October 13, 2011

ಮಳೆಗಾಲಕ್ಕಾಗಿ ಗಾರ್ಡನಿಂಗ್ ಟಿಪ್ಸ್‌ಗಳು

ಮಳೆಗಾಲ ಬಂತೆಂದರೆ ಸಾಕು. ತಂಪಾದ ಹೆಚ್ಚು ತೇವಾಂಶ, ಬಿಸಿಲಿನ ತಾಪವಿಲ್ಲದ ಹವಾಗುಣ ಗಿಡ-ಮರಗಳಿಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಸಸ್ಯ ಪ್ರೇಮಿಗಳಿಗೆ ತಮ್ಮ ಮನೆಯ ಮುಂದಿನ ಗಾರ್ಡನ್‌ನಲ್ಲಿ ಇನ್ನೂ ಹೆಚ್ಚು ಹೆಚ್ಚು ಗಿಡ ಮರಗಳನ್ನೂ ನೆಡೆಲು ಸರಿಯಾದ ಕಾಲ. ಮಳೆಗಾಲದ ಸಮಯದಲ್ಲಿ ನಿಮ್ಮ ಹೂದೋಟದ ಕಾಳಜಿಗಾಗಿ ಕೆಲವು ಮುಖ್ಯ ಅಂಶಗಳನ್ನು ಪಾಲಿಸಿದರೆ ಸಾಕು ವರ್ಷವೀಡಿ ಸುಂದರವಾದ ಗಾರ್ಡನ್‌ನನ್ನು ಅಸ್ವಾದಿಸಬಹದು. ಮಾನ್ಸೂನ್ ಮರ ಗಿಡಗಳನ್ನು ನೆಡಲು ಅತ್ಯಂತ ಉತ್ತಮವಾದ ಕಾಲ. ಹೆಚ್ಚಿನ ತೇವಾಂಶ, ಮೋಡ ಹಾಗೂ ಮಳೆಯಿಂದ ಹೊಸದಾಗಿ ನೆಟ್ಟ ಗಿಡಗಳು ಸುಲಭವಾಗಿ ಚಿಗುರುತ್ತವೆ. ಎಲ್ಲಾ ರೀತಿಯ ಮರಗಿಡಗಳನ್ನು ನೆಡಲು ಮಳೆಗಾಲ ಅತಿ ಸೂಕ್ತವಾದ ಸಮಯ. ಈ ಕಾಲದಲ್ಲಿ ಗಿಡ-ಮರಗಳನ್ನು ನೆಡುವುದರಿಂದ ಕೆಲಸ ಹಾಗೂ ಗಿಡಗಳ ನಿರ್ವಹಣೆ ಎರಡೂ ಕಡಿಮೆಯಾಗುತ್ತದೆ. ಆದರೆ ನೀರು ಸರಿಯಾಗಿ ಬೇರಿನ ಮೂಲವನ್ನು ತಲುಪಿ, ಬೇರುಗಳನ್ನು ಸಂಪೂರ್ಣವಾಗಿ ಹೈಡ್ರೇಟು ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪಾಟ್‌ಗಳಲ್ಲಿ ಗಿಡಗಳನ್ನು ನೆಡುವ ಮೊದಲು ಹೂವಿನ ಕುಂಡಗಳಿಗೆ ನೀರು ಸೋರಿ ಹೋಗುವಷ್ಟೂ ನೀರು ಹಾಕಿ ಪರೀಕ್ಷಿಸಿ. ಕೈ ತೋಟ ಅಥವಾ ಕಾಪೌಂಡ್‌ನಲ್ಲಿ ಉತ್ತಮವಾದ ಚರಂಡಿ ವ್ಯವಸ್ಥೆ ಅಗತ್ಯ. ನಿಮ್ಮ ಗಾರ್ಡನ್‌ನ ನೀರಿನ ಹರಿಯುವಿಕೆಯನ್ನು ಪರೀಕ್ಷಿಸಿ. ಗಿಡ-ಮರಗಳ ಬುಡಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಿ. ಹರಿಯದೆ ನಿಂತ ನೀರಿನಿಂದ ಗಿಡಗಳು ಸುಲಭವಾಗಿ ಕೊಳೆಯುತ್ತವೆ. ಹಾಗೂ ಹಾಗೆ ನೀರು ನಿಂತ ಸ್ಥಳಗಳು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಡುತ್ತವೆ. ಗಿಡದ ಕೆಳಗೆ ಬೀಳುವ ಹಳದಿ ಎಲೆಗಳನ್ನೆಲ್ಲಾ ಗಿಡದ ಸುತ್ತ ಹರಡಿ ಅದರ ಮೇಲೆ ಒಂದು ಪದರ ಮಣ್ಣು ಮುಚ್ಚಿ. ಇದು ಒಳ್ಳೆ ಕಾಂಪೋಸ್ಟ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಎರೆಹುಳಗಳನ್ನು ಪ್ರೋತ್ಸಾಹಿಸಿ. ಇದು ನಿಮ್ಮ ಸಾಕಷ್ಟು ಕೆಲಸವನ್ನು ಕಡಿಮೆ ಮಾಡುವುದರ ಜೊತೆಗೆ ಗಿಡಗಳಿಗೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಮಳೆಗಾಲದಲ್ಲಿ ಮರ-ಗಿಡಗಳಿಗೆ ಕೀಟಗಳ ಹಾವಳಿ ಹೆಚ್ಚು. ಯಾವುದೇ ರೀತಿಯ ಕೀಟನಾಶಕಗಳ ಸಿಂಪಡಣೆ, ಮಳೆಯಿಂದ ಹೆಚ್ಚು ಪರಿಣಾಮಕಾರಿಯಾಗದು ಹಾಗೂ ಸಿಂಪಡಿಸಿದ ಕೀಟನಾಶಕವು ಮಳೆ ನೀರಿನ ಮೂಲಕ ಇಡಿ ತೋಟದಲ್ಲಿ ಹರಡುತ್ತದೆ. ಹೂದೋಟಗಳಲ್ಲಿ ಕಾಣಿಸಿಕೊಳ್ಳುವ ಜೇಡ, ಕಪ್ಪೆ, ಇರುವೆಗಳನ್ನು ನಾಶಮಾಡಬೇಡಿ. ಇವುಗಳು ಕೀಟಗಳ ಉಪದ್ರವ ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ. ಹಾಗೇ ಮಳೆಗಾಲದಲ್ಲಿ ನೆದುವ ಗಿಡಗಳ ಅಯ್ಕೆ ಕೂಡ ಮುಖ್ಯ. ಗುಲಾಬಿ, ದಾಸವಾಳ, ಮಲ್ಲಿಗೆ, ಡೇರೆ, ಲಿಲ್ಲಿ, ಗ್ಲಾಡಿಯೊಲಸ್‌ಗಳನ್ನು ಅಯ್ದು ಕೊಳ್ಳಬಹುದು. ಹಾಗೆ ಜೀನಿಯಾ, ಚೆಂಡು ಹೂವು, ಕಾಕ್ಸ್ ಕುಂಬ್‌ಗಳ ಗೂವಿನ ಜೀಜ ಹಾಕಲು ಮಳೆಗಾಲ ಅತಿಯಾಗಿ ಹೊಂದುವ ಸಮಯ. ಆದರೆ ಹೂವಿನ ಬೀಜಗಳು ನೀರಿನಲ್ಲಿ ಕೊಚ್ಚಿಹೋಗದ ಹಾಗೆ ಕಾಳಜಿ ವಹಿಸಿ. ಇನ್ನೂ ಮಾವು, ಸೇಬು, ಕಿತ್ತಳೆ, ಮುಸುಂಬಿ, ನಿಂಬೆ ಮುಂತಾದ ಹಣ್ಣಿನ ಗಿಡಗಳನ್ನೂ ಸಹ ನೆಡಬಹುದು. ಇವುಗಳೊಂದಿಗೆ ಸೌತೆಕಾಯಿ, ಬೀನ್ಸ್‌ಗಳಂತಹ ತರಕಾರಿಗಳನ್ನು ಬೆಳೆಯಲು ಆರಿಸಿಕೊಳ್ಳಬಹುದು. ಮಳೆಗಾಲಕ್ಕೆ ಸೂಕ್ತವಾದ ಗಿಡ ಮರಗಳ ಬಗ್ಗೆ ತಙ್ಞರಿಂದ ಮಾಹಿತಿ ಪಡೆಯಿರಿ. ಮಳೆಗಾಲವು ಹೊಸ ಮರ-ಗಿಡಗಳನ್ನು ನೆಡೆವುದರ ಜೊತೆಗೆ , ಹೂದೋಟದ ಹಳೆ ಗಿಡಗಳ ಆರೈಕೆಗೂ ಅತ್ಯಂತ ಪ್ರಶಸ್ತ ಸಮಯ. ದಾಸವಾಳ, ಗುಲಾಬಿ, ಮಲ್ಲಿಗೆ ಮುತಾಂದ ಗಿಡಗಳ ಕೊಂಬೆಗಳನ್ನು ಕತ್ತರಿಸಿ, ಟ್ರೀಮ್ ಮಾಡಿ. ಮರ-ಗಿಡಗಳ ಬುಡದ ಮಣ್ಣನ್ನು ಕೊಚ್ಚಿ, ಗೊಬ್ಬರ ನೀಡಿ. ನಂತರ ಅದರ ಮೇಲೆ ಮಣ್ಣು ಹರಡಿ. ಇಲ್ಲವೇ ಮರ ಗಿಡಗಳ ಹಳೆಯ ಎಲೆಗಳನ್ನು ಹಾಕಿ ಮಣ್ಣು ಮುಚ್ಚಿ. ಇದು ಗಿಡಗಳಿಗೆ ಉತ್ತಮ ಪೋಷಕಾಂಶವನ್ನು ಒದಗಿಸಿ ಬೆಳವಣಿಗೆ ಸಹಾಯವಾಗುತ್ತದೆ. ಪಾಟ್‌ಗಳಲ್ಲಿರುವ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ಹೊಸ ಮಣ್ಣು ಗೊಬ್ಬರ ಹಾಕಿ ರೀ-ಪಾಟ್ ಮಾಡಿ. ಮನೆಯ ಒಳಗೆ ಇರಿಸಿದ ಪಾಠ್‌ಗಳನ್ನು ಮಳೆಯಲ್ಲಿ ಸ್ಪಲ್ಲ ಕಾಲ ಇಡಿ. ಗಿಡಗಳ ಬೆಳವಣಿಗೆ ಹೆಚ್ಚು ಉಪಯುಕ್ತ. ಇದರಿಂದ ಗಿಡಗಳು ಸ್ವಾಭಾವಿಕವಾಗಿ ನೀರು ಪಡೆಯುತ್ತವೆ. ಸರಳವಾದ ಟಿಪ್‌ಗಳೊಂದಿಗೆ ಈ ಮಳೆಗಾಲದಲ್ಲಿ ಗಾರ್ಡನಿಂಗ್‌ ಅನ್ನೂ ಎಂಜಾಯಿ ಮಾಡಿ ಹಾಗೂ ನಿಮ್ಮ ಕನಸಿನ ಹೂದೋಟ ಪಡೆಯಿರಿ. (ಜೂನ್ 28 2011ರ ಕನ್ನಡ ಪ್ರಭ ಪತ್ರಿಕೆಗಾಗಿ ಬರೆದ ಬರಹ.)

No comments: