January 18, 2013

ಮೀನಿನ ಮನೆ


ಪುಟ್ಟ ಮನೆಯಕಾರದ ಗಾಜಿನ  ಪೆಟ್ಟಿಗೆ, ಅದರೊಳಗೆ ಪುಣಾಣಿ ಬಣ್ಣ ಬಣ್ಣದ ಮೀನುಗಳು. ಮೊದಲಿನಿಂದಲೂ ನನಗೆ ಅತಿ ಪ್ರಿಯವಾದದ್ದು.  ಕಂಡ ಕಂಡಲ್ಲಿ ಅದರ ಮುಂದೆ ನಿಂತು, ಕಣ್ಣು ಮಿಟುಕಿಸದೆ ಆದನ್ನು ನೋಡುವುದೆಂದರೆ ಎನ್ನೋ ಖುಶಿ. ಪಾರದರ್ಶಕ ಮನೆ ಅದರೊಳಗೆ ನೀರು. ನೀರನ್ನು ಸೀಳಿ ಬೆಳಕು.  ತಳದಲ್ಲಿ ಮರಳು, ತರಾವರಿ ಕಲ್ಲುಗಳು, ಚಿಕ್ಕ ಚಿಕ್ಕ ಶಂಖ, ಕವಡೆ, ಕಪ್ಪೆ ಚಿಪ್ಪುಗಳ ಹಾಸು ಸದಾ ಆಕರ್ಷಣೆಯ ಬಿಂದು.  ಇವುಗಳನ್ನೇಲ್ಲಾ ಮೀರಿ ಮನಸ್ಸಿಗೆ ನಾಟುತ್ತಿದ್ದಿದ್ದು ಕೆಂಪು, ಕಪ್ಪು, ಬಿಳಿ, ಕೇಸರಿ, ಹಳದಿ, ನೀಲಿ, ಬಂಗಾರ ಬಣ್ಣಗಳ ಹಲವು ಬಗೆಯ ಮೀನುಗಳು. ಒಂದು ಮೀನು ಗಾಳಿ ಪಟದ ಆಕಾರದಲ್ಲಿದ್ದರೆ, ಇನ್ನೊಂದು ಬಲೂನಿನ ಹಾಗೆ, ಮತ್ತೊಂದು ಅಚ್ಚ ಬಿಳಿಅದರ ಜೋಡಿ ಕಡು ಕಪ್ಪು, ಮಗದೊಂದು ಎರಡು ಮೂರು ಬಣ್ಣಗಳ ಸಮಿಶ್ರಣ, ಇನ್ಯಾವುದೊಂದರ ಬಾಲ ಬೀಸಣಿಗೆಯ ತದ್ರೂಪ. ಒಂದೊಂದು ಒಂದೊಂದು ತರ, ಒಂದಕ್ಕಿಂತ ಒಂದು ವಿಭಿನ್ನ.  ಒಂದೇ ಟ್ಯಾಂಕ್‌ನಲ್ಲಿ ಒಗಟ್ಟಿನಲ್ಲಿರುವ ಬಗೆ ಬಗೆಯ ಮೀನುಗಳು. ಪ್ರತಿಯೊಂದರ  ಚಲನವಲನವೂ ಪೂರ್ತಿ ಬೇರೆ ಬೇರೆ. ಒಂದು ಜೋಡಿ ಸದಾ ಒಂದಕ್ಕೊಂದು ಅಂಟಿಕೊಂಡಂತೆ ಇದ್ದರೆ. ಇನ್ನೊಂದು ಬಗೆಯದು ಒಂದರ ಬಾಲ ಹಿಡಿದು ಇನ್ನೊಂದು ಜೂಟಾಟವನ್ನು ನೆನಪಿಸುತ್ತದೆ. ಇವರೆಡರಕ್ಕಿಂತ ಭಿನ್ನವಾಗಿ ಇನ್ನೊಂದು ಜಾತಿಯ ಮೀನು, ಒಂದಕ್ಕೊಂದು  ಮುತ್ತಿಡುವ, ಪಿಸುಗುಟ್ಟುವ  ಇವುಗಳು ಯುವ ಪ್ರೇಮಿಗಳ ತದ್ರೂಪ. ಒಂದು ಜಾತಿಯ ಮೀನು ಪ್ರಪಂಚದ ಎಲ್ಲಾ ತಲೆನೋವು ತನ್ನದೇ ಎಂಬಂತೆ ಗಡಿಬಿಡಿಯಲ್ಲಿ ಓಡಾಡುತ್ತಿದ್ದರೆ, ಇನ್ನೊಂದು ಈ ಲೋಕದ ಗೋಡ ನನಗೇಕೆ ಎಂಬಂತೆ ತಣ್ಣಗೆ ತನ್ನಷ್ಟಕ್ಕೆ ತಾನು.  ಹೇಳಿದಷ್ಟು ಮುಗಿಯದು.   ನಾವು ಏನು ಕಮ್ಮಿ ಇಲ್ಲ ಎನ್ನುವಂತೆ   ಮೀನುಗಳೊಂದಿನ ಬಣ್ಣದ ಗೊಂಬೆಗಳ ಪೈಪೋಟಿ. ಆಕ್ವೇರಿಯಂಗೆ ಇನ್ನಷ್ಟು ರಂಗು. ನೀರಿನ ಗುಳ್ಳೆಗಳನ್ನು ಉಗುಳುವ ಮೀನುಗಾರ, ಉಚ್ಚೆ ಹುಯ್ಯುವ ಪುಟ್ಟ ಬಾಲಕ, ಪುಟ್ಟ ದೋಣಿಯೊಂದಿಗೆ ಹುಟ್ಟು ಹಾಕುವ ಅಂಬಿಗ, ಈಜುಗಾರ ಹತ್ತು ಹಲವು ತರದ ಗೊಂಬೆಗಳು ಹೆಚ್ಚು ಹೆಚ್ಚು ಹೊತ್ತು ನನ್ನನ್ನು ಈ ಪುಟ್ಟ ಮಾಯಲೋಕದ ಮುಂದೆ ಕಾಲ ಕಳೆಯುವಂತೆ ಮಾಡುತ್ತಿದ್ದವು. ಅವುಗಳನ್ನು ನೋಡಲು ಸಿಕ್ಕ ಅವಕಾಶವನ್ನು ತಪ್ಪಿಸಿ ಕೊಳ್ಳದೆ ತೃಪ್ತಿಯಾಗುವಷ್ಟು ಬಣ್ಣದ ನೀರಿನ ಲೋಕವನ್ನು ಕಣ್ಣಿನಲ್ಲಿ ತುಂಬಿ ಕೊಳ್ಳಲು ಪ್ರಯತ್ನಿಸುತ್ತಿದ್ದೆ. ಮೊದಲೇಲ್ಲಾ ಆಕ್ವೇರಿಯಂ ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲಿ ಇದ್ದಿದ್ದು ಬಹಳ ಅಪರೂಪ.  ಆಗೇಲ್ಲಾ ಹೋಟಲ್‌ಗಳು ಅಥವಾ ದೊಡ್ಡ ದೊಡ್ದ ಮನೆಗಳಲ್ಲಿ  ಮಾತ್ರ ಅಕ್ವೇರಿಯಂ ಸೀಮಿತ ಹಾಗೂ ಅದು ಶ್ರೀಮಂತರ ಸೊತ್ತು ಎಂಬುದು ನನ್ನ ಬಲವಾದ ನಂಬಿಕೆಯಾಗಿತ್ತು.ಆದರೂ ಅಪ್ಪನಿಂಗೆ ದಂಬಾಲು ಬಿದ್ದು ಅಕ್ವೇರಿಯಂ ಕೊಡಿಸಿಕೊಂಡು, ಕ್ಲೀನ್ ಮಾಡಲು ಹೋಗಿ ಒಡೆದು ಹಾಕಿದ್ದು ಸ್ಪಲ್ಪ ಹಳೆಯ ಕಥೆ.  ಕಾಲ ಕಳೆದಂತೆ ಅಕ್ವೇರಿಯಂಗಳು ಸಾಮಾನ್ಯವಾದರೂ ಅದರೆಡೆಗಿನ ಪ್ರೀತಿ ಮಾತ್ರ ಬೆಳೆಯುತ್ತಲೇ ಹೋಯಿತು.  ಈಗಲೂ ಮಗಳಿಗೆ ಮೀನು ತೋರಿಸುವ ನೆಪದಲ್ಲಿ ಅದರ ಮುಂದೆ ನಿಲ್ಲುವುದು, ಹೋಟೇಲ್‌ಗಳಲ್ಲಿ ಸಾದ್ಯವಾದಷ್ಟು ಫಿಶ್ ಟ್ಯಾಂಕ್‌ಗಳ ಹತ್ತಿರದ ಸ್ಥಳವನ್ನು ಆರಿಸಿಕೊಳ್ಳುವುದು ಇವತ್ತಿಗೂ ಬಿಟ್ಟಿಲ್ಲ.

ನನ್ನ ಆಕ್ವೇರಿಯಂ ಪ್ರೀತಿಗೆ ಈ ದೀಪಾವಳಿಯಲ್ಲಿ ತಂಗಿಯಿಂದ ಒಂದು ಪುಟ್ಟ ಫಿಶ್ ಟ್ಯಾಂಕ್ ಉಡುಗೊರೆಯಾಗಿ ದೊರೆತ ಮೇಲಂತೂ ಕೇಳುವುದೇ ಬೇಡ. ಈಗ ದಿನದ ಹೆಚ್ಚಿನ ಹೊತ್ತು  ಅದರದೇ ಧ್ಯಾನ. ಮೊದಲು ಬಣ್ಣಗಳಿಂದ ಗುರುತಿಸುತ್ತಿದ ಮೀನುಗಳ ಹೆಸರುಗಳು ಈಗ ಚಿರಪರಿಚಿತ. ಮೋಲಿ, ಗಪ್ಪಿ, ಫ್ಯಾನ್ಸಿ ಗಪ್ಪಿ, ಪ್ಲಾಟಿ, ಎಂಜಲ್, ಟೆಟ್ರಾ ಇತ್ಯಾದಿ ಇತ್ಯಾದಿ.  ಗೂಗಲಿಸಿದ್ದಷ್ಟು ತೆರೆದು ಕೊಳ್ಳುವ ಮೀನಿನ ಪ್ರಪಂಚ.  ಕೇಳಿದಷ್ಟು , ತಿಳಿದಷ್ಟು ಮುಗಿಯದ  ಕುತೂಹಲಕಾರಿ ಮಾಯ ಮತ್ಸ್ಯ ಲೋಕ.
ಅಕ್ವೇರಿಯಂ ಹೊಂದಲು ಸದಾ ನಿರಾಕರಿಸುತ್ತಿದ್ದ ಅವನಿಗೂ ಈಗ ಈ ಮೀನುಗಳ ಮೇಲೆ ಆಕ್ಕರೆ ಹಾಗೂ ಫಿಶ್ ಟ್ಯಾಂಕ್ ಮುಂದೆ ಕಾಲಹರಣ ಅವನ ಪ್ರಿಯವಾದ ಹವ್ಯಾಸಗಳಲ್ಲಿ ಒಂದಾಗಿದೆ.  ಅವನ ಸಾಥ್ ದೊರೆತ ಮೇಲೆ ಆಕ್ವೇರಿಯಂ, ಅದರೊಳಿಗಿನ ಬಣ್ಣ ಬಣ್ಣದ ಮೀನುಗಳು , ಕಪ್ಪೆಚಿಪ್ಫು, ಶಂಖ, ಮರಳು, ಕಲ್ಲುಗಳೆಲ್ಲಾ ಇನ್ನಷ್ಟೂ ಮನಸ್ಸಿಗೆ ಹತ್ತಿರವಾಗಿವೆ ಹಾಗೂ ಪ್ರಿಯವಾಗಿದೆ.

(ವಿಜಯ ನೆಕ್ಸ್ಟ್‌ನ "ಅವಳ ಡೈರಿ" ಆಕಂಣದಲ್ಲಿ 18/1/2013ರಂದು  ಪ್ರಕಟವಾದ ಬರಹ)

No comments: