September 4, 2010

ತಂಪು ತಂಪು ಕೂಲ್ ಕೂಲ್ ಅಡುಗೆ ಮತ್ತು ಪೇಯಗಳು.

ಎಲ್ಲೆಲೂ ಸುಡು ಬೇಸಿಗೆ. ತಾಳಲಾರದಷ್ಟು ದಾಹ. ಬೇಸಿಗೆಕಾಲಕ್ಕೆ ತಕ್ಕಂತಹ ಅಂದರೆ ಉಷ್ಣ, ಪಿತವನ್ನು ಹತೋಟಿಯಲ್ಲಿಡುವ ಆಹಾರ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಕ್ಷೇಮ. ಹಾಗೇಯೇ ಆರೋಗ್ಯಕ್ಕೆ ಹಾನಿಕರಕ ಮತ್ತು ದುಬಾರಿ ತಂಪು ಪಾನೀಯಗಳಿಗೆ ಮಾರುಹೊಗುವ ಬದಲು ಮನೆಯಲ್ಲೇ ಆರೋಗ್ಯಕರ ಸರಳ ಪೇಯಗಳನ್ನು ತಯಾರಿಸಿಕೊಳ್ಳಬಹುದು. ಬಾಯಾರಿಕೆ ಹಾಗೂ ಖರ್ಚು ಎರಡಕ್ಕೂ ಕಡಿವಾಣ ಹಾಕಬಹುದು. ಅತಿ ಸರಳ ಹಾಗೂ ಕಡಿಮೆ ಖರ್ಚಿನ ಕೆಲವು ತಂಪು ತಂಪು ಕೂಲ್ ಕೂಲ್ ಅಡುಗೆ ಹಾಗೂ ಪೇಯಗಳು ಇಲ್ಲಿವೆ. ತಂಬುಳಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/4 ಬಟ್ಟಲು, ಕರಿಬೇವಿನಸೊಪ್ಪು-1/2ಬಟ್ಟಲು, ಜೀರಿಗೆ-1ಟೀಚಮಚ, ಮೆಣಸಿನಕಾಳು-5, ಮಜ್ಜಿಗೆ-1ಲೋಟ ಮಾಡುವ ವಿಧಾನ : ಕಾಯಿತುರಿಯನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳನ್ನು ತುಪ್ಪದಲ್ಲಿ ಹುರಿದು, ಕಾಯಿತುರಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಮಜ್ಜಿಗೆ ಬೆರೆಸಿ ನಂತರ ಜೀರಿಗೆ,ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಬುಳಿ ಸಿದ್ಧ. ಕರಿಬೇವಿನ ಬದಲು ದೊಡ್ಡಪತ್ರೆ, ಒಂದಲಗ, ಚಕ್ರಮುನಿಸೊಪ್ಪು, ಶುಂಠಿ, ಪಾಲಕ್ ಮುಂತಾದವುಗಳನ್ನು ಬಳಸಬಹುದು. ತಂಬುಳಿಗಳು ಬಾಯಿಹುಣ್ಣಿಗೆ ಉತ್ತಮ ಔಷಧಿ. ಸಾಸಿವೆ/ ಮೊಸರು ಬಜ್ಜಿ: ಬೇಕಾಗುವ ಸಾಮಗ್ರಿಗಳು: ಕಾಯಿ ತುರಿ-1/2 ಬಟ್ಟಲು, ಹುರಿಗಡಲೆ-2 ಟೀಚಮಚ , ಹಸಿಮೆಣಸು-2, ಸಾಸಿವೆ-1/2 ಟೀಚಮಚ, ಮಜ್ಜಿಗೆ/ಮೊಸರು ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೋಮೊಟೊ- 1 ಬಟ್ಟಲು ಮಾಡುವ ವಿಧಾನ : ಕಾಯಿ ತುರಿ, ಹುರಿಗಡಲೆ, ಹಸಿ ಮೆಣಸಿನ ಕಾಯಿ, ಸಾಸಿವೆಯನ್ನು ರುಬ್ಬಿ, ಅದಕ್ಕೆ ಹೆಚ್ಚಿದ ಈರುಳ್ಳಿ, ಟೋಮೊಟೊ, ಮಜ್ಜಿಗೆ/ ಮೊಸರು ಮತ್ತು ರುಚ್ಚಿಗೆ ಉಪ್ಪು ಬೆರೆಸಬೇಕು. ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿದರೆ ತಂಪಾದ ಸಾಸಿವೆ/ಮೊಸರು ಬಜ್ಜಿ ರೆಡಿ. ಸಣ್ಣಗೆ ಹೆಚ್ಚಿ ಹುರಿದ ತೊಂಡೆಕಾಯಿ, ಬೆಂಡೆಕಾಯಿ, ದಪ್ಪ ಮೆಣಸಿನಕಾಯಿ ಅಥವಾ ಸುಟ್ಟ ಬದನೆಕಾಯಿ ಅಥವಾ ಹಸಿ ಮೂಲಂಗಿತುರಿ, ಸೌತೆಕಾಯಿಯನ್ನು ರುಬ್ಬಿದ ಮಿಶ್ರಣಕ್ಕೆ ಬೆರಿಸಿಕೊಳ್ಳಬಹುದು. ಅನ್ನದ ತಿಳಿ (ಗಂಜಿ) ಸಾರು: ಅನ್ನ ಬಸಿದ ತಿಳಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಮಜ್ಜಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಉಪ್ಪು ಬೆರೆಸಿ, ಇಷ್ಟಕ್ಕೆ ಅನುಗುಣವಾಗಿ ಬೆಳ್ಳುಳಿ ಅಥವಾ ಇಂಗಿನ ಒಗ್ಗರಣೆ ಮಾಡಿದರೆ ಸುಲಭದ ರುಚಿಯಾದ ಸಾರು ರೆಡಿ. ಪುನರ್ಪುಳಿ ಸಾರು (ಕೊಕೊಂ): ಪುನರ್ಪುಳಿ- 1ಬಟ್ಟಲು, ಬೆಲ್ಲ- 2ಉಂಡೆ, ಈರುಳ್ಳಿ- 1, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು ಸ್ವಲ್ಪ ಪುನರ್ಪುಳಿಯನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಬೇಕು. ರಸಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಬೆಲ್ಲ ಮತ್ತು ಬೇಕಾದಷ್ಟು ನೀರು ಹಾಗೂ ರುಚಿಗೆ ಉಪ್ಪು ಹಾಕಿ. ಸಾಸಿವೆ, ಜೀರಿಗೆ, ಕರಬೇವಿನ ಒಗ್ಗರಣೆ ಮಾಡಿದರೆ ಸಾರು ಸವಿಯಲು ಸಿದ್ಧ. ಹುಣಸೆಹಣ್ಣು ಮತ್ತು ಬೆಲ್ಲದ ಪಾನಕ: ಹುಣಸೆಹಣ್ಣಿನ ರಸ- 1ಲೋಟ, ಬೆಲ್ಲ- 3ಉಂಡೆ, ಶುಂಠಿ- 1ಚೂರು, ಕಾಳುಮೆಣಸಿನಪುಡಿ - 1ಚಮಚ ಹುಣಸೆಹಣ್ಣಿನ ರಸಕ್ಕೆ ಬೆಲ್ಲ ಹಾಕಿ ಅಗತ್ಯವಿದ್ದಷ್ಟು ನೀರು ಬೆರೆಸಿ. ಇದಕ್ಕೆ ಶುಂಠಿ ಚೂರನ್ನು ಹಾಗೂ ಕಾಳುಮೆಣಸಿನಪುಡಿನ ಪುಡಿಯನ್ನು ಸೇರಿಸಿದರೆ ಪಿತ್ತ ಶಮನಕಾರಿ ಪಾನಕ ತಯಾರು. ಅಕ್ಕಿ ತೊಳೆದ ನೀರಿನ ಪಾನಕ : ಎರಡನೇ ಬಾರಿ ಅಕ್ಕಿ ತೊಳೆದ ನೀರಿಗೆ ಬೇಕಾದಷ್ಟು ಬೆಲ್ಲ ಬೆರೆಸಿ, ಚಿಟಿಕೆ ಏಲಕ್ಕಿ ಪುಡಿ ಮತ್ತು 2 ಚಮಚ ಲಿಂಬೆರಸ ಹಾಕಿದರೆ ಸರಳವಾದ ಅರೋಗ್ಯಕರ ಪೇಯ ಕುಡಿಯಲು ಸಿದ್ಧ. ಹೆಸರುಕಾಳಿನ ಪಾನಕ: ನೆನೆಸಿದ ಹೆಸರುಕಾಳು- 1ಬಟ್ಟಲು, ಬೆಲ್ಲ- 3ಉಂಡೆ, ಏಲಕ್ಕಿ-3 ನೆನೆಸಿದ ಹೆಸರುಕಾಳು, ಬೆಲ್ಲ, ಏಲಕ್ಕಿ ಮೂರನ್ನು ನೀರು ಸೇರಿಸಿ ರುಬ್ಬಬೇಕು. ಅಗತ್ಯವಿದರೆ ಮತ್ತೆ ನೀರು ಬೆರೆಸಿಕೊಳ್ಳಿ. ಯಾವುದೇ ಮಿಲ್ಕ್‌ಶೇಕ್‌ಗಿಂತ ರುಚಿಯಾದ ನೊರೆ ನೊರೆಯಾದ ಪೇಯ ಮನೆಯಲ್ಲೇ ರೆಡಿ. (ವಾರಪತ್ರಿಕೆಗೆ ಕಳುಹಿಸಲು ಎರಡು ವರ್ಷದ ಹಿಂದೆ ಇವುಗಳನ್ನು ಬರೆದ್ದಿದ್ದೆ, ಯಾರಿಗಾದರೂ ಉಪಯೋಗಕ್ಕೆ ಬರಬಹುದು ಎಂಬ ಕಾರಣದಿಂದ ಬ್ಲಾಗ್‌ಗಲ್ಲಿ ಪೋಸ್ಟ್‌ ಮಾಡುತ್ತಿದ್ದೇನೆ)

No comments: