September 4, 2010

ಈ ಟಿವಿ ವಾಹಿನಿಯ "ಎದೆ ತುಂಬಿ ಹಾಡುವೆನು".

ಟಿವಿ ಚಾನೆಲ್‌ಗಳಲ್ಲೇಲ್ಲಾ ಈಗ ರಿಯಾಲಿಟಿ ಶೋಗಳದ್ದೇ ದರ್ಬಾರ್. ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳು ಪ್ರಸಾರಗೊಳ್ಳುತ್ತಿವೆ. ಹಾಡು, ಡ್ಯಾನ್ಸ್ ಅಥವಾ ಬೇರೆ ಯಾವುದಾದರೂ ಪ್ರತಿಭಾನ್ವೇಷಣೆ ಇರಬಹುದು, ಕ್ಷೇತ್ರಗಳು ಮಾತ್ರ ವಿಭಿನ್ನ. ಈ ರೀತಿ ರಿಯಾಲಿಟಿ ಶೋಗಳಲ್ಲಿ ಸಂಗೀತ ಅಥವಾ ಹಾಡಿನ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ತಪ್ಪಾಗಲಾರದು. ರಿಯಾಲಿಟಿ ಶೋಗಳನ್ನು ಬಿತ್ತರಿಸುವಲ್ಲಿ ನಮ್ಮ ಕನ್ನಡ ಚಾನೆಲ್‌ಗಳು ಸಹ ಹಿಂದೆ ಬಿದ್ದಿಲ್ಲ. ಝೀ ಕನ್ನಡ, ಕಸ್ತೂರಿ, ಈ ಟಿವಿ, ಉದಯ ಟಿವಿ, ಇತ್ಯಾದಿ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿಯೇ ಇದೆ. ಅದರಲ್ಲಿ ಹಾಡಿನ ಸ್ಪರ್ಧೆಗಳ ಕಾರ್ಯಕ್ರಮಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿವೆ. ಲಿಟಲ್ ಚಾಂಪ್ಸ್, ಕಾನಿಫಿಡೆಂಟ್ ಸಿಂಗರ್, ಎದೆ ತುಂಬಿ ಹಾಡುವೆನು ಮೊದಲಾದವುಗಳು. ಈ ಎಲ್ಲಾ ಶೋಗಳಲ್ಲಿ ಮಕ್ಕಳೇ ಸ್ಪರ್ಧಾಳುಗಳು. ಆದ್ದರಿಂದ ಈ ಕಾರ್ಯಕ್ರಮಗಳ ನಡುವೆ ಟಿ.ಅರ್.ಪಿ ಹೆಚ್ಚಿಸಿಕೊಳ್ಳಲು ಪೈಪೋಟಿ ಜೋರಾಗಿದೆ. ಮಕ್ಕಳ ಮುಗ್ದತೆಯನ್ನೇ ಬಂಡವಾಳವಾಗಿಸಿ ಕೊಂಡು ತಮ್ಮ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುವುದು ಈ ಶೋಗಳ ಮೂಲ ತಂತ್ರ. ಪುಟ್ಟ ಮಕ್ಕಳಿಗೆ ವಯಸ್ಸಿಗೆ ಮೀರಿದ ಉಡುಗೆ ತೊಡುಗೆ ತೊಡಿಸುವುದು, ಅಸಂಬದ್ದ ಹಾಡು ಹಾಡಿಸುವುದನ್ನು ನಾವುಗಳು ಕಾಣಬಹುದು. ಮಕ್ಕಳ ಮೃದು ಮನಸ್ಸನ್ನೂ ಗಮನಿಸಿದೆ ಪ್ರದರ್ಶನದ ಬಗ್ಗೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಅಥವಾ ಅತಿಥಿಗಳಾಗಿ ಬಂದವರು ಕಠೋರವಾಗಿ ಪ್ರತಿಕ್ರಿಯಿಸುತ್ತಾರೆ. ಅವರ ಈ ರೀತಿ ಪ್ರತಿಕ್ರಿಯೆಗಳು ಕೇವಲ ಪ್ರತಿಭೆಗೆ ಮಾತ್ರ ಸಂಬಂಧಿಸಿರುವುದಿಲ್ಲ ಎನ್ನುವುದು ಕೂಡ ಸತ್ಯ. ಮಕ್ಕಳು ಸ್ಪರ್ಧೆಯಿಂದ ನಿರ್ಗಮಿಸಿದಕ್ಕಾಗಿ ಅಳುವ ದೃಶ್ಯ ನೋಡುಗರ ಮನ ಕಲಕುತ್ತದೆ. ಇಷ್ಟೇ ಅಲ್ಲದೇ ಎಸ್.ಎಮ್.ಎಸ್‌ಗಳ ಹಾವಳಿ ಬೇರೆ. ಈ ದೃಶ್ಯಗಳು ಎಲ್ಲಾ ರಿಯಾಲಿಟಿ ಶೋಗಳಲ್ಲಿ ಸರ್ವೇಸಾಮಾನ್ಯ ಹಾಗೂ ಈ ದೃಶ್ಯಗಳನ್ನೇಲ್ಲಾ ವೈಭಿವಿಕರಿಸಿ ಟಿವಿಯಲ್ಲಿ ತೋರಿಸಿ ಕಾರ್ಯಕ್ರಮದ ಜನಪ್ರಿಯತೆಯನ್ನು ಹೆಚ್ಚಿಸಿಕೊಳುತ್ತಿದ್ದಾರೆ.
ಆದರೆ ಎಲ್ಲಾ ಹಾಡಿನ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮ ಅಂದರೆ ಈ ಟಿವಿ ವಾಹಿನಿಯಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿರುವ "ಎದೆ ತುಂಬಿ ಹಾಡುವೆನು". ಖಾತ್ಯ ಗಾಯಕ "ಎಸ್.ಪಿ.ಬಾಲಸುಬ್ರಮಣ್ಯಂ" ನೆಡೆಸಿಕೊಡುವ ಕೆನರಾ ಬ್ಯಾಂಕ್ ಪ್ರಾಯೋಜಿಸುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕನ್ನಡ ಚಾನೆಲ್‌ಗಳ ಒಂದು ಪ್ರಮುಖ ಮತ್ತು ಅತ್ಯಂತ ಯಶಸ್ವಿ ಕಾರ್ಯಕ್ರಮ. ಈ ಟಿವಿ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ 9 ಘಂಟೆಗೆ ಪ್ರಸಾರವಾಗುತ್ತದೆ. ಇದನ್ನು ಎಸ್.ಪಿ.ಬಿ ಯವರು ತುಂಬಾ ಅಚ್ಚುಕಟ್ಟಾಗಿ ನೆಡೆಸುವುದರೊಂದಿಗೆ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದಾರೆ. ಸ್ವತಹ ಬಾಲಸುಬ್ರಮಣ್ಯಂ ಅವರೇ ವಚನವನ್ನು ಹೇಳುವುದರ ಮೂಲಕ ಶೋತೃರುಗಳಿಗೆ ವಚನ ಸಾಹಿತ್ಯವನ್ನು ಉಣಬಡಿಸುತ್ತ ಈ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ. ಪ್ರತಿವಾರವು ಸಂಗೀತ ಕ್ಷೇತ್ರದ್ದಲ್ಲಿ ಸಾಧನೆ ಮಾಡಿದ ಗಣ್ಯರನ್ನು ತೀರ್ಪುಗಾರರ ರೂಪದಲ್ಲಿ ಜನತೆಗೆ ಪರಿಚಯಿಸುತ್ತಾರೆ. ಈ ಶೋನಲ್ಲಿ ಬರಿ ಸಿನಿಮಾ ಹಾಡುಗಳಿಗಷ್ಟೇ ಸೀಮಿತವಾಗಿರದೆ ಭಾವಗೀತೆ, ಜನಪದ ಗೀತೆ, ಭಕ್ತಿಗೀತೆಗಳನ್ನು ಸಹ ಹಾಡಲಾಗುತ್ತದೆ. ಎಸ್.ಪಿ.ಬಿ ಯವರು ಸ್ಪರ್ಧಾಳುಗಳ ಪೋಷಕರಿಗೆ ಮತ್ತು ಗುರುಗಳಿಗೆ ಮಕ್ಕಳಿಗೆ ಹೊಂದುವಂತಹ ಹಾಡುಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸೂಚಿಸುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ. ಮಕ್ಕಳ ಉಡುಗೆ ತೊಡುಗೆ ಸಹ ಅತ್ಯಂತ ಸಭ್ಯ. ಕೊನೆಯಲ್ಲಿ ಫಲಿತಾಂಶವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಯಾರ ಮನಸ್ಸನ್ನು ನೋಯಿಸದೆ ಪ್ರಕಟಿಸಲಾಗುತ್ತದೆ. ಬೇರೆ ಶೋಗಳಲ್ಲಿ ಕಂಡು ಬರುವಂತೆ ಮಕ್ಕಳೊಡನೆ ಒರಟಾಗಿ ನೆಡೆದು ಕೊಳುವುದಾಗಲಿ ಅಥವಾ ಅವರ ಮುಗ್ಧತೆಯನ್ನು ಟಿ.ಅರ್.ಪಿ ಹೆಚ್ಚಿಸಲು ಬಳಸಿಕೊಳುವುದಾಗಲಿ ಇಲ್ಲವೇ ಇಲ್ಲ. ಕಾಮೆಂಟ್ ಗಳು ಕೇವಲ ಸಂಗೀತಕ್ಕಷ್ಟೇ ಸಿಮೀತ. ತಪ್ಪುಗಳನ್ನು ಮೃದುವಾಗಿ ತಿದ್ದಿ ಹೇಳಲಾಗುತ್ತದೆ. ಈ ಕಾರ್ಯಕ್ರಮ ಹಲವು ಮಾಲಿಕೆಗಳಲ್ಲಿ ಪ್ರಸಾರಗೊಂಡಿದರು ಸಹ ಕಿರಿಯರ ಮಾಲಿಕೆ ಅತಿ ಹೆಚ್ಚು ಯಶಸ್ಸನ್ನು ಕಂಡಿದೆ. ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ ಸಂಗತಿ.
ವೇದಿಕೆ ಮೇಲೆ ಯಾವುದೇ ಕುಣಿತದ ಅಬ್ಬರವಿಲ್ಲದೆ ಮನೆ ಮಂದಿಗೆಲ್ಲಾ ಮುದ ನೀಡುವ ರಿಯಾಲಿಟಿ ಶೋ ಇದಾಗಿದೆ. ಗೆಲ್ಲುವುದಕ್ಕಿಂತ ಕಾರ್ಯಕ್ರಮದಲ್ಲಿ ಭಾಗಿಸುವುದು ಅತ್ಯಂತ ಮುಖ್ಯ ಎಂಬುದನ್ನು ಎಸ್.ಪಿ.ಬಿ ಈ ಕಾರ್ಯಕ್ರಮದಲ್ಲಿ ಮನದಟ್ಟು ಮಾಡುತ್ತಾರೆ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ತಮ್ಮ ನೆಡೆ ನುಡಿಯಿಂದ ಈ ಕಾರ್ಯಕ್ರಮದ ಘನತೆಯನ್ನು ಇನಷ್ಟು ಹೆಚ್ಚಿಸಿದ್ದಾರೆ. ನಿರಂತರವಾಗಿ ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತನ್ನದೇ ಆದ ಛಾಪನ್ನು ಉಳಿಸಿಕೊಂಡು ಬಂದಿದೆ.


(ಈ ಲೇಖನವನ್ನು 2009ರ ಸೆಪ್ಟೆಂಬರ್‌ ತಿಂಗಳಲ್ಲೇ ಬರೆದ್ದಿದ್ದೆ, ಆದರೆ ಈಗ ಇಲ್ಲಿ ಹಾಕಿದ್ದೇನೆ.)

No comments: