January 24, 2013

ವಾಸನೆ, ನೆನಪು ಮತ್ತು ಅವನು!


ನನ್ನ ನೆನಪುಗಳಿಗೆ ಸಂಬಂಧಿಸಿದಂತೆ ನನಗೆ ಒಂದು ವಿಚಿತ್ರವಾದ ಕಾಯಿಲೆ ಇದೆ. ಕೆಲವು ಬಾರಿ ಎಷ್ಟು ನೆನಪು ಮಾಡಿಕೊಂಡರು ಎದುರಿಗೆ ಇರೋ ವ್ಯಕ್ತಿಯ ಹೆಸರೇ ನೆನಪಿಗೆ ಬರುವುದ್ದಿಲ್ಲ. ಇನ್ನೂ ಕೆಲವು ಸಾರಿ ಯಾವುದೋ ಒಂದು ಪ್ರಾಣಿ ಅಥವಾ ವಸ್ತುವನ್ನು ನೋಡಿದ ತಕ್ಷಣ ಅದಕ್ಕೆ ಸಂಬಂಧನೇ ಇಲ್ಲದೆ ಇರೋ  ಇನ್ಯಾರೋ ಮನುಷ್ಯ ನೆನಪಾಗುವುದು. ನಮ್ಮ ಮನೆಯ ನಾಯಿ ರೋನಿ ನೋಡಿದಾಗಲ್ಲೇಲ್ಲಾ ಯಾವುದೋ ಅಂದಕಾಲತ್ತಿನಲ್ಲಿ ನಮ್ಮ ಮನೆಗೆ ಬರುತ್ತಿದ್ದ ದಾಸಯ್ಯ ಪ್ರತಿ ಬಾರಿಯೂ ನನ್ನ ಕಣ್ಣು ಮುಂದೆ ಬರುತ್ತಾನೆ. ಇನ್ನೂ ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರ್ ಕಂಡಾಗ ನಮ್ಮ ಅಜ್ಜಿ ನೆನಪಾಗೋದು. ಈ ರೀತಿ ಹೋಲಿಕೆಗೆ ಯಾವುದೇ ಒಂದು ನಿರ್ದಿಷ್ಟ ಕಾರಣ ಮಾತ್ರ ಎಷ್ಟು ಯೋಚಿಸಿದರು ನೆನಪಿಗೆ ಬಾರದು.  ವಾಸನೆ ಮತ್ತು  ನನ್ನ ನೆನೆಪಿಗಳಿಗಂತೂ ಜನ್ಮ ಜನ್ಮಾಂತರದ ಸಂಬಂಧ. ಕೆಲವು ವಾಸನೆಗಳಂತೂ ಕೇಳೋದೆ ಬೇಡ ನನ್ನ ನೆನಪಿನ ದೋಣಿಯನ್ನು ಎಲ್ಲಿಂದ ಎಲ್ಲಿಗೋ ತೇಲಿಸಿ ಬಿಡುತ್ತದೆ. ನೇಲ್ ಪಾಲಿಶ್ ರಿಮೂರ್ ಅಪರೇಷನ್ ಥೆಟರ್ ನೆನಪು ತರಿಸಿದರೆಮೀನು ವಾಸನೆ ಮೂಗಿಗೆ ಬಡಿದ ತಕ್ಷಣ ನಮ್ಮೂರ ಮಂಗಳವಾರ ಸಂತೆ ನೆನೆಪಾಗುತ್ತದೆ. ಸಗಣಿ ವಾಸನೆಯಿಂದ ಆಗ ತಾನೇ ಕೊಟ್ಟಿಗೆ ಕೆಲಸ ಮುಗಿಸಿ ಕಾಲಿಗೆ ಸಗಣಿ ಮೆತ್ತಿಸಿ ಕೊಂಡ ಬಂದ ಅಮ್ಮ ನೆನಪಾಗುತ್ತಾಳೆ.  ಇನ್ನೂ  ಈರುಳ್ಳಿ ವಾಸನೆ ಸಣ್ಣಲ್ಲಿ ಯಾವಾಗಲೋ ಅಪ್ಪನೊಡನೆ ನೋಡಿದ ಯಕ್ಷಗಾನ ಮತ್ತು ಅಲ್ಲಿನ ಮಸಾಲೆ ಮಂಡಕ್ಕಿಯ ನೆನೆಪು ಮೂಡಿಸುತ್ತದೆ.  ಮಳೆ ಹನಿ ಬಿದ್ದ ಮಣ್ಣಿನ ವಾಸನೆಯಂತೂ ನನ್ನ ನೆನಪನ್ನು  ನೇರವಾಗಿ  ಬಾಲ್ಯಕ್ಕೆ  ತಳ್ಳುತ್ತೆ. ಮಳೆಯಲ್ಲಿ ಆಟವಾಡಿ ಮನೆಯೆಲ್ಲಾ ಕೆಸರ ಹೆಜ್ಜೆ ಮಾಡಿ, ದೊಡ್ಡವಳಾದ ತಪ್ಪಿಗೆ ಅಮ್ಮನಿಂದ ತಂಗಿ-ತಮ್ಮ ಇಬ್ಬರ ಪಾಲಿನ ಪೆಟ್ಟನ್ನು ನಾನೇ ತಿಂದ ನೆನೆಪು ತಾಜಾವಾಗಿಸುತ್ತದೆ.  ಬೆವರಿನ  ವಾಸನೆ ನಾನು ಶಾಲೆಗೆ ಹೋಗುವಾಗ ಸದಾ ತುಂಬಿರುತ್ತಿದ್ದ ಗುರುಶಕ್ತಿ ಬಸ್ ಅನ್ನು  ನೆನಪಿಸಿದರೆ, ಪಬ್ಲಿಕ್ ಟಾಯ್ಲೆಟ್ ನಮ್ಮ ಹಾಸ್ಟೇಲನ್ನು ನೆನಪಿಸುತ್ತದೆ. ಹೀಗೆ ನನ್ನ ವಾಸನೆ ಮತ್ತು ನೆನಪಿನ ನಿಕಟ ಸಂಬಂಧದ  ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಆದರೆ ಈ ವಾಸನೆ  ಮತ್ತು ನೆನಪಿನ ಪುರಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಮೊದಲೇಲ್ಲಾ ಪ್ರತಿಯೊಂದು ವಾಸನೆಗೂ ಬೇರೆಯಾದ ನೆನಪುಗಳಿದ್ದವು. ಆದರೆ ಈಗ ಪ್ರತಿಯೊಂದು ವಾಸನೆಯು ಅವನ ನೆನಪಿನ ಸುತ್ತಲೇ ಸುತ್ತುತ್ತವೆ. ಬೆಳಿಗ್ಗೆ ಎದ್ದ ತಕ್ಷಣದ ಕಾಫಿ ಡಿಕ್ಷಾನ್‌ನಿನ ಘಮಲಿನಿಂದ ಹಿಡಿದು, ರಾತ್ರಿ ಮಲಗುವ ಮುನ್ನ ತಿನ್ನುವ ಚಾಕೊಲೇಟಿನ ತೆಳು ಕಂಪಿನವರೆಗೂ  ಬರಿ ಅವನಿಗೆ ಅಂಟಿ ಕೊಂಡ ನೆನಪೇ. ಬೆಳಗ್ಗಿನ ಚಳಿಯಲ್ಲಿ ಬಿಸಿ ಕಾಫಿಯ ಪರಿಮಳ ಮೂಗನ್ನು ಆರಳಿಸುತ್ತಿದ್ದಂತೆಇಷ್ಟು ದುಡ್ಡು ಕೊಟ್ಟು ನಾವೇ ಸಕ್ಕರೆನೂ ಹಾಕೋ ಬೇಕಾ ಅಂತ ಕಾಫಿ ಡೇಯಲ್ಲಿ ಅವನು ಗೊಣಗಿಕೊಂಡು, ಕಾಫಿಗೆ ಸಕ್ಕರೆ ಸುರಿದು ಕೊಳ್ಳೊ ಅವನ ಪರಿ ನನ್ನನ್ನು ಬೆಚ್ಚಗಾಗಿಸುತ್ತದೆ. ಇನ್ನೂ ನನಗೆ ವಾಂತಿ ಬರಿಸುವ ಸೀಗರೇಟ್ ವಾಸನೆಯೂ, ಅವನ ಮೊದಲ ಭೇಟಿಯನ್ನು ನೆನಪಿಸಿ ತುಟಿಯಲ್ಲಿ ಮಂದಹಾಸ ಮೂಡಿಸುತ್ತದೆ. ಆವತ್ತೇ ಅಲ್ವಾ ಅವನು ನಿನ್ನ ಮೂಗು ನಾಯಿ ಮೂಗು ಅಂತ ಹೇಳಿದ್ದು. ಲಿಂಬೆ ಹಣ್ಣಿನ ವಾಸನೆ ಮೂಗಿಗೆ ರಾಚುತ್ತಿದ್ದಂತೆ ಅವನ ಪ್ರಿಯವಾದ ಹುಳಿ ಹುಳಿಯಾದ  ಚಿತ್ರಾನ್ನದ ನೆನಪು ಮನಸ್ಸಿಗೆ ಮುದ ನೀಡುತ್ತೆ.  ಹೊಟ್ಟೆ ತೊಳಿಸುವ ಎಸಿಯ  ಗಾಳಿಯ ವಾಸನೆ ಅವನ ಕಾರನ್ನು ನೆನಪಿಗೆ ತರುತ್ತದೆ. ಹೀಗೆ ಇನ್ಯಾವುದೋ ವಾಸನೆ ಅವನ ಡೀಯೊ ನೆನಪಿಸಿದರೆ, ಮತ್ತೊಂದು ಅವನ ಬಿಸಿಯುಸರನ್ನು ನೆನಪಿಸಿ ಕಚಗುಳಿ ಇಡುತ್ತದೆ. ಹೀಗೆ ಪ್ರತಿ ಕ್ಷಣವೂ ನನ್ನ  ಕಾಡುವ ವಾಸನೆಗಳು ಅವನ ನೆನಪಿನಲ್ಲಿ ನನ್ನ ಇರುವನ್ನೆ ಮರೆಸುತ್ತವೆ.

ಅವನ ನೆನಪಿನ ಗುಂಗಿನಲ್ಲಿದ್ದ ನನಗೆ ತಕ್ಷಣ ಮೂಗಿಗೆ ಬಡಿದಿದ್ದು ಹಾರ್ಲಿಕ್ಸ್ ವಾಸನೆ... ಆಗಾಗಲೇ ನೆನಪಾಗಿದ್ದು ನನಗೆ ಅಡುಗೆ ಮನೆಯಲ್ಲಿ ಒಲೆ ಮೇಲೆ ಇಟ್ಟು ಮರೆತು ಬಂದ ಹಾಲಿನದು.

(Published in Vijaya Next on 13/1/20013)

No comments: