January 6, 2018

ಬೆಳ್ಳಿ ಬೆಳಗು!

ನಿನ್ನೆ ಸುನಿ, ಮಗಳನ್ನು ಸ್ಕೂಲ್ ಬಸ್ಸಿಗೆ ಬಿಡೊಕ್ಕೆ ಹೋಗಿ ವಾಪಸ್ ಬರ್ತಾ  ಅವನ ಮೊಬೈಲ್ ಫೋನಿನಲ್ಲಿ  ತೆಗ್ದ ಎರಡು ಫೋಟೊ ತೋರಿಸ್ದ.     ವಾವ್ ಎಂಥಾ  ಸುಂದರ ಬೆಳಗಿನ ಪೋಟೊಗಳು ಅವು. ಇದು ನಾನು ಇರೋ ಊರು, ಇಲ್ಲೂ ಬೆಳಗು ಇಷ್ಟು ಚೆನ್ನಾಗಿ ಆಗುತ್ತೆ ಅಂತ ರಿಯಾಲೈಜ್ ಆಗೋಕ್ಕೆ ಸ್ಪಲ್ಪ ಟೈಮ್ ಹಿಡಿತು. ನನಗೆ ಹೇಳಿಲ್ಲ ಯಾಕೆ ಅಂತ  ಒಂದಷ್ಟು ಹೊತ್ತು ಅವನಿಗೆ ಬೈಯ್ಕೊಂಡೆ. ಫೋಟೊಗಳನ್ನ ನನ್ ಫೋನಿಗೆ ಶೇರ್ ಮಾಡ್ಕೊಂಡು ಒಂದು ಇಪ್ಪತ್ತು ಸಾರಿ ನೋಡ್ದಿರೂ ನಂಗೆ ಸಮಾಧಾನ ಆಗಿಲ್ಲ.   ಇಷ್ಟು ಸುಂದರವಾದ ಬೆಳಗು ಎಂಜಾಯ್ ಮಾಡ್ದೆ ಅಡುಗೆಮನೆಯಲ್ಲಿ ವೇಸ್ಟ್‌ ಮಾಡ್ತಾ ಇರೋದೊಕ್ಕೆ ಹೊಟ್ಟೆ ಉರಿದು ಹೋಯಿತು. ಅದರ ಜೊತೆಗೆ ಆ ಫೋಟೋಗಳು ಅವನ ವಾಟ್ಸಪ್ ಸ್ಟೇಟಸ್ ಆದಾಗ  ನನ್ ಹೊಟ್ಟೆಯಲ್ಲಿರೊ ಬೆಂಕಿಗೆ ಅದು ತುಪ್ಪ ಆಯಿತು.  ( ಈ ರೀತಿ ಛಾನ್ಸ್ ಸುನಿ ಮಿಸ್ ಮಾಡೋದೆ ಇಲ್ಲ) ಇಡೀ ದಿನ ಒಂಥರಾ ತಲೆಲ್ಲಿ ಹುಳ, ಹೊಟ್ಟೆಲ್ಲಿ ಉರಿ.  ಏನಾದರೂ ಆಗಲಿ ನಾಳೆ ಬೆಳ್ಗೆ ಅಲ್ಲಿಗೆ ಹೋಗಲೇ ಬೇಕು ಅಂತ ಡಿಸೈಡ್ ಮಾಡ್ಕೊಂಡು ಮಲಗ್ದೆ.

ನಿಜವಾಗಲೂ, ಜೀವನದಲ್ಲಿ ಯಾವತ್ತು ಬೆಳಗ್ಗೆ ಬೇಗ ಆಗಲಿ ಅಂತ ಬಯಸಿರಲಿಲ್ಲ. ಕನಿಷ್ಟ ಮೂರು ಸಾರಿಯಾದರೂ ಅಲ್ರಾಮ್ ಸ್ನೂಜ಼್ ಮಾಡಿ ಕೊನೆಗೆ ವಿಧಿಯಿಲ್ಲದೆ ಹಾಸಿಗೆಯಿಂದ ಎಳೋ ನಾನು, ಇವತ್ತು ಫಸ್ಟ್ ಸಾರಿಗೆ ಅದೂ ಊರಿಗಿಂತ ಮುಂಚೆ ಎದ್ದಾಗ, ಸುನಿಗೆ ಗಾಬರಿ!  ಏನಾಯಿತೇ ಅಂದ, ಅಲ್ಲಿಗೆ ಹೋಗಬೇಕಲಾ ಅಂದೆ ನಾನು. ಹುಚ್ಚು ನಿನಗೆ ಅನ್ನೊ ರೀತಿಯಲ್ಲಿ  ನಕ್ಕು ತಿರುಗಿ ಮಲಗ್ದ‌. (ಬೇರೆ ದಿನ ಆಗಿದ್ರೆ ಸುಮ್ನೆ ಬಿಡ್ತಾ ಇರಲಿಲ್ಲ ನಾನು).

ಮಗಳು ಸ್ಕೂಲ್‌ಗೆ ಹೊರಟ ತಕ್ಷಣ, ಅಡುಗೆ, ಮನೆ, ಕೆಲಸ  ಎಲ್ಲಾ ಹಾಗೇ ಬಿಟ್ಟು  ಅರ್ಧ ಘಂಟೆಲ್ಲಿ ಬರ್ತೀನಿ ಅಂತ ಹೇಳಿ ನಾನು ಅವರ ಹಿಂದೆ ಓಡ್ದೆ . ಸುನಿ ನಿನ್ನೆ ಫೋಟೋ ತೆಗ್ದ ಜಾಗಕ್ಕೆ. ನಾನು ಕಣ್ಣು ಅಲಾಡಿಸದೆ ನೋಡ್ತಾನೆ ಇದ್ದೆ ತುಂಬಾ ಹೊತ್ತು. ನಿಜವಾಗಲೂ ಸುಂದರ, ಅತಿ ಸುಂದರವಾದ ಬೆಳಗು. ಆ ಫೋಟೋ ಖಂಡಿತ ಇಲ್ಲಿನ ಅರ್ಧ ಭಾಗಕ್ಕೂ ಸಮ ಇಲ್ಲ ಅನ್ಸತು . ದಾರಿಗೆ ಆಕಾಶದಿಂದ ಯಾರೋ ಬೆಳಕು ಚೆಲ್ಲುತ್ತಿರೊ ಹಾಗೆ, ಬೆಳಕಿನ ಕಿರಣಗಳು ಮರದ ಎಲೆಗಳನ್ನು ತೂರಿಕೊಂಡು ಬರೋ ದೃಶ್ಯ ಪದಗಳಲ್ಲಿ ಹೇಳೊಕ್ಕೆ ಆಗೊಲ್ಲ. ನಾನು ಬರಿ ಒಂದಷ್ಟು ಜಾಗದಲ್ಲಿ  ಮಾತ್ರ  ಬೆಳಗು ಚೆನ್ನಾಗಿರುತ್ತೆ  ಅಂದ್ಕೊಂಡಿದ್ದೆ. ಅದ್ರೆ ಪೂರ್ತಿ ಬೆಳಗ್ಗೆ ಇಡೀ ಇಡಿಯಾಗಿ ಸುಂದರ.   ನನ್ ಪೆದ್ದುತನಕ್ಕೆ ನಂಗೆ ನಗು ಬಂತು.

ಎಷ್ಟೋ ವರ್ಷಗಳಿಂದ  ದಿನ ನೋಡುವ ಬೇಲಿ ಸಾಲಿನ  ಹೂವುಗಳು ಕೂಡ ನನ್ನ ಕಣ್ಣಿಗೆ ಹೊಚ್ಚ ಹೊಸದಾಗಿ ಕಂಡವು. ಕಾಡಿನ ಬಣ್ಣ ಬಣ್ಣದ ಸುಂದರಿಯರು ಅವುಗಳು. ಎಲೆ, ಬಳ್ಳಿ, ಹೂ, ಮರ, ಭತ್ತದ ಗದ್ದೆಗಳು , ಮಣ್ಣು, ಕಲ್ಲು, ರಸ್ತೆ ಪ್ರತಿಯೊಂದು ವಾವ್ !  ಎಲ್ಲಾ ಇಬ್ಬನಿಯಲ್ಲಿ ನೆಂದು ಬಿಸಿಲಿನಲ್ಲಿ ನಿಂತು ಹೊಳೆಯುವುದನ್ನು  ನೋಡಿದರೆ ಮಾತ್ರ ಅನುಭವಕ್ಕೆ ಬರುವುದು. ಅದನ್ನು ಒಂದಷ್ಟು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಅಸಾಧ್ಯ ಹಾಗೂ ಅದು ಕಲ್ಪನೆಗೂ ಸಿಗದ ಮಾತು.

 ಸುತ್ತ ಮುತ್ತ ಇರೋ ಮನಸ್ಸಿಗೆ ಇಷ್ಟು ಖುಷಿ ನೀಡುವ ಸುಂದರವಾದ ಪರಿಸರ ಎಂಜಾಯ್ ಮಾಡ್ದೆ ಬೇರೆ ಎಲ್ಲೋ ಸಂತೋಷ ಇದೆ ಅಂತ  ಜೀವನ  ಕಳೆದಿರುವುದಕ್ಕೆ ನಿಜವಾಗಲೂ ಬೇಸರ ಆಯಿತು. ಆ ಕ್ಷಣದಲ್ಲಿ ನಂಗೆ "ಇರುವುದೇಲ್ಲಾ ಬಿಟ್ಟು ..... .. " ಮಾತು ನೆನಪಾಗದೆ ಇರ್ಲಿಲ್ಲ.

ಸೃಷ್ಟಿಗೆ ಸೃಷ್ಟಿನೇ ಸಾಟಿ. ನಿತ್ಯವೂ ನೂತನ. ಪ್ರತಿ ಬೆಳಗು, ಪ್ರತಿ ಬೆಳಕಿನ ಕಿರಣವು ವಿಭಿನ್ನ. ಯಾವ ಉಪಮೇಯ ಅಥವಾ ಇನ್ಯಾವದೋ ಪದಗಳಲ್ಲಿ ವರ್ಣಿಸಿದರೂ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ ಇಲ್ಲ.  ಅನುಭವಿಸಲು, ಆಸ್ವಾದಿಸಲು  ಮನಸ್ಸಿರಬೇಕು ಅಷ್ಟೇ.   ಆಗ ಸಮಯ ತಾನಾಗಿಯೇ ಹೊಂದಿಕೆ ಆಗುತ್ತದೆ.  ನಾವು ಎಷ್ಟೇ ದುಡ್ಡು ಕೊಟ್ಟರು ಸಿಗದ  ಅನುಭವ, ಸಂತೋಷ ಇದು.

'Spend your money on the things money can buy. Spend your time on the things money can’t buy' — Haruki Murakami


(ಚೆನ್ನಾಗಿರೊ 2  ಫೋಟೋ ಸುನಿ ಕ್ಲಿಕ್ ಮಾಡಿದ್ದು, ಉಳಿದಿದ್ದು ... ನೋಡಿದರೆ ನಿಮಗೆ ಗೊತ್ತಾಗುತ್ತೆ. 😂 I wish photography is  as easy as posing. 😜  Its not my cup of tea.😏)















https://m.facebook.com/story.php?story_fbid=10214420554537073&id=1514881037


No comments: