January 3, 2011

ಮನಸ್ಸಿದ್ದರೆ ಮಾರ್ಗ..!!

ಮಲೆನಾಡಿನ ಹಳ್ಳಿಗಳಲ್ಲಿ ಈಗ ಕೃಷಿಕ ಯುವಕರ ಮದುವೆ ಹೆತ್ತವರಿಗೆ ಒಂದು ಸಮಸ್ಯೆಯಾಗಿದೆ. ಮದುವೆ ವಯಸ್ಸು ದಾಟಿದರೂ ಮದುವೆಗೆ ಹೆಣ್ಣು ಸಿಗದೆ ಪರದಾಡುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದೆ. ಈ ವಿಷಯ ಕೇಳುಗರಿಗೆ ಒಂದು ತಮಾಷೆ ಅನಿಸ ಬಹುದು. ಆದರೆ ಇದರ ಗಂಭೀರತೆಯನ್ನು ಇಲ್ಲಿನವರು ಮಾತ್ರ ಬಲ್ಲರು. ನಮ್ಮ ಕಡೆ ಈಗ ಮದುವೆ-ಮುಂಜಿ, ನಾಮಕರಣ ಅಥವಾ ಯಾವುದೇ ಫಂಕ್ಷನ್ ಇರಲಿ, ಅಲ್ಲಿ ಒಂದು ವಿಷಯದ ಚಚರ್ೆಯಂತೂ ಗ್ಯಾರಂಟಿ. ಅದು ನಿಮ್ಮ ಕಡೆ ಮದುವೆಗಿರುವ ಹುಡುಗಿಯರು ಇದ್ದರಾ ಅಂತ. ಒಂದು ಕಾಲ ಇತ್ತು ಹುಡುಗನಿಗೆ ಜಮೀನು ಮನೆಯಿದ್ದರೆ ಸಾಕು ಮದುವೆಯಾಗಲೂ ಯಾವುದೇ ಅಡ್ಡಿಲ್ಲ ಎಂಬುದು ಹೆಣ್ಣು ಹೆತ್ತವರ ಅಭಿಪ್ರಾಯವಾಗಿತ್ತು. ಆದರೆ ಈಗ ಇದಕ್ಕೆ ವಿರುದ್ಧವಾಗಿ ಹಳ್ಳಿ ಮನೆಯಾದರೆ ಬೇಡ, ಮದುವೆಯಾಗುವ ಹುಡುಗ ಸಿಟಿಯಲ್ಲಿರಬೇಕು ಅನ್ನೋದೇ ನೂರಕ್ಕೆ ತೊಂಬತ್ತೊಬ್ಬತ್ತು ಜನ ಕನ್ಯಾಮಣಿಗಳ ಮೊದಲ ಹಾಗೂ ಕೊನೆಯ ಬೇಡಿಕೆಯಾಗಿದೆ. ಹೆಣ್ಣು ಮಕ್ಕಳೇ ಕಡಿಮೆ, ಅದರಲ್ಲೂ ಮದುವೆಯಾಗಿ ಹಳ್ಳಿಯಲ್ಲಿ ಜೀವನ ನೆಡೆಸಲು ಸಿದ್ಧವಾಗಿರುವ ಕನ್ಯೆಯರಂತೂ ವಿರಳ. ನನ್ನ ಕಸಿನ್ಗಳಲ್ಲಿ ಮೂರು-ನಾಲ್ಕು ಜನ ವರ್ಷ ಮೂವತ್ತು ದಾಟಿದರೂ ಮದುವೆಯಾಗದೆ ಉಳಿದಿರುವುದು ಒಂದು ಚಿಕ್ಕ ಉದಾಹರಣೆ ಅಷ್ಟೆ! ಅನೂಕೂಲಸ್ಥರಾಗಿರುವ ಇವರೆಲ್ಲರ ಒಂದೇ ಒಂದು ಮೈನೆಸ್ ಪಾಯಿಂಟ್ ಎಂದರೆ ಹುಡುಗ ಹಳ್ಳಿಯಲ್ಲಿ ಕೃಷಿಕ ಎನ್ನುವುದಾಗಿದೆ.
ಹೀಗೆ ಹೇಳುವ ಹೆಚ್ಚಿನವರು ಹಳ್ಳಿಯಲ್ಲೇ ಹುಟ್ಟಿ ಬೆಳೆದ ಕನ್ಯಾಮಣಿಗಳು ! ಸಿಟಿಯ ಯಾತ್ರಿಕ ಜೀವನ, ಮಾಲಿನ್ಯ, ನೀರು, ಗಾಳಿ, ಬೆಳಕಿನ ಕೊರತೆ ಜೊತೆಗೆ ನೂರೆಂಟು ಜಂಜಾಟಗಳ ನಡುವೆಯೂ ಇವರುಗಳಿಗೆ ನಗರದ ಬಣ್ಣದ ಬದುಕಿನ ಹುಚ್ಚು ಮಾತ್ರ ಕಡಿಮೆಯಾಗಿಲ್ಲವೆಂಬುದು ವಿಪರ್ಯಾಸ! ನಾನು ಸಂಪಾದಿಸಬೇಕು ಅದಕ್ಕೆ ಹಳ್ಳಿಯಲ್ಲಿ ಅವಕಾಶವಿಲ್ಲ ಎಂಬುದು ಹಳ್ಳಿಯ ವರ ಬೇಡ ಎಂದು ಮೂಗು ಮೂರಿಯುವ ಈ ನಾರಿಯರ ಸಿದ್ಧ ಉತ್ತರ ಮತ್ತು ಸಮರ್ಥನೆ.
ಏಕೆ ಹಳ್ಳಿಯಲ್ಲಿ ಸಂಪಾದನೆಗೆ ದಾರಿಗಳಿಲ್ಲವೇ? ಸ್ವ ಉದ್ಯೋಗ ದುಡಿಮೆಯಲ್ಲವೇ? ಬರೀ ಬಿ.ಪಿ.ಒ. ಕಾಲ್ ಸೆಂಟರ್, ಐ.ಟಿ. ಬಿ.ಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದು ಮಾತ್ರ ಕೆಲಸವೇ? ಹಳ್ಳಿಯಲ್ಲಿ ಸಹ ನೂರೆಂಟು ಮಾರ್ಗಗಳಿವೆ. ತಾವು ಸಂಪಾದಿಸುವುದಲ್ಲದೇ ಇತರರಿಗೂ ಸಹ ಉದ್ಯೋಗ ಕಲ್ಪಿ ಸಿಕೊಡಬಹುದು. ಕೆಲಸ ಮಾಡುವ ಆಸಕ್ತಿ ಇದ್ದರೆ ಹಳ್ಳಿಯಾದರೇನು ದಿಲ್ಲಿಯಾದರೇನು ಅವಕಾಶಗಳು ಹಲವು. ಅವುಗಳಲ್ಲಿ ಅತಿ ಸರಳವಾಗಿರುವ ಕೆಲವು ಮಾರ್ಗಗಳು ಇಲ್ಲಿವೆ. ನೀವು ಪ್ರಯತ್ನಿಸಿ ನೋಡಿ.
ಬಣ್ಣ ಬಣ್ಣದ ಹೂ ಗಿಡಗಳನ್ನು ಬೆಳೆಸುವುದು ಮಹಿಳೆಯರ ನೆಚ್ಚಿನ ಹವ್ಯಾಸವಾಗಿದೆ. ಈ ಹವ್ಯಾಸವನ್ನೆ ಸ್ಪಲ್ಪ ಯೋಜನಾ ಬದ್ಧವಾಗಿಸಿದರೆ ಸಾಕು ಪುಷ್ಪೋದ್ಯಮ ಅತಿ ಯಶಸ್ವಿ ಹಾಗೂ ಲಾಭಾದಾಯಕ ಉದ್ಯಮವಾಗುತ್ತದೆ. ಇದರಲ್ಲಿ ಅತ್ಯಂತ ಯಶಸ್ಸು ಗಳಿಸಿದವರ ಉದಾಹರಣೆಗಳು ಹಲವು.
ಇನ್ನೂ ಸೊಪ್ಪು ತರಕಾರಿಗಳು ಈಗಂತೂ ಅತ್ಯಂತ ದುಬಾರಿ, ಆದರೆ ದಿನ ನಿತ್ಯ ಅಡುಗೆಮನೆಯಲ್ಲಿ ಬೇಕೇ ಬೇಕು. ಮನೆಯ ಸುತ್ತ ಮುತ್ತ ಇರುವ ಜಾಗದಲ್ಲೇ ಬೆಳೆದರೂ ಸಾಕು. ತಾಜಾ ತಾಜಾ ತರಕಾರಿಗಳು ಮನೆಯಲ್ಲೇ ಲಭ್ಯ. ಜೊತೆಗೆ ಮನೆ ಖಚರ್ಿನಲ್ಲಿ ಬಾರಿ ಉಳಿತಾಯ ಕೂಡ ಆಗುತ್ತದೆ. ಇದನ್ನೆ ವಿಸ್ತರಿಸಿ ದೊಡ್ಡ ಪ್ರಮಾಣದಲ್ಲಿ ಬೆಳೆದರಂತೂ ಬಂಪರ್. ಇದು ನನ್ನ ಸ್ವಂತ ಅನುಭವ. ನೀವು ಪ್ರಯತ್ನಿಸಿ ನೋಡಿ ಮನೆ ಖರ್ಚಿನಲ್ಲಿ ಉಳಿತಾಯದ ಜೊತೆಗೆ ಸಂಪಾದನೆಯೂ ಗ್ಯಾರಂಟಿ.
ನಿಮಗೆ ಟೈಲರಿಂಗ್ ಗೊತ್ತಾ?! ಹಾಗಾದರೆ ಬೇರೆ ಕೆಲಸದ ಯೋಚನೆ ಬಿಟ್ಟು ಬಿಡಿ. ಸಂಪಾದನೆಗೆ ಇದಕ್ಕಿಂತ ಉತ್ತಮ ಮಾರ್ಗ ಯಾವುದು ಇಲ್ಲ. ಈಗಂತೂ ಹೊಲಿಗೆ ಮಜೂರಿ ಕೊಟ್ಟು ಪೂರೈಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಕಲಿತ ಈ ವಿದ್ಯೆಯನ್ನೇ ಬಂಡವಾಳ ವಾಗಿಸಿಕೊಂಡು ಸ್ವ ಉದ್ಯೋಗ ಪ್ರಾರಂಭಿಸಬಹುದು, ಜೊತೆಗೆ ಬೇರೆಯವರಿಗೂ ಉದ್ಯೋಗಾವಕಾಶ ಕಲ್ಪಿಸಿಕೊಡಲು ಇದರಿಂದ ಸಾದ್ಯ. ಇದರ ಜೊತೆ ಜೊತೆಗೆ ಸೀರೆ, ಡ್ರೆಸ್ಗಳಿಗೆ ಕಸೂತಿ, ತರ ತರಹದ ಡಿಸೈನ್ಗಳನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಇದಕ್ಕೆ ಅತಿ ಬೇಡಿಕೆ ಇದೆ. ಅತಿ ಕಡಿಮೆ ಬಂಡವಾಳ ಹೂಡಿ, ಹೆಚ್ಚು ಸಂಪಾದಿಸ ಬಹುದಾದ ಅಲ್ ಟೈಮ್ ಬೇಡಿಕೆಯಲ್ಲಿರುವ ಉದ್ಯೋಗ ಇದಾಗಿದೆ.
ಈಗ ಸಾವಯವ ಕೃಷಿಯ ಕಾಲ. ಎರೆಹುಳು ಗೊಬ್ಬರಕ್ಕೊಂತು ಬಂಗಾರದ ಬೆಲೆ ಇದೆ. ಹಾಗೂ ಇದರ ಸಾಗಣಿಕೆ ಅತಿ ಸುಲಭ ಕೂಡ ಹೌದು. ಅಡಿಗೆಮನೆಯ ತ್ಯಾಜ್ಯಗಳಾದ ತರಕಾರಿ ಸಿಪ್ಪೆ ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಇದು ಎರೆಹುಳು ಸಾಕಣಿಕೆಗೆ ತುಂಬಾ ಉಪಯುಕ್ತ. ಸಕರ್ಾರದಿಂದ ಇದಕ್ಕೆ ಸಬ್ಸಿಡಿ ಸಹ ದೊರೆಯುತ್ತದೆ.
ಹಳ್ಳಿಗಳಲ್ಲಿ ಹಲವು ಸ್ವ ಸಹಾಯ ಸಂಘಗಳು ಮಹಿಳೆಯರ ಉದ್ಧಾರಕ್ಕಾಗಿ ಪಣ ತೊಟ್ಟಿವೆ ಹಾಗೂ ಉತ್ತಮ ನೆರವನ್ನು ಸಹ ನೀಡುತ್ತವೆ. ನೀವುಗಳು ಇದರ ಭಾಗವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ದೊರಕುವ ಸಾಲದ ಉಪಯೋಗ ಪಡೆದು, ನಿಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಯಾವುದಾದರೂ ಉದ್ಯೋಗ ಪ್ರಾರಂಭಿಸಿ, ಸುತ್ತ ಮುತ್ತಲಿನವರಿಗೂ ದಾರಿ ದೀಪವಾಗಿ.

ನಮಗೆ ಇವುಗಳಲ್ಲಿ ಆಸಕ್ತಿ ಇಲ್ಲ ಎನ್ನುವ ಹುಡುಗಿಯರೇ ಅದಕ್ಕೂ ಪರಿಹಾರವಿದೆ. ನಿಮ್ಮ ಬಳಿ ಕಂಪ್ಯೂಟರ್ ಒಂದು ಇದ್ದರೆ ಸಾಕು, ಯಾವುದೇ ಜಂಜಾಟವಿಲ್ಲದೇ ಮನೆಯಿಂದಲೇ ಕೆಲಸ ಮಾಡಿ, ಡಾಟಾ ಎಂಟ್ರಿ, ಟ್ರಾನ್ಸಲೇಶನ್, ಮೆಡಿಕಲ್ ಟ್ರಾನ್ಸಕ್ರಿಪ್ಷನ್ , ಈ-ಟ್ಯೂಟಿಂಗ್ ಹೀಗೆ ಹತ್ತು ಹಲವು ಅವಕಾಶಗಳು ನಿಮ್ಮ ಮುಂದೆ ತೆರೆದು ಕೊಳ್ಳುತ್ತವೆ. ಇಲ್ಲವಾದರೆ ನೀವು ನೋಡಿದ ಹೊಸ ಸ್ಥಳಗಳ ಅಥವಾ ಭಾಗವಹಿಸಿದ ಕಾರ್ಯಕ್ರಮಗಳ ವಿಶೇಷತೆಗಳು, ಅಥವಾ ನಿಮ್ಮೂರಿನ ಅಡುಗೆ, ಇಲ್ಲವೆ ನಿಮ್ಮ ಅನುಭವಗಳು, ಸುತ್ತಮುತ್ತಲಿನ ಪರಿಸರದ ವಿಶಿಷ್ಟಗಳ ಬಗ್ಗೆ ಲೇಖನ ಬರೆದು ಒಂದೆರೆಡು ಫೋಟೊಗಳೊಂದಿಗೆ ಪೇಪರ್, ಮ್ಯಾಗಜೀನ್ಗಳಿಗೆ ಕಳುಹಿಸಿ ಕೊಡಿ. ಉತ್ತಮ ಸಂಬಾವನೆಯೊಂದಿಗೆ ಹೆಸರು, ಕೀರ್ತಿ ನಿಮ್ಮ ಪಾಲಾಗುವುದರಲ್ಲಿ ಸಂದೇಹವೆ ಇಲ್ಲ.
ನಿಮ್ಮದು ತಂಬಾ ಇಂಟಿರಿಯರ್ ಪ್ರದೇಶವೇ? ಸುತ್ತ ಮುತ್ತ ಕಾಡೇ? ಹಳೆ ಮನೆಯೇ? ಹಾಗಾದರೆ "ಹೋಮ್ ಸ್ಟೇ" ಯೋಜನೆಯ ಬಗ್ಗೆ ಸಹ ಯೋಚಿಸ ಬಹುದು.
ಹೀಗೆ ಸ್ವ ಉದ್ಯೋಗಗಳ ಪಟ್ಟಿ ಬೆಳೆಯುತ್ತದೆ. ಹಳ್ಳಿ ಜೀವನ ಬೇಡ ಎನ್ನುವ ಕನ್ಯಾಮಣಿಗಳೇ ಮನಸ್ಸಿದ್ದರೆ ಮಾರ್ಗ. ಹಳ್ಳಿಯಾದರೇನು ಆಸಕ್ತಿ ಮತ್ತು ಛಲವಿದ್ದರೆ ಏನಾದರೂ ಸಾಧಿಸಲು ಸಾಧ್ಯ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

1 comment:

G Reddy said...

Kanyamanigalinda desha halaguvudu beda ee rachaneyannu odida nantharavoo thilidukolladiddare bharathada hennumakkalu nijavagiyoo daddaranthe halliya jeevana arogya jeevana jothege yavude reethiya cooking expense hechaguvudilla.