February 23, 2014

ಲಿವಿಂಗ್‌ ರೂಮ್‌


ನಿಮ್ಮ ಕುಟುಂಬದ ಜೊತೆ ಅಥವಾ ಅತಿಥಿಗಳೊಂದಿಗೆ ಸಮಯ ಕಳೆಯಲು ಮನೆಯಲ್ಲಿ ಲಿವಿಂಗ್ ರೂಮ್ ಅಥವಾ ಫ್ಯಾಮಿಲಿ ರೂಮ್‌ಗಿಂತ ಸೂಕ್ತವಾದ ಸ್ಥಳ ಬೇರೊಂದಿಲ್ಲ. ಹೆಸರಿಗೆ ತಕ್ಕ ಹಾಗೆ ಮನೆಯವರು ಮತ್ತು ಸ್ನೇಹಿತರು ಕ್ವಾಲಿಟಿ ಟೈಮ್ ಕಳೆಯಲು ಇದು ಮನೆಯಲ್ಲಿನ ಉತ್ತಮ ಜಾಗ. ಟಿವಿ ನೋಡುವುದು, ಪುಸ್ತಕ ಓದುವುದು ಮತ್ತು ಮಕ್ಕಳು ಈ ಸ್ಥಳವನ್ನು ಹೋವರ್ಕ್ ಮಾಡಲು ಸಹ ಉಪಯೋಗಿಸ ಬಹುದು. ಮನೆಯ ಕೇಂದ್ರ ಬಿಂದುವಾಗಿ  ಲಿವಿಂಗ್ ರೂಮ್ ಎಂದರೆ ಆರಾಮದಾಯಕ ಸ್ಥಳಕ್ಕೆ ಇನ್ನೊಂದು ಹೆಸರು. ದೊಡ್ಡ ಸ್ಕ್ರೀನ್ ಟಿವಿ, ಪ್ರಾಯೋಗಿಕ ಪೀಠೋಪಕರಣಗಳು, ತುಂಬಿದ ಬುಕ್ ಶೆಲ್ಪ್‌ಯ ಜೊತೆಗೆ ಮೂಲೆಯಲ್ಲಿ ಅಗ್ಗಿಸ್ಟಿಕೆ ಲಿವಿಂಗ್‌ ರೂಮ್‌ಗೆ ಮೆರಗು ನೀಡುವುದರ ಜೊತೆಗೆ ಪರ್ಫೆಕ್ಟ್ ಎನ್ನುವಂತೆ ಮಾಡುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕೂಡಿ ಸಂತೋಷದ ಸಮಯ ಕಳೆಯಲು  ಮನೆಯಲ್ಲಿ ಲಿವಿಂಗ್ ರೂಮ್‌‌ ಉತ್ತಮ ಆಯ್ಕೆ .

 ನವೀಕರಣ ಅಥವಾ ಮರುವಿನ್ಯಾಸ ವೇಳೆಯಲ್ಲಿ, ನಿಮ್ಮ ಕುಟುಂಬದ ಅಗತ್ಯತೆಗಳನ್ನು ಮನಸ್ಸಿನಲ್ಲಿ  ಇರಿಸಿಕೊಳ್ಳವುದು   ಮುಖ್ಯ. ನೀವು ಕ್ರೀಡಾ ಪ್ರಿಯರಾಗಿದ್ದಲ್ಲಿ ಆಟಕ್ಕಾಗಿ ಒಂದು ದೊಡ್ದ ಟೇಬಲ್ ಇಡುವುದನ್ನು  ಖಚಿತ ಪಡಿಸಿಕೊಳ್ಳಿ. ನಿಮ್ಮ ಮಕ್ಕಳು ವೀಡಿಯೋ ಗೇಮ್ ಇಷ್ಟಪಡುವರಾಗಿದ್ದರೆ, ಬೇಕಾದಷ್ಟು ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ, ಓದುವ ಅಭಿರುಚಿವುಳ್ಳವರಿಗೆ ಡೆಸ್ಕ್, ಬುಕ್ ಶೆಲ್ಫ್‌ಗಳು ನಿಮ್ಮ ಲಿವಿಂಗ್‌ ರೂಮ್‌ನಲ್ಲಿಡಿ. ಅಗ್ಗಿಷ್ಟಿಕೆ ಸಹ ಲಿವಿಂಗ್ ರೂಮ್‌ನ ಒಂದು ಭಾಗ. ಆದರೆ ಅದು ನಿಮ್ಮ ಫ್ಯಾಮಿಲಿ ರೂಮ್‌ನ ಮೂಲೆಯನ್ನು ಆಕ್ರಮಿಸುವ ಮುನ್ನ ನಿಮ್ಮ ಪ್ರದೇಶದ ಹವಾಮಾನವನ್ನು ಗಮನದಲ್ಲಿಟ್ಟು ಕೊಳ್ಳಿ. ನೀವು ಉಷ್ಣವಲಯದ ವಾಸಿಗಳಾಗಿದರೆ ಫೈರ್ ಪ್ಲೇಸ್ ನಿಮ್ಮ ಲಿವಿಂಗ್ ರೂಮ್‌ಗೆ ಅಗತ್ಯವಿಲ್ಲ. ನಿಮ್ಮ ಅಗತ್ಯ ಮತ್ತು ಬಂಡವಾಳದ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಳ್ಳಿ. ಅದಷ್ಟೂ ಕಡಿಮೆ ಸ್ಥಳ ತೆಗೆದುಕೊಳ್ಳುವ ಡೆಸ್ಕ್, ಬುಕ್ ಸ್ಟ್ಯಾಂಡ್, ಟೇಬಲ್ಶೆಲ್ಫ್‌ಗಳಿಗೆ ಆದ್ಯತೆ ನೀಡಿ.   ಈ ಎಲ್ಲಾ ಮುಖ್ಯ ಅಂಶಗಳ ನಂತರ ನಿಮ್ಮ ಲಿವಿಂಗ್ ರೂಮ್‌ಗೆ ಹೊಂದುವಂತ ಸೂಕ್ತ ಬಣ್ಣಗಳ ಆಯ್ಕೆಯತ್ತ ಗಮನ ಹರಿಸಿ.
ಲಿವಿಂಗ್ ರೂಮ್ ಮತ್ತು ಅಗ್ಗಿಷ್ಟಿಕೆ
ನಿಮ್ಮ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ, ನಿಮ್ಮ ಲಿವಿಂಗ್ ರೂಮ್‌‌ನ್ನು  ಬೆಚ್ಚಗಿಡಲು ಮತ್ತು ಸೊಬಗು ಹೆಚ್ಚಿಸಲು ಒಂದು ಅಗ್ಗಿಸ್ಟಿಕೆಯ ಆಳವಡಿಕೆ  ಉತ್ತಮ  ದಾರಿ.  ನಿಮ್ಮ ಸ್ಥಳ ವರ್ಷವೀಡಿ ಬೆಚ್ಚಗಿದರೂ ಸಹ ನೀವು ಅಲಂಕಾರಿಕಕ್ಕಾಗಿ ಸಹ ಅಗ್ಗಿಸ್ಟಿಕೆಯನ್ನು ಇಡಬಹುದು. ಅವುಗಳಲ್ಲಿ ಹಲವು ಆಯ್ಕೆಗಳು ಲಭ್ಯ, ನಿಮ್ಮ ಆಸಕ್ತಿಗೆ ಸರಿಯಾಗಿ ಆಯ್ಕೆ ಮಾಡಿ ಕೊಳ್ಳಿ. ಸೌದೆ ಬಳಸುವ ಅಗ್ಗಿಸ್ಟಿಕೆ ಅಥೆಂಟಿಕ್ ಅನುಭವವನ್ನು ನೀಡಿದರೆ, ಗ್ಯಾಸ್‌ನ ಅಗ್ಗಿಸ್ಟಿಕೆ ಯಾವುದೇ ರಾಡಿಯಿಲ್ಲದೆ ಶಾಖ ನೀಡುತ್ತದೆ. ಎರಡು ಬದಿಯ ಅಥವಾ ಮೂಲೆಯ ಫೈರ್ ಪ್ಲೇಸ್ ಸಾಧಾರಣ ಅಗ್ಗಿಸ್ಟಿಕೆಗಿಂತ ವಿಭಿನ್ನವಾಗಿ ಶೋಭೆ ನೀಡುತ್ತದೆ.  ನಿಮ್ಮ ಲಿವಿಂಗ್ ರೂಮ್‌ಗೆ ಕಲೆಯ ಟಚ್ ನೀಡುವ ಆಸಕ್ತಿ ಹೊಂದಿದಲ್ಲಿ  ಮರದ ಸ್ಟೌವ್ ಫೈರ್‌ಪ್ಲೇಸ್‌‌ ಉತ್ತಮ.  ನೀವು ಸಮಕಾಲೀನ ಸ್ಪರ್ಶ ಇರುವ ಅಗ್ಗಿಸ್ಟಿಕೆಗಾಗಿ ನೋಡುತ್ತೀರುವಿರಾದರೆ ಸಾಂಪ್ರದಾಯಿಕ ಮರ ಅಥವಾ ಹೆಂಚಿನ  ಅಗ್ಗಿಸ್ಟಿಕೆಯನ್ನು ಬಿಟ್ಟು ಕಲ್ಲು, ಕಾಂಕ್ರೀಟ್ ಅಥವಾ ಲೋಹದ ಫೈರ್ ಪ್ಲೇಸ್‌ ನಿಮ್ಮ ಆಯ್ಕೆಯಾಗಿರಲಿ.
ಲಿವಿಂಗ್ ರೂಮ್ ಮತ್ತು ಬಿಲ್ಟ್ ಇನ್ ಪೀಠೊಪಕರಣಗಳು
ಬಿಲ್ಟ್-ಇನ್ ಬುಕ್ ಕೇಸ್, ಕ್ಯಾಬಿನೆಟ್ಶೆ ಲ್ಪ್‌ಗಳು ರೂಮ್‌ನ ಸ್ಥಳ ಉಳಿತಾಯದಲ್ಲಿ ಸಹಾಯ ಮಾಡುವುದಲ್ಲದೆ ಅಂದವನ್ನು ಹೆಚ್ಚಿಸುತ್ತದೆ.  ಪಿಠೋಪಕರಣಗಳ  ಪ್ರಾಯೋಗಿಕ ಜೋಡಣೆ ನಿಮ್ಮ ಲಿವಿಂಗ್ ರೂಮ್‌ನ್ನು ಸಂಘಟಿತವಾಗಿಸುತ್ತದೆ.  ಸ್ಪೀಕರ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಲ್ಟ್ ಇನ್ ಕ್ಯಾಬಿನೆಟ್‌ಗಳಲ್ಲಿ ಜೋಡಿಸುವುದು ಉತ್ತಮ. ಇನ್ನೂ ಸ್ಥಳವಕಾಶವಿದ್ದರೆ ನೀವು ಸ್ಟಡಿ ಅಥವಾ ಪ್ರೊಜೆಕ್ಟ್ ಟೇಬಲ್‌ಗಳನ್ನು ಸೇರಿಸ ಬಹುದು.
ಲಿವಿಂಗ್‌ರೂಮ್ ಮತ್ತು ಅಲಂಕಾರ
ಫ್ಯಾಮಿಲಿ ರೂಮ್‌ನ ಅಲಂಕಾರಕ್ಕೆ ಯಾವಾಗಲೂ ತಟಸ್ಥ ಬಣ್ಣಗಳನ್ನು ಆಯ್ದು ಕೊಳ್ಳಿ, ಏಕೆಂದರೆ ಅವು ಸುಂದರವಾಗಿ ಕಾಣುವುದರ ಜೊತೆಗೆ ಯಾವಾಗಲೂ ಔಟ್ ಡೆಟ್ ಅನ್ನಿಸಿಕೊಳ್ಳುವುದ್ದಿಲ್ಲ. ನೀವು ಗಾಡ ಬಣ್ಣಗಳನ್ನು ಪ್ರಯತ್ನಿಸಲು ಬಯಸಿದರೆ, ಕೋಣೆಯ ಗೋಡೆ ಮತ್ತು ಇತರೆ ಸಾಮಗ್ರಿಗಳ ಬಣ್ಣಗಳಿಗೆ ಹೊಂದುವಂತೆ  ನೋಡಿಕೊಳ್ಳಿ. ಪ್ರತಿ ಬಾರಿಯೂ ಟ್ರೆಂಡ್ ಬದಲಾದಂತೆ ಸೋಫಾವನ್ನು ಬದಲಿಸುವುದು ಕಷ್ಟ ಬದಲಿಗೆ ಗೋಡೆಯ  ಬಣ್ಣವನ್ನು ಬದಲಿಸುವುದು ಸುಲಭವಾಗುತ್ತದೆ. ಜನಪ್ರಿಯ ಬಣ್ಣಗಳಾದ ನೀಲಿ, ಹಸಿರು ಅಥವಾ ಬೂದು ಬಣ್ಣಗಳ ಸೋಫಾಗಳನ್ನು ಪ್ರಯತ್ನಿಸಬಹುದು. ಗೋಡೆ ಹಳೆಯದಾಗಿದ್ದರೂ ಸಹ  ಪ್ರಕಾಶಮಾನವಾದ ಹಳದಿ ಅಥವಾ ಕೆಂಪು ಬಣ್ಣದ ಸೋಫಾಗಳು ಅಂದವನ್ನು ಹೆಚ್ಚಿಸುತ್ತವೆ. ಕೊನೆಯದಾಗಿ ಆದರೆ ಅತಿ ಮುಖ್ಯವಾದದ್ದು, ನಿಮ್ಮ ಲಿವಿಂಗ್ ರೂಮ್‌ನಲ್ಲಿ ಸಾಕಷ್ಟು ಬೆಳಕಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಹೆಚ್ಚುವರಿ ಕಿಟಕಿಗಳು ಬೆಳಕಿನ ಕೊರತೆಯನ್ನು ಪೂರೈಸುವಲ್ಲಿ ಸಹಾಯ ಮಾಡುತ್ತವೆ.


February 14, 2014

ನಿನ್ನವಳಲ್ಲದ ನಿನ್ನವಳು

ಹೊರಗೆ ಸೂರ್ಯನ ತಾಪ ಹೆಚ್ಚಾದಂತೆನನ್ನಳೊಗೆ ನಿನ್ನ ನೆನಪು ಹೆಚ್ಚು ಹೆಚ್ಚು ಸುಡಲಾರಂಭವಾಗುತ್ತದೆ.  ಇಂತಹ ಮಟ ಮಟ ಮಧ್ಯಾಹ್ನದಲ್ಲಿ  ನನ್ನ ಜೀವಕ್ಕೆ ತಂಗಾಳಿಯಾಗ ಬೇಕಾಗಿದ್ದ  ನಿನ್ನ ನೆನಪುಗಳು  ಹೊರಬರಲಾರದೇ ಒಳಗೇ ಉರಿಯುತ್ತದೆ. ಅದೇಷ್ಟು ವರ್ಷಗಳಿಂದ ಇಂಚು ಇಂಚಾಗಿ ಸುಡುತ್ತಿವೆ. ಇಷ್ಟು ವರ್ಷಗಳಿಂದ ನನ್ನ  ಮನಸ್ಸಿಲ್ಲೇ ಇಟ್ಟುಕೊಂಡು ಅನುಭವಿಸಿದ ವೇದನೆಯನ್ನೇಲ್ಲಾ ಇಂದು  ಹೊರ ಹಾಕಲೇಬೇಕೆಂದು ನಿರ್ಧರಿಸೇ ನಿನಗೆ ಬರೆಯಲು ಪೆನ್ನು ಕೈಗೆತ್ತು ಕೊಂಡಿದ್ದೇನೆ.ನಾನು ಬಹಳ ಹಿಂದೆ ಮಾಡಬೇಕಾಗಿದ್ದ ಕೆಲಸವಿದು.

ನನಗೆ ಇನ್ನೂ ಚೆನ್ನಾಗಿ ನೆನಪಿದೆ ಆ ದಿನ.  ಹಿಸ್ಟರಿ ಎಕ್ಸಾಮ್.  ಬೆಲ್ ಆಗುವ ಐದು ನಿಮಿಷಗಳ ಮುಂಚೆ ಅದೇ ಕೊನೆಯಿಂದ ಎರಡನೆಯ ಬೆಂಚಿನಲ್ಲಿ ಕೂರುತ್ತಿದ್ದನಲ್ಲಾ ಜೋಕರ್ (ಅವನ ಹೆಸರು ಈಗ ನೆನಪಿಲ್ಲ). ಅವನು ನಿನ್ನ ಹೆಸರು ಹೇಳಿ ಸಣ್ಣ ಹೂಗಳ ತಿಳಿ ಹಳದಿ ಬಣ್ಣದ ಒಂದು  ಕವರ್ ನನ್ನ ಕೈಯಲ್ಲಿ ಇಟ್ಟಾಗಅದರಲ್ಲಿ ಏನು ಬರೆದಿರಬಹುದೆಂದು ಊಹಿಸದಿರುವಷ್ಟು ಪೆದ್ದಿ ಏನು ನಾನಗಿರಲಿಲ್ಲ. ಅವತ್ತು ಎಕ್ಸಾಮ್ ಹಾಲ್‌ನಲ್ಲಿ ಕಳೆದ  ಆ ಮೂರು ಘಂಟೆಗಳು ಮುಳ್ಳು ಮೇಲೆ ಕೂತ ಅನುಭವ ನನಗೆ. ನೀನೇನಾದರೂ ಎದುರಿಗೆ ಸಿಕ್ಕಿದ್ದರೆ ಸಿಗಿದು ಹಾಕುವಷ್ಟು ಕೋಪ ಬಂದಿತ್ತು . ನಿನಗೆ ಬೇರೆಯಾರು ಸಿಗಲಿಲ್ಲ್ವಾ?  ಲೆಟರ್ ಕಳುಹಿಸಲು.  ಆ ನಿನ್ನ ಪೋಸ್ಟ್‌ಮ್ಯಾನ್  ನೀನು ಬರೆದ ಆ ಪತ್ರದ ಪ್ರತಿಯೊಂದು ಸಾಲನ್ನು  ಬಿಡದೆ ಬಾಯಿ ಪಾಠ ಮಾಡಿ ಇಡೀ ಕಾಲೇಜಿಗೆ ಊದಿದ್ದ, ಸಧ್ಯ ನಮ್ಮ ಹಾಸ್ಟೇಲ್ ವಾರ್ಡನ್ ಕಿವಿ ತನಕ ಹೋಗದಿದ್ದು ನನ್ನ ಪುಣ್ಯ.  ಇನ್ನೂ ನಿನಗೆ ಹುಡುಗಿಗೆ ಪ್ರೋಪಸ್ ಮಾಡುವಾಗ  ಒಂದು ಸುಂದರವಾದ ಕಾರ್ಡ್ ಜೊತೆಗೆ ದೊಡ್ಡ ಚಾಕೊಲೇಟ್ ಕೊಡಬೇಕು ಅನ್ನೊ ಬೆಸಿಕ್ ಸೆನ್ಸ್ ಇರಲಿಲ್ವಾ?!  ನನ್ನ ಫ್ರೆಂಡ್ಸ್ ಮುಂದೆ ಎಷ್ಟು ಅವಮಾನ ಎದುರಿಸ ಬೇಕಾಯಿತ್ತು ಗೊತ್ತಾ?  ಅವರ ಸಂಗ್ರಹದಲ್ಲಾಗಲ್ಲೇ  ಆ ರೀತಿ ಸಿಕ್ಕಿದ್ದ ಎರಡು ಮೂರು ಕಾರ್ಡ್, ಚಾಕೊಲೇಟ್ ಕವರ್‌ಗಳು ಇತ್ತು. ಇನ್ನೂ ಹುಡುಗಿಯರ ವಿಷಯದಲ್ಲಿ ನಿನ್ನಂತ ಶತ ದಡ್ಡ ಎಲ್ಲಿ ಹುಡುಕಿದರು ಸಿಗೊಲ್ಲ.  ಹುಡುಗಿಗೆ ಲವ್ ಲೆಟರ್ ಕೊಡಕ್ಕೆ ಮುಂಚೆ ಹುಡುಗಿಯರ ಕಾಮನ್ ಸೈಕಾಲಜಿನೂ ಸ್ಪಲ ತಿಳಿದು ಕೊಂಡಿರಬೇಕು ಕಣೋ. ಯಾವುದಾದರೂ ಹುಡುಗಿ  ಮೊದಲ ಬಾರಿಗೆ ಹುಡುಗನನ್ನು ಒಪ್ಪಿಕೊಂಡಿದ್ದು ಎಲ್ಲಾದರೂ ಕೇಳಿದ್ದಿಯಾ?   “ಇಲ್ಲ ನಾನು ನಿನ್ನ ಯಾವತ್ತು ಆ ಭಾವನೆಯಿಂದ ನೋಡಿಲ್ಲ, ನಾವು ಬರಿ ಫ್ರೆಂಡ್ಸ್ ಆಗಿರೋಣ ಅಂತ ನಾನು ಹೇಳಿದರೆ ನೀನು ಸುಮ್ಮನೆ ಆಗಿಬಿಡೋದಾ! ಹಿಂದೆ ಮುಂದೆ ಎರಡು ರೌಂಡ್ಸ್ ಹಾಕಿ, ಸ್ವಲ್ಪ ಸ್ಟೈಲ್, ಸ್ಮೈಲ್ ಮಾಡಿ ಮಾತಾಡಿಸೋ ಪ್ರಯತ್ನನೇ ಮಾಡಿಲ್ಲ ನೀನು. ನನ್ನ ಮುಂದೆ ಬೇರೆ ಹುಡುಗಿಯರ ಜೊತೆಯಾದರೂ ನಗುತ್ತಾ ಮಾತಾಡಿ ನಾನು ಹೊಟ್ಟೆ ಉರಿಸಿಕೊಳ್ಳೊ ಅವಕಾಶನೂ ನನಗೆ ಕೊಡದೆ ಹೇಳದೆ ಕೇಳದೆ ನಾಪತ್ತೆ ಆಗಿಬಿಟ್ಟೆ.

ನೀನು ಏನೋ ಯುವರ್ ಸ್ಪೇಷಲ್ ಟು ಮಿ ಅನ್ನೊ ಒಕ್ಕಣೆಯಿಂದ ಶುರುಮಾಡಿ ಲವ್ ಯು ವೆರಿ ಮಚ್ ಅಂತ ಪತ್ರ ಬರೆದು ತಣ್ಣಗಾದೆ. ಆಮೇಲೆ ನನ್ನ ಕಥೆ ಕೇಳು. ನೀನಿಲ್ಲದ ಲಾಸ್ಟ್ ಬೆಂಚಿನಿಂದ ನನಗೆ ಇಡೀ ಕ್ಲಾಸೇ ಖಾಲಿಯಾದ ಅನುಭವ.  ಸಂಜೆಯಾಗುತ್ತಿದ್ದಂತೆ ನಮ್ಮ ಹಾಸ್ಟೇಲ್ ಮುಂದೆ ಪೂರ್ತಿ ಬಾಯ್ಸ್ ಹಾಸ್ಟೇಲಿನ ಹುಡುಗರ ಆಕಡೆಯಿಂದ ಈಕಡೆಗೆ ಪಥಸಂಚಲನದಲ್ಲೂ ನೀನು ಪತ್ತೆ ಇಲ್ಲ. ಕ್ಯಾಟೀನು, ಲೈಬ್ರರಿ, ಕಾರಿಡರ್ ಎಲ್ಲೂ ನಿನ್ನ ಸುಳಿವು ಸಿಗದೆ ಒಳಗೊಳಗೆ ಒದ್ದಾಡಿದೆ.   ಶನಿವಾರವಾದರೂ ನಿನ್ನ ದರ್ಶನವಾಗಬಹುದು ಎಂಬ ಆಸೆಯಿಂದ  ಹಾಸ್ಟೇಲಿನಿಂದ ಎರಡು ಮೈಲಿ ದೂರದ ಟೌನ್‌ಗೆ ನೆಡೆದೆ ಹೋಗುತ್ತಿದೆ.  ಇನ್ನೂ ಟೌನಿನ ಐಸ್ ಕ್ರಿಮ್ ಪಾರ್ಲರ್‌ಗಳಲ್ಲಿ ಜೋಡಿಗಳಿಗೆಂದೆ ಮೀಸಲಾಗಿದ್ದ ಮೂಲೆ ಟೇಬಲ್‌ಗಳಲ್ಲಿ ಸಹಪಾಠಿಗಳನ್ನು ನೋಡಿ ಕರಬುತ್ತಿದ್ದೆ.  ನನ್ನ ಸ್ನೇಹಿತೆಯರು ತಮ್ಮ ಬಾಯ್‌ಫ್ರೆಂಡ್ಸ್ ಜೊತೆ ಜಗಳವಾಡಿ ರಾಜಿಯಾಗುವಾಗುವುದನ್ನು ನೋಡಿ ನನಗೆ ಇಲ್ಲದ ಆ ಭಾಗ್ಯಕ್ಕೆ ಕೊರಗಿದೆ. ನಿನಗೇ ಕೊಡಲೆಂದೆ ಕೊಂಡ ಅದೆಷ್ಟೋ ಗ್ರಿಟಿಂಗ್ ಕಾರ್ಡ್‌ಗಳನ್ನು , ಇಂದಿಗೂ ನನ್ನ ಹಳೆ ಪುಸ್ತಕಗಳ ಮಧ್ಯದಿಂದ ನಿನ್ನನ್ನು ನೆನಪಿಸಿ ಅಣಿಕಿಸುತ್ತಿವೆ. ಒಮ್ಮೆ ನಾನು ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದಾಗ ಪೂರ್ತಿ ತರಗತಿಯೇ  ಅಲ್ಲಿ ನೆರೆದಿತ್ತು, ನಿನ್ನೊಬ್ಬನ್ನ ಹೊರತಾಗಿ!!  ಆದು ನಿನ್ನನ್ನು ನಾನು ತೀವ್ರವಾಗಿ ಮಿಸ್‌ ಮಾಡಿಕೊಂಡ ದಿನ. ನೀನು ಇದ್ಯಾವುದರ ಅರಿವೇ ಇಲ್ಲದೇ ಅದೇಲ್ಲಿ ಪ್ರಶಾಂತವಾಗಿ ಕುಳಿತ್ತಿದ್ದೆಯೋ.  ನಿಧಾನವಾಗಿ  ನನಗೇ ಅರಿವಿಲ್ಲದಂತೆ ನೀನು ಸಂಪೂರ್ಣವಾಗಿ ನನ್ನನ್ನು ಅವರಿಸಿಕೊಂಡಿದ್ದೆ. ನನ್ನ ರೂಮ್‌ಮೇಟ್ ಕಣ್ಣು ತಪ್ಪಿಸಿ ದಿನಕ್ಕೆ  ಹತ್ತು ಬಾರಿಯಾದರೂ ನೀನು ಬರೆದ ಪತ್ರ ಓದುವುದು ನನ್ನ ನಿತ್ಯದ ದಿನಚರಿಯಾಗಿತ್ತು.  ಇಂದಾದರೂ ನೀನು ಕಾಣಸಿಗಬಹುದು ಎಂಬ ಆಸೆಯಿಂದ ದಿನ  ಕ್ಲಾಸಿಗೆ ಕಾಲಿಡುತ್ತಿದ್ದೆ. ನಿನ್ನ ಕುಡಿ ನೋಟಕ್ಕಾಗಿ ಪರಿತಪಿಸುತ್ತಿದ್ದೆ. ಹೆಚ್ಚಿನ ದಿನಗಳು  ನನಗೆ  ಕಾದಿದ್ದು ಬರಿ  ನಿರಾಸೆಯೇ. ಹೊಸ ವರ್ಷದ ದಿನ, ವ್ಯಾಲೆಂಟ್ಸ್ ಡೇ, ಕಾಲೇಜ್ ಡೇ, ನನ್ನ ಹುಟ್ಟಿದ ಹಬ್ಬ ಹೀಗೆ ನೀನಾಗಿ ವಿಶೇಷವಾಗಿ ಕಾದು ನಿರಾಸೆಯಾದ ದಿನಗಳ ಪಟ್ಟಿ ದೊಡ್ಡದು.  ನೀನು ಒಂದೇ ಒಂದು ಬಾರಿ  ಮತ್ತೆ ನನ್ನ ಕಡೆ ತಿರುಗಿ ನೋಡಿದ್ದರೆ, ನಿನಗಾಗಿ ಕಾಯುತ್ತಿದ್ದ ನಾನಲ್ಲಿ  ಸಿಗುತ್ತಿದ್ದೆ.   ಆದರೆ ನೀನು ನಿನ್ನ ಮೌನ ಮುರಿಯಲೇ ಇಲ್ಲ.  ಅಪರೂಪಕ್ಕೆ ಎದುರಿಗೆ ಸಿಕ್ಕಾಗ ಕನಿಷ್ಟ ಒಂದು ನಗುವು ಇಲ್ಲವಾಗಿತ್ತು ನಿನ್ನಿಂದ. ನನ್ನ ಕಣ್ಣುಗಳ ಕಾಯುವಿಕೆ ನಿನಗೆ ಅರ್ಥವೇ ಆಗಲಿಲ್ಲ. ನಾನು ಶಬರಿ ಹಾಗೆ ಕಾದೆ ಕಾದೆ. ಅವಳ ಕಾಯುವಿಕೆಗಾದರೂ  ಫಲ ಸಿಕ್ಕಿತು ಆದರೆ ನನಗಿಲ್ಲ.

ಇದೇಲ್ಲಾ  ಹದಿನಾರರ ಹೊಸ್ತಿಲಿನಲ್ಲಿದ್ದ ಹುಚ್ಚು ಹುಡುಗಿಯ ಬಾಲಿಶ ಭಾವನೆಗಳು ಎಂದು ಈಗ ನಿನಗೆ ಅನಿಸುವುದು ಸಹಜ. ನಿನ್ನ ಬಗ್ಗೆ ನಾನು ಹೀಗೆಲ್ಲಾ ಅಂದು ಕೊಂಡು ಇಂದಿಗೆ ಹತ್ತಾರು ವರ್ಷಗಳೇ ಉರುಳಿವೆ.  ಒಂದೊಂದನ್ನೆ ಹಿಂದಿಕ್ಕಿ ಜೀವನದ ಸಾಕಷ್ಟು ಬದಲಾವಣೆಗಳೊಂದಿಗೆ ನಾನೀಗ ಬೆಳೆದಿದ್ದೇನೆ. ಆದರೆ ನನ್ನಳೊಗಿನ ನಿನ್ನ ಹೊರತಾಗಿ. ನಿನ್ನ ಬಗ್ಗೆಗಿನ ನನ್ನ ಭಾವನೆಗಳಲ್ಲಿ  ಮಾತ್ರ ಯಾವುದೇ ರೀತಿಯ ಬದಲಾವಣೆ ಇಲ್ಲ.  ಇಂದು ನನ್ನೊಳಗೆ  ಬೆಳೆದು ಹೆಮ್ಮರವಾಗಿದೆ. ಅಂದಿನಿಂದ ಇಂದಿನವರೆಗೂ ನಿನ್ನ ಮರೆಯಲಾರದೆ ಒದ್ದಾಡುತ್ತಿರುವೆ. ಆ ದಿನಗಳ ನಿನ್ನ ಮೌನ ಸದಾ ನನ್ನ ಕಾಡುತ್ತಿದೆ. ಇಷ್ಟೇಲ್ಲಾ ಹೇಳಿದ ಮೇಲೂ ನೀನು  ಅರ್ಥಮಾಡಿಕೊಳ್ಳದ್ದಿದ್ದರೆ, ನಾನೇ ಹೇಳುತ್ತಿನಿ ಕೇಳು ಹುಡುಗ ನೀನಂದರೆ ನನಗೆ ಇಷ್ಟ ಕಣೋ  ಅದಕ್ಕಿಂತ ಹೆಚ್ಚಾಗಿ ನಾನು ನಿನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನಿನ್ನವಳಲ್ಲದ ನಿನ್ನವಳು

December 3, 2013

ಪಾಕಶಾಸ್ತ್ರದ ನನ್ನ ಮೊದಲ ಪ್ರಯೋಗ.

          ಮೊದಲೇಲ್ಲಾ ಅಮ್ಮ ಮನೆಯಲ್ಲಿ ಇಲ್ಲ ಅಂದರೆ ಸಾಕು, ತುಂಬಾ ಖುಷಿ. ಆಡುಗೆ ಮನೆಗೆ ನಾನೇ ರಾಣಿ. ಹೊಸರುಚಿಗಳ ನನ್ನ ಪ್ರಯೋಗಗಳಿಗೆ ಅಪ್ಪ, ತಂಗಿ ಮತ್ತು  ತಮ್ಮ ಸೇವಕರು ಹಾಗೇ ಬಲಿಪಶುಗಳು ಕೂಡ.
           
      ನನ್ನ ಪಾಕಶಾಸ್ತ್ರದ ಪ್ರಥಮ ಪ್ರಯೊಗ ಉಪ್ಪಿಟ್ಟಾಗಿತ್ತು. ಬಹುಶಃ ನಾನಾಗ ಎಂಟನೇಯ ಕ್ಲಾಸು ಅನ್ಸುತ್ತೆ. ಆ ದಿನಗಳಲ್ಲಿ  ಮನೆಗೆ ಯಾರಾದರೂ ಧೀಡಿರ್ ಅಂತ ಆಗಮಿಸಿದಾಗ ಉಪ್ಪಿಟ್ಟು ಕಾಮನ್ ತಿಂಡಿಯಾಗಿದ್ದ ಕಾರಣದಿಂದ, ನನಗೆ ಉಪ್ಪಿಟ್ಟು ಮಾಡೋದು ಅಂದರೆ ತುಂಬಾ ಸುಲಭ ಅನ್ನೋ ಭಾವನೆ ಆಗಾಲೇ ಬೇರೂರಿಬಿಟ್ಟಿತ್ತು. ಅಮ್ಮನ ಸಾಲು ಡಬ್ಬಿಗಳಲ್ಲಿ ರವೆಗಾಗಿ ತಡಕಾಡಿದಾಗ  2-3   ಬಗೆಯ ರವೆಗಳು ದೊರೆತಿದ್ದು, ಆರಂಭದಲ್ಲೇ ಕನ್‌ಫ್ಯೂಶನ್‌ಗೆ ಕಾರಣ ಆಯಿತು. ಆಡುಗೆಯ ಬಗ್ಗೆಯ ಅಪ್ಪನ ಚೂರು-ಪಾರು ಜ್ಞಾನವೇನು ಪ್ರಯೋಜನೆಕ್ಕೆ ಬರಲಿಲ್ಲ. ಅಂತೂ-ಇಂತೂ ಒಂದನ್ನು ಆರಿಸಿ ಕೊಂಡೆ. ದೊಡ್ಡ ಬಾಣಲೆಯಲ್ಲಿ ಧಾರಳವಾಗಿ ತುಪ್ಪ ಹಾಕಿ ಒಗ್ಗರಣೆ ಮಾಡಿದೆ. ರವೆಗೆ ನೀರಿನ ಆಳತೆಯ ಪ್ರಮಾಣ ತಿಳಿಯದೆ, ಯಾವುದೇ ರೀತಿಯ ಕಂಜೂಸ್‌ತನ ಮಾಡದೆ ಬಾಣಲೆ ತುಂಬಾ ನೀರು ತುಂಬಿಸಿದೆ. ಕುದಿ ಬಂದ ನಂತರ ಹುರಿದ ರವೆ ಹಾಕಿದೆ. ಎಲ್ಲಾ  15-20 ನಿಮಿಷಗಳಲ್ಲಿ ಮಾಡೋ ಉಪ್ಪಿಟ್ಟು ಮುಕ್ಕಾಲು ಘಂಟೆಯಾದರೂ ಗಟ್ಟಿಯಾಗುವ ಯಾವುದೇ ಲಕ್ಷಣ ಕಾಣದಿದ್ದಾಗ, ಉಪ್ಪಿಟ್ಟಿನ ಪ್ರಯೋಗಕ್ಕೆ ಅಂತ್ಯ ಹಾಡಿದೆ. ಸುಮಾರು ಒಂದುವರೆ ಘಂಟೆಗಳ ಕಠಿಣ ಪರಿಶ್ರಮದ ನಂತರ ನೀರಾದ ಉಪ್ಪಿಟ್ಟು ತಯಾರಾಗಿತ್ತು. ಉಪ್ಪಿಟ್ಟಿಗಿಂತ ಖಾರದ ಪಾಯಸ ಎನ್ನುವುದು ಹೆಚ್ಚು ಸೂಕ್ತ. ಎಲ್ಲರೂ ಸೂಪ್‌ನಂತೆ ಬೌಲ್‌ನಲ್ಲಿ ಕುಡಿಯಬೇಕಾಯಿತು. ರುಚಿಕರವಾಗಿತ್ತು ಎನ್ನುವುದು ಸಮಾಧಾನದ ಸಂಗತಿ.

ಈ ನನ್ನ ಪಾಕಶಾಸ್ತ್ರದ ಮೊಟ್ಟಮೊದಲ ಪ್ರಯೋಗ,  ಇಷ್ಟು ವರ್ಷಗಳ ನಂತರವೂ ಪ್ರತಿಬಾರಿ ಉಪ್ಪಿಟ್ಟು ಮಾಡುವಾಗ ನೆನಪಾಗುತ್ತದೆ.



November 16, 2013

ಹುಚ್ಚು ಕೋಡಿ ಮನಸ್ಸು.


ಹುಚ್ಚು ಕೋಡಿ ಮನಸ್ಸು ಅದು ಹದಿನಾರರ ವಯಸ್ಸು

ಆದ್ರೆ ಮನಸ್ಸು ಮೂವತ್ತರ ನಂತರವೂ ಹುಚ್ಚು ಕೋಡಿಯಾಗತ್ತೆ ! ಅಂತ ಅವನು ಜೀವನದೊಳಗೆ ಕಾಲಿಟ್ಟ ಮೇಲೆ ಗೊತ್ತಾಗಿದ್ದು. ಬರೆಯೋಕ್ಕೆ ಹೋದ್ರೆ ಈಗ ಹುಟ್ಟುವುದು ಮಾತ್ರ ಕವನ ಅಲ್ಲ, ಇನ್ನೊಂದು  ಮಹಾಭಾರತ.

ಮನಸ್ಸೇ ಹೀಗಲ್ವಾ? ಇರುವುದೇಲ್ಲಾ ಬಿಟ್ಟು ಇಲ್ಲದೇ ಇರುವುದನ್ನೇ ಬಯಸುವುದು. ಹದಿನಾರು ಮೂವತ್ತಾರು ಎಲ್ಲಾ ಬರೀ ಲೆಕ್ಕಕ್ಕೆ ಮಾತ್ರ.
ಬುದ್ಧಿ ಮನಸ್ಸು ಎರಡೂ ನನ್ನದೇ ಆದ್ರೂ ಅವನ ವಿಷಯದಲ್ಲಿ ಮಾತ್ರ  ಒಂದಕ್ಕೊಂದು ಅಸಂಬದ್ಧ, ತದ್ವಿರುದ್ಧ. ಒಂದು ನೀರಿಗೆ ಇಳಿದರೆ ಇನ್ನೊಂದು ಏರಿ ಕಡೆ. ಬುದ್ಧಿ ಅವನಿಂದ ದೂರ ಇರು, ಅವನು ಬೇಡ ಎಂದಷ್ಟು  ಮನಸ್ಸು ಅವನ ಕಡೆನೇ ವಾಲುತ್ತೆ, ಪದೇ ಪದೇ ಸೋಲುತ್ತೆ. ಮನಸ್ಸು ಅವನೇ ಬೇಕು ಅಂತ ಹಟ ಹಿಡಿಯುತ್ತೆ ಪ್ರತಿ ಬಾರಿ ಅವನ ಜೊತೆ ಗಂಟೇಗಟ್ಟಲೆ ಮಾತಾನಾಡಿ ಮುಗಿಸಿ ನಂತರವೂ ಏನೋ ಅತೃಪ್ತಿ. ಮತ್ತೆ ಮತ್ತೆ ಅವನ ದ್ವನಿ ಕೇಳಲು ಮನ ಹಾತೊರೆಯುತ್ತದೆ. ಅವನನೊಂದಿಗೆ ಕಾಲ ಕಳೆಯುವವರ  ಮೇಲೆಲ್ಲಾ ಏನೋ ಒಂಥರಾ ಜಲಸ್. ನನಗಿಲ್ಲದ ಅವರ ಭ್ಯಾಗಕ್ಕೆ ಕರಬುತ್ತೇನೆ. ಮೂರು ಹೊತ್ತು ಅವನದೇ ಧ್ಯಾನದಲ್ಲಿ  ಒಂಟಿತನವೂ ಪ್ರಿಯ. ಮನಸ್ಸು ಕೈಗೆ ಸಿಗದ ಗಾಳಿಪಟ. ಎಲ್ಲಾ ಅಲ್ಲೋಲ ಕಲ್ಲೋಲ.
ಅವನೊಂದು ತೀರ ನಾನೊಂದು ತೀರ. ಸಮಾನಂತರ ದಾರಿಯ ಪಯಣಿಗರು ನಾವಿಬ್ಬರು. ಎಂದಿಗೂ  ಅವನೊಂದಿಗೆ ಹೆಜ್ಜೆ ಹಾಕುವ ಸಾಧ್ಯತೆಗಳಿಲ್ಲ.  ಆಗ ಬುದ್ಧಿ ಕೆಲಸ ಮಾಡಲು ಶುರು ಮಾಡುತ್ತೆ. ಇನ್ಯಾವತ್ತೂ  ಅವನ ಜೊತೆ ಮಾತಾಡಲ್ಲ ಅಂತ ಶಪಥನೂ ಮಾಡುತ್ತೆ. ಇವೆಲ್ಲಾ ಬರೀ ಬುದ್ದಿಯ ಬುದ್ದಿ ಮಾತುಗಳಷ್ಟೇ . ಆಗಲೇ ಹುಟ್ಟುಕೊಳ್ಳೊದು ಅವನನ್ನ ಕಳೆದು ಕೊಳ್ಳುವ ಭಯ , ಅವನು ನನ್ನ ಮರತೇ ಬಿಟ್ಟರೆ ಎನ್ನುವ ಅಂತಕ. ನನ್ನ ಜಾಗ ಇನ್ಯಾರೋ  ಆಕ್ರಮಿಸಿಕೊಂಡರೆ ಅನ್ನೊ ಇನ್‌ಸೆಕ್ಯುರಿಟಿ ಫಿಲಿಂಗ್. ಎಲ್ಲಾ ಸೇರಿ ಒಟ್ಟಾರೆ ಮತ್ತೆ ಬುದ್ಧಿ ಮೇಲೆ ಮನಸ್ಸಿನ ಸವಾರಿ ಶುರುವಾಗುತ್ತೆ.   ಬುದ್ಧಿ ಮಾತು ಮೀರಿ ಭಾವನೆಗಳು ಅಲೆ ಅಲೆಗಳಾಗಿ ಏಳುತ್ತವೆ. ದಿನ ದಿನದಿಂದ ಅವನ ಹುಚ್ಚು ಹೆಚ್ಚುತ್ತೆ . ಮನಸ್ಸು ಸದಾ ಅವನನ್ನು ಬಯಸುತ್ತದೆ. ಮನಸ್ಸು ಅವನಿಗಾಗಿ ಚಡಪಡಿಸುತ್ತದೆ. ಮುದ ನೀಡುವ ಅವನ ಪ್ರೀತಿ -ಸಾಂಗತ್ಯದ ಕಡೆ ಮತ್ತೆ ಮನಸ್ಸು ಜಾರುತ್ತೆ.

 ನನ್ನ ಕನಸುಗಳಿಗೆ  ಬಣ್ಣ  ತುಂಬಿದವನು ಅವನು. ಅವನ ಪ್ರೀತಿ ಎಷ್ಟು ಸಹ್ಯವೋ, ಅವನ ನಿರ್ಲಕ್ಯ ಅದಕ್ಕಿಂತ ಹೆಚ್ಚು ರೋಷ ಹುಟ್ಟಿಸುತ್ತದೆ. ಅವನ ಹತ್ತು ನಿಮಿಷಗಳು ಗಂಟೆಗಳಾದಾಗ ಕಾಯುವಿಕೆ ಅಸಹನೆ ಹುಟಿಸುತ್ತದೆ. ಅಯ್ಯೋ ಸಾರಿ ಮರತೆ ಹೋದೆ ಕಣೇ, ಬ್ಯುಸಿ ಇದ್ದೆ , ತುಂಬಾ ಟೆನ್ಶನ್ ಕಣೇ ಎನ್ನುವ  ಅವನ ಉತ್ತರಗಳು ಸಮಾಧಾನಿಸಲು ಸೋಲುತ್ತವೆ.  ನನಗೆ ಅವನಷ್ಟೇ ಪ್ರಪಂಚ ಆದರೆ ಅವನಿಗೂ ಹಾಗಿರಬೇಕೆಂದೇನೂ ಇಲ್ಲವಲ್ಲ. ನಿಧಾನವಾಗಿ ಅವನಿಗೆ ನಾನು ಅನಿವಾರ್ಯವಲ್ಲ ಎನ್ನುವ ಅನುಮಾನ ಹುಟ್ಟಿಸುತ್ತದೆ.  ಯಾವುದನ್ನಾದರೂ ಸಹಿಸಬಹುದು ಆದರೆ ಪ್ರೀತಿಸಿದವರಿಂದ ನಿರ್ಲಕ್ಷ್ಯ ಮಾತ್ರ ಅಸಾಧ್ಯ. ಮನಸ್ಸು ಕಲ್ಲಾಗುತ್ತದೆ. ನನ್ನ ಪಾಡಿಗೆ ನಾನಿದ್ದು ಬಿಡಲು ನಿರ್ಧರಿಸುತ್ತೇನೆ.

ಎಲ್ಲಾ ಸುಸೂತ್ರವಾಗಿ, ಹಳಿ ತಪ್ಪಿದ ಹುಚ್ಚು ಕೋಡಿ ಮನಸ್ಸು ಪುನಃ ಟ್ರ್ಯಾಕ್‌ಗೆ ಬರುತ್ತಿದ್ದೆ ಅಂತ ಅನಿಸುವಾಗಲೇ ಮತ್ತೆ ಅವನ ರಿಎಂಟ್ರಿ. ಎಲ್ಲಾ ಶಪಥ, ಕಠೋರ ನಿರ್ಧಾರಗಳನ್ನು ಧೂಳಿಪಟ ಮಾಡಿಬಿಡುತ್ತೆ. ಅವನು  ಮತ್ತೆ  ಹೊಸ ಚಿತ್ತಾರ ಮೂಡಿಸಲು ತೊಡಗುತ್ತಾನೆ.  ಅದಕ್ಕೆ  ಚೆಂದದ ಬಣ್ಣಗಳ ಆಯ್ಕೆಯಲ್ಲಿ ನಾನು ಮುಳುಗಿರುವಾಗಲೇಅವನು ಬಿಡಿಸುತ್ತಿರುವ ಚಿತ್ತಾರಗಳನ್ನೇ ಮತ್ತೆ ಮರೆಯುತ್ತಾನೆ. ಎಲ್ಲಾ ಮತ್ತೆ ಮೊದಲಿನಂತ್ತೆ ಅರ್ಧಬರೆದು ಬಿಟ್ಟ, ಅರ್ಥ ಕಳೆದು ಕೊಂಡ ಚಿತ್ತಾರ, ಕವನ, ಕನಸುಗಳು ಮತ್ತು ನಾನು.

ಅವನ ವಿಷಯದಲ್ಲಿ ವಯಸ್ಸು ಹದಿನ್ನಾರದರೂ ಮೂವತ್ತಾರಾದರೂ ಹುಚ್ಚು ಕೋಡಿಯೇ. ಆದರೆ  ಅದಕ್ಕಾಗುವ ಗಾಯದಲ್ಲಿ ಮಾತ್ರ ಅಜಗಜಾಂತರ. ಹದಿನಾರರ ಗಾಯ ಮಾಗುವುದೂ ಬೇಗ.  ಸಾಲುಗಟ್ಟಿ ನಿಂತವರಲೊಬ್ಬ  ಗಾಯಕ್ಕೆ ಮುಲಾಮಾಗಿ ಕಲೆ ಇಲ್ಲದೆ ಅಳಿಸಿ ಬಿಡುತ್ತಾನೆ. ಆದರೆ ಈಗ ಮೇಲಿಂದ ಮೇಲಿಂದ ಅದೇ ಗಾಯಕ್ಕೆ ಪೆಟ್ಟು ಜೊತೆಗೆ ಸದಾ ಕಾಡುವ ಎಂದಿಗೂ  ಮಾಸದ ಕಲೆ.   ಗಾಯ ಮೇಲ್ನೋಟಕ್ಕೆ ವಾಸಿಯಾದಂತೆ ಕಂಡರೂ ಮುಲಾಮಿಲ್ಲದ ಗಾಯ ಒಳಗೆ ಹಸಿಯಾಗೇ ಉಳಿದೇ ಬಿಡುತ್ತದೆ.


ಮರೆತೆನೆದರೂ ಅವನನ್ನು ಮರೆಯಲಾಗದೆ ಒದ್ದಾಡುವ…. ಮತ್ತದೇ ನಾನು.

October 31, 2013

ದೀಪಾವಳಿ ಗಿಫ್ಟ್

ಮೈತೊಳೆಯಲು ಕೊಟ್ಟಿಗೆಯಿಂದ   ಅಂಗಳಕ್ಕೆ ಶಿಫ್ಟ್ ಆಗಿ, ಚಪ್ಪರದ ಕಂಬದ ಸುತ್ತದ ಗಾಬರಿಯಿಂದ ಗಿರಕ್ಕಿ ಹೊಡೆಯುತ್ತ ಒಂದರ ಹಿಂದೊಂತೆ ಅಂಬಾ ಎಂದು ಅರುಚುವ ಜಾನುವಾರುಗಳು.  ರಾತ್ರಿ ಲೇಟಾಗಿ ಮನೆಗೆ ಬಂದ ಅಪ್ಪ, ಮನೆ ಕಡೆ ಮುಖ ಹಾಕದ  ಕೆಲಸದಾಳು ಶೇಷ, ಇನ್ನೂ ಮುರುಟಿ ಮಲಗಿರುವ ಮಕ್ಕಳು, ಅಲ್ಲಿ ಅಲ್ಲಿ ಗಲೀಜು ಮಾಡಿದ ನಾಯಿ ಬೆಕ್ಕು ಒಂದನ್ನೂ ಬಿಡದೆ  ಬೆಳಿಗ್ಗೆಯೇ ಜನ್ಮ ಜಾಲಾಡುವ ಅಮ್ಮನ ಸುಪ್ರಭಾತ. ಮನೆ ತುಂಬಾ ಬಚ್ಚಲು, ಅಡಿಗೆ ಒಲೆಯ ಹೊಗೆ,  ಬೇಯುತ್ತಿರುವ ಸೌತೆಕಾಯಿ ಸಿಹಿ ಕಡುಬಿನ ತೆಳು ಪರಿಮಳದ ಜೊತೆ ಗೋ ಮಾಲೆಯ ಚೆಂಡು ಹೂ, ಪಚ್ಚೆ ತೆನೆ , ಕಿತ್ತಳೆ ಸೊಪ್ಪುಗಳ ಗಮ ತುಂಬಿದೆ ಅಂದರೆ ಅವತ್ತು ಖಂಡಿತಾ ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬ.ಇಡೀ ಹಬ್ಬನೇ ತಲೆ ಮೇಲೆ ಹೊತ್ತ ಕೊಂಡ ಅಮ್ಮ, ಯಾವುದಕ್ಕೂ ತಲೆ ಹಾಕದೆ ತನ್ನಷ್ಟಕ್ಕೆ ತಾನು ಗೋ ಮಾಲೆ ಕಟ್ಟುತ್ತ ಕುಳಿತ್ತಿರುವ ಅಪ್ಪ. ಏನು ಕೆಲಸ ಮಾಡದೆ ಗಡಿಬಿಡಿಯಲ್ಲಿ ಆಕಡೆಯಿಂದ ಈ ಕಡೆಗೆ ಓಡಾಡುವ ನಾವುಗಳು. ಕಬ್ಬಿಣ್ಣದ ಬಕೆಟ್ ಕವಚಿ ಅದರೊಳಗೆ  ಬಾಂಬ್ ಇಟ್ಟು ಸಿಡಿಸಿದ್ದು, ಸಂಜೆ ದೀಪ್‌ದೀಪೋಳ್ಳಿಗೆ ಕೂಗುತ್ತ ದೀಪ ಹಚ್ಚುತ್ತಿದ್ದಿದ್ದು, ರಾತ್ರಿ ಅಂಟಿಕೆ ಪಿಂಟಿಕೆಯ ಸುವಾಲೋಸುವಾಲು. ದೀಪಾವಳಿ ಅಂತ ನೆನೆಪಿಸುಕೊಳ್ಳುತ್ತಿದ್ದ ಹಾಗೆ ಇವುಗಳ ಸ್ಲೈಡ್ ಶೋ ಶುರುವಾಗಿ ಬಿಡುತ್ತದೆ. ಅಮ್ಮ ಆಚರಿಸುವ ಎರಡೇ ಹಬ್ಬಗಳಲ್ಲಿ ಇದು ಒಂದು.  ಹಾಗಾಗಿ ಇಂದಿಗೂ  ಈ ಹಬ್ಬಕ್ಕೆ ಅಮ್ಮನ ಮನೆಗೆ ಹೋಗುವುದನ್ನು ಮಿಸ್ ಮಾಡೋಲ್ಲ

ಇವೇಲ್ಲಾದರ  ಹೊರತಾಗಿ  ದೀಪಾವಳಿ ನನಗೆ  ಅತಿ ವೀಶೇಷ. ನಾನು ಮೊದಲು ಬರೆದಿದ್ದು ಈ ಹಬ್ಬದ ಅಂಟಿಕೆ-ಪಿಂಟಿಕೆಯ ಬಗ್ಗೆ. ಬರೆದಿದ್ದು ಆಯಿತು ಒಂದು ಪ್ರತಿಷ್ಟಿತ ಪತ್ರಿಕೆಯ ಭಾನುವಾರದ ಪುರವಾಣಿಗೆ ಕಳುಹಿಸಿದ್ದು ಆಯಿತು. ದೊಡ್ಡ ಪತ್ರಿಕೆಯಾದ ಕಾರಣ ಪುರವಾಣಿಯಲ್ಲಿ ಪ್ರಕಟಿವಾಗುವ ವೀಶೇಷತೆಗಳ ಬಗ್ಗೆ ಮುಂಚಿನ ದಿನದ ಪತ್ರಿಕೆಯಲ್ಲಿ ಪ್ರಕಟಿಸುವ ವಾಡಿಕೆ. ಅದರಲ್ಲಿ ಅಂಟಿಕೆ-ಪಿಂಟಿಕೆ ಎಂಬ ಲೇಖನವು ಒಳಗೊಂಡಿತ್ತು. ನಾನೊಂತ್ತು ಉಬ್ಬಿ ಹೋದೆ ಮೊದಲ ಪ್ರಯತ್ನ ಯಶಸ್ಸಿಗೆ. ಹಳೆ ಸ್ನೇಹಿತರು, ಅವರು ಇವರು ಕಂಡ ಕಂಡವರಿಗೆಲ್ಲಾ  ಫೋನ್ ಮಾಡಿ, ಕಂಡ ಕಂಡಲ್ಲಿ ಮರು ದಿನ ಪೇಪರ್ ಓದಲು ಹೇಳಿದ್ದೇ ಹೇಳಿದ್ದು. ಆದ್ರೆ ಮರು ದಿನ ಪೇಪರ್ ನೋಡಿದ್ದಾಗಲೇ ತಿಳಿದಿದ್ದು ಬೇರೊಬ್ಬರು ಬರೆದ ಅದೇ ವಿಷಯದ ಲೇಖನ ಅಂತ. ಇಡೀ ಹಾಸ್ಟೇಲ್ ಪೂರ್ತಿ ಅದೇ ವಿಷಯ. ನಾನು ನಿರಾಶೆಯಿಂದ ರೂಮ್ ಸೇರಿದ್ದೆ, ಅತ್ತು ಅತ್ತು ನನ್ನ ಕಣ್ಣುಗಳು ಊದಿ ಕೊಂಡಿದ್ದವು. ಹಿಂದಿನ ದಿನವೀಡಿ ನನ್ನ ಸಂತೋಷದಲ್ಲಿ ಪಾಲ್ಗೊಂಡ, ನನ್ನ ಬರೆಯಲು ಹುರುಂದುಬಿಸಿದ ಭಾಗ್ಯ ಮತ್ತು ಸ್ವಾಮಿ   ಬೆಳಿಗ್ಗೆಯೇ ನನ್ನ ಕನ್ಸೋಲ್ ಮಾಡಲು ಹಾಸ್ಟೇಲ್‌ಗೆ ಓಡಿ ಬಂದಿದ್ದರು.  ಇಡೀ ದಿನ ನನ್ನ ಜೊತೆ ಕಾಲ ಕಳೆದರು. ಸ್ವಾಮಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಅದೇ ಲೇಖನವನ್ನು ಪ್ರಕಟಿಸಿದ್ದು  ನಾನು ಕಾಲೇಜಿನಲ್ಲಿ ಸ್ಪಲ್ಪ ಫೇಮಸ್ ಆಗಿದ್ದು ಎಲ್ಲಾ ಅಮೇಲೆ ನೆಡೆದ  ಹಬ್ಬದ ಹ್ಯಾಪಿ ಪಾರ್ಟ್. 

ಹೀಗೆ   ದೀಪಾವಳಿ  ಸಾಕಷ್ಟು ಸುಂದರ ನೆನಪುಗಳ ಜೊತೆಗೆ ನಿಜವಾದ ಗೆಳೆಯರನ್ನು ಸಹ ನನಗೆ ಕೊಟ್ಟಿದೆ.

August 3, 2013

ಮರೆತ ಹಾದಿ!


ಅವಳು ತುಂಬಾ ಗಂಬೀರೆ, ಪ್ರಬುದ್ದೆ ಎಂದೇ ಚಿರಪರಿಚಿತೆ.  ಹತ್ತು ಬಾರಿ ಯೋಚಿಸದೆ ಹೆಜ್ಜೆ ಮುಂದಿಡುವ ಜಾಯಮಾನದವಳಲ್ಲ. ಜೀವನವನ್ನು ಅತ್ಯಂತ ಜಾಗೂಕರತೆಯಿಂದ ಕಟ್ಟಿಕೊಂಡವಳು. ಅಂಥವಳು ಅವನ ವಿಷಯದಲ್ಲಿ ಎಡವಿದ್ದಳು.

ಅವರಿಬ್ಬರು ಒಂದೇ ಹಾದಿಯ ಪಯಣಿಗರೇನು ಅಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಮೊದಲ ನೋಟದಲ್ಲೇ ಪ್ರೀತಿ ಪ್ರೇಮ ಆಕರ್ಷಣೆಗೆ ಬಲಿಯಾಗುವ ಹದಿ ವಯಸ್ಸನ್ನೆಲ್ಲಾ ಕಳೆದವರಿಬ್ಬರು. ಯಾವುದೋ ಒಂದು ತಿರುವಿನಲ್ಲಿ ಭೇಟಿಯಾಗಿದ್ದರು.  ಅವನು ಅವಳ ಬೆಂಬಿಡದೆ ಗೋಗರೆದು ಹಿಂದೆ ಮುಂದೆ ಯೋಚಿಸದೆ ತನ್ನ ಒಲವ ತೊಡಿ ಕೊಂಡಿದ್ದ. ಅವನಿಂದ ದೂರವಾಗುವ ಗಟ್ಟಿ ಮನಸ್ಸು ಮಾಡಿದಾಗಲೇಲ್ಲಾ, ಬಾರಿ ಬಾರಿ ಅವನಿಗೆ ಸೋತಿದ್ದಳು. ಬೆಟ್ಟದಷ್ಟು ಪ್ರೀತಿಯನ್ನು ಅವನು ಅವಳ ಹಾದಿಗೆ ಅಡ್ಡವಾಗಿ ಹರವಿದ್ದ. ಅವಳು ತನ್ನ ದಾರಿ ಮರೆತು ಅವನ ಪ್ರೀತಿಯ ಬೆಟ್ಟವನ್ನು ದಾಟಲಾರದೆ ಅಲ್ಲೇ ನಿಂತೇ ಬಿಟ್ಟಳು. ಅವನು ಅವಳು ಕರೆದಾಗಲೇಲ್ಲಾ ಓಗೋಡುತ್ತಿದ್ದ. ಅವಳನ್ನು ಅವನ ಒಲವಿನ ಹೊಳೆಯಲ್ಲಿ ತೇಲಿಸಿದ್ದ. ಅವನ ದಿನದ ಸಮಯ ಪೂರ್ತಿ ಅವಳಿಗೆ ಮಾತ್ರ  ಸೀಮಿತ ಎನ್ನುವಂತೆ ಸದಾ ಜೊತೆಯಲ್ಲಿರುತ್ತಿದ್ದ. ಅವನಿಂದ ಗುಡ್ ಮಾರ್ನಿಂಗ್, ಗುಡ್ ನೈಟ್‌ಗಳಿಲ್ಲದೇ ಅವಳ ಜೀವನದಲ್ಲಿ ಬೆಳಗು ರಾತ್ರಿಗಳೇ ಇಲ್ಲವೇನೋ ಅನ್ನುವಷ್ಟು ಅವಳು ಅವನಿಗೆ ಒಗ್ಗಿ ಹೋಗ್ಗಿದ್ದಳು.  ಅವರಿಬ್ಬರು ಜೊತೆಗೂಡಿ ಕೇಳಿದ ಹಾಡುಗಳು, ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮುಂದಿನ ಜನ್ಮಕ್ಕಾಗುವಷ್ಟು ಕನಸು ಕಂಡಿದ್ದರು. ಮೊದಲಿನಿಂದಲೂ ಅಂಕೆ ಸಂಖ್ಯೆಗಳ ವ್ಯವಹಾರ ಅವಳಿಗೆ ಆಗಿ ಬಾರದು. ಆದರೆ ಜೀವನದಲ್ಲಿ ಅವನು ಕಾಲಿಟ್ಟ ಘಳಿಗೆಯಿಂದ  ನಿಮಿಷ, ಗಂಟೆ, ದಿನಗಳ ಲೆಕ್ಕದಲ್ಲಿ ಪಳಗಿದ್ದಳು. ಆರು ಅಂಕೆಯ ಒಂದು ಫೋನ್ ನಂಬರ್‌ಗೆ ಮೂರು ಸಾರಿ ಪುಸ್ತಕ ನೋಡುವ ಅವಳು ನಿದ್ದೆಗಣ್ಣಿಲ್ಲಿ ಕೇಳಿದರೂ ಹತ್ತು ಅಂಕೆಗಳ ಅವನ ಎರಡೂ ಮೊಬೈಲ್ ಸಂಖ್ಯೆಗಳನ್ನು ಕನವರಿಸುವಷ್ಟು ಅವಳು ಅವನಿಂದ ಬದಲಾಗಿದ್ದಳು. ಅವನಿಂದ ಹೆಚ್ಚು ಹೆಚ್ಚು ಪ್ರೀತಿ ಬಯಸ ತೊಡಗಿದ್ದಳು. ದಿನದಿಂದ ದಿನಕ್ಕೆ ಅವನೆಡೆಗೆ ಅವಳು ಜಾಸ್ತಿ ಪೊಸೆಸ್ಸಿವ್  ಆದಂತೆಲ್ಲಾ ಅವನು ಅವಳ ನಿರಿಕ್ಷೆಯ ಮಟ್ಟ ತಲುಪಲಾರದೆ ಸೋತ. ಅವಳು ಅವನ ಕನವರಿಕೆಯಲ್ಲಿ ಸೋರಗ ತೊಡಗಿದ್ದಳು. ಅವನ ಹೊರತಾಗಿ ಅವಳು  ಬದುಕಬಲ್ಲಳು, ಆದರೆ ಅವನ ಜೊತೆ ಜೊತೆಯಲ್ಲಿ ಬದುಕುವುದು ಅವಳಿಗೆ ಪ್ರಿಯವಾದದ್ದು.
ಅವರಿಬ್ಬರ ಸಂಬಂಧ ಮುಷ್ಟಿಯಲ್ಲಿನ ಮರಳಿನ ಹಾಗೆ. ಮುಷ್ಟಿ ಕಟ್ಟಿದರೂ, ಬಿಟ್ಟರೂ ಕೈಯಿಂದ ಜಾರಿ ಹೋಗುತ್ತದೆ ಎಂಬುದು ಅರಿವಾಗುವ ವೇಳೆಗಾಗಲೇ ಅವರಿಬ್ಬರ ಮಧ್ಯೆ ಮಾತಿಗೆ ಬರಗಾಲ ಆರಂಭವಾಗಿತ್ತು. ಜೀವನದಲ್ಲಿ ಒಟ್ಟಿಗೆ ಸಾಗುವ ಕನಸು ತುಂಬಿ ಆತ ಭವಿಷ್ಯದ ಕಡೆ ಮುಖ ತಿರುಗಿಸಿದ್ದ. ಅವನು ಕಟ್ಟಿ ಕೊಂಡ ಗುರಿ ಸಾಧಿಸುವ ಛಲದಲ್ಲಿ ಒಟ್ಟಿಗೆ ಕಂಡ ಕನಸಿಗೆ ಸಮಯವಿಲ್ಲದೆ ಮಸುಕಾಗ ತೊಡಗಿತ್ತು. ನೀರಿನಿಂದ ಹೊರಬಂದ ಮೀನಿನಂತೆ ಚಡಪಡಿಸಿದಳು.   ಮೊದಮೊದಲು ಮುನಿದಳು, ಜಗಳವಾಡಿದಳು, ಅತ್ತಳು, ಕೊನೆಯಲ್ಲಿ ಮೌನವಾದಳು. ನಿಧಾನವಾಗಿ ಅವಳಿಗೆ ಅರಿವಾಗ ತೊಡಗಿತ್ತು  ಅವನ ಹಾದಿಯೇ ಬೇರೆ, ಅವಳದೇ ಬೇರೆಯೆಂದು. ಆದರೂ ದುಂಡಗಿರೊ ಭೂಮಿಯ ಯಾವುದೋ ತಿರುವಿನಲ್ಲಿ ಮತ್ತೆ ಅವನು ಸಿಗಬಹುದು ಎಂಬ ಆಸೆ ಅವಳಲ್ಲಿ. ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮತ್ತೆ ಮತ್ತೆ  ತಿರುಗಿ ನೋಡುತ್ತಾ, ಅವನ ನೆನಪುಗಳೊಂದಿಗೆ  ಮರೆತ ಅವಳ ಹಾದಿಯಲ್ಲಿ ಪುನಃ  ಹೆಜ್ಜೆ ಹಾಕಲು ನಿರ್ಧರಿಸಿದಳು.

ಈಗ ಅವಳು ಮತ್ತೆ ಲೆಕ್ಕ ತಪ್ಪುತ್ತಿದ್ದಾಳೆ. ಎಷ್ಟು ಯೋಚಿಸಿದರೂ ಅವನ ಮೊಬೈಲ್ ಫೋನಿನ ಒಂಬತ್ತೇ ಸಂಖ್ಯೆಗಳು ಅವಳಿಗೆ ನೆನಪಾಗುವುದು.

July 19, 2013

ಸುಮ್ಮನೆ ಹಾಗೇ ಇಷ್ಟವಾದವರು.



 ದ್ವೇಷಿಸಲು ಕಾರಣ ಬೇಕು. ಆದೇ ಇಷ್ಟವಾಗಲೂ, ಪ್ರೀತಿ ಹುಟ್ಟಲು ಒಂದೇ ಒಂದು ಕಾರಣ ಕೂಡ ಬೇಡ.
ಕೆಲವರು ಹಾಗೇ ಸುಮ್ಮನೆ ಇಷ್ಟವಾಗಿ, ಅವರ ಮೇಲೆ ಪ್ರೀತಿ ಎಲ್ಲಿಂದಲೋ ಪ್ರೀತಿ ಹುಟ್ಟಿಕೊಂಡು ಬಿಡುತ್ತದೆ. ಕನಿಷ್ಟ ಅವರಿಂದ ಮರು ಪ್ರೀತಿಯನ್ನು ಅಪಕ್ಷೇಸಿದಷ್ಟೂ ಸುಮ್ಮನೆ ಇಷ್ಟವಾಗಿ ಬಿಡುತ್ತಾರೆ. ಅವರೇಲ್ಲಾ ತುಂಬಾ ಹತ್ತಿರದವರಾಗಿರ ಬೇಕೆಂದೂ ಇಲ್ಲ. ಅವರಲ್ಲಿ ಕೆಲವರನ್ನೂ ಒಂದು ಸಾರಿ ಭೇಟಿ ದೂರದ ಮಾತು, ನೇರವಾಗಿ ಮುಖ ಕೂಡ ನೋಡಿರುವುದಿಲ್ಲ. ಆದರೂ ಬದುಕಿಗೆ ಎಷ್ಟೊಂದು ಸಂತೋಷ ನೀಡಬಲ್ಲರು. ನನ್ನ ಜೀವನದ ಖಷಿ ಕ್ಷಣಗಳಿಗೆ ಅವರೆಲ್ಲಾ ಎಷ್ಟು ಕಾರಣರೋ ಅಷ್ಟೇ ಪಾಲುಗಾರರು ಕೂಡ.
ನಾನು ಪಿಯುಸಿ ಓದುವಾಗ ಹಾಸ್ಟೇಲ್‌ಮೇಟ್ ಆಗಿದ್ದ ಸುಂದರ ನಗುವಿನ ತಾನು ಹೋದಲ್ಲೇಲ್ಲಾ ಖುಷಿ ಹಂಚುವ ಲೈವ್ಲಿ ಹುಡುಗಿ. ನೋಡಿದ ಮೊದಲ ಕ್ಷಣದಿಂದಲೇ ಹಾಗೆ ಸುಮ್ಮನೆ ಇಷ್ಟವಾದವಳು.  ಅವಳಿಂದ ಒಂದೇ ಒಂದು ಪದದ ಮೆಸೇಜ್ ಸಹ ನನ್ನನ್ನು ದಿನ ಪೂರ್ತಿ ಖುಷಿಯಾಗಿಡಬಲ್ಲದು. ಇನ್ನೂ ನನ್ನ ಫ್ರೆಂಡ್ ಹೆಂಡತಿ  ನಮ್ಮಿಬ್ಬರ ನಡುವೆ ಫ್ರೆಂಡ್ಸ್, ಅಭಿರುಚಿ, ಆಸಕ್ತಿ ಯಾವುದೊಂದು ಸಹ ಕಾಮನ್ ಅಲ್ಲ. ಆದರೂ ಅವರು ಸುಮ್ಸುಮ್ಮನೆ ಇಷ್ಟವಾಗಿ ಬಿಟ್ಟಿದ್ದಾರೆ.
ನನ್ನ ಗಂಡನ   ದೂರದ ಸಂಬಂಧಿ ಹುಡುಗ. ವರ್ಷಕ್ಕೊಮ್ಮೆ ಅಲ್ಲಿ ಇಲ್ಲಿ ಫಂಕ್ಷನ್‌ಗಳಲ್ಲಿ ಐದೋಹತ್ತು ನಿಮಿಷ ಮಾತಿಗೆ ಸಿಗುವ ಇವನು, ಮುಂದಿನ ಭೇಟಿಗಾಗುವಷ್ಟು ಪ್ರೀತಿ ಹಂಚಿ ಮುಂದಿನ ಭೇಟಿಗೆ ಕಾಯುವಂತೆ ಮಾಡುತ್ತಾನೆ. ನಮ್ಮ ತೋಟ ಖರೀದಿಸಿದ ಗೌಡರ ಸೆನ್ಸಿಬಲ್ ಹೆಂಡತಿ ನನ್ನ ಅತಿ ಪ್ರೀತಿಯ ಅಂಟಿ. ನೋಡಿದ್ದು ಒಂದೇ ಸಾರಿಯಾದರೂ ಸಡನ್‌ ಆಗಿ ಯಾವುದೋ ಒಂದು ಹೊತ್ತಿನಲ್ಲಿ ಅವರನ್ನು ನೋಡಬೇಕು ಅನಿಸುವಷ್ಟು ಇಷ್ಟ. ಇನ್ನೊಬ್ಬರಂತೂ  ಯಾವುದೋ ಜನ್ಮದ ಗೆಳತಿ ಅನ್ನುವಷ್ಟು ಪ್ರಿಯವಾಗಿದ್ದಾರೆ. ನೋಡಿಲ್ಲ, ಮಾತಾಡಿಲ್ಲ, ಆದರೆ ನಾವಿಬ್ಬರ ಒಂದೇ ದಾಟಿಯ ಯೋಚನೆ, ವೀ ಅರ್ ಸೋ ಅಲೈಕ್ ಅನಿಸುವಂತೆ ಮಾಡಿದೆ.
 ನಿರ್ದಿಷ್ಟವಾದ ಕಾರಣವಿಲ್ಲದೆ ಸುಮ್ಮನೆ ಇಷ್ಟವಾಗಿ ನನ್ನ ಬದುಕನ್ನು ಮತ್ತಷ್ಟೂ ಸುಂದರಗೊಳಿಸಿದವರು ಇವರೆಲ್ಲಾ. ನೆನೆಪು ತುಟಿಯಂಚಿನಲ್ಲಿ ನಗು ಮೂಡಿಸುತ್ತದೆ. ಆಗಾಗ ಮಿಸ್ ಕೂಡ ಮಾಡಿಕೊಳುತ್ತೇನೆ. ಸುಮ್ಸುಮ್ಮನೆ ಇಷ್ಟವಾಗುವ ಇವರೆಲ್ಲಾ ನನ್ನ ಬದುಕಲ್ಲಿರುವಾಗ, ಪ್ರೀತಿ ಹಂಚೋಕೆ ಟೈಮ್ ಸಾಕಗಲ್ಲ.. ಇನ್ನೂ ದ್ವೇಷಕ್ಕೆಲ್ಲಿದೆ ಸಮಯ?