February 14, 2014

ನಿನ್ನವಳಲ್ಲದ ನಿನ್ನವಳು

ಹೊರಗೆ ಸೂರ್ಯನ ತಾಪ ಹೆಚ್ಚಾದಂತೆನನ್ನಳೊಗೆ ನಿನ್ನ ನೆನಪು ಹೆಚ್ಚು ಹೆಚ್ಚು ಸುಡಲಾರಂಭವಾಗುತ್ತದೆ.  ಇಂತಹ ಮಟ ಮಟ ಮಧ್ಯಾಹ್ನದಲ್ಲಿ  ನನ್ನ ಜೀವಕ್ಕೆ ತಂಗಾಳಿಯಾಗ ಬೇಕಾಗಿದ್ದ  ನಿನ್ನ ನೆನಪುಗಳು  ಹೊರಬರಲಾರದೇ ಒಳಗೇ ಉರಿಯುತ್ತದೆ. ಅದೇಷ್ಟು ವರ್ಷಗಳಿಂದ ಇಂಚು ಇಂಚಾಗಿ ಸುಡುತ್ತಿವೆ. ಇಷ್ಟು ವರ್ಷಗಳಿಂದ ನನ್ನ  ಮನಸ್ಸಿಲ್ಲೇ ಇಟ್ಟುಕೊಂಡು ಅನುಭವಿಸಿದ ವೇದನೆಯನ್ನೇಲ್ಲಾ ಇಂದು  ಹೊರ ಹಾಕಲೇಬೇಕೆಂದು ನಿರ್ಧರಿಸೇ ನಿನಗೆ ಬರೆಯಲು ಪೆನ್ನು ಕೈಗೆತ್ತು ಕೊಂಡಿದ್ದೇನೆ.ನಾನು ಬಹಳ ಹಿಂದೆ ಮಾಡಬೇಕಾಗಿದ್ದ ಕೆಲಸವಿದು.

ನನಗೆ ಇನ್ನೂ ಚೆನ್ನಾಗಿ ನೆನಪಿದೆ ಆ ದಿನ.  ಹಿಸ್ಟರಿ ಎಕ್ಸಾಮ್.  ಬೆಲ್ ಆಗುವ ಐದು ನಿಮಿಷಗಳ ಮುಂಚೆ ಅದೇ ಕೊನೆಯಿಂದ ಎರಡನೆಯ ಬೆಂಚಿನಲ್ಲಿ ಕೂರುತ್ತಿದ್ದನಲ್ಲಾ ಜೋಕರ್ (ಅವನ ಹೆಸರು ಈಗ ನೆನಪಿಲ್ಲ). ಅವನು ನಿನ್ನ ಹೆಸರು ಹೇಳಿ ಸಣ್ಣ ಹೂಗಳ ತಿಳಿ ಹಳದಿ ಬಣ್ಣದ ಒಂದು  ಕವರ್ ನನ್ನ ಕೈಯಲ್ಲಿ ಇಟ್ಟಾಗಅದರಲ್ಲಿ ಏನು ಬರೆದಿರಬಹುದೆಂದು ಊಹಿಸದಿರುವಷ್ಟು ಪೆದ್ದಿ ಏನು ನಾನಗಿರಲಿಲ್ಲ. ಅವತ್ತು ಎಕ್ಸಾಮ್ ಹಾಲ್‌ನಲ್ಲಿ ಕಳೆದ  ಆ ಮೂರು ಘಂಟೆಗಳು ಮುಳ್ಳು ಮೇಲೆ ಕೂತ ಅನುಭವ ನನಗೆ. ನೀನೇನಾದರೂ ಎದುರಿಗೆ ಸಿಕ್ಕಿದ್ದರೆ ಸಿಗಿದು ಹಾಕುವಷ್ಟು ಕೋಪ ಬಂದಿತ್ತು . ನಿನಗೆ ಬೇರೆಯಾರು ಸಿಗಲಿಲ್ಲ್ವಾ?  ಲೆಟರ್ ಕಳುಹಿಸಲು.  ಆ ನಿನ್ನ ಪೋಸ್ಟ್‌ಮ್ಯಾನ್  ನೀನು ಬರೆದ ಆ ಪತ್ರದ ಪ್ರತಿಯೊಂದು ಸಾಲನ್ನು  ಬಿಡದೆ ಬಾಯಿ ಪಾಠ ಮಾಡಿ ಇಡೀ ಕಾಲೇಜಿಗೆ ಊದಿದ್ದ, ಸಧ್ಯ ನಮ್ಮ ಹಾಸ್ಟೇಲ್ ವಾರ್ಡನ್ ಕಿವಿ ತನಕ ಹೋಗದಿದ್ದು ನನ್ನ ಪುಣ್ಯ.  ಇನ್ನೂ ನಿನಗೆ ಹುಡುಗಿಗೆ ಪ್ರೋಪಸ್ ಮಾಡುವಾಗ  ಒಂದು ಸುಂದರವಾದ ಕಾರ್ಡ್ ಜೊತೆಗೆ ದೊಡ್ಡ ಚಾಕೊಲೇಟ್ ಕೊಡಬೇಕು ಅನ್ನೊ ಬೆಸಿಕ್ ಸೆನ್ಸ್ ಇರಲಿಲ್ವಾ?!  ನನ್ನ ಫ್ರೆಂಡ್ಸ್ ಮುಂದೆ ಎಷ್ಟು ಅವಮಾನ ಎದುರಿಸ ಬೇಕಾಯಿತ್ತು ಗೊತ್ತಾ?  ಅವರ ಸಂಗ್ರಹದಲ್ಲಾಗಲ್ಲೇ  ಆ ರೀತಿ ಸಿಕ್ಕಿದ್ದ ಎರಡು ಮೂರು ಕಾರ್ಡ್, ಚಾಕೊಲೇಟ್ ಕವರ್‌ಗಳು ಇತ್ತು. ಇನ್ನೂ ಹುಡುಗಿಯರ ವಿಷಯದಲ್ಲಿ ನಿನ್ನಂತ ಶತ ದಡ್ಡ ಎಲ್ಲಿ ಹುಡುಕಿದರು ಸಿಗೊಲ್ಲ.  ಹುಡುಗಿಗೆ ಲವ್ ಲೆಟರ್ ಕೊಡಕ್ಕೆ ಮುಂಚೆ ಹುಡುಗಿಯರ ಕಾಮನ್ ಸೈಕಾಲಜಿನೂ ಸ್ಪಲ ತಿಳಿದು ಕೊಂಡಿರಬೇಕು ಕಣೋ. ಯಾವುದಾದರೂ ಹುಡುಗಿ  ಮೊದಲ ಬಾರಿಗೆ ಹುಡುಗನನ್ನು ಒಪ್ಪಿಕೊಂಡಿದ್ದು ಎಲ್ಲಾದರೂ ಕೇಳಿದ್ದಿಯಾ?   “ಇಲ್ಲ ನಾನು ನಿನ್ನ ಯಾವತ್ತು ಆ ಭಾವನೆಯಿಂದ ನೋಡಿಲ್ಲ, ನಾವು ಬರಿ ಫ್ರೆಂಡ್ಸ್ ಆಗಿರೋಣ ಅಂತ ನಾನು ಹೇಳಿದರೆ ನೀನು ಸುಮ್ಮನೆ ಆಗಿಬಿಡೋದಾ! ಹಿಂದೆ ಮುಂದೆ ಎರಡು ರೌಂಡ್ಸ್ ಹಾಕಿ, ಸ್ವಲ್ಪ ಸ್ಟೈಲ್, ಸ್ಮೈಲ್ ಮಾಡಿ ಮಾತಾಡಿಸೋ ಪ್ರಯತ್ನನೇ ಮಾಡಿಲ್ಲ ನೀನು. ನನ್ನ ಮುಂದೆ ಬೇರೆ ಹುಡುಗಿಯರ ಜೊತೆಯಾದರೂ ನಗುತ್ತಾ ಮಾತಾಡಿ ನಾನು ಹೊಟ್ಟೆ ಉರಿಸಿಕೊಳ್ಳೊ ಅವಕಾಶನೂ ನನಗೆ ಕೊಡದೆ ಹೇಳದೆ ಕೇಳದೆ ನಾಪತ್ತೆ ಆಗಿಬಿಟ್ಟೆ.

ನೀನು ಏನೋ ಯುವರ್ ಸ್ಪೇಷಲ್ ಟು ಮಿ ಅನ್ನೊ ಒಕ್ಕಣೆಯಿಂದ ಶುರುಮಾಡಿ ಲವ್ ಯು ವೆರಿ ಮಚ್ ಅಂತ ಪತ್ರ ಬರೆದು ತಣ್ಣಗಾದೆ. ಆಮೇಲೆ ನನ್ನ ಕಥೆ ಕೇಳು. ನೀನಿಲ್ಲದ ಲಾಸ್ಟ್ ಬೆಂಚಿನಿಂದ ನನಗೆ ಇಡೀ ಕ್ಲಾಸೇ ಖಾಲಿಯಾದ ಅನುಭವ.  ಸಂಜೆಯಾಗುತ್ತಿದ್ದಂತೆ ನಮ್ಮ ಹಾಸ್ಟೇಲ್ ಮುಂದೆ ಪೂರ್ತಿ ಬಾಯ್ಸ್ ಹಾಸ್ಟೇಲಿನ ಹುಡುಗರ ಆಕಡೆಯಿಂದ ಈಕಡೆಗೆ ಪಥಸಂಚಲನದಲ್ಲೂ ನೀನು ಪತ್ತೆ ಇಲ್ಲ. ಕ್ಯಾಟೀನು, ಲೈಬ್ರರಿ, ಕಾರಿಡರ್ ಎಲ್ಲೂ ನಿನ್ನ ಸುಳಿವು ಸಿಗದೆ ಒಳಗೊಳಗೆ ಒದ್ದಾಡಿದೆ.   ಶನಿವಾರವಾದರೂ ನಿನ್ನ ದರ್ಶನವಾಗಬಹುದು ಎಂಬ ಆಸೆಯಿಂದ  ಹಾಸ್ಟೇಲಿನಿಂದ ಎರಡು ಮೈಲಿ ದೂರದ ಟೌನ್‌ಗೆ ನೆಡೆದೆ ಹೋಗುತ್ತಿದೆ.  ಇನ್ನೂ ಟೌನಿನ ಐಸ್ ಕ್ರಿಮ್ ಪಾರ್ಲರ್‌ಗಳಲ್ಲಿ ಜೋಡಿಗಳಿಗೆಂದೆ ಮೀಸಲಾಗಿದ್ದ ಮೂಲೆ ಟೇಬಲ್‌ಗಳಲ್ಲಿ ಸಹಪಾಠಿಗಳನ್ನು ನೋಡಿ ಕರಬುತ್ತಿದ್ದೆ.  ನನ್ನ ಸ್ನೇಹಿತೆಯರು ತಮ್ಮ ಬಾಯ್‌ಫ್ರೆಂಡ್ಸ್ ಜೊತೆ ಜಗಳವಾಡಿ ರಾಜಿಯಾಗುವಾಗುವುದನ್ನು ನೋಡಿ ನನಗೆ ಇಲ್ಲದ ಆ ಭಾಗ್ಯಕ್ಕೆ ಕೊರಗಿದೆ. ನಿನಗೇ ಕೊಡಲೆಂದೆ ಕೊಂಡ ಅದೆಷ್ಟೋ ಗ್ರಿಟಿಂಗ್ ಕಾರ್ಡ್‌ಗಳನ್ನು , ಇಂದಿಗೂ ನನ್ನ ಹಳೆ ಪುಸ್ತಕಗಳ ಮಧ್ಯದಿಂದ ನಿನ್ನನ್ನು ನೆನಪಿಸಿ ಅಣಿಕಿಸುತ್ತಿವೆ. ಒಮ್ಮೆ ನಾನು ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದಾಗ ಪೂರ್ತಿ ತರಗತಿಯೇ  ಅಲ್ಲಿ ನೆರೆದಿತ್ತು, ನಿನ್ನೊಬ್ಬನ್ನ ಹೊರತಾಗಿ!!  ಆದು ನಿನ್ನನ್ನು ನಾನು ತೀವ್ರವಾಗಿ ಮಿಸ್‌ ಮಾಡಿಕೊಂಡ ದಿನ. ನೀನು ಇದ್ಯಾವುದರ ಅರಿವೇ ಇಲ್ಲದೇ ಅದೇಲ್ಲಿ ಪ್ರಶಾಂತವಾಗಿ ಕುಳಿತ್ತಿದ್ದೆಯೋ.  ನಿಧಾನವಾಗಿ  ನನಗೇ ಅರಿವಿಲ್ಲದಂತೆ ನೀನು ಸಂಪೂರ್ಣವಾಗಿ ನನ್ನನ್ನು ಅವರಿಸಿಕೊಂಡಿದ್ದೆ. ನನ್ನ ರೂಮ್‌ಮೇಟ್ ಕಣ್ಣು ತಪ್ಪಿಸಿ ದಿನಕ್ಕೆ  ಹತ್ತು ಬಾರಿಯಾದರೂ ನೀನು ಬರೆದ ಪತ್ರ ಓದುವುದು ನನ್ನ ನಿತ್ಯದ ದಿನಚರಿಯಾಗಿತ್ತು.  ಇಂದಾದರೂ ನೀನು ಕಾಣಸಿಗಬಹುದು ಎಂಬ ಆಸೆಯಿಂದ ದಿನ  ಕ್ಲಾಸಿಗೆ ಕಾಲಿಡುತ್ತಿದ್ದೆ. ನಿನ್ನ ಕುಡಿ ನೋಟಕ್ಕಾಗಿ ಪರಿತಪಿಸುತ್ತಿದ್ದೆ. ಹೆಚ್ಚಿನ ದಿನಗಳು  ನನಗೆ  ಕಾದಿದ್ದು ಬರಿ  ನಿರಾಸೆಯೇ. ಹೊಸ ವರ್ಷದ ದಿನ, ವ್ಯಾಲೆಂಟ್ಸ್ ಡೇ, ಕಾಲೇಜ್ ಡೇ, ನನ್ನ ಹುಟ್ಟಿದ ಹಬ್ಬ ಹೀಗೆ ನೀನಾಗಿ ವಿಶೇಷವಾಗಿ ಕಾದು ನಿರಾಸೆಯಾದ ದಿನಗಳ ಪಟ್ಟಿ ದೊಡ್ಡದು.  ನೀನು ಒಂದೇ ಒಂದು ಬಾರಿ  ಮತ್ತೆ ನನ್ನ ಕಡೆ ತಿರುಗಿ ನೋಡಿದ್ದರೆ, ನಿನಗಾಗಿ ಕಾಯುತ್ತಿದ್ದ ನಾನಲ್ಲಿ  ಸಿಗುತ್ತಿದ್ದೆ.   ಆದರೆ ನೀನು ನಿನ್ನ ಮೌನ ಮುರಿಯಲೇ ಇಲ್ಲ.  ಅಪರೂಪಕ್ಕೆ ಎದುರಿಗೆ ಸಿಕ್ಕಾಗ ಕನಿಷ್ಟ ಒಂದು ನಗುವು ಇಲ್ಲವಾಗಿತ್ತು ನಿನ್ನಿಂದ. ನನ್ನ ಕಣ್ಣುಗಳ ಕಾಯುವಿಕೆ ನಿನಗೆ ಅರ್ಥವೇ ಆಗಲಿಲ್ಲ. ನಾನು ಶಬರಿ ಹಾಗೆ ಕಾದೆ ಕಾದೆ. ಅವಳ ಕಾಯುವಿಕೆಗಾದರೂ  ಫಲ ಸಿಕ್ಕಿತು ಆದರೆ ನನಗಿಲ್ಲ.

ಇದೇಲ್ಲಾ  ಹದಿನಾರರ ಹೊಸ್ತಿಲಿನಲ್ಲಿದ್ದ ಹುಚ್ಚು ಹುಡುಗಿಯ ಬಾಲಿಶ ಭಾವನೆಗಳು ಎಂದು ಈಗ ನಿನಗೆ ಅನಿಸುವುದು ಸಹಜ. ನಿನ್ನ ಬಗ್ಗೆ ನಾನು ಹೀಗೆಲ್ಲಾ ಅಂದು ಕೊಂಡು ಇಂದಿಗೆ ಹತ್ತಾರು ವರ್ಷಗಳೇ ಉರುಳಿವೆ.  ಒಂದೊಂದನ್ನೆ ಹಿಂದಿಕ್ಕಿ ಜೀವನದ ಸಾಕಷ್ಟು ಬದಲಾವಣೆಗಳೊಂದಿಗೆ ನಾನೀಗ ಬೆಳೆದಿದ್ದೇನೆ. ಆದರೆ ನನ್ನಳೊಗಿನ ನಿನ್ನ ಹೊರತಾಗಿ. ನಿನ್ನ ಬಗ್ಗೆಗಿನ ನನ್ನ ಭಾವನೆಗಳಲ್ಲಿ  ಮಾತ್ರ ಯಾವುದೇ ರೀತಿಯ ಬದಲಾವಣೆ ಇಲ್ಲ.  ಇಂದು ನನ್ನೊಳಗೆ  ಬೆಳೆದು ಹೆಮ್ಮರವಾಗಿದೆ. ಅಂದಿನಿಂದ ಇಂದಿನವರೆಗೂ ನಿನ್ನ ಮರೆಯಲಾರದೆ ಒದ್ದಾಡುತ್ತಿರುವೆ. ಆ ದಿನಗಳ ನಿನ್ನ ಮೌನ ಸದಾ ನನ್ನ ಕಾಡುತ್ತಿದೆ. ಇಷ್ಟೇಲ್ಲಾ ಹೇಳಿದ ಮೇಲೂ ನೀನು  ಅರ್ಥಮಾಡಿಕೊಳ್ಳದ್ದಿದ್ದರೆ, ನಾನೇ ಹೇಳುತ್ತಿನಿ ಕೇಳು ಹುಡುಗ ನೀನಂದರೆ ನನಗೆ ಇಷ್ಟ ಕಣೋ  ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನಿನ್ನವಳಲ್ಲದ ನಿನ್ನವಳು

No comments: