕ ನೂರೆಂಟು ಪ್ರಶ್ನೇಗಳ ರೂಪದಲ್ಲಿ ಹೊರಬರುತ್ತಿದ್ದವು. ನಂತರದ ದಿನಗಳಲ್ಲಿ ನನ್ನ ಬಗ್ಗೆ ಅಮ್ಮನ ಧೋರಣೆಗಳು ಬದಲಾದವು, ಅಥವಾ ನನ್ನದೋ ತಿಳಿಯದು. ಅವಳು ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳಲಾರಂಭಿಸಿದ್ದಳು. ಪಾಪ ಎಷ್ಟು ಒಳ್ಳೆಯವಳು ಅಮ್ಮ ಎಂದು ಕೊಳ್ಳುತ್ತಿದ್ದೆ. ಅದರೆ ನನ್ನ ಇಗೋಯಿಂದ ಅವಳ ಭಾವನೆಗಳಿಗೆ ಸ್ಪಂದಿಸಲು ಸಾದ್ಯವಾಗಲೇ ಇಲ್ಲ. ಅಮ್ಮ ತನ್ನ ಬೆಳೆದ ಮಗಳಲ್ಲಿ ಅವಳ ಸ್ನೇಹಿತೆಗಾಗಿ ಅದೆಷ್ಟು ಹುಡುಕಿದಳೋ........., ಹಂಬಲಿಸಿದಳೋ.......? ಕೊನೆಗೂ ನಾನು ಅವಳ ಸ್ನೇಹಿತೆಯಾಗಲೇ ಇಲ್ಲ.!

2 comments:

aashada said...

I read this blog years back.i could not forget. this is really touching.

ರಶ್ಮಿ ಕಾರ್ಗಲ್ said...

Thanks :)