October 13, 2011

ಬುಕ್ ಸ್ಟ್ಯಾಂಡ್‌









ಒಂದು ಬುಕ್ ಸ್ಟ್ಯಾಂಡ್‌ ಇಲ್ಲದ ಮನೆ ಪರಿಪೂರ್ಣ ಅನ್ನಿಸುವುದ್ದಿಲ್ಲ. ಬುಕ್ ಸ್ಟ್ಯಾಂಡ್‌ನ ಹೊರತಾಗಿ, ನಮ್ಮ ಪುಸ್ತಕಗಳು ನೆಲ, ಹಾಸಿಗೆ , ಟೇಬಲ್, ಅಲ್ಲಿ ಇಲ್ಲಿ ಎಲ್ಲಾ ಕಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಬುಕ್ ಶೆಲ್ಫ್‌ಗಳು ಅಥವಾ ಬುಕ್ ಸ್ಟ್ಯಾಂಡ್‌ಗಳು ನಮ್ಮ ಪುಸ್ತಕಗಳು, ಮ್ಯಾಗಜೀನ್‌ಗಳನ್ನು ವ್ಯವಸ್ಥಿತವಾಗಿ ಮತ್ತು ಕಣ್ಣಿಗೆ ಮುದ ನೀಡುವ ಹಾಗೆ ಜೋಡಿಸಿಡಲು ಸುಲಭವಾಗಿ ಅವಕಾಶ ನೀಡುತ್ತದೆ. ಇವುಗಳು ನಮ್ಮ ಮನೆಯಲ್ಲಿ ಕಾರ್ಯರೂಪಕ ಹಾಗೂ ಅಲಂಕಾರಿಕ ಅಂಶಗಳಾಗಿ ಸಹ ಸೇವೆ ಸಲ್ಲಿಸುತ್ತವೆ. ಒಂದು ಸರಿಯಾಗಿ ಸಜ್ಜುಗೊಳಿಸಿದ ಬುಕ್ ಕೇಸ್ ಮನೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಬುಕ್‍ ಸ್ಟ್ಯಾಂಡ್‌ಗಳು ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವಲ್ಲಿ ಮುಖ್ಯ ಪಾತ್ರವಹಿಸುವುದ್ದಲ್ಲದೇ, ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಕ್ಕಳ ಕೋಣೆಯಲ್ಲಿ ಬುಕ್‌ ಸ್ಟ್ಯಾಂಡ್‌ ಇರಿಸುವುದರಿಂದ ಅವರ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಇಡುವುದನ್ನು ತಪ್ಪಿಸುವುದಲ್ಲದೆ, ಅದು ಅವರಿಗೆ ವ್ಯವಸ್ಥಿತವಾಗಿರುವುದನ್ನು ಸಹ ಕಲಿಸುತ್ತದೆ. ಪುಸ್ತಕಗಳು ಅತಿ ಅಮೂಲ್ಯವಾದವು, ಮತ್ತು ಮಕ್ಕಳು ಅವುಗಳನ್ನು ಪುಸ್ತಕದ ಸ್ಟ್ಯಾಂಡ್‌ಗಳಲ್ಲಿ ಇಡುವುದನ್ನು ಒಮ್ಮೆ ರೂಡಿಸಿ ಕೊಂಡರೆ, ಆ ಅಭ್ಯಾಸವನ್ನು ಅವರ ಮುಂದಿನ ಜೀವನದಲ್ಲೂ ಸಹಾಯವಾಗುತ್ತದೆ. ಮಾರುಕಟ್ಟೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ವಿನ್ಯಾಸದ ಬುಕ್‌ ಸ್ಟ್ಯಾಂಡ್‌ಗಳು ದೊರೆಯುತ್ತದೆ. ನಿಮ್ಮ ಮಕ್ಕಳಿಗಾಗಿ ಗೋಡೆಗೆ ಬುಕ್‌ ಸ್ಟ್ಯಾಂಡ್‌ ಅನ್ನು ಅಳವಡಿಸುವುದಾದರೆ, ಅತಿ ಎತ್ತರದಲ್ಲಿರದಂತೆ ನೋಡಿಕೊಳ್ಳಿ. ಮಗುವಿನ ಕೈಗೆ ಸಿಗುವ ಹಾಗೆ ಇದ್ದರೆ ಒಳ್ಳೆಯದು. ಮಕ್ಕಳು ತುಂಬಾ ಸಣ್ಣವರಾಗಿದ್ದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೆಲದ ಮೇಲಿಡುವ ಬುಕ್ ಸ್ಟ್ಯಾಂಡ್‌ಗಳು ಉತ್ತಮ. ಈಗ ಈ ಬುಕ್ ಸ್ಟ್ಯಾಂಡ್‌, ಬುಕ್ ಶೆಲ್ಫ್ ಅಥವಾ ಬುಕ್‌ ಸ್ಟ್ಯಾಂಡ್‌ಗಳು ಬರಿ ಮರಕ್ಕೆ ಸೀಮಿತವಾಗಿರತ್ತದೆ. ಹಲವು ಮೂಲವಸ್ತುಗಳಲ್ಲಿ ಲಭ್ಯವಿದೆ. ಗ್ಲಾಸು, ಹಲವು ಬಗೆಯ ಮೆಟಲ್‌ಗಳು ಹಾಗೂ ಮರಗಳಿಂದ ತಯಾರಾದ ಬುಕ್‌ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುವ ಮೂಲಕ ಮರದ ಸಾಂಪ್ರದಾಯಿಕ ಬುಕ್‌ ಸ್ಟ್ಯಾಂಡ್‌ಗಳ ಪರಿಕಲ್ಪನೆಯನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು. ಆದರೆ ಮರದ ಬುಕ್ ಸ್ಟ್ಯಾಂಡ್‌ಗಳು ಯಾವುದೇ ಗೃಹಾಲಂಕರಣಕ್ಕೆ ಹೊಂದುತ್ತವೆ. ಇವುಗಳು ವಿಧ ವಿಧವಾದ ಮರ ಮತ್ತು ಬಣ್ಣಗಳಲ್ಲಿ ದೊರೆಯುತ್ತದೆ. ಈ ಮರದ ಸ್ಟ್ಯಾಂಡ್‌ಗಳು ವಿವಿಧ ವಿನ್ಯಾಸ ಹಾಗೂ ಹಲವು ಗಾತ್ರಗಳಲ್ಲಿ ಲಭ್ಯ. ವಿನ್ಯಾಸವು ಒಂದರಿಂದ ಒಂದಕ್ಕೆ ಭಿನ್ನವಾಗಿರುತ್ತವೆ. ಪುಸ್ತಕದ ಸ್ಟ್ಯಾಂಡ್‌ಗಳನ್ನು ಬೆಲೆಬಾಳುವ ಮರಗಳಾದ ಬೀಟೆ, ಸಾಗವಾನಿ, ತೇಗ ಇತ್ಯಾದಿಗಳಲ್ಲಿ ಸಹ ಮಾಡಲಾಗುತ್ತದೆ. ಪುಸ್ತಕಗಳು, ಮ್ಯಾಗಜೀನ್‌ಗಳು, ಪೇಪರ್‌‍ಗಳ ಸಂಗ್ರಹಣೆಯ ಗಾತ್ರದ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಮನೆಯ ಒಳಾಂಗಣಕ್ಕೆ ಹೊಂದುವ ಹಾಗೆ ನೀವು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ಗಳ ವಿನ್ಯಾಸ ಮತ್ತು ಬುಕ್ ಸ್ಟ್ಯಾಂಡ್ ಅಥವಾ ಸ್ಟ್ಯಾಂಡ್‌ïಗಳ ಮೂಲವಸ್ತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬುಕ್‌ ಸ್ಟ್ಯಾಂಡ್ ಅನ್ನು ಮಾಡಿಸುವಾಗ ಅಥವಾ ಕೊಳ್ಳುವಾಗ ಯಾವ ರೀತಿಯದು ನಿಮಗೆ ಅತ್ಯಂತ ಉಪಯುಕ್ತ ಎಂಬುದನ್ನು ಗಮನಹರಿಸುವುದು ಸೂಕ್ತ. ಹಾಗೂ ಹಲವು ಅಂಶಗಳನ್ನು ಗಮನದಲ್ಲಿರಿಸಿ ಕೊಳ್ಳುವುದು ಕೂಡ ಅವಶ್ಯಕ. ತಮ್ಮ ಮನೆಯ ಅಂದಕ್ಕೆ ಹೆಚ್ಚು ಒತ್ತು ಕೊಡುವರು ಕೆತ್ತನೆಗಳನ್ನು ಹೊಂದಿದ ಅಲಂಕಾರಿಕ ಬುಕ್‌ ಸ್ಟ್ಯಾಂಡ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು. ಹಾಗೆಯೇ ಉದ್ದನೆಯ, ಮೂಲೆಯ ಬುಕ್ ಸ್ಟ್ಯಾಂಡ್‌ಗಳು ಅಥವಾ ಬಿಲ್ಟ್-ಇನ್ ಬುಕ್ ಸ್ಟ್ಯಾಂಡ್ ಕಡಿಮೆ ಜಾಗಯಿರುವ ಮನೆಗಳಿಗೆ ಸೂಕ್ತವಾಗಿ ಹೊಂದುತ್ತದೆ. ಗೋಡೆ ಅಥವಾ ಯಾವುದೇ ವಸ್ತುವಿನಲ್ಲಿ ಆಡಕವಾಗಿರುವ (ಬಿಲ್ಟ್-ಇನ್) ಬುಕ್ ಶೆಲ್ಫ್‌ಗಳು ಅತಿ ಹೆಚ್ಚು ಸ್ಥಳ ಉಳಿತಾಯಕವಾಗಿ ಕೆಲಸ ಮಾಡುತ್ತದೆ. ಈ ರೀತಿಯ ಬುಕ್ ಶೆಲ್ಫ್‌ಗಳು ಕಡಿಮೆ ಸ್ಥಳವನ್ನು ಆಕ್ರಮಿಸಿಕೊಳ್ಳುವುದರಿಂದ ಕಡಿಮೆ ಸ್ಥಳವನ್ನು ಹೊಂದಿರುವ ವಾಸಸ್ಥಳಗಳಿಗೆ ಹೊಂದುತ್ತದೆ. ಇವು ಶೇಖರಣಾ ಸ್ಥಳವನ್ನು ಉಳಿಸುವುದರೊಂದಿಗೆ ಮನೆಯ ಅಂದವನ್ನು ಸಹ ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಬಿಲ್ಟ್-ಇನ್ ಬುಕ್ ಕೇಸ್‌ಗಳು ಲಭ್ಯವಿವೆ. ತೆರೆದ ಬುಕ್ ಸ್ಟ್ಯಾಂಡ್‌ಗಳನ್ನು ಕರ್ಟನ್ ಬಳಸಿ ಅಥವಾ ಬಾಗಿಲುಗಳನ್ನು ಅಳವಡಿಸಿ ಮುಚ್ಚಲು ಸಾಧ್ಯ. ಹಾಗೆ ಬಾಗಿಲಿರುವ ಬುಕ್ ಸ್ಟ್ಯಾಂಡ್ ಅಥವಾ ಶೆಲ್ಫ್‌ಗಳಲ್ಲಿ ಪುಸ್ತಕಗಳ ಮೇಲೆ ಧೂಳು ಕೂರುವ ಸಂಭವ ಕಡಿಮೆ ಹಾಗೂ ಇದು ಪುಸ್ತಕದ ಸುರಕ್ಷತೆಯ ದೃಷ್ಟಿಯಿಂದ ಸಹ ಅತಿ ಹೆಚ್ಚು ಸಹಕಾರಿ. ನಿಮ್ಮ ಮನೆಯಲ್ಲಿ ಒಳ್ಳೆಯ ಬುಕ್ ಸೇಲ್ಫ್‌ ಅನ್ನು ಹೊಂದಲು ನೀವು ಹೆಚ್ಚು ಹಣವನ್ನು ಖರ್ಚುಮಾಡುವ ಅವಶ್ಯಕತೆಯೇನು ಇಲ್ಲ. ನಿಮ್ಮ ಮನೆಯಲ್ಲಿ ಖಾಲಿ ಗೋಡೆ ಇದ್ದರೆ ಸಾಕು. ಕೆಲವು ಅರೆಗಳನ್ನು ಜೋಡಿಸುವುದಷ್ಟೇ ನೀವು ಮಾಡ ಬೇಕಾಗಿರುವುದು. ಎಷ್ಟು ಅರೆಗಳು ಬೇಕು ಎಂಬುದು ನಿಮ್ಮ ಮನೆಯ ಗೋಡೆಯ ಸ್ಥಳಾವಕಾಶ ಮತ್ತು ನೀವು ಹೊಂದಿರುವ ಪುಸ್ತಕಗಳ ಸಂಖ್ಯೆಯನ್ನು ಅವಲಂಬಿಸಿದೆ. * ಮೊದಲಿಗೆ ನಿಮ್ಮ ಪುಸ್ತಕಗಳನ್ನು ಗಾತ್ರಗಳಿಗೆ ಅನುಗುಣವಾಗಿ ಜೋಡಿಸಿ ಕೊಳ್ಳಿ, ಇದರಿಂದ ಅರೆಗಳ ನಡುವೆ ಇರ ಬೇಕಾದ ಅಂತರ ತಿಳಿಯಲು ಸಹಾಯವಾಗುತ್ತದೆ. *ನೆಲದಿಂದ ಎಷ್ಟು ಎತ್ತರದಲ್ಲಿ ಕೊನೆಯ ಅರೆ ಇರಬೇಕು ಎಂಬುದನ್ನು ಅಳತೆ ಮಾಡಿಕೊಳ್ಳಿ. * ಪ್ರತಿ ಅರೆಯಲ್ಲಿಡುವ ಅತಿ ದೊಡ್ಡ ಪುಸ್ತಕವನ್ನು ಅಳತೆ ಮಾಡಿ ಕೊಳ್ಳಿ, ಅದಕ್ಕಿಂತ ಮೂರು ಇಂಚು ಹೆಚ್ಚು ಸ್ಥಳವನ್ನು ಅರೆಗಳ ನಡುವೆ ಬಿಡಿ. ಪುಸ್ತಕಗಳನ್ನು ತೆಗೆಯಲು ಸುಲಭವಾಗುತ್ತದೆ. * ಗೋಡೆಗೆ ಜೋಡಿಸಿದ ಅರೆಗಳು ಸ್ಥಿರವಾಗಿದೆ ಎಂದು ಖಚಿತ ಪಡಿಸಿ ಕೊಳ್ಳಿ ಹಾಗೂ ನೀವು ಬಯಸಿದಲ್ಲಿ ಬಣ್ಣ ಹಚ್ಚಿ, ಬುಕ್ ಸ್ಟ್ಯಾಂಡ್‌ಗಳನ್ನು ಅಂದಗೊಳಿಸಿಕೊಳ್ಳಿ. ಈ ಸರಳವಾದ ಅಂಶಗಳನ್ನು ಅನುಸರಿಸಿ ಕಡಿಮೆ ಖರ್ಚಿನಲ್ಲಿ ಪುಸ್ತಕದ ಸ್ಟ್ಯಾಂಡ್‌ನ್ನು ಹೊಂದಲು ಸಾಧ್ಯ. ಸುಂದರವಾದ ಬುಕ್‌ ಕೇಸ್‌ ಹೊಂದುವುದಷ್ಟಕ್ಕೆ ಮುಖ್ಯವಲ್ಲ, ಅದರಲ್ಲಿ ಕಲಾತ್ಮಕವಾಗಿ ಪುಸಕ್ತಗಳನ್ನು ಜೋಡಿಸುವುದು ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಕೆಲವರು ಬುಕ್‌ ಸ್ಟ್ಯಾಂಡ್ ಎಂದರೆ ಕೇವಲ ವಸ್ತುಗಳ ಸಂಗ್ರಹಣೆಗೆ ಮಾತ್ರ ಸೀಮಿತ ಎಂದು ಯೋಚಿಸುತ್ತಾರೆ, ಎಲ್ಲಾ ರೀತಿಯ ವಸ್ತುಗಳನ್ನು ಸುಮ್ಮನೆ ಅದರಲ್ಲಿ ತುಂಬಿರುತ್ತಾರೆ. ಬುಕ್ ಸ್ಟ್ಯಾಂಡ್‌ಗಳಲ್ಲಿ ವ್ಯವಸ್ಥಿತವಾಗಿ ಪುಸ್ತಕ ಜೋಡಿಸಲು ಸ್ಪಲ್ಪ ಗಮನ ಹರಿಸಿದ್ದರೆ ಸಾಕು ಅದು ಸಹ ಮನೆಯ ಇತರ ಪಿಟೋಪಕರಣ ಹಾಗೆ ಮನೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬುಕ್‌ ಸ್ಟ್ಯಾಂಡ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಪುಸ್ತಕಗಳನ್ನು ತುರುಕ ಬೇಡಿ. ಅಕರ್ಷಕವಾಗಿರದ ಹಳೆಯ ಪುಸ್ತಕಗಳನ್ನು ತೆರೆದ ಕಪಾಟುಗಳಲ್ಲಿ ಇಡ ಬೇಡಿ. ಪುಸ್ತಗಳನ್ನು ಲಂಬವಾಗಿ ಅಥವಾ ಅಡ್ಡವಾಗಿ, ಎಲ್ಲಾ ಪುಸ್ತಕಗಳು ಒಂದೇ ಕಡೆ ಮುಖಮಾಡಿರುವ ಹಾಗೆ ಜೋಡಿಸಿ. ಒಂದೇ ರೀತಿಯ, ಬಣ್ಣದ, ಗಾತ್ರದ ಪುಸ್ತಕಗಳನ್ನು ಒಟ್ಟಿಗೆ ಇರಿಸಿದ್ದಲ್ಲಿ ಹೆಚ್ಚು ಅಕರ್ಷಕವಾಗಿ ಕಾಣುತ್ತದೆ. ಲೇಖಕರು, ವಿಷಯ, ಶೀರ್ಷಿಕೆಗಳ ಪ್ರಕಾರವಾಗಿ ಪುಸ್ತಕಗಳನ್ನು ಜೋಡಿಸಿದಲ್ಲಿ ಉಪಯೋಗಕ್ಕೆ ಅನುಕೂಲವಾಗುವುದರ ಜೊತೆಗೆ ಮನಸ್ಸಿಗೆ ಸಹ ಮುದ ನೀಡುತ್ತದೆ. ನಿಮ್ಮ ಮನೆಯ ಆಕಾರ, ಗಾತ್ರ ಬಣ್ಣಗಳಿಗೆ ಸರಿಹೊಂದುವಂತಹ ವಿವಿಧ ಮೂಲವಸ್ತುಗಳ (ಮರ, ಕಬ್ಬಿಣ್ಣ, ಗಾಜು, ಇತ್ಯಾದಿ) ಪುಸ್ತಕದ ಸ್ಟ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನಿಮ್ಮ ಅಭಿರುಚಿ, ಹಣಕಾಸು, ಮನೆಗೆ ಹೊಂದುವ ಹಾಗೆ ಬುಕ್ ಸ್ಟ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ರೀತಿಯ ವಿನ್ಯಾಸಗಳು ಹಾಗೂ ಮಾಹಿತಿಗಳು ಅಂತರ್ಜಾಲದಲ್ಲಿ ಧಾರಳವಾಗಿ ದೊರೆಯುತ್ತದೆ. (ಕನ್ನಡಪ್ರಭ ಪತ್ರಿಕೆಗಾಗಿ ಬರೆದ ಬರಹ. 2011 ರ ಜೂನ್ 21ರಂದು ಪ್ರಕಟವಾಗಿತ್ತು)

No comments: