November 17, 2012

ಮತ್ತದೇ ಮಾಗಿ ಮಧ್ಯಾಹ್ಯ...!

ಮೊದಲಿನಿಂದಲೂ ಅಷ್ಟೇ ನಂಗೂ ಈ ಮಾಗಿಯ ಮಧ್ಯಾಹಕ್ಕೂ ಆಗ್ಬರೊದೇ ಇಲ್ಲ. ಎಣ್ಣೆ ಸೀಗೆಕಾಯಿ ಸಂಬಂಧ. ಸುಮ್‌ಸುಮ್ಮನೆ ಸಿಟ್ಟು, ಅಂತಕ, ಅಳು, ಹುಚ್ಚು ಎಲ್ಲಾ ಈ ಮಧ್ಯಾಹ್ನಗಳಲ್ಲೇ ನನ್ನ ಕಾಡೋದು ಹಾಗೂ ನಾನು ತುಂಬಾ ಒಂಟಿ ಅನ್ಸೊದು ಕೂಡ. ಶಾಲೆಗೆ ಹೋಗವಾಗ ನನ್ನ ಒರಗೆಯ ಮಕ್ಕಳೇಲ್ಲಾ ಭಾನುವಾರಕ್ಕೆ ಕಾಯಿತ್ತಾ ಇದ್ದರೆ, ನನಗೆ ಮಾತ್ರ ಯಾಕಪ್ಪ ಬರುತ್ತೆ ಭಾನುವಾರ ಅನ್ನೊ ಸಂಕಟ. ಹೇಳಿ ಕೇಳಿ ಮಲೆನಾಡಿನ ಒಂಟಿ ಮನೆ, ಯಾವುದೇ ಮೂಲೆಯಲ್ಲೋ ಅಥವಾ ಕೊಟ್ಟಿಗೆಯಲ್ಲೊ ಕೆಲಸ ಮಾಡುವ ಅಮ್ಮ, ಪೇಟೆ ಹೊಗಿ ಇನ್ನೂ ಬಂದಿರದ ಅಪ್ಪ, ಹೆಂಚಿನ ಮಾಡಿನಿಂದ ನುಸುಳುವ ತಣ್ಣನೆ ಗಾಳಿ, ಮನೆತುಂಬಾ ಒಂಥರಾ ನೀರವ ಮೌನ ಇವೆಲ್ಲಾ ಚಳಿಗಾಲದ ಮಧ್ಯಾಹ್ನದೊಂದಿಗೆ ನನ್ನ ನೆನೆಪಿನಲ್ಲಿ ಉಳಿದುಬಿಟ್ಟಿದೆ. ಮುಂದೆ ಹಾಸ್ಟೇಲ್ ಸೇರಿದ ಮೇಲೂ ಮಧ್ಯಾಹ್ನಗಳೂ ನನ್ನ ಕಾಡೋದು ಏನು ಕಮ್ಮಿ ಆಗಿಲ್ಲ. ಇಡಿ ಹಾಸ್ಟೇಲ್ಗೆ ಹಾಸ್ಟೇಲೇ ಬೆಚ್ಚಗೆ ಹೊದ್ದು ಮಲಗಿದ್ರೂ ನಾನು ಮಾತ್ರ ಪಾಪಿ ತರಹ ಕಾಲ ದೂಡುತ್ತಾಇದ್ದೆ. ಅಪ್ಪಿತಪ್ಪಿ ಏನಾದರೂ ನಿದ್ರೆಗೆ ಜಾರಿದರೆ, ಮಲಗಿ ಎದ್ದ ಮೇಲಿನ ಕಷ್ಟ ಮಾತ್ರ ಯಾರಿಗೂ ಬೇಡ. ಯಾರಿಗೂ ಹೇಳಲಾಗದ ತಳಮಳ, ಎಲ್ಲಾ ಬಿಟ್ಟು ದೂರ ಓಡಿ ಹೋಗುವಷ್ಟು ಹಿಂಸೆ. ಮತ್ತೆ ಈಗ ಚಳಿಗಾಲ.. ಮತ್ತೆ ಅದೇ ನನ್ನ ಕಾಡುವ ಮಾಗಿಯ ಮಧ್ಯಾಹ್ಯಗಳು. ಮೊದಲೇಲ್ಲಾ ಆಗಿದ್ದರೆ ಬರೀ ಭಾನುವಾರದ ಮಧ್ಯಾಹ್ನಗಳು ಮಾತ್ರ ನನ್ನ ಮನಸ್ಸನ್ನು ಭಾರವಾಗಿಸುತ್ತಿದ್ದವು. ಈಗ ಪ್ರತಿ ದಿನದ ಮಧ್ಯಾಹ್ನವೂ ಭಾನುವಾರ ಮಧ್ಯಾಹ್ನವೇನೋ ಅನ್ನುವಷ್ಟು ಖಾಲಿತನ, ಪದೇ ಪದೇ ಬೇಜಾರು.. ದಿನಕ್ಕೆ ಹತ್ತು ತರಹ ಹುಚ್ಚುಚ್ಚಾಗಿ ಆಡುವ ಹಿಡಿತಕ್ಕೆ ಸಿಗದ ಮನಸ್ಸು...

No comments: