January 3, 2011

ಚಳಿಗಾಲದ ಸಮಸ್ಯೆಗಳಿಗೆ ಸರಳ ಪರಿಹಾರಗಳು.

ವಾವ್! ಚಳಿಗಾಲದಲ್ಲಿ ಬೆಚ್ಚನೆ ಉಡುಪು ಧರಿಸಿ, ಬಿಸಿಬಿಸಿ ಕಾಫಿಯೊಂದಿಗೆ, ಬೋಂಡ, ಬಜ್ಜಿ ಸವಿಯುವುದು ಎಲ್ಲರಿಗೂ ಪ್ರಿಯವಾದದ್ದೇ. ಚಳಿಗಾಲ ಎಂದರೆ ಬರೀ ಬೆಚ್ಚನೆ ಉಡುಪುಗಳನ್ನು ತೊಡುವುದು ಮಾತ್ರವಲ್ಲ. ಚಳಿಗಾಲದ ಜೊತೆಗೆ ಹಲವು ತೊಂದರೆಗಳು ಕಾಡುತ್ತವೆ. ಶುಷ್ಕ ಕೂದಲು, ಒಣ ಚರ್ಮ, ಬಿರುಕು ಬಿಟ್ಟ ಹಿಮ್ಮುಡಿಗಳು , ಒಡೆದ ತುಟಿಗಳು ಈ ಕಾಲದ ಕಾಮನ್ ಸಮಸ್ಯೆಗಳು. ಕಡಿಮೆ ಉಷ್ಣಾಂಶ, ಕಡಿಮೆ ತೇವಾಂಶ ಮತ್ತು ತಣ್ಣನೆ ಕೊರೆಯುವ ಗಾಳಿ ಇವುಗಳಿಗೆಲ್ಲಾ ಮೂಲ ಕಾರ‍ಣವಾಗಿದೆ. ಕೂದಲು ಮತ್ತು ಚರ್ಮವಂತೂ ಶುಷ್ಕವಾಗಿ ನಿರ್ಜಿವ ಸ್ವರೂಪ ಪಡೆದು ಕೊಳ್ಳುತ್ತವೆ. ಫ್ಯಾಷನ್ ಪ್ರಿಯರಿಗೊಂತು ಈ ಕಾಲ ಶಾಪವೇ ಸರಿ. ಸ್ಪಲ ಕಾಳಜಿ ಮತ್ತು ಸುಲಭ ಕ್ರಮಗಳ ಮೂಲಕ ಈ ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಚಳಿಗಾಲದಲ್ಲಿ ಕಾಡುವ ಕಾಮನ್ ಸಮಸ್ಯೆಗಳಿಗೆ ಕೆಲವು ಸರಳ ಟಿಪ್ಸ್‌ಗಳು ಇಲ್ಲಿವೆ. ಈ ಕ್ರಮಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿ ಕೊಳ್ಳಿ ಚಳಿಗಾಲದಲ್ಲಿ ನಿಮ್ಮನ್ನು ಕಾಡುವ ತೊಂದರೆಗಳಿಗೆ ಬಾಯ್ ಹೇಳಿ ಮತ್ತು ಎಂಜಾಯ್ ವಿಂಟರ್..!


ಚರ್ಮ:
ಚಳಿಗಾಲದ ತಣ್ಣನೆ ಗಡುಸಾದ ಹವಾಗುಣದಿಂದ ಚರ್ಮವು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು, ತುರಿಕೆ ಕಾಣಿಸು ಕೊಳ್ಳುವುದು ಸಾಮನ್ಯ.ಇದನ್ನು ತಡೆಗಟ್ಟಲು ಸ್ಪಲ ಕೇರ್ ಅತ್ಯಗತ್ಯ.
ಚಳಿಗಾಲದಲ್ಲಿ ಅತಿ ಬಿಸಿ ನೀರಿನ ಸ್ನಾನ ಬೇಡ. ಇದು ಚರ್ಮದ ಎಣ್ಣೆ ಅಂಶವನ್ನು ನಾಶ ಮಾಡುತ್ತದೆ. ಉಗುರು ಬೆಚ್ಚಗಿನ ನೀರು ಉತ್ತಮ. ಹಾಗೆ ಸ್ನಾನ ಮಾಡುವ ಅವಧಿಯನ್ನು ಕಡಿಮೆಗೊಳಿಸಿ. ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡಿ.
ಗಡುಸಾದ ಸೋಪಿನ ಬಳಕೆಯಿಂದ ಚರ್ಮದ ನೈಸರ್ಗಿಕ ತೈಲಗಳ ನಷ್ಟವಾಗಿ ಇನ್ನಷ್ಟೂ ಒಣಗುತ್ತದೆ, ಅದರಿಂದ ಸಾದ್ಯವಾದಷ್ಟೂ ಸೌಮ್ಯವಾದ ಹೆಚ್ಚು ಮಾಶ್ಚರೈಸರ್ ಯುಕ್ತ ಸೋಪನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವೆ ಸೋಪಿನ ಬದಲಿಗೆ ಸ್ನಾನಕ್ಕೆ ಹೆಸರು ಕಾಳಿನ ಹಿಟ್ಟನ್ನು ಸಹ ಬಳಸಬಹುದು.
ಸ್ನಾನದ ನಂತರ ಟವೆಲ್‌ನಿಂದ ದೇಹವನ್ನು ಉಜ್ಜ ಬೇಡಿ. ಕೋಮಲವಾಗಿ ಒರಿಸಿ ಹಾಗೂ ಕಡ್ಡಾಯವಾಗಿ ಕೊಬ್ಬರಿ ಎಣ್ಣೆ, ಷೀಕಕಾಯಿ ಎಣ್ಣೆ (shea butter) ಅಥವಾ ಸೂಕ್ತವಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳುವ ರೂಡಿ ಮಾಡಿಕೊಳ್ಳಿ.
ಚಳಿಯಿಂದ ಗಡುಸಾದ ಚರ್ಮದ ತುರಿಕೆಗೆ ಕೊಬ್ಬರಿ ಎಣ್ಣೆಯ ಮಸಾಜ್ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಮುಖ, ಕೈ, ಕಾಲುಗಳಿಗೆ ಸೂಕ್ತವಾದ ಕ್ರಿಮ್, ಎಣ್ಣೆ ಅಥವಾ ಲೋಶನ್ ಬಳಸುವುದನ್ನು ಮರೆಯಬೇಡಿ. ಸಾಧ್ಯವಾದಷ್ಟೂ A, C, D ಮತ್ತು E ವಿಟಮಿನ್ ಯುಕ್ತ ನೈಸರ್ಗಿಕ ಎಣ್ಣೆಗಳನ್ನು ಅಯ್ಕೆ ಮಾಡಿಕೊಳ್ಳಿ. (ಕೊಬ್ಬರಿ ಎಣ್ಣೆ, ಅಲಿವ್ ಎಣ್ಣೆ, ಕೋಕಾ ಎಣ್ಣೆ, ಷೀಕಕಾಯಿ ಎಣ್ಣೆ ಇತ್ಯಾದಿ)
ವಾರಕ್ಕೊಮ್ಮೆ ಸ್ಕ್ರಬರ್ ಬಳಸಿ, ಇದು ಒಣಗಿದ ಚರ್ಮವನ್ನು ತೆಗೆಯಲು ಸಹಕಾರಿಯಾಗುತ್ತದೆ. ನಂತರ ಪೇಸ್ ಪ್ಯಾಕ್ ಮಾಡಿ ಕೊಳ್ಳಿ. ಇದರಿಂದ ಚಳಿಯಿಂದ ಒಡೆದ ಚರ್ಮ ಮತ್ತೆ ಕಾಂತಿಯುಕ್ತ ಹೊಳೆಯತ್ತದೆ.
ಬೆಣ್ಣೆ ಹಣ್ಣಿನ (avocado) ಪೇಸ್ ಪ್ಯಾಕ್ ಒಣ ಚರ್ಮಕ್ಕೆ ಅತಿ ಸೂಕ್ತ. ಬೆಣ್ಣೆ ಹಣ್ಣಿನೊಂದಿಗೆ ಅಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಕೊಳ್ಳಿ. 10-15 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳಿಯಿರಿ.
ಹಾಗೇ ಓಟ್ಸ್‌ನ ಪೇಸ್ ಪ್ಯಾಕ್ ಕೂಡ ಬಳಸಬಹುದು. ಓಟ್ಸ್ ಫ್ಲೆಕ್ಸ್‌ನ ಪುಡಿ, ಮೊಟ್ಟೆಯ ಹಳದಿ ಭಾಗ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ. ಮುಖ ಹಚ್ಚಿ 20 ನಿಮಿಷಗಳ ನಂತರ ತೊಳಿಯಿರಿ.
ಮೊಸರು, ಮಜ್ಜಿಗೆ, ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ತೊಳಿರಿ.
ರಾತ್ರಿ ಮಲಗುವ ಮುನ್ನ ಲೋಳೆಸರದ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಿ ಕೊಳ್ಳಿ.
ಈ ಫೇಸ್ ಮ್ಯಾಕ್ಸ್‌ಗಳು ನಿಮ್ಮ ಚರ್ಮಕ್ಕೆ ಸಂಪೂರ್ಣ ಪ್ರಮಾಣದ ವಿಟಮಿನ್, ಮಿನರಲ್ಸ್, ಅಂಟಿಅಕ್ಸಿಡೆಂಟ್‌ಗಳು ಮತ್ತು ಚರ್ಮವನ್ನು ಮೃದುಗೊಳಿಸುವ ಅಂಶಗಳನ್ನು ಸರಬರಾಜುಮಾಡುತ್ತವೆ. ಮತ್ತು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇವು ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಪುನಃ ಸ್ಥಾಪಿಸುತ್ತದೆ ಮತ್ತು ಚಳಿಗಾಲದ ಗಾಳಿಯ ಋಣಾತ್ಮಕ ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ.
ಕೈಗಳಿಗೆ ಗ್ಲೌಸ್ ಹಾಕಿ ಕೊಳ್ಳಿ. ಕೆಲಸದ ನಂತರ ಸರಿಯಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳಿ.
ಒರಟಾದ ಹಸ್ತಗಳಿಗೆ ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣದಿಂದ ಮಸಾಜ್ ಮಾಡಿ ಕೊಳ್ಳಿ. ಇದು ಕೈಯನ್ನು ಮೃದುಗೊಳಿಸುತ್ತದೆ.
ಹಾಗೆಯೇ 1 ಚಮಚ- ಗ್ಲಿಸಿರಿನ್,1 ಚಮಚ- ನಿಂಬೆ ರಸ ಮತ್ತು 5 ಹನಿ ರೋಸ ವಾಟರ್‌ ಅನ್ನು ಮಿಕ್ಸ್ ಮಾಡಿ, ಕೈಗಳಿಗೆ 10-15 ನಿಮಿಷಗಳ ಮಸಾಜ್ ಮಾಡಿ ಕೊಳ್ಳಿ
ಮನೆಯಿಂದ ಹೊರ ಹೊರಡುವಾಗ ಕನಿಷ್ಟ 15 ಅಥವಾ ಹೆಚ್ಚಿನ SPF ಅಂಶವನ್ನು ಹೊಂದಿರುವ ಸನ್‌ಸ್ಕ್ರೀನ್ ಲೊಶನ್ ಹಚ್ಚಿ ಕೊಳ್ಳಿ. ಸನ್‌ಸ್ಕ್ರೀನ್ ಮತ್ತು ಮಾಶ್ಚರೈಸರ್‌ ಮಿಶ್ರವಾಗಿರುವ ಲೋಶನ್‌ ಸಹ ನೀವು ಆಯ್ಕೆ ಮಾಡಿಕೊಳ್ಳ ಬಹುದು.
ಒಡೆದ ಹಿಮ್ಮುಡಿಗಳಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವ ಮುನ್ನ ಸೂಕ್ತವಾದ ಕ್ರೀಮ್ ಹಚ್ಚಿ, ಕಾಲಿಗೆ ಸಾಕ್ಸ್ ಹಾಕಿ ಕೊಂಡು ಮಲಗುವ ಅಭ್ಯಾಸ ಮಾಡಿ ಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಹಾಕಿ ಕಾಲನ್ನು ಅದರಲ್ಲಿ ಇಟ್ಟು ಕೊಳ್ಳಿ. ಹಾಗೇಯೆ ಅನ್ನದ ತಿಳಿಗೆ ಸ್ವಲ್ಪ ಹಾಕಿ ಕಾಲನ್ನು 10-15 ನಿಮಿಷಗಳ ಕಾಲ ಅದರಲ್ಲಿ ಇಟ್ಟುಕೊಳ್ಳಿ. ಒಡೆದ ಹಿಮ್ಮುಡಿಯನ್ನು ಮೃದುಗೊಳಿಸುತ್ತದೆ ಮತ್ತು ಬಿರುಕುಗಳು ಮುಚ್ಚಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ತುಟಿಗಳ ಒಡೆಯುವಿಕೆ ಸಾಮಾನ್ಯ. ಒಡೆದ ತುಟಿಗಳಿಗೆ ಪದೇ ಪದೇ ನಾಲಿಗೆ ತಗಲಿಸ ಬೇಡಿ. ಸದಾ ಲಿಪ್ ಬಾಮ್ ಹಚ್ಚಿ ಕೊಳ್ಳಿ, ತುಟಿಯನ್ನು ಒಣಗಲು ಬಿಡಬೇಡಿ. ಒಡೆದ ತುಟಿಗಳಿಗೆ ಬೆಣ್ಣೆ ಮತ್ತು ಹಾಲು ಕೆನೆ ರಾಮಬಾಣ. ಕೊಬ್ಬರಿ ಎಣ್ಣೆ, ಅಲಿವ್‌ ಅಯಿಲ್, ಷೀಕಕಾಯಿ ಎಣ್ಣೆಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೂದಲು:
ಚಳಿಗಾಲದ ತಡಿ ಹವೆಯಿಂದ ಕೂದಲು ಒಣಗಿ ತನ್ನ ಹೊಳಪನ್ನು ಕಳೆದು ಕೊಳ್ಳುತ್ತದೆ. ಜೊತೆಗೆ ಕೂದಲು ಉದುರುವುದು ಕವಲು ಒಡೆಯುವುದು, ಹೊಟ್ಟಿನ ಸಮಸ್ಯೆಗಳು ಸೇರಿ ಕೊಳ್ಳುತ್ತವೆ.
ಚಳಿಗಾಲದ ಸಮಯದಲ್ಲಿ ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳಿಯಬೇಡಿ. ಅತಿಯಾಗಿ ಕೂದಲು ತೊಳೆಯುವುದು ಅಥವಾ ಶಾಂಪೂ ಬಳಕೆಯನ್ನು ತಪ್ಪಿಸಿ. ಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ದಾಸವಾಳದ ಸೊಪ್ಪು, ಲೋಳೆಸರ, ಅಂಟವಾಳ ಮತ್ತು ಸೀಗೆಕಾಯಿಯ ಮಿಶ್ರಣವು ಕೂದಲಿಗೆ ಒಳ್ಳೆಯ ನೈಸರ್ಗಿಕ ಶಾಂಪೂ.
ಕೂದಲನ್ನು ಬಿಸಿ ಮಾಡುವ ಉಪಕರಣಗಳಾದ ಹೇರ್ ಡ್ರೈಯರ್, ಕರಲರ್‌ಗಳ ಬಳಕೆಯಿಂದ ದೂರ ಇರಿ. ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಕೊಳ್ಳಿ.
ಚಳಿಗಾಲದಲ್ಲಿ ಕೂದಲನ್ನು ಪದೇ ಪದೇ ಕಲರಿಂಗ್, ಸ್ಟ್ರೀಕಿಂಗ್, ಅಥವಾ ಐರಿನಿಂಗ್‌ಗಳಿಗೆ ಒಡ್ಡಬೇಡಿ. ಇದರಿಂದ ಕೂದಲಿನ ನೈಸರ್ಗಿಕ ತೈಲ ನಷ್ಟವಾಗಿ, ಕೂದಲು ಇನ್ನಷ್ಟೂ ಹದಗೆಡುತ್ತದೆ.
ಕೂದಲನ್ನು ಗಾಳಿಗೆ ಹಾರಡಲೂ ಬಿಡಬೇಡಿ. ಅದಷ್ಟೂ ಕೂದಲನ್ನು ಕಟ್ಟಿ ಕೊಳ್ಳಿ. ಹೊರಗೆ ಹೋಗುವ ಸ್ಕಾರ್ಫ್‌, ಟೋಪಿಗಳನ್ನು ಬಳಸಿ
ಒಣ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಅತ್ಯಂತ ಪರಿಣಾಮಕಾರಿ. ಹಾಗೆ ಅಲಿವ್ ಅಯಿಲ್ ಮಸಾಜ್ ಸಹ ತುಂಬಾ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಚಳಿಗಾಲದಲ್ಲಿ ಕೂದಲು ಒಣಗಿ ಹೊಳಪನ್ನು ಕಳೆದು ಕೊಳ್ಳುವುದನ್ನು ತಪ್ಪಿಸಲು, ಆಗಾಗ ಸೂಕ್ತ ನೈಸರ್ಗಿಕ ಕಂಡಿಷನರ್ ಬಳಕೆ ಅಗತ್ಯ. ಬೇಸಿಗೆಗಿಂತ ಚಳಿಗಾಲದಲ್ಲಿ ಕೂದಲಿಗೆ ಕಂಡಿಷನರ್‌ನ್ನ ಅಗತ್ಯ ಹೆಚ್ಚು. ಕೂದಲು ತೊಳೆಯುವ ಮುನ್ನ ಲೋಳೆಸರದ ರಸ ಅಥವಾ ರುಬ್ಬಿದ ದಾಸವಾಳ ಸೊಪ್ಪನ್ನು 15-20 ನಿಮಿಷಗಳ ಕಾಲ ತಲೆಗೆ ಹಚ್ಚಿ ಕೊಳ್ಳಿ. ಮೆಹಂದಿಯನ್ನು ಕಂಡಿಷನ್ ಆಗಿ ಸಹ ಬಳಸಬಹುದು, ಅದಕ್ಕೆ ಒಂದು ಚಮಚ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ. ಕೆಲ್ವು ಹನಿ ಶುಂಠಿರಸದೊಂದಿಗೆ ಅಲೀವ್ ಅಯಿಲ್ ಸೇರಿಸಿ, ತಲೆಗೆ ಹಚ್ಚಿ ಕೊಂಡು, ಒಂದು ಘಂಟೆಯ ನಂತರ ತೊಳಿಯಿರಿ. ಸೀಗೆ ಕಾಯಿ ಮತ್ತು ಮೆಂತ್ಯೆಯ ಪುಡಿಯನ್ನು ಕೂದಲು ತೊಳೆಯಲು ಉಪಯೋಗಿಸಿ. ಬೆಣ್ಣೆ ಹಣ್ಣು ಸಹ ಕೂದಲಿಗೆ ಒಳ್ಳೆಯ ಕಂಡಿಷನರ್.


ಆಹಾರ ಕ್ರಮ:
ಚಳಿಗಾಲದಲ್ಲಿ ಈ ಎಲ್ಲಾ ಬೇಸಿಕ್ ಕೇರ್‌ಗಳ ಜೊತೆ ನಾವು ಸೇವಿಸುವ ಆಹಾರ ಕ್ರಮದ ಕಡೆಗೆ ಗಮನಹರಿಸುವುದು ಸಹ ಅತಿ ಅವಶ್ಯಕ. ಚಳಿಗಾಲದ ಸಮಸ್ಯೆಗಳಿಂದ ದೂರವಿರಲು ದೇಹದ ಹೊರಗಿನಿಂದ ಕಾಳಜಿಯ ಜೊತೆಗೆ ದೇಹದ ಒಳಗಿನ ಕಾಳಜಿ ಸಹ ಮುಖ್ಯ. ಈ ಕಾಲದಲ್ಲಿನ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಹಾರಿಸಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
ಜೀವ ಜಲ ನೀರು ಬೇಸಿಗೆ ಅಷ್ಟೇ ಚಳಗಾಲದಲ್ಲೂ ಅವಶ್ಯಕ. ಇದು ದೇಹವನ್ನು ಹೈಡ್ರೇಟು ಮಾಡುತ್ತದೆ. ಇದರಿಂದ ಚರ್ಮವನ್ನು ಆರೋಗ್ಯಕರ ಹೊಳಪನ್ನು ಪಡೆಯುತ್ತದೆ. ಚೆನ್ನಾಗಿ ನೀರು ಕುಡಿಯಿರಿ.
ಅಗಸೆ ಬೀಜದ ಎಣ್ಣೆ (Flaxseed) - ಇದು ದೇಹವನ್ನು ಒಳಗಿನಿಂದ ತೇವವಾಗಿಡುತ್ತದೆ. ಇದು ಬಹು ಆವಶ್ಯಕವಾದ ಸ್ವಾಭಾವಿಕ ಕೊಬ್ಬುಗಳನ್ನು ಹೊಂದಿರುವುದರಿಂದ ಸಮಸ್ತ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ ಹಾಗೂ ಅವಶ್ಯಕ. ಇದು ಎಣ್ಣೆಯ ರೂಪದಲ್ಲಿ ಹಾಗೂ ಕ್ಯಾಪ್ಸೂಲ್‌ ರೂಪದಲ್ಲಿಯೂ ಸಹ ಲಭ್ಯ .
ನಿತ್ಯದ ಆಹಾರ ಕ್ರಮದಲ್ಲಿ ಅಗತ್ಯವಾದ ಒಳ್ಳೆಯ ಎಣ್ಣೆಗಳನ್ನು ಅಳವಡಿಸಿ ಕೊಳ್ಳಿ. ಜೈವಿಕ ಬೆಣ್ಣೆ, ಕಾಡ್ ಲೀವರ್ ಅಯಿಲ್, ಒಮೆಗಾ-3, ಕೊಬ್ಬರಿ ಎಣ್ಣೆ ಇತ್ಯಾದಿಗಳು. ಜೊತೆಗೆ ಹಸಿ ತರಕಾರಿ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಹಣ್ಣುಗಳನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿ ಕೊಳ್ಳಿ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

ಮನಸ್ಸಿದ್ದರೆ ಮಾರ್ಗ..!!

ಮಲೆನಾಡಿನ ಹಳ್ಳಿಗಳಲ್ಲಿ ಈಗ ಕೃಷಿಕ ಯುವಕರ ಮದುವೆ ಹೆತ್ತವರಿಗೆ ಒಂದು ಸಮಸ್ಯೆಯಾಗಿದೆ. ಮದುವೆ ವಯಸ್ಸು ದಾಟಿದರೂ ಮದುವೆಗೆ ಹೆಣ್ಣು ಸಿಗದೆ ಪರದಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದೆ. ಈ ವಿಷಯ ಕೇಳುಗರಿಗೆ ಒಂದು ತಮಾಷೆ ಅನಿಸ ಬಹುದು. ಆದರೆ ಇದರ ಗಂಭೀರತೆಯನ್ನು ಇಲ್ಲಿನವರು ಮಾತ್ರ ಬಲ್ಲರು. ನಮ್ಮ ಕಡೆ ಈಗ ಮದುವೆ-ಮುಂಜಿ, ನಾಮಕರಣ ಅಥವಾ ಯಾವುದೇ ಫಂಕ್ಷನ್ ಇರಲಿ, ಅಲ್ಲಿ ಒಂದು ವಿಷಯದ ಚಚರ್ೆಯಂತೂ ಗ್ಯಾರಂಟಿ. ಅದು ನಿಮ್ಮ ಕಡೆ ಮದುವೆಗಿರುವ ಹುಡುಗಿಯರು ಇದ್ದರಾ ಅಂತ. ಒಂದು ಕಾಲ ಇತ್ತು ಹುಡುಗನಿಗೆ ಜಮೀನು ಮನೆಯಿದ್ದರೆ ಸಾಕು ಮದುವೆಯಾಗಲೂ ಯಾವುದೇ ಅಡ್ಡಿಲ್ಲ ಎಂಬುದು ಹೆಣ್ಣು ಹೆತ್ತವರ ಅಭಿಪ್ರಾಯವಾಗಿತ್ತು. ಆದರೆ ಈಗ ಇದಕ್ಕೆ ವಿರುದ್ಧವಾಗಿ ಹಳ್ಳಿ ಮನೆಯಾದರೆ ಬೇಡ, ಮದುವೆಯಾಗುವ ಹುಡುಗ ಸಿಟಿಯಲ್ಲಿರಬೇಕು ಅನ್ನೋದೇ ನೂರಕ್ಕೆ ತೊಂಬತ್ತೊಬ್ಬತ್ತು ಜನ ಕನ್ಯಾಮಣಿಗಳ ಮೊದಲ ಹಾಗೂ ಕೊನೆಯ ಬೇಡಿಕೆಯಾಗಿದೆ. ಹೆಣ್ಣು ಮಕ್ಕಳೇ ಕಡಿಮೆ, ಅದರಲ್ಲೂ ಮದುವೆಯಾಗಿ ಹಳ್ಳಿಯಲ್ಲಿ ಜೀವನ ನೆಡೆಸಲು ಸಿದ್ಧವಾಗಿರುವ ಕನ್ಯೆಯರಂತೂ ವಿರಳ. ನನ್ನ ಕಸಿನ್ಗಳಲ್ಲಿ ಮೂರು-ನಾಲ್ಕು ಜನ ವರ್ಷ ಮೂವತ್ತು ದಾಟಿದರೂ ಮದುವೆಯಾಗದೆ ಉಳಿದಿರುವುದು ಒಂದು ಚಿಕ್ಕ ಉದಾಹರಣೆ ಅಷ್ಟೆ! ಅನೂಕೂಲಸ್ಥರಾಗಿರುವ ಇವರೆಲ್ಲರ ಒಂದೇ ಒಂದು ಮೈನೆಸ್ ಪಾಯಿಂಟ್ ಎಂದರೆ ಹುಡುಗ ಹಳ್ಳಿಯಲ್ಲಿ ಕೃಷಿಕ ಎನ್ನುವುದಾಗಿದೆ.
ಹೀಗೆ ಹೇಳುವ ಹೆಚ್ಚಿನವರು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕನ್ಯಾಮಣಿಗಳು ! ಸಿಟಿಯ ಯಾತ್ರಿಕ ಜೀವನ, ಮಾಲಿನ್ಯ, ನೀರು, ಗಾಳಿ, ಬೆಳಕಿನ ಕೊರತೆ ಜೊತೆಗೆ ನೂರೆಂಟು ಜಂಜಾಟಗಳ ನಡುವೆಯೂ ಇವರುಗಳಿಗೆ ನಗರದ ಬಣ್ಣದ ಬದುಕಿನ ಹುಚ್ಚು ಮಾತ್ರ ಕಡಿಮೆಯಾಗಿಲ್ಲವೆಂಬುದು ವಿಪರ್ಯಾಸ! ನಾನು ಸಂಪಾದಿಸಬೇಕು ಅದಕ್ಕೆ ಹಳ್ಳಿಯಲ್ಲಿ ಅವಕಾಶವಿಲ್ಲ ಎಂಬುದು ಹಳ್ಳಿಯ ವರ ಬೇಡ ಎಂದು ಮೂಗು ಮೂರಿಯುವ ಈ ನಾರಿಯರ ಸಿದ್ಧ ಉತ್ತರ ಮತ್ತು ಸಮರ್ಥನೆ.
ಏಕೆ ಹಳ್ಳಿಯಲ್ಲಿ ಸಂಪಾದನೆಗೆ ದಾರಿಗಳಿಲ್ಲವೇ? ಸ್ವ ಉದ್ಯೋಗ ದುಡಿಮೆಯಲ್ಲವೇ? ಬರೀ ಬಿ.ಪಿ.ಒ. ಕಾಲ್ ಸೆಂಟರ್, ಐ.ಟಿ. ಬಿ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದು ಮಾತ್ರ ಕೆಲಸವೇ? ಹಳ್ಳಿಯಲ್ಲಿ ಸಹ ನೂರೆಂಟು ಮಾರ್ಗಗಳಿವೆ. ತಾವು ಸಂಪಾದಿಸುವುದಲ್ಲದೇ ಇತರರಿಗೂ ಸಹ ಉದ್ಯೋಗ ಕಲ್ಪಿ ಸಿಕೊಡಬಹುದು. ಕೆಲಸ ಮಾಡುವ ಆಸಕ್ತಿ ಇದ್ದರೆ ಹಳ್ಳಿಯಾದರೇನು ದಿಲ್ಲಿಯಾದರೇನು ಅವಕಾಶಗಳು ಹಲವು. ಅವುಗಳಲ್ಲಿ ಅತಿ ಸರಳವಾಗಿರುವ ಕೆಲವು ಮಾರ್ಗಗಳು ಇಲ್ಲಿವೆ. ನೀವು ಪ್ರಯತ್ನಿಸಿ ನೋಡಿ.
ಬಣ್ಣ ಬಣ್ಣದ ಹೂ ಗಿಡಗಳನ್ನು ಬೆಳೆಸುವುದು ಮಹಿಳೆಯರ ನೆಚ್ಚಿನ ಹವ್ಯಾಸವಾಗಿದೆ. ಈ ಹವ್ಯಾಸವನ್ನೆ ಸ್ಪಲ್ಪ ಯೋಜನಾ ಬದ್ಧವಾಗಿಸಿದರೆ ಸಾಕು ಪುಷ್ಪೋದ್ಯಮ ಅತಿ ಯಶಸ್ವಿ ಹಾಗೂ ಲಾಭಾದಾಯಕ ಉದ್ಯಮವಾಗುತ್ತದೆ. ಇದರಲ್ಲಿ ಅತ್ಯಂತ ಯಶಸ್ಸು ಗಳಿಸಿದವರ ಉದಾಹರಣೆಗಳು ಹಲವು.
ಇನ್ನೂ ಸೊಪ್ಪು ತರಕಾರಿಗಳು ಈಗಂತೂ ಅತ್ಯಂತ ದುಬಾರಿ, ಆದರೆ ದಿನ ನಿತ್ಯ ಅಡುಗೆಮನೆಯಲ್ಲಿ ಬೇಕೇ ಬೇಕು. ಮನೆಯ ಸುತ್ತ ಮುತ್ತ ಇರುವ ಜಾಗದಲ್ಲೇ ಬೆಳೆದರೂ ಸಾಕು. ತಾಜಾ ತಾಜಾ ತರಕಾರಿಗಳು ಮನೆಯಲ್ಲೇ ಲಭ್ಯ. ಜೊತೆಗೆ ಮನೆ ಖಚರ್ಿನಲ್ಲಿ ಬಾರಿ ಉಳಿತಾಯ ಕೂಡ ಆಗುತ್ತದೆ. ಇದನ್ನೆ ವಿಸ್ತರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆದರಂತೂ ಬಂಪರ್. ಇದು ನನ್ನ ಸ್ವಂತ ಅನುಭವ. ನೀವು ಪ್ರಯತ್ನಿಸಿ ನೋಡಿ ಮನೆ ಖರ್ಚಿನಲ್ಲಿ ಉಳಿತಾಯದ ಜೊತೆಗೆ ಸಂಪಾದನೆಯೂ ಗ್ಯಾರಂಟಿ.
ನಿಮಗೆ ಟೈಲರಿಂಗ್ ಗೊತ್ತಾ?! ಹಾಗಾದರೆ ಬೇರೆ ಕೆಲಸದ ಯೋಚನೆ ಬಿಟ್ಟು ಬಿಡಿ. ಸಂಪಾದನೆಗೆ ಇದಕ್ಕಿಂತ ಉತ್ತಮ ಮಾರ್ಗ ಯಾವುದು ಇಲ್ಲ. ಈಗಂತೂ ಹೊಲಿಗೆ ಮಜೂರಿ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕಲಿತ ಈ ವಿದ್ಯೆಯನ್ನೇ ಬಂಡವಾಳ ವಾಗಿಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಬಹುದು, ಜೊತೆಗೆ ಬೇರೆಯವರಿಗೂ ಉದ್ಯೋಗಾವಕಾಶ ಕಲ್ಪಿಸಿಕೊಡಲು ಇದರಿಂದ ಸಾದ್ಯ. ಇದರ ಜೊತೆ ಜೊತೆಗೆ ಸೀರೆ, ಡ್ರೆಸ್ಗಳಿಗೆ ಕಸೂತಿ, ತರ ತರಹದ ಡಿಸೈನ್ಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ಅತಿ ಬೇಡಿಕೆ ಇದೆ. ಅತಿ ಕಡಿಮೆ ಬಂಡವಾಳ ಹೂಡಿ, ಹೆಚ್ಚು ಸಂಪಾದಿಸ ಬಹುದಾದ ಅಲ್ ಟೈಮ್ ಬೇಡಿಕೆಯಲ್ಲಿರುವ ಉದ್ಯೋಗ ಇದಾಗಿದೆ.
ಈಗ ಸಾವಯವ ಕೃಷಿಯ ಕಾಲ. ಎರೆಹುಳು ಗೊಬ್ಬರಕ್ಕೊಂತು ಬಂಗಾರದ ಬೆಲೆ ಇದೆ. ಹಾಗೂ ಇದರ ಸಾಗಣಿಕೆ ಅತಿ ಸುಲಭ ಕೂಡ ಹೌದು. ಅಡಿಗೆಮನೆಯ ತ್ಯಾಜ್ಯಗಳಾದ ತರಕಾರಿ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಇದು ಎರೆಹುಳು ಸಾಕಣಿಕೆಗೆ ತುಂಬಾ ಉಪಯುಕ್ತ. ಸಕರ್ಾರದಿಂದ ಇದಕ್ಕೆ ಸಬ್ಸಿಡಿ ಸಹ ದೊರೆಯುತ್ತದೆ.
ಹಳ್ಳಿಗಳಲ್ಲಿ ಹಲವು ಸ್ವ ಸಹಾಯ ಸಂಘಗಳು ಮಹಿಳೆಯರ ಉದ್ಧಾರಕ್ಕಾಗಿ ಪಣ ತೊಟ್ಟಿವೆ ಹಾಗೂ ಉತ್ತಮ ನೆರವನ್ನು ಸಹ ನೀಡುತ್ತವೆ. ನೀವುಗಳು ಇದರ ಭಾಗವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ದೊರಕುವ ಸಾಲದ ಉಪಯೋಗ ಪಡೆದು, ನಿಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಯಾವುದಾದರೂ ಉದ್ಯೋಗ ಪ್ರಾರಂಭಿಸಿ, ಸುತ್ತ ಮುತ್ತಲಿನವರಿಗೂ ದಾರಿ ದೀಪವಾಗಿ.

ನಮಗೆ ಇವುಗಳಲ್ಲಿ ಆಸಕ್ತಿ ಇಲ್ಲ ಎನ್ನುವ ಹುಡುಗಿಯರೇ ಅದಕ್ಕೂ ಪರಿಹಾರವಿದೆ. ನಿಮ್ಮ ಬಳಿ ಕಂಪ್ಯೂಟರ್ ಒಂದು ಇದ್ದರೆ ಸಾಕು, ಯಾವುದೇ ಜಂಜಾಟವಿಲ್ಲದೇ ಮನೆಯಿಂದಲೇ ಕೆಲಸ ಮಾಡಿ, ಡಾಟಾ ಎಂಟ್ರಿ, ಟ್ರಾನ್ಸಲೇಶನ್, ಮೆಡಿಕಲ್ ಟ್ರಾನ್ಸಕ್ರಿಪ್ಷನ್ , ಈ-ಟ್ಯೂಟಿಂಗ್ ಹೀಗೆ ಹತ್ತು ಹಲವು ಅವಕಾಶಗಳು ನಿಮ್ಮ ಮುಂದೆ ತೆರೆದು ಕೊಳ್ಳುತ್ತವೆ. ಇಲ್ಲವಾದರೆ ನೀವು ನೋಡಿದ ಹೊಸ ಸ್ಥಳಗಳ ಅಥವಾ ಭಾಗವಹಿಸಿದ ಕಾರ್ಯಕ್ರಮಗಳ ವಿಶೇಷತೆಗಳು, ಅಥವಾ ನಿಮ್ಮೂರಿನ ಅಡುಗೆ, ಇಲ್ಲವೆ ನಿಮ್ಮ ಅನುಭವಗಳು, ಸುತ್ತಮುತ್ತಲಿನ ಪರಿಸರದ ವಿಶಿಷ್ಟಗಳ ಬಗ್ಗೆ ಲೇಖನ ಬರೆದು ಒಂದೆರೆಡು ಫೋಟೊಗಳೊಂದಿಗೆ ಪೇಪರ್, ಮ್ಯಾಗಜೀನ್ಗಳಿಗೆ ಕಳುಹಿಸಿ ಕೊಡಿ. ಉತ್ತಮ ಸಂಬಾವನೆಯೊಂದಿಗೆ ಹೆಸರು, ಕೀರ್ತಿ ನಿಮ್ಮ ಪಾಲಾಗುವುದರಲ್ಲಿ ಸಂದೇಹವೆ ಇಲ್ಲ.
ನಿಮ್ಮದು ತಂಬಾ ಇಂಟಿರಿಯರ್ ಪ್ರದೇಶವೇ? ಸುತ್ತ ಮುತ್ತ ಕಾಡೇ? ಹಳೆ ಮನೆಯೇ? ಹಾಗಾದರೆ "ಹೋಮ್ ಸ್ಟೇ" ಯೋಜನೆಯ ಬಗ್ಗೆ ಸಹ ಯೋಚಿಸ ಬಹುದು.
ಹೀಗೆ ಸ್ವ ಉದ್ಯೋಗಗಳ ಪಟ್ಟಿ ಬೆಳೆಯುತ್ತದೆ. ಹಳ್ಳಿ ಜೀವನ ಬೇಡ ಎನ್ನುವ ಕನ್ಯಾಮಣಿಗಳೇ ಮನಸ್ಸಿದ್ದರೆ ಮಾರ್ಗ. ಹಳ್ಳಿಯಾದರೇನು ಆಸಕ್ತಿ ಮತ್ತು ಛಲವಿದ್ದರೆ ಏನಾದರೂ ಸಾಧಿಸಲು ಸಾಧ್ಯ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)