ಹುಚ್ಚು ಕೋಡಿ ಮನಸ್ಸು ಅದು ಹದಿನಾರರ ವಯಸ್ಸು…
ಆದ್ರೆ ಮನಸ್ಸು ಮೂವತ್ತರ ನಂತರವೂ ಹುಚ್ಚು ಕೋಡಿಯಾಗತ್ತೆ ! ಅಂತ ಅವನು
ಜೀವನದೊಳಗೆ ಕಾಲಿಟ್ಟ ಮೇಲೆ ಗೊತ್ತಾಗಿದ್ದು. ಬರೆಯೋಕ್ಕೆ ಹೋದ್ರೆ ಈಗ ಹುಟ್ಟುವುದು ಮಾತ್ರ ಕವನ
ಅಲ್ಲ, ಇನ್ನೊಂದು ಮಹಾಭಾರತ.
ಮನಸ್ಸೇ ಹೀಗಲ್ವಾ? ಇರುವುದೇಲ್ಲಾ ಬಿಟ್ಟು
ಇಲ್ಲದೇ ಇರುವುದನ್ನೇ ಬಯಸುವುದು. ಹದಿನಾರು ಮೂವತ್ತಾರು ಎಲ್ಲಾ ಬರೀ ಲೆಕ್ಕಕ್ಕೆ ಮಾತ್ರ.
ಬುದ್ಧಿ ಮನಸ್ಸು ಎರಡೂ ನನ್ನದೇ ಆದ್ರೂ ಅವನ ವಿಷಯದಲ್ಲಿ ಮಾತ್ರ ಒಂದಕ್ಕೊಂದು ಅಸಂಬದ್ಧ, ತದ್ವಿರುದ್ಧ.
ಒಂದು ನೀರಿಗೆ ಇಳಿದರೆ ಇನ್ನೊಂದು ಏರಿ ಕಡೆ. ಬುದ್ಧಿ ಅವನಿಂದ ದೂರ ಇರು, ಅವನು ಬೇಡ
ಎಂದಷ್ಟು ಮನಸ್ಸು ಅವನ ಕಡೆನೇ ವಾಲುತ್ತೆ, ಪದೇ ಪದೇ
ಸೋಲುತ್ತೆ. ಮನಸ್ಸು ಅವನೇ ಬೇಕು ಅಂತ ಹಟ ಹಿಡಿಯುತ್ತೆ ಪ್ರತಿ ಬಾರಿ ಅವನ ಜೊತೆ ಗಂಟೇಗಟ್ಟಲೆ
ಮಾತಾನಾಡಿ ಮುಗಿಸಿ ನಂತರವೂ ಏನೋ ಅತೃಪ್ತಿ. ಮತ್ತೆ ಮತ್ತೆ ಅವನ ದ್ವನಿ ಕೇಳಲು ಮನ
ಹಾತೊರೆಯುತ್ತದೆ. ಅವನನೊಂದಿಗೆ ಕಾಲ ಕಳೆಯುವವರ
ಮೇಲೆಲ್ಲಾ ಏನೋ ಒಂಥರಾ ಜಲಸ್. ನನಗಿಲ್ಲದ ಅವರ ಭ್ಯಾಗಕ್ಕೆ ಕರಬುತ್ತೇನೆ. ಮೂರು ಹೊತ್ತು
ಅವನದೇ ಧ್ಯಾನದಲ್ಲಿ ಒಂಟಿತನವೂ ಪ್ರಿಯ. ಮನಸ್ಸು
ಕೈಗೆ ಸಿಗದ ಗಾಳಿಪಟ. ಎಲ್ಲಾ ಅಲ್ಲೋಲ ಕಲ್ಲೋಲ.
ಅವನೊಂದು ತೀರ ನಾನೊಂದು ತೀರ. ಸಮಾನಂತರ ದಾರಿಯ ಪಯಣಿಗರು ನಾವಿಬ್ಬರು.
ಎಂದಿಗೂ ಅವನೊಂದಿಗೆ ಹೆಜ್ಜೆ ಹಾಕುವ
ಸಾಧ್ಯತೆಗಳಿಲ್ಲ. ಆಗ ಬುದ್ಧಿ ಕೆಲಸ ಮಾಡಲು ಶುರು
ಮಾಡುತ್ತೆ. ಇನ್ಯಾವತ್ತೂ ಅವನ ಜೊತೆ ಮಾತಾಡಲ್ಲ
ಅಂತ ಶಪಥನೂ ಮಾಡುತ್ತೆ. ಇವೆಲ್ಲಾ ಬರೀ ಬುದ್ದಿಯ ಬುದ್ದಿ ಮಾತುಗಳಷ್ಟೇ
. ಆಗಲೇ ಹುಟ್ಟುಕೊಳ್ಳೊದು ಅವನನ್ನ ಕಳೆದು ಕೊಳ್ಳುವ ಭಯ , ಅವನು ನನ್ನ ಮರತೇ
ಬಿಟ್ಟರೆ ಎನ್ನುವ ಅಂತಕ. ನನ್ನ ಜಾಗ ಇನ್ಯಾರೋ
ಆಕ್ರಮಿಸಿಕೊಂಡರೆ ಅನ್ನೊ ಇನ್‌ಸೆಕ್ಯುರಿಟಿ ಫಿಲಿಂಗ್. ಎಲ್ಲಾ ಸೇರಿ ಒಟ್ಟಾರೆ ಮತ್ತೆ
ಬುದ್ಧಿ ಮೇಲೆ ಮನಸ್ಸಿನ ಸವಾರಿ ಶುರುವಾಗುತ್ತೆ.
ಬುದ್ಧಿ ಮಾತು ಮೀರಿ ಭಾವನೆಗಳು ಅಲೆ ಅಲೆಗಳಾಗಿ ಏಳುತ್ತವೆ. ದಿನ ದಿನದಿಂದ ಅವನ ಹುಚ್ಚು
ಹೆಚ್ಚುತ್ತೆ . ಮನಸ್ಸು ಸದಾ ಅವನನ್ನು ಬಯಸುತ್ತದೆ. ಮನಸ್ಸು ಅವನಿಗಾಗಿ ಚಡಪಡಿಸುತ್ತದೆ. ಮುದ
ನೀಡುವ ಅವನ ಪ್ರೀತಿ -ಸಾಂಗತ್ಯದ ಕಡೆ ಮತ್ತೆ ಮನಸ್ಸು ಜಾರುತ್ತೆ.
ನನ್ನ ಕನಸುಗಳಿಗೆ ಬಣ್ಣ
ತುಂಬಿದವನು ಅವನು. ಅವನ ಪ್ರೀತಿ ಎಷ್ಟು ಸಹ್ಯವೋ, ಅವನ ನಿರ್ಲಕ್ಯ
ಅದಕ್ಕಿಂತ ಹೆಚ್ಚು ರೋಷ ಹುಟ್ಟಿಸುತ್ತದೆ. ಅವನ ಹತ್ತು ನಿಮಿಷಗಳು ಗಂಟೆಗಳಾದಾಗ ಕಾಯುವಿಕೆ ಅಸಹನೆ
ಹುಟಿಸುತ್ತದೆ. ಅಯ್ಯೋ ಸಾರಿ ಮರತೆ ಹೋದೆ ಕಣೇ, ಬ್ಯುಸಿ ಇದ್ದೆ , ತುಂಬಾ
ಟೆನ್ಶನ್ ಕಣೇ ಎನ್ನುವ ಅವನ ಉತ್ತರಗಳು
ಸಮಾಧಾನಿಸಲು ಸೋಲುತ್ತವೆ. ನನಗೆ ಅವನಷ್ಟೇ
ಪ್ರಪಂಚ ಆದರೆ ಅವನಿಗೂ ಹಾಗಿರಬೇಕೆಂದೇನೂ ಇಲ್ಲವಲ್ಲ. ನಿಧಾನವಾಗಿ ಅವನಿಗೆ ನಾನು ಅನಿವಾರ್ಯವಲ್ಲ
ಎನ್ನುವ ಅನುಮಾನ ಹುಟ್ಟಿಸುತ್ತದೆ.
ಯಾವುದನ್ನಾದರೂ ಸಹಿಸಬಹುದು ಆದರೆ ಪ್ರೀತಿಸಿದವರಿಂದ ನಿರ್ಲಕ್ಷ್ಯ ಮಾತ್ರ ಅಸಾಧ್ಯ.
ಮನಸ್ಸು ಕಲ್ಲಾಗುತ್ತದೆ. ನನ್ನ ಪಾಡಿಗೆ ನಾನಿದ್ದು ಬಿಡಲು ನಿರ್ಧರಿಸುತ್ತೇನೆ.
ಎಲ್ಲಾ ಸುಸೂತ್ರವಾಗಿ, ಹಳಿ ತಪ್ಪಿದ ಹುಚ್ಚು
ಕೋಡಿ ಮನಸ್ಸು ಪುನಃ ಟ್ರ್ಯಾಕ್‌ಗೆ ಬರುತ್ತಿದ್ದೆ ಅಂತ ಅನಿಸುವಾಗಲೇ ಮತ್ತೆ ಅವನ ರಿಎಂಟ್ರಿ.
ಎಲ್ಲಾ ಶಪಥ, ಕಠೋರ ನಿರ್ಧಾರಗಳನ್ನು ಧೂಳಿಪಟ ಮಾಡಿಬಿಡುತ್ತೆ. ಅವನು ಮತ್ತೆ
ಹೊಸ ಚಿತ್ತಾರ ಮೂಡಿಸಲು ತೊಡಗುತ್ತಾನೆ.
ಅದಕ್ಕೆ ಚೆಂದದ ಬಣ್ಣಗಳ ಆಯ್ಕೆಯಲ್ಲಿ ನಾನು
ಮುಳುಗಿರುವಾಗಲೇ, ಅವನು ಬಿಡಿಸುತ್ತಿರುವ
ಚಿತ್ತಾರಗಳನ್ನೇ ಮತ್ತೆ ಮರೆಯುತ್ತಾನೆ. ಎಲ್ಲಾ ಮತ್ತೆ ಮೊದಲಿನಂತ್ತೆ ಅರ್ಧಬರೆದು ಬಿಟ್ಟ, ಅರ್ಥ ಕಳೆದು
ಕೊಂಡ ಚಿತ್ತಾರ, ಕವನ, ಕನಸುಗಳು ಮತ್ತು ನಾನು.
ಅವನ ವಿಷಯದಲ್ಲಿ ವಯಸ್ಸು ಹದಿನ್ನಾರದರೂ ಮೂವತ್ತಾರಾದರೂ ಹುಚ್ಚು ಕೋಡಿಯೇ.
ಆದರೆ ಅದಕ್ಕಾಗುವ ಗಾಯದಲ್ಲಿ ಮಾತ್ರ ಅಜಗಜಾಂತರ.
ಹದಿನಾರರ ಗಾಯ ಮಾಗುವುದೂ ಬೇಗ. ಸಾಲುಗಟ್ಟಿ
ನಿಂತವರಲೊಬ್ಬ ಗಾಯಕ್ಕೆ ಮುಲಾಮಾಗಿ ಕಲೆ ಇಲ್ಲದೆ
ಅಳಿಸಿ ಬಿಡುತ್ತಾನೆ. ಆದರೆ ಈಗ ಮೇಲಿಂದ ಮೇಲಿಂದ ಅದೇ ಗಾಯಕ್ಕೆ ಪೆಟ್ಟು ಜೊತೆಗೆ ಸದಾ ಕಾಡುವ
ಎಂದಿಗೂ ಮಾಸದ ಕಲೆ. ಗಾಯ ಮೇಲ್ನೋಟಕ್ಕೆ ವಾಸಿಯಾದಂತೆ ಕಂಡರೂ ಮುಲಾಮಿಲ್ಲದ
ಗಾಯ ಒಳಗೆ ಹಸಿಯಾಗೇ ಉಳಿದೇ ಬಿಡುತ್ತದೆ.
ಮರೆತೆನೆದರೂ ಅವನನ್ನು ಮರೆಯಲಾಗದೆ ಒದ್ದಾಡುವ…. ಮತ್ತದೇ ನಾನು.
No comments:
Post a Comment