September 29, 2009

ಅಗರ್ ಎಂಬ ದ್ರವ ಚಿನ್ನ

ನೈಸರ್ಗಿಕ ಸುಗಂಧ ತೈಲಗಳಲ್ಲಿ ಶ್ರೀಗಂಧ ಹೆಸರುವಾಸಿ ಹಾಗೂ ಎಲ್ಲರಿಗೂ ಚಿರಪರಿಚಿತ. ಬೆಲೆ ಮತ್ತು ಸುವಾಸನೆಗೆ ಶ್ರೀಗಂಧಕ್ಕೆ ಸಮನಾದದ್ದು ಬೇರೆ ಇಲ್ಲ ಎಂಬುದು ನಮ್ಮಗಳ ತಿಳುವಳಿಕೆ. ಆದರೆ ಶ್ರೀಗಂಧದ ಮರಕ್ಕಿಂತ ಹೆಚ್ಚು ಬೆಲೆ ಬಾಳುವ ಹಾಗೂ ಸುಗಂಧಭರಿತ ಮರ ಇನ್ನೊಂದು ಇದೆ ಎಂದರೆ ಅಶ್ಚರ್ಯವಾಗುತ್ತದೆ. ಅದೇ "ಅಗರ್ ಮರ".

ಅಗರ್‌ಮರವನ್ನು ಅಲೋಯಿಸ್ವುಡ್, ಅಗರು, ಅಕ್ವೆಲೇರಿಯಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಅಗರ್‌ಮರ ಸೌತ್- ಈಸ್ಟ್ ಏಷ್ಯದ ಮರ. ಅಲ್ಲಿನ ನಿತ್ಯ ಹರಿದ್ವರ್ಣ ಮಳೆಕಾಡುಗಳಲ್ಲಿ ಬೆಳೆಯುವ ನೈಸರ್ಗಿಕ ಸುಗಂಧ ತೈಲದ ಮರ. ಇದರ ಸಸ್ಯಶಾಸ್ತ್ರೀಯ ಹೆಸರು ಅಕ್ವೆಲೇರಿಯಾ. ಇದು ಧೈಮೆಲೆಸಿಯ ಕುಟುಂಬಕ್ಕೆ ಸೇರಿದ್ದಾಗಿದೆ.

ಅಗರ್‌ಮರ ಮತ್ತು ಅದರ ಉತ್ಪನ್ನಗಳ ಬಳಕೆ ಅನಾದಿಕಾಲದಿಂದಲೂ ನೆಡೆದುಬಂದಿದೆ. ಸಾವಿರಾರು ವರ್ಷಗಳಿಂದ ಪ್ರಪಂಚದ ಎಲ್ಲಾ ಧರ್ಮಗಳ ಸಾಂಪ್ರಾದಾಯಿಕ ಅಚರಣೆಯಲ್ಲಿ ಅಗರ್ನ್ನು ಬಳಸುತ್ತಾಬಂದಿದ್ದಾರೆ. ಬೌದ್ಧಧರ್ಮದ ಅನೂಯಾಯಿಗಳು ಧ್ಯಾನ, ಯೋಗ, ನಿರ್ವಾಣ ಸ್ಥಿತಿ ತಲುಪಲು ಇದರ ಸುಗಂಧ ಬಳಸುತ್ತಿದ್ದರು. ಅಗರ್ ಸುವಾಸನೆಯಿಂದ ನಿರ್ವಾಣ ಸಾದ್ಯ ಎನ್ನುವುದು ಸ್ವತಹ ಬುದ್ಧನ ಹೇಳಿಕೆ. ಶ್ರೀಕ್ರಷ್ಣನಿಗೂ ಇದು ಪ್ರಿಯವಾದದ್ದು. ಸುಫಿಗಳು ತಮ್ಮ ಧಾರ್ಮಿಕ ಅಚರಣೆಗಳಲ್ಲಿ, ಜಪಾನ್ ದೇಶದವರು ಮಾನಸಿಕ ಖಾಯಿಲೆಯ ಚಿಕಿತ್ಸೆಗಳಲ್ಲಿ ಬಳಸುತ್ತಿದ್ದರು. ಏಸುಕ್ರಿಸ್ತನ ಅಂತಿಮ ಸಂಸ್ಕಾರದಲ್ಲೂ ಅಗರ್ ಧೂಮದ ಬಳಕೆಯ ಪ್ರಸ್ತಾಪವಿದೆ.

ಭಾರತದ ಇತಿಹಾಸದಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಬಾಣನ ಹರ್ಷಚರಿತ, ಕಾಳಿದಾಸನ ಅಭಿಙ್ಞಶಾಕುಂತಲ ಹಾಗೂ ಚಾಲುಕ್ಯನ ಅರ್ಥಶಾಸ್ತ್ರ ಕೃತಿಗಳಲ್ಲಿ ಅಗರ್‌ನ ಪ್ರಸ್ತಾಪವಿದೆ. ಕೆಲವು ದೇಶಗಳಲ್ಲಿ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳಿಗೆ ಅಗರ್‌ತೈಲವನ್ನು ಹಚ್ಚಿಕೊಳ್ಳುತ್ತಿದ್ದರು. ಅವರು ಇದನ್ನು ಅದೃಷ್ಟದ ಪ್ರತೀಕವೆಂದು ನಂಬಿದ್ದರು. ಈಜಿಪ್ಟನರು ಪಿರಮಿಡ್‌ಗಳಲ್ಲಿ ಮಮ್ಮಿಗಳಿಗೆ ಬಳಸುತ್ತಿದ್ದರು. ಯುನಾನಿ,ಟಿಬೆಟಿಯನ್, ಆಯುರ‍್ವೇದ ಹಾಗೂ ಚೀನಾದ ವೈದ್ಯರು ತಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಮಾನಸಿಕ ಮತ್ತು ದೈಹಿಕ ಖಾಯಿಲೆಗಳನ್ನು ಗುಣಪಡಿಸಲು ಅಗರ್‌ನ್ನು ಬಳಸುತ್ತಿದ್ದರು. ಮೊದಲು ಅಗರ್‌ಮರವನ್ನು ಊದಿನಕಡ್ಡಿಯ ರೂಪದಲ್ಲಿ ಉಪಯೋಗಿಸುತ್ತಿದ್ದರಿಂದ ಹಿಂದಿಯಲ್ಲಿ ಊದಿನಕಡ್ಡಿಗೆ ಅಗರ್‌ಬತ್ತಿ ಎನ್ನುತ್ತಾರೆ. ಹೀಗೆ ವಿಶ್ವದ ಎಲ್ಲಾ ದೇಶದ ಸಂಸ್ಕೃತಿ, ಇತಿಹಾಸ, ಧರ್ಮಗಳಲ್ಲಿ ಅಗರ್‌ನ ಬಳಕೆ ಕಂಡುಬರುತ್ತದೆ.ಅಗರ್‌ನ ಶ್ರೀಮಂತ ಮತ್ತು ಅದ್ಭುತವಾದ ಸುವಾಸನೆಯಿಂದ "ದ್ರವ ಚಿನ್ನ" ,"ದೇವರ ಮರ" ಎಂಬ ಹೆಸರು ಇದೆ.

ಪ್ರಮುಖವಾಗಿ ಇಂಡೋನೆಶಿಯಾ, ಮಲೇಶಿಯಾ, ಕಾಂಬೋಡಿಯಾ, ವಿಯೆಟ್ನಾಂ, ಬರ್ಮಾ, ಟಿಬೆಟ್, ದಕ್ಷಿಣಆಫ್ರಿಕಾಗಳಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಭಾರತದ ಅಸ್ಸಾಂ ಕಾಡುಗಳಲ್ಲಿ ಈ ಮರಗಳು ಕಂಡುಬರುತ್ತವೆ. ಹೆಚ್ಚು ಸಾವಯವಯುಕ್ತ ಮಣ್ಣಿನಿಂದ ಕೂಡಿದ, ನೀರು ಬಸಿದು ಹೋಗುವ ಗುಡ್ಡಗಾಡುಗಳ ಪ್ರದೇಶ ಈ ಬೆಳೆಗೆ ಸೂಕ್ತ. ಸುಮಾರು 750 ಸೆಂಮೀ ಮಳೆಯಾಗುವ, ವಾತವರವಣಲ್ಲಿ ಹೆಚ್ಚು ತೇವಾಂಶವಿರುವ ಹವಾಗುಣ ಈ ಬೆಳೆಗೆ ಹೆಚ್ಚು ಅನುಕೂಲಕರ. ಮೈಕೊರೈಜಾ ಮತ್ತು ಇತ್ತರೆ ಉಪಯುಕ್ತ ಶಿಲೀಂದ್ರಗಳು ಇತಂಹ ವಾತಾವರಣಗಳಲ್ಲಿ ಇರುವುದರಿಂದ, ಅಗರ್ತೈಲ ಉತ್ಪಾದನೆಗೆ ಸಹಕಾರಿಯಾಗುತ್ತದೆ. ಕರ್ನಾಟಕದ ಪಶ್ಚಿಮಘಟ್ಟಗಳ ಮಲೆನಾಡು ಪ್ರದೇಶ ಈ ಮರಕ್ಕೆ ಸೂಕ್ತವಾದ ಹವಾಗುಣವನ್ನು ಹೊಂದಿರುವುದು ಅಧ್ಯಯನಗಳಂದ ತಿಳಿದುಬಂದಿದೆ. ಸಾಮಾನ್ಯವಾಗಿ ಈ ಮರಗಳ ಗಾತ್ರವು 40 ಮೀಟರ್ವರೆಗೆ ಎತ್ತರ ಹಾಗೂ 60ಮೀಟರ್ವರೆಗೆ ಸುತ್ತಳತೆ ಇರುತ್ತದೆ. ಇದನ್ನು ಪ್ರಮುಖ, ಮಿಶ್ರ ಅಥವಾ ಗಡಿ ಬೆಳೆಯಾಗಿ ಬೆಳೆಯಬಹುದು.

ಈ ಗಿಡದ ನಾಟಿಗೆ ಜೂನ್ ಅಥವಾ ಸೆಪ್ಟೆಂಬರ್ ತಿಂಗಳು ಸೂಕ್ತ. 50*50*50 ಸೇ.ಮಿ. ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ಅಥವಾ ಸೂಕ್ತ ಗೊಬ್ಬರ ಹಾಕಿ ನೆಡಬೆಕು. ಸಾವಯವ ವಿಧಾನಗಳನ್ನು ಅನುಸರಿಸಬಹುದು. 2 ವರ್ಷಗಳ ಕಾಲ ಗಿಡಗಳನ್ನು ರಕ್ಷಿಸಿದಲ್ಲಿ ಗಿಡವು ಚೆನ್ನಾಗಿ ಬೆಳೆಯುತ್ತದೆ. 6-7 ವರ್ಷಗಳ ನಂತರ ಕಾಂಡವು ತೈಲ ಉತ್ಪಾದನೆ, ಶಿಲೀಂದ್ರ ಬೆಳೆಯಲು ತಯಾರಾಗುತ್ತದೆ. ಇದನ್ನು ಪ್ರಮುಖ ಬೆಳೆಯಾಗಿ ಬೆಳೆಯಬಹುದು, ಅಥವಾ ಮಿಶ್ರಬೆಳೆಯಾಗಿ ಕಾಫಿ,ಏಲಕ್ಕಿ, ಅಡಿಕೆ ತೋಟದ ನಡುವೆ ಅನುಕೂಲಕ್ಕೆ ತಕ್ಕ ಅಂತರದಲ್ಲಿ ಬೆಳಸಬಹುದು ಅಥವಾ ಗಡಿ ಬೆಳೆಯಾಗಿ ತೋಟದ ಅಂಚಿನಲ್ಲಿ ಬೆಳೆಯಬಹುದು.

ಅಗರ್‌ಮರದ ಕಾಂಡ ಮತ್ತು ಕೊಂಬೆಗಳ ಒಳಭಾಗದಲ್ಲಿ ಒಂದು ಜಾತಿಯ ಶಿಲೀಂದ್ರ ಬೆಳೆಯುವುದರಿಂದ ಅಗರ್ಎಣ್ಣೆ ಉತ್ಪತ್ತಿಯಾಗುತ್ತದೆ. ಈ ಶಿಲೀಂದ್ರ ಬೆಳೆಯಲು ಒಂದು ಜಾತಿಯ ಕೀಟ ಮರದ ಕಾಂಡ ಮತ್ತು ಕೊಂಬೆಗಳನ್ನು ಕೊರೆದು ಗಾಯ ಮಾಡುತ್ತದೆ. ಗಾಯದಿಂದ ಒಂದು ರೀತಿಯ ಹಾಲು ಹೊರಬರುತ್ತದೆ.ಅದಕ್ಕೆ ಬಲರಿಸಿನ್ ಎನ್ನುತ್ತಾರೆ. ಆ ಗಾಯದ ಮೇಲೆ ಶಿಲೀಂದ್ರ ಬೆಳೆಯುತ್ತದೆ,ಕಾಂಡ ಮತ್ತು ಕೊಂಬೆಗಳು ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಸುವಾಸನೆ ಬರುತ್ತದೆ. ಶಿಲೀಂದ್ರ ಬೆಳೆಯಲು ಒಂದು ಬಗೆಯ ಕೀಟ (ಜಿಯಾರಕನ್ಪ್ಸರೀಟ್) ಅವಶ್ಯಕ. ಕೃತಕವಾಗಿಯೂ ಶಿಲೀಂದ್ರ ಬೆಳೆಸಬಹುದು. ಕೃತಕ ವಿಧಾನದಲ್ಲಿ ಚಳಿಗಾಲಕ್ಕೆ ಮೊದಲು ಗಟ್ಟಿಯಾದ ಕಾಂಡ ಅಥವಾ ಕೊಂಬೆಗಳನ್ನು 30 ಡಿಗ್ರಿ ಅಳವಾಗಿ ಕತ್ತರಿಸಬೇಕು. ಕತ್ತರಿಸಿದ ಭಾಗದಿಂದ ಬಲರಿಸಿನ್ ದ್ರವ ಬರುತ್ತದೆ. ಅದರ ಮೇಲೆ ಶಿಲೀಂದ್ರ ಬೆಳೆದು, ಅಗರ್ಎಣ್ಣೆ ಉತ್ಪತ್ತಿಯಾಗುತ್ತದೆ. ಘನ ಅಥವಾ ದ್ರವ ರೂಪದಲ್ಲಿರುತ್ತದೆ.

ಅಗರ್ ಎಣ್ಣೆಯನ್ನು ಭಟ್ಟಿ ಇಳಿಸಿಲು ಫೆಬ್ರವರಿಯಿಂದ ಮೇ ತಿಂಗಳವರೆಗೆ ಸರಿಯಾದ ಸಮಯ. ಒಣಹವೆಯಲ್ಲಿ ಉತ್ಕೃಷ್ಟವಾದ ಅಗರ್ಎಣ್ಣೆ ದೊರೆಯುತ್ತದೆ. ಕತ್ತರಿಸಿದ ಮರಗಳಿಂದ ಮರ ಮತ್ತು ಸುಗಂಧಭರಿತ ಎಣ್ಣೆ ತಯಾರಿಸುವ ವಸ್ತು ದೊರೆಯುತ್ತದೆ. ಹಳೆಮರಗಳನ್ನು ಬುಡಕ್ಕೆ ಕತ್ತರಿಸಿ ಎಲೆಗಳನ್ನು ಮತ್ತು ಸಣ್ಣ ಕೊಂಬೆಗಳನ್ನು ತೆಗೆಯಬೇಕು, ನಂತರ ಕಂದುಬಣ್ಣ ಮತ್ತು ಕಂದುಬಣ್ಣವಾಗಿರಿದ ಮರವನ್ನು ವಿಂಗಡಿಸಿ, ಬಣ್ಣದ ಆಧಾರದ ಮೇಲೆ ದಜರ್ೆನಿಡಬೇಕು. ಎಣ್ಣೆಯನ್ನು ಭಟ್ಟಿ ಇಳಿಸುವ ಮೂಲಕ ಪಡೆಯಬಹುದು. ಬಣ್ಣ ಬಂದ ಮರಗಳನ್ನು ಪುಡಿ ಮಾಡಿ ಅಥವಾ ಸಣ್ಣ ತುಂಡುಗಳಾಗಿ ಕತ್ತರಿಸಿ ಭಟ್ಟಿ ಇಳಿಸುವುದರಿಂದ ಅಗರ್ ಎಣ್ಣೆಯನ್ನು ಪಡೆಯಬಹುದು.

ವೈದ್ಯಕೀಯ ಕ್ಷೇತ್ರದಲ್ಲಿ ಸಹ ಇದರ ಬಳಕೆ ಬಹಳ. ಹೆರಿಗೆಯ ಸಂಧರ್ಭ ಮತ್ತು ನಂತರದ ಖಾಯಿಲೆ, ಉಸಿರಾಟ ಸಂಬಂಧಿ ಖಾಯಿಲೆ, ಹೊಟ್ಟೆ ನೋವು,ಅಸ್ತಮ, ಸಾಮಾನ್ಯ ನೋವುಗಳು,ಕ್ಯಾನ್ಸರ್, ಹೊಟ್ಟೆಯಲ್ಲಿನ ಟ್ಯೂಮರ್, ವೃದ್ಧರಲ್ಲಿ ಕಂಡುಬರುವ ನಿಶ್ಯಕ್ತಿಗಳಿಗೆ ,ನಿದ್ರಾಹೀನತೆಯನ್ನು ಗುಣಪಡಿಸುವ ಔಷಧಿಗಳಲ್ಲಿ ಅಗರ್‌ನ್ನು ಉಪಯೊಗಿಸುತ್ತಾರೆ.

ಅಗರ್‌ಮರವು ಶ್ರೀಗಂಧದ ಮರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಬಾಳುವಂತದ್ದು ಮತ್ತು ಇದರ ಎಣ್ಣೆ ಸ್ವಲ್ಪವೇ ಸ್ವಲ್ಪ ಚರ್ಮಕ್ಕೆ ತಗಲಿದರೆ ಸಾಕು ಅದರ ಕಂಪು ಧೀರ್ಘ ಕಾಲದವರೆಗೆ ಉಳಿಯುತ್ತದೆ. ಅಗರ್ ಎಣ್ಣೆಯ ಈ ಅಧ್ಬುತ ಸುವಾಸನೆ ನೈಸಗರ್ಿಕ ಸುಗಂಧ ತೈಲಗಳ ಸಾಲಿನಲ್ಲಿ ಇದನ್ನು ಪ್ರಥಮ ಸ್ಥಾನದಲ್ಲಿರಿಸಿದೆ.ಅಗರ್‌ಮರದ ಕಾಂಡ ಔಷಧಿ, ಸುಗಂಧದ್ರವ್ಯ, ಅಹಾರಪದಾರ್ಥಗಳಲ್ಲಿ ಉಪಯೋಗವಾಗುತ್ತಿದೆ. ಜೊತೆಗೆ ಧೂಮಕ್ಕಾಗಿ ಬರ್ನರ್, ಸ್ಟಿತ್‍ಗಳನ್ನು ತಯಾರಿಸುತ್ತಾರೆ. ಅಗರ್ ಎಲೆಯ ಟೀ ಕೂಡ ಬಹು ಬೇಡಿಕೆಯನ್ನು ಹೊಂದಿದೆ.

ಅಗರ್‌ತೈಲ ಮತ್ತು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಹೊಂದಿದೆ. ಬೆಲೆಯು ಸಹ ದುಬಾರಿ. ಉತ್ಕೃಷ್ಟ ದರ್ಜೆಯ ಒಂದು ಲೀಟರ್ ಅಗರ್ ತೈಲದ ಬೆಲೆ ಸುಮಾರು 25000 ಯುಸ್ ಡಾಲರ್ವರೆಗೂ ಇದೆ. ಒಂದು ಕೆಜಿ ಮರದ ಚಕ್ಕೆಯ ಬೆಲೆ 25 ರಿಂದ 4000 ರೂಗಳವರೆಗೆ ಇದೆ. ಇವುಗಳ ಬೆಲೆ ಬಣ್ಣ, ರಚನೆ, ಸುವಾಸನೆಯ ಮೇಲೆ ನಿರ್ಧರಿಸಲಾಗುತ್ತದೆ.
ಹೀಗೆ ಅಗರ್ ಮತ್ತು ಅಗರ್‌ನ ಉತ್ಪನಗಳು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿಯೂ ಹೆಚ್ಚು ಬೇಡಿಕೆಯನ್ನು ಹೊಂದಿರುವ, ಈ ಅಗರ್ ಬೆಳೆ ಹೊಸ ಪರ್ಯಾಯ ಬೆಳೆಯಾಗಬಹುದು. ಬೆಲೆ ಕುಸಿತದಿಂದ ಕಂಗೆಟ್ಟ ನಮ್ಮ ರೈತರ ಬದುಕಿನಲ್ಲಿ ಅಗರ್‌ಮರ ಮತ್ತು ಅಗರ್ ಉತ್ಪನ್ನಗಳು ಒಂದು ಹೊಸ ಆಶಾಕಿರಣವಾಗಬಹುದಾಗಿದೆ.