Showing posts with label ಆಹಾರ. Show all posts
Showing posts with label ಆಹಾರ. Show all posts

February 23, 2014

ನಾಯಿಗಳಿಗೆ ಹಾನಿಯುಂಟು ಮಾಡುವ ಆಹಾರಗಳು

ಮನುಷ್ಯರು ಹಾಗೂ ಕೆಲವು ಬೇರೆ ಜಾತಿಯ ಪ್ರಾಣಿಗಳು  ತಿನ್ನಲರ್ಹವಾದ ಕೆಲವು ಆಹಾರಗಳು ನಾಯಿಗಳಿಗೆ ಅಪಾಯವನ್ನುಂಟು ಮಾಡಬಹುದು. ಇದಕ್ಕೆ ಮುಖ್ಯ ಕಾರಣ ಅವುಗಳ ವಿಭಿನ್ನ ಚಯಾಪಚಯ (ಮೆಟಬಾಲಿಸಮ್). ಕೆಲವು ಆಹಾರಗಳು ತೀಕ್ಷ್ಣವಲ್ಲದ ಅಜೀರ್ಣವನ್ನು ಮಾತ್ರ ಉಂಟುಮಾಡಿದರೆ, ಇನ್ನೂ ಕೆಲವು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು ಮತ್ತು ಸಾವು ಕೂಡ ಉಂಟಾಗುವ ಸಾಧ್ಯತೆ ಯಿದೆ. ಈ ಕೆಳಗಿನವುಗಳು ನಾಯಿಗಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕೆಲವು ಸಾಮಾನ್ಯ ಆಹಾರ ಪದಾರ್ಥಗಳು.   

v  ಆಲ್ಕೋಹಾಲ್ ಪಾನೀಯಗಳು : ಇವುಗಳು ನಾಯಿಗಳಿಗೆ ಅಮಲೇರಿಸುತ್ತದೆ. ಇದರಿಂದ ನಾಯಿಗಳು ಕೋಮ ಸ್ಥಿತಿಯನ್ನು ತಲುಪಿ ಸಾವನ್ನುಪ್ಪುವ ಸಾಧ್ಯತೆ ಹೆಚ್ಚು.
v  ಬೆಣ್ಣೆ ಹಣ್ಣು :  ಇವುಗಳು ನಾಯಿಗಳಲ್ಲಿ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.
v  ಬೆಕ್ಕಿನ ಆಹಾರಗಳು : ಇವುಗಳು ಸಾಮಾನ್ಯವಾಗಿ ಅತಿ ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇಂತಹ ಆಹಾರಗಳು  ನಾಯಿಗಳಿಗೆ ಸೂಕ್ತವಲ್ಲ .
v  ಚಾಕೊಲೇಟ್, ಕಾಫಿ, ಟೀ ಮತ್ತು ಇತರೆ ಕೆಫೀನ್‌ಯುಕ್ತ ಆಹಾರಗಳು ವಾಂತಿ ಮತ್ತು ಭೇದಿಯನ್ನು ಉಂಟುಮಾಡುತ್ತವೆ ಮತ್ತು ಹೃದಯ ಮತ್ತು ನರವ್ಯೂಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚು.
v  ಸಿಟ್ರಸ್‌ ಹೊಂದಿದ ಆಹಾರ ಉತ್ಪನ್ನಗಳು ನಾಯಿಗಳಲ್ಲಿ  ವಾಂತಿಯನ್ನುಂಟು ಮಾಡುತ್ತದೆ.
v  ಮೀನು, ಕೋಳಿ ಅಥವಾ ಇತರೆ ಮಾಂಸದ ಮೂಲಗಳ ಮೂಳೆಗಳು ನಾಯಿಗಳ ಜೀರ್ಣ ಕ್ರಿಯೆಯಲ್ಲಿ ತೊಂದರೆಯನ್ನು ಉಂಟುಮಾಡುವುದು ಸಾಧ್ಯ.
v  ದ್ರಾಕ್ಷಿ, ಒಣ ದ್ರಾಕ್ಷಿಗಳಲ್ಲಿರುವ ಅಪರಿಚಿತ ವಿಷ, ನಾಯಿಗಳ ಮೂತ್ರ ಪಿಂಡಕ್ಕೆ ಹಾನಿಯನ್ನುಂಟು ಮಾಡುತ್ತದೆ.
v  ಕೊಳೆತ ಅಥವಾ ಹಾಳಾದ ಆಹಾರಗಳು ಹಲವು ಟಾಕ್ಸಿನ್‌ಗಳನ್ನು ಹೊಂದಿರುವುದರಿಂದ ನಾಯಿಗಳಲ್ಲಿ ವಾಂತಿ ಮತ್ತು ಭೇಧಿಯನ್ನು ಉಂಟುಮಾಡುವುದರ ಜೊತೆಗೆ ಇತರ ಅಂಗಗಳ ಮೇಲೂ ಸಹ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
v  ಹೆಚ್ಚಿನ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳನ್ನು ನಾಯಿಗಳಿಗೆ ನೀಡಿದ್ದಲ್ಲಿ ನಾಯಿಗಳಲ್ಲಿ ಅತಿಸಾರ ಕಂಡುಬರುತ್ತದೆ.
v  ಹಸಿ ಮೊಟ್ಟೆ ಮತ್ತು ಹಸಿ ಮಾಂಸಗಳು ಸಹ ನಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.
v  ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸಕ್ಕರೆಯುಕ್ತ ಆಹಾರ ಕೂಡ ನಾಯಿಗಳಿಗೆ ಒಳೆಯದಲ್ಲ.
v  ನಾಯಿಗಳಿಗೆ ನೀಡುವ ಆಹಾರದಲ್ಲಿ ಅಣಬೆ, ಈರುಳ್ಳಿ, ಬೆಳ್ಳುಳ್ಳಿ ಬಳಕೆ ಅವುಗಳ ಆರೋಗ್ಯಕ್ಕೆ ಹಾನಿಕಾರಕ.

v  ತಂಬಾಕು, ಗಾಂಜಾ, ಹುದುಗು ಹಿಟ್ಟು (ಯಿಸ್ಟ್), ಕೃತಕ ಸಿಹಿಯನ್ನು ಹೊಂದಿದ ಆಹಾರಗಳನ್ನು ನಾಯಿಗೆ ನೀಡುವುದು ನೀಷಿದ್ಧ. ಈ ರೀತಿಯ ಆಹಾರಗಳು ಹಲವು ರೀತಿಯ ಟಾಕ್ಸಿನ್‌ಗಳನ್ನು ಹೊಂದಿರುತ್ತವೆ. ಇವುಗಳು ನಾಯಿಯ ಹಲವು ಅಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮವನ್ನುಂಟುಮಾಡಿ  ಸಾವಿಗೆ ಕಾರಣವಾಗುತ್ತವೆ.

January 3, 2011

ಚಳಿಗಾಲದ ಸಮಸ್ಯೆಗಳಿಗೆ ಸರಳ ಪರಿಹಾರಗಳು.

ವಾವ್! ಚಳಿಗಾಲದಲ್ಲಿ ಬೆಚ್ಚನೆ ಉಡುಪು ಧರಿಸಿ, ಬಿಸಿಬಿಸಿ ಕಾಫಿಯೊಂದಿಗೆ, ಬೋಂಡ, ಬಜ್ಜಿ ಸವಿಯುವುದು ಎಲ್ಲರಿಗೂ ಪ್ರಿಯವಾದದ್ದೇ. ಚಳಿಗಾಲ ಎಂದರೆ ಬರೀ ಬೆಚ್ಚನೆ ಉಡುಪುಗಳನ್ನು ತೊಡುವುದು ಮಾತ್ರವಲ್ಲ. ಚಳಿಗಾಲದ ಜೊತೆಗೆ ಹಲವು ತೊಂದರೆಗಳು ಕಾಡುತ್ತವೆ. ಶುಷ್ಕ ಕೂದಲು, ಒಣ ಚರ್ಮ, ಬಿರುಕು ಬಿಟ್ಟ ಹಿಮ್ಮುಡಿಗಳು , ಒಡೆದ ತುಟಿಗಳು ಈ ಕಾಲದ ಕಾಮನ್ ಸಮಸ್ಯೆಗಳು. ಕಡಿಮೆ ಉಷ್ಣಾಂಶ, ಕಡಿಮೆ ತೇವಾಂಶ ಮತ್ತು ತಣ್ಣನೆ ಕೊರೆಯುವ ಗಾಳಿ ಇವುಗಳಿಗೆಲ್ಲಾ ಮೂಲ ಕಾರ‍ಣವಾಗಿದೆ. ಕೂದಲು ಮತ್ತು ಚರ್ಮವಂತೂ ಶುಷ್ಕವಾಗಿ ನಿರ್ಜಿವ ಸ್ವರೂಪ ಪಡೆದು ಕೊಳ್ಳುತ್ತವೆ. ಫ್ಯಾಷನ್ ಪ್ರಿಯರಿಗೊಂತು ಈ ಕಾಲ ಶಾಪವೇ ಸರಿ. ಸ್ಪಲ ಕಾಳಜಿ ಮತ್ತು ಸುಲಭ ಕ್ರಮಗಳ ಮೂಲಕ ಈ ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಚಳಿಗಾಲದಲ್ಲಿ ಕಾಡುವ ಕಾಮನ್ ಸಮಸ್ಯೆಗಳಿಗೆ ಕೆಲವು ಸರಳ ಟಿಪ್ಸ್‌ಗಳು ಇಲ್ಲಿವೆ. ಈ ಕ್ರಮಗಳನ್ನು ನಿತ್ಯ ಜೀವನದಲ್ಲಿ ಆಳವಡಿಸಿ ಕೊಳ್ಳಿ ಚಳಿಗಾಲದಲ್ಲಿ ನಿಮ್ಮನ್ನು ಕಾಡುವ ತೊಂದರೆಗಳಿಗೆ ಬಾಯ್ ಹೇಳಿ ಮತ್ತು ಎಂಜಾಯ್ ವಿಂಟರ್..!


ಚರ್ಮ:
ಚಳಿಗಾಲದ ತಣ್ಣನೆ ಗಡುಸಾದ ಹವಾಗುಣದಿಂದ ಚರ್ಮವು ಡ್ರೈ ಆಗುತ್ತದೆ. ಇದರಿಂದ ಚರ್ಮದಲ್ಲಿ ಬಿರುಕು, ತುರಿಕೆ ಕಾಣಿಸು ಕೊಳ್ಳುವುದು ಸಾಮನ್ಯ.ಇದನ್ನು ತಡೆಗಟ್ಟಲು ಸ್ಪಲ ಕೇರ್ ಅತ್ಯಗತ್ಯ.
ಚಳಿಗಾಲದಲ್ಲಿ ಅತಿ ಬಿಸಿ ನೀರಿನ ಸ್ನಾನ ಬೇಡ. ಇದು ಚರ್ಮದ ಎಣ್ಣೆ ಅಂಶವನ್ನು ನಾಶ ಮಾಡುತ್ತದೆ. ಉಗುರು ಬೆಚ್ಚಗಿನ ನೀರು ಉತ್ತಮ. ಹಾಗೆ ಸ್ನಾನ ಮಾಡುವ ಅವಧಿಯನ್ನು ಕಡಿಮೆಗೊಳಿಸಿ. ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡಿ.
ಗಡುಸಾದ ಸೋಪಿನ ಬಳಕೆಯಿಂದ ಚರ್ಮದ ನೈಸರ್ಗಿಕ ತೈಲಗಳ ನಷ್ಟವಾಗಿ ಇನ್ನಷ್ಟೂ ಒಣಗುತ್ತದೆ, ಅದರಿಂದ ಸಾದ್ಯವಾದಷ್ಟೂ ಸೌಮ್ಯವಾದ ಹೆಚ್ಚು ಮಾಶ್ಚರೈಸರ್ ಯುಕ್ತ ಸೋಪನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲವೆ ಸೋಪಿನ ಬದಲಿಗೆ ಸ್ನಾನಕ್ಕೆ ಹೆಸರು ಕಾಳಿನ ಹಿಟ್ಟನ್ನು ಸಹ ಬಳಸಬಹುದು.
ಸ್ನಾನದ ನಂತರ ಟವೆಲ್‌ನಿಂದ ದೇಹವನ್ನು ಉಜ್ಜ ಬೇಡಿ. ಕೋಮಲವಾಗಿ ಒರಿಸಿ ಹಾಗೂ ಕಡ್ಡಾಯವಾಗಿ ಕೊಬ್ಬರಿ ಎಣ್ಣೆ, ಷೀಕಕಾಯಿ ಎಣ್ಣೆ (shea butter) ಅಥವಾ ಸೂಕ್ತವಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳುವ ರೂಡಿ ಮಾಡಿಕೊಳ್ಳಿ.
ಚಳಿಯಿಂದ ಗಡುಸಾದ ಚರ್ಮದ ತುರಿಕೆಗೆ ಕೊಬ್ಬರಿ ಎಣ್ಣೆಯ ಮಸಾಜ್ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತದೆ.
ರಾತ್ರಿ ಮಲಗುವ ಮುನ್ನ ಮುಖ, ಕೈ, ಕಾಲುಗಳಿಗೆ ಸೂಕ್ತವಾದ ಕ್ರಿಮ್, ಎಣ್ಣೆ ಅಥವಾ ಲೋಶನ್ ಬಳಸುವುದನ್ನು ಮರೆಯಬೇಡಿ. ಸಾಧ್ಯವಾದಷ್ಟೂ A, C, D ಮತ್ತು E ವಿಟಮಿನ್ ಯುಕ್ತ ನೈಸರ್ಗಿಕ ಎಣ್ಣೆಗಳನ್ನು ಅಯ್ಕೆ ಮಾಡಿಕೊಳ್ಳಿ. (ಕೊಬ್ಬರಿ ಎಣ್ಣೆ, ಅಲಿವ್ ಎಣ್ಣೆ, ಕೋಕಾ ಎಣ್ಣೆ, ಷೀಕಕಾಯಿ ಎಣ್ಣೆ ಇತ್ಯಾದಿ)
ವಾರಕ್ಕೊಮ್ಮೆ ಸ್ಕ್ರಬರ್ ಬಳಸಿ, ಇದು ಒಣಗಿದ ಚರ್ಮವನ್ನು ತೆಗೆಯಲು ಸಹಕಾರಿಯಾಗುತ್ತದೆ. ನಂತರ ಪೇಸ್ ಪ್ಯಾಕ್ ಮಾಡಿ ಕೊಳ್ಳಿ. ಇದರಿಂದ ಚಳಿಯಿಂದ ಒಡೆದ ಚರ್ಮ ಮತ್ತೆ ಕಾಂತಿಯುಕ್ತ ಹೊಳೆಯತ್ತದೆ.
ಬೆಣ್ಣೆ ಹಣ್ಣಿನ (avocado) ಪೇಸ್ ಪ್ಯಾಕ್ ಒಣ ಚರ್ಮಕ್ಕೆ ಅತಿ ಸೂಕ್ತ. ಬೆಣ್ಣೆ ಹಣ್ಣಿನೊಂದಿಗೆ ಅಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಕೊಳ್ಳಿ. 10-15 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳಿಯಿರಿ.
ಹಾಗೇ ಓಟ್ಸ್‌ನ ಪೇಸ್ ಪ್ಯಾಕ್ ಕೂಡ ಬಳಸಬಹುದು. ಓಟ್ಸ್ ಫ್ಲೆಕ್ಸ್‌ನ ಪುಡಿ, ಮೊಟ್ಟೆಯ ಹಳದಿ ಭಾಗ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ. ಮುಖ ಹಚ್ಚಿ 20 ನಿಮಿಷಗಳ ನಂತರ ತೊಳಿಯಿರಿ.
ಮೊಸರು, ಮಜ್ಜಿಗೆ, ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷಗಳ ನಂತರ ತೊಳಿರಿ.
ರಾತ್ರಿ ಮಲಗುವ ಮುನ್ನ ಲೋಳೆಸರದ ರಸವನ್ನು ನೇರವಾಗಿ ಮುಖಕ್ಕೆ ಹಚ್ಚಿ ಕೊಳ್ಳಿ.
ಈ ಫೇಸ್ ಮ್ಯಾಕ್ಸ್‌ಗಳು ನಿಮ್ಮ ಚರ್ಮಕ್ಕೆ ಸಂಪೂರ್ಣ ಪ್ರಮಾಣದ ವಿಟಮಿನ್, ಮಿನರಲ್ಸ್, ಅಂಟಿಅಕ್ಸಿಡೆಂಟ್‌ಗಳು ಮತ್ತು ಚರ್ಮವನ್ನು ಮೃದುಗೊಳಿಸುವ ಅಂಶಗಳನ್ನು ಸರಬರಾಜುಮಾಡುತ್ತವೆ. ಮತ್ತು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇವು ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಪುನಃ ಸ್ಥಾಪಿಸುತ್ತದೆ ಮತ್ತು ಚಳಿಗಾಲದ ಗಾಳಿಯ ಋಣಾತ್ಮಕ ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ.
ಕೈಗಳಿಗೆ ಗ್ಲೌಸ್ ಹಾಕಿ ಕೊಳ್ಳಿ. ಕೆಲಸದ ನಂತರ ಸರಿಯಾದ ಕ್ರೀಮ್ ಅಥವಾ ಲೋಶನ್ ಹಚ್ಚಿ ಕೊಳ್ಳಿ.
ಒರಟಾದ ಹಸ್ತಗಳಿಗೆ ಸಕ್ಕರೆ ಮತ್ತು ನಿಂಬೆ ರಸದ ಮಿಶ್ರಣದಿಂದ ಮಸಾಜ್ ಮಾಡಿ ಕೊಳ್ಳಿ. ಇದು ಕೈಯನ್ನು ಮೃದುಗೊಳಿಸುತ್ತದೆ.
ಹಾಗೆಯೇ 1 ಚಮಚ- ಗ್ಲಿಸಿರಿನ್,1 ಚಮಚ- ನಿಂಬೆ ರಸ ಮತ್ತು 5 ಹನಿ ರೋಸ ವಾಟರ್‌ ಅನ್ನು ಮಿಕ್ಸ್ ಮಾಡಿ, ಕೈಗಳಿಗೆ 10-15 ನಿಮಿಷಗಳ ಮಸಾಜ್ ಮಾಡಿ ಕೊಳ್ಳಿ
ಮನೆಯಿಂದ ಹೊರ ಹೊರಡುವಾಗ ಕನಿಷ್ಟ 15 ಅಥವಾ ಹೆಚ್ಚಿನ SPF ಅಂಶವನ್ನು ಹೊಂದಿರುವ ಸನ್‌ಸ್ಕ್ರೀನ್ ಲೊಶನ್ ಹಚ್ಚಿ ಕೊಳ್ಳಿ. ಸನ್‌ಸ್ಕ್ರೀನ್ ಮತ್ತು ಮಾಶ್ಚರೈಸರ್‌ ಮಿಶ್ರವಾಗಿರುವ ಲೋಶನ್‌ ಸಹ ನೀವು ಆಯ್ಕೆ ಮಾಡಿಕೊಳ್ಳ ಬಹುದು.
ಒಡೆದ ಹಿಮ್ಮುಡಿಗಳಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವ ಮುನ್ನ ಸೂಕ್ತವಾದ ಕ್ರೀಮ್ ಹಚ್ಚಿ, ಕಾಲಿಗೆ ಸಾಕ್ಸ್ ಹಾಕಿ ಕೊಂಡು ಮಲಗುವ ಅಭ್ಯಾಸ ಮಾಡಿ ಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಹಾಕಿ ಕಾಲನ್ನು ಅದರಲ್ಲಿ ಇಟ್ಟು ಕೊಳ್ಳಿ. ಹಾಗೇಯೆ ಅನ್ನದ ತಿಳಿಗೆ ಸ್ವಲ್ಪ ಹಾಕಿ ಕಾಲನ್ನು 10-15 ನಿಮಿಷಗಳ ಕಾಲ ಅದರಲ್ಲಿ ಇಟ್ಟುಕೊಳ್ಳಿ. ಒಡೆದ ಹಿಮ್ಮುಡಿಯನ್ನು ಮೃದುಗೊಳಿಸುತ್ತದೆ ಮತ್ತು ಬಿರುಕುಗಳು ಮುಚ್ಚಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ತುಟಿಗಳ ಒಡೆಯುವಿಕೆ ಸಾಮಾನ್ಯ. ಒಡೆದ ತುಟಿಗಳಿಗೆ ಪದೇ ಪದೇ ನಾಲಿಗೆ ತಗಲಿಸ ಬೇಡಿ. ಸದಾ ಲಿಪ್ ಬಾಮ್ ಹಚ್ಚಿ ಕೊಳ್ಳಿ, ತುಟಿಯನ್ನು ಒಣಗಲು ಬಿಡಬೇಡಿ. ಒಡೆದ ತುಟಿಗಳಿಗೆ ಬೆಣ್ಣೆ ಮತ್ತು ಹಾಲು ಕೆನೆ ರಾಮಬಾಣ. ಕೊಬ್ಬರಿ ಎಣ್ಣೆ, ಅಲಿವ್‌ ಅಯಿಲ್, ಷೀಕಕಾಯಿ ಎಣ್ಣೆಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೂದಲು:
ಚಳಿಗಾಲದ ತಡಿ ಹವೆಯಿಂದ ಕೂದಲು ಒಣಗಿ ತನ್ನ ಹೊಳಪನ್ನು ಕಳೆದು ಕೊಳ್ಳುತ್ತದೆ. ಜೊತೆಗೆ ಕೂದಲು ಉದುರುವುದು ಕವಲು ಒಡೆಯುವುದು, ಹೊಟ್ಟಿನ ಸಮಸ್ಯೆಗಳು ಸೇರಿ ಕೊಳ್ಳುತ್ತವೆ.
ಚಳಿಗಾಲದ ಸಮಯದಲ್ಲಿ ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳಿಯಬೇಡಿ. ಅತಿಯಾಗಿ ಕೂದಲು ತೊಳೆಯುವುದು ಅಥವಾ ಶಾಂಪೂ ಬಳಕೆಯನ್ನು ತಪ್ಪಿಸಿ. ಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ದಾಸವಾಳದ ಸೊಪ್ಪು, ಲೋಳೆಸರ, ಅಂಟವಾಳ ಮತ್ತು ಸೀಗೆಕಾಯಿಯ ಮಿಶ್ರಣವು ಕೂದಲಿಗೆ ಒಳ್ಳೆಯ ನೈಸರ್ಗಿಕ ಶಾಂಪೂ.
ಕೂದಲನ್ನು ಬಿಸಿ ಮಾಡುವ ಉಪಕರಣಗಳಾದ ಹೇರ್ ಡ್ರೈಯರ್, ಕರಲರ್‌ಗಳ ಬಳಕೆಯಿಂದ ದೂರ ಇರಿ. ಕೂದಲನ್ನು ನೈಸರ್ಗಿಕವಾಗಿ ಒಣಗಿಸಿ ಕೊಳ್ಳಿ.
ಚಳಿಗಾಲದಲ್ಲಿ ಕೂದಲನ್ನು ಪದೇ ಪದೇ ಕಲರಿಂಗ್, ಸ್ಟ್ರೀಕಿಂಗ್, ಅಥವಾ ಐರಿನಿಂಗ್‌ಗಳಿಗೆ ಒಡ್ಡಬೇಡಿ. ಇದರಿಂದ ಕೂದಲಿನ ನೈಸರ್ಗಿಕ ತೈಲ ನಷ್ಟವಾಗಿ, ಕೂದಲು ಇನ್ನಷ್ಟೂ ಹದಗೆಡುತ್ತದೆ.
ಕೂದಲನ್ನು ಗಾಳಿಗೆ ಹಾರಡಲೂ ಬಿಡಬೇಡಿ. ಅದಷ್ಟೂ ಕೂದಲನ್ನು ಕಟ್ಟಿ ಕೊಳ್ಳಿ. ಹೊರಗೆ ಹೋಗುವ ಸ್ಕಾರ್ಫ್‌, ಟೋಪಿಗಳನ್ನು ಬಳಸಿ
ಒಣ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಅತ್ಯಂತ ಪರಿಣಾಮಕಾರಿ. ಹಾಗೆ ಅಲಿವ್ ಅಯಿಲ್ ಮಸಾಜ್ ಸಹ ತುಂಬಾ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಚಳಿಗಾಲದಲ್ಲಿ ಕೂದಲು ಒಣಗಿ ಹೊಳಪನ್ನು ಕಳೆದು ಕೊಳ್ಳುವುದನ್ನು ತಪ್ಪಿಸಲು, ಆಗಾಗ ಸೂಕ್ತ ನೈಸರ್ಗಿಕ ಕಂಡಿಷನರ್ ಬಳಕೆ ಅಗತ್ಯ. ಬೇಸಿಗೆಗಿಂತ ಚಳಿಗಾಲದಲ್ಲಿ ಕೂದಲಿಗೆ ಕಂಡಿಷನರ್‌ನ್ನ ಅಗತ್ಯ ಹೆಚ್ಚು. ಕೂದಲು ತೊಳೆಯುವ ಮುನ್ನ ಲೋಳೆಸರದ ರಸ ಅಥವಾ ರುಬ್ಬಿದ ದಾಸವಾಳ ಸೊಪ್ಪನ್ನು 15-20 ನಿಮಿಷಗಳ ಕಾಲ ತಲೆಗೆ ಹಚ್ಚಿ ಕೊಳ್ಳಿ. ಮೆಹಂದಿಯನ್ನು ಕಂಡಿಷನ್ ಆಗಿ ಸಹ ಬಳಸಬಹುದು, ಅದಕ್ಕೆ ಒಂದು ಚಮಚ ಎಣ್ಣೆ ಮಿಕ್ಸ್ ಮಾಡಿಕೊಳ್ಳಿ. ಕೆಲ್ವು ಹನಿ ಶುಂಠಿರಸದೊಂದಿಗೆ ಅಲೀವ್ ಅಯಿಲ್ ಸೇರಿಸಿ, ತಲೆಗೆ ಹಚ್ಚಿ ಕೊಂಡು, ಒಂದು ಘಂಟೆಯ ನಂತರ ತೊಳಿಯಿರಿ. ಸೀಗೆ ಕಾಯಿ ಮತ್ತು ಮೆಂತ್ಯೆಯ ಪುಡಿಯನ್ನು ಕೂದಲು ತೊಳೆಯಲು ಉಪಯೋಗಿಸಿ. ಬೆಣ್ಣೆ ಹಣ್ಣು ಸಹ ಕೂದಲಿಗೆ ಒಳ್ಳೆಯ ಕಂಡಿಷನರ್.


ಆಹಾರ ಕ್ರಮ:
ಚಳಿಗಾಲದಲ್ಲಿ ಈ ಎಲ್ಲಾ ಬೇಸಿಕ್ ಕೇರ್‌ಗಳ ಜೊತೆ ನಾವು ಸೇವಿಸುವ ಆಹಾರ ಕ್ರಮದ ಕಡೆಗೆ ಗಮನಹರಿಸುವುದು ಸಹ ಅತಿ ಅವಶ್ಯಕ. ಚಳಿಗಾಲದ ಸಮಸ್ಯೆಗಳಿಂದ ದೂರವಿರಲು ದೇಹದ ಹೊರಗಿನಿಂದ ಕಾಳಜಿಯ ಜೊತೆಗೆ ದೇಹದ ಒಳಗಿನ ಕಾಳಜಿ ಸಹ ಮುಖ್ಯ. ಈ ಕಾಲದಲ್ಲಿನ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಹಾರಿಸಲು ನಾವು ಸೇವಿಸುವ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ.
ಜೀವ ಜಲ ನೀರು ಬೇಸಿಗೆ ಅಷ್ಟೇ ಚಳಗಾಲದಲ್ಲೂ ಅವಶ್ಯಕ. ಇದು ದೇಹವನ್ನು ಹೈಡ್ರೇಟು ಮಾಡುತ್ತದೆ. ಇದರಿಂದ ಚರ್ಮವನ್ನು ಆರೋಗ್ಯಕರ ಹೊಳಪನ್ನು ಪಡೆಯುತ್ತದೆ. ಚೆನ್ನಾಗಿ ನೀರು ಕುಡಿಯಿರಿ.
ಅಗಸೆ ಬೀಜದ ಎಣ್ಣೆ (Flaxseed) - ಇದು ದೇಹವನ್ನು ಒಳಗಿನಿಂದ ತೇವವಾಗಿಡುತ್ತದೆ. ಇದು ಬಹು ಆವಶ್ಯಕವಾದ ಸ್ವಾಭಾವಿಕ ಕೊಬ್ಬುಗಳನ್ನು ಹೊಂದಿರುವುದರಿಂದ ಸಮಸ್ತ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿ ಹಾಗೂ ಅವಶ್ಯಕ. ಇದು ಎಣ್ಣೆಯ ರೂಪದಲ್ಲಿ ಹಾಗೂ ಕ್ಯಾಪ್ಸೂಲ್‌ ರೂಪದಲ್ಲಿಯೂ ಸಹ ಲಭ್ಯ .
ನಿತ್ಯದ ಆಹಾರ ಕ್ರಮದಲ್ಲಿ ಅಗತ್ಯವಾದ ಒಳ್ಳೆಯ ಎಣ್ಣೆಗಳನ್ನು ಅಳವಡಿಸಿ ಕೊಳ್ಳಿ. ಜೈವಿಕ ಬೆಣ್ಣೆ, ಕಾಡ್ ಲೀವರ್ ಅಯಿಲ್, ಒಮೆಗಾ-3, ಕೊಬ್ಬರಿ ಎಣ್ಣೆ ಇತ್ಯಾದಿಗಳು. ಜೊತೆಗೆ ಹಸಿ ತರಕಾರಿ, ಮೀನು, ಹಾಲು ಮತ್ತು ಹಾಲಿನ ಉತ್ಪನ್ನಗಳು ಮತ್ತು ಹಣ್ಣುಗಳನ್ನು ನಿಮ್ಮ ದಿನದ ಆಹಾರದಲ್ಲಿ ಸೇರಿಸಿ ಕೊಳ್ಳಿ.

(2010ರ ಡಿಸೆಂಬರ್‌ನ ಕನ್ನಡ ಪ್ರಭದ ’ಸಖಿ’ ಮ್ಯಾಗಜೀನ್‌ಗಾಗಿ ಬರೆದ ಲೇಖನ)

August 30, 2009

ಸರ್ವಗುಣ ಸಂಪನ್ನ........ ಪಪ್ಪಾಯಿ ಹಣ್ಣು

ಪಪ್ಪಾಯಿ ಒಂದು ಜನಪ್ರಿಯ ಹಾಗೂ ಸರ್ವಕಾಲಿಕ ಫಲ. ಇದನ್ನು ಪರಂಗಿ ಹಣ್ಣು ಎಂದು ಸಹ ಕರೆಯುತ್ತಾರೆ. ಪಪ್ಪಾಯಿಯ ಮೂಲ ಮಧ್ಯ ಅಮೆರಿಕ. ಸ್ಪೇನ್ ಮತ್ತು ಪೊರ್ಚಗಲ್ ನಾವಿಕರು ತಾವು ಪ್ರಯಾಣಿಸಿದ ಪ್ರದೇಶಗಳಾದ ಭಾರತ, ಫೀಲಿಫೈನ್ಸ್ ಮತ್ತು ಅಮೆರಿಕದ ಭಾಗಗಳಿಗೆ ಈ ಹಣ್ಣನ್ನು ಪರಿಚಯಿಸಿದರು. 20ನೇ ಶತಮಾನದಲ್ಲಿ ಅಮೆರಿಕಕ್ಕೆ ಈ ಹಣ್ಣನ್ನು ಪರಿಚಯಿಸಲಾಯಿತು ಹಾಗೂ ಹವಾಯಿ ಪ್ರದೇಶದಲ್ಲಿ ಬೆಳೆಯಲು ಪ್ರಾರಂಭಿಸಿದರು. 1920 ರಿಂದ ಅಮೆರಿಕ ಪಪ್ಪಾಯಿ ಬೆಳೆಯುವ ಪ್ರಮುಖ ದೇಶವಾಗಿದೆ. ಜೊತೆಗೆ ಮೆಕ್ಸಿಕೊ ಕೂಡ ಇಂದು ಅತಿ ಹೆಚ್ಚು ಪಪ್ಪಾಯಿ ಬೆಳೆಯುವ ದೇಶವಾಗಿದೆ.
ಇದು ಅಲ್ಪಾವಧಿಯ ಶೀಘ್ರವಾಗಿ ಬೆಳೆಯುವ ಸುಮಾರು 10-12 ಅಡಿಯ ಗಿಡ. ಹಸಿರು ಬಣ್ಣದ ಗಟ್ಟಿಯಾದ ಕಾಯಿ ನಂತರ ಹಳದಿ ಮಿಶ್ರಿತ ಕೇಸರಿ ಬಣ್ಣಕ್ಕೆ ತಿರುಗಿ ಮೆದುವಾದ ಹಣ್ಣಾಗುತ್ತದೆ. ಬಲಿತ ಕಾಯಿ ಕೋಣೆಯ ಉಷ್ಣಾಂಶಕ್ಕೆ ಹಣ್ಣಾಗುತ್ತದೆ. ಸಾಮಾನ್ಯವಾಗಿ 7-20 ಇಂಚು ಉದ್ದವಿದ್ದು, ಒಳಭಾಗ ಹಳದಿ/ಕೇಸರಿ ಬಣ್ಣದಾಗಿರುತ್ತದೆ ಹಾಗೂ ಕಾಳುಮೆಣಸನ್ನು ಹೋಲುವ ಕಪ್ಪು ಬೀಜವಿರುತ್ತದೆ. ಈ ಹಣ್ಣು ಎಲ್ಲಾ ಕಾಲದಲ್ಲೂ ಲಭ್ಯ. ಆದರೆ ಬೇಸಿಗೆಯಲ್ಲಿ ಇದರ ಇಳುವರಿ ಹೆಚ್ಚು. ಇದರಲ್ಲಿ 45 ಕ್ಕಿಂತ ಹೆಚ್ಚು ಪ್ರಭೇಧಗಳಿದೆ.
ಪಪ್ಪಾಯಿ ಅನಾದಿಕಾಲದಿಂದಲೂ ಬಳಕೆಯಲ್ಲಿರುವ ಹಣ್ಣು. ಸಾಮಾನ್ಯವಾಗಿ ಈ ಹಣ್ಣು ಯಾವುದೇ ಅಲರ್ಜಿಯನ್ನು ಉಂಟುಮಾಡುವುದಿಲ್ಲ. ಬಹಳ ಸುಲಭವಾಗಿ ಜೀರ್ಣವಾಗುವ ಈ ಹಣ್ಣು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪರಿಪೂರ್ಣ ಆಹಾರವಾಗಿದೆ. ಪ್ರಂಪಚದ ಎಲ್ಲಾ ಭಾಗದ ಜನರು ಇಷ್ಟಪಡುವ ಸಿಹಿಯಾದ ಸ್ವಾದಿಷ್ಟಕರ ಹಣ್ಣು ಇದು. ಸ್ವಾದಿಷ್ಟತೆ ಮತ್ತು ರುಚಿಗೆ ಸೀಮಿತವಾಗದೆ ಆರೋಗ್ಯಕರ ಅಂಶಗಳನ್ನು ಹೊಂದಿದ ಅತೀ ಶ್ರೀಮಂತ ಹಣ್ಣು. ಜೀವಸತ್ವಗಳಾದ ಎ, ಬಿ, ಸಿ, ಇ ಹಾಗೂ ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಬಿಟಾ ಕೆರೋಟಿನ್, ಪಾನ್ಟೊಥೇನಿಕ್ (pantothenic) ಹಾಗೂ ಫೊಲಿಕ್ ಅಮ್ಲಗಳ ಆಗರ. ಪಪ್ಪಾಯಿ ನಾರಿನಾಂಶದಿಂದ ಕೂಡಿದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತ, ಕಡಿಮೆ ಕ್ಯಾಲೋರಿಯ ಹಣ್ಣು. ಕ್ರಿಸ್ಟೊಫರ್ ಕೊಲಂಬಸ್ ಈ ಹಣ್ಣನ್ನು "fruit of the angles” ಎಂದು ಕರೆದಿರುವುದು ಅರ್ಥಪೂರ್ಣವಾಗಿದೆ.
ಪಪ್ಪಾಯಿಯನ್ನು ಹಾಗೇ ತಿನ್ನಬಹುದು. ಫ್ರೂಟ್ ಸಲಾಡ್‌ಗಳಲ್ಲಿ ಬಳಸಬಹುದು. ಹೆಚ್ಚಿದ ಹಣ್ಣಿಗೆ ನಿಂಬೆರಸ ಬೆರೆಸಿದರೆ ರುಚಿಯಾಗಿರುತ್ತದೆ. ವಿಧವಿಧವಾದ ಆಹಾರ ಪದಾರ್ಥಗಳಲ್ಲಿ ಬಳಸಬಹುದು. ಕಾಯಿಯನ್ನು ಬೇಯಿಸಿ ತರಕಾರಿ ರೂಪದಲ್ಲಿ ಬಳಸುತ್ತಾರೆ. ಇದರ ಬೀಜ ಕೂಡ ತಿನ್ನಲು ಯೊಗ್ಯ. ವೆಸ್ಟ್ ಇಂಡಿಸ್ ದೇಶದವರು ಇದರ ಎಲೆಯನ್ನು ಬೇಯಿಸಿ ಪಾಲಕ್ ಸೊಪ್ಪಿನ ಹಾಗೆ ಆಹಾರ ಪದಾರ್ಥಗಳಲ್ಲಿ ಉಪಯೊಗಿಸುತ್ತಾರೆ.
ಬಹು ಉಪಯೋಗಿ ಪಪ್ಪಾಯಿ ಹಣ್ಣು :
*ಅಸ್ಟ್ರಿಯಾದ ಒಂದು ವಿಶ್ವವಿದ್ಯಾನಿಲಯ ನೆಡೆಸಿದ ಅಧ್ಯಯನದ ಪ್ರಕಾರ ಅತಿಯಾಗಿ ಕಳಿತ ಪಪ್ಪಾಯಿ ಹಣ್ಣಿನಲ್ಲಿ ಅತಿ ಹೆಚ್ಚು ಪ್ರಮಾಣದ ಅಂಟ್ಯಿಅಕ್ಸಿಡೆಂಟ್ಗಳು (antioxidants) ಲಭ್ಯ.
*ಉತ್ತಮ ನಾರಿನಂಶ ಹೊಂದಿರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತದೆ.ನಿತ್ಯ ಸೇವನೆಯಿಂದ ಹೃದಯಾಘಾತವನ್ನು ತಡೆಯಬಹುದು.
*ದೇಹದಲ್ಲಿನ ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸಿ, ನೆಗಡಿ, ಜ್ವರ, ಕಿವಿಯ ಸೋಂಕುಗಳು ಮುಂತಾದ ಖಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ.
*ದಿನ ನಿತ್ಯ ಆಹಾರದಲ್ಲಿ ಪಪ್ಪಾಯಿ ಹಣ್ಣನ್ನು ಅಳವಡಿಸುಕೊಳ್ಳುವುದರಿಂದ ವಯಸ್ಕರಲ್ಲಿ ಕಂಡು ಬರುವ ದೃಷ್ಟಿ ಸಂಬಂಧಿ ತೊಂದರೆಗಳಿಂದ ದೂರವಿರಬಹುದು.
*ಪಪ್ಪಾಯಿಯಲ್ಲಿರುವ "ಪಪ್ಪಾಯಿನ್" ಎಂಬ ಎನ್ಜೆಮ್ (papain enzyme) ಬಹು ಆರೋಗ್ಯಕಾರಿ. ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮಲಬದ್ಧತೆಗೆ ಈ ಹಣ್ಣು ರಾಮಬಾಣ ಹಾಗೂ ರಕ್ತಮೂಲವ್ಯಾಧಿಗೂ ಸಹ ಸಿದ್ಧ ಔಷಧಿ. ಈ ಎನ್ಜೆಮ್ ಚಿವ್ಗಮ್ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ.
*ಶ್ವಾಸಕೋಶ ಆರೋಗ್ಯಕ್ಕೂ ಉತ್ತಮ. ಧೂಮಪಾನಿಗಳು ಪಪ್ಪಾಯಿಯ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ, ಅದರಲ್ಲಿರುವ ಎ ಜೀವಸತ್ವ ಶ್ವಾಸಕೋಶದ ಉರಿ, ನೋವು, ಸೋಂಕುಗಳನ್ನು ನಿಯಂತ್ರಣದಲ್ಲಿಡುತ್ತದೆ.
*ಹೆಚ್ಚು ನಾರಿನಂಶ ಹೊಂದಿರುವ, ಕ್ಯಾಲೊರಿ, ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತ ಈ ಹಣ್ಣು, ದೇಹದ ತೂಕ ಇಳಿಕೆಯಲ್ಲಿ ಗಣನೀಯ ಪಾತ್ರವಹಿಸುತ್ತದೆ.
*ಕರಳು ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸುತ್ತದೆ. ಆರೋಗ್ಯವಂತ ಕರುಳಿನ ಜೀವಕೋಶಗಳನ್ನ ಕ್ಯಾನ್ಸರ್ ಕಾರಕ ವಿಷದಿಂದ ರಕ್ಷಿಸುತ್ತದೆ.
*ಸಿ,ಇ ಜೀವಸತ್ವ ಹಾಗೂ ಬೀಟಾಕೆರೊಟಿನ್ ಊರಿ, ಊತ, ನೋವು, ಗಾಯಗಳನ್ನು ಗುಣಪಡಿಸುವಲ್ಲಿ ಸಹಕಾರಿಯಾಗಿರುವುದರಿಂದ ಕೀಲುನೋವು, ಅಸ್ತಮಾದಿಂದ ಬಳಲುವವರಿಗೆ ಉತ್ತಮ.
ಈ ಹಣ್ಣು ತಾಯಿಯ ಎದೆ ಹಾಲಿನ ವೃದ್ಧಿಗೆ ಸಹಕಾರಿ.
*ಅಕಾಲ ಮುಪ್ಪನ್ನು ತಡೆಯುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸಹ ಚರ್ಮ ಮೃದುವಾಗಿ ಕಾಂತಿಯುಕ್ತವಾಗಿ ಹೊಳೆಯುತ್ತದೆ. ಪಪ್ಪಾಯಿ ಕಾಯಿಯ ಜ್ಯೂಸ್ -ಮಧ್ಯ ವಯಸ್ಕರಲ್ಲಿ ಕಂಡುಬರುವ ಋತುಚಕ್ರದ ಸಮಸ್ಯೆಗಳಿಗೆ, ಮೊಡವೆಗೆ, ಗಾಯದಲ್ಲಿ ಊತ, ಕೀವುಗಟ್ಟುವುದನ್ನು ತಡೆಯಲು ಉತ್ತಮ ಔಷಧಿ.
*ಈ ಜ್ಯೂಸ್ಗೆ ಜೇನುತುಪ್ಪ ಬೆರೆಸಿ ಕುಡಿದರೆ ಗಂಟಲಿನ ಸೋಂಕುಗಳು ಹರಡುವುದು ತಡೆಯುತ್ತದೆ. ಕಾಯಿಯ ಪೇಸ್ಟ್ ನಿಂದ ಮುಖದ ಕಲೆಗಳು ಮಾಯವಾಗಿ ಸುಂದರವಾದ,ಮೃದುವಾದ ತ್ವಚೆ ಪಡೆಯಬಹುದು.
*2 ಚಮಚ ಬೀಜವನ್ನು ಜೇನುತುಪ್ಪದಲ್ಲಿ ಊಟದ ನಂತರ ಅಗಿದು ತಿನ್ನುವುದರಿಂದ ಜಂತುಹುಳು ನಿವಾರಣೆ ಸಾದ್ಯ .
ಈ ಹಣ್ಣಿನಲ್ಲಿ ಬಿಳಿಯಾಗಿ (bleaching) ಅಂಶವಿರುವುದರಿಂದ ಸೋಪು ಹಾಗೂ ಡಿಟರ್ಜಂಟ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ.