October 30, 2025

ಅಪ್ಪನ ದೋಸೆ ಪುರಾಣ

ಅಪ್ಪನ ದೋಸೆ ! 

ನಮ್ಮ ಕಡೆ ಈ ತಿಂಡಿಗೆ ಯಾಕೆ  ಹೀಗೆ ಹೇಳ್ತಾರೆ ಅಂತ ಮಾತ್ರ ಗೊತ್ತಿಲ್ಲ. ಫಸ್ಟ್ ಟೈಮ್ ಕಾಲೇಜಿನಲ್ಲಿ ಗೆಳತಿಯೊಬ್ಬಳು ನಮ್ಮ ಮನೆಯಲ್ಲಿ ಇವತ್ತು ತಿಂಡಿ “ಪಡ್ಡು”  ಅಂದಾಗ ನಾನು ಯಾವುದೋ ಬಾರಿ ಅಪರೂಪದ ತಿಂಡಿ ಆದಾಗಿರ ಬೇಕು ಅಂತ  ಪೆದ್ದು ಪೆದ್ದಾಗಿ ಹೌದಾ ಅಂದಿದ್ದೆ.


ಇನ್ನು ಪಡ್ಡು ಅಂತ ಪರಿಚಯ ಆಗೋ ಮುಂಚಿನ  ಅಪ್ಪನ ದೋಸೆ ವಿಷಯ ಸ್ಪಲ್ಪ ಹೇಳಲೇ ಬೇಕು. ನಾವು ಸ್ಕೂಲಿಗೆ ಹೋಗುತ್ತಿದ್ದಾಗ ಅಮ್ಮ ಏನಾದರೂ ಈ ತಿಂಡಿ ಮಾಡ್ತೀನಿ ಅಂದ್ರೆ ಸಾಕು ನಂಗೆ ನಿಜವಾಗಲೂ ಯಾಕಾದರೂ ಈ ತಿಂಡಿ ಮಾಡಲ್ ಅಂತ ಸಿಟ್ಟು ಬರ್ತಾ ಇತ್ತು. ಅದಕ್ಕೆ ಎರಡು ಕಾರಣಗಳು. ಅದರಲ್ಲಿ  ಅತಿ ಮುಖ್ಯವಾದದ್ದು ಪುಟ್ಟು ಅಂದರೆ ಅಮ್ಮನ ಪ್ರೀತಿಯ ಮಗ ನಮ್ಮ ತಮ್ಮ. ಮತ್ತೊಂದು ಕಟ್ಟಿಗೆ ಒಲೆ ಹಾಗೂ ಬಳಪದ ಕಲ್ಲಿನ ಆ ದಪ್ಪ ದೋಸೆ ಕಾವಲಿ.



ನಾವು ಮೂವರು ಮಕ್ಕಳಲ್ಲಿ ಚಿಕ್ಕವನು ಜೊತೆಗೆ ಅಮ್ಮನ ಮುದ್ದಿನ ಕುಲಪುತ್ರ ಅನ್ನೊ ಕಾರಣಕ್ಕೆ ಮನೆಯಲ್ಲಿ ದೋಸೆ, ರೊಟ್ಟಿ ತರಹದ ತಿಂಡಿ ಮಾಡಿದಾಗ ಮೊದಲು ಪುಟ್ಟುವಿಗೆ ಅಮೇಲೆ ನಮ್ಮಿಬ್ಬರ ಸರದಿ. ಅವತ್ತು ನಮ್ಮ ಕಥೆ ಹೇಳೋದೆ ಬೇಡ. ಅವನು ತಿಂಡಿ ತಿಂದು ಮುಗಿಸಿ ನಮ್ಮ ತಟ್ಟೆಗೆ ದೋಸೆ ಯಾವಾಗ ಬೀಳುತ್ತೋ ಅಂತ ಕಾಯೋದು ನಮ್ಮ ಕೆಲಸ. ಎರಡು ಉಬ್ಬೆ ದೋಸೆ ಮಾಡುವ ವರೆಗೆ ಮಗನ ಮೇಲೆ ಉಕ್ಕಿ ಹರಿಯುತ್ತಿರುತ್ತಿದ್ದ ಅಮ್ಮನ ಮಾತೃ ಪ್ರೇಮ ಮೂರನೇ ರೌಂಡ್ ದೋಸೆ ಹೊತ್ತಿಗೆ  ಪುಟ್ಟು ಸಾಕಾ, ಆಗಿಲ್ವಾ ಅನ್ನೊ ಮಟ್ಟಕ್ಕೆ ಬರ್ತಾ ಇತ್ತು.  ಅವನು ಮತ್ತೆ ತನ್ನ ತಟ್ಟೆ ದೋಸೆಗಳಿಗಾಗಿ ಚಾಚಿದಾಗ ಅಮ್ಮನ ಪ್ರೀತಿ ಸಹನೆ ಎಲ್ಲಾ ಖಾಲಿಯಾಗಿ ಶುರುವಾಗೋದು ಇನ್ನೂ ಮುಗಿಲಿಲ್ವಾ ನಿಂದು, ಎಷ್ಟೂ ತಿನ್ನೊಂದು, ಸಾಕು ಎದ್ದು ಹೋಗೊ ಮಾರಾಯ ಅಂತ. ಅದರ ಜೊತೆಗೆ ನಾವು (ನಾನು ಮತ್ತು ರಮ್ಯ) ಕಾದು ಕಾದು ಸಾಕಾಗಿ ನಿಂಗೆ ಮಗನೇ ಇಷ್ಟ, ಯಾವಾಗಲೂ ಅವನಿಗೆ ಫಸ್ಟ್ ತಿಂಡಿ ಕೊಡ್ತೀಯಾ, ನಮಗ ತಿಂಡಿನೇ ಬೇಡ ಅಂತ ಅಮ್ಮನ ಮೇಲೆ ಸಿಟ್ಟು ಮಾಡ್ತಾ, ಗೆ ತಮ್ಮನಿಗೆ  ನಾಳೆಯಿಂದ ನಾವು ಫಸ್ಟ್ ತಿಂಡಿಗೆ ಬರ್ತೀವಿ, ನೀನು ಭಕಾಸುರ,  ಹೊಟ್ಟೆ ಕಿಚ್ಚಿಗೆ ಇಷ್ಟು ತಿನ್ತಾ ಇದ್ದೀಯಾ  ಅಂತ ಕಿರುಚಾಡಿ ಕೈಯಲ್ಲಿದ್ದ ತಟ್ಟೆ ನೆಲಕ್ಕೆ ಕುಟ್ಟಿ ನಾಲ್ಕು ಸಾರಿ ಅಡುಗೆ ಮನೆಯಿಂದ ಹೊರಗೆ ಹೋಗ್ತಿದ್ದೀವಿ. ಆದರೆ ನಮ್ಮ ತಮ್ಮ ಮಾತ್ರ  'ಮನೆ ಮಗ ತಿಂದಷ್ಟೂ ಒಳ್ಳೆದು ; ಮಘೆ ಮಳೆ ಬಂದಷ್ಟೂ ಒಳ್ಳೆದು' ಅಂತ ದೊಡ್ಡಮ್ಮ (ಅಜ್ಜಿ)  ನಂಗೆ ಹೇಳಿದ್ದಾರೆ ಗೊತ್ತಾ ಅಂತ ಒಂದೊಂದೇ ದೋಸೆಗೆ ಬೆಲ್ಲ-ತುಪ್ಪ ಹಚ್ಚಿ ಅಪ್ಪನ ದೋಸೆ ನುಂಗೋದು ಮುಂದುವರಿಸುತ್ತಾ ನಮ್ಮ ಸಿಟ್ಟು ಹೆಚ್ಚಿಸುತ್ತಿದ್ದ.

ಇನ್ನೂ ಕಟ್ಟಿಗೆ ಒಲೆ ಮತ್ತು ಬಳಪದ ಕಲ್ಲಿನ ಆ ದಪ್ಪ ದೋಸೆ ಕಾವಲಿದು ರಗಳೆ ದೊಡ್ಡದು. ಕಾವಲಿ ಬಿಸಿಯಾಗಲು ಒಂದಷ್ಟು ಹೊತ್ತಾದೆ. ದೋಸೆ ಬೇಯಲು ಬೆಂಕಿಯ ಹದ ಮತ್ತೊಂದು ಗೋಳು. ಕಾವಲಿಗೆ ಹಿಟ್ಟು ಹ್ಯುಯುವಾಗ ಸಣ್ಣ ಉರಿ ಬೆಂಕಿ, ನಂತರ ಮತ್ತೆ ಒಲೆಯ ಒಳಗೆ ದೂಡಿ‌ ಉರಿ ಹೆಚ್ಚು ಮಾಡುವುದು, ಇನ್ನೊಂದು ಬದಿ ದೋಸೆ ಬೇಯಿಸುವಾಗ ಉರಿ ಕಡಿಮೆ ಮಾಡಲು  ಮತ್ತೆ ಸೌದೆಗಳನ್ನು ಒಲೆಯ ಹೊರಗೆ ಎಳೆಯುವುದು. ದೋಸೆ ಮಾಡುವುದಕ್ಕಿಂತ ದೊಡ್ಡ ಪ್ರೊಸೆಸ್. ಅಮ್ಮನ ಈ ಸಾಹಸ ನೋಡಿ ನೋಡಿನೇ ನಾನು ತೀರ್ಮಾನಿಸಿ ಬಿಟ್ಟಿದ್ದೆ. ಅಪ್ಪನ ದೋಸೆ ಅನ್ನೋ ತಿಂಡಿ ಮಾತ್ರ ನಾನು ಈ ಜನ್ಮದಲ್ಲಿ  ಮಾಡೋ ಕಷ್ಟಕ್ಕೆ ಹೋಗಲ್ಲ ಅಂತ.

ಆದರೆ ಈಗೆಲ್ಲಾ ಹಾಗೇನೂ ಇಲ್ಲ ಬಿಡಿ. ಎಲ್ಲಾ ಬದಲಾಗಿದೆ. ಎಷ್ಟರ ಮಟ್ಟಿಗೆ ಅಂದರೆ ನನ್ನ ಮಗಳಿಗೆ ಅಪ್ಪನ ದೋಸೆ ಅಂದರೆ ಗೊತ್ತೇ ಆಗೋಲ್ಲ !! (ಯಾಕೆ ನಿಮ್ಮ ಅಪ್ಪ ಈ ತಿಂಡಿ ಮಾಡ್ತಾ ಇದ್ರಾ ಅಂತ ಕೇಳಿ ನಗ್ತಾಳೆ). ಗ್ಯಾಸ್ ಒಲೆ, ನಾನ್ ಸ್ಟಿಕ್ ತವಾಗಳು ಈಗ ಈ ತಿಂಡಿ ಮಾಡುವುದನ್ನು ಸುಲಭಗೊಳಿಸಿದೆ. ಆದರೂ ಸ್ವಲ್ಪ ಜಾಸ್ತಿ ಸಮಯ ಮತ್ತು ತಾಳ್ಮೆ ಈ ತಿಂಡಿ ಮಾಡೊಕ್ಕೆ ಬೇಕಾಗಿರೋದರಿಂದ ನಂಗೆ ಅಪ್ಪನ ದೋಸೆ ಮಾಡೋದು ಬೇಜಾರಿನ ಕೆಲಸನೇ ಸರಿ. ಹಾಗಂತ ನಂಗೆ ತಿನ್ನೊಕ್ಕೆ ಇಷ್ಟ ಇಲ್ಲ ಅಂತ ಅಂದುಕೊಳ್ಳ ಬೇಡಿ. ನೀವುಗಳು ಯಾರಾದರೂ ನಿಮ್ಮ ಮನೆಗೆ ನನ್ನ ಕರೆದು, ಈರುಳ್ಳಿ ಕರಿಬೇವು ಜಾಸ್ತಿ ಹಾಕಿ, ರೋಸ್ಟ್ ಮಾಡಿ ಬಿಸಿಬಿಸಿಯಾದ 'ಪಡ್ಡು' ಮಾಡಿ ಕೊಟ್ಟು ನೋಡಿ.   ನಾನು ಎಷ್ಟು ತಿಂದೆ ಅನ್ನೊ ಲೆಕ್ಕ ನಿಮಗೆ  ತಪ್ಪುವುದು  ಅಂತೂ ಗ್ಯಾರಂಟಿ.

April 15, 2018

A small trek.

A small hill with thick forest of Western Ghats  separates  Melinkoppa and Garaga.
MELINKOPPA, (the place where I live) a small village of Thirthahalli Shimoga, which lies at the bottom of the hill and Garaga at bottom of the other side of the hill. The distance between two place via forest is around 4 kms. One of the less touched and less exploited forests  area with abundant variety of trees and plants. Steep edges, huge trees, slippy wild paths are common features throughout this stretch. Sun rays hardly touch the ground at most of the places in this forest.

Yesterday, the Christmas day off was very well spent   in the  midest of the forest. Our very enthusiastic   group of 25 members with all age group  from 6 years to 65 years walked more than 9 kms  through the forest (to and fro Melinkoppa). The elevation is more than 800 meters. The  Whole stretch is so cool and shady that carrying  hats and sunglasses were mere waste. Though we did nt get to see any wild animals while trekking , we found fresh evidence of their presence. Some of us had good fall.  We were  lost for some time  in the forest  too. Posing for pictures, taking selfie, goofing were default factors as always. It was an awesome and memorable experience.
ಬೆಳ್ ಬೆಳಗ್ಗೆ  ಆಟೋ ಡ್ರೈವರ್ ಜೊತೆ  ಜಗಳ. ಅಂತ ಎರಡು ವರ್ಷದ ಹಿಂದಿನ ಈ ದಿನದ ನನ್ನ ಸ್ಟೇಟಸ್ ನೆನಪು ಮಾಡ್ತಾ ಇದೆ. ಆದರೆ...
Its history now.

ದೇವಾರಣೆಗೂ ನಾನು ಇನ್ಯಾವತ್ತೂ ಆಟೋ ಡ್ರೈವರ್ ಜೊತೆ ಜಗಳ ಮಾಡೋಲ್ಲ . ಹಾಗೆ ಸಾಧ್ಯವಾದಷ್ಟು ಆಟೋದಲ್ಲಿ ಓಡಾಟ ಅವ್ಯಾಡ್ ಮಾಡ್ತೀನಿ ಅಂತ ಅಂದ್ಕೊಂಡಿದ್ದೀನಿ.
**

"ಭಾರತಿ. ಬಿ.ವಿ" ಅವರ ಆಟೋ ಕಥೆಗಳನ್ನು ಓದಿ ಅವರನ್ನು "ಆಟೋ ಪ್ಯಾಸೆಂಜರ್ ಸಂಘ"ದ ಅಧ್ಯಕ್ಷರಾಗಿ ಮಾಡಬಹುದು ಅಂತ ಅಂದ್ಕೊಂಡಿದ್ದೆ. ಅದರಲ್ಲೂ "ಎರಡು ರೂಪಾಯಿ ಫೈಟಿಂಗು" ಬರಹ ಓದಿ ಬಿದ್ದು ಬಿದ್ದು ನಕ್ಕಿದಲ್ಲದೆ ಸುಮಾರು ಜನಕ್ಕೆ ಶೇರ್ ಕೂಡ ಮಾಡಿದ್ದೆ. ಎಷ್ಟು ಸಾರಿ ಆಟೋದವರ ಹತ್ತಿರ ಜಗಳ ಮಾಡಿದರೂ ನಾನು ಅಂತೂ ಯಾವತ್ತೂ ಅವರಿಗೆ ಹೆದರಲಿಲ್ಲ ಅಂತ ನನ್ ಧೈರ್ಯದ ಬಗ್ಗೆ ನಂಗೆ ಹೆಮ್ಮೆಯಾಗಿ  ನಾನೇ ಪರವಾಗಿಲ್ಲ ಅನ್ಸಿತ್ತು.

ಇದು ಆಗಿ, ಎರಡು ದಿನದ ನಂತರ ಫ್ರೆಂಡ್ ಜೊತೆ ಶಿವಮೊಗ್ಗಕ್ಕೆ ಹೋಗಿದ್ದೆ.  ಆಟೋ ಹತ್ತಿ ಹೋಗಬೇಕಾಗಿದ್ದ ಅಡ್ರೆಸ್ ಹೇಳಿ, ಮಾತಿನ ಭರಾಟೆಯಲ್ಲಿ ಇಬ್ಬರು ಎಷ್ಟು ಅಂತ ಕೇಳೊದು ಮರ್ತವಿ.  ಇಳಿಯುವಾಗ ಡ್ರೈವರ್‌ ಜಾಸ್ತಿ ದುಡ್ಡು ಕೇಳ್ದ ಯಥಾ ಪ್ರಕಾರ ನಾನು ಜಗಳಕ್ಕೆ ನಿಂತೆ. ಅವನು ಗ್ಯಾಸ್ ರೇಟ್ ಜಾಸ್ತಿ, ಆಟೋ ಜಾಸ್ತಿ ಆಗಿದೆ ಬಾಡಿಗೆ ಸಿಗೋಲ್ಲ  ಅಂದರೆ ನಾನು ಬಿಡ್ತಿನಾ ನಮಗೆ ದುಡ್ಡು ಮರದಲ್ಲಿ ಬಿಡೋಲ್ಲ ಅದು ಇದು ಅಂತ ಉದ್ದಕ್ಕೆ ಹೇಳ್ತಾನೆ ಇದೆ. ಅವನು ವಾಪಸ್ ಖಾಲಿ ಹೋಗ ಬೇಕು ನಿಮಗೆ ಏನು ಗೊತ್ತು ನಮ್ ಕಷ್ಟ ಅಂತ ಅವನು ಗೊಣ ಗೊಣ ಅಂದ.. ನಾನು ದುಡ್ಡು ಬೇರೆ ಜಾಸ್ತಿ ಕೊಟ್ಟ ಸಿಟ್ಟಲ್ಲಿ ಹಾಗಾದರೆ  ನಿಮ್ಮ ಜೊತೆ ನಾನು ಬರ್ಲಾ ಅಂತ ಅವಾಜ್ ಹಾಕದೆ.  ಅದಕ್ಕೆ  ಅವನು ಬನ್ನಿ ಅಂತ ತಿರುಗಿ ನಿಂತೇ ಬಿಡೋದಾ... ತಕ್ಷಣ ನನ್ ಫ್ಯುಸ್ ಆಫ್. ಹೆದರಿಕೆಗೆ ಮುಂದೆ  ಹೆಜ್ಜೆ ಇಡೋಕ್ಕೆ ಆಗಿಲ್ಲ. ಹೇಗೋ ಕಷ್ಟ ಪಟ್ಟು ಒಂದು ಅಂಗಡಿ ಒಳಗೆ ನುಗ್ಗಿದ್ದೀವಿ.  ಅಷ್ಟೊತ್ತಿಗೆ ಆಗಲೇ ಭಾರತಿ ಅವರ ಬರಹ  ನೆನಪಾಗಿ ನಂಗೆ ಭಯ ಶುರುವಾಗಿತ್ತು. ನನ್ನ ಅವನು ಫಾಲೋ ಮಾಡ್ಕೊಂಡು ಬಂದರೆ ಏನು ಮಾಡೋದು ಅಂತ.  ತಿರುಗು ನೋಡೊಕ್ಕು ಹೆದರಿಕೆ. ವಾಪಸ್ಸು ಮನೆಗೆ ಬರುವ ಬಸ್ ಹತ್ತೊವರೆಗೂ ಅದೇ ಭಯ.

ಮನೆಗೆ ಬಂದು ಸುನಿ ಹತ್ತಿರ ಹೇಳಿದರೆ, ಹೋಗು ಇನ್ನೊಂದು ಸಾರಿ ಶಿವಮೊಗ್ಗಕ್ಕೆ ನಿಂಗೆ ಅಡ್ಡ ಹಾಕ್ತಾನೆ  ಗೊತ್ತಾಗುತ್ತೆ. ಹೀಗೆ ಜಗಳ ಮಾಡ್ತಾ ಇರು ಆಟೋದವರ ಜೊತೆ. ಶಿವಮೊಗ್ಗ ಏನು ಬೆಂಗಳೂರು ಅಷ್ಟು ದೊಡ್ಡ ಊರಲ್ಲ. ಅವನು ನಿನ್ನ ಮರೆತು ಹೋಗಲ್ಲ ಅಂತ ಮೊದಲೇ ಹೆದರಿದ ನನ್ನ ಇನ್ನೂ ಹೆದರಿಸಿದ. ಅವತ್ತೇ ಅವಾಗಲೇ ಡಿಸೈಡ್ ಮಾಡ್ದೆ. ಇನ್ನೂ ಯಾವತ್ತೂ ಅಟೋ ಡ್ರೈವರ್ ಜೊತೆ ಜಗಳ ಮಾಡಲ್ಲ  ಅಂತ. 😷
ಹಾಗೆ ಸಾಧ್ಯವಾದಷ್ಟು ಆಟೋದಲ್ಲಿ ಓಡಾಟ ಅವ್ಯಾಡ್ ಮಾಡ್ತಾ ಇದ್ದೀನಿ. ಅಟ್ ಲಿಸ್ಟ್ ಇದು ಮರೆತು ಹೋಗೊ ವರೆಗಾದರೂ ಆಟೋ ಹತ್ತೊಲ್ಲ.

https://m.facebook.com/story.php?story_fbid=10214596224128703&id=1514881037



January 6, 2018

Keep dreaming !

“You are never too old to set another goal or to dream a new dream.”~ C.S. Lewis 

* * * * * * * *                               

ಕೆಲವು ಸಲ ನಾವು ಬಿಟ್ಕೊಂಡಿಲ್ಲ ಅಂದ್ರೂ ಕೆಲವು ಹುಳುಗಳು ತಲೆ ಒಳಗೆ ಸೇರ್ಕೊಂಡೆ ಬಿಡ್ತಾವೆ‌. ನಿನ್ನೆ ನಂಗೆ ಫ್ರೆಂಡ್ ಒಬ್ಬರು ವಾಟ್ಸಪ್ ಲ್ಲಿ ಕಳ್ಸಿದ ಹುಳದ ಫೋಟೋಗಳು ಇಲ್ಲಿವೆ.  ಎಷ್ಟು ಬೇಡ ಬೇಡ ಅಂದರು ಈಗ ನನ್ ತಲೆ ಇರೋ ಹುಳ.  😂

ನಿನ್ನೆಯಿಂದ ನನ್ ಕನಸಲ್ಲಿ, ಮನಸ್ಸಲ್ಲಿ, ಕುತಲ್ಲಿ, ನಿಂತಲ್ಲಿ   ಇದೆ ಹುಳ. ಈ ಹುಳ ಯಾವಾಗ ಕನಸಾಗಿ ಪ್ಲಾನಿಂಗ್ ಶುರುವಾಯಿತೊ ಗೊತಾಗ್ಲೇ ಇಲ್ಲ. ಇವತ್ತು ಪ್ಲಾನ್ ಕೂಡ almost done.

ಕ್ಯಾಲ್ಕುಲೇಟ್ ಮಾಡಿದ್ರೆ ದಿನಕ್ಕೆ  400 ಕಿಲೋಮೀಟರ್‍ಗಿಂತ ಕಡಿಮೆ ಡ್ರೈವ್. ಸುನಿ ಕಣ್ ಮುಚ್ಕೊಂಡು ಡ್ರೈವ್ ಮಾಡಬಹುದು ಅಂತಾನೆ. ಅಂದ್ರೆ ಅವನ ತಲೆ ಒಳಗೂ  ಈ ಹುಳ ಹೋಗಿದೆ ಅಂತ ಅರ್ಥ. ಅತ್ತೆ 50 ದಿವಸ ಮನೆ ಮ್ಯಾನೇಜ್ ಮಾಡೊಕ್ಕೆ ಎಸ್‌ ಅಂದಾಯಿತು. ಇನ್ನೂ ಮಗಳು ಕೇಳೊದೆ ಬೇಡ ನಾಳೆನೇ ಹೊರಡೊ ಹಾಗೆ, ಅಮ್ಮ  ಎರಡು ತಿಂಗಳು ಸ್ಕೂಲ್ ಮಿಸ್ ಮಾಡಿದರೆ ಏನು ಆಗೋಲ್ಲ ಅಲ್ವಾ ಅಂತೆ. ಬಜೆಟ್ ರೆಡಿಯಾಯಿತು ಭರ್ತಿ ಎರಡು ಕೋಟಿ. ಇದರಲ್ಲಿ ಎಲ್ಲಾ ಖರ್ಚು ಸೇರಿದೆ. ಬಿಫೋರ್ ಆಫ್ಟರ್ ಶಾಪಿಂಗ್ ಕೂಡ.
ಆದ್ರೆ ಬೇಕಾಗಿರೊ ದುಡ್ಡು ಮಾತ್ರ ಇಲ್ಲ.! 🤗

ನಂಗೆ ಈ ರೀತಿ ಕನಸುಗಳು, ಪ್ಲಾನ್ಗಳು  ಯಾವಾಗಲೂ ಥ್ರಿಲ್ ಕೊಡುತ್ತೆ. ಜೀವನವನ್ನು ಇನ್ನಷ್ಟು ಇಂಟೆರೆಸ್ಟಿಂಗ್ ಮಾಡುತ್ತದೆ. ಕೆಲವು ಸಾರಿ ಈ ರೀತಿ ಹುಳುಗಳು ವಾರಗಟ್ಟಲೇ ನನ್ ತಲೆ ಬಿಟ್ಟು ಹೋಗದೆ ನನ್ನ ಹುಚ್ಚು ಅತಿರೇಕಕ್ಕೆ ತಲುಪಿರುತ್ತೆ. ಆಗ ಸುನಿ ನಿಜವಾಗಲೂ ಪಾಪ. 😀

ಹೀಗೆ ಎಷ್ಟೋ ಸಾರಿ ನಮ್ಗೆ ಆಗೊಲ್ಲ ಅಂತ ಗೊತ್ತಿರುತ್ತೆ ಅದ್ರೂ ಕನಸು ಕಾಣೋದು, ಪ್ಲಾನ್ ಮಾಡೊದು ಬಿಡೊದಿಲ್ಲ. ನನ್ನ ಪ್ರಕಾರ ಕನಸುಗಳು ನಮ್ಮನ್ನು ಜೀವಂತವಾಗಿಡಲು ಮುಖ್ಯ. ಯಾವಾಗಲೂ ಕನಸು ಕಾಣ್ತಾನೆ ಇರಬೇಕು. ಈಡೇರುವ ಕನಸು, ಕೈಗೆ ಎಟುಕದ ಕನಸು, ಸಣ್ಣ ಕನಸು, ದೊಡ್ಡ ಕನಸು ಹೀಗೆ ತರ ತರದ ಕನಸು ಒಟ್ಟಿನಲ್ಲಿ ಕನಸು ಕಾಣಬೇಕು. ಎಲ್ಲಾ ಕನಸುಗಳು ನನಸಾಗ ಬೇಕು ಅಂತನೂ  ಇಲ್ಲ.  ಸಾಕಾರ ಗೊಳಿಸಲು ಆಗುವ ಕನಸುಗಳನ್ನು ನನಸಾಗಿಸಲು ಶ್ರಮ ಪಡಬೇಕು. ಅಸಾಧ್ಯವಾದ ಕನಸುಗಳಾಗಿ ಕೊರಗುವುದು ಬಿಟ್ಟು  ಮತ್ತೊಂದು ಹೊಸ ಕನಸು ಕಾಣಬೇಕು. ಆಗ ಜೀವನ ಸುಲಭ ಸುಂದರ. ಹಾಗೆಯೇ ಪ್ರೀತಿಸುವವರು ನಾವು ಕಾಣುವ ಕನಸುಗಳ  ಜೊತೆಯಾದಾಗ   ಕನಸುಗಳ ಜೊತೆ ಜೀವನ  ಇನಷ್ಟು ಸುಂದರ ಹಾಗೂ ಕಲರ್ ಫುಲ್. ❤

(ಯಾರಾದರೂ ಈ ರೋಡ್ ಟ್ರಿಪಿಗೆ ಹೋಗುವುದಾದರೆ ನಮಗೆ ಹೇಳಿ ನಿಮ್ ಜೊತೆ ನಾವು ಖುಷಿ ಪಡ್ತೀವಿ. ವಿಶ್ ಮಾಡ್ತೀವಿ. 😍 ಹಾಗಂತ ನಾನು ಈ ಕನಸನ್ನ ಕೈ ಬಿಟ್ಟಿಲ್ಲ. ಸ್ಪಲ್ಪ ಪೋಸ್ಟ್‌ಪೋನ್ ಮಾಡಲಾಗಿದೆ.  ಒಂದು ಇಪ್ಪತ್ತು ವರ್ಷದಷ್ಟು. )

 https://m.facebook.com/story.php?story_fbid=10214443755397080&id=1514881037

ಬೆಳ್ಳಿ ಬೆಳಗು!

ನಿನ್ನೆ ಸುನಿ, ಮಗಳನ್ನು ಸ್ಕೂಲ್ ಬಸ್ಸಿಗೆ ಬಿಡೊಕ್ಕೆ ಹೋಗಿ ವಾಪಸ್ ಬರ್ತಾ  ಅವನ ಮೊಬೈಲ್ ಫೋನಿನಲ್ಲಿ  ತೆಗ್ದ ಎರಡು ಫೋಟೊ ತೋರಿಸ್ದ.     ವಾವ್ ಎಂಥಾ  ಸುಂದರ ಬೆಳಗಿನ ಪೋಟೊಗಳು ಅವು. ಇದು ನಾನು ಇರೋ ಊರು, ಇಲ್ಲೂ ಬೆಳಗು ಇಷ್ಟು ಚೆನ್ನಾಗಿ ಆಗುತ್ತೆ ಅಂತ ರಿಯಾಲೈಜ್ ಆಗೋಕ್ಕೆ ಸ್ಪಲ್ಪ ಟೈಮ್ ಹಿಡಿತು. ನನಗೆ ಹೇಳಿಲ್ಲ ಯಾಕೆ ಅಂತ  ಒಂದಷ್ಟು ಹೊತ್ತು ಅವನಿಗೆ ಬೈಯ್ಕೊಂಡೆ. ಫೋಟೊಗಳನ್ನ ನನ್ ಫೋನಿಗೆ ಶೇರ್ ಮಾಡ್ಕೊಂಡು ಒಂದು ಇಪ್ಪತ್ತು ಸಾರಿ ನೋಡ್ದಿರೂ ನಂಗೆ ಸಮಾಧಾನ ಆಗಿಲ್ಲ.   ಇಷ್ಟು ಸುಂದರವಾದ ಬೆಳಗು ಎಂಜಾಯ್ ಮಾಡ್ದೆ ಅಡುಗೆಮನೆಯಲ್ಲಿ ವೇಸ್ಟ್‌ ಮಾಡ್ತಾ ಇರೋದೊಕ್ಕೆ ಹೊಟ್ಟೆ ಉರಿದು ಹೋಯಿತು. ಅದರ ಜೊತೆಗೆ ಆ ಫೋಟೋಗಳು ಅವನ ವಾಟ್ಸಪ್ ಸ್ಟೇಟಸ್ ಆದಾಗ  ನನ್ ಹೊಟ್ಟೆಯಲ್ಲಿರೊ ಬೆಂಕಿಗೆ ಅದು ತುಪ್ಪ ಆಯಿತು.  ( ಈ ರೀತಿ ಛಾನ್ಸ್ ಸುನಿ ಮಿಸ್ ಮಾಡೋದೆ ಇಲ್ಲ) ಇಡೀ ದಿನ ಒಂಥರಾ ತಲೆಲ್ಲಿ ಹುಳ, ಹೊಟ್ಟೆಲ್ಲಿ ಉರಿ.  ಏನಾದರೂ ಆಗಲಿ ನಾಳೆ ಬೆಳ್ಗೆ ಅಲ್ಲಿಗೆ ಹೋಗಲೇ ಬೇಕು ಅಂತ ಡಿಸೈಡ್ ಮಾಡ್ಕೊಂಡು ಮಲಗ್ದೆ.

ನಿಜವಾಗಲೂ, ಜೀವನದಲ್ಲಿ ಯಾವತ್ತು ಬೆಳಗ್ಗೆ ಬೇಗ ಆಗಲಿ ಅಂತ ಬಯಸಿರಲಿಲ್ಲ. ಕನಿಷ್ಟ ಮೂರು ಸಾರಿಯಾದರೂ ಅಲ್ರಾಮ್ ಸ್ನೂಜ಼್ ಮಾಡಿ ಕೊನೆಗೆ ವಿಧಿಯಿಲ್ಲದೆ ಹಾಸಿಗೆಯಿಂದ ಎಳೋ ನಾನು, ಇವತ್ತು ಫಸ್ಟ್ ಸಾರಿಗೆ ಅದೂ ಊರಿಗಿಂತ ಮುಂಚೆ ಎದ್ದಾಗ, ಸುನಿಗೆ ಗಾಬರಿ!  ಏನಾಯಿತೇ ಅಂದ, ಅಲ್ಲಿಗೆ ಹೋಗಬೇಕಲಾ ಅಂದೆ ನಾನು. ಹುಚ್ಚು ನಿನಗೆ ಅನ್ನೊ ರೀತಿಯಲ್ಲಿ  ನಕ್ಕು ತಿರುಗಿ ಮಲಗ್ದ‌. (ಬೇರೆ ದಿನ ಆಗಿದ್ರೆ ಸುಮ್ನೆ ಬಿಡ್ತಾ ಇರಲಿಲ್ಲ ನಾನು).

ಮಗಳು ಸ್ಕೂಲ್‌ಗೆ ಹೊರಟ ತಕ್ಷಣ, ಅಡುಗೆ, ಮನೆ, ಕೆಲಸ  ಎಲ್ಲಾ ಹಾಗೇ ಬಿಟ್ಟು  ಅರ್ಧ ಘಂಟೆಲ್ಲಿ ಬರ್ತೀನಿ ಅಂತ ಹೇಳಿ ನಾನು ಅವರ ಹಿಂದೆ ಓಡ್ದೆ . ಸುನಿ ನಿನ್ನೆ ಫೋಟೋ ತೆಗ್ದ ಜಾಗಕ್ಕೆ. ನಾನು ಕಣ್ಣು ಅಲಾಡಿಸದೆ ನೋಡ್ತಾನೆ ಇದ್ದೆ ತುಂಬಾ ಹೊತ್ತು. ನಿಜವಾಗಲೂ ಸುಂದರ, ಅತಿ ಸುಂದರವಾದ ಬೆಳಗು. ಆ ಫೋಟೋ ಖಂಡಿತ ಇಲ್ಲಿನ ಅರ್ಧ ಭಾಗಕ್ಕೂ ಸಮ ಇಲ್ಲ ಅನ್ಸತು . ದಾರಿಗೆ ಆಕಾಶದಿಂದ ಯಾರೋ ಬೆಳಕು ಚೆಲ್ಲುತ್ತಿರೊ ಹಾಗೆ, ಬೆಳಕಿನ ಕಿರಣಗಳು ಮರದ ಎಲೆಗಳನ್ನು ತೂರಿಕೊಂಡು ಬರೋ ದೃಶ್ಯ ಪದಗಳಲ್ಲಿ ಹೇಳೊಕ್ಕೆ ಆಗೊಲ್ಲ. ನಾನು ಬರಿ ಒಂದಷ್ಟು ಜಾಗದಲ್ಲಿ  ಮಾತ್ರ  ಬೆಳಗು ಚೆನ್ನಾಗಿರುತ್ತೆ  ಅಂದ್ಕೊಂಡಿದ್ದೆ. ಅದ್ರೆ ಪೂರ್ತಿ ಬೆಳಗ್ಗೆ ಇಡೀ ಇಡಿಯಾಗಿ ಸುಂದರ.   ನನ್ ಪೆದ್ದುತನಕ್ಕೆ ನಂಗೆ ನಗು ಬಂತು.

ಎಷ್ಟೋ ವರ್ಷಗಳಿಂದ  ದಿನ ನೋಡುವ ಬೇಲಿ ಸಾಲಿನ  ಹೂವುಗಳು ಕೂಡ ನನ್ನ ಕಣ್ಣಿಗೆ ಹೊಚ್ಚ ಹೊಸದಾಗಿ ಕಂಡವು. ಕಾಡಿನ ಬಣ್ಣ ಬಣ್ಣದ ಸುಂದರಿಯರು ಅವುಗಳು. ಎಲೆ, ಬಳ್ಳಿ, ಹೂ, ಮರ, ಭತ್ತದ ಗದ್ದೆಗಳು , ಮಣ್ಣು, ಕಲ್ಲು, ರಸ್ತೆ ಪ್ರತಿಯೊಂದು ವಾವ್ !  ಎಲ್ಲಾ ಇಬ್ಬನಿಯಲ್ಲಿ ನೆಂದು ಬಿಸಿಲಿನಲ್ಲಿ ನಿಂತು ಹೊಳೆಯುವುದನ್ನು  ನೋಡಿದರೆ ಮಾತ್ರ ಅನುಭವಕ್ಕೆ ಬರುವುದು. ಅದನ್ನು ಒಂದಷ್ಟು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಅಸಾಧ್ಯ ಹಾಗೂ ಅದು ಕಲ್ಪನೆಗೂ ಸಿಗದ ಮಾತು.

 ಸುತ್ತ ಮುತ್ತ ಇರೋ ಮನಸ್ಸಿಗೆ ಇಷ್ಟು ಖುಷಿ ನೀಡುವ ಸುಂದರವಾದ ಪರಿಸರ ಎಂಜಾಯ್ ಮಾಡ್ದೆ ಬೇರೆ ಎಲ್ಲೋ ಸಂತೋಷ ಇದೆ ಅಂತ  ಜೀವನ  ಕಳೆದಿರುವುದಕ್ಕೆ ನಿಜವಾಗಲೂ ಬೇಸರ ಆಯಿತು. ಆ ಕ್ಷಣದಲ್ಲಿ ನಂಗೆ "ಇರುವುದೇಲ್ಲಾ ಬಿಟ್ಟು ..... .. " ಮಾತು ನೆನಪಾಗದೆ ಇರ್ಲಿಲ್ಲ.

ಸೃಷ್ಟಿಗೆ ಸೃಷ್ಟಿನೇ ಸಾಟಿ. ನಿತ್ಯವೂ ನೂತನ. ಪ್ರತಿ ಬೆಳಗು, ಪ್ರತಿ ಬೆಳಕಿನ ಕಿರಣವು ವಿಭಿನ್ನ. ಯಾವ ಉಪಮೇಯ ಅಥವಾ ಇನ್ಯಾವದೋ ಪದಗಳಲ್ಲಿ ವರ್ಣಿಸಿದರೂ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ ಇಲ್ಲ.  ಅನುಭವಿಸಲು, ಆಸ್ವಾದಿಸಲು  ಮನಸ್ಸಿರಬೇಕು ಅಷ್ಟೇ.   ಆಗ ಸಮಯ ತಾನಾಗಿಯೇ ಹೊಂದಿಕೆ ಆಗುತ್ತದೆ.  ನಾವು ಎಷ್ಟೇ ದುಡ್ಡು ಕೊಟ್ಟರು ಸಿಗದ  ಅನುಭವ, ಸಂತೋಷ ಇದು.

'Spend your money on the things money can buy. Spend your time on the things money can’t buy' — Haruki Murakami


(ಚೆನ್ನಾಗಿರೊ 2  ಫೋಟೋ ಸುನಿ ಕ್ಲಿಕ್ ಮಾಡಿದ್ದು, ಉಳಿದಿದ್ದು ... ನೋಡಿದರೆ ನಿಮಗೆ ಗೊತ್ತಾಗುತ್ತೆ. 😂 I wish photography is  as easy as posing. 😜  Its not my cup of tea.😏)















https://m.facebook.com/story.php?story_fbid=10214420554537073&id=1514881037


ದಾನೆ ದಾನೆ ಪೆ ಖಾನೆವಾಲೆ ಕಾ ನಾಮ್!

ನಾವು ಚಿಕ್ಕವರಿದ್ದಾಗ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಅಪ್ಪಿತಪ್ಪಿ ಎಡ ಮಗ್ಗುಲಲ್ಲಿ ಏಳುವುದು ಅಮ್ಮ, ಹಿರಿಯಮ್ಮನ ಕಣ್ಣಿಗೆ ಏನಾದರೂ ಕಂಡರೆ ಸಾಕು, ಮತ್ತೆ ಮಲಗಿಸಿ ಬಲ ಮಗ್ಗುಲಲ್ಲಿ ಏಳೋ ವರೆಗೂ ನಮ್ನ ಬಿಡ್ತಾ ಇರ್ಲಿಲ್ಲ. ಅಮ್ಮ ಸಿಟ್ಟಲ್ಲಿ ಬೈಯ್ವಾಗಲೂ ಅಷ್ಟೆ ಇವತ್ತು ಯಾವ್ ಮಗ್ಗುಲಲ್ಲಿ ಎದ್ದಿದಿಯಾ ಗ್ರಹಚಾರ ಕಾದಿದೆ ಅನ್ನೊದು ಅಂತೂ ಸಾಮಾನ್ಯ. ಈಗಲೂ ಅವರಿಬ್ಬರು ಏನಾದರೂ ಆಗಬೇಕಾದ ಕೆಲಸ ಆಗ್ದೆ ಇದ್ದಾಗ ಅಥವಾ ಕೆಟ್ಟದು ಏನಾದರು ಆದ್ರೆ ಫಸ್ಟ್‌ ಹೇಳೊದೆ ಯಾಕೋ ಇವತ್ತು ಎಡ ಮಗ್ಗುಲಲ್ಲಿ ಎದ್ದಿರಬೇಕು ಅಂತ.

***
ಒಂದಷ್ಟು ಹೊತ್ತು ಯಾರಾದರೂ ಫ್ರೆಂಡ್ ಜೊತೆ ಬಿರಿಯಾನಿ ತಿನ್ತಾ ಹರಟೆ ಹೊಡಿಯೊ ಪ್ಲಾನ್ ಮಾಡ್ಕೊಂಡು ಹೋದ್ರೆ,ಯಾವಾಗಲೂ ನೀನು ಸಿಗ್ದೆ ಎಷ್ಟೋ ದಿನ ಆಯಿತು. ಕಾಫಿಗೆ ಹೋಗಣ, ಒಟ್ಟಿಗೆ ಊಟ ಮಾಡೋಣ ಅಂತ ಜೀವ ತಿನ್ತಾ ಇದ್ದ ಒಬ್ಬರಲ್ಲ ಮೂರು ಮೂರು ಜನ ಫ್ರೆಂಡ್ಸ್ ಒಬ್ಬರೂ ಫ್ರೀ ಇರ್ ಬಾರದಾ.  ಕೊನೆಗೆ ಯಾರೂ ಸಿಗ್ದೆ ಮಟ ಮಟ ಮಧ್ಯಾಹ್ನ ಬಿಸ್ಲಲ್ಲಿ  ಒಂಟಿ ದೆವ್ವದ ತರ ಶಿವಮೊಗ್ಗ ಪೇಟೆಲ್ಲಿ ತಿರುಗುವಾಗ, ನಂಗೆ ಅಕ್ಷರಶಃ ನಾನು ಇವತ್ತು ಬೆಳ್ಗೆ ಯಾವ್ ಮಗ್ಗುಲಲ್ಲಿ ಏದ್ದನೋ ಅಂತ ಅನ್ಸಿದ್ದು ಅಂತು ನಿಜ.

ಡ್ರಾಪ್ ಕೊಟ್ಟ ಗಂಡ ಊಟಕ್ಕೆ ಬರ್ತೀಯಾ ಅಂತ ಕೇಳಿದಾಗ , ಹೋಗೊ ನಂದು ಬೇರೆ ಪ್ರೋಗ್ರಾಂ ಇದೆ ಅಂತ ತಿರುಗೂ ನೋಡದೆ ಕಾರು ಬಾಗಿಲು ಹಾಕೊಂಡು ಬರುವಾಗ ದೇವಾರಣೆ ಅಂದ್ಕೊಡಿರಲಿಲ್ಲ ಇವತ್ತು ಊಟಕ್ಕೆ ಇವನೇ ಗತಿ ಅನ್ನೊದು. ಯಾರು ಸಿಗದೆ ಅವನಿಗೇ ರಾಗ ಎಳ್ಕೊಂಡು ಫೋನ್ ಮಾಡ್ದೆ.

ಕೊನೆಗೆ...  ಫ್ರೆಂಡ್ ಜೊತೆ ಗಾಸಿಪ್ ಮಾಡ್ಕೊಂಡು ಬೆರಳು ನೆಕ್ಕಿ ಬಿರಿಯಾನಿ ತಿನ್ನೊ ಆಸೆ ಇಟ್ಕೊಂಡು ಹೋಗಿ ಅಚ್ಚುಕಟ್ಟಾಗಿ ಗಂಡನೊಟ್ಟಿಗೆ ತಿಥಿ ಊಟ ಮಾಡ್ಕೊಂಡು ಬರೋ ಹಾಗೆ ಆಯಿತು ನಿನ್ನೆ ನನ್ ಕಥೆ.

ಇದರ ಜೊತೆಗೆ ಸುಡು ಬಿಸಲಲ್ಲಿ ಸಾಕಷ್ಟು ಜ್ಞಾನೋದಯ ಕೂಡ ಆಯಿತು. ಮೊದಲನೆಯದಾಗಿ ಅಮ್ಮನ ಮಾತು ನಿಜ ಇರ್ ಬಹುದು. ಎರಡನೆಯದು ಖಂಡಿತವಾಗಿಯೂ ಹಳೆ ಗಂಡನ ಪಾದವೇ ಗತಿ ಅನ್ನೊ ಗಾದೆ ಸುಳ್ಳಲ್ಲ. ಸಾರನ್ನ ನಿಜವಾಗಲೂ ಚೆನ್ನಾಗಿರುತ್ತೆ. ಕೊನೆಯದಾಗಿ ಹಾಗೂ ತುಂಬಾ ಉಪಯುಕ್ತ ಜ್ಞಾನೋದಯ ಅಂದರೆ ನಮ್ಮ್ ಎಷ್ಟೇ ಕ್ಲೋಸ್ ಫ್ರೆಂಡೇ ಆದರೂ ಯಾವಾಗಲೂ ಫ್ರೀ ಇರ್ತಾರೆ ಅಂತ ನಮಗೆ ನಾವೇ ಇಮ್ಯಾಜಿನ್ ಮಾಡ್ಕಳದೆ... ಅವರಿಗೆ ಮೊದಲೇ ಫೋನ್ ಮಾಡಿ ಹೋಗ್ಬೇಕು.

 ಆದ್ರೆ ಬಿಸಿ ಬಿಸಿ ಗರಿಗರಿ ಸೂಪರ್ ಟೇಸ್ಟಿಯಾಗಿದ್ದ ಎರಡು ಉದ್ದಿನ ವಡೆ ಮೇಲೆ ಮೊದಲೇ ನನ್ ಹೆಸರು ಬರೆದಿದ್ದು ಅಂತೂ ಗ್ಯಾರಂಟಿ ಆಯಿತು.
https://m.facebook.com/story.php?story_fbid=10214403498830691&id=1514881037

ಕೊನೆ ನಮನ.

G.K. J ಇನ್ನಿಲ್ಲ. (G. K. Jayaram)

ಬೆಳಗ್ಗೆ ವಿಷಯ ಗೊತ್ತಾದ ಕ್ಷಣದಿಂದ ಅವರ ಬಗ್ಗೆ ಹೇಳಲೇ ಬೇಕು ಅಂತ ಬರೆಯಲು ಶುರು ಮಾಡಿ ಇಪ್ಪತ್ತು ಸಾರಿ ಡಿಲಿಟ್ ಮಾಡಿ ಆಯಿತು. ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡ ಫೀಲ್.

ಸುಮಾರು 3  ವರ್ಷಗಳಿಂದ ಆರೋಗ್ಯ ಅವರ ಜೊತೆಗೆ ಇರಲಿಲ್ಲ. ಆದರೆ ಅವರನ್ನ ನೋಡಕ್ಕೆ ನಾನು ಒಂದು ಸಾರಿನ್ನೂ ಹೋಗಲಿಲ್ಲ. ಟೇಬಲ್ ಮೇಲೆ ಕೂತು ಎಂದಿಗೂ ಬತ್ತದ ಉತ್ಸಾಹ ದಲ್ಲಿ ಪಾಠ ಮಾಡ್ತಾ ಇದ್ದ ಜಿಕೆಜೆ ಹೊರತಾಗಿ ಅವರನ್ನು ಅನಾರೋಗ್ಯ ಸ್ಥಿತಿಯಲ್ಲಿ   ನೋಡುವುದು ನನ್ನಿಂದ ಆಗದ ಮಾತು.

ಅವರ ಪಾಠ ಬರೀ ಇಂಗ್ಲಿಷ್  ಅಥವಾ ಕ್ಲಾಸ್ ರೂಮ್ ಗೆ ಮಾತ್ರ  ಸೀಮಿತ ಆಗಿರಲಿಲ್ಲ . ಅವರಿಂದ ನಾವು ಕಲ್ತಿದ್ದು ಒಂದಿಷ್ಟು ಅಕ್ಷರಗಳಲ್ಲಿ ತಿಳಿಸೊಕ್ಕೆ ಸಾಧ್ಯನೇ ಇಲ್ಲ ‌.  ಅವರ ಸ್ಟೂಡೆಂಟ್ ಆಗಿ ಪಾಠ ಕೇಳದವರಿಗೆ ಇದು ಚೆನ್ನಾಗಿ ಗೊತ್ತು. ಇನ್ನೂ ಹೇಳೊಕ್ಕೆ ತುಂಬಾ ಇದೆ. ಆದರೆ ಆಗ್ತಾ ಇಲ್ಲ.

ಜಿಕೆಜೆ ಸ್ಟೂಡೆಂಟ್ ನಾವು ಅಂತ ಹೇಳ್ ಕೊಳ್ಳುವುದೇ ನಮಗೆ ಹೆಮ್ಮೆ ವಿಷಯ ಯಾವತ್ತಿಗೂ.

https://m.facebook.com/story.php?story_fbid=10214075285145554&id=1514881037

ಹ್ಯಾಪಿ ಹಬ್ಬ

ಗಜಮುಖನೆ ಗಣಪತಿಯೇ ನಿನಗೆ ವಂದನೆ...‌

ಒಂದು ಎರಡು ಮೈಲಿ ದೂರದ ಊರಿನ ಶಾಲೆಯಲ್ಲಿ ಕೂರಿಸಿದ ಗಣಪತಿಯ ಮೈಕಿನ ಹಾಡಿನ ಜೊತೆಗೆ, ಇವತ್ತಾದರೂ ಒಂದು ದಿನ  21  ದೂರ್ವೆ ಕ್ಯುಯಿದು ದೇವರಿಗೆ ನಮಸ್ಕಾರ ಮಾಡರೇ... ಅನ್ನುವ ಅಮ್ಮನ ಹಾಡು. ( ಕ್ಯುಯಿದು ದೇವರು ಮುಂದಿಡೋ ವರೆಗೂ ಬಿಡ್ತಾ ಇರಲಿಲ್ಲ.).
ನಮ್ಮ ಬಾಲ್ಯದ ಅಷ್ಟು ಗಣಪತಿ ಹಬ್ಬದ ಒಂದೇ ಒಂದು ನೆನಪು ಹಾಗೂ ಎವರ್ ಫ್ರೆಶ್. 😍

  *********

ಇವತ್ತು ಬೆಳಗ್ಗೆಯಿಂದ ನಮ್ ಮನೆಯಲ್ಲಿ ಹಾಡ್ತಾ ಇರೋದು  Vidya Voxನ ಮ್ಯಾಶ್ ಅಪ್ ಶೇಪ್ ಅಫ್ ಯು, ಚೆನ್ನಾ ಮಾರಿಯಾ... 😃

ವಿದ್ಯಾಳ ಮೆಲೋಡಿಯಸ್ ಕಂಠದ ಹಿನ್ನೆಲೆಯಲ್ಲಿ ಮಗಳ ಕೈಯಲ್ಲಿ  ಗೋಧಿ ಹಿಟ್ಟಿನಿಂದ ಅರಳಿದ ಕ್ಯುಟ್ ಗಣಪ ಗೋ ಗ್ರೀನ್ ಮೇಸೆಜ್ ಜೊತೆಗೆ ಇಲ್ಲಿದೆ. ❤
 
ಎಲ್ಲರಿಗೂ ಒಳ್ಳೆಯದಾಗಲಿ. ಹ್ಯಾಪಿ ಹ್ಯಾಪಿ ಗಣಪತಿ ಹಬ್ಬ. 😍😍

(PS - ಪಕ್ಕದಲ್ಲಿರೋದು ಕಾಟ ಕೊಟ್ಟು (ಟಿಪಿಕಲ್ ಅಮ್ಮನ ರಾಗದಲ್ಲೇ) ಮಗಳ ಕೈಯಲ್ಲೇ ಕ್ಯುಯಿಸಿದ 21 ದುರ್ವೆ. 😂




https://m.facebook.com/story.php?story_fbid=10213761692425932&id=1514881037

ಅಪ್ಪ


Father's day!!

ನಂ(ಮ)ಗೆ ಪ್ರತಿ ದಿನವು ಅಪ್ಪನ ದಿನ. ನಾನು ಅಪ್ಪನ ಮಗಳು. ಈ ಒಂದೇ ದಿನವನ್ನು ಅಪ್ಪನ ದಿನವಾಗಿ ಮಾಡಲು ಇಷ್ಟ ಇಲ್ಲ.

ಅಪ್ಪ...  You're a true sportsman in every sense. You're an unsung hero. 😍
-----
ಅಪ್ಪ, ಬೇರೆಯವರಿಗೆ ಕಾರು, ಬಂಗಾರ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಇಸ್ಪೀಟ್ ಗೀಳಿನ ಮನುಷ್ಯ. ಆದರೆ ಅಪ್ಪ.. ನೀನು ನಾನು ಕಂಡ ಅತ್ಯಂತ ಯಶಸ್ವಿ  ಅಪ್ಪ.

ಅಪ್ಪ , ಮಗಳ ಮೊದಲ ಹೀರೊ ಅಂತೆ! ಆದರೆ ನೀನು ನನ್ನ ಮೊದಲ ಗುರು, ಗೈಡ್, ಮಿತ್ರ, ಶತ್ರು ಎಲ್ಲಾ.!

ಅಪ್ಪ.. ನೀನೊಬ್ಬ ಅದ್ಭುತ sportsman. (Both on field & off filed). ನಿನ್ನಲ್ಲಿರುವ  Sportsman's spirit ನನ್ನ ಮೊದಲ ಪಾಠ. ನಾನು ಕಂಡ ಮೊದಲ ಫೆಮಿನಿಸ್ಟ್ ನೀನು.

ಅಪ್ಪ... ನೀನು ಹೇಳಿ ಕೊಟ್ಟ ಟೇಬಲ್ ಮ್ಯಾನರ್ಸ್ ಪಾಠ ದಿಂದ ಹಿಡಿದು ಸಾಮಾಜಿಕ ಕಳಕಳಿ ವರೆಗಿನ ಪಾಠ ಗಳೇ ನನ್ನ ಇವತ್ತು ಕಾಯ್ತಾ ಇರೋದು.

ನಿನಗೆ ಸರಿ ಅನ್ಸಿದ್ದು ನೀನು ಮಾಡು, ಅದರಿಂದ ಬೇರೆ ಯವರಿಗೆ ತೊಂದರೆ ಆಗಬಾರದು ಅಷ್ಟೇ. ಎನ್ನುವ ನಿನ್ನ ಮಾತು ನನ್ನ ಪ್ರತಿ ಹೆಜ್ಜೆಗೂ ಗಟ್ಟಿ ಬುನಾದಿ.

ಅಪ್ಪ... ನಾನು ಇಡುವ ಎಲ್ಲಾ ಹೆಜ್ಜೆಗಳಲ್ಲೂ ನಿನ್ನದೇ ಛಾಪು. ನನ್ನ ಮನೋಭಾವ, ಆಯ್ಕೆ, ನಾ ನಂಬಿರುವ ಸಿದ್ಧಾಂತಗಳು ಎಲ್ಲಾ ನಿನ್ನದೇ ಬಳುವಳಿ. ಅಪ್ಪ.... ನಿನ್ನ ಮುಂದುವರಿಕೆ ನಾನು.

 ಅಪ್ಪ...  You're a true sportsman in every sense. You're an unsung hero. 😍

(PS: this is on behalf of WE 3. 😍 )



https://m.facebook.com/story.php?story_fbid=10213081643305129&id=1514881037

September 27, 2017

ರಶ್ಮಿ, ರಮ್ಯ, ಪುಟ್ಟು… ಯಾರು ಚಾಕೊಲೇಟ್ ಕವರ್ ಕಿಟಿಕಿಯಿಂದ ಹೊರಗೆ ಎಸೆದಿದ್ದು? ಮನೆ ಮುಂದೆ ಯಾರು ಪೇಪರ್ ಚೂರು ಮಾಡಿ ಹಾಕಿದ್ದು? ನಿಮ್ಗೆ ಎಷ್ಟು ಸಾರಿ ಹೇಳಬೇಕು ಮಾವಿನ ಮರದ ಕೆಳಗೆ ಕಸ ಹಾಕಿ ಗಲೀಜು ಮಾಡ್ಬೇಡಿ ಅಂತ. ಮನೆ ಸುತ್ತ ಮುತ್ತ ದೂರ ದೂರಕ್ಕೂ ಒಂದು ಪೇಪರ್, ಕವರ್, ಕಸ ಹಾಕಿದ್ದು ಕಂಡ್ರೆ ಸಾಕು ಅಮ್ಮನ ಸಿಟ್ಟು ನೆತ್ತಿಗೇರಿ ಕೂಗಕ್ಕೆ ಶುರು ಮಾಡ್ತಿದ್ದಳು (ಮಾಡ್ತಾಳೆ ).
ಇಷ್ಟೇ ಅಲ್ಲ! ಪೇಪರ್ ಜೋಡಿಸಿಟ್ಟರೆ, ಒಂದು ಪೇಪರ್ ತಲೆ ಕೆಳಗೆ ಇಟ್ಟಿದೀಯಾ, ಸ್ಟ್ಯಾಂಡ್ ಮೇಲೆ ಇಟ್ಟ ಬಟ್ಟೆಗಳು ಉದ್ದ ಗಿಡ್ಡ ಆಗಿದೆ, ಲೋಟದ ಮೇಲೆ ಬೆರಳು ಅಚ್ಚು ಇದ್ರೂ ತೊಳೆದು ಒರೆಸಿ ಇಡಲಿಲ್ಲ. ಒಂದೇ ಎರಡೇ ಎಲ್ಲಾದರಲ್ಲೂ ಪ್ರತಿಯೊಂದರಲ್ಲೂ ಕ್ಲೀನೂ, ಕ್ಲೀನೂ.! ಸ್ಪಲ್ಪ ಗಲೀಜನ್ನು ಸಹಿಸಲ್ಲ ಅವಳು. ಇವತ್ತಿಗೂ ಅಷ್ಟೇ ಅಮ್ಮ ಯಾವುದೇ ಮೀಟಿಂಗೋ, ಎಲೆಕ್ಷನ್ ಕ್ಯಾಂಪ್ಯನ್ ಅಥವಾ ಊಟದ ಮನೆಗೆ ಇರಲಿ ಎಲ್ಲಿಗೂ ಹೋಗೋ ಮುಂಚೆ ಅಡುಗೆ ಮನೆಯಿಂದ ಕೊಟ್ಟಿಗೆ ವರೆಗೆ ಎಲ್ಲಾ ಕ್ಲೀನ್ ಮಾಡಿ ಮುಗಿಸೇ ಮನೆಯಿಂದ ಹೋಗುವುದು. ಅಡುಗೆ ಊಟಕ್ಕಿಂತ ಕ್ಲೀನ್ ಅವಳ ಮೊದಲ ಆದ್ಯತೆ. ಹತ್ತಿರದಿಂದ ಅಮ್ಮನ ನೋಡಿದವರಿಗೆ ಇದು ಚೆನ್ನಾಗಿ ಗೊತ್ತು. ಜಯಮ್ಮನಾ… ಹಿಡಿ - ಒರಸೊ ಬಟ್ಟೆ ಹಿಡ್ಕೊಂಡೇ ಇರ್ತಾಳೆ ಅಂತ ಹೇಳಿ ನಗ್ತಾರೆ ಕೂಡ. ಜಾತಿ, ಮಡಿ, ಮೈಲಿಗೆ, ಮುಸರೆ ಅಂತ ಮಕ್ಕಳಿಗೆ ಕಲಿಸಿದ್ರೆ ( ಬ್ರಾಹ್ಮಣರು ಅನ್ಸಿಕೊಳ್ಳೊ ನಮ್ಮಗಳ ಹೆಚ್ಚಿನ ಮನೆಯಲ್ಲಿ ಇದೇ ಫಸ್ಟ್ ತಲೆಗೆ ತುಂಬೋದು ) ಅಮ್ಮ ಮಾತ್ರ ನಮಗೆ ಹೇಳಿ ಕೊಟ್ಟ ಒಂದೇ ಮಂತ್ರ “ಕ್ಲೀನ್”
****ಈ ಪುರಾಣ ಈಗ ಯಾಕೆ ಅಂದರೆ....
ನಿನ್ನೆ ನನ್ ಫ್ರೆಂಡ್ ಒಬ್ಬಳು ಫೋನ್ ಮಾಡಿ “ ಏನೇ ! ಮೋದಿ ಬರ್ತಡೇಗೆ ಗಿಫ್ಟಾ? (ನನ್ನ 2 ದಿನ ಹಿಂದಿನ FB ಪೋಸ್ಟ್ ಕುರಿತು ) ನೀನು ಮೋದಿಯ ಸ್ವಚ್ಛ ಭಾರತ ಅಭಿಯಾನ ಫಾಲೋಯರ್ ಆಗಿದ್ದಿಯಾ ಅಂದ್ಲು. ನಂಗೆ ಉರಿದು ಹೋಯ್ತು.
ನಾನ್ಸೆನ್ಸ್! ಯಾಕೆ ಮೋದಿ ಬರೋ ಮೊದಲು ಕ್ಲೀನ್ ಮಾಡ್ತಾನೇ ಇರ್ಲಿಲ್ವಾ! ಮೋದಿ ಸ್ವಚ್ಛ ಭಾರತ ಅಂತ ಕ್ಲೀನ್ ಆಗಿರೋ ಜಾಗದಲ್ಲಿ ಪೊರಕೆ ಹಿಡಿದು ಫೋಸ್ ಕೋಡೊ ಮೊದಲು ಅಥವಾ ಮೈಕ್ ನಲ್ಲಿ ಸ್ವಚ್ಛ ಭಾರತ ಅಂತ ಕಿರಚೋ ಮೊದಲು ಯಾರು ನಮ್ಮ ಮನೆ, ಊರು, ಕೇರಿ ಸ್ವಚ್ಛವಾಗಿ ಇಡ್ತಾ ಇರ್ಲಿಲ್ವಾ.ನಾವು ನಮ್ಮ ಊರನ್ನು ಕ್ಲೀನ್ ಮಾಡಿದ್ದು ಮೋದಿಯ ಯಾವ ಭಾಷಣ ಅಥವಾ ಫೋಸ್ ನಿಂದ ಇಂಪ್ರೆಸ್ ಅಥವಾ ಇನ್ ಸ್ಪೈರ್ ಆಗಿ ಅಲ್ಲ. ನಮ್ಮ ಊರು ಸದಾ ಸುಂದರವಾಗಿ ಮತ್ತು ಸ್ವಚ್ಛವಾಗಿ ಇರಲಿ ಅನ್ನುವ ಉದ್ದೇಶ, ಪ್ರೀತಿ ಮತ್ತು ಕಾಳಜಿಯಿಂದ ಅಷ್ಟೇ.
ಆದರೂ ನಾನು, ನಾವು ಮಾಡಿದ ಕೆಲಸಕ್ಕೆ ಯಾರಿಗಾದರೂ ಕ್ರೆಡಿಟ್ ಕೊಡಬೇಕು ಅಂದರೆ ಅದು ಪೂರ್ತಿ “ಅಮ್ಮಂಗೆ”. ಇವತ್ತು ನನ್ನಲ್ಲಿ ಏನಾದರೂ ಸ್ಪಲ್ಪ ಸಾಮಾಜಿಕ, ಪರಿಸರ ಕಾಳಜಿ ಮತ್ತು ಸ್ವಚ್ಛತೆ ಬಗ್ಗೆ ಅರಿವು ಇದ್ದಲ್ಲಿ ಅದು ಅವತ್ತು ಅಮ್ಮ ನಮ್ಮಲ್ಲಿ ನೆಟ್ಟ “ಸ್ವಚ್ಛತೆ” ಬೀಜವೇ ಕಾರಣ. ಇದು ಈಗ ಎಷ್ಟು ದೊಡ್ಡ ಮರವಾಗಿದೆ ಅಂದ್ರೆ ಶತ ಸೋಮಾರಿ ನನ್ನ ತಮ್ಮನಿಗೂ ಕ್ಲೀನ್ ಭೂತ ಹಿಡ್ಕೊಂಡಿದೆ.
ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು … ಯಾವಾತ್ತಿಗೂ ನೂರಕ್ಕೆ ಇನ್ನೂರಷ್ಟು ಸತ್ಯ.
(ಅಮ್ಮನ ಜೊತೆ ನಾವು 3 ಜನ ಮಕ್ಕಳು ಇರೋ ಫೋಟೊಕ್ಕಾಗಿ ಲ್ಯಾಪ್ ಟಾಪ್, ಫೋನ್ ಜಾಲಾಡಿದರೂ ಸಿಗಲಿಲ್ಲ. ಆದರೆ ಎಂಥಾ coincidence ಅಂದ್ರೆ ಅಮ್ಮನೇ ಮನೆಗೆ ಬಂದಳು ಇವತ್ತು!!)
https://www.facebook.com/rashmikargal/posts/10213968834124345

June 5, 2014

ತೂ ಭೀ ಆ ಸಬ್ ಕೊ ಛೋಡ್ ಕೆ…

ಬೆಳಿಗ್ಗೆಯಿಂದ ಬೆಳಗಿದ ಸೂರ್ಯ ಮೋಡದ ಹಿಂದೆ ಎಲ್ಲೋ ಕಳೆದು ಹೋಗಿದ್ದಾನೆ. ಥೇಟ್ ನಿನ್ ಥರಾ. ಮೋಡ ಮುಚ್ಚಿದ ಆಕಾಶ, ಗಾಳಿಯಿಲ್ಲದ ಕಪ್ಪುಗಟ್ಟಿದ ಸಂಜೆ ರಂಗೇಲ್ಲಾ ತೊಳಿದಿಟ್ಟ ಬ್ಲ್ಯಾಕ್  ಅಂಡ್ ವೈಟ್ ಚಿತ್ರ . ಸ್ಥಬ್ದ ನೀರವ. ನೀನಿಲ್ಲದ ನನ್ ಹಾಗೇ. 
ಈ ಸಂಜೆ ಯಾಕಾಗಿದೆ ನೀನಿಲ್ಲದ…, ಈ ಸಂತೆ ಸಾಕಾಗಿದೆ....
ಸಾಯಂಕಾಲದ ಸಂಕಟ ಅನುಭವಿಸಕ್ಕೂ ಆಗಲ್ಲ, ಆಡಕ್ಕೂ, ಒಂಥರಾ ಹೊಕ್ಕಳ ಹುಣ್ಣಿನ ಹಾಗೆ. ಎಲ್ಲಾ ಬಿಟ್ಟು ಓಡಿ ಹೋಗಣ ಅನ್ಸೋದು, ಜನ ಬೇಡವಾಗೋದು, ಗುಂಪಲ್ಲೂ ಒಂಟಿತನ ಕಾಡೋದು ಎಲ್ಲಾ ನೀನಿಲ್ಲದ  ಖಾಲಿ ಖಾಲಿ ಉದ್ದ ಸಂಜೆಗಳಲ್ಲೇ,  ಈ ಸಂಜೆಗಳಲ್ಲಿ ನಿನಗಾಗಿ ಮನಸ್ಸು ಚಡಪಡಿಸುತ್ತೆ, ನಿನ್ ಜೊತೆ ಮಾತಾಡಲು ಮನಸ್ಸು ಹವಣಿಸುತ್ತೆ. ಮೊಬೈಲ್‌ನಲ್ಲಿ ನಿನ್ನ ನಂಬರಿಗಾಗಿ ಬೆರಳುಗಳು ಹುಡುಕಾಡುತ್ವೆ. ಡಯಲ್ ಮಾಡಿ ಕನೆಕ್ಟ್ ಆಗುವ ಮುನ್ನ ಕಟ್ ಮಾಡಿದ ಕಾಲ್‌ಗಳು, ಟೈಪ್ ಮಾಡಿ ಕಳಿಸದೆ ಔಟ್ ಬಾಕ್ಸ್ ತುಂಬಿದ ಮೇಸೆಜ್‌ಗಳು ಅದೇಷ್ಟೋ. ಗೊತ್ತು, ಅವುಗಳು ನಿನ್ನ ತಲುಪಿದರೂ ಈಗ ತಟ್ಟಲಾರವು. ಅವುಗಳಿಗೆಲ್ಲಾ ನಿಂದೊಂದೇ ಉತ್ತರ ಅಸಹನೀಯ ಮೌನ.  ಮಾತಾಡಾದರೂ ಕಡಿದುಕೊಳ್ಳಬಹುದು ಆದ್ರೆ ಮಾತಾಡದೇ ಕಳಕೊಂಡರೆ ಯಾವಾಗಲೂ ಕಾಡ್ತಾ ಇರುತ್ತೆ. ಹಿಂದೆಲ್ಲಾ ಸಂಬಂಧ ಹರಿದುಕೊಂಡೇ ತೀರುತ್ತೀನಿ ಅಂತ ನಿನ್ನೊಡನೆ ನಾ ಜಗಳಕ್ಕೆ ನಿಂತಾಗಲೇ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಕೊಂಡಿದ್ದು. ನನಗೆ ನೀನು ಹೆಚ್ಚು ಹೆಚ್ಚು ಇಷ್ಟವಾಗಿದ್ದು, ನಾವಿಬ್ಬರು ಮತ್ತಷ್ಟೂ ಹತ್ತಿರ ಆಗಿದ್ದು.  ಆದರೆ ಈಗ ಇದು ಬರೀ ಕಾಡುವ ನೆನಪಷ್ಟೇ. ನಿನ್ ಜೊತೆ ಆಡಿದ ಮಾತುಗಳು, ಕಳೆದ ಕಾಲದ ನೆನೆಪುಗಳು ವಿರಹದ ಬೆಂಕಿಗೆ ಈಗ ತುಪ್ಪ.  ನನ್ನ ಪಾಲಿಗೆ  ಉಳಿದಿರೊದು ನೀನಿಲ್ಲದ ಸಂಜೆ ಮತ್ತು ನಿನ್ನ ಮೌನ.

ಧೂಳು ಕೂತ ಸ್ಟಡಿ ಟೇಬಲ್, ಅರ್ಧಂಬರ್ಧ ಕಿತ್ತು ಹೋದ ನೆಲ್ ಪೈಂಟ್, ಬಾಗಿಲು ತೆಗೆದರೆ ಮೈಮೇಲೆ ಬೀಳುವ ವಾರ್ಡ್ ರೋಬ್‌ನ  ಬಟ್ಟೆಗಳು, ಪುಟ ಮಡಚಿಟ್ಟ ಓದಿ ಮುಗಿಸದ ಪುಸ್ತಕ ಎಲ್ಲಾ ನೀನಿಲ್ಲದೆ  ಮುನಿಸಿ ಕೊಂಡ ಹಾಗೆ ಅನ್ಸುತ್ತೆ.   ಸೇಮ್  ಪಿಯಾ ಬಿನಾ… ಪಿಯಾ ಬಿನಾ… ರೀತಿಯಲ್ಲಿ. ಆದ್ರೆ ನೀನಿಲ್ಲದ, ನಿನ್ನ ಪ್ರೀತಿಯಿಲ್ಲದ ಬದುಕಿಗೆ ಹೋಲಿಕೆಯೇ ಇಲ್ಲ. ಹೋಲಿಸಿದಷ್ಟೂ ನೀನಿಲ್ಲದ ನೋವು ಹೆಚ್ಚಿಸುತ್ತೆ.

ನೀ ನನ್ ಕಣ್ಣಲ್ಲಿ ತುಂಬಿ ಹೋದ ಬಣ್ಣಗೆಟ್ಟಿರುವ ಕನಸುಗಳಿಗೆ  ಮತ್ತೆ ಬಣ್ಣ ತುಂಬಿ ಜೀವ ನೀಡಲು ನನ್ನ ಜೊತೆಯಾಗು ಬಾ. ನಮ್ಮ ಕನಸುಗಳಿಗೆ ಜೀವ ತುಂಬಲು ಎಲ್ಲಾ ಬಿಟ್ಟು ನೀನಗಾಗಿ ಕಾಯುತ್ತಿದ್ದೀನಿ.


ತೂ ಭೀ ಆ ಸಬ್ ಕೊ ಛೋಡ್ ಕೆ… 

February 23, 2014

ನಾಯಿಗಳಿಗೆ ಹಾನಿಯುಂಟು ಮಾಡುವ ಆಹಾರಗಳು

ಮನುಷ್ಯರು ಹಾಗೂ ಕೆಲವು ಬೇರೆ ಜಾತಿಯ ಪ್ರಾಣಿಗಳು  ತಿನ್ನಲರ್ಹವಾದ ಕೆಲವು ಆಹಾರಗಳು ನಾಯಿಗಳಿಗೆ ಅಪಾಯವನ್ನುಂಟು ಮಾಡಬಹುದು. ಇದಕ್ಕೆ ಮುಖ್ಯ ಕಾರಣ ಅವುಗಳ ವಿಭಿನ್ನ ಚಯಾಪಚಯ (ಮೆಟಬಾಲಿಸಮ್). ಕೆಲವು ಆಹಾರಗಳು ತೀಕ್ಷ್ಣವಲ್ಲದ ಅಜೀರ್ಣವನ್ನು ಮಾತ್ರ ಉಂಟುಮಾಡಿದರೆ, ಇನ್ನೂ ಕೆಲವು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು ಮತ್ತು ಸಾವು ಕೂಡ ಉಂಟಾಗುವ ಸಾಧ್ಯತೆ ಯಿದೆ. ಈ ಕೆಳಗಿನವುಗಳು ನಾಯಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು.   

v  ಆಲ್ಕೋಹಾಲ್ ಪಾನೀಯಗಳು : ಇವುಗಳು ನಾಯಿಗಳಿಗೆ ಅಮಲೇರಿಸುತ್ತದೆ. ಇದರಿಂದ ನಾಯಿಗಳು ಕೋಮ ಸ್ಥಿತಿಯನ್ನು ತಲುಪಿ ಸಾವನ್ನುಪ್ಪುವ ಸಾಧ್ಯತೆ ಹೆಚ್ಚು.
v  ಬೆಣ್ಣೆ ಹಣ್ಣು :  ಇವುಗಳು ನಾಯಿಗಳಲ್ಲಿ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.
v  ಬೆಕ್ಕಿನ ಆಹಾರಗಳು : ಇವುಗಳು ಸಾಮಾನ್ಯವಾಗಿ ಅತಿ ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇಂತಹ ಆಹಾರಗಳು  ನಾಯಿಗಳಿಗೆ ಸೂಕ್ತವಲ್ಲ .
v  ಚಾಕೊಲೇಟ್, ಕಾಫಿ, ಟೀ ಮತ್ತು ಇತರೆ ಕೆಫೀನ್‌ಯುಕ್ತ ಆಹಾರಗಳು ವಾಂತಿ ಮತ್ತು ಭೇದಿಯನ್ನು ಉಂಟುಮಾಡುತ್ತವೆ ಮತ್ತು ಹೃದಯ ಮತ್ತು ನರವ್ಯೂಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚು.
v  ಸಿಟ್ರಸ್‌ ಹೊಂದಿದ ಆಹಾರ ಉತ್ಪನ್ನಗಳು ನಾಯಿಗಳಲ್ಲಿ  ವಾಂತಿಯನ್ನುಂಟು ಮಾಡುತ್ತದೆ.
v  ಮೀನು, ಕೋಳಿ ಅಥವಾ ಇತರೆ ಮಾಂಸದ ಮೂಲಗಳ ಮೂಳೆಗಳು ನಾಯಿಗಳ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡುವುದು ಸಾಧ್ಯ.
v  ದ್ರಾಕ್ಷಿ, ಒಣ ದ್ರಾಕ್ಷಿಗಳಲ್ಲಿರುವ ಅಪರಿಚಿತ ವಿಷ, ನಾಯಿಗಳ ಮೂತ್ರ ಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ.
v  ಕೊಳೆತ ಅಥವಾ ಹಾಳಾದ ಆಹಾರಗಳು ಹಲವು ಟಾಕ್ಸಿನ್‌ಗಳನ್ನು ಹೊಂದಿರುವುದರಿಂದ ನಾಯಿಗಳಲ್ಲಿ ವಾಂತಿ ಮತ್ತು ಭೇಧಿಯನ್ನು ಉಂಟುಮಾಡುವುದರ ಜೊತೆಗೆ ಇತರ ಅಂಗಗಳ ಮೇಲೂ ಸಹ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
v  ಹೆಚ್ಚಿನ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳನ್ನು ನಾಯಿಗಳಿಗೆ ನೀಡಿದ್ದಲ್ಲಿ ನಾಯಿಗಳಲ್ಲಿ ಅತಿಸಾರ ಕಂಡುಬರುತ್ತದೆ.
v  ಹಸಿ ಮೊಟ್ಟೆ ಮತ್ತು ಹಸಿ ಮಾಂಸಗಳು ಸಹ ನಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.
v  ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆಯುಕ್ತ ಆಹಾರ ಕೂಡ ನಾಯಿಗಳಿಗೆ ಒಳೆಯದಲ್ಲ.
v  ನಾಯಿಗಳಿಗೆ ನೀಡುವ ಆಹಾರದಲ್ಲಿ ಅಣಬೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಅವುಗಳ ಆರೋಗ್ಯಕ್ಕೆ ಹಾನಿಕಾರಕ.

v  ತಂಬಾಕು, ಗಾಂಜಾ, ಹುದುಗು ಹಿಟ್ಟು (ಯಿಸ್ಟ್), ಕೃತಕ ಸಿಹಿಯನ್ನು ಹೊಂದಿದ ಆಹಾರಗಳನ್ನು ನಾಯಿಗೆ ನೀಡುವುದು ನೀಷಿದ್ಧ. ಈ ರೀತಿಯ ಆಹಾರಗಳು ಹಲವು ರೀತಿಯ ಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ಇವುಗಳು ನಾಯಿಯ ಹಲವು ಅಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮವನ್ನುಂಟುಮಾಡಿ  ಸಾವಿಗೆ ಕಾರಣವಾಗುತ್ತವೆ.

ರಕ್ತ ಶುದ್ಧೀಕಾರಕ ಆಹಾರಗಳು

ರಕ್ತ  ಶುದ್ಧೀಕರಣ ದೇಹದ ಆರೋಗ್ಯಕರ ಕ್ರಿಯೆಗಳಿಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಡೀ ದೇಹದ ಕ್ರಿಯೆಗಳು ರಕ್ತ ಚಲನೆಯನ್ನು ಅವಲಂಬಿಸಿದೆ. ವಿಷದ ಅಂಶ ಹೆಚ್ಚಾದಂತೆಲ್ಲಾ ದೇಹದ ಅಂಗಾಂಗಗಳಿಗೆ  ನಿಧಾನವಾಗಿ ಹಾನಿಯಗುತ್ತದೆ ಮತ್ತು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರ ತಲೆ ನೋವು, ಆಯಾಸಗಳು ದೇಹದಲ್ಲಿ ಕಲ್ಮಶ ಮತ್ತು ವಿಷಕಾರಿ ಅಂಶಗಳ ಉಪಸ್ಥಿತಿಯನ್ನು  ತೋರಿಸುವ  ಕೆಲವು ಸಾಮಾನ್ಯ ಲಕ್ಷಣಗಳು. ಕಲ್ಮಶ ರಕ್ತ ಅರೋಗ್ಯ ಮತ್ತು ಚರ್ಮದ ತೊಂದರೆಗಳಿಗೆ ಕಾರಣವಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಾದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳಿಗೆ ದೇಹದಲ್ಲಿನ ಕಲ್ಮಶ ರಕ್ತ ಕಾರಣ. ಹಾಗಾಗಿ ಮಾರುಕಟ್ಟೆಯಲ್ಲಿ ವಿವಿಧ ರಕ್ತ ಶುದ್ಧಿಕಾರಕ ಟಾನಿಕ್ ಮತ್ತು ಔಷಧಗಳು ಲಭ್ಯ. ಆದರೆ ಇವುಗಳು ನೂರಕ್ಕೆ ನೂರಷ್ಟು ಫಲಿತಾಂಶವನ್ನೇನ್ನೂ ನೀಡುವುದಿಲ್ಲ. ಇದಕ್ಕೆ ಕಾರಣ ಕೇವಲ ಟಾನಿಕ್ ಮತ್ತು ಔಷಧಿಗಳು ಮಾತ್ರ ಸಾಕಾಗುವುದಿಲ್ಲ. ನೀವು  ರಕ್ತವನ್ನು ಶುದ್ಧಗೊಳಿಸುವ ಆಹಾರದ ಮೇಲೆ ಸಹ ಗಮನ ನೀಡಬೇಕಾಗುತ್ತದೆ. ಯಕೃತ್ತು, ಮೂತ್ರಪಿಂಡಗಳು  ಹಾಗೇಯೆದುಗ್ಧನಾಳಗಳನ್ನು ಸಹ ರಕ್ತವನ್ನು ಶುದ್ಧಿಕರಿಸುವ ಮತ್ತು ದೇಹದಿಂದ  ಕಲ್ಮಶ ಮತ್ತು ವಿಷ ಅಂಶಗಳನ್ನು ತೊಲಗಿಸುವ ಕೆಲಸವನ್ನು ಮಾಡುತ್ತವೆ. ಈ ಆಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ, ಇಡೀ ದೇಹದಲ್ಲಿ  ಕಲ್ಮಶ ರಕ್ತದ ಚಲನೆಯಿಂದಾಗಿ ಚರ್ಮ ಕಾಯಿಲೆಗಳು ಕಾಡುತ್ತವೆ. ಆದ್ದರಿಂದ ನೀವು ನಿಮ್ಮ ರಕ್ತವನ್ನು ಶುದ್ಧಗೊಳಿಸಲು ಬಯಸುವೀರಾದರೆ,   ರಕ್ತವನ್ನು ಶುದ್ದಗೊಳಿಸುವ ಮತ್ತು  ಮೂತ್ರಪಿಂಡ ಹಾಗೂ ಯಕೃತ್ತುಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯ ಮಾಡುವ  ಕೆಲವು ನಿರ್ವಿಷಕಾರಕ ಆಹಾರವನ್ನು  ನಿಮ್ಮ ಆಹಾರದಲ್ಲಿ ಸೇರ್ಪಡಿಸಬೇಕು. ಆರೋಗ್ಯಕರ ಮತ್ತು ದೋಷರಹಿತ ತ್ವಚೆಕ್ಕಾಗಿ ಆಹಾರ ಕ್ರಮದಲ್ಲಿ ಒಳಪಡಿಸಲೇ ಬೇಕಾದ  ರಕ್ತ ಶುದ್ಧಕಾರಕ ಆಹಾರಗಳಲ್ಲಿ ಕೆಲವು ಇಲ್ಲಿವೆ.
 ಬ್ರೊಕ್ಲಿ - ಈ ಹಸಿರು ತರಕಾರಿ  ಆಂಟಿಅಕ್ಸಿಡೆಂಟ್‌ಗಳನ್ನು ಒಳಗೊಂಡಿರುತ್ತದೆ. ಅದು ರಕ್ತವನ್ನು ಶುದ್ಧಗೊಳಿಸಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ  ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದು ಹಾಕುತ್ತದೆ.
ಕೊಸುಗೆಡ್ಡೆ -ಕ್ಯಾಬೆಜ್ ರಸದ ಸೇವನೆ  ರಕ್ತ ಶುದ್ಧಿಕರಣಕ್ಕೆ ಒಂದು ಉತ್ತಮವಾದ ಮನೆ ಮದ್ದು.
ಹೂಕೋಸು -  ಇದರಲ್ಲಿರುವ ಕ್ಲೋರೊಫಿಲ್‌ ಅಂಶ, ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆಯುತ್ತದೆ ಮತ್ತು ರಕ್ತವನ್ನು ಶುದ್ಧ ಗೊಳಿಸುತ್ತದೆ.
ಹಾಗಲಕಾಯಿ-  ಕಹಿ ರುಚಿಯ ಈ ತರಕಾರಿ ಹಲವು ಔಷಧ ಗುಣಗಳನ್ನು ಹೊಂದಿದೆ. ಹಾಗೇ ಹಾಗಲಕಾಯಿ ರಕ್ತವನ್ನು ಸಹ ಶುದ್ಧಿಕರಿಸುತ್ತದೆ.
ಬೇವು - ಕಹಿ ಬೇವು ರಕ್ತವನ್ನು ಶುದ್ಧಗೊಳಿಸುವ  ಒಂದು ಅತ್ಯಂತ ಜನಪ್ರಿಯ ನೈಸರ್ಗಿಕ ಉಪಾಯ. ಇದರ ಎಲೆಗಳನ್ನು ನೀರನಲ್ಲಿ ಕುದಿಸಿ,   ಬೆಳಿಗ್ಗೆ ಸೇವಿಸಿ. ಇದು ಬಲವಾದ ಮತ್ತು ನೈಸರ್ಗಿಕವಾದ ರಕ್ತ ಶುದ್ಧಿಕಾರಕವಾಗಿ ಕೆಲಸ ಮಾಡುತ್ತದೆ.
ಜೇನು ತುಪ್ಪ ಸಹ ಒಂದು ಪರಿಣಾಮಕಾರಿ ರಕ್ತ ಶುದ್ಧಕಾರಕ.
ಬೆಳ್ಳುಳ್ಳಿ- ಬೆಳ್ಳುಳ್ಳಿ ಕೇವಲ ಒಂದು ಆಂಟಿಬಯೋಟಿಕ್ (ಪ್ರತಿಜೀವಕ) ಮಾತ್ರವಲ್ಲ. ಇದು ಒಂದು ರಕ್ತ ಶುದ್ಧೀಕರಣ ಮೂಲಿಕೆ. ಬೆಳ್ಳುಳ್ಳಿ ರಕ್ತವನ್ನು ಶುದ್ಧ ಮಾಡುತ್ತದೆ, ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಹೊರಹಾಕುತ್ತದೆ ಮತ್ತು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡುತ್ತದೆ.
ಕ್ಯಾರೆಟ್-  ಕ್ಯಾರೆಟ್ ರಕ್ತ ಶುದ್ಧಿಗೊಳಿಸುವ ಆಹಾರಗಳಲ್ಲಿ ಒಂದು. ಇದು ತ್ವಚೆಗೆ ಉತ್ತಮ . ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲ್ಯಾಸ್ ಕ್ಯಾರೆಟ್ ಜ್ಯೂಸ್ ನ ಸೇವನೆ ಪರಿಣಾಮಕಾರಿ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ತ್ಚಚೆಗೆ ತೊಂದರೆಯುಂಟು ಮಾಡುವ ಹಾನಿಕಾರಕ ವಿಷ ಅಂಶಗಳು ಮತ್ತು  ಸ್ವತಂತ್ರ ರಾಡಿಕಲ್‌ಗಳನ್ನು ತೊಲಗಿಸುತ್ತದೆ.
ಕಲ್ಲಂಗಡಿ - ವ್ಯಾಪಕವಾಗಿ ಕಲ್ಲಂಗಡಿಯು ಅದರಲ್ಲಿರುವ ನಿರ್ವಿಷಗೊಳಿಸುವ ಗುಣಲಕ್ಷಣಗಳಿಗೆ ಪ್ರಸಿದ್ಧ. ಇದು ಕೇವಲ ರಕ್ತವನ್ನು ಶುದ್ಧಗೊಳಿಸುವುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಾಯ್ದುಕೊಳ್ಳುತ್ತದೆ. ಮೇಲಾಗಿ ಇದು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.
ಅನಾನಸ್ ಹಣ್ಣು -  ನಿಮ್ಮ ರಕ್ತ ಶುದ್ಧಿಕಾರಕ ಆಹಾರಗಳಲ್ಲಿ ಸೇರಿಸಲೇ ಬೇಕಾದ ಹಣ್ಣಗಳಲ್ಲಿ ಅನಾನಸ್ ಒಂದು. ತಾಜಾ ಹಣ್ಣು ರಕ್ತ ಮತ್ತು ಮೂತ್ರಪಿಂಡ ಶುದ್ಧಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಗ್ರೀನ್ ಟೀ - ಮೂಲಿಕೆಗಳ ಈ ಟೀ ಅನ್ನು ದಿನಕ್ಕೆ ಒಂದು ಬಾರಿ ರಕ್ತ ಶುದ್ಧೀಕರಣಕ್ಕಾಗಿ ಸೇವಿಸ ಬಹುದು.
ಪಾರ್ಸ್ಲೇ ಮೂತ್ರಪಿಂಡಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳು ಮೂತ್ರಪಿಂಡಗಳನ್ನು ಶುದ್ಧಗೊಳಿಸಿ, ನಿರ್ವಿಷಗೊಳಿಸುತ್ತದೆ. ಇದನ್ನು  ವ್ಯಾಪಕವಾಗಿ ರಕ್ತ ಶುದ್ಧೀಕರಿಸಲು ಒಂದು ಪರಿಹಾರವಾಗಿ ಬಳಸಲಾಗುತ್ತದೆ.

ಭಾರತೀಯ ಗುಸ್ ಬರಿಗಳಲ್ಲಿನ ರಕ್ತ ಶುದ್ಧಗೊಳಿಸುವ  ಮತ್ತು ನಿರ್ವಿಷಗೊಳಿಸುವ ಗುಣಲಕ್ಷಣಗಳು ಜನಪ್ರಿಯ. ಇದು ರಕ್ತವನ್ನು ಶುದ್ಧಗೊಳಿಸುತ್ತದೆ. ದೇಹವನ್ನು ನಿರ್ವಿಷಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ತಲೆ ಕೂದಲ ಆರೈಕೆಯಲ್ಲಿ ಮೆಹಂದಿ

ಮೆಹಂದಿ ನಿಜವಾಗಿಯೂ ಅದ್ಭುತ ನೈಸರ್ಗಿಕ ಕೂದಲು ಬಣ್ಣ. ಭಾರತದಲ್ಲಿ ಇದನ್ನು ಶತಮಾನಗಳಿಂದ  ಉಪಯೋಗಿಸಲಾಗುತ್ತಿದೆ. ಮೆಹಂದಿ, ಮದರಂಗಿ,ಹೆನ್ನಾ, ಗೊರಂಟಿ ಎಂಬ ಹೆಸರಿನಿಂದ ಇದು ಚಿರಪರಿಚಿತ. ಮೆಹಂದಿಯಲ್ಲಿ ಅನೇಕ ಶ್ರೇಷ್ಟ ಗುಣಗಳು ಅಡಕವಾಗಿದೆ. ಇದು ಕೂದಲಿಗೆ ಬಣ್ಣ ನೀಡುವುದು ಮಾತ್ರವಲ್ಲ ಕೂದಲು ಆರೋಗ್ಯಕರವಾಗಿ ಸಹ ಮಾಡುತ್ತದೆ. ನಿಯಮಿತವಾಗಿ ಮದರಂಗಿಯನ್ನು ಕೂದಲಿಗೆ ಬಳಸುವುದರಿಂದ ಕೂದಲಿಗೆ ಹೊಳಪು ಬರುತ್ತದೆ ಮತ್ತು ಬಲಿಷ್ಟವಾಗುತ್ತದೆ. ಹಾಗೂ ಇದು ತಲೆ ಹೊಟ್ಟಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಕೆಲವು ಪ್ರಯೋಜನಗಳು
·         ಮದರಂಗಿ ಒಂದು ನೈಸರ್ಗಿಕ ಕೂದಲ ಬಣ್ಣವಾಗಿದೆ. ಹೆಚ್ಚಿನವರು ಕೂದಲಿಗೆ ರಾಸಾಯಿನಿಕ ಬಣ್ಣವನ್ನು  ಉಪಯೋಗಿಸುತ್ತಾರೆ, ಅದು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಆದರೆ ಮದರಂಗಿ  ಆ ಎಲ್ಲಾ  ಸಮಸ್ಯೆಗಳಿಂದ  ಕೂದಲನ್ನು ದೂರವಿಡುತ್ತದೆ. ಹೆನ್ನಾ ಕೂದಲಿಗೆ ಯಾವುದೇ ತೊಂದರೆ ಇಲ್ಲದೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ನೀಡುತ್ತದೆ.
·         ಮೆಹಂದಿ ಒಂದು ಅದ್ಭುತವಾದ ಕಂಡಿಷನರ್. ಇದು ಕೂದಲಿಗೆ ಪುನಃ ಆರೋಗ್ಯ ಮತ್ತು ಕಾಂತಿ ಮರಳಿ ನೀಡವ ಗುಣಗಳನ್ನು ಹೊಂದಿದೆ. ಇದು ನೆತ್ತಿಯ ನೈಸರ್ಗಿಕ ಆಮ್ಲ ಕ್ಷಾರೀಯ ಸಮತೋಲನವನ್ನು ಕೂಡ ಪೂರ್ವಸ್ಥಿತಿಗೆ ತರುತ್ತದೆ.
·         ಮದರಂಗಿಯು ಒಂದು ನೈಸರ್ಗಿಕವಾಗಿ ಫಂಗಸ್ ವಿರೋಧಿ ಮತ್ತು ಬ್ಯಾಕ್ಟಿರೀಯಾ ವಿರೋಧಿ. ಕೂದಲಿಗೆ ಮೆಂಹಂದಿಯನ್ನು ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ದೂರವಿಡುವುದು ಸಾಧ್ಯ. ನಿಯಮಿತವಾಗಿ ಕೂದಲಿಗೆ ಮದರಂಗಿಯನ್ನು ಬಳಸುವುದರಿಂದ ತಲೆಯಲ್ಲಿ ಹೊಟ್ಟು ಕಾಣಿಸಿಕೊಳ್ಳುವುದ್ದಿಲ್ಲ.
·         ಬಲಿಷ್ಟವಾದ ಕೂದಲನ್ನು ಬಯಸುವಂತವರು ಕೂಡ ಮೆಹಂದಿಯ ಮೊರೆ ಹೋಗಬಹುದು. ಇದು ಕೂದಲನ್ನು ಬಲಿಷ್ಟಗೊಳಿಸಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಇದು ಕೂದಲ ಬೇರಿನವರೆಗೆ ಪ್ರವೇಶಿಸಿ ಕೂದಲನ್ನು  ಧೃಡವಾಗಿಸುತ್ತದೆ.
·         ತುಂಬಾ ತೆಳುವಾದ ಕೂದಲನ್ನು ಹೊಂದಿರುವವರು ಮತ್ತು ಕಡಿಮೆ ಕೂದಲನ್ನು ಉಳ್ಳವರು ಮೆಹಂದಿ ಬಳಸಿ. ಇದು ಕೂದಲಿನ ಮೊತ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಮೆಹಂದಿಯ ಅಂಶದ ಸಂಗ್ರಹಣೆ ಕೂದಲ ಎಳೆಯನ್ನು ದಪ್ಪವಾಗಿಸುವುದರ ಮೂಲಕ ಕೂದಲ ಮೊತ್ತವನ್ನು ಜಾಸ್ತಿಯಾಗಲು ಸಹಾಯ ಮಾಡುತ್ತದೆ.
·         ಮೆಹಂದಿ ಕೂದಲಿನ ನೈಸರ್ಗಿಕ ಹೊಳಪನ್ನು ಅಧಿಕಗೊಳಿಸುತ್ತದೆ. ಮೆಹಂದಿಯ ಅಂಶದ ಸಂಗ್ರಹಣೆ ಕೂದಲಿನ ಕ್ಯುಟಿಕಲ್‌ನ್ನು ಹೊಳಪಾಗಿಸಿ ನೈಸರ್ಗಿಕ ಹೊಳಪನ್ನು ವರ್ಧಿಸುತ್ತದೆ.

ಕಹಿ ಹಾಗಲದ ಸಿಹಿ ರೂಪ

ಸಾಮಾನ್ಯವಾಗಿ ನಮಗೆ ಹಾಗಲಕಾಯಿ ಎಂದಾಕ್ಷಣ ನೆನೆಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ ಎಂಬುದು ಚಿರಪರಿಚಿತ. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಲು  ಮಾತ್ರ ಸೀಮಿತ ಎಂದು  ಈ ಬಹುಉಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ. ಆದರೆ ವಾಸ್ತವವಾಗಿ ಹಾಗಲಕಾಯಿ ಹಲವು ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ ಯಕೃತ್ತು ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದೆ.ಇದು ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳು ಪುನರುತ್ಪಾದನೆಗೆ ಸಹಾಯಕವಾಗುತ್ತದೆ.  ಈ ಆರೋಗ್ಯಕರ ತರಕಾರಿ ತುಂಬಾ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ. ಇದು ತ್ವಚೆಯನ್ನು ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೈಬಣ್ಣ ನೀಡುತ್ತದೆ.ಹೀಗೆ ಹಾಗಲಕಾಯಿ ಇತರೆ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಅವುಗಳು ಕೆಲವು ಇಲ್ಲಿವೆ.
ಯಕೃತ್ತ್ ಪುನರುತ್ಪಾದನೆ :- ಹಾಗಲಕಾಯಿ ಲಿವರ್ ಶುದ್ಧಿಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ದಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.
ಮಧುಮೇಹ :- ಹಾಗಲಕಾಯಿ ರಸ  ಮಧುಮೇಹ 2ನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸೂಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
ತೂಕ ನಿಯಂತ್ರಣಕ್ಕೆ ಸಹಾಯಕ :- ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ವಯಪಚಯ ಮಟ್ಟವನ್ನು ಹೆಚ್ಚಿಸುವ ಅಂಟಿಅಕ್ಸಿಡೆಂಟ್‌ಗಳಿಂದ ಸಹ ಕೂಡಿದೆ. ಇದಲ್ಲದೆ ಹಾಗಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿಯಾಗಿದೆ.
ಚರ್ಮಕ್ಕೆ ಉತ್ತಮ :- ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೊಜನಕಾರಿ. ಹಾಗಲಕಾಯಿ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದು ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲು ಸಹ ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :- ಹಾಗಲಕಾಯಿ ನಮ್ಮ ದೇಹವನ್ನು ಶುದ್ದಿಗೊಳಿಸುತ್ತದೆ ಮತ್ತು ಇದು ಹೇರಳವಾಗಿ ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದೆ.ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
ಮೂತ್ರಕೋಶ ಮತ್ತು ಮೂತ್ರ ಪಿಂಡಗಳಿಗೆ ಔಷಧಿ  :- ಹಾಗಲಕಾಯಿ ಕಿಡ್ನಿ‌ಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ  :- ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡ ಬಹುದು.
ಮಲ ಬದ್ಧತೆಗೆ ಔಷಧಿ :- ಹಾಗಲಕಾಯಿಯ ಮತ್ತೊಂದು ಆರೋಗ್ಯಕಾರಿ ಪ್ರಯೋಜನವೆಂದರೆ ಈ ತರಕಾರಿ ಮಲಬದ್ಧತೆಯನ್ನು ತಡೆಯುತ್ತದೆ. ಈ ತರಕಾರಿ ಹೇರಳವಾಗಿ ನಾರಿನಂಶವನ್ನು ಹೊಂದಿರುವುದರಿಂದ ಮಲಬದ್ಧತೆಗೆ ರಾಮಬಾಣ.
ಕ್ಯಾನ್ಸರ್‌ ವಿರುದ್ಧ ಹೋರಾಟ :- ಹಾಗಲಕಾಯಿಯಲ್ಲಿ ಆಂಟಿಅಕ್ಸಿಡೆಂಟ್‌ಗಳು  ಸಮೃದ್ಧವಾಗಿದ್ದೆ. ಕ್ಯಾನ್ಸರ್‌ ವಿರುದ್ಧ ಹೋರಾಡುವ ಈ ಅಂಶಗಳು ಕ್ಯಾನ್ನರ್‌ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
 ಹೃದಯ ಆರೋಗ್ಯ :- ಹಾಗಲಕಾಯಿ ರಕ್ತದಲ್ಲಿ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಸಹಾಯಕಾರಿಯಾಗಿದೆ ಎಂಬ ಮಹತ್ವರವಾದ ಫಲಿತಾಂಶವನ್ನು ಕಂಡುಬಂದಿದೆ. ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ ಮತ್ತು ನಮ್ಮ ಹೃದಯ ಆರೋಗ್ಯವಂತವಾಗಿರಲು ಸಹಾಯ ಮಾಡುತ್ತದೆ.

ಬಹು ಉಪಯೋಗಿ ಟೊಮ್ಯಾಟೊ


 ಟೊಮ್ಯಾಟೊ  ಒಂದು ವಿಸ್ಮಯಕಾರಿಯಾದ ಬಹುಮುಖ ಆಹಾರವಾಗಿದೆ. ಇದು ಒಂದು ಸಿಟ್ರಸ್‌ಯುಕ್ತ ಹಣ್ಣಾಗಿದರೂ ಕೂಡ ಇದನ್ನು  ಹೆಚ್ಚಾಗಿ ತರಕಾರಿಯೆಂದೇ ಪರಿಗಣಿಸಲಾಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿದ್ದು ಟೊಮ್ಯಾಟೊ  ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ, ಬರೀ ಇಷ್ಟೇ ಅಲ್ಲ,  ಟೊಮ್ಯಾಟೊವು ಉತ್ತಮ ಆರೋಗ್ಯಕ್ಕೆ ಅವಶ್ಯಕವಾದ  ಹಲವು ಇತರೆ ವಿಟಮಿನ್‌ಗಳು, ಮೆಗ್ನೀಷಿಯಂ, ರಂಜಕ ಮತ್ತು ತಾಮ್ರದ ಅಂಶಗಳನ್ನು ಒದಗಿಸುತ್ತದೆ. ಟೊಮ್ಯಾಟೊವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಕಡಿಮೆ ಕ್ಯಾಲೊರಿಯ, ಕೊಬ್ಬು ಕರಿಗಸುವ ಅಂಶಗಳನ್ನು ಹೊಂದಿರುವ ತರಕಾರಿಯಾಗಿದೆ.  ಟೊಮ್ಯಾಟೊವನ್ನು ಹಸಿ, ಬೇಯಿಸಿ ಅಥವಾ ಸಲಾಡ್‌, ಸ್ಯಾಂಡ್‌ವಿಚ್‌ಗಳಲ್ಲಿ ಸಹ ಬಳಸ ಬಹುದು. ಈ ವಂಡರ್ ತರಕಾರಿ ಅಥವಾ ಹಣ್ಣಿನ ಕೆಲವು ಆರೋಗ್ಯಕರ  ಪ್ರಯೋಜನಗಳು ಇಲ್ಲಿವೆ.
ಟೊಮ್ಯಾಟೊಗಳು  ಅಧಿಕ ಕೊಲೆಸ್ಟರಾಲ್, ಪಾರ್ಶ್ವವಾಯು, ಮತ್ತು ಹೃದಯ ರೋಗದ ವಿರುದ್ಧ ರಕ್ಷಣೆ ನೀಡುತ್ತವೆ.
ಟೊಮ್ಯಾಟೊಗಳು ಕ್ಯಾನ್ಸರ್ ವಿರುದ್ಧ  ಹೋರಾಡುವ ನೈಸರ್ಗಿಕ ಗುಣವನ್ನು ಹೊಂದಿದೆ, ಇದರಲ್ಲಿರುವ ಲೈಕೊಪೀನ್ ಅಂಶವು ಹಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆಮಾಡುತ್ತದೆ. ಉದಾಹರಣೆಗೆ ಹೊಟ್ಟೆ, ಗಂಟಲು, ಬಾಯಿ, ಅಂಡಾಶಯದ ಯಾ ಅದಕ್ಕೆ ಸಂಬಂಧಿಸಿದ ಕ್ಯಾನ್ಸರ್.
ಟೊಮ್ಯಾಟೊ‌ದಲ್ಲಿರುವ ಅಂಟ್ಯಿಅಕ್ಸಿಡೆಂಟ್‌ಗಳು ಜೀವಕೊಶಗಳಿಗೆ ಹಾನಿ ಮಾಡುವ ಫ್ರೀ-ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ಟೊಮ್ಯಾಟೊ‌ವು ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮೋತಲನದಲ್ಲಿಡುತ್ತದೆ. ಇದು ಕ್ರೊಮಿಯಂನ  ಒಂದು ಉತ್ತಮವಾದ ಮೂಲವಾಗಿರುವುದರಿಂದ  ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೊದಲ್ಲಿರುವ ಬಿ 1 ವಿಟಮಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಅದ್ದರಿಂದ ಸಕ್ಕರೆ ಖಾಯಿಲೆಯವರಿಗೆ ಇದರ ಜ್ಯೂಸ್ ಬಹು ಉಪಯೋಗಿ.
ಟೊಮ್ಯಾಟೊವು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ಚರ್ಮ ಸ್ನೇಹಿ ಟೊಮ್ಯಾಟೊವು  ಚರ್ಮವು  ಆರೋಗ್ಯಕರ  ಮತ್ತು ಸುಂದರವಾಗಿ ಕಾಣಲು  ಸಹಾಯ ಮಾಡುತ್ತದೆ ಹಾಗೂ  ಇದರಲ್ಲಿರುವ ಬೀಟಾಕೆರೊಟಿನ್  ಸೂರ್ಯ ಕಿರಣದಿಂದ ಉಂಟಾಗುವ ಹಾನಿಯಿಂದ ಚರ್ಮಕ್ಕೆ ರಕ್ಷಣೆ ನೀಡುತ್ತದೆ ಮತ್ತು ಚರ್ಮವು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಲೈಕೊಪೀನ್ ಸಹ ಚರ್ಮಕ್ಕುಂಟಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ.  ಟೊಮ್ಯಾಟೊವು ಮೊಡವೆ ಮತ್ತು ಗುಳ್ಳೆಗಳಿಗೆ ಒಂದು ನೈಸರ್ಗಿಕ ಔಷಧಿ.
ಟೊಮ್ಯಾಟೋ   ಮೂಳೆಗಳನ್ನು ಬಲಿಷ್ಟಗೊಳಿಸುವ ಕೆಲಸವನ್ನು ಸಹ ಮಾಡುತ್ತದೆ. ಇದರಲ್ಲಿ ಲಭ್ಯವಿರುವ ಕ್ಯಾಲ್ಷಿಯಂ ಮತ್ತು ಕೆ ವಿಟಮಿನ್ ಎರಡೂ ಸಹ ಮೂಳೆಗಳನ್ನು ದೃಢಗೊಳಿಸಲು ಮತ್ತು ಸರಿಗೊಳಿಸವಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತವೆ,  ಲೈಕೊಪೀನ್ ಅಂಶ ಮೂಳೆ ಮಜ್ಜೆಯ ಅಭಿವೃದ್ಧಿ ಪಡಿಸುವ ಮೂಲಕ ಅಸ್ಥಿರಂಧ್ರತೆಯ ವಿರುದ್ಧ ಸಹ ಟೋಮ್ಯಾಟೊ ಬಹು ಉಪಯೋಗಿಯಾಗಿ ಕೆಲಸ ಮಾಡುತ್ತದೆ.
ತೂಕ ಕಡಿಮೆ ಮಾಡಲು ಟೊಮ್ಯಾಟೋ ಸೇವನೆ ಒಂದು ಉತ್ತಮ ಮತ್ತು ಸರಳ ವಿಧಾನ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಸಹ ಹೊರ ಹಾಕಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ..
ಇದರಲ್ಲಿರುವ ಬಿ 6ವಿಟಮಿನ್ ರಕ್ತ ನಾಳಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಗೊಳಿಸುತ್ತದೆ. ಇದರಲ್ಲಿನ ಪೊಟ್ಯಾಷಿಯಂ ಅಂಶ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.
ಟೋಮ್ಯಾಟೊದಲ್ಲಿನ ನಾರಿನಂಶ ದೇಹದಲ್ಲಿನ ಕೊಲೆಸ್ಟ್ರಾಲ್‌ ಕಡಿತಗೊಳಿಸುತ್ತದೆ.
ಸಿ ಮತ್ತು ಎ ವಿಟಮಿನ್ ದೇಹದ ರೋಗ ನೀರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಟೊಮ್ಯಾಟೊ ಎ, ಸಿ, ಕೆ  ವಿಟಮಿನ್‌, ಫೋಲೇಟ್ ಮತ್ತು  ಪೊಟಾಷಿಯಂ ಹಾಗೂ ಹೇರಳವಾಗಿ ನೀರು ಮತ್ತು ನಾರಿನ ಅಂಶವನ್ನು ಒಳಗೊಂಡು ಸಮೃದ್ಧವಾಗಿದೆ. ಇದರಿಂದ ತಯಾರಿಸಿದ ಜ್ಯೂಸ್ ಕಡಿಮೆ ಕ್ಯಾಲರಿ, ಲವಣ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಸ್ಯಾಚ್ಯುರೇಟೆಡ್ ಕೊಬ್ಬು ಹೊಂದಿದ ಒಂದು ಆರೋಗ್ಯಕರ ಪೇಯ. ಇದು ದೇಹದ ಜೀವ ಕೋಶ ಮತ್ತು ಅಂಗಾಂಗಗಳನ್ನು ಹಾನಿಯಿಂದ ರಕ್ಷಿಸಿ ಮುಪ್ಪಿನ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಜೊತೆಗೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆ ಮತ್ತು ಕಣ್ಣಿನ ದೃಷ್ಟಿಯ ಆರೋಗ್ಯಕ್ಕೂ  ಸಹ ಉತ್ತಮ  ಈ ಪೇಯ .


ಒತ್ತಡ ನಿವಾರಕ ಆಹಾರಗಳು

“ಒತ್ತಡ” ಎಂಬುದು “ನಮ್ಮಲ್ಲಿ ಭಯದ ಭಾವನೆ ಹುಟ್ಟಿಸುವ ಅಥವಾ ಯಾವುದೊ ವಿಧದಲ್ಲಿ  ನಮ್ಮ ಸಮತೋಲನವನ್ನು ಬಿಗಾಡಿಸುವ ಒಂದು ಸಾಮಾನ್ಯ ಬೌತಿಕ ಪ್ರತಿಕ್ರಿಯೆ”. ರಕ್ತದೊತ್ತಡದಲ್ಲಿ ಏರಿಕೆ, ತೀವ್ರಗತಿಯಲ್ಲಿ ಉಸಿರಾಟ, ಹೃದಯ ಬಡಿತ ಏರಿಕೆ, ಪಚನಕ್ರಿಯೆ ಕುಂಠಿತ, ರೋಗನಿರೋಧಕ ಶಕ್ತಿಯ  ಕುಸಿತ, ಸ್ನಾಯುಗಳು ಉದ್ವಿಗ್ನತೆ, ನೀದ್ರಾಹೀನತೆಗಳು ಒತ್ತಡದ ಪ್ರಮುಖ ಲಕ್ಷಣಗಳು.ಒತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ನಾವು ಸೇವಿಸುವ ಆಹಾರಗಳು ಸಹಕಾರಿಯಾಗುತ್ತವೆ. ಒತ್ತಡಕ್ಕೆ ಒಳಾಗದಾಗ  ಈ ಆಹಾರಗಳನ್ನು ತೆಗೆದು ಕೊಳ್ಳುವುದರಿಂದ ಅವುಗಳು ನಮ್ಮಲ್ಲಿ ಒತ್ತಡವನ್ನು  ಮುಕ್ತಗೊಳಿಸಿ, ಜೀವನೋತ್ಸಾಹವನ್ನು ತುಂಬುತ್ತವೆ.
ಕಿತ್ತಳೆ :-   ಒತ್ತಡವನ್ನು ಕಡಿಮೆ ಮಾಡವಲ್ಲಿ  ಮತ್ತು  ಒತ್ತಡದ ಪರಿಸ್ಥಿತಿಯ ನಂತರ  ರಕ್ತದೊತ್ತಡ ಮತ್ತು  ಕಾರ್ಟಿಸೋಲ್  ಸಾಧಾರಣ ಮಟ್ಟಕ್ಕೆ ಮರಳಲು ’ಸಿ’ ವಿಟಮಿನ್ ಸಹಾಯಕಾರಿಯಾಗಿದೆ  ಎಂದು ಸೈಕೊಫಾರ್ಮಕಾಲಜಿಯಲ್ಲಿನ ಒಂದು ಜರ್ಮನ್ ಅಧ್ಯಯನ ಮೂಲಕ ಕಂಡು ಬಂದಿದೆ.
ಗೆಣಸು :-  ಸಿಹಿ ಗೆಣಸುಗಳು ವಿಶೇಷವಾಗಿ ಒತ್ತಡವನ್ನು ಕಡಿಮೆ ಗೊಳಿಸುತ್ತವೆ. ಅವುಗಳು ನಾವು ಒತ್ತಡದಲ್ಲಿರುವಾಗ
 ಅಪಕ್ಷೇಸಿಸುವ ಅಥವಾ ಬಯಸುವ  ಕಾರ್ಬೋಹೈಡ್ರೆಟ್‌ಗಳು ಮತ್ತು ಸಿಹಿ ಅಂಶಗಳನ್ನು ಪೂರೈಸುತ್ತವೆ. ಅವುಗಳು ಸಂಪೂರ್ಣವಾಗಿ ಬಿಟಾ ಕೆರೋಟಿನ್ ಮತ್ತು ಇತರೆ ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಸಿಹಿ ಗೆಣಸಿನಲ್ಲಿರುವ ನಾರಿನಂಶ   ನಿಧಾನ ಮತ್ತು ಸ್ಥಿರವಾದ ರೀತಿಯಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಪ್ರಕ್ರಿಯೆಗೊಳಿಸಿಸಲು ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ.
ಒಣ ಏಪ್ರಿಕಾಟ್ :-  ಒಣ ಏಪ್ರಿಕಾಟ್ ಹಣ್ಣುಗಳು ಮೆಗ್ನೀಷಿಯಂ ಭರಿತ ವಾಗಿರುತ್ತದೆ. ಅವು ಒತ್ತಡ ನಿವಾರಕ ಮತ್ತು ಸ್ವಾಭಾವಿಕ ಸ್ನಾಯುಗಳ ಬಿಗಿತವನ್ನು ಸಡಿಲ ಗೊಳಿಸುತ್ತದೆ ಕೂಡ.
ಪಿಸ್ತಾ ಬಾದಮಿ ಮತ್ತು ಆಕ್ರೋಟ್ :- ಬಾದಮಿ  ಇ  ಮತ್ತು ಬಿ  ವಿಟಮಿನ್ ಅನ್ನು ಹೇರಳವಾಗಿ ಒಳಗೊಂಡಿದೆ. ಇದು ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿಸ್ತಾ ಮತ್ತು ಆಕ್ರೋಟ್ (ವಾಲ್‌ನಟ್) ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು :- ಮೆಗ್ನೀಷಿಯಂನ ಕೊರತೆಯಿಂದ ಅರ್ಧ ತಲೆ ನೋವು ಮತ್ತು ಅಯಾಸ ಭಾವನೆ ಕಾಡುತ್ತದೆ. ಒಂದು ಕಪ್ ಪಾಲಕ್ ಸೊಪ್ಪು ನಮ್ಮ ದಿನದ ಅಗತ್ಯದ ಶೇಕಡಾ 40 ರಷ್ಟು ಮೆಗ್ನೀಷಿಯಂ ಅನ್ನು ಒದಗಿಸುತ್ತದೆ.
ಹಸಿರು ತರಕಾರಿಗಳು :- ಬ್ರೊಕಲಿ ಮುಂತಾದ ಇತರೆ ಕಡು  ಹಸಿರು ತರಕಾರಿಗಳು ವಿಟಮಿನ್‌ಗಳ ಆಗರ.  ಅವುಗಳು ಒತ್ತಡಕ್ಕೊಳಗಾದ ಸಮಯದಲ್ಲಿ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ತುಂಬುವಲ್ಲಿ ಸಹಾಯ ಮಾಡುತ್ತದೆ.
ಬೆಣ್ಣೆ ಹಣ್ಣುಗಳು :- ಬೆಣ್ಣೆ ಹಣ್ಣಿನಲ್ಲಿ ಲಭ್ಯವಿರುವ ಮಾನೋಸ್ಯಾಚ್ಯುರೇಟೆಡ್ ಕೊಬ್ಬುಗಳು ಮತ್ತು ಪೋಟ್ಯಾಷಿಯಂ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಆಹಾರದಲ್ಲಿ ಸಾಕಷ್ಟು ಪೋಟ್ಯಾಷಿಯಂ ಸೇವನೆ ರಕ್ತದೊತ್ತಡವನ್ನು ಕಡಿಮೆ ಮಾಡುವ ವಿಧಾನಗಳಲ್ಲಿ ಒಂದು ಎಂದು ನ್ಯಾಷನಲ್ ಹಾರ್ಟ್, ಲಂಗ್, ಮತ್ತು ಬ್ಲಡ್ ಇನ್‌ಸ್ಟಿಟ್ಯೂಟ್ ಹೇಳುತ್ತದೆ. ಬೆಣ್ಣೆಹಣ್ಣಗಳು ಬಾಳೆಹಣ್ಣಿಗಿಂತ ಹೆಚ್ಚು ಪೋಟ್ಯಾಷಿಯಂ ಅಂಶವನ್ನು ಹೊಂದಿರುತ್ತದೆ.
ಮೀನು :-  ಓಮೆಗಾ-3 ಫ್ಯಾಟಿ ಆಸಿಡ್  ಯೇಥೇಚವಾಗಿರುವ ಆಹಾರಗಳು ಹೃದಯ ರೋಗದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಓಮೆಗಾ-3 ಯು ಒತ್ತಡಕ್ಕೆ ಕಾರಣವಾಗುವ  ಹಾರ್ಮೋನ್‌ಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹೆಚ್ಚಾಗುವುದನ್ನು ತಡೆಯುತ್ತದೆ ಎಂದು ಮದುಮೇಹ ಮತ್ತು ಮೇಟಾಬಾಲಿಸಿಂನ (ಚಯಪಯಚಯ)  ಒಂದು ಅಧ್ಯಯನಯಿಂದ ಬೆಳಕಿಗೆ ಬಂದಿದೆ.
ಟರ್ಕಿ ಕೋಳಿ :- ಟರ್ಕಿ ಕೋಳಿಯ ಮಾಂಸವು ಎಲ್-ಟ್ರೈಪ್ಟೊಪಾನ್ ಎಂಬ ಒಂದು ಅಮಿನೋ ಅಮ್ಲವನ್ನು ಹೊಂದಿರುತ್ತದೆ. ಈ ಅಮಿನೋ ಅಮ್ಲವು ಸಿರೊಟೋನಿನ್‌ನ ಬಿಡುಗಡೆಗೆ ಪ್ರಚೋದಿಸುತ್ತದೆ. ಇದು ಹಿತಾನುಭವನ್ನುಂಟು ಮಾಡುವ ಮೆದಳಿನ ಒಂದು ರಾಸಾಯಿನಿಕವಾಗಿದೆ. ಈ ಕಾರಣದಿಂದ ಹಲವು ಜನ ಟರ್ಕಿ ಕೋಳಿಯ ಮಾಂಸ ಸೇವಿಸದ ನಂತರ ಶಾಂತ ಚಿತ್ತರಾಗಿ ಅಥವಾ ಆಯಾಸದಾಯಕರಾಗಿ ಸಹ ಕಾಣುತ್ತಾರೆ. ಎಲ್-ಟ್ರೈಪ್ಟೊಫಾನ್ ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ.
ಒತ್ತಡವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ವ್ಯಾಯಮ ಮಾಡಿ. ಬೆಳಗ್ಗಿನ ಉಪಹಾರಕ್ಕೆ ಯಾವುದಾದರೂ ಒಂದು ಶಕ್ತಿವರ್ಧಕ ಪೇಯ ಸೇವಿಸಿರಿ.  ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ ಮಾನಸಿಕ, ದೈಹಿಕ ಮತ್ತು ಭಾವನತ್ಮಕ ಶಕ್ತಿ ಕಡಿಮೆಯಾಗಿ ಒತ್ತಡ ಹೆಚ್ಚುವುದು, ಆದ್ದರಿಂದ ಸ್ಥಿರವಾಗಿರಲು ದಿನವಿಡಿ ಪದೇ ಪದೇ ಸಣ್ಣ ಸಣ್ಣ ಪ್ರಮಾಣದ ಆಹಾರ ಸೇವಿಸಿರಿ.




ಲವ್ ಬರ್ಡ್ಸ್‌‌ನ ಲವ್ಲಿ ಆರೈಕೆಗೆ ಟಿಪ್ಸ್.

ಲವ್ ಬರ್ಡ್ಸ್‌ ಗಳು ಬೃಹದ್ಗಾತ್ರ ವ್ಯಕ್ತಿತ್ವದ ಚಿಕ್ಕ ಪ್ರತಿರೂಪದ ಗಿಳಿಗಳು. ಇವುಗಳು ತುಂಬಾ ಸಾಮಾಜಿಕ ಹಾಗೂ  ಪ್ರೀತಿಯ  ಪುಟ್ಟ ಗಿಳಿಗಳು. ಲವ್‌ಬರ್ಡ್ಸ್‌ ಗಳು ಅತಿ ಚಿಕ್ಕ ಗಿಳಿಗಳಲ್ಲಿ ಒಂದು. ವೈವಿಧ್ಯಮಯ ಬಣ್ಣಗಳಲ್ಲಿ ಇವುಗಳು ಕಾಣ ಸಿಗುತ್ತವೆ, ಆದರೂ ಹೆಚ್ಚಾಗಿ ನೀಲಿ, ಹಸಿರು  ಅಥವಾ ಹಳದಿ ಬಣ್ಣಗಳು ಸಾಮಾನ್ಯ. ಇವುಗಳು ಸುಮಾರು ೧೫ ವರ್ಷಗಳ ಕಾಲ ಜೀವಿಸುತ್ತವೆ. ಒಟ್ಟು ಒಂಬ್ಬತ್ತು ಜಾತಿಯ ಲವ್‌ಬರ್ಡ್ಸ್‌ ಗಳಿವೆ, ಅವುಗಳಲ್ಲಿ ಎಂಟು ಆಫ್ರಿಕಾ ಮೂಲದವು ಮತ್ತು ಉಳಿದವು ಮಡಗಾಸ್ಕರ್‌ ಮೂಲದ್ದಾಗಿದೆ.

 ಆಹಾರ ; ಲವ್ ಬರ್ಡ್ಸ್‌ ಗಳು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತವೆ. ಹಣ್ಣು, ತರಕಾರಿ, ಬೀಜಗಳು ಮತ್ತು ಧವಸಗಳನ್ನು ಅವುಗಳ ಆಹಾರದಲ್ಲಿ  ಸೇರಿಸಬಹುದು. ತಾಜ ತರಕಾರಿ ಮತ್ತು  ಹಣ್ಣುಗಳು ಲವ್‌ ಬರ್ಡ್ಸ್‌ ಗಳು ಆರೋಗ್ಯಕರವಾಗಿರಲು ಅವಶ್ಯಕ. ಉದಾಹರಣೆಗೆ ಕ್ಯಾರೆಟ್, ಮಾವಿನಹಣ್ಣು, ಪಪ್ಪಾಯಿ,  ದ್ರಾಕ್ಷಿ, ಪಾಲಕ್, ಕೊತ್ತಂಬ್ಬರಿ , ಮೆಂತ್ಯೆ ಸೊಪ್ಪು.   ಕೆಟ್ಟ ಅಥವಾ ಬ್ಯಾಕ್ಟೀರಿಯಯುಕ್ತ  ಆಹಾರದಿಂದ ಹಕ್ಕಿಗಳ ಅನಾರೋಗ್ಯ ಅಥವಾ ಸಾವಿಗೆ ಕಾರಣವಾಗಬಹುದು. ಮಾರಣಾಂತಿಕ ಆಹಾರಗಳಾದ ಚಾಕೊಲೇಟ್, ಅಲ್ಕೋಹಾಲ್, ಬೆಣ್ಣೆ ಹಣ್ಣು,  ಉಪ್ಪು ಅಥವಾ ಸಕ್ಕರೆಯುಕ್ತ ಆಹಾರಗಳನ್ನು ನೀಡಬಾರದು. ಇವುಗಳಿಗೆನೀರು ಅವಶ್ಯಕ.

ಪಂಜರ ; ಲವ್‌ಬರ್ಡ್ಸ್‌ ಗಳು ಹೆಚ್ಚು ಸ್ಥಳಾವಕಾಶವನ್ನು ಇಷ್ಟಪಡುವುದರಿಂದ, ಪಂಜರ ವಿಶಾಲವಾಗಿದಷ್ಟು ಅವುಗಳು ಸಂತೋಷವಾಗಿರುತ್ತವೆ. ಪಂಜರದ ಸರಳುಗಳ ನಡುವೆಯ ಸರಿಯಿಲ್ಲದ ಅಂತರವು ಅವುಗಳಿಗೆ ಹಾನಿಯುಂಟು ಮಾಡುತ್ತದೆ.  ಲವ್‌ ಬರ್ಡ್ಸ್‌ ಗಳಿಗೆ ಹತ್ತಲು, ಹಾರಲು  ಮತ್ತು ಆಡಲು   ವಿಶಾಲವಾದ ಪಂಜರ  ಅವಶ್ಯಕ, ಇದು ಅವುಗಳಿಗೆ  ಚೆಂಡು, ಘಂಟೆ, ಗೆಜ್ಜೆ, ಜೋಕಾಲಿ, ಕನ್ನಡಿ,  ಏಣಿಗಳಂತಹ  ಮುಂತಾದ  ಆಟ ಸಾಮಾನುಗಳಿಗೆ  ಹೆಚ್ಚು ಸ್ಥಳವನ್ನು ಒದಗಿಸುತ್ತದೆ. ಪಂಜರಗಳನ್ನು ಆದಷ್ಟೂ ಮನುಷ್ಯರ ಚಟುವಟಿಕೆಗಳು ನೆಡೆಯುವ  ಸ್ಥಳದಲ್ಲಿಡ ಬೇಕು. ಪಂಜರಗಳು ಆಡುಗೆ ಮನೆ ಅಥವಾ ನೇರವಾದ ಸೂರ್ಯನ ಬೆಳಕಿನಲ್ಲಿಡಬೇಡಿ. ಲವ್‌ ಬರ್ಡ್ಸ್‌ ಗಳನ್ನು ಬೇರೆ ಜಾತಿಯ ಪಕ್ಷಿಗಳೊಂದಿಗೆ ಒಂದೇ ಪಂಜರದಲ್ಲಿ ಇರಿಸಬೇಡಿ.
ಸ್ವಚ್ಛತೆ ; ಲವ್ ಬರ್ಡ್ಸ್‌ ಗಳ ಆರೋಗ್ಯಕ್ಕೆ  ಶುಚಿಯಾದ ಪಂಜರ ಮುಖ್ಯ. ಆದ್ದರಿಂದ ಪಂಜರವನ್ನು ಕನಿಷ್ಟ  ವಾರಕ್ಕೊಮ್ಮೆಯಾದರೂ ಸಂಪೂರ್ಣವಾಗಿ  ಸ್ವಚ್ಛಗೊಳಿಸಬೇಕು. ಆಹಾರ ಮತ್ತು ನೀರಿನ ಪಾತ್ರೆಯನ್ನು ನಿತ್ಯ ಶುಚಿಗೊಳಿಸಬೇಕು.  

ಸುರಕ್ಷತೆ ;  ನಾಯಿ, ಬೆಕ್ಕು ಹಾವುಗಳ ಕಾಟದಿಂದ ಪಂಜರವನ್ನು ಮುಕ್ತವಾಗಿರಿಸಿ. ಪಂಜರವನ್ನು ಅದಷ್ಟೂ ಮಕ್ಕಳಿಂದ ದೂರವಿಡಿ, ಸ್ಪಲ್ಪ ಎತ್ತರ ಸ್ಥಳದಲ್ಲಿಡುವುದು ಉತ್ತಮ. ಪಂಜರದ ಚಿಲಕಗಳು ಭದ್ರವಾಗಿರಲಿ. ಪಂಜರಗಳನ್ನು ಇರುವೆ, ಜೀರಲೆ ಮುಂತಾದ ಕೀಟಗಳಿಂದ ರಕ್ಷಿಸಿ.

ಲಿವಿಂಗ್‌ ರೂಮ್‌


ನಿಮ್ಮ ಕುಟುಂಬದ ಜೊತೆ ಅಥವಾ ಅತಿಥಿಗಳೊಂದಿಗೆ ಸಮಯ ಕಳೆಯಲು ಮನೆಯಲ್ಲಿ ಲಿವಿಂಗ್ ರೂಮ್ ಅಥವಾ ಫ್ಯಾಮಿಲಿ ರೂಮ್‌ಗಿಂತ ಸೂಕ್ತವಾದ ಸ್ಥಳ ಬೇರೊಂದಿಲ್ಲ. ಹೆಸರಿಗೆ ತಕ್ಕ ಹಾಗೆ ಮನೆಯವರು ಮತ್ತು ಸ್ನೇಹಿತರು ಕ್ವಾಲಿಟಿ ಟೈಮ್ ಕಳೆಯಲು ಇದು ಮನೆಯಲ್ಲಿನ ಉತ್ತಮ ಜಾಗ. ಟಿವಿ ನೋಡುವುದು, ಪುಸ್ತಕ ಓದುವುದು ಮತ್ತು ಮಕ್ಕಳು ಈ ಸ್ಥಳವನ್ನು ಹೋವರ್ಕ್ ಮಾಡಲು ಸಹ ಉಪಯೋಗಿಸ ಬಹುದು. ಮನೆಯ ಕೇಂದ್ರ ಬಿಂದುವಾಗಿ  ಲಿವಿಂಗ್ ರೂಮ್ ಎಂದರೆ ಆರಾಮದಾಯಕ ಸ್ಥಳಕ್ಕೆ ಇನ್ನೊಂದು ಹೆಸರು. ದೊಡ್ಡ ಸ್ಕ್ರೀನ್ ಟಿವಿ, ಪ್ರಾಯೋಗಿಕ ಪೀಠೋಪಕರಣಗಳು, ತುಂಬಿದ ಬುಕ್ ಶೆಲ್ಪ್‌ಯ ಜೊತೆಗೆ ಮೂಲೆಯಲ್ಲಿ ಅಗ್ಗಿಸ್ಟಿಕೆ ಲಿವಿಂಗ್‌ ರೂಮ್‌ಗೆ ಮೆರಗು ನೀಡುವುದರ ಜೊತೆಗೆ ಪರ್ಫೆಕ್ಟ್ ಎನ್ನುವಂತೆ ಮಾಡುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕೂಡಿ ಸಂತೋಷದ ಸಮಯ ಕಳೆಯಲು  ಮನೆಯಲ್ಲಿ ಲಿವಿಂಗ್ ರೂಮ್‌‌ ಉತ್ತಮ ಆಯ್ಕೆ .

 ನವೀಕರಣ ಅಥವಾ ಮರುವಿನ್ಯಾಸ ವೇಳೆಯಲ್ಲಿ, ನಿಮ್ಮ ಕುಟುಂಬದ ಅಗತ್ಯತೆಗಳನ್ನು ಮನಸ್ಸಿನಲ್ಲಿ  ಇರಿಸಿಕೊಳ್ಳವುದು   ಮುಖ್ಯ. ನೀವು ಕ್ರೀಡಾ ಪ್ರಿಯರಾಗಿದ್ದಲ್ಲಿ ಆಟಕ್ಕಾಗಿ ಒಂದು ದೊಡ್ದ ಟೇಬಲ್ ಇಡುವುದನ್ನು  ಖಚಿತ ಪಡಿಸಿಕೊಳ್ಳಿ. ನಿಮ್ಮ ಮಕ್ಕಳು ವೀಡಿಯೋ ಗೇಮ್ ಇಷ್ಟಪಡುವರಾಗಿದ್ದರೆ, ಬೇಕಾದಷ್ಟು ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ, ಓದುವ ಅಭಿರುಚಿವುಳ್ಳವರಿಗೆ ಡೆಸ್ಕ್, ಬುಕ್ ಶೆಲ್ಫ್‌ಗಳು ನಿಮ್ಮ ಲಿವಿಂಗ್‌ ರೂಮ್‌ನಲ್ಲಿಡಿ. ಅಗ್ಗಿಷ್ಟಿಕೆ ಸಹ ಲಿವಿಂಗ್ ರೂಮ್‌ನ ಒಂದು ಭಾಗ. ಆದರೆ ಅದು ನಿಮ್ಮ ಫ್ಯಾಮಿಲಿ ರೂಮ್‌ನ ಮೂಲೆಯನ್ನು ಆಕ್ರಮಿಸುವ ಮುನ್ನ ನಿಮ್ಮ ಪ್ರದೇಶದ ಹವಾಮಾನವನ್ನು ಗಮನದಲ್ಲಿಟ್ಟು ಕೊಳ್ಳಿ. ನೀವು ಉಷ್ಣವಲಯದ ವಾಸಿಗಳಾಗಿದರೆ ಫೈರ್ ಪ್ಲೇಸ್ ನಿಮ್ಮ ಲಿವಿಂಗ್ ರೂಮ್‌ಗೆ ಅಗತ್ಯವಿಲ್ಲ. ನಿಮ್ಮ ಅಗತ್ಯ ಮತ್ತು ಬಂಡವಾಳದ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಳ್ಳಿ. ಅದಷ್ಟೂ ಕಡಿಮೆ ಸ್ಥಳ ತೆಗೆದುಕೊಳ್ಳುವ ಡೆಸ್ಕ್, ಬುಕ್ ಸ್ಟ್ಯಾಂಡ್, ಟೇಬಲ್,  ಶೆಲ್ಫ್‌ಗಳಿಗೆ ಆದ್ಯತೆ ನೀಡಿ.   ಈ ಎಲ್ಲಾ ಮುಖ್ಯ ಅಂಶಗಳ ನಂತರ ನಿಮ್ಮ ಲಿವಿಂಗ್ ರೂಮ್‌ಗೆ ಹೊಂದುವಂತ ಸೂಕ್ತ ಬಣ್ಣಗಳ ಆಯ್ಕೆಯತ್ತ ಗಮನ ಹರಿಸಿ.
ಲಿವಿಂಗ್ ರೂಮ್ ಮತ್ತು ಅಗ್ಗಿಷ್ಟಿಕೆ
ನಿಮ್ಮ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ, ನಿಮ್ಮ ಲಿವಿಂಗ್ ರೂಮ್‌‌ನ್ನು  ಬೆಚ್ಚಗಿಡಲು ಮತ್ತು ಸೊಬಗು ಹೆಚ್ಚಿಸಲು ಒಂದು ಅಗ್ಗಿಸ್ಟಿಕೆಯ ಆಳವಡಿಕೆ  ಉತ್ತಮ  ದಾರಿ.  ನಿಮ್ಮ ಸ್ಥಳ ವರ್ಷವೀಡಿ ಬೆಚ್ಚಗಿದರೂ ಸಹ ನೀವು ಅಲಂಕಾರಿಕಕ್ಕಾಗಿ ಸಹ ಅಗ್ಗಿಸ್ಟಿಕೆಯನ್ನು ಇಡಬಹುದು. ಅವುಗಳಲ್ಲಿ ಹಲವು ಆಯ್ಕೆಗಳು ಲಭ್ಯ, ನಿಮ್ಮ ಆಸಕ್ತಿಗೆ ಸರಿಯಾಗಿ ಆಯ್ಕೆ ಮಾಡಿ ಕೊಳ್ಳಿ. ಸೌದೆ ಬಳಸುವ ಅಗ್ಗಿಸ್ಟಿಕೆ ಅಥೆಂಟಿಕ್ ಅನುಭವವನ್ನು ನೀಡಿದರೆ, ಗ್ಯಾಸ್‌ನ ಅಗ್ಗಿಸ್ಟಿಕೆ ಯಾವುದೇ ರಾಡಿಯಿಲ್ಲದೆ ಶಾಖ ನೀಡುತ್ತದೆ. ಎರಡು ಬದಿಯ ಅಥವಾ ಮೂಲೆಯ ಫೈರ್ ಪ್ಲೇಸ್ ಸಾಧಾರಣ ಅಗ್ಗಿಸ್ಟಿಕೆಗಿಂತ ವಿಭಿನ್ನವಾಗಿ ಶೋಭೆ ನೀಡುತ್ತದೆ.  ನಿಮ್ಮ ಲಿವಿಂಗ್ ರೂಮ್‌ಗೆ ಕಲೆಯ ಟಚ್ ನೀಡುವ ಆಸಕ್ತಿ ಹೊಂದಿದಲ್ಲಿ  ಮರದ ಸ್ಟೌವ್ ಫೈರ್‌ಪ್ಲೇಸ್‌‌ ಉತ್ತಮ.  ನೀವು ಸಮಕಾಲೀನ ಸ್ಪರ್ಶ ಇರುವ ಅಗ್ಗಿಸ್ಟಿಕೆಗಾಗಿ ನೋಡುತ್ತೀರುವಿರಾದರೆ ಸಾಂಪ್ರದಾಯಿಕ ಮರ ಅಥವಾ ಹೆಂಚಿನ  ಅಗ್ಗಿಸ್ಟಿಕೆಯನ್ನು ಬಿಟ್ಟು ಕಲ್ಲು, ಕಾಂಕ್ರೀಟ್ ಅಥವಾ ಲೋಹದ ಫೈರ್ ಪ್ಲೇಸ್‌ ನಿಮ್ಮ ಆಯ್ಕೆಯಾಗಿರಲಿ.
ಲಿವಿಂಗ್ ರೂಮ್ ಮತ್ತು ಬಿಲ್ಟ್ ಇನ್ ಪೀಠೊಪಕರಣಗಳು
ಬಿಲ್ಟ್-ಇನ್ ಬುಕ್ ಕೇಸ್, ಕ್ಯಾಬಿನೆಟ್ಶೆ ಲ್ಪ್‌ಗಳು ರೂಮ್‌ನ ಸ್ಥಳ ಉಳಿತಾಯದಲ್ಲಿ ಸಹಾಯ ಮಾಡುವುದಲ್ಲದೆ ಅಂದವನ್ನು ಹೆಚ್ಚಿಸುತ್ತದೆ.  ಪಿಠೋಪಕರಣಗಳ  ಪ್ರಾಯೋಗಿಕ ಜೋಡಣೆ ನಿಮ್ಮ ಲಿವಿಂಗ್ ರೂಮ್‌ನ್ನು ಸಂಘಟಿತವಾಗಿಸುತ್ತದೆ.  ಸ್ಪೀಕರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಲ್ಟ್ ಇನ್ ಕ್ಯಾಬಿನೆಟ್‌ಗಳಲ್ಲಿ ಜೋಡಿಸುವುದು ಉತ್ತಮ. ಇನ್ನೂ ಸ್ಥಳವಕಾಶವಿದ್ದರೆ ನೀವು ಸ್ಟಡಿ ಅಥವಾ ಪ್ರೊಜೆಕ್ಟ್ ಟೇಬಲ್‌ಗಳನ್ನು ಸೇರಿಸ ಬಹುದು.
ಲಿವಿಂಗ್‌ರೂಮ್ ಮತ್ತು ಅಲಂಕಾರ
ಫ್ಯಾಮಿಲಿ ರೂಮ್‌ನ ಅಲಂಕಾರಕ್ಕೆ ಯಾವಾಗಲೂ ತಟಸ್ಥ ಬಣ್ಣಗಳನ್ನು ಆಯ್ದು ಕೊಳ್ಳಿ, ಏಕೆಂದರೆ ಅವು ಸುಂದರವಾಗಿ ಕಾಣುವುದರ ಜೊತೆಗೆ ಯಾವಾಗಲೂ ಔಟ್ ಡೆಟ್ ಅನ್ನಿಸಿಕೊಳ್ಳುವುದ್ದಿಲ್ಲ. ನೀವು ಗಾಡ ಬಣ್ಣಗಳನ್ನು ಪ್ರಯತ್ನಿಸಲು ಬಯಸಿದರೆ, ಕೋಣೆಯ ಗೋಡೆ ಮತ್ತು ಇತರೆ ಸಾಮಗ್ರಿಗಳ ಬಣ್ಣಗಳಿಗೆ ಹೊಂದುವಂತೆ  ನೋಡಿಕೊಳ್ಳಿ. ಪ್ರತಿ ಬಾರಿಯೂ ಟ್ರೆಂಡ್ ಬದಲಾದಂತೆ ಸೋಫಾವನ್ನು ಬದಲಿಸುವುದು ಕಷ್ಟ ಬದಲಿಗೆ ಗೋಡೆಯ  ಬಣ್ಣವನ್ನು ಬದಲಿಸುವುದು ಸುಲಭವಾಗುತ್ತದೆ. ಜನಪ್ರಿಯ ಬಣ್ಣಗಳಾದ ನೀಲಿ, ಹಸಿರು ಅಥವಾ ಬೂದು ಬಣ್ಣಗಳ ಸೋಫಾಗಳನ್ನು ಪ್ರಯತ್ನಿಸಬಹುದು. ಗೋಡೆ ಹಳೆಯದಾಗಿದ್ದರೂ ಸಹ  ಪ್ರಕಾಶಮಾನವಾದ ಹಳದಿ ಅಥವಾ ಕೆಂಪು ಬಣ್ಣದ ಸೋಫಾಗಳು ಅಂದವನ್ನು ಹೆಚ್ಚಿಸುತ್ತವೆ. ಕೊನೆಯದಾಗಿ ಆದರೆ ಅತಿ ಮುಖ್ಯವಾದದ್ದು, ನಿಮ್ಮ ಲಿವಿಂಗ್ ರೂಮ್‌ನಲ್ಲಿ ಸಾಕಷ್ಟು ಬೆಳಕಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಹೆಚ್ಚುವರಿ ಕಿಟಕಿಗಳು ಬೆಳಕಿನ ಕೊರತೆಯನ್ನು ಪೂರೈಸುವಲ್ಲಿ ಸಹಾಯ ಮಾಡುತ್ತವೆ.