October 26, 2010

ಬದಲಾಗುತ್ತಿರುವ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣ

ಮಲೆನಾಡಿನ ಬೆಳೆಗಳಲ್ಲಿ ಅಡಿಕೆ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಬಹುಶ: ಮಲೆನಾಡಿನ ಅಡಿಕೆ ಬೆಳೆಗಾರರು ಅಡಿಕೆ ಕೊಯ್ಲಿನ ತಯಾರಿಯಲ್ಲಿರ ಬಹುದು ಅಥವಾ ಹೆಚ್ಚಿನವರು ಪ್ರಾರಂಭಿಸಿರಲೂ ಬಹುದು. ನವರಾತ್ರಿ ಕಳೆದು ದೀಪವಾಳಿ ಕಳೆಯುವುದರ ಒಳಗೆ ಈ ಅಡಿಕೆ ಕೊಯ್ಲಿನ ಚಟುವಟಿಕೆಗಳು ಆರಂಭಗೊಳುತ್ತದೆ.
ಇಲ್ಲಿನ ಕೃಷಿಕರಿಗೆ ಅಡಿಕೆ ಕೊಯ್ಲು ಬರೀ ಒಂದು ಕೆಲಸವಾಗಿರದೆ, ಒಂದು ಆಚರಣೆಯೇ ಆಗಿತ್ತು ಎಂದರೆ ತಪ್ಪಾಗಲಾರದು. ಅಡಿಕೆ ಬೆಳೆಗಾರರಿಗೆ ಅಡಿಕೆ ಸುಲಿತ (ಕೊಯ್ಲು) ಪ್ರಾರಂಭಿಸುವುದೇ ಒಂದು ಸಂಭ್ರಮ ಸಡಗರ. ಅದಕ್ಕೆ ಪೂರ್ವಭಾವಿಯಾಗಿ ಕತ್ತಿ, ಮಣೆ. ತಟ್ಟಿ-ಬುಟ್ಟಿಗಳನ್ನು ಒಟ್ಟುಗೂಡಿಸುವುದು, ಚಪ್ಪರದಂಗಳವನ್ನು ಸಾರಿಸುವುದು, ಚೊಗರು ತಯಾರಿಸುವುದು, ಕೊನೆಗಾರನಿಗೆ, ಅಡಿಕೆ ಸುಲಿಯುವ ಕುಲಿಯಾಳುಗಳಿಗೆ ತಿಳಿಸುವುದು ಹೀಗೆ ಹತ್ತು ಹಲವು ತಯಾರಿಗಳನ್ನು ಮಾಡಿಕೊಳ್ಳುವುದು. ನಂತರ ಶುಭ ದಿನದಂದು ಒಳ್ಳೆ ಮೂಹರ್ತದಲ್ಲಿ ಪೂಜೆ ಮಾಡಿ ಕೊನೆ ತೆಗೆಯುವುದು. ಅಡಿಕೆ ಒಲೆಗೆ ಉರಿ ಹಚ್ಚುವ ಮುನ್ನ ಒಲೆಗೆ ಪೂಜೆ ಸಲ್ಲಿಸುತ್ತಿದ್ದರು. ಹಾಗೇ ಸೂರ್ಯ ಮೇಲೆರುವ ಮುನ್ನವೇ ಬೇಯಿಸಿದ ಅಡಿಕೆಯನ್ನು ಬಿದರಿನ ತಟ್ಟಿಯ ಮೇಲೆ ಒಣಗಿಸಲಾಗುತ್ತಿತ್ತು. ಸಂಜೆ ಇಬ್ಬನಿ ಬೀಳುವ ಮುನ್ನ ಒಣಗಿದ ಅಡಿಕೆಯನ್ನು ಒಟ್ಟು ಮಾಡಿ ಅಡಿಕೆ ಹಾಳೆಯನ್ನು ಮುಚ್ಚಲಾಗುತ್ತಿತ್ತು. ಅಡಿಕೆ ಕೊಯ್ಲು ಮುಗಿದ ನಂತರ ಒಣಗಿಸಿದ ಅಡಿಕೆಯನ್ನು ಒಟ್ಟಿಗೆ ಸುರಿದು ರಾಶಿಗೆ ಪೂಜೆ ಮಾಡಿ ನಂತರ ಮೂಟೆ ಮಾಡಿ ಮಂಡಿಗೆ ಕಳುಹಿಸುವುದು, ಇದಿಷ್ಟು ಮಲೆನಾಡಿನ ಸಂಪ್ರಾದಾಯಿಕ ಅಡಿಕೆ ಕೊಯ್ಲಿನ ಚಿತ್ರಣ. ಇಷ್ಟೆ ಅಲ್ಲದೇ ತೋಟದಿಂದ ತಂದ ಗೊನೆಗಳನ್ನು ಅಚ್ಚುಕಟ್ಟಾಗಿ ರಾಶಿ ಮಾಡಲಾಗುತ್ತಿತ್ತು. ಅಡಿಕೆ ಸುಲಿಯುವವರಿಗೆ ಸಮಾನಾಗಿ ಗೊನೆಗಳನ್ನು ಪಾಲು ಮಾಡುತ್ತಿದ್ದರು. ಹಾಡು, ಹರಟೆ, ನಗು, ತಮಾಷೆ, ಒಗಟು, ಪ್ರಶ್ನೋತ್ತರಗಳು ಮಧ್ಯರಾತ್ರಿಯವರೆಗೆ ಚಪ್ಪರದಂಗಳ ತುಂಬಿರುತ್ತಿತ್ತು. ಅಪರೂಪಕ್ಕೊಮ್ಮೆ ಟೇಪ್ ರೀಕಾರ್ಡಗಳು ಕಾಣಿಸಿಕೊಳ್ಳುತ್ತಿದ್ದವು.
ಆದರೆ, ಈಗ ಈ ರೀತಿಯ ಅಡಿಕೆ ಕೊಯ್ಲು ಕಾಣಲು ಸಿಗುವುದಿಲ್ಲ, ಈಗ ಮಲೆನಾಡಿನ ಅಡಿಕೆ ಕೊಯ್ಲಿನ ಚಿತ್ರಣವೇ ಬದಲಾಗಿದೆ. ಕೇಲವೆ ವರ್ಷಗಳೀಚೆಗೆ ಈ ಅಡಿಕೆ ಕೊಯ್ಲಿನ ಕಾನ್ಸೆಪೆಟ್ ಬದಲಾಗಿದೆ. ಕುಲಿಯಾಳುಗಳಾಗಿ ಪರದಾಟ, ಕೊಯ್ಲಿನ ಸಮಯ ಹತ್ತಿರವಾದಂತೆ ಹಸಿ ಅಡಿಕೆ ಕಾಯಿ ಕೊಳ್ಳುವರನ್ನೋ ಅಥವಾ ಚೇಣಿದಾರರನ್ನೋ ಹುಡುಕುವಂತೆ ಬೆಳೆಗಾರರನ್ನು ಮಾಡಿದೆ.
ಚಪ್ಪರದಂಗಳದಲ್ಲಿ ಕಂಬಕ್ಕೆ ಒರಗಿ ನಡುರಾತ್ರಿವರೆಗೆ ಚಳಿಯಲ್ಲಿ ಅಡಿಕೆ ಸುಲಿಯುವ ಅಳುಗಳು ಈಗ ವಿರಳ. ಚಪ್ಪರವೇ ಎಷ್ಟೋ ಮನೆಗಳಲ್ಲಿ ಇಲ್ಲವಾಗಿದೆ . ಬದಲಾಗಿ ಅಂಗಳ ಅಥವಾ ಮನೆಯ ಥಾರಸಿಯನ್ನು ಅಡಿಕೆ ಒಣಗಿಸಲು ಬಳಸಿಕೊಳ್ಳಲಾರಂಭಿಸಿದ್ದಾರೆ. ಬಿದರಿನ ಬುಟ್ಟಿಯ ಜಾಗವನ್ನು ಪ್ಲಾಸ್ಟಿಕ್ ಬುಟ್ಟಿಗಳು, ತಟ್ಟಿಯ ಸ್ಥಾನವನ್ನು ಕಬ್ಬಿಣದ ಟ್ರೇಗಳು ಆಕ್ರಮಿಸಿಕೊಂಡಿದೆ. ನಗು, ಹಾಡು, ಹರಟೆಯನ್ನು ಟಿವಿ ನುಂಗಿ ಹಾಕಿದೆ. ಅಡಿಕೆ ಸುಲಿಗೆಗೆ ಈಗ ಟಿವಿ ಕಡ್ಡಾಯವಾಗಿದೆ. ಅದರಲ್ಲೂ ಡಿಶ್ ಸಂಪರ್ಕ ಅಗತ್ಯ. ಅಡಿಕೆ ಸುಲಿಯುವ ಯಂತ್ರಗಳ ಆಗಮನವಾಗಿದೆ. ಈ ಯಂತ್ರಗಳು ಪರಿಪೂರ್ಣವಾಗಿಲ್ಲ, ಆದರೂ ಸಹ ಅನಿವಾರ್ಯವಾಗಿ ಕೃಷಿಕ ಇದರ ಮೊರೆ ಹೋಗಬೇಕಾಗಿದೆ.
ಅಡಿಕೆಯ ಅಸ್ಥಿರ ಬೆಲೆ, ಕೆಲಸಗಾರ ಅಭಾವ, ದಿನೇ ದಿನೇ ಹೆಚ್ಚುತ್ತಿರುವ ಸಂಬಳ, ಖರ್ಚು, ಹವಾಮಾನದ ಏರುಪೇರು, ರೋಗ, ಯುವ ಪೀಳಿಗೆಯವರ ಪಟ್ಟಣದತ್ತ ವಲಸೆ ಇವುಗಳೆಲ್ಲದರಿಂದ ಅಡಿಕೆ ಬೆಳೆಗಾರ ತತ್ತರಿಸಿ ಹೋಗಿದ್ದಾನೆ. ವಿಧಿಯಿಲ್ಲದೆ ಕೃಷಿಕ ಅಧುನಿಕರಣ, ಯಂತ್ರೀಕರಣ ಹಾಗೂ ಸರಳೀಕರಣಕ್ಕೆ ತಲೆ ಬಾಗುತ್ತಿದ್ದಾನೆ. ಸಣ್ಣ ಪುಟ್ಟ ಬೆಳೆಗಾರರು ಈ ಎಲ್ಲಾ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಹಸಿಕಾಯಿಯನ್ನೇ ಮಾರಿ ಕೈ ತೊಳೆದು ಕೊಳ್ಳುತ್ತಿದ್ದಾರೆ.
ಮಲೆನಾಡಿನಲ್ಲಿ ಕೃಷಿಕರು ಅಡಿಕೆ ಕೊಯ್ಲುನ್ನು ಬರೀ ಅರ್ಥಿಕ ಉದ್ದೇಶಕ್ಕಾಗಿ ಮಾತ್ರ ಎನ್ನುವ ಭಾವನೆಯಿಂದಷ್ಟೇ ಅಲ್ಲದೆ, ಒಂದು ಸಂಪ್ರಾದಾಯಿಕ ಅಚರಣೆಯನ್ನು ನೆಡೆಸುವಷ್ಟೇ ಶ್ರದ್ಧೆಯಿಂದ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಇಂದು ಆ ದಿನಗಳಲ್ಲಿ ಕಂಡು ಬರುತ್ತಿದ್ದ ಸಂಭ್ರಮ, ಅಚ್ಚುಕಟ್ಟುತನ, ವೈಭವ ಯಾವುದು ಇಲ್ಲದೇ ಅಡಿಕೆ ಕೊಯ್ಲು ನೀರಸವಾಗಿದೆ.

No comments: