October 31, 2013

ದೀಪಾವಳಿ ಗಿಫ್ಟ್

ಮೈತೊಳೆಯಲು ಕೊಟ್ಟಿಗೆಯಿಂದ   ಅಂಗಳಕ್ಕೆ ಶಿಫ್ಟ್ ಆಗಿ, ಚಪ್ಪರದ ಕಂಬದ ಸುತ್ತದ ಗಾಬರಿಯಿಂದ ಗಿರಕ್ಕಿ ಹೊಡೆಯುತ್ತ ಒಂದರ ಹಿಂದೊಂತೆ ಅಂಬಾ ಎಂದು ಅರುಚುವ ಜಾನುವಾರುಗಳು.  ರಾತ್ರಿ ಲೇಟಾಗಿ ಮನೆಗೆ ಬಂದ ಅಪ್ಪ, ಮನೆ ಕಡೆ ಮುಖ ಹಾಕದ  ಕೆಲಸದಾಳು ಶೇಷ, ಇನ್ನೂ ಮುರುಟಿ ಮಲಗಿರುವ ಮಕ್ಕಳು, ಅಲ್ಲಿ ಅಲ್ಲಿ ಗಲೀಜು ಮಾಡಿದ ನಾಯಿ ಬೆಕ್ಕು ಒಂದನ್ನೂ ಬಿಡದೆ  ಬೆಳಿಗ್ಗೆಯೇ ಜನ್ಮ ಜಾಲಾಡುವ ಅಮ್ಮನ ಸುಪ್ರಭಾತ. ಮನೆ ತುಂಬಾ ಬಚ್ಚಲು, ಅಡಿಗೆ ಒಲೆಯ ಹೊಗೆ,  ಬೇಯುತ್ತಿರುವ ಸೌತೆಕಾಯಿ ಸಿಹಿ ಕಡುಬಿನ ತೆಳು ಪರಿಮಳದ ಜೊತೆ ಗೋ ಮಾಲೆಯ ಚೆಂಡು ಹೂ, ಪಚ್ಚೆ ತೆನೆ , ಕಿತ್ತಳೆ ಸೊಪ್ಪುಗಳ ಗಮ ತುಂಬಿದೆ ಅಂದರೆ ಅವತ್ತು ಖಂಡಿತಾ ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬ.ಇಡೀ ಹಬ್ಬನೇ ತಲೆ ಮೇಲೆ ಹೊತ್ತ ಕೊಂಡ ಅಮ್ಮ, ಯಾವುದಕ್ಕೂ ತಲೆ ಹಾಕದೆ ತನ್ನಷ್ಟಕ್ಕೆ ತಾನು ಗೋ ಮಾಲೆ ಕಟ್ಟುತ್ತ ಕುಳಿತ್ತಿರುವ ಅಪ್ಪ. ಏನು ಕೆಲಸ ಮಾಡದೆ ಗಡಿಬಿಡಿಯಲ್ಲಿ ಆಕಡೆಯಿಂದ ಈ ಕಡೆಗೆ ಓಡಾಡುವ ನಾವುಗಳು. ಕಬ್ಬಿಣ್ಣದ ಬಕೆಟ್ ಕವಚಿ ಅದರೊಳಗೆ  ಬಾಂಬ್ ಇಟ್ಟು ಸಿಡಿಸಿದ್ದು, ಸಂಜೆ ದೀಪ್‌ದೀಪೋಳ್ಳಿಗೆ ಕೂಗುತ್ತ ದೀಪ ಹಚ್ಚುತ್ತಿದ್ದಿದ್ದು, ರಾತ್ರಿ ಅಂಟಿಕೆ ಪಿಂಟಿಕೆಯ ಸುವಾಲೋಸುವಾಲು. ದೀಪಾವಳಿ ಅಂತ ನೆನೆಪಿಸುಕೊಳ್ಳುತ್ತಿದ್ದ ಹಾಗೆ ಇವುಗಳ ಸ್ಲೈಡ್ ಶೋ ಶುರುವಾಗಿ ಬಿಡುತ್ತದೆ. ಅಮ್ಮ ಆಚರಿಸುವ ಎರಡೇ ಹಬ್ಬಗಳಲ್ಲಿ ಇದು ಒಂದು.  ಹಾಗಾಗಿ ಇಂದಿಗೂ  ಈ ಹಬ್ಬಕ್ಕೆ ಅಮ್ಮನ ಮನೆಗೆ ಹೋಗುವುದನ್ನು ಮಿಸ್ ಮಾಡೋಲ್ಲ

ಇವೇಲ್ಲಾದರ  ಹೊರತಾಗಿ  ದೀಪಾವಳಿ ನನಗೆ  ಅತಿ ವೀಶೇಷ. ನಾನು ಮೊದಲು ಬರೆದಿದ್ದು ಈ ಹಬ್ಬದ ಅಂಟಿಕೆ-ಪಿಂಟಿಕೆಯ ಬಗ್ಗೆ. ಬರೆದಿದ್ದು ಆಯಿತು ಒಂದು ಪ್ರತಿಷ್ಟಿತ ಪತ್ರಿಕೆಯ ಭಾನುವಾರದ ಪುರವಾಣಿಗೆ ಕಳುಹಿಸಿದ್ದು ಆಯಿತು. ದೊಡ್ಡ ಪತ್ರಿಕೆಯಾದ ಕಾರಣ ಪುರವಾಣಿಯಲ್ಲಿ ಪ್ರಕಟಿವಾಗುವ ವೀಶೇಷತೆಗಳ ಬಗ್ಗೆ ಮುಂಚಿನ ದಿನದ ಪತ್ರಿಕೆಯಲ್ಲಿ ಪ್ರಕಟಿಸುವ ವಾಡಿಕೆ. ಅದರಲ್ಲಿ ಅಂಟಿಕೆ-ಪಿಂಟಿಕೆ ಎಂಬ ಲೇಖನವು ಒಳಗೊಂಡಿತ್ತು. ನಾನೊಂತ್ತು ಉಬ್ಬಿ ಹೋದೆ ಮೊದಲ ಪ್ರಯತ್ನ ಯಶಸ್ಸಿಗೆ. ಹಳೆ ಸ್ನೇಹಿತರು, ಅವರು ಇವರು ಕಂಡ ಕಂಡವರಿಗೆಲ್ಲಾ  ಫೋನ್ ಮಾಡಿ, ಕಂಡ ಕಂಡಲ್ಲಿ ಮರು ದಿನ ಪೇಪರ್ ಓದಲು ಹೇಳಿದ್ದೇ ಹೇಳಿದ್ದು. ಆದ್ರೆ ಮರು ದಿನ ಪೇಪರ್ ನೋಡಿದ್ದಾಗಲೇ ತಿಳಿದಿದ್ದು ಬೇರೊಬ್ಬರು ಬರೆದ ಅದೇ ವಿಷಯದ ಲೇಖನ ಅಂತ. ಇಡೀ ಹಾಸ್ಟೇಲ್ ಪೂರ್ತಿ ಅದೇ ವಿಷಯ. ನಾನು ನಿರಾಶೆಯಿಂದ ರೂಮ್ ಸೇರಿದ್ದೆ, ಅತ್ತು ಅತ್ತು ನನ್ನ ಕಣ್ಣುಗಳು ಊದಿ ಕೊಂಡಿದ್ದವು. ಹಿಂದಿನ ದಿನವೀಡಿ ನನ್ನ ಸಂತೋಷದಲ್ಲಿ ಪಾಲ್ಗೊಂಡ, ನನ್ನ ಬರೆಯಲು ಹುರುಂದುಬಿಸಿದ ಭಾಗ್ಯ ಮತ್ತು ಸ್ವಾಮಿ   ಬೆಳಿಗ್ಗೆಯೇ ನನ್ನ ಕನ್ಸೋಲ್ ಮಾಡಲು ಹಾಸ್ಟೇಲ್‌ಗೆ ಓಡಿ ಬಂದಿದ್ದರು.  ಇಡೀ ದಿನ ನನ್ನ ಜೊತೆ ಕಾಲ ಕಳೆದರು. ಸ್ವಾಮಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಅದೇ ಲೇಖನವನ್ನು ಪ್ರಕಟಿಸಿದ್ದು  ನಾನು ಕಾಲೇಜಿನಲ್ಲಿ ಸ್ಪಲ್ಪ ಫೇಮಸ್ ಆಗಿದ್ದು ಎಲ್ಲಾ ಅಮೇಲೆ ನೆಡೆದ  ಹಬ್ಬದ ಹ್ಯಾಪಿ ಪಾರ್ಟ್. 

ಹೀಗೆ   ದೀಪಾವಳಿ  ಸಾಕಷ್ಟು ಸುಂದರ ನೆನಪುಗಳ ಜೊತೆಗೆ ನಿಜವಾದ ಗೆಳೆಯರನ್ನು ಸಹ ನನಗೆ ಕೊಟ್ಟಿದೆ.