ಅಪ್ಪನ ದೋಸೆ !
ನಮ್ಮ ಕಡೆ ಈ ತಿಂಡಿಗೆ ಯಾಕೆ ಹೀಗೆ ಹೇಳ್ತಾರೆ ಅಂತ ಮಾತ್ರ ಗೊತ್ತಿಲ್ಲ. ಫಸ್ಟ್ ಟೈಮ್ ಕಾಲೇಜಿನಲ್ಲಿ ಗೆಳತಿಯೊಬ್ಬಳು ನಮ್ಮ ಮನೆಯಲ್ಲಿ ಇವತ್ತು ತಿಂಡಿ “ಪಡ್ಡು” ಅಂದಾಗ ನಾನು ಯಾವುದೋ ಬಾರಿ ಅಪರೂಪದ ತಿಂಡಿ ಆದಾಗಿರ ಬೇಕು ಅಂತ ಪೆದ್ದು ಪೆದ್ದಾಗಿ ಹೌದಾ ಅಂದಿದ್ದೆ.
ಇನ್ನು ಪಡ್ಡು ಅಂತ ಪರಿಚಯ ಆಗೋ ಮುಂಚಿನ ಅಪ್ಪನ ದೋಸೆ ವಿಷಯ ಸ್ಪಲ್ಪ ಹೇಳಲೇ ಬೇಕು. ನಾವು ಸ್ಕೂಲಿಗೆ ಹೋಗುತ್ತಿದ್ದಾಗ ಅಮ್ಮ ಏನಾದರೂ ಈ ತಿಂಡಿ ಮಾಡ್ತೀನಿ ಅಂದ್ರೆ ಸಾಕು ನಂಗೆ ನಿಜವಾಗಲೂ ಯಾಕಾದರೂ ಈ ತಿಂಡಿ ಮಾಡಲ್ ಅಂತ ಸಿಟ್ಟು ಬರ್ತಾ ಇತ್ತು. ಅದಕ್ಕೆ ಎರಡು ಕಾರಣಗಳು. ಅದರಲ್ಲಿ ಅತಿ ಮುಖ್ಯವಾದದ್ದು ಪುಟ್ಟು ಅಂದರೆ ಅಮ್ಮನ ಪ್ರೀತಿಯ ಮಗ ನಮ್ಮ ತಮ್ಮ. ಮತ್ತೊಂದು ಕಟ್ಟಿಗೆ ಒಲೆ ಹಾಗೂ ಬಳಪದ ಕಲ್ಲಿನ ಆ ದಪ್ಪ ದೋಸೆ ಕಾವಲಿ.
ನಾವು ಮೂವರು ಮಕ್ಕಳಲ್ಲಿ ಚಿಕ್ಕವನು ಜೊತೆಗೆ ಅಮ್ಮನ ಮುದ್ದಿನ ಕುಲಪುತ್ರ ಅನ್ನೊ ಕಾರಣಕ್ಕೆ ಮನೆಯಲ್ಲಿ ದೋಸೆ, ರೊಟ್ಟಿ ತರಹದ ತಿಂಡಿ ಮಾಡಿದಾಗ ಮೊದಲು ಪುಟ್ಟುವಿಗೆ ಅಮೇಲೆ ನಮ್ಮಿಬ್ಬರ ಸರದಿ. ಅವತ್ತು ನಮ್ಮ ಕಥೆ ಹೇಳೋದೆ ಬೇಡ. ಅವನು ತಿಂಡಿ ತಿಂದು ಮುಗಿಸಿ ನಮ್ಮ ತಟ್ಟೆಗೆ ದೋಸೆ ಯಾವಾಗ ಬೀಳುತ್ತೋ ಅಂತ ಕಾಯೋದು ನಮ್ಮ ಕೆಲಸ. ಎರಡು ಉಬ್ಬೆ ದೋಸೆ ಮಾಡುವ ವರೆಗೆ ಮಗನ ಮೇಲೆ ಉಕ್ಕಿ ಹರಿಯುತ್ತಿರುತ್ತಿದ್ದ ಅಮ್ಮನ ಮಾತೃ ಪ್ರೇಮ ಮೂರನೇ ರೌಂಡ್ ದೋಸೆ ಹೊತ್ತಿಗೆ ಪುಟ್ಟು ಸಾಕಾ, ಆಗಿಲ್ವಾ ಅನ್ನೊ ಮಟ್ಟಕ್ಕೆ ಬರ್ತಾ ಇತ್ತು. ಅವನು ಮತ್ತೆ ತನ್ನ ತಟ್ಟೆ ದೋಸೆಗಳಿಗಾಗಿ ಚಾಚಿದಾಗ ಅಮ್ಮನ ಪ್ರೀತಿ ಸಹನೆ ಎಲ್ಲಾ ಖಾಲಿಯಾಗಿ ಶುರುವಾಗೋದು ಇನ್ನೂ ಮುಗಿಲಿಲ್ವಾ ನಿಂದು, ಎಷ್ಟೂ ತಿನ್ನೊಂದು, ಸಾಕು ಎದ್ದು ಹೋಗೊ ಮಾರಾಯ ಅಂತ. ಅದರ ಜೊತೆಗೆ ನಾವು (ನಾನು ಮತ್ತು ರಮ್ಯ) ಕಾದು ಕಾದು ಸಾಕಾಗಿ ನಿಂಗೆ ಮಗನೇ ಇಷ್ಟ, ಯಾವಾಗಲೂ ಅವನಿಗೆ ಫಸ್ಟ್ ತಿಂಡಿ ಕೊಡ್ತೀಯಾ, ನಮಗ ತಿಂಡಿನೇ ಬೇಡ ಅಂತ ಅಮ್ಮನ ಮೇಲೆ ಸಿಟ್ಟು ಮಾಡ್ತಾ, ಗೆ ತಮ್ಮನಿಗೆ ನಾಳೆಯಿಂದ ನಾವು ಫಸ್ಟ್ ತಿಂಡಿಗೆ ಬರ್ತೀವಿ, ನೀನು ಭಕಾಸುರ, ಹೊಟ್ಟೆ ಕಿಚ್ಚಿಗೆ ಇಷ್ಟು ತಿನ್ತಾ ಇದ್ದೀಯಾ ಅಂತ ಕಿರುಚಾಡಿ ಕೈಯಲ್ಲಿದ್ದ ತಟ್ಟೆ ನೆಲಕ್ಕೆ ಕುಟ್ಟಿ ನಾಲ್ಕು ಸಾರಿ ಅಡುಗೆ ಮನೆಯಿಂದ ಹೊರಗೆ ಹೋಗ್ತಿದ್ದೀವಿ. ಆದರೆ ನಮ್ಮ ತಮ್ಮ ಮಾತ್ರ 'ಮನೆ ಮಗ ತಿಂದಷ್ಟೂ ಒಳ್ಳೆದು ; ಮಘೆ ಮಳೆ ಬಂದಷ್ಟೂ ಒಳ್ಳೆದು' ಅಂತ ದೊಡ್ಡಮ್ಮ (ಅಜ್ಜಿ) ನಂಗೆ ಹೇಳಿದ್ದಾರೆ ಗೊತ್ತಾ ಅಂತ ಒಂದೊಂದೇ ದೋಸೆಗೆ ಬೆಲ್ಲ-ತುಪ್ಪ ಹಚ್ಚಿ ಅಪ್ಪನ ದೋಸೆ ನುಂಗೋದು ಮುಂದುವರಿಸುತ್ತಾ ನಮ್ಮ ಸಿಟ್ಟು ಹೆಚ್ಚಿಸುತ್ತಿದ್ದ.
ಇನ್ನೂ ಕಟ್ಟಿಗೆ ಒಲೆ ಮತ್ತು ಬಳಪದ ಕಲ್ಲಿನ ಆ ದಪ್ಪ ದೋಸೆ ಕಾವಲಿದು ರಗಳೆ ದೊಡ್ಡದು. ಕಾವಲಿ ಬಿಸಿಯಾಗಲು ಒಂದಷ್ಟು ಹೊತ್ತಾದೆ. ದೋಸೆ ಬೇಯಲು ಬೆಂಕಿಯ ಹದ ಮತ್ತೊಂದು ಗೋಳು. ಕಾವಲಿಗೆ ಹಿಟ್ಟು ಹ್ಯುಯುವಾಗ ಸಣ್ಣ ಉರಿ ಬೆಂಕಿ, ನಂತರ ಮತ್ತೆ ಒಲೆಯ ಒಳಗೆ ದೂಡಿ ಉರಿ ಹೆಚ್ಚು ಮಾಡುವುದು, ಇನ್ನೊಂದು ಬದಿ ದೋಸೆ ಬೇಯಿಸುವಾಗ ಉರಿ ಕಡಿಮೆ ಮಾಡಲು ಮತ್ತೆ ಸೌದೆಗಳನ್ನು ಒಲೆಯ ಹೊರಗೆ ಎಳೆಯುವುದು. ದೋಸೆ ಮಾಡುವುದಕ್ಕಿಂತ ದೊಡ್ಡ ಪ್ರೊಸೆಸ್. ಅಮ್ಮನ ಈ ಸಾಹಸ ನೋಡಿ ನೋಡಿನೇ ನಾನು ತೀರ್ಮಾನಿಸಿ ಬಿಟ್ಟಿದ್ದೆ. ಅಪ್ಪನ ದೋಸೆ ಅನ್ನೋ ತಿಂಡಿ ಮಾತ್ರ ನಾನು ಈ ಜನ್ಮದಲ್ಲಿ ಮಾಡೋ ಕಷ್ಟಕ್ಕೆ ಹೋಗಲ್ಲ ಅಂತ.
ಆದರೆ ಈಗೆಲ್ಲಾ ಹಾಗೇನೂ ಇಲ್ಲ ಬಿಡಿ. ಎಲ್ಲಾ ಬದಲಾಗಿದೆ. ಎಷ್ಟರ ಮಟ್ಟಿಗೆ ಅಂದರೆ ನನ್ನ ಮಗಳಿಗೆ ಅಪ್ಪನ ದೋಸೆ ಅಂದರೆ ಗೊತ್ತೇ ಆಗೋಲ್ಲ !! (ಯಾಕೆ ನಿಮ್ಮ ಅಪ್ಪ ಈ ತಿಂಡಿ ಮಾಡ್ತಾ ಇದ್ರಾ ಅಂತ ಕೇಳಿ ನಗ್ತಾಳೆ). ಗ್ಯಾಸ್ ಒಲೆ, ನಾನ್ ಸ್ಟಿಕ್ ತವಾಗಳು ಈಗ ಈ ತಿಂಡಿ ಮಾಡುವುದನ್ನು ಸುಲಭಗೊಳಿಸಿದೆ. ಆದರೂ ಸ್ವಲ್ಪ ಜಾಸ್ತಿ ಸಮಯ ಮತ್ತು ತಾಳ್ಮೆ ಈ ತಿಂಡಿ ಮಾಡೊಕ್ಕೆ ಬೇಕಾಗಿರೋದರಿಂದ ನಂಗೆ ಅಪ್ಪನ ದೋಸೆ ಮಾಡೋದು ಬೇಜಾರಿನ ಕೆಲಸನೇ ಸರಿ. ಹಾಗಂತ ನಂಗೆ ತಿನ್ನೊಕ್ಕೆ ಇಷ್ಟ ಇಲ್ಲ ಅಂತ ಅಂದುಕೊಳ್ಳ ಬೇಡಿ. ನೀವುಗಳು ಯಾರಾದರೂ ನಿಮ್ಮ ಮನೆಗೆ ನನ್ನ ಕರೆದು, ಈರುಳ್ಳಿ ಕರಿಬೇವು ಜಾಸ್ತಿ ಹಾಕಿ, ರೋಸ್ಟ್ ಮಾಡಿ ಬಿಸಿಬಿಸಿಯಾದ 'ಪಡ್ಡು' ಮಾಡಿ ಕೊಟ್ಟು ನೋಡಿ. ನಾನು ಎಷ್ಟು ತಿಂದೆ ಅನ್ನೊ ಲೆಕ್ಕ ನಿಮಗೆ ತಪ್ಪುವುದು ಅಂತೂ ಗ್ಯಾರಂಟಿ.

















