October 13, 2011

ಬಸ್ ಕೆಟ್ಟ ಆ ರಾತ್ರಿ...

 ದಿನ ಟಿವಿ, ಪೇಪರ್‌ನಲ್ಲಿ ಹೆಣ್ಣು ಮಕ್ಕಳು ಕಾಮುಕರಿಗೆ ಬಲಿಯಾಗುವ ಸುದ್ದಿ ಕೇಳುವಾಗ ನನ್ನ ಹೊಟ್ಟೆಯಲ್ಲಿ ಸಣ್ಣಗೆ ಚಳಿ ಹುಟ್ಟುತ್ತೆ. ಮೈಯೆಲ್ಲಾ ಬೆವುರುತ್ತೆ.  ಅವತ್ತು ಅವರು ಇಲ್ಲ ಅಂದಿದ್ದರೆ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತದೆ. ಮತ್ತೆ ಮತ್ತೆ ಆ ಘಟನೆಯ ನೆನಪು ಮರಕಳಿಸುತ್ತದೆ.  ಅಲ್ಲಿಯವರೆಗೆ  ಒಂದು ಹೆಣ್ಣನ್ನು ಪ್ರಪಂಚ ಅಷ್ಟು ಕೆಟ್ಟ ದೃಷ್ಟಿಯಿದ ನೋಡುತ್ತದೆ  ಎಂಬ ಅರಿವಿರಲಿಲ್ಲ.  ಇಂದಿಗೂ ಅವತ್ತು ನಾನು ಎಂತಹ ಅಪತ್ತಿನಲ್ಲಿ ಸಿಲುಕ್ಕಿದ್ದೆ  ಎಂದು  ಊಹಿಸಿಕೊಳ್ಳಲು ಅಸಾಧ್ಯ.  ಆ ದಿನದ ನೆನಪು ಮಾತ್ರ ಇನ್ನೂ ಸ್ಪಲ್ಪವೂ ಮಾಸಿಲ್ಲ. ಅವತ್ತು ನಾನು  ಹೆದರಿಕೆಯಿಂದ  ಸಂಪೂರ್ಣ ಬ್ಲಾಂಕ್ ಆಗಿದ್ದೆ.  ಪರಿಸ್ಥಿತಿಯೇ  ಹಾಗಿತ್ತು .

      ಈ ಘಟನೆ ನೆಡೆದು ಸುಮಾರು 15-16 ವರ್ಷಗಳೇ ಕಳೆದಿವೆ. ಆ ವಯಸ್ಸೇ ಹಾಗಿತ್ತು. ಯಾವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಥವಾ ಯೋಚಿಸಬೇಕು ಅನ್ನೋ ಮೆಚ್ಯೂರಿಟಿ ಇರಲಿಲ್ಲ. ಆಗ ಅದು ಬೇಕಾಗಿರಲಿಲ್ಲ ಕೂಡ.  ಆಗಿನ್ನೂ ನಾನು ಪಿಯುಸಿ ಮುಗಿಸಿದ್ದೆ. ಡಿಗ್ರಿ ಕಾಲೇಜು ಶುರುವಾಗುವ ಮುನ್ನ ಹಳೆ ಹಾಸ್ಟೇಲ್‌ನ ಸ್ನೇಹಿತರೇಲ್ಲಾ ಒಮ್ಮೆ ಭೇಟಿಯಾಗುವ ಪ್ಲಾನ್ ಪ್ರಕಾರ. ನಾವೆಲ್ಲಾ ಮಂಗಳೂರಿನಲ್ಲಿ  ಮೀಟ್ ಮಾಡಿ,  ನಾನು ವಾಪಸ್ಸು ಮನೆ ಸೇರಲು ಮಂಗಳೂರು-ತೀರ್ಥಹಳ್ಳಿಯ ಅಗುಂಬೆ ಮಾರ್ಗದ ಕೊನೆ ಬಸ್ಸೇರಿದ್ದೆ.  ಕತ್ತಲ್ಲಾದ ನಂತರ ಆಗುಂಬೆ ಘಾಟಿಯಲ್ಲಿ ಬಸ್ಸ್ ಸಂಚರಿಸುತ್ತಿರಲಿಲ್ಲ.  ಅದೇ ಕೊನೆಯ  ಬಸ್ಸ್‌ ಆದ ಕಾರಣದಿಂದ  ಹೆಚ್ಚೇ ಎನ್ನುವಷ್ಟು ಜನ ತುಂಬಿದ್ದರು.  ಹೆಬ್ರಿ ದಾಟಿ ಸ್ಪಲ್ಪ ದೂರ ಸಾಗುತ್ತಿದ್ದಂತೆ  ಬಸ್ಸು ಕೆಟ್ಟು ನಿಂತಿತ್ತು.  ಆಗ ಅದೇನು ದೊಡ್ಡ ವಿಷಯ ಅನಿಸಲಿಲ್ಲ.  ಡ್ರೈವರ್ ಅರ್ಧ-ಒಂದು ಘಂಟೆಯಲ್ಲಿ ಸರಿಯಾಗುವ ಭರವಸೆ ಕೊಟ್ಟಿದ್ದರು. ಆದರೆ ಅಗಿದ್ದೇ ಬೇರೆ.  ಮೆಕ್ಯಾನಿಕ್ ರೀಪೇರಿ ಸಾಧ್ಯವಿಲ್ಲ  ಅಂದ ಹಾಗೂ ಕಂಡೆಕ್ಟರ್‌ನಿಂದ ನಿಮ್ಮ ದಾರಿ ನೀವೇ ನೋಡಿ ಕೊಳ್ಳಿ ಎಂಬ ಅಧಿಕೃತ ಘೋಷಣೆಯು ಬಂತು. ಬಸ್ಸಿನ  ಜನ ಸಂದಣಿ ನಿಧಾನವಾಗಿ  ಕರಗತ್ತಾ ಬಂತು. ಆಗಾಲೇ ನನಗೆ ಗೊತ್ತಾಗಿದ್ದು. ಆ ಬಸ್ಸಲ್ಲಿ ಇದ್ದಿದ್ದು ಎರಡೇ ಹೆಣ್ಣು ಜೀವ! ನಾನು ಮತ್ತು ಒಂದು ಕಣ್ಣಿಗೆ ಬ್ಯಾಂಡೇಜ್ ಕಟ್ಟುಕೊಂಡಿದ್ದ ಮಧ್ಯ ವಯಸ್ಸಿನ ಹೆಂಗಸೊಬ್ಬರು. ಯಾರಿಗೆ ಹೇಳೊದು... ? ಎಲ್ಲಿಗೆ ಹೋಗೋದು..? ಯಾರ ಜೊತೆಗೆ?  ಎಲ್ಲದಕ್ಕಿಂತ ಹೆಚ್ಚಾಗಿ ಮನೆಗೆ ಹೇಗೆ ತಿಳಿಸೋದು?  ಆಗ ಮೊಬೈಲ್ ಫೋನ್ ಎಲ್ಲಿತ್ತು.? ನಮ್ಮ ಮನೆಯಲ್ಲಿ ಫೋನ್ ಕೂಡ ಇರಲ್ಲಿಲ್ಲ. ನಾನು ಏನು ಮಾಡಲು ತೋಚದೇ ಉತ್ತರ ಹೊಳಯದ ಪ್ರಶ್ನೆಗಳೊಂದಿಗೆ ಕುಳಿತೇ ಇದ್ದೆ. 

       ಘಂಟೆ ಎಂಟೋ ಒಂಬತ್ತು ಆಗಿತ್ತು. ಬಸ್ ಫುಲ್ ಖಾಲಿ ಆಯಿತು. ಬರೀ ಮೂರು ಜನ ಮಾತ್ರ ಉಳಿದ್ದಿದ್ದು. ನಾನು ಮತ್ತು ಬಸ್ಸ್‌ನಲ್ಲಿದ್ದ ಏಕೈಕ ಮಹಿಳೆ ಮತ್ತು ಅವರ ಗಂಡ. ಮತ್ತು ಬಸ್  ಕೆಳಗೆ ಒಂದು ನಾಲ್ಕೋಐದೋ ಜನ ಇದ್ದರು.  ಕೆಳಗೆ ಕತ್ತಲಲ್ಲಿ  ನಿಂತಿದ್ದ  ನನ್ನ ಬಗ್ಗೆಯ ಅವರ ಮಾತುಗಳು  ಬೇಡ ಅಂದರೂ ಸ್ಪಷ್ಟವಾಗಿ ಕೇಳುತ್ತಿತ್ತು.  ಒಬ್ಬ "ಹಕ್ಕಿ ಬೊಂಬಾಟಾಗಿ ಇದ್ದೆ ಕಣ್ರೋ" ಅಂತ ಹೇಳಿದ್ರೆ, "ಹೌದು ಮರಾಯಾ.. ಮಜಾ ಜೊತೆಗೆ ಒಳ್ಳೆ ಸಂಪಾದನೆನ್ನೂ ಆಗುತ್ತೆ ಕಣೋ" ಅಂತ ಇನ್ನೊಬ್ಬನ್ನ ಸುವಾಲು. ನನ್ನ ರೂಪದ ಬಗ್ಗೆ ನನಗೇ ಅಸಹ್ಯವಾಗುವಷ್ಟು ಅಸಹ್ಯವಾಗಿ ಮಾತಾಡಿ ಕೊಳ್ಳುತ್ತಿದ್ದರು.  ನಂತರ ಒಬ್ಬೊಬ್ಬರೇ ಬಸ್ಸಿನ  ಒಳಗೆ ಒಂದು ನನ್ನ ಮಾತನಾಡಿಸಲು  ಶುರು ಮಾಡಿದ್ದರು.  ನಾನು ಮಾತ್ರ ತುಟಿ ಎರಡು  ಮಾಡದೆ, ಅಳು ನುಂಗಿ ಸೀಟಿಗೆ ಇನ್ನೂ ಅಂಟು ಕೊಂಡು ಕುಳಿತೆ. ಹೊರಗಿನ ಕತ್ತಲಷ್ಟೆ ನನ್ನ ಮುಖ ಕೂಡ ನನಗೆ ಗೊತ್ತಗುವಷ್ಟೂ ಹೆದರಿಕೆಯಿಂದ ಕಪ್ಪಾಗಿತ್ತು. ಅವರೇಲ್ಲಾ ನಾನು ಕುಳಿತ ಸೀಟಿನಿಂದ ಸ್ಪಲ್ಪ ದೂರದಲ್ಲಿ ನಿಂತು  ಅಸಹ್ಯವಾಗಿ ನಗುತ್ತಿದ್ದರು.  ಸೇಮ್ ಯಾವುದೋ ಒಂದು ಫಿಲ್ಮಿ ಸೀನ್ ರೀತಿ. ಅವರ ನೋಟಗಳು  ನನಗೆ ಇಂದಿಗೂ ಕೂಡ ನೆನೆಪಿದೆ.  ನೆನೆಸಿ ಕೊಂಡರೆ ಈಗಲೂ ಮೈ ಕಂಪಿಸುತ್ತದೆ.  ಆ ಕ್ಷಣ ಮಾತ್ರ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಪರಿತಪಿಸಿ ಬಿಟ್ಟೆ.  ಆಗ ನನ್ನನ್ನು ಅವರಿಂದ ಬಚಾವ್ ಮಾಡೊಕ್ಕೆ ಮಾತ್ರ ಬಂದಿದ್ದು   ಬಸ್ಸಿನಲ್ಲಿ ಉಳಿದ್ದಿದ್ದ ದಂಪತಿಗಳು. ಆ ಮಹಿಳೆ ನನ್ನ ಹತ್ತಿರ ಬಂದು  ನಮ್ಮ ಜೊತೆ ಬರ್ತಿಯಾ ಅಂತ ಕೇಳಿದಷ್ಟೇ. ನಾನು ಒಂದು ಸೆಂಕೆಂಡು ಕೂಡ ತಡ ಮಾಡದೆ ಹಿಂದೆ ಮುಂದೆ ಯೋಚಿಸದೆ ಅವರ ಬಾಲ ಹಿಡಿದೆ. ಬೇರೆ ದಾರಿಯಾದರೂ ಏನು ಇತ್ತು? ನನಗೆ ಹೋದ ಜೀವ ವಾಪಸ್ಸು ಬಂದಿತ್ತು. ಅವರು ಯಾವುದೋ ಒಂದು ವಾಹನ ಅಡ್ಡಗಟ್ಟಿ, ಉಡುಪಿಗೆ ಕರ್ಕೊಂಡು ಹೋದರು.  ಮಾತಾಡಲು  ಅಗದಷ್ಟು  ಬಾಯಿ ಒಣಗಿತ್ತು. ಅವರು ಏನೋ ಕೇಳಿದ್ದರೆ ನಾನು ಏನೋ ಹೇಳುತ್ತಿದ್ದೆ.  ಬಾಂಣಲೆಯಿಂದ ಬೆಂಕಿಗೆ ಬಿದ್ದೆನ್ನೇನೊ ಎಂದು  ನನಗೆ ಅನಿಸಲು ಪ್ರಾರಂಭವಾಗಿತ್ತು. ಆದರೆ ಆ ರೀತಿ ಏನು ಆಗದೆ  ಕೊನೆಗೆ ಎಲ್ಲಾ ಸುಖಾಂತ್ಯ ವಾಯಿತು. ರಾತ್ರಿ ಉಡುಪಿ ಮಠದಲ್ಲಿ ಉಳಿದುಕೊಂಡು, ಬೆಳ್ಳಿಗೆ ಮೊದಲ ಬಸ್ಸ್‌ನಲ್ಲೇ  ಅವರು ನನ್ನನ್ನು ಊರು ಮುಟ್ಟಿಸಿದ್ದರು. ಅವರ ಉಪಕಾರಕ್ಕೆ ನಾನು ಮತ್ತು ನನ್ನ ಮನೆಯವರೆಲ್ಲಾ ಜೀವಮಾನವೀಡಿ ಋಣಿಗಳು.
        
           ಆ ಒಂದು ರಾತ್ರಿಯಲ್ಲಿ ನಾನು ಇಡೀ ಜೀವಮಾನಕ್ಕೆ ಆಗುವಷ್ಟು ಹಿಂಸೆ, ಸಂಕಟ, ಭಯ ಎಲ್ಲಾ ಅನುಭವಿಸಿ ಬಿಟ್ಟೆ.  ಆ ಪುಣ್ಯಾತ್ಮರು ಇಲ್ಲದೆ ಹೋಗಿದ್ದರೆ....  ನಾನು ಇಷ್ಟೂ ವರ್ಷ ಜೀವದಲ್ಲಿ  ಇರುತ್ತಿದ್ದೇನೋ ಇಲ್ವೋ ಅಥವಾ ಇದ್ದರೂ ಎಲ್ಲೋ?  ಹೇಗೋ? ಅಬ್ಬಾ ಕಲ್ಪನೆಗೂ ಸಿಗವುದಿಲ್ಲ... ಆ ಪಾಪಿಗಳ ಕೈಗೆ ಸಿಕ್ಕಿ ನಾನೂ ಒಂದು ಕಥೆಯಾಗಿರುತ್ತಿದ್ದೆ....














(2011 ಅಕ್ಟೋಬರ್  7 ರ ವಿಜಯ ನೆಕ್ಸ್ಟ್‌ ಪೇಪರ್‌ನ  "ಅವಳ ಡೈರಿ" ಅಂಕಟದಲ್ಲಿ  ಪ್ರಕಟವಾದ ಬರಹ)

No comments: