July 15, 2013

Making Life Interesting!


ಮನುಷ್ಯ ಜೀವನದಲ್ಲಿ ಆಸಕ್ತಿ ಉಳಿಸಿಕೊಳ್ಳಲು ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು ಅನ್ನುವ ಯಾರೋ ಹೇಳಿದ  ಮಾತು (ಹೇಳಿದಾರೋ ಇಲ್ವೊ ಗೊತ್ತಿಲ್ಲ!) ನಾನು ಬದುಕಿನಲ್ಲಿ ಅಳವಡಿಸಿಕೊಂಡ ಮತ್ತು ನಿರಂತರವಾಗಿ ಪಾಲಿಸುತ್ತಾ ಬಂದಿರುವ ಏಕೈಕ ವೇದ ವಾಕ್ಯ. ಆದರ ಕೊನೆ ಮುಟ್ಟುವುದೇನೂ  ನನ್ನ ಪಾಲಿಸಿಯಲ್ಲಿ ಒಳಪಟ್ಟಿಲ್ಲ ಅನ್ನುವುದನ್ನು ಮೊದಲೇ ಹೇಳುತ್ತೇನೆ ಹಾಗೂ ಮುಖ್ಯ ಅಂತ ಇಂದಿಗೂ ಅಂದುಕೊಂಡಿಲ್ಲ.
ಗ್ರಹಗಳ ಗತಿಗಳು ಬದಲಾಗಿ ಹೇಗೆ ತಪ್ಪದೇ ತಿಂಗಳಿಗೊಮ್ಮೆ ಅಮವಾಸ್ಯೆ ಮತ್ತು ಹುಣ್ಣಿಮೆಗಳಾಗುತ್ತಾವೊ...  ಹಾಗೆ ನನಗೂ, ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುವ ಕಾಯಿಲೆ ಎಂದರೆ ಜೀವನದಲ್ಲಿ ಜಿಗುಪ್ಸೆ. ಇರುವುದನ್ನೇಲ್ಲಾ ಬಿಟ್ಟು ಓಡಿ ಹೋಗುವ ಅಲೋಚನೆ. ಆಗೇಲ್ಲಾ ನನಗೆ ಕಂಪ್ಯೂಟರ್‌ ಮತ್ತು ಮೊಬೈಲ್‌ನಲ್ಲಿರುವ ಡಿಲಿಟ್ ಅಪ್ಶನ್ ಬದುಕಿಗೂ ಅನ್ವಯವಾಗಿದ್ರೆ ಎಷ್ಟು ಚೆನ್ನ ಅನ್ಸುತ್ತೆ. ಕೊನೆ ಪಕ್ಷ  ರಿಫ್ರೆಶ್  ಬಟನ್ ಆದರೂ ಪರವಾಗಿರಲಿಲ್ಲ ಅಂತ ಅಂದುಕೊಳ್ಳತ್ತೀನಿ. ಹೀಗೆ ಜಿಗುಪ್ಸೆಯಲ್ಲೇ ಎರಡು ಮೂರು ದಿನ ಕಳೆದ ನಂತರ ಸಡನ್ ಆಗಿ ನನ್ನ ಬದುಕಿನಲ್ಲಿ ಆಳವಡಿಸಿಕೊಂಡಿರುವ  ವೇದ ವಾಕ್ಯ ನೆನೆಪಾಗುವುದು. ಹೀಗೆ ಙ್ಞಾನೋದಯವಾದಗಲೇಲ್ಲಾ ಜೀವನದಲ್ಲಿ ಮತ್ತೆ ಆಸಕ್ತಿ ಕಂಡುಕೊಳ್ಳಲು ನಾನು ಆಯ್ದುಕೊಂಡ ಪ್ರಯೋಗಗಳ ಪಟ್ಟಿ ಸ್ಪಲ್ಪ ಜಾಸ್ತಿ ದೊಡ್ಡದೇ. ನನ್ನ ಆಯ್ಕೆಗಳು ಎಲ್ಲವೂ ತೀರ  ಒಂದಕ್ಕೊಂದು ಸಂಬಂಧವಿಲ್ಲದವು. ಸ್ಪಲ್ಪ ದಿನ ಬಣ್ಣಗಳ ಹಿಂದೆ ಬಿದ್ದು  ಪಾಠ್ ಪೆಯಿಂಟಿಂಗ್ ಹುಚ್ಚು ಹಿಡಿಸಿಕೊಂಡಿದ್ದೆ. ಆದಕ್ಕೆ ಬೇಕಾಗುವ ಸಲಕರಣೆಗಳನ್ನು ಕೊಂಡುಕೊಳ್ಳುವಾಗ ಇದ್ದ ಆಸ್ಥೆ ಕುಂಡಗಳಿಗೆ ಬಣ್ಣ ಬಳಿಯುವಾಗ ಉಳಿದಿರಲಿಲ್ಲ. ವರ್ಷಗಳಿಂದ ಇನ್ನೂ  ಅರ್ಧಂಬರ್ಧ ಬಣ್ಣ ಹಚ್ಚಿಸಿಕೊಂಡೇ ಮೂಲೆಯಲ್ಲಿ ಕುತಿರುವ ಪಾಠ್ ನನ್ನನ್ನು ನಿತ್ಯ ಅಣುಕಿಸಿದಂತೆ ಭಾಸವಾಗುತ್ತದೆ. ಒಂದು ದಿನವೂ ಸೂಜಿ ದಾರ ಹಿಡಿಯದ ನನಗೆ ಒಮ್ಮೆ ಇದಕ್ಕಿದ್ದ ಹಾಗೆ ಟೈಲರಿಂಗ್ ಮೇಲೆ ಆಸಕ್ತಿ ಹುಟ್ಟಿಕೊಂಡಿದಂತೂ ನಿಜ. ಆ ಕಲೆಯ ಮೇಲೆ ಹಿಡಿತ ಸಾಧಿಸಿ ಸ್ಪಂತ ಗಾರ್ಮೆಂಟ್ ಉದ್ಯಮ ಪ್ರಾರಂಭಿಸುವ ವರೆಗಿನ ಕನಸು ಕೂಡ ಕಂಡಿದೆ.  ಪೂರ್ವ ಸಿದ್ಧತೆ ಸಹ ಆಷ್ಟೇ ಜೋರಾಗಿ ನೆಡೆದಿತ್ತು. ಮೆಷಿನ್, ಕತ್ತರಿ ಬಣ್ನ ಬಣ್ಣ್ದ ದಾರ, ಬಟ್ಟೆ ಎಲ್ಲ ಮನೆಗೆ ಬಂತು. ಜೊತೆಗೆ ಮನೆಗೇ ಬಂದು  ಟೈಲಂರಿಗ್ ಪಾಠ ಹೇಳಿಕೊಡುವ ಹುಡುಗಿ.  ಮೂರೇ ದಿನ ಮತ್ತೆ ಆದರ ಸುದ್ದಿನೇ ಎತ್ತಲಿಲ್ಲ. ಪದೇ ಪದೇ ತುಂಡಾಗುವ ಮತ್ತು  ಸೂಜಿಯಿಂದ ತಪ್ಪಿ ಹೋಗುವ ದಾರ ಅದರೊಂದಿಗೆ ಮಧ್ಯದಲ್ಲಿ  ಚಕ್ರದಿಂದ ಜಾರಿ ಹೋಗುವ ಬೆಲ್ಟ್‌ನ ಕಾಟದಿಂದ ರೋಸತ್ತಿ ಟೈಲರಿಂಗ್‌ಗೆ ಎಳ್ಳು ನೀರು ಬಿತ್ತು. ಯಾವಾಗಲೂ ನಮಗೆ ಫಾರಿನ್ ಅಂದರೆ ಒಂಥರ ಆಕರ್ಷಣೆ ಅದು ಅಲ್ಲಿನ ಬಟ್ಟೆ-ಬರೆ ಜನ-ಭಾಷೆ ಯಾವುದು ಅದಕ್ಕೆ ಹೊರತಾಗಿ ಉಳಿದ್ದಿಲ್ಲ. ಹಾಗೇಯೇ ನಾನೂ ಜರ್ಮನಿ ಭಾಷೆ ಕಲಿಯುವ ಸಾಹಸಕ್ಕೆ ಇಳಿದೆ. ನೆಟ್ ಎಲ್ಲಾ ಜಾಲಾಡಿ ಐದಾರು ಸೈಟ್‌ಗಳನ್ನ ಆಯ್ಕೆ ಮಾಡಿಕೊಂಡು, ಈ ಬಾರಿ ಸ್ಪಲ್ಪ ಬುದ್ಧಿವಂತಿಕೆ ಓಡಿಸಿ ಫ್ರೀ ಕೋರ್ಸ್ ಆಯ್ಕೆ ಮಾಡಿಕೊಂಡೆ. ಮೊದಲ ಎರಡು ದಿನ ತುಂಬಾ ಪ್ರಮಾಣಿಕವಾಗಿ ಕಲಿಯುವ ಪ್ರಯತ್ನ ಮಾಡ್ದೆ ಸಹ. ನಂತರ ನನ್ನ ಇನ್‌ಬಾಕ್ಸ್‌ ತೆರೆಯದೆ ಉಳಿಯದ ಜರ್ಮನಿ ಭಾಷೆ ಪಾಠಗಳಿಂದ ತುಂಬಿ ತುಳುಕಲಾರಂಭಿಸಿದಾಗ, ಅದನ್ನು ಅನ್ ಸಬ್‌ಸ್ಕ್ರೈಬ್ ಮಾಡಿ  ಕೈ ತೊಳೆದುಕೊಂಡೆ. ಆಗ ನನಗೆ ಕಾಲೇಜು ದಿನಗಳಲ್ಲಿ ನಮ್ಮ ಇಂಗ್ಲೀಷ್ ಪ್ರೊಫೆಸರೊಬ್ಬರು ಈ ರೀತಿ ಬೇರೆ ದೇಶಗಳ ಭಾಷೆ ಕಲಿಯುವ ಬಗ್ಗೆ  ಸಲಹೆ ಕೇಳಿದಾಗ ಹೇಳಿದ ಮಾತು ನೆನಪಾಯಿತು.You all are already struggling with one foreign language. Do not again do the same mistake ಇದಕ್ಕೂ ಮೊದಲು ಹಿಂದಿ ಪಾಂಡಿತ್ಯ ಸಾಧಿಸುವ ನನ್ನ ಕಾರ್ಯಕ್ರಮದಡಿಯಲ್ಲಿ ಸುಮಾರು ಪರೀಕ್ಷೆಗಳನ್ನು ತೆಗೆದು ಕೊಂಡಿದ್ದೆ. ಇನ್ನೂ ಸ್ಪಲ್ಪ ದಿನ ಯೋಗ ಪ್ರಯೋಗವೂ ನೆಡೆದಿತ್ತು. ಅಮೇಲೆ ಸೊಪ್ಪು ತರಕಾರಿಗಳನ್ನು   ಬೆಳೆಯುವ ಕಡೆಗೂ ಸ್ಪಲ್ಪ ದಿನ ಆಸಕ್ತಿ ಹರಿಸಿದ್ದೆ. ಇವುಗಳೇಲ್ಲಾವುದಕ್ಕಿಂತ ವಿಭಿನ್ನವಾದ ನನ್ನ ಪ್ರಯೋಗ ಎಂದರೆ ಯಾವುದೋ  ಒಂದು ಪ್ರಸಿದ್ಧ  ಕಂಪೆನಿಯ ರೆಪ್ರಸೆಂಟಿಟಿವ್ ಆಗಿ ಅದರ ಉತ್ಪನ್ನಗಳನ್ನು ತರಿಸಿ ಮಾರಟಮಾಡುವುದು.  ಅದರ್ಲ್ಲಿ  ಬಾಕಿ  ಕೊಡುವವರ ಪಟ್ಟಿ ಹನುಮಂತನ ಬಾಲವಾಗಿ ಕೈ ಸುಟ್ಟು ಕೊಂಡಿದಾಯಿತು.
ಲೈಫನ್ನು  ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ  ಪ್ರಯತ್ನಗಳನ್ನು ಮಾಡ್ತಾನೆ ಇರ್ತೀನಿ.  ವರ್ಲಿ ಚಿತ್ರಕಲೆ, ಕ್ರೋಷ, ಡ್ರೈವಿಂಗ್, ಸ್ವಿಮಿಂಗ್, ಪ್ರಾಣಯಾಮ ಕೆಲವು ನೆನಪಲ್ಲಿ ಉಳಿದುಕೊಂಡಿರುವ ಉದಾಹರಣೆಗಳಷ್ಟೆ. ಅವುಗಳು ಬದಲಾಗುತ್ತಲೇ ಇರುತ್ತವೆ ಮತ್ತು ಯಾವುದೊಂದು  ಹೆಚ್ಚು ಕಾಲ ಉಳಿದ್ದಿಲ್ಲ. ಒಂದರಲ್ಲೂ ಸಹ ಯಶಸ್ಸು ಕಂಡಿಲ್ಲವಾದರೂ ನನ್ನ ಈ ದ್ಯೇಯಕ್ಕೆ ಮಾತ್ರ  ಕೊನೆಯವರಗೂ ಬದ್ಧಳಾಗಿರುತ್ತೇನೆ.

ಈಗ ಸದ್ಯಕ್ಕೆ  ಗಿಟಾರ್‌ ಕೈಗೆ ಬಂದಿದೆ.    

No comments: